ಚಾರಿತ್ರಿಕ ಕಿಸಾನ್-ಮಜ್ದೂರ್ ಗಣತಂತ್ರ ದಿನದ ಪರೇಡ್

ಸ್ವತಂತ್ರ ಭಾರತದ ಅತಿ ದೊಡ್ಡ ಸಾಮೂಹಿಕ ಪ್ರತಿಭಟನಾ ಕಾರ್ಯಾಚರಣೆ-ಎಐಕೆಎಸ್

ನವದೆಹಲಿ; ಜ.28 : 2021ರ ಗಣತಂತ್ರ ದಿನದಂದು ಕಿಸಾನ್ ಪರೇಡ್ ನಡೆಸಲು ರೈತ ಸಂಘಟನೆಗಳ ಐಕ್ಯವೇದಿಕೆಯಾದ ಸಂಯುಕ್ತ ಕಿಸಾನ್ ಮೋರ್ಚಾದ ಕರೆಗೆ ಭಾರೀ ಸ್ಪಂದನ ದೊರೆತಿದೆ. ರಾಷ್ಟ್ರೀಯ ರಾಜಧಾನಿ ಪ್ರದೇಶದ ಸುತ್ತಮುತ್ತ ಲಕ್ಷಾಂತರ ಟ್ರಾಕ್ಟರುಗಳು ಮತ್ತು ಇತರ ವಾಹನಗಳು ರಾಷ್ಟ್ರೀಯ ಬಾವುಟನ್ನು ಏರಿಸಿಕೊಂಡು, ರಾಷ್ಟ್ರಗೀತೆಗಳನ್ನು ಹಾಡಿಕೊಂಡು ಹುತಾತ್ಮರಿಗೆ ಶ್ರದ್ಧಾಂಜಲಿ ಅರ್ಪಿಸುತ್ತ ಪರೇಡಿನಲ್ಲಿ ಭಾಗವಹಿಸಿದವು. ಈ ಚಾರಿತ್ರಿಕ ರೈತ-ಕಾರ್ಮಿಕ ಪರೇಡಿನಲ್ಲಿ ದೇಶಾದ್ಯಂತ ಲಕ್ಷ-ಲಕ್ಷ ಜನರು ಭಾಗವಹಿಸಿದ್ದಾರೆ ಎಂದು ಅಖಿಲ ಭಾರತ ಕಿಸಾನ್ ಸಭಾ ಎಲ್ಲರನ್ನೂ ಅಭಿನಂದಿಸುತ್ತ ಹೇಳಿದೆ.

ದೆಹಲಿ ರೈತ ಹೋರಾಟ : ದೂರಿನಲ್ಲೂ ಪಿತೂರಿ ಮುಂದುವರೆಸಿದ ಪೊಲೀಸರು

ಆಗಸ್ಟ್ 15, 1947ರ ನಂತರ ಮೊದಲ ಬಾರಿಗೆ ಭಾರತೀಯ ನಾಗರಿಕರು ರೈತಾಪಿಗಳ ನೇತೃತ್ವದಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಗಣತಂತ್ರ ದಿನಾಚರಣೆ ಮಾಡಿದ್ದಾರೆ. ದಿಲ್ಲಿಯ ಚಾರಿತ್ರಿಕ ರೈತ ಪರೇಡಿನಲ್ಲಿ 10ಲಕ್ಷಕ್ಕಿಂತಲೂ ಹೆಚ್ಚು ಜನಗಳು ಭಾಗವಹಿಸಿದರು. ದೇಶದ ಎಲ್ಲ ಜಿಲ್ಲೆಗಳಲ್ಲೂ ರೈತ ಪರೇಡ್‌ಗಳು ನಡೆದಿವೆ, ಕೇರಳದಲ್ಲಂತೂ ಎಲ್ಲ1000 ಪಂಚಾಯತಿಗಳಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಒಂದು ದಶಲಕ್ಷ ಜನರು ಭಾಗವಹಿಸಿದರು. ಕೇಂದ್ರೀಯ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆಯ ಕರೆಗೆ ಓಗೊಟ್ಟು ಸಾವಿರಾರು ಕಾರ್ಮಿಕರು ಇದರಲ್ಲಿ ಭಾಗವಹಿಸಿದ್ದು, ಇದು ಸ್ವಾತಂತ್ರ್ಯೋತ್ತರ ಭಾರತದ ಅತಿ ದೊಡ್ಡ ಸಾಮೂಹಿಕ ಪ್ರತಿಭಟನಾ ಕಾರ್ಯಾಚರಣೆಯಾಗಿದೆ ಎಂದು ಅಖಿಲ ಭಾರತ ಕಿಸಾನ್ ಸಭಾ(ಎಐಕೆಎಸ್) ವರ್ಣಿಸಿದೆ. ಅದು ಈ ಎಲ್ಲ ಲಕ್ಷ-ಲಕ್ಷ ರೈತರಿಗೆ ಮತ್ತು ದುಡಿಯುವ ಜನಸಮೂಹಗಳಿಗೆ ಈ ಚಾರಿತ್ರಿಕ ಕಾರ್ಯಾಚರಣೆಗಾಗಿ ವೀರ ನಮನಗಳನ್ನು ಸಲ್ಲಿಸಿದೆ.

ಈ ಕಿಸಾನ್-ಮಜ್ದೂರ್ ಪರೇಡ್ ದೇಶದ ಮೂಲೆ-ಮೂಲೆಗಳಲ್ಲೂ ರೈತ ಕುಟುಂಬಗಳಲ್ಲಿ ಈಗ ಮನೆಮಾಡಿರುವ ಆಳವಾದ ಮತ್ತು ವ್ಯಾಪಕವಾದ ಆಕ್ರೋಶವನ್ನು ಅಭಿವ್ಯಕ್ತಗೊಳಿಸುವಲ್ಲಿ ಯಶಸ್ವಿಯಾಗಿದೆ ಎಂದಿರುವ ಎಐಕೆಎಸ್ ಇದು ಬಿಜೆಪಿ ಸರಕಾರ ಕಾರ್ಪೊರೇಟ್ ಲೂಟಿಗಾಗಿ ತಂದಿರುವ ರೈತ-ವಿರೋಧಿ, ಕಾರ್ಮಿಕ-ವಿರೋಧಿ ಕಾಯ್ದೆಗಳನ್ನು ಸೋಲಿಸುವ ಜನಗಳ ಸಂಕಲ್ಪವನ್ನು ಮತ್ತೊಮ್ಮೆ ದೃಢಪಡಿಸಿದೆ ಎಂದು ಹೇಳಿದೆ. ರೈತರ ಚಳುವಳಿಯಾಗಿ ಆರಂಭವಾದ ಇದೀಗ ಕಾರ್ಮಿಕ ವರ್ಗ, ಮಹಿಳೆಯರು, ವಿದ್ಯಾರ್ಥಿಗಳು, ಯುವಜನರು ಮತ್ತು ದಲಿತ ವಿಭಾಗಗಳು ಸಕ್ರಿಯವಾಗಿ ಭಾಗವಹಿಸುವುದರೊಂದಿಗೆ ಒಂದು ಜನತಾ ಆಂದೋಲನವಾಗಿ ಮಾರ್ಪಟ್ಟಿದೆ.

