ಯಮುನಾ ಗಾಂವ್ಕರ್, ಜೋಯಿಡಾ
ಚರಿತ್ರೆಯಲ್ಲಿ ಮರೆತವರ ದಾಖಲಿಸಲು ಮರೆಯದ, ಸಹಯಾನದ ಒಡನಾಡಿ ಜೋಯಿಡಾದ ಉಳವಿಯಲ್ಲಿ ನಡೆಯುತ್ತಿರುವ ಉತ್ತರ ಕನ್ನಡ ಜಿಲ್ಲೆಯ 22ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಶಾಂತಾರಾಮ ನಾಯಕ ಹಿಚಕಡರಿಗೆ ಮನದುಂಬಿ ಅಭಿನಂದನೆಗಳು. ಶಾಂತಾರಾಮ ನಾಯಕ ಮಾಸ್ತರ್ ರಿಗೂ ನಮ್ಮ ಕುಟುಂಬಕ್ಕೂ ಮತ್ತು ನಾನು ಪ್ರತಿನಿಧಿಸುವ ಚಳುವಳಿಗೂ ಅತ್ಯಂತ ಅವಿನಾಭಾವ ಸಂಬಂಧವಿದೆ. ಜೋಯಿಡಾದಲ್ಲಿ ಮೊದಲಬಾರಿಗೆ ನಡೆದ ಉತ್ತರ ಕನ್ನಡ 12ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಡಾ. ಆರ್.ವಿ. ಭಂಡಾರಿಯವರು ಮತ್ತು ಇವರು ನಿಕಟವರ್ತಿಗಳು; ಸಮಾನ ವೈಚಾರಿಕತೆ ಉಳ್ಳವರು. ಒಮ್ಮೆ ಆರ್.ವಿ. ಭಂಡಾರಿಯವರು ತಮ್ಮ ಬರಹಕ್ಕೆ ಪೂರಕ ಸಾಮಗ್ರಿಗಳನ್ನು ಕಲೆಹಾಕಲು ಮತ್ತು ಒಂದು ವಾರ ತಾನು ಹಿಚಕಡ ರ ಮನೆಯಲ್ಲಿದ್ದು ಕಾದಂಬರಿ ಬರೆದುಬರುವೆ ಎಂದು ಮನದಲ್ಲೇ ನಕಾಶೆ ಹಾಡಿದ್ದರಂತೆ, ಆದರೆ ನಾನು ಅವರಲ್ಲಿ ಹೀಗೆ ಹೇಳಿ ಬಂದೆ ʻʻನೀವು ಅಂಕೋಲೆಯ ಮತ್ತು ಉತ್ತರ ಕನ್ನಡದ ಸ್ವಾತಂತ್ರ್ಯ ಹೋರಾಟದಲ್ಲಿ ಮರೆತು ಹೋದ ಅಧ್ಯಾಯಗಳ ದಾಖಲಿಸಿ ಬೇರೆ ಬರಹಗಳನ್ನೆಲ್ಲ ಕೆಲವು ವರ್ಷ ಮುಂದೆ ಹಾಕಿʼʼ ಎಂದು. ಮೊನ್ನೆ ಶಾಂತಾರಾಮ ನಾಯಕರ ಮನೆಗೆ ಹೋದಾಗ ಇದನ್ನು ನೆನಪಿಸಿ ಗದ್ಗದಿತರಾದರು. ಆ ಒತ್ತಾಸೆಗೆ ಮಣಿದೇ ತಾನು ಚರಿತ್ರೆಯಲ್ಲಿ ಮರೆತವರ ದಾಖಲಿಸಿದೆ ಎಂದು ಭಾವುಕರಾಗಿ ನನ್ನೊಂದಿಗೆ ಹಂಚಿಕೊಂಡರು. ಅನೇಕ ಮಹತ್ವದ ಪುಸ್ತಕಗಳನ್ನು ಬರೆದರೂ ನನಗೆ ಹೆಚ್ಚು ಮಹತ್ವದ್ದೆಂದು ಕಾಣುವುದು ʻಚರಿತ್ರೆಯಲ್ಲಿ ಮರೆತವರ ಕಥೆ, ಸ್ವಾತಂತ್ರ್ಯ ಹೋರಾಟದ ಹೊರಳು ನೋಟ, ಸ್ವಾತಂತ್ರ್ಯ ಹೋರಾಟದಲ್ಲಿ ನಾಡವರು, ಸ್ವಾತಂತ್ರ್ಯ ಹೋರಾಟದಲ್ಲಿ ಅಂಕೋಲಾ, ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರುʼ ಇವುಗಳು.
