ನವದೆಹಲಿ : ಭಾರತೀಯ ಕುಸ್ತಿ ಫೆಡರೇಷನ್ ಮಾಜಿ ಮುಖ್ಯಸ್ಥ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿರುದ್ಧ ಲೈಂಗಿಕ ದೌರ್ಜನ್ಯ ಮತ್ತು ಮಹಿಳೆಯರ ಘನತೆಗೆ ಧಕ್ಕೆ ತಂದ ಆರೋಪವನ್ನು ಶುಕ್ರವಾರ ದೆಹಲಿ ನ್ಯಾಯಾಲಯ ನಿಗದಿಪಡಿಸಿದೆ.
ಈ ವಿಚಾರವಾಗಿ ಕುಸ್ತಿಪಟುಗಳು ಕಳೆದ ವರ್ಷ ಎರಡೆರಡು ಬಾರಿ ಬೀದಿಗಿಳಿದು ಪ್ರತಿಭಟಿಸಿದ್ದು, ಜೂನ್ 15ರಂದು ಪೊಲೀಸರು ಬ್ರಿಜ್ಭೂಷಣ್ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿದ್ದರು. ಅಲ್ಲದೆ, ಐಪಿಸಿ ಸೆಕ್ಷನ್ 354, 354 (ಎ), 354 (ಡಿ), ಅಡಿಯಲ್ಲಿ ದೋಷಾರೋಪ ಪಟ್ಟಿಯನ್ನು ಸಲ್ಲಿಕೆ ಮಾಡಲಾಗಿದೆ. ಈ ಪ್ರಕರಣ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ ಕಾರಣ ಬ್ರಿಜ್ಭೂಷಣ್ಗೆ ಈ ಬಾರಿಗೆ ಕೈಸರ್ಗಂಜ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೊಟ್ಟಿಲ್ಲ.
ಡಬ್ಲ್ಯುಎಫ್ಐ ಮಾಜಿ ಅಧ್ಯಕ್ಷನಿಗೆ ಟಿಕೆಟ್ ಕೈತಪ್ಪಿದರೂ ಆತನ ಪುತ್ರ ಕರಣ್ ಭೂಷಣ್ ಸಿಂಗ್ ಅವರನ್ನು ಅದೇ ಕ್ಷೇತ್ರದಿಂದ ಕಣಕ್ಕಿಳಿಸಿದೆ. ಆರು ಮಹಿಳಾ ಕುಸ್ತಿಪಟುಗಳು ನೀಡಿದ್ದ ದೂರುಗಳನ್ನು ಆಧರಿಸಿ ಡೆಲ್ಲಿ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಲೈಂಗಿಕ ಕಿರುಕುಳ, ಹಲ್ಲೆ ಸೇರಿದಂತೆ ಹಲವು ಅಪರಾಧಗಳಲ್ಲಿ ಬ್ರಿಜ್ಭೂಷಣ್ ಅವರನ್ನು ವಿಚಾರಣೆಗೆ ಒಳಪಡಿಸಿ ಶಿಕ್ಷಿಸಬೇಕು ಎಂದು ಸಾಕ್ಷಿಗಳು ಉಲ್ಲೇಖಿಸಿರುವ ಕುರಿತು ದೋಷಾರೋಪ ಪಟ್ಟಿಯಲ್ಲಿ ತಿಳಿಸಲಾಗಿದೆ.
ಇದನ್ನು ಓದಿ : ಲೈಂಗಿಕ ದೌರ್ಜನ್ಯ ಪ್ರಕರಣ : ಬಿಜೆಪಿ ಮುಖಂಡ ದೇವರಾಜೇಗೌಡ ಬಂಧನ
ಕಳೆದ ವರ್ಷ ಜೂನ್‌ನಲ್ಲಿ ದೆಹಲಿ ಪೊಲೀಸರು ಭೂಷಣ್ ವಿರುದ್ಧ ಆರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ, ಹಲ್ಲೆ ಮತ್ತು ಹಿಂಬಾಲಿಸಿದ ಆರೋಪದ ಮೇಲೆ ಆರೋಪಪಟ್ಟಿ ಸಲ್ಲಿಸಿದ್ದರು. 1,500 ಪುಟಗಳ ಚಾರ್ಜ್‌ಶೀಟ್‌ನಲ್ಲಿ ಸಿಂಗ್ ವಿರುದ್ಧ 6 ಮಹಿಳಾ ಕುಸ್ತಿಪಟುಗಳು ಮಾಡಿದ ಆರೋಪಗಳನ್ನು ದೃಢಪಡಿಸಿದ ಕುಸ್ತಿಪಟುಗಳು, ರೆಫ್ರಿ, ಕೋಚ್ ಮತ್ತು ಫಿಸಿಯೋಥೆರಪಿಸ್ಟ್ ಸೇರಿದಂತೆ ನಾಲ್ಕು ರಾಜ್ಯಗಳ ಕನಿಷ್ಠ 22 ಸಾಕ್ಷಿಗಳ ಹೇಳಿಕೆಗಳನ್ನು ಪೊಲೀಸರು ಉಲ್ಲೇಖಿಸಿದ್ದಾರೆ.
2023ರಲ್ಲಿ ಎರಡು ಬಾರಿ ಪ್ರತಿಭಟನೆ ನಡೆಸಿದ್ದ ಕುಸ್ತಿಪಟುಗಳು ನೀಡಿದ್ದ ದೂರಿನ ಆಧಾರದ ಮೇಲೆ ಡಬ್ಲ್ಯುಎಫ್ಐ ಮಾಜಿ ಅಧ್ಯಕ್ಷರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಅಪ್ರಾಪ್ತ ವಯಸ್ಸಿನ ಮಹಿಳಾ ಕುಸ್ತಿಪಟು ದಾಖಲಿಸಿದ್ದ ಫೋಕ್ಸೋ ಪ್ರಕರಣವನ್ನು ರದ್ದುಪಡಿಸಲು ಕೋರಲಾಗಿದೆ. ಕುಸ್ತಿಪಟುಗಳು ದಾಖಲಿಸಿದ್ದ ಪ್ರಕರಣಗಳಿಗೆ ಸಂಬಂಧಿಸಿ ತನಿಖೆ ಪೂರ್ಣಗೊಂಡಿದೆ. 2ನೇ ಆರೋಪಿಯಾಗಿರುವ ಡಬ್ಲ್ಯುಎಫ್‌ಐನ ಮಾಜಿ ಸಹಾಯಕ ಕಾರ್ಯದರ್ಶಿ ವಿನೋದ್ ತೋಮರ್ ಕುಮ್ಮಕ್ಕು ನೀಡಿದ ಆರೋಪಕ್ಕೆ ಒಳಗಾಗಿದ್ದಾರೆ.
ಭೂಷಣ್ ಮತ್ತು ತೋಮರ್ ವಿರುದ್ಧ ಐಪಿಸಿಯ ಸೆಕ್ಷನ್ 354 (ಆಕ್ರಮಣ ಅಥವಾ ಕ್ರಿಮಿನಲ್ ಬಲ), 354 ಎ (ಲೈಂಗಿಕ ಕಿರುಕುಳ), 354 ಡಿ (ಹಿಂಬಾಲಿಸುವಿಕೆ), 109 (ಪ್ರಚೋದನೆ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದೆ. ಪೊಲೀಸರು ಈ ಹಿಂದೆ ಪಟಿಯಾಲ ಹೌಸ್ ಕೋರ್ಟ್‌ಗೆ 550 ಪುಟಗಳ ವರದಿಯನ್ನು ಸಲ್ಲಿಸಿದ್ದರು. ಘಟನೆಯ ಸಮಯದಲ್ಲಿ ಅಪ್ರಾಪ್ತರಾಗಿದ್ದ ಕುಸ್ತಿಪಟು ಸಿಂಗ್ ವಿರುದ್ಧ ಪೋಕ್ಸೊ ಪ್ರಕರಣ ರದ್ದುಗೊಳಿಸುವಂತೆ ಆಕೆಯ ತಂದೆ ವಿನಂತಿಸಿದ್ದರು. ದೂರುದಾರ, ಮ್ಯಾಜಿಸ್ಟ್ರೇಟ್ ಮುಂದೆ ಸಿಂಗ್ ವಿರುದ್ಧ ಮಾಡಲಾಗಿದ್ದ ತಮ್ಮ ಆರೋಪಗಳನ್ನು ಆಕೆ ತಂದೆ ಹಿಂಪಡೆದಿದ್ದರು.
ಇದನ್ನು ನೋಡಿ : ಮೋದಿ ಅದಾನಿ ದೋಸ್ತಿ ಖತಂ, ಕಾಂಗ್ರೆಸ್ ಹಾಡಿ ಹೊಗಳಿದ ಚಕ್ರವರ್ತಿ ಸೂಲಿಬೆಲೆ Janashakthi Media