ಚರಿತ್ರೆ ನಿರ್ಮಾಣವಾಗುವುದು ಹೆದ್ದಾರಿ-ಪ್ರತಿಮೆಗಳಿಂದಲ್ಲ- ಸಾಂವಿಧಾನಿಕ ಆಶಯಗಳ ರಕ್ಷಣೆಯಿಂದ: ನ್ಯಾ. ಗೌತಮ್‌ ಪಟೇಲ್

ಮುಂಬಯಿ: ಹೆದ್ದಾರಿ ಅಥವಾ ಸೇತುವೆಗಳನ್ನು ಇಲ್ಲವೇ ಪ್ರತಿಮೆಗಳನ್ನು ನಿರ್ಮಾಣ ಮಾಡುವುದರಿಂದ ಇತಿಹಾಸ ನಮ್ಮನ್ನು ಗುರುತಿಸುವುದಿಲ್ಲ, ಬದಲಿಗೆ ಭಾರತದ ಸಾಂವಿಧಾನಿಕ ಕಲ್ಪನೆಯನ್ನು ಎಷ್ಟರ ಮಟ್ಟಿಗೆ ಕಾಪಾಡಿಕೊಳ್ಳಲಾಗಿದೆ ಎಂಬುದರ ಮೇಲೆ ನಮ್ಮನ್ನು ಇತಿಹಾಸ ಅಳೆಯುತ್ತದೆ ಎಂದು ಬಾಂಬೆ ಹೈಕೋರ್ಟ್‌ ನ್ಯಾಯಮೂರ್ತಿ ಗೌತಮ್‌ ಪಟೇಲ್‌ ಅಭಿಪ್ರಾಯಪಟ್ಟರು.

ಲೀಫ್‌ಲೆಟ್‌ ಮಾಧ್ಯಮ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ನ್ಯಾಯಮೂರ್ತಿ ಗೌತಮ್‌ ಪಟೇಲ್, ಅಭಿಪ್ರಾಯಭೇದವನ್ನು ಹತ್ತಿಕ್ಕಲು ಅಥವಾ ಪ್ರತಿಧ್ವನಿಯನ್ನು ಅಡಗಿಸಲು ತೆರಿಗೆ ಕಾನೂನುಗಳಂತಹ ಸಾಮಾನ್ಯ ಕಾನೂನುಗಳನ್ನು ಕೂಡ ಅಸ್ತ್ರವಾಗಿ ಬಳಸಿಕೊಳ್ಳಲಾಗುತ್ತಿದೆ. ಇದನ್ನು ತಡೆದುಕೊಳ್ಳಲು ಇಲ್ಲವೇ ಎದುರಿಸುವುದಕ್ಕೆ ಪುಟಿದೇಳುವ ಗುಣಬೇಕು. ಇದರೊಟ್ಟಿಗೆ ಆರ್ಥಿಕ ಮತ್ತು ಕಾನೂನಿನ ವ್ಯಾಪಕ ಅಸ್ತ್ರವೂ ಬೇಕು ಎಂದು ಹೇಳಿದ್ದಾರೆ.

ʼಭಾರತದ ಪರಿಕಲ್ಪನೆಯ ದುರ್ಬಲಗೊಳಿಸುವಿಕೆ: ಮುಂದಿನ ಹಾದಿ ಏನು?ʼ ಎಂಬ ವಿಷಯದ ಬಗ್ಗೆ ಮಾತನಾಡಿದ ಅವರು ಸಂವಿಧಾನದ ಭಾಗ ಮೂರರಲ್ಲಿರುವ ಸ್ವಾತಂತ್ರ್ಯ ಮತ್ತು ಮುಕ್ತತೆ ನಡುವಿನ ಸಂಬಂಧ ಮತ್ತು ನಿರ್ದಿಷ್ಟ ಸರ್ಕಾರದ ಅಧಿಕಾರಾವಧಿಯ ಮೇಲೆ ಪರಿಣಾಮ ಬೀರುವ ಅಧಿಕಾರದ ಬಗ್ಗೆ ನ್ಯಾಯಾಧೀಶರು ಗಮನ ಸೆಳೆದರು. ಚುನಾವಣಾ ನಿರ್ಧಾರಗಳನ್ನು ತೆಗೆದುಕೊಳ್ಳುವ ಈ ಅಧಿಕಾರಕ್ಕೆ ಮುಕ್ತತೆಯ ರಕ್ಷಣೆ ಮತ್ತು ಸ್ವಾತಂತ್ರ್ಯದ ಖಾತರಿಗಳು ಬೇಕಾಗುತ್ತವೆ ಎಂದು ಅವರು ಒತ್ತಿ ಹೇಳಿದರು.

