ಹೆಚ್.ಆರ್.ನವೀನ್ ಕುಮಾರ್
ಮಲೆನಾಡು ಒಂದು ಕಾಲಕ್ಕೆ ದಟ್ಟ ಕಾಡುಗಳಿಂದ ಆವೃತವಾಗಿದ್ದ ಪ್ರದೇಶ, ಅಡಿಕೆ ಮತ್ತು ಭತ್ತ ಇಲ್ಲಿಯ ಪಾರಂಪರಿಕ ಬೆಳೆಗಳು. ಹೇಳಿಕೊಳ್ಳುವಂತಹ ಯಾವುದೇ ಕೈಗಾರಿಕಾ ಚಟುವಟಿಕೆಗಳು ಮಲೆನಾಡು ಪ್ರದೇಶದಲ್ಲಿ ಇರಲಿಲ್ಲ, ಆದರೆ ಜನಸಂಖ್ಯೆ ಹೆಚ್ಚಿದಂತೆಲ್ಲ ಕಾಡನ್ನು ಸವರಿ ಗುಡ್ಡಗಳಿಗೆ ಬೇಲಿ ಹಾಕುವ ಪ್ರವೃತ್ತಿ ಆರಂಭವಾಯಿತು. ಕಾಡು ನಾಶವಾಯಿತು. ಕೃಷಿಯ ಚಟುವಟಿಕೆ, ನಗರೀಕರಣ, ಕೈಗಾರಿಕೀಕರಣಗಳು ಮಿತಿಮೀರಿ ಬೆಳೆಯುತ್ತಾ ಹೋದವು.
ಈ ಅತಿರೇಕಕ್ಕೆ ಪರ್ಯಾಯವಾದ ಪರಿಸರ ಸ್ನೇಹಿಯಾದ ಉದ್ದಿಮೆಯೊಂದನ್ನು ಮಲೆನಾಡಿನಲ್ಲಿ ಸ್ಥಾಪಿಸಿ, ಬಡ ಗ್ರಾಮಸ್ಥರಿಗೆ ಉದ್ಯೋಗಾವಕಾಶ ಕಲ್ಪಿಸಬೇಕೆಂಬ ಎಂಬ ಕೂಗು ಕೇಳಿ ಬರುತ್ತದೆ. ಈ ಕೂಗಿನ ಕನಸು ಹೊತ್ತು 1994 ರಲ್ಲಿ ಚಳುವಳಿ ಆರಂಭವಾಯಿತು. 1996 ರಲ್ಲಿ ಒಂದು ಸಂಘವನ್ನು ಸ್ಥಾಪಿಸಲಾಗುತ್ತದೆ. ಅದರ ಹೆಸರೆ ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಭೀಮನಕೋಣೆ ಗ್ರಾಮದಲ್ಲಿ ಈ ಸಂಘ ನೋಂದಾವಣಿಯಾಗುತ್ತೆ. ಆರಂಭದಲ್ಲಿ ಕೇವಲ ಎರಡು ಮಗ್ಗ ಹಾಗೂ ಎರಡು ಹೊಲಿಗೆ ಯಂತ್ರಗಳ ಮೂಲಕ ಪ್ರಾರಂಭವಾದ ಚರಕ ಹಾಗೂ ಅದರ ಸೋದರ ಸಂಸ್ಥೆ ದೇಸಿ ಒಟ್ಟಾಗಿ ಇಂದು ಸಾವಿರಕ್ಕೂ ಹೆಚ್ಚು ಬಡವರಿಗೆ (ಮುಖ್ಯವಾಗಿ ಮಹಿಳೆಯರಿಗೆ) ಕೆಲಸ ಕೊಡುತ್ತಿವೆ. ಮಾತ್ರವಲ್ಲ, ತಿಂಗಳಿಗೆ ಸರಾಸರಿ ಮೂವತ್ತು ಸಾವಿರ ಮೀಟರು ನೈಸರ್ಗಿಕ ಬಣ್ಣದ ಬಟ್ಟೆಯ ಉತ್ಪಾದನಾ ಸಾಮರ್ಥ್ಯ ಹೊಂದಿ ರಾಷ್ಟ್ರೀಯ ವಿಕ್ರಮವನ್ನು ಸಾಧಿಸಿದೆ.
ಚರಕ ಸಂಸ್ಥೆಗೆ ಹಲವು ಹೆಗ್ಗಳಿಕೆಗಳಿವೆ. ಇದು ಕೇವಲ ಒಂದು ನೇಯ್ಗೆ ಘಟಕವಾಗಿರದೆ ಸಮಗ್ರ ಉತ್ಪಾದಕ ಘಟಕವಾಗಿದೆ. ನೇಯ್ಗೆ ನೈಸರ್ಗಿಕ ಬಣ್ಣಗಾರಿಕೆ, ಮರದಚ್ಚಿನ ಮುದ್ರಣ, ಸ್ಕ್ರೀನ್ ಪ್ರಿಂಟಿಂಗ್, ಹೊಲಿಗೆ, ಕಸೂತಿ, ಮಗ್ಗ ತಯಾರಿಕೆ, ಕೈಮಗ್ಗ ತರಬೇತಿ, ನಿರ್ವಹಣಾ ತರಬೇತಿ, ಹೀಗೆ, ಕೈಮಗ್ಗಕ್ಕೆ ಸಂಬಂಧಿಸಿದ ಎಲ್ಲ ತಂತ್ರಜ್ಞಾನ ಹಾಗೂ ತರಬೇತಿ ವ್ಯವಸ್ಥೆಗಳು ಚರಕದಲ್ಲಿ ಲಭ್ಯವಿದೆ. ಉತ್ಪನ್ನಗಳ ವೈವಿಧ್ಯತೆ ಸಾಧ್ಯವಾಗಿದೆ. ಗಂಡಸರ ಉಡುಪುಗಳು, ಹೆಂಗಸರ ಉಡುಪುಗಳು, ಕೌದಿ, ಹೊದಿಕೆ, ಪರದೆ, ಹೀಗೆ 159 ಕ್ಕೂ ಹೆಚ್ಚು ಉತ್ಪನ್ನಗಳನ್ನು ಚರಕ ಸಂಸ್ಥೆ ತಯಾರಿಸುತ್ತಿದೆ.
ಗ್ರಾಮೋದ್ಯೋಗ ತರಬೇತಿಯ ಸಲುವಾಗಿ ಹೆಗ್ಗೋಡು ಗ್ರಾಮದಲ್ಲಿ ಶ್ರಮಜೀವಿ ಆಶ್ರಮವೆಂಬ ತರಬೇತಿ ಕೇಂದ್ರವೊಂದನ್ನು ಸ್ಥಾಪಿಸಲಾಗಿದೆ. ಚರಕ ಮಾತ್ರವಲ್ಲದೆ ರಾಜ್ಯದ ಎಲ್ಲ ಗ್ರಾಮೀಣರಿಗೆ ಶ್ರಮಜೀವಿ ಆಶ್ರಮದಲ್ಲಿ ಗ್ರಾಮೀಣಾಭಿವೃದ್ಧಿ ತರಬೇತಿಯ ಅವಕಾಶ ಕಲ್ಪಿಸಲಾಗಿದೆ. ರಾಷ್ಟ್ರದ ವಿವಿಧ ಭಾಗಗಳಿಂದ, ವಿನ್ಯಾಸಕಾರರು, ತಂತ್ರಜ್ಞರು, ಸಾಮಾಜಿಕ ಕಾರ್ಯಕರ್ತರು, ಸಾಂಸ್ಕೃತಿಕ ಕಾರ್ಯಕರ್ತರು ಶ್ರಮಜೀವಿ ಆಶ್ರಮಕ್ಕೆ ಬಂದು, ಕಾರ್ಯಾಗಾರಗಳು, ತಜ್ಞರ ಗೋಷ್ಠಿಗಳು, ತರಬೇತಿ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿರುತ್ತಾರೆ. ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿದ ವಿಶ್ವವಿದ್ಯಾಲಯವೊಂದು ಮಾಡಬಹುದಾದ ಎಲ್ಲ ಕೆಲಸಗಳನ್ನೂ ಶ್ರಮಜೀವಿ ಆಶ್ರಮವು ಇಂದು ನಡೆಸಿಕೊಂಡು ಬರುತ್ತಿದೆ. ಪ್ರಾಥಮಿಕ ಕೌಶಲ್ಯ ತರಬೇತಿಗಿಂತ ಮಿಗಿಲಾಗಿ, ಆಶ್ರಮದಲ್ಲಿ, ಉತ್ಪಾದನಾ ನಿರ್ವಹಣೆ, ಮಾರುಕಟ್ಟೆಯ ನಿರ್ವಹಣೆ, ಗುಣಮಟ್ಟ, ವಿನ್ಯಾಸ, ಹಾಗೂ ತಂತ್ರಜ್ಞಾನ ಅಭಿವೃದ್ಧಿ ಕ್ಷೇತ್ರಗಳಲ್ಲಿ ತರಬೇತಿ ಕಾರ್ಯಕ್ರಮಗಳು ನಡೆಸಲಾಗುತ್ತದೆ.
ಆರ್ಥಿಕ ಅಭಿವೃದ್ಧಿಯ ಜೊತೆಗೆ, ಗ್ರಾಮಗಳ ಸಾಮಾಜಿಕ ಸಾಂಸ್ಕೃತಿಕ ಪುನರುಜ್ಜಿವನದ ತರಬೇತಿ ಹಾಗೂ ನೈತಿಕ ತರಬೇತಿಗಳಿಗೆ ಇಲ್ಲಿ ಆದ್ಯತೆ ನೀಡಲಾಗುತ್ತಿದೆ. ಗ್ರಾಮೀಣ ಬಡವರು ಹಾಗೂ ಪೇಟೆಯ ಪ್ರಜ್ಞಾವಂತರು ಪರಸ್ಪರರೊಂದಿಗೆ ಮುಖಾಮುಖಿಯಾಗಿ ಪರಸ್ಪರರಿಂದ ಕಲಿಯಲು ಸಾಧ್ಯವಾಗುವಂತಹ ವಾತಾವರಣವನ್ನು ಆಶ್ರಮದಲ್ಲಿ ಕಲ್ಪಿಸಲಾಗಿದೆ. ಸರಳ ರೀತಿಯ ವಸತಿಗೃಹ ಹಾಗೂ ಊಟ ಉಪಚಾರ ವ್ಯವಸ್ಥೆಗಳು ಆಶ್ರಮದಲ್ಲಿ ಲಭ್ಯವಿರುತ್ತದೆ.
ನಮಗೆ ನಾವೇ ನಾಯಕರು ಎಂಬುದು ಚರಕದ ಧ್ಯೇಯವಾಗಿದೆ. ಚರಕದ ಮಹಿಳೆಯರಲ್ಲಿ ಯಾರೊಬ್ಬರೂ ನೇಕಾರ ಜನಾಂಗದಿಂದ ಬಂದವರಲ್ಲ. ನೇಯ್ಗೆ, ಬಣ್ಣಗಾರಿಕೆ, ಮುದ್ರಣ, ಹೊಲಿಗೆ, ಕಟಿಂಗ್, ವಿನ್ಯಾಸ, ಆಡಳಿತ, ಹಣಕಾಸು ನಿರ್ವಹಣೆ, ಹೀಗೆ ಎಲ್ಲ ಕೆಲಸಗಳನ್ನೂ ಗ್ರಾಮೀಣ ಮಹಿಳೆಯರು ಹೊಸದಾಗಿ ಕಲಿತು, ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ತಮ್ಮ ಉತ್ಪಾದಕತೆಗೆ ತಕ್ಕಂತೆ ಸಂಭಾವನೆ ಪಡೆಯುತ್ತಾರೆ, ಬೋನಸ್, ಪಿ.ಎಫ್, ಸೌಲಭ್ಯಗಳನ್ನು ಪಡೆಯುತ್ತಾರೆ. ಊಟ ಉಪಚಾರದ ಸೌಲಭ್ಯ, ಮಕ್ಕಳಿಗೆ ಕ್ರೆಷ್ ವ್ಯವಸ್ಥೆ ಚರಕದಲ್ಲಿ ಲಭ್ಯವಿರುತ್ತದೆ. ಚರಕದಲ್ಲಿರುವ ಏಕೈಕ ಸ್ವಯಂಚಾಲಿತ ಯಂತ್ರವೆಂದರೆ ಕಂಪ್ಯೂಟರುಗಳು. ಇವುಗಳನ್ನೂ ಸಹ ಗ್ರಾಮೀಣ ಮಹಿಳೆಯರೇ ನಿರ್ವಹಿಸುತ್ತಾರೆ. ಕಟ್ಟುನಿಟ್ಟಾದ ಗುಣಮಟ್ಟ ಪಾಲನೆಯಿಂದಾಗಿ ಚರಕದ ಸಿದ್ದ ಉಡುಪುಗಳು ಇಂದು ರಾಷ್ಟ್ರಮಟ್ಟದಲ್ಲಿ ಹೆಸರುವಾಸಿಯಾಗಿವೆ.
ಸಾಮಾನ್ಯವಾಗಿ ಬಟ್ಟೆಗಳ ಬಣ್ಣವು ರಾಸಾಯನಿಕ ಮೂಲದ್ದಾಗಿರುತ್ತದೆ. ಧರಿಸುವವರ ಚರ್ಮಕ್ಕೆ ಹಾಗೂ ಪರಿಸರಕ್ಕೆ ಅವು ಹಾನಿಕಾರಕವಾಗಿರುತ್ತದೆ. ಅನೇಕ ರಾಸಾಯನಿಕ ಬಣ್ಣ, ಪದಾರ್ಥಗಳು ಕ್ಯಾನ್ಸರ್ ಕಾರಕವಾಗಿದೆ. ನೈಸರ್ಗಿಕ ಬಣ್ಣಗಾರಿಕೆಯ ಪಾರಂಪರಿಕ ತಂತ್ರಜ್ಞಾನವನ್ನು ಪುನರುಜೀವನಗೊಳಿಸುವಲ್ಲಿ ಚರಕ ಸಂಸ್ಥೆಯು ಯಶಸ್ವಿಯಾಗಿದೆ ಎಂದು ಹೇಳುತ್ತಾರೆ ಬಣ್ಣ ತಂತ್ರಜ್ಞರಾದ ರುದ್ರಪ್ಪಮವರು.
ಪರಿಸರ ಸ್ನೇಹಿಯೂ ಸಂಪೂರ್ಣ ಆರೋಗ್ಯಕರವೂ ಆದ ನೈಸರ್ಗಿಕ ಬಣ್ಣಗಳ ಅಭಿವೃದ್ಧಿಯ ಸಲುವಾಗಿ ಚರಕವು ತನ್ನದೇ ಆದ ಅಭಿವೃದ್ಧಿ ಹಾಗೂ ಸಂಶೋಧನಾ ಸಂಸ್ಥೆಯೊಂದನ್ನು ಸ್ಥಾಪಿಸಿ ನಡೆಸಿಕೊಂಡು ಬರುತ್ತಿದೆ. ನೈಸರ್ಗಿಕ ಬಣ್ಣಗಾರಿಕೆ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆಯು ಶ್ರಮಜೀವಿ ಆಶ್ರಮದ ಆವರಣದಲ್ಲಿದೆ. ಅಂತರಾಷ್ಟ್ರೀಯ ಖ್ಯಾತಿಯ ತಜ್ಞೆ ಶ್ರೀಮತಿ ಜಗದಾ ರಾಜಪ್ಪ ಅವರ ನಿರ್ದೇಶನದಲ್ಲಿ ಕಾರ್ಯನಿರ್ವಹಿಸುತ್ತಿದೆ. ನೈಸರ್ಗಿಕ ಬಣ್ಣಗಾರಿಕೆಯ ಕ್ಷೇತ್ರದಲ್ಲಿ ವೈಜ್ಞಾನಿಕವಾಗಿ ಕೆಲಸ ಮಾಡುತ್ತಿರುವ ದೇಶದ ಕೆಲವೇ ಸಂಸ್ಥೆಗಳಲ್ಲಿ ಚರಕವೂ ಒಂದು. ‘ದೇಸಿ ನ್ಯಾಚುರಲ್’ ಎಂಬ ಹೆಸರಿನಲ್ಲಿ ಈ ಸಿದ್ಧ ಉಡುಪುಗಳು ಮಾರಾಟವಾಗುತ್ತಿವೆ.
ಚರಕ ಸಂಸ್ಥೆಯ ಇನ್ನೋಂದು ಆಕರ್ಷಣೆ ಹಸೆಕಲೆ, ಹಸೆಕಲೆ ಕರ್ನಾಟಕದ ಪ್ರಮುಖ ಜಾನಪದ ದೃಶ್ಯಕಲಾ ಪ್ರಕಾರವಾಗಿದೆ. ಹಸೆಕಲೆಯ ಅಭಿವೃದ್ಧಿಗಾಗಿ ಚರಕ ಸಂಸ್ಥೆ ಬಹಳಷ್ಟು ಕೆಲಸಮಾಡಿದೆ. ಮಾತ್ರವಲ್ಲ ಚಿತ್ತಾರಗಳನ್ನು ಉಡುಪುಗಳ ಮೇಲೆ ವಿನ್ಯಾಸದ ರೂಪದಲ್ಲಿ ಯಶಸ್ವಿಯಾಗಿ ಅಳವಡಿಸಿಕೊಂಡಿದ್ದೇವೆ ಎಂದು ಹಸಿಕಲೆಯ ನಿಪುಣೆ ಗೌರಮ್ಮ ವಿವರಿಸುತ್ತಾರೆ.
ನಶಿಸಿ ಹೋಗುತ್ತಿರುವ ಮರದಚ್ಚಿನ ಬಟ್ಟೆಮುದ್ರಣ ತಂತ್ರಜ್ಞಾನವು ಚರಕದ ಪ್ರಯತ್ನದಿಂದಾಗಿ ಮೊದಲ ಬಾರಿಗೆ ಮಲೆನಾಡನ್ನು ಪ್ರವೇಶಿಸಿದೆ. ವಿಶೇಷವಾಗಿ ಮಹಿಳೆಯರ ಸಿದ್ಧ ಉಡುಪುಗಳ ಆಕರ್ಷಣೆಯನ್ನು ಹೆಚ್ಚಿಸುವಲ್ಲಿ ಮರದಚ್ಚಿನ ಮುದ್ರಣದ ಪಾತ್ರ ಮಹತ್ವದ್ದಾಗಿದೆ. ನೈಸರ್ಗಿಕ ಬಣ್ಣದಿಂದ ಮುದ್ರಣ ಮಾಡುವ ತಂತ್ರಜ್ಞಾನವೂ ಸಹ ಚರಕದಲ್ಲಿ ಲಭ್ಯವಿದೆ.
ಚರಕದಲ್ಲಿ ವಿದ್ಯುತ್ ಚಾಲಿತ ಯಂತ್ರಗಳ ಬಳಕೆಯಿಲ್ಲ. ಕಟ್ಟಡಗಳ ಮಣ್ಣಿನ ಗೋಡೆ ಹಂಚಿನ ಮಾಡು ಎಲ್ಲವೂ ಪರಿಸರ ಸ್ನೇಹಿಯಾಗಿವೆ. ಮಳೆ ನೀರನ್ನು ಸಂಗ್ರಹಿಸುವ ಮೂಲಕ ನೀರಿನ ಮಿತವ್ಯಯವನ್ನು ಸಾಧಿಸಲಾಗಿದೆ. ಕೊಳವೆ ಬಾವಿಗಳ ಬದಲು ತೆರೆದ ಬಾವಿಗಳಿಗೆ ಆದ್ಯತೆ ನೀಡಲಾಗಿದೆ. ಅಂತರ್ಜಲ ಕಾಯ್ದುಕೊಳ್ಳಲು ಇಂಗು ಗುಂಡಿಗಳನ್ನು ತೋಡಿಸಲಾಗಿದೆ. ಬಣ್ಣದ ಮನೆಯ ತ್ಯಾಜ್ಯವನ್ನು ಶುದ್ದೀಕರಿಸಿ ಗಿಡಗಳಿಗೆ ಬಳಸುವ ಮರುಬಳಕೆ ವ್ಯವಸ್ಥೆ ಮಾಡಲಾಗಿದೆ. ‘ಅಸ್ತ್ರ ಒಲೆಗಳನ್ನು ಬಳಸುವ ಮೂಲಕ ಇಂಧನ ಉಳಿತಾಯ ಮಾಡಲಾಗುತ್ತಿದೆ. ಕಟ್ಟಡಗಳಿಗೆ ಬಳಸಲೆಂದು ಸುಡದೆ ಇರುವ ಒತ್ತಿಟ್ಟಿಗೆಗಳನ್ನು ಅಭಿವೃದ್ಧಿಪಡಿಸಲಾಗಿದೆ.
ಗ್ರಾಮೀಣ ಬಡಜನರ ಸಾಮಾಜಿಕ ಹಾಗೂ ಸಾಂಸ್ಕೃತಿಕ ಪುನರುಜ್ಜಿವನದ ಕೆಲಸ ಚರಕದ ಮೂಲಕ ನಡೆದಿದೆ. ಪ್ರತಿ ವರ್ಷ ಜನವರಿ ತಿಂಗಳಿನಲ್ಲಿ ಚರಕ ಸಾಂಸ್ಕೃತಿಕ ಉತ್ಸವ ನಡೆಯುತ್ತದೆ. ಉತ್ಸವದ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆ ಜೊತೆಗೆ ಗ್ರಾಮೀಣಾಭಿವೃದ್ಧಿಯ ವಿವಿಧ ಆಯಾಮಗಳ ಬಗ್ಗೆ ವಿಚಾರಗೋಷ್ಠಿಗಳನ್ನು ನಡೆಸಲಾಗುತ್ತದೆ. ಯಕ್ಷಗಾನ, ತಾಳಮದ್ದಲೆ, ಕೋಲಾಟ, ಸಂಪ್ರದಾಯದ ಹಾಡುಗಳು, ಬೀದಿನಾಟಕ ಮೊದಲಾದ ಕಾರ್ಯಕ್ರಮಗಳನ್ನು ವರ್ಷದುದ್ದಕ್ಕೂ ನಡೆಸುವ ಮೂಲಕ ಚರಕ ಸಂಸ್ಥೆಯು ಗ್ರಾಮೀಣ ಪ್ರತಿಭೆಗಳ ವಿಕಾಸಕ್ಕೆ ನೆರವಾಗುತ್ತಿದೆ.
ಚರಕದ ಉತ್ಪನ್ನಗಳಿಗೆ ನಗರ ಪ್ರದೇಶದ ಮಾರುಕಟ್ಟೆ ಒದಗಿಸುವುದು ಹಾಗೂ ನಗರದ ಪ್ರಜ್ಞಾವಂತರೊಟ್ಟಿಗೆ ಸಂಬಂಧ ಸಾಧಿಸುವುದು ದೇಸಿಯ ಉದ್ದೇಶ. ಈ ಉದ್ದೇಶವನ್ನು ಈಡೇರಿಸಲೆಂದು ೧೯೯೭ ರಲ್ಲಿ ದೇಸಿ ಧರ್ಮದರ್ಶಿ ಸಂಸ್ಥೆಯನ್ನು ಆರಂಭಿಸಲಾಯಿತು. ಈ ಸಂಸ್ಥೆಯು ಕ್ರಮೇಣವಾಗಿ ರಾಜ್ಯಾದ್ಯಂತ ದೇಸಿ ಎಂಬ ಹೆಸರಿನ ವ್ಯಾಪಾರ ಮಳಿಗೆಗಳನ್ನು ತೆರೆಯಿತು. ಚರಕವೂ ಸೇರಿದಂತೆ ಕರ್ನಾಟಕದ ಅನೇಕ ಗ್ರಾಮೀಣ ಕೈಗಾರಿಕೆಗಳ ಉತ್ಪನ್ನಗಳಿಗೆ ಇಂದು ದೇಸಿ ಅಂಗಡಿಗಳು ಮಾರಾಟದ ಮಾಧ್ಯಮವಾಯಿತು ಗ್ರಾಮೀಣ ಕೈಗಾರಿಕೆಗಳಿಗೆ ವಿನ್ಯಾಸಕಾರರು ಹಾಗೂ ತಂತ್ರಜ್ಞರನ್ನು ಒದಗಿಸುವುದು, ಗ್ರಾಮೀಣ ಉತ್ಪನ್ನಗಳ ಗುಣಮಟ್ಟ ಹೆಚ್ಚಿಸುವಲ್ಲಿ ತಾಂತ್ರಿಕ ನೆರವು ನೀಡುವುದು, ಪ್ರದರ್ಶನ ಮಾರಾಟಗಳನ್ನು ಏರ್ಪಡಿಸುವುದು, ತರಬೇತಿ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ನೆರವು ನೀಡುವುದು ನಮ್ಮ ಮುಖ್ಯ ಕೆಲಸ ಎಂದು ಹೇಳುತ್ತಾರೆ ಚರಕ ಸಂಸ್ಥೆಯ ಸಂಸ್ಥಾಪಕರಾದ ಹೆಗ್ಗೋಡು ಪ್ರಸನ್ನ ರವರು.
ಕೈಮಗ್ಗ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಭಾರತದ ಇತರ ಸ್ವಯಂಸೇವಾ ಸಂಸ್ಥೆಗಳ ಜೊತೆ ಸಂಪರ್ಕ ಸಾಧಿಸಿ, ನೇಕಾರರ ಕಲ್ಯಾಣಕ್ಕಾಗಿ ಪೂರಕ ವಾತಾವರಣವನ್ನು ನಿರ್ಮಿಸುವ ಮಹತ್ವದ ಕೆಲಸದಲ್ಲಿ ದೇಸಿ ನಿರತವಾಗಿದೆ. ಹೀಗೆ ಕೈಮಗ್ಗ ಕ್ಷೇತ್ರದ ಬಗ್ಗೆ ಅರಿವು ಮೂಡಿಸುವ ಹಾಗೂ ಕ್ಷೇತ್ರದ ಪರವಾಗಿ ವಕೀಲಿ ನಡೆಸುವ ಕೆಲಸವನ್ನು ದೇಸಿ ನಿರ್ವಹಿಸುತ್ತಿದೆ.
ದೇಸಿ ಸಂಸ್ಥೆಯು ಕೈಮಗ್ಗ ಕ್ಷೇತ್ರದಲ್ಲಿ ಮಹತ್ವದ ಕೆಲಸ ಮಾಡುತ್ತಿರುವ ಸ್ವಯಂಸೇವಾ ಸಂಸ್ಥೆಗಳು, ಸೊಸೈಟಿಗಳು ಹಾಗೂ ವ್ಯಕ್ತಿಗಳಿಗೆ ಉತ್ತೇಜನ ನೀಡುವ ಸಲುವಾಗಿ, ಪ್ರತಿಷ್ಠಿತ ದಾಸೀಮಯ್ಯ ರಾಷ್ಟ್ರೀಯ ಪ್ರಶಸ್ತಿಯನ್ನು ಸ್ಥಾಪಿಸಿ ಹಲವಾರು ವರ್ಷಗಳಿಂದ ನೀಡುತ್ತಾ ಬಂದಿದೆ. ದೇಸಿ ಸಂಸ್ಥೆ ನೀಡುತ್ತಿರುವ ಈ ಪ್ರಶಸ್ತಿಯು ಕೈಮಗ್ಗ ಕ್ಷೇತ್ರದಲ್ಲಿ ಮಹತ್ವದ ರಾಷ್ಟ್ರೀಯ ಪ್ರಶಸ್ತಿಯೆಂದು ಮಾನ್ಯತೆ ಪಡೆದಿದೆ.
ಅಭಿವೃದ್ಧಿ ಕಾರ್ಯಕ್ರಮಗಳು ತನ್ನ ಲಾಭಾಂಶವನ್ನು ನೇಕಾರರಿಗೆ ಹಾಗೂ ನೇಕಾರಿಕೆ ಸಂಸ್ಥೆಗಳಿಗೆ ತಲುಪಿಸುವ ಹಲವು ಯೋಜನೆಗಳನ್ನು ದೇಸಿ ಸಂಸ್ಥೆಯು ಹಮ್ಮಿಕೊಂಡಿದೆ.