ವಿಜಯ್ ಕುಮಾರ್ ಟಿ ಎಸ್
(ಚನ್ನಪಟ್ಟಣ ಮತದಾರ)
ಚುನಾವಣೆಯನ್ನು ಪ್ರಜಾಪ್ರಭುತ್ವವ ಹಬ್ಬ ಎಂದು ಹೇಳುತ್ತೇವೆ. ಆದರೆ 13-11-2024 ರಂದು ನಡೆದ ಚನ್ನಪಟ್ಟಣ ಉಪಚುನಾವಣೆ ಪ್ರಜಾಪ್ರಭುತ್ವ ಹಬ್ಬದ ಬದಲು ಪ್ರಜಾಪ್ರಭುತ್ವದ ಕಗ್