“ಈ ಸ್ವಾತಂತ್ರ್ಯದ ಮೇಲೆ ಕಾರ್ಯನಿರ್ವಹಿಸುವ ಹಕ್ಕಿಲ್ಲದೆ ಕೇವಲ ಆಯ್ಕೆ ಮಾಡುವ ಸ್ವಾತಂತ್ರ್ಯ ಮಾತ್ರವೇ ನಮಗಿದ್ದರೆ, ಆಯ್ಕೆಯ ಸ್ವಾತಂತ್ರ್ಯ ಎನ್ನುವುದು ಖಾಲಿ ಭರವಸೆಯಾಗಲಿದೆ. ಇನ್ನೂ ಹೆಚ್ಚು ಸ್ಪಷ್ಟವಾಗಿ ಹೇಳುವುದಾದರೆ, ಬಹುಶಃ ಯಾವುದೇ ಸರ್ಕಾರವಾದರೂ ಇಷ್ಟಪಡದ ಮಾತುಗಳಲ್ಲಿ ಹೇಳುವುದಾದರೆ ಒಬ್ಬರು ತಮ್ಮ ಸರ್ಕಾರವನ್ನು ಆಯ್ಕೆ ಮಾಡುವ ಹಕ್ಕು ಪ್ರಸ್ತುತ ಸರ್ಕಾರದೊಂದಿಗಿನ ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಹಕ್ಕನ್ನು ಹೊಂದಿರುತ್ತದೆ. ಇದು ಅಭಿಪ್ರಾಯಭೇದದ ಹಕ್ಕು, ಆದರೆ ಅದು ಮತ್ತೂ ಮುಂದೆ ಹೋಗುತ್ತದೆ” ಎಂದು ಅವರು ಹೇಳಿದರು.

“ಈ ಆಯ್ಕೆಯ ಶಕ್ತಿ ಸರ್ಕಾರಗಳನ್ನು ಆತಂಕಕ್ಕೀಡುಮಾಡುತ್ತದೆ ಎಂದು ಅಭಿಪ್ರಾಯಪಟ್ಟ ಅವರು, “ಇದು ಅನೇಕ ರೂಪಗಳನ್ನು ಪಡೆಯುತ್ತದೆ. ಉದ್ದೇಶ ಮೀರಿ ಕಠಿಣ ಕ್ರಿಮಿನಲ್‌ ಮತ್ತು ಭಯೋತ್ಪಾದನೆ- ವಿರೋಧಿ ಕಾನೂನುಗಳನ್ನು ಹೇರುತ್ತದೆ. ದೇಶದ್ರೋಹದ ಕಾನೂನನ್ನು ಹೇರುವ ರೂಪದಲ್ಲಿ ಅದು ಇನ್ನೂ ಅಸ್ತಿತ್ವದಲ್ಲಿದೆ. ಇದು ಹೆಚ್ಚು ಟೀಕೆಗೆ ತುತ್ತಾಗಿದೆ” ಎಂದರು.

ಅವರು ಹೇಳಿದ ಮೂರನೇ ಪರಿಣಾಮಕಾರಿ ತಂತ್ರವೆಂದರೆ ಭಿನ್ನಮತ, ವಿರೋಧ ಹಾಗೂ ಅಭಿಪ್ರಾಯಭೇದ ವ್ಯಾಪಕವಾಗಿ ಗೋಚರಿಸುವ ರೂಪ ಪಡೆದಾಗಲೂ ಅದನ್ನು ಸಂಪೂರ್ಣ ಕ್ಷುಲ್ಲಕಗೊಳಿಸಲಾಗುತ್ತಿದೆ ಎಂಬುದು. ಪ್ರತಿಭಟನಾಕಾರರನ್ನು ಹುಚ್ಚುತನದ ಭಾಗವೆಂದು ಚಿತ್ರಿಸಿದಾಗ ಅಥವಾ ಅವರು ಜನರ ನಿತ್ಯದ ಚಟುವಟಿಕೆಗಳಿಗೆ ತೊಂದರೆ ಉಂಟುಮಾಡುತ್ತಿದ್ದಾರೆ ಎಂದು ಬಿಂಬಿಸಿದಾಗ ಅವರನ್ನು ಕಡೆಗಣಿಸುವುದು ಮತ್ತು ಅವರು ಎತ್ತಿರುವ ತಕರಾರುಗಳಿಂದ ಅವರ ಗಮನವನ್ನು ಬೇರೆಡೆಗೆ ಸೆಳೆಯುವುದು ಸುಲಭವಾಗುತ್ತದೆ ಎಂಬುದನ್ನು ಉದಾಹರಣೆ ಸಹಿತ ವಿವರಿಸಿದರು.

ಅಂತಿಮವಾಗಿ ಸ್ವರಕ್ಷಣೆಯ ಮತ್ತೊಂದು ತಂತ್ರವನ್ನು ವಿವರಿಸಿದ ಅವರು ಧರ್ಮ ಅಥವಾ ಜನಾಂಗದ ಆಧಾರದ ಮೇಲೆ ಸಂಪೂರ್ಣವಾಗಿ ನಕಲಿ ರಾಷ್ಟ್ರೀಯತೆಯನ್ನು ಉತ್ತೇಜಿಸಲಾಗುತ್ತದೆ ಎಂದರು. ಅಲ್ಲದೆ ಸಾಂವಿಧಾನಿಕ ವಿಷಯಗಳ ರಚನೆಯಲ್ಲಿ ಅತಿಯಾದ ಭಿನ್ನಾಭಿಪ್ರಾಯ ಎಂಬ ಕಲ್ಪನೆಯಿಲ್ಲ ಎಂಬುದಾಗಿ ವಿವರಿಸಿದರು.

ಕೃಪೆ: ಕನ್ನಡ ಬಾರ್‌ ಅಂಡ್‌ ಬೆಂಚ್‌

Donate Janashakthi Media

Leave a Reply

Your email address will not be published. Required fields are marked *