ಬಿ.ಪೀರ್ ಬಾಷ
ಜಗತ್ತಿನ ಗಮನ ಸೆಳೆದ, ಚಾರಿತ್ರಿಕ ಮಹತ್ವದ, ಭಾರತದ ರೈತರ ಸುದೀರ್ಘ ಹೋರಾಟ ಮಹಾಗೆಲುವಿನೊಂದಿಗೆ ಇಂದು ಕೊನೆಗೊಂಡಿದೆ. ಪ್ರಶ್ನಾತೀತ ಶಕ್ತಿ ಎಂಬಂತೆ ಪ್ರಬಲಗೊಂಡಿದ್ದ ಪ್ರಭುತ್ವದ ದಾರ್ಷ್ಟ್ಯವನ್ನು ಭಾರತದ ರೈತವರ್ಗ ಪರಮ ತಾಳ್ಮೆ, ವಿವೇಕ ಹಾಗೂ ಬದ್ಧತೆಗಳ ಮೂಲಕ ಎದುರಿಸಿ ಮಣಿಸಿದೆ. ಈ ವಿಜಯದ ಹಿಂದೆ 700ಕ್ಕೂ ಹೆಚ್ಚಿನ ರೈತರ ಪ್ರಾಣತ್ಯಾಗವಿದೆ ಎಂಬುದನ್ನು ಈ ಗೆಲುವಿನ ಹೋರಾಟ ಕುರಿತ ಯಾವುದೇ ಪ್ರಸ್ತಾಪದ ಸಂದರ್ಭದಲ್ಲಿ ಉಲ್ಲೇಖಿಸಲೇಬೇಕು. ಕೃಷಿ ಕ್ಷೇತ್ರವನ್ನು ಸಂಪೂರ್ಣ ಕಾರ್ಪೋರೇಟ್ ಕಂಪನಿಗಳ ಕೈಗೊಪ್ಪಿಸಿ ರೈತ ಸಮುದಾಯವನ್ನು ನಿಧಾನಕ್ಕೆ ಸರ್ವನಾಶ ಮಾಡುವ ಪರಿಣಾಮ ಹೊಂದಿದ್ದ ಮೂರು ವಿನಾಶಕಾರಿ ರೈತ ಕಾನೂನುಗಳನ್ನು ಜಾರಿಗೊಳಿಸಿದ್ದ ಪ್ರಧಾನಮಂತ್ರಿಗಳೇ ಈ ಕಾನೂನುಗಳನ್ನು ವಾಪಾಸು ತೆಗೆದುಕೊಳ್ಳುವುದಾಗಿ ಘೋಷಿಸುವ ಮೂಲಕ ಈ ಹೋರಾಟ ಒಂದು ತಾರ್ಕಿಕ ಕೊನೆಯನ್ನು ತಲುಪಿಸಿದ್ದು ಸಾಮಾನ್ಯ ಮಾತೇನಲ್ಲ. ಈ ದೇಶದ ಆಳುವ ಸರಕಾರವು ಸಾಕಿಕೊಂಡಿರುವ ಬೇಟೆನಾಯಿಗಳಂತಿರುವ ಹಲವು ದೃಶ್ಯವಾಹಿನಿಗಳನ್ನು ಒಳಗೊಂಡಂತೆ ಬಹುತೇಕ ಮಾಧ್ಯಮ ರಂಗವೇ ಈ ಹೋರಾಟದ ತೀವ್ರತೆ ಮತ್ತು ಚಾರಿತ್ರಿಕ ವಿಜಯವನ್ನು ಅದೆಷ್ಟೇ ಮರೆಮಾಚಿದರೂ ಖಂಡಿತವಾಗಿ ಈ ಹೋರಾಟವು ಜಾಗತಿಕವಾಗಿಯೂ ಹಾಗೂ ಭಾರತದ ಮಟ್ಟಿಗಂತೂ ಜನವರ್ಗಗಳ ಹೋರಾಟದ ಅತ್ಯುತ್ತಮ ಮಾದರಿಯಾಗಿ ಉಳಿಯಲಿದೆ.
ದೇಶವನ್ನು ಈಗ ಆಳುತ್ತಿರುವುದು ಒಂದು ಸರಕಾರವೋ ಅಥವಾ ಒಂದು ಸಂಘಟನೆ ಮತ್ತು ಒಂದೆರಡು ಕಂಪನಿ ಮುಖ್ಯಸ್ಥರ ನಿರ್ದೇಶನ ಪಾಲಿಸುವ ಒಬ್ಬ ವ್ಯಕ್ತಿಯೋ ಎಂಬಂತಾಗಿ ಪ್ರಧಾನಮಂತ್ರಿ ಹುದ್ದೆಯ ಮುಂದೆ ಪ್ರಜಾಪ್ರಭುತ್ವವೇ ಅಸ್ತಿತ್ವಹೀನವಾಗಿದೆ ಎಂಬುದು ಸಾಬೀತಾಗುತ್ತಿದ್ದ ಸಂದರ್ಭದಲ್ಲಿ ಅಂತಹ ಶಕ್ತಿಯೊಂದು ಒಂದು ಹೆಜ್ಜೆ ಹಿಂದೆ ಇಟ್ಟಿರುವ ಮಾತು ಸಾಮಾನ್ಯವಾದುದೇನಲ್ಲ. ಹಲವು ರಾಜ್ಯಗಳಲ್ಲಿ ನಡೆಯಲಿರುವ ಚುನಾವಣೆಗಳ ಲೆಕ್ಕಾಚಾರಿ ತಂತ್ರಗಾರಿಕೆಯಾಗಿ ಈ ಕಾನೂನು ವಾಪಸಾತಿ ಆಗಿದೆ ಎಂದೇ ಅಭಿಪ್ರಾಯ ಪಟ್ಟರೂ, ಚುನಾವಣೆಯನ್ನೂ ಒಳಗೊಂಡಂತೆ ಪ್ರಜಾತಾಂತ್ರಿಕ ಪ್ರಕ್ರಿಯೆಗಳಿಗೆ ಇರುವ ಶಕ್ತಿಯ ಎದಿರು ಎಂತಹದೇ ಪ್ರಭುತ್ವಶಕ್ತಿಯು ಮಣಿಯಲೇ ಬೇಕಾಗುತ್ತದೆ ಎಂಬುದಕ್ಕೂ ಈ ಹೋರಾಟ ಉದಾಹರಣೆಯಾಗಿದೆ.
ಪ್ರಧಾನ ಮಂತ್ರಿಗಳು ಈ ಕಾಯ್ದೆ ವಾಪಾಸು ತೆಗೆದುಕೊಳ್ಳುವುದಾಗಿ ಘೋಷಿಸಿದ ಸಂದರ್ಭದಲ್ಲಿ ಅವರು ಕೇಳಿದ ಕ್ಷಮೆ ತುಂಬಾ ಸ್ಪಷ್ಟವಾಗಿದ್ದನ್ನು ತಪ್ಪಾಗಿ ಅರ್ಥೈಸಲಾಗದು. ಅವರು ಕ್ಷಮೆ ಕೋರಿದ್ದು ಈ ಕಾನೂನುಗಳನ್ನು ಜಾರಿಗೊಳಿಸಿದ್ದಕ್ಕಲ್ಲ, ಬದಲಾಗಿ ಈ ಕಾನೂನುಗಳ ಬಗ್ಗೆ ರೈತರಿಗೆ ಮನವರಿಕೆ ಮಾಡಿಕೊಡುವಲ್ಲಿ ತಮ್ಮ ಸರಕಾರ ವಿಫಲವಾದ ಬಗ್ಗೆ! ಇದರ ಅರ್ಥವೂ ಸ್ಪಷ್ಟವಾಗಿದೆ. ಅದೇನೆಂದರೆ, ಈ ಕಾನೂನು ರೈತ ಸಮುದಾಯಕ್ಕೆ ಎಷ್ಟು ಮಾರಕವಾಗಿದೆ ಎಂಬುದನ್ನು ಪ್ರಧಾನ ಮಂತ್ರಿಗಳಿಗೆ ಮನವರಿಕೆ ಮಾಡಿಕೊಡಲು ರೈತಸಂಘಟನೆಗಳಿಗೂ ಆಗಿಲ್ಲ! ಇದು ಆಗುವಂಥದ್ದಲ್ಲ ಆ ಮಾತು ಬೇರೆ. ಆದರೆ ಇಷ್ಟಾಗಿಯೂ ಪ್ರಧಾನಮಂತ್ರಿಗಳು “ತಾವು ಮಾಡಿದ್ದೇ ಸರಿ” ಎಂಬ ನಿಲುವು ವ್ಯಕ್ತಪಡಿಸಿದ್ದಾರಲ್ಲ, ಇದು ಖಂಡಿತಕ್ಕೂ ಒಳ್ಳೆಯ ಸೂಚನೆಯಲ್ಲ.
ಅಷ್ಟು ಮಾತ್ರವಲ್ಲ; ಕೊಟ್ಟ, ಕೆಟ್ಟ ಕಾನೂನುಗಳನ್ನೇನು ವಾಪಾಸು ತೆಗೆದುಕೊಂಡರು. ಆದರೆ ಈ ದುಷ್ಟ ಕಾನೂನುಗಳ ರದ್ದತಿಗೆ ಆಗ್ರಹಿಸಿದ ನಡೆದ ಹೋರಾಟದಲ್ಲಿ ಪ್ರಾಣಬಿಟ್ಟ 700ಕ್ಕೂ ಹೆಚ್ಚಿನ ರೈತರ ಬಗ್ಗೆ ಪ್ರಧಾನಿಗಳ ಕಣ್ಣಂಚಿನಲ್ಲಾದರೂ ಒಂದು ಹನಿ ನೀರು ಜಿನುಗಲಿಲ್ಲ. ಹೋಗಲಿ ಒಂದು ಕ್ಷಮೆ, ಇಲ್ಲವೇ ಕನಿಷ್ಟ ಪಕ್ಷ ಮಾನವ ಸಹಜವಾದ ಒಂದು ವಿಷಾದವೂ ವ್ಯಕ್ತವಾಗಲಿಲ್ಲ. ಇದು ಕ್ರೌರ್ಯಕ್ಕಿಂತ ಕಡಿಮೆಯದ್ದೇನಲ್ಲ.