ಬಹುಪಾಲು ಶಾಂತಿಯುತವಾದ ಈ ಪ್ರತಿಭಟನೆ ಬಿಜೆಪಿ ಸರಕಾರವನ್ನು ಮತ್ತು ಆಳುವ ವರ್ಗಗಳನ್ನು ತಬ್ಬಿಬ್ಬುಗೊಳಿಸಿದೆ. ಕಳೆದ ಎರಡು ತಿಂಗಳಿಂದ ಇದರ ವಿರುದ್ಧ ಹಲವಾರು ಸುಳ್ಳುಗಳನ್ನು ಹರಡಿಸಲು ಪ್ರಯತ್ನಿಸುತ್ತಿರುವ ಕಾರ್ಪೊರೇಟ್ ಮಾಧ್ಯಮಗಳು ಮತ್ತು ಸಂಘ ಪರಿವಾರ ಈಗ ಈ ರೈತ ಆಂದೋಲನದ ಹೆಸರುಗೆಡಿಸಲು ಪಿತೂರಿಗಳಲ್ಲಿ ತೊಡಗಿವೆ. ಈಗಾಗಲೇ ಹಲವು ಗಲಭೆ ಪ್ರಚೋದಕ ಏಜೆಂಟರನ್ನು ರೈತರು ಗುರುತಿಸಿ ಪೋಲೀಸರಿಗೆ ಒಪ್ಪಿಸಿದ್ದಾರೆ. ಅವರಲ್ಲಿ ಹಲವರು ತಮ್ಮನ್ನು ಪೋಲಿಸರೇ ಕಳಿಸಿದ್ದು ಎಂದು ಹೇಳಿಕೊಂಡಿದ್ದಾರೆ. ಆದರೂ ಕಳೆದ ಎರಡು ತಿಂಗಳಲ್ಲಿ 150ಕ್ಕೂ ಹೆಚ್ಚು ರೈತರು ಹುತಾತ್ಮರಾಗಿರುವ ಬಗ್ಗೆ ಬಾಯಿ ಮುಚ್ಚಿಕೊಂಡಿದ್ದ ಈ ಕಾರ್ಪೊರೇಟ್ ಮಾಧ್ಯಮಗಳು ಜನವರಿ 26 ರ ಅಹಿತಕರ ಘಟನೆಗಳ ನಂತರ ಕೂಗಾಡುತ್ತಿವೆ.

ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಎಐಕೆಎಸ್ ಈ ಘಟನೆಗಳನ್ನು ಖಂಡಿಸಿದರೂ ರೈತರ ಆಂದೋಲನ ಪುಂಡಾಟಿಕೆ ನಡೆಸುವ, ಹಿಂಸಾತ್ಮಕ ಆಂದೋಲನ ಎಂದು ಚಿತ್ರಿಸಲು ಬಿಜೆಪಿ ಸರಕಾರ ಮತ್ತು ಕಾರ್ಪೊರೇಟ್ ಮಾಧ್ಯಮಗಳು ಪ್ರಯತ್ನಿಸುತ್ತಿವೆ, ವಾಸ್ತವವಾಗಿ ಸಂಯುಕ್ತ ಕಿಸಾನ್ ಮೋರ್ಚಾದ ಮುಖಂಡರು ಒಪ್ಪಿಕೊಂಡ ಮಾರ್ಗದಲ್ಲಿ ಸಾಗುತ್ತಿದ್ದ ಟ್ರಾಕ್ಟರುಗಳನ್ನು ಕೆಂಪುಕೋಟೆಯತ್ತ ಸಾಗುವಂತೆ ಬಲವಂತ ಮಾಡುತ್ತಿದ್ದ ಒಂದು ಸಣ್ಣ ವಿಭಾಗವನ್ನು ತಡೆಯಲು ಪರಿಣಾಮಕಾರಿಯಾಗಿ ಮಧ್ಯಪ್ರವೇಶಿಸಿದರು. ಸಿಂಘು ಗಡಿಯಿಂದ ಟ್ರಾಕ್ಟರುಗಳ ಚಲನೆಯನ್ನು ಮಧ್ಯಾಹ್ನ ಎರಡು ಗಂಟೆಗೇ ನಿಲ್ಲಿಸಿದರು ಮತ್ತು ಸಂಜೆ ಆರರ ವೇಳೆಗೆ ಪರೇಡನ್ನು ನಿಲ್ಲಿಸಿದರು. ಇದರಿಂದ ಸರಕಾರದ ಆಟಕ್ಕೆ ಮೋಸಹೋದ ಗುಂಪನ್ನು ಪ್ರತ್ಯೇಕಿಸುವುದು ಸಾಧ್ಯವಾಯಿತು. ಈ ಘಟನೆಗಳು ಈ ವಿಚ್ಛಿದ್ರಕಾರಿ ವ್ಯಕ್ತಿಗಳೊಂದಿಗೆ ಸರಕಾರದ ಶಾಮೀಲನ್ನು ಸ್ಪಷ್ಟವಾಗಿ ತೋರಿಸುತ್ತಿದೆ ಎಂದಿರುವ ಎಐಕೆಎಸ್ ದೇಶದ ಜನತೆ ಈ ಪಿತೂರಿಯನ್ನು ತಿರಸ್ಕರಿಸುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದೆ.