ಮಾತ್ರವಲ್ಲ ಇವರ ಕುಟುಂಬದ ಆಪ್ತೇಷ್ಟ ಕಿರಿಯ ಸ್ನೇಹಿತ ಅಕಾಲದಲ್ಲಿ ಅಗಲಿದ ನನ್ನ ಬಾಳಸಂಗಾತಿ ವಿಠ್ಠಲ ಭಂಡಾರಿಯವರಿಗೆ ಇವರೊಡನೆ ಸಾಹಿತ್ಯ ಸಾಂಸ್ಕೃತಿಕ ವೈಚಾರಿಕ ಸಂಗಾತಿತ್ವ ಇತ್ತು ಎಂಬುದನ್ನು ವಿಠ್ಠಲ ರ ಪ್ರಕಾಶಕರ ಮಾತಿನ ಸಾರ ಹಂಚಿಕೊಳ್ಳುವ ಮೂಲಕ ನೆನೆಯುತ್ತೇನೆ.
ನಾವು ನಮ್ಮ ಬಂಡಾಯ ಪ್ರಕಾಶನದಿಂದ ಶಾಂತಾರಾಮ ನಾಯಕ ಮಾಸ್ತರರು ಬರೆದ ಮಂಡಕ್ಕಿ ತಿಂದ ಗಂಗೆ (ಕಥಾ ಸಂಕಲನ) ಮತ್ತು ಒಡಲ ಗೀತೆ (ಕವನ ಸಂಕಲನ) ಎರಡು ಪುಸ್ತಕಗಳನ್ನು ಹೊರತಂದಿದ್ದೇವೆ. ಆಗ ಪ್ರಕಾಶಕರ ಮಾತಿನಲ್ಲಿ ಡಾ. ವಿಠ್ಠಲ ಭಂಡಾರಿಯವರು ಶಾಂತಾರಾಮ ನಾಯಕರನ್ನು ಮೆಚ್ಚಿಕೊಂಡು ಬರೆದುದನ್ನು ಉಲ್ಲೇಖಿಸುತ್ತೇನೆ. ಜಿಲ್ಲೆಯ ಸಾಂಸ್ಕೃತಿಕ ಪ್ರಜ್ಞೆಯಾದ ಶಾಂತಾರಾಮ ನಾಯಕ ಹಿಚ್ಕಡ ಅವರ ‘ಮಂಡಕ್ಕಿ ತಿಂದ ಗಂಗೆ’ ಕಥಾ ಸಂಕಲನವನ್ನು ಬಂಡಾಯ ಪ್ರಕಾಶನದ ಡಾ. ಆರ್.ವಿ. ಭಂಡಾರಿ ನೆನಪಿನ ಪುಸ್ತಕ ಮಾಲೆಯಲ್ಲಿ ಪ್ರಕಟಿಸಿ ಖುಷಿ ಪಟ್ಟಿದ್ದ ಅವರು ಅದೊಂದು ಧನ್ಯತೆಯ ಕ್ಷಣ ಎಂದೂ ತನ್ನ ತಂದೆಯ ಸ್ನೇಹಗಣದವರೆಂದು ಹೆಮ್ಮೆಪಟ್ಟಿದ್ದರು. ತಲೆಮಾರಿನ ಅಂತರವನ್ನು ಮೀರಿ ತೀರಾ ಸಣ್ಣವನಾದ ತನ್ನೊಂದಿಗೂ ವೈಚಾರಿಕ ಮತ್ತು ಭಾವನಾತ್ಮಕ ಸ್ನೇಹವನ್ನು ಉಳಿಸಿಕೊಂಡಿರುವ ಅವರ ಹೃದಯ ಶ್ರೀಮಂತಿಕೆಗೆ ಕೈಜೋಡಿಸಲೇ ಬೇಕು ಎಂದಿದ್ದರು.