ಜಗತ್ತಿನ ದುಡಿವ ವರ್ಗಗಳ ಚರಿತ್ರೆಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಒಂದು ಅಧ್ಯಾಯವನ್ನು ದಾಖಲಿಸಿದೆ. ಈ ರೈತ ಒಕ್ಕೂಟ ನಿಶ್ಚಿತವಾಗಿಯೂ ಭವಿಷ್ಯದ ಜನವರ್ಗಗಳ ಹೋರಾಟಕ್ಕೆ ಒಂದು ಅತ್ಯುತ್ತಮ ಮಾದರಿಯಾಗಿದೆ. ಈ ಮಾದರಿ ದೇಶದ ಪ್ರತಿ ರಾಜ್ಯಗಳಲ್ಲಿ ಕಾರ್ಯರೂಪಕ್ಕಿಳಿಯಬೇಕಿದೆ. ದೆಹಲಿಯಿಂದ ಹೊರಟು ಮರಳುತ್ತಿರುವ ಪಂಜಾಬ್, ಹರಿಯಾಣ, ಉತ್ತರಪ್ರದೇಶ, ಉತ್ತರಾಖಂಡ, ಮೊದಲಾದ ರಾಜ್ಯಗಳ ರೈತ ನಾಯಕರು ತಮ್ಮ ರಾಜ್ಯಗಳಲ್ಲಿರುವ ಪ್ರಧಾನ ರೈತ ಸಮಸ್ಯೆಗಳ ಪರಿಹಾರಕ್ಕಾಗಿ ಆಯಾ ರಾಜ್ಯಗಳಲ್ಲಿ ಹೋರಾಟ ರೂಪಿಸುವ ಸಂಕಲ್ಪವನ್ನಿಟ್ಟುಕೊಂಡೇ ಮರಳುತ್ತಿದ್ದಾರೆ. ಇದು ಅಳಿಯುತ್ತಿರುವ ಪ್ರಜಾತಂತ್ರವನ್ನು ವರ್ಗ ಚಳುವಳಿಯ ಮೂಲಕ ಮರಳಿ ಕಟ್ಟುವ ಕ್ರಮ ಎಂದೇ ಭಾವಿಸಬೇಕಿದೆ.
ಕೊನೆಗೊಂದು ಮಾತು; ಜನಪರವಾಗಿ ಯೋಚಿಸುವ ಬರೆಯುವ ಆಶಿಸುವ ವ್ಯಕ್ತಿ ಯಾರೇ ಇರಲಿ ಅವರು ಈ ಹೊತ್ತು ಇಂತಹ ಹೋರಾಟಗಳೊಂದಿಗೆ ಯಾವುದೇ ರೀತಿಯಲ್ಲಿ ತೊಡಗಿಸಿಕೊಳ್ಳುವುದು ಈ ಕಾಲಘಟ್ಟ ನಿರೀಕ್ಷಿಸುವ ವೈಯಕ್ತಿಕ ನೈತಿಕತೆ ಎಂದು ಅರಿಯುವುದು. ಅಷ್ಟೇ. ಈ ಕುರಿತಂತೆ ಹೆಚ್ಚೇನೂ ಹೇಳಬೇಕಿಲ್ಲ.
ಖಂಡಿತವಾಗಿಯೂ ಭಾರತದ ಸಮಗ್ರ ಪರಿವರ್ತನೆಗೆ ರೈತವರ್ಗವೇ ನಾಯಕ, ಹೋರಾಟದ ಜನತಾಂತ್ರಿಕ ಮಾರ್ಗವೇ ಅಧಿನಾಯಕ. ಸ್ವರೂಪ ವ್ಯತ್ಯಾಸವೇನೇ ಇರಲಿ, ಭಾರತದ ಕಾರ್ಮಿಕ ವರ್ಗವು ಈ ರೈತ ಹೋರಾಟದಿಂದ ಕಲಿಯುವುದು ಸಾಕಷ್ಟಿದೆ. ಮಾತ್ರವಲ್ಲ, ಭಾರತದ ಎಲ್ಲಬಗೆಯ ದಮನಿತ ಸಮುದಾಯಗಳ ದಮನ ವಿರೋಧಿ ಚಳುವಳಿಯು ರೈತರನ್ನು ಒಳಗೊಂಡಂತೆ ರೂಪುಗೊಳ್ಳಬೇಕಿದೆ.