ಬಿಜೆಪಿ ಸರಕಾರ ಮತ್ತು ಪೋಲಿಸ್ ಕೆಲವು ಮುಜುಗರದ ಪ್ರಶ್ನೆಗಳಿಗೆ ಉತ್ತರ ಕೊಡಬೇಕಾಗಿದೆ ಎಂದು ಎಐಕೆಎಸ್ ಹೇಳಿದೆ:

* ಪೋಲೀಸರು ಸಂಯುಕ್ತ ಕಿಸಾನ್ ಮೋರ್ಚಾದ ಮುಖಂಡತ್ವದೊಂದಿಗೆ ಒಪ್ಪಿಕೊಂಡಿದ್ದ ಮಾರ್ಗದ ಬದಲಾಗಿ ಬೇರೆ ದಾರಿಯಲ್ಲಿ ಒಂದು ಸಣ್ಣ ವಿಭಾಗ ಕೆಂಪುಕೋಟೆಯ ವರೆಗೆ ಹೋಗಲು ಬಿಟ್ಟಿದ್ದೇಕೆ?

* ಕೆಂಪು ಕೋಟೆಯಲ್ಲಿ ಬಾವುಟ ಹಾರಿಸಿದ ದೀಪ್ ಸಿದ್ದು ಮತ್ತು ಇತರರೊಂದಿಗೆ ಪ್ರಧಾನ ಮಂತ್ರಿ ಮೋದಿ ಮತ್ತು ಬಿಜೆಪಿಯ ಸಂಬಂಧಗಳೇನು? ಅವರನ್ನು ಇನ್ನೂ ಏಕೆ ಬಂಧಿಸಿಲ್ಲ?

* ಪಲ್ವಲ್ ನಿಂದ ಹೊರಟವರಿಗೆ 45 ಕಿ.ಮೀ.ವರೆಗೆ ಪರೇಡ್ ನಡೆಸಲು ಒಪ್ಪಿಗೆ ಇದ್ದರೂ 15ಕಿ.ಮಿ. ಶಾಂತಿಯುತವಾಗಿ ಹೋದ ಮೇಲೆ ಪೋಲೀಸರು ಅಮಾನುಷ ಲಾಠೀಪ್ರಹಾರ ನಡೆಸಿದ್ದೇಕೆ?

ಒಂದು ಸಂಘಟನೆ ಸಂಯುಕ್ತ ಕಿಸಾನ್ ಮೋರ್ಚಾ ಒಪ್ಪಿದ್ದ ದಾರಿಯ ಯೋಜನೆಯನ್ನು ಮುರಿದು ದಿಲ್ಲಿ ಪ್ರವೇಶಿಸಲು ಕರೆ ನೀಡಿತ್ತು ಎಂಬುದು ಪೋಲೀಸರಿಗೆ ಚೆನ್ನಾಗಿ ಗೊತ್ತಿತ್ತು. ಮೋದಿ ಸರಕಾರದ ಸರ್ವಾಧಿಕಾರಶಾಹಿ ಮತ್ತು ಸ್ಪಂದನಾಹೀನ ನಿಲುವು ದಿಲ್ಲಿಯಲ್ಲಿ ನಡೆದಿರುವ ಎಲ್ಲ ಅಹಿತಕರ ಘಟನೆಗಳಿಗೆ ಹೊಣೆ ಎಂದಿರುವ ಎಐಕೆಎಸ್ ಐಕ್ಯ ರೈತ ಆಂದೋಲನದ ವಿರುದ್ಧ ಈ ದುಷ್ಟ ಪಿತೂರಿಗಳನ್ನು ನಮ್ಮ ದೇಶದ ಜನರು ಸೋಲಿಸುತ್ತಾರೆ, ದೇಶದ ಮೂಲೆ-ಮೂಲೆಗೂ ಸಂಚರಿಸಿ ಪ್ರತಿ ನಾಗರಿಕರನ್ನು ತಲುಪಿ ಈ ಪಿತೂರಿಯನ್ನು ಬಯಲಿಗೆಳೆಯುತ್ತೇವೆ ಎಂದು ಬಿಜೆಪಿ ಸರಕಾರವನ್ನು ಮತ್ತು ಪ್ರಧಾನ ಮಂತ್ರಿಗಳನ್ನು ಎಚ್ಚರಿಸಿದೆ.

ಸರಕಾರ ಇಂತಹ ಸುಳ್ಳು ಪ್ರಚಾರಗಳನ್ನು ನಿಲ್ಲಿಸಿ ಈ ಮೂರು ಕೃಷಿ ಕಾಯ್ದೆಗಳನ್ನು ರದ್ದು ಮಾಡಬೇಕು ಮತ್ತು ಕನಿಷ್ಟ ಬೆಂಬಲ ಬೆಲೆಗೆ ಕಾನೂನಿನ ಗ್ಯಾರಂಟಿ ನೀಡಬೇಕು ಎಂಬ ರೈತರ ಬೇಡಿಕೆಗಳನ್ನು ಸ್ವೀಕರಿಸಬೇಕು ಎಂದು ಆಗ್ರಹಿಸಿರುವ ಎಐಕೆಎಸ್, ಈ ಬೇಡಿಕೆಗಳು ಈಡೇರುವ ವರೆಗೂ ಈ ಹೋರಾಟ ಮುಂದುವರೆಯುತ್ತದೆ ಎಂದು ಹೇಳಿದೆ.

ಈ ಹೋರಾಟ ಶಾಂತಿಯುತ ಸ್ವರೂಪದ್ದಾಗಿತ್ತು, ಇನ್ನು ಮುಂದೆಯೂ ಅದು ಹಾಗೆಯೇ ಮುಂದುವರೆಯುತ್ತದೆ. ಇದು ಈ ಹೋರಾಟದಲ್ಲಿ ಗರಿಷ್ಟ ಸಾಮೂಹಿಕ ಭಾಗವಹಿಸುವಿಕೆಯ ಒಂದು ಪೂರ್ವ ಶರತ್ತು. ಈ ಮುಂದುವರೆಯುತ್ತಿರುವ ಹೋರಾಟದ ಭಾಗವಾಗಿರುವ ಎಲ್ಲ ರೈತರೂ ಗಡಿಪ್ರತಿಭಟನಾ ಜಾಗಗಳಲ್ಲೇ ಉಳಿಯಬೇಕು ಎಂದು ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಎಐಕೆಎಸ್ ವಿನಂತಿ ಮಾಡಿಕೊಂಡಿವೆ.

ದೆಹಲಿ ರೈತರ ಹೋರಾಟವನ್ನು ನೇರವಾಗಿ ಕಂಡ ಪುರುಷೋತ್ತಮ ಬಿಳಿಮಲೆ ಹೋರಾಟದ ಕುರಿತು ಏನು ಹೇಳ್ತಾರೆ?

Donate Janashakthi Media

Leave a Reply

Your email address will not be published. Required fields are marked *