ಶಿಕ್ಷಣ, ಸಹಕಾರ, ಸಾಹಿತ್ಯ ಹಾಗೂ ಪ್ರಕಾಶನ ಕ್ಷೇತ್ರಗಳಲ್ಲಿ ತಣ್ಣನೆ ತೊಡಗಿಸಿಕೊಂಡಿರುವ ಶಾಂತಾರಾಮ ನಾಯಕ ಎಂದೂ ಪದವಿಯ ಬೆನ್ನು ಹತ್ತಿದವರಲ್ಲ. ಈ ಹಿಂದೆ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ ವಹಿಸಿಕೊಳ್ಳುವಂತೆ ಕೇಳಿಕೊಂಡಾಗ ಕೂಡ ನಯವಾಗಿಯೇ ನಿರಾಕರಿಸಿ ಹೊಸ ತಲೆಮಾರಿನವರಿಗೆ ಅವಕಾಶ ಮಾಡಿಕೊಟ್ಟರು. ತಾವು ಕಟ್ಟ ಬಯಸಿದ ಸಮಾಜ ಇನ್ನೂ ರೂಪಿತ ಆಗದಿರುವ ಬಗ್ಗೆ ವಿಷಾದ ತುಂಬಿದ ಅವರ ಶಿಕ್ಷಕ ಮನಸ್ಸು ಈಗಲೂ ಬದಲಾವಣೆ ಬಯಸಿ ನಡೆವ ಚಳುವಳಿಯ ಸಹಯಾನಿಯಾಗುವ ಹುರುಪನ್ನು ಕಾಪಿಟ್ಟಿಕೊಂಡಿದೆ. ಕೆರೆಕೋಣದಲ್ಲಿ ಸಹಯಾನ (ಡಾ. ಆರ್.ವಿ.ಭಂಡಾರಿ ನೆನಪಿನ ಸಂಸ್ಕೃತಿ ಅಧ್ಯಯನ ಕೇಂದ್ರ) ಪ್ರಾರಂಭಿಸುವ ಆಶಯದ ಬೆನ್ನೆಲುಬಾಗಿ ನಿಂತರು ಮಾತ್ರವಲ್ಲ ಸಹಯಾನ ಅಧ್ಯಕ್ಷರಾಗಿ ಕೂಡ ಮಾರ್ಗದರ್ಶನ ಮಾಡುತ್ತಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡುವ ಖುಷಿ ತನ್ನದು ಎಂದು ಹಂಚಿಕೊಂಡಿದ್ದರು.
ಶಿಕ್ಷಕರಾಗಿ, ಕವಿಯಾಗಿ, ಸ್ವಾತಂತ್ರ್ಯ ಚಳುವಳಿಯ ಚರಿತ್ರೆಕಾರರಾಗಿ ಮುನ್ನೆಲೆಗೆ ಬಂದ ಶಾಂತಾರಾಮ ನಾಯಕರವರು ಇಷ್ಟೊಂದು ಕಥೆಗಳನ್ನು ಪ್ರಕಟಿಸಿದ್ದು ನನ್ನ ಗಮನಕ್ಕೆ ಬರಲಿಲ್ಲ. ಅವರು ಬರೆದ ಕಥೆಗಳಲ್ಲಿ ಒಟ್ಟು ಹನ್ನೊಂದು ಕಥೆಗಳನ್ನು ಆಯ್ದು ಈ ಸಂಕಲನ ‘ಮಂಡಕ್ಕಿ ತಿಂದ ಗಂಗೆ’ ನಿಮ್ಮ ನಮ್ಮ ಓದಿಗೆ ಒದಗಿ ಬಂದಿದೆ. ಕಥೆಗಳನ್ನೆಲ್ಲಾ ಓದಿ ಮುಗಿಸುವ ಹೊತ್ತಿಗೆ ಅಂಕೋಲೆಯ ಸಾಂಸ್ಕೃತಿಕ ವೈವಿಧ್ಯತೆಯೂ ಮತ್ತು ಇಂದು ಅದು ತಲುಪುತ್ತಿರುವ ದುರಂತ ಚಿತ್ರಣವೂ ಏಕಕಾಲದಲ್ಲಿ ಮೂಡಿದರೆ ಆಶ್ಚರ್ಯವಿಲ್ಲ. ಶಾಂತಾರಾಮ ನಾಯಕರು ಅಂಕೋಲೆಯ ನೆಲದಲ್ಲಿ ನಡೆದ ಸ್ವಾತಂತ್ರ್ಯ ಚಳುವಳಿಯ ಮತ್ತು ದಿನಕರ ದೇಸಾಯಿಯವರ ನೇತೃತ್ವದ ರೈತ ಚಳುವಳಿಯನ್ನು ಬಹಳ ಹತ್ತಿರದಿಂದ ನೋಡಿದವರು ಮತ್ತು ಸ್ವತಃ ಪಾಲ್ಗೊಂಡವರು. ಸ್ವಾತಂತ್ರ್ಯ ಚಳುವಳಿ ಮತ್ತು ರೈತ ಚಳುವಳಿಗಳ ಆಶಯಗಳೆರಡೂ ಕತೆಯಲ್ಲಿ ಅಂತರ್ ವಾಹಿನಿಯಾಗಿ ಹರಿಯುತ್ತದೆ. ಅಥವಾ ಇಡೀ ಕತೆಯ ವೈಚಾರಿಕತೆಯನ್ನು ರೂಪಿಸಿದ್ದೇ ಈ ಚಳುವಳಿಗಳು ಎನ್ನುವುದೇ ಹೆಚ್ಚು ಸೂಕ್ತ ಅನ್ನಿಸುತ್ತದೆ.
ಆದ್ದರಿಂದಲೇ ಸಾಮಾನ್ಯ ಜನರನ್ನು ಹಣ ಮತ್ತು ಅಧಿಕಾರ ಬಲದಿಂದ ವಂಚಿಸಿದರೆ (ಬಾಳೆಕೊನೆ ಮತ್ತು ಚಿಗರೆ ಕೋಡು) ಹೆಣ್ಣನ್ನು ಅವಳ ಶೀಲದ ಹೆಸರಿನಲ್ಲಿ ಅವಹೇಳನ ಮಾಡಿದರೆ (ಕತೆಯಾದಳು ಗಂಗೆ) ಹಣಬಲ, ಸ್ವಾರ್ಥ ಮತ್ತು ಜಾತಿಯ ಅಹಂ ನಿಂದ ಸಮಾಜಬಾಹಿರ ಕೆಲಸವನ್ನು ಮಾಡಿದರೆ (ಪ್ರಾಯಶ್ಚಿತ) ಲೇಖಕರಿಗೆ ಸಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅದರ ವಿರುದ್ಧ ಒಂದು ಸಣ್ಣ ದನಿ ಎತ್ತುತ್ತಾರೆ. ಇದರಾಚೆಯ ಒಂದು ಸ್ವಚ್ಛ ಸಮಾಜದ ಕನಸು ಕಾಣುವವರ ಮನಸ್ಸು ನಮಗೆ ಈ ಕಾಲದ ಜರೂರಾಗಿದೆ. ಮನೆಯಲ್ಲಿ ಸಾಕಿದ ರಾಣಿ ಬೆಕ್ಕಿನ ಮರಿಯನ್ನು ದೂರದಲ್ಲಿ ಬಿಟ್ಟು ಬಂದ ‘ರಾಣಿ ಮತ್ತು ಮರಿ ಬೆಕ್ಕಿನ’ ನಿರೂಪಕ “ಪಾಪ ಹಾಲು ತುಂಬಿದ ನೋವನ್ನು ಸಹಿಸಲಾರದೇ ಹಾಲು ತುಂಬಿದ ಮೊಲೆಗಳ ಹಾಲನ್ನು ಕುಡಿಯಲು ಮರಿಗಳಿಲ್ಲದೇ ಆ ನೋವಿನಿಂದಲೂ ಬೆಕ್ಕು ತನ್ನ ಮರಿಗಳಿಗಾಗಿ ರೋದಿಸುತ್ತಿತ್ತು…. ರಾತ್ರಿ ಇಡೀ ಬೆಕ್ಕಿನ ಮರಿಗಳ ಆಕ್ರಂದನದ ನೆನಪು. ರಾತ್ರಿ ಬಾಗಿಲು ಹಾಕಿ ಮಲಗಿದರೂ ಕಾಲು ಕನಸಿನಲ್ಲಿ ತಾಯಿ ಬೆಕ್ಕು ನನ್ನ ಮೇಲೆ ಆಕ್ರಮಣ ಮಾಡಿ ತನ್ನ ಗಂಟಲನ್ನು ಕಚ್ಚಿ ಹಿಡಿದಂತೆ ಭಾಸವಾಗಿ ಚೀರಿ ಬಿಟ್ಟೆ!” ಎಂದು ಪಡುವ ತಳಮಳ, ನೋವು ಅಪರಾಧಿ ಪ್ರಜ್ಞೆ ಇಂದು ಜಾತಿ ಧರ್ಮ ಲಿಂಗ ಆಧಾರದಲ್ಲಿ ಮನುಷ್ಯನನ್ನು ಕೊಲ್ಲುವ ಹಿಂದಿಸುವ ಜನರಿಗೆ ಬರುವುದು ಯಾವಾಗ? ಎನ್ನುವ ಪ್ರಶ್ನೆ ಸಂಕಲನದುದ್ದಕ್ಕೂ ಹರಿಯುತ್ತದೆ ಮತ್ತು ಕತೆಯ ವ್ಯಾಪ್ತಿಯನ್ನು ಅಂಕೋಲೆಯೆಂಬ ಸಾಂಸ್ಕೃತಿಕ ಮೇರೆ ಮೀರಿ ಈ ನಾಡಿನ ವ್ಯಥೆಯ ಚಿತ್ರವಾಗಿ ನಿಂತುಬಿಡುತ್ತದೆ.
ಆಡುಭಾಷೆಯ ಯಥೇಚ್ಛ ಬಳಕೆ, ಸ್ವಾತಂತ್ರ್ಯ ಚಳುವಳಿಯಲ್ಲಿ ಪಾಲ್ಗೊಂಡವರ ಸಣ್ಣಸಣ್ಣ ಕಥನ, ತಲೆಮಾರುಗಳ ನಡುವೆ ಬದಲಾದ ಸಾಮಾಜಿಕ ಸಾಂಸ್ಕೃತಿಕ ಪಲ್ಲಟಗಳ ಚಿತ್ರ, ಬದಲಾವಣೆಯ ಸಾಂಕೇತಿಕ ರೂಪ, ಸರಳತೆಯ ನಿರೂಪಣೆಗಳೆಲ್ಲವೂ ಶಾಂತಾರಾಮ ನಾಯಕದ ಕಥಾಜಗತ್ತಿನ ಅಪರೂಪದ ಕಥನವಾಗಿದೆ ಎಂದು ವಿಠ್ಠಲ ಭಂಡಾರಿ ಅಂದು ಬರೆದಿದ್ದರು.
ಆದರೆ, ಈ ಬಾರಿ ಸಮ್ಮೇಳನ ಸಬಾಂಗಣಕ್ಕೆ ಹಾದುಹೋಗುವಾಗ ಹಿರಿಯರಾದ ನಾಸು ಭರತನಹಳ್ಳಿ, ವಿಜೆ ನಾಯಕ, ಪ್ರಭಾಕರ ರಾಣೆ, ಮಾದೇವ ವೆಳಿಪ್, ಜೊತೆಗೆ ವಿಠ್ಠಲ ಭಂಡಾರಿ ನೆನಪಿನ ದ್ವಾರಗಳ ಮೂಲಕ ಸಾಗಿ ಶರಣ ಚೆನ್ನಬಸವಣ್ಣ ವೇದಿಕೆಗೆ ತೆರಳಲಿರುವುದು ವೇದನೆಯ ಸಂಗತಿಯೂ ಜೊತೆಗೆ ಕಾಲದ ವಿಪರ್ಯಾಸವೂ ಆಗಿದೆ. ಆದರೆ ಇವರೆಲ್ಲರ ಮಹದಾಸೆಗಳ ಮುಂದುವರಿಸುವ ಪಣತೊಡುವ ಸಂದರ್ಭವಾಗಿಯೂ ಸ್ವೀಕರಿಸುವುದು ವೇದನೆ ನೋವು ಮೀರುವ ಈ ಕಾಲದ ಅನಿವಾರ್ಯ ಜವಾಬ್ದಾರಿಯುತ ಸಂಗತಿ ಕೂಡ. ಮಾತ್ರವಲ್ಲ ಇಲ್ಲಿ ಶಾಂತಾರಾಮ ಮಾಸ್ತರರ ಪ್ರೀತಿಯ ವಿಠ್ಠಲ ರವರು ಜೋಯಿಡಾದ ಸಮಸ್ಯೆಗಳ ವಿರುದ್ಧ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿದ ಹತ್ತಾರು ಹೋರಾಟ ಸಂಘಟಿಸುವಲ್ಲಿ, ಕಾನೂನು ಅರಿವು ಮೂಡಿಸಲು ಅನೇಕ ಕಾರ್ಯಕ್ರಮ ಹಾಕಿಕೊಂಡುದು, ಕುಣಬಿ ಗೌಳಿ ಸಾಂವಿಧಾನಿಕ ಬುಡಕಟ್ಟು ಮಾನ್ಯತೆಗೆ, ಮರೆಯಲ್ಲೇ ಇರುವ ಬುಡಕಟ್ಟು ಕಲಾವಿದರ ಗುರ್ತಿಸಲು, ಗಡಿನಾಡ ಉತ್ಸವ ನಡೆಸುವುದಕ್ಕಾಗಿ ಹೀಗೆ ವಿಠ್ಠಲ ಅವರಿಗೆ ಜೋಯಿಡಾ ಸಂಬಂಧ ಹತ್ತಿರದ್ದು. ಅದಕ್ಕೆಂದೇ ಜೋಯಿಡಾ ಕಾಡೊಳಗಿನ ಒಡಲು ಪುಸ್ತಕ ರೂಪುಗೊಂಡಿರುವುದು.
ನಾವೆಲ್ಲ ಮೊದಲು ಕವಿ ಶಾಂತಾರಾಮ ಮಾಸ್ತರರು ಎನ್ನುತ್ತಿದ್ದೆವು. ಕಾಡ ಹೆಣ್ಣು, ಆತಂಕ, ದಾರಿ ಮಾಡಿಕೊಡಿ ಎಲ್ಲಾ ಓದಿದ್ದೆ. ನಂತರ ಅವರು ಬರೆದ ಅನುರಾಗ, ನಿನಾದ, ಸಂಭ್ರಮ, ಒಡನಾಟ, ಹುಡುಕಾಟ ಹಾಗೂ ಒಡಲಗೀತ ಬಿಡುಗಡೆಗೆ ಕೆಲವು ಸಂದರ್ಭದಲ್ಲಿ ನಾನು ಸಭಿಕರಲ್ಲಿ ಒಬ್ಬಳಾಗಿದ್ದೆ ಅಥವಾ ಪುಸ್ತಕ ಮಾರಾಟಕ್ಕೆ ಜೊತೆಯಾಗಿದ್ದೆ. ಕಾಲೇಜು ದಿನಗಳಲ್ಲಿ ಅಂಕೋಲೆಯ ಅನೇಕ ಸಾಹಿತ್ಯದ ಕಾರ್ಯಕ್ರಮಗಳಲ್ಲಿ ಗಿರಿ ಪಿಕಳೆ, ವಿ.ಜೆ. ನಾಯಕ, ಆರ್.ವಿ. ಭಂಡಾರಿ, ಹುದ್ದಾರರು, ಅಮ್ಮೆಂಬಳ ಆನಂದ, ಜಿ.ಎಚ್. ನಾಯಕರು, ವಿಷ್ಣು ನಾಯ್ಕ, ಶಾಂತಾರಾಮ ಮಾಸ್ತರ್ ಇವರನ್ನೆಲ್ಲ ನೋಡುತ್ತಿದ್ದೆ, ಭಾಷಣ ಕೇಳುತ್ತಿದ್ದೆ. ನಂತರ ಕಳೆದ ಇಪ್ಪತ್ತು ವರ್ಷಗಳಲ್ಲಿ ಅವರ ಕುಟುಂಬದ ಭಾಗವಾಗಿದ್ದೇನೆ ಎಂದು ಖುಷಿಯಿಂದ ಹೇಳುವೆ. ಸಮ್ಮೇಳನಾಧ್ಯಕ್ಷರಾದಾಗ ಕೇವಲ ಅಭಿನಂದಿಸಿದರೆ ಸಾಲದು ಏನಾದರೂ ಹೊಸದು ಮಾಡೋಣ ಎಂದು ಸಂಘಟನೆಯ ಸ್ನೇಹಿತರೆಲ್ಲ ಅಂದುಕೊಂಡೆವು. ಜೋಯಿಡಾದಲ್ಲಿ ನಡೆದ 12ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದ ಡಾ. ಆರ್.ವಿ ಯವರು ಮತ್ತು ಅದೇ ಜೋಯಿಡಾ ತಾಲೂಕಿನಲ್ಲಿ ಎರಡನೇ ಬಾರಿ ನಡೆಯುತ್ತಿರುವ ಸಮ್ಮೇಳನದ ಸರ್ವಾಧ್ಯಕ್ಷರಾದ ಪ್ರೀತಿಯ ಶಾಂತಾರಾಮ ಮಾಸ್ತರರು ಈ ನೆಲದ ಚರಿತ್ರೆಯ ಎರಡು ಪ್ರಧಾನ ಅಧ್ಯಾಯಗಳು; ಅನೇಕ ಸಾಮ್ಯತೆಗಳಿವೆ. ಈ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಕಣ್ಣೋಟ ಇದ್ದವರಾಗಿದ್ದಾರೆ. ನಾಡು ನುಡಿ ಮತ್ತು ಜಿಲ್ಲೆಯ ಅನನ್ಯತೆಯ ಪ್ರಶ್ನೆಗಳು ಬಂದಾಗೆಲ್ಲ ತಮ್ಮ ಸಂಗಾತಿಗಳ ಜೊತೆಗೂಡಿ ಧ್ವನಿ ಎತ್ತಿದ್ದಾರೆ. ಬೀದಿಬದಿಯಲ್ಲಿ ನಡೆಯುತ್ತಿರುವ ಅನೇಕ ಹೋರಾಟಗಳಿಗೆ ಸಾಂಸ್ಕೃತಿಕ ಅಭಿವ್ಯಕ್ತಿಯನ್ನು ಮಾಡಿದ್ದಾರೆ. ಸಹಾಯ ಮಾಡಿದ್ದಾರೆ.
ಕಲ್ಯಾಣದ ಕಡೆಯಿಂದ ಸಂಕಷ್ಟದ ದಾರಿ ಕ್ರಮಿಸಿಯೂ ಉಳವಿ ತನಕ ಬಂದು ತನ್ನ ನೆಲೆ ನಾಡಾಗಿಸಿಕೊಂಡ ಚೆನ್ನಬಸವಣ್ಣ ತಲೆಮಾರಿನಿಂದ ತಲೆಮಾರಿಗೆ ವಚನ ಸಾಹಿತ್ಯ ದಾಟಿಸಲು ಶ್ರಮಿಸಿದ ಹಾಗೆ ಶಾಂತಾರಾಮ ಮಾಸ್ತರರು ಚರಿತ್ರೆಯಲ್ಲಿ ಮರೆತವರನ್ನು ನಮ್ಮೆದುರು ತಂದುಕೊಟ್ಟಿದ್ದಾರೆ. ಸಾಹಿತ್ಯ ಕೃತಿಗಳ ಮೂಲಕ ಅವರನ್ನೆಲ್ಲ ಜೀವಂತವಾಗಿರಿಸಿದ ಕಾರಣಕ್ಕೆ ಪ್ರಮುಖರಾಗುತ್ತಾರೆ. ಈ ಸರ್ವಾಧ್ಯಕ್ಷ ಸ್ಥಾನ ಖಂಡಿತ ಹೆಮ್ಮೆ. ಪ್ರಾಕೃತಿಕ ಸಂಪದ್ಭರಿತ ಜೋಯಿಡಾದ ಜನತೆ ಕೂಡ ಈ ದೇಶಕ್ಕೆ ಬೆಳಕು ಕೊಟ್ಟು ತಾವು ಕತ್ತಲನ್ನು ಅನುಭವಿಸುತ್ತಿರುವರು. ಅವರದ್ದೇ ಆದ ಒಡಲ ಗೀತೆಯನ್ನೂ ನೀವು ಆಳುವವರೆದುರು ತೆರೆದುಕೊಟ್ಟು ಬರುತ್ತೀರೆಂಬ ಅಚಲ ನಂಬಿಕೆ ನಮ್ಮದು, ಮತ್ತೊಮ್ಮೆ ಅಭಿನಂದನೆಗಳು.