ಚಿಕ್ಕಮಗಳೂರು ಜಿಲ್ಲೆಯ ಚಾರ್ಮಾಡಿ ಘಾಟ್ನಲ್ಲಿನ ಕಾಡ್ಗಿಚ್ಚಿನ ಹಿಂದೆ ಕಿಡಿಗೇಡಿಗಳ ಕೈವಾಡವಿದೆ ಕಾರಣ ಎಂದು ತನಿಖೆಯಿಂದ ತಿಳಿದು ಬಂದಿದೆ. ರಾತ್ರಿಯ ವೇಳೆ ಅಕ್ರಮವಾಗಿ ಬೇಟೆಯಾಡಲು ಹೋಗಿದ್ದ ಕಿಡಿಗೇಡಿಗಳು ಬೆಂಕಿ ಹಚ್ಚಿರುವುದು ತಿಳಿದುಬಂದಿದೆ. 500 ಎಕರೆಗೂ ಹೆಚ್ಚು ಅರಣ್ಯ ಪ್ರದೇಶ ನಾಶವಾಗಿದ್ದು, ಕರ್ನಾಟಕ ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಸದ್ಯ ಕಿಡಿಗೇಡಿಗಳ ಪತ್ತೆಗೆ ಅರಣ್ಯ ಇಲಾಖೆ ತೀವ್ರ ಹುಡುಕಾಟ ನಡೆಸುತ್ತಿದೆ.
ಸಾಲಿನ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದ ಬೆಂಕಿ ಹಿಂದೆ ಕಿಡಿಗೇಡಿಗಳ ಕೈವಾಡವಿದೆ ಎಂಬ ಅಂಶ ತನಿಖೆಯಲ್ಲಿ ಬಯಲಾಗಿದೆ. ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ನ ಬಿದಿರುತಳ ಅರಣ್ಯ ಪ್ರದೇಶದಲ್ಲಿ ಕಳೆದ ವಾರ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿಯ ತೀವ್ರತೆಗೆ 500 ಎಕರೆಗೂ ಹೆಚ್ಚು ಪ್ರದೇಶದ ಕೋಟ್ಯಂತರ ಮೌಲ್ಯದ ಸಸ್ಯ ಸಂಪತ್ತು ನಾಶವಾಗಿತ್ತು. ಸ್ಥಳೀಯರು ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದ್ದರು.
ಈ ಹಿನ್ನೆಲೆಯಲ್ಲಿ, ತನಿಖೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು, ಕಾಡ್ಗಿಚ್ಚಿಗೆ ಅಸಲಿ ಕಾರಣವೇನೆಂದು ಪತ್ತೆ ಹಚ್ಚಿದ್ದಾರೆ. ರಾತ್ರಿ ಶಿಕಾರಿಗೆ ತೆರಳಿದ್ದ ಕಿಡಿಗೇಡಿಗಳು ಬೆಂಕಿ ಹಾಕಿರುವ ವಿಚಾರ ಗೊತ್ತಾಗಿದೆ. ಈ ಸಂಬಂಧ ಕರ್ನಾಟಕ ಅರಣ್ಯ ಕಾಯ್ದೆ 24 ಅಡಿಯಲ್ಲಿ ಮೂಡಿಗೆರೆ ವಲಯ ಅರಣ್ಯ ಇಲಾಖೆಯಲ್ಲಿ ಎಫ್ಐಆರ್ ದಾಖಲಾಗಿದೆ. ಇನ್ನು, ಕಾಡಿಗೆ ಬೆಂಕಿ ಇಟ್ಟ ಕಿಡಿಗೇಡಿಗಳ ಪತ್ತೆಗಾಗಿ ಮೂಡಿಗೆರೆ ಆರ್ಎಫ್ಒ ನೇತೃತ್ವದಲ್ಲಿ ತಂಡ ರಚನೆಯಾಗಿದೆ. ಆರೋಪಿಗಳಿಗಾಗಿ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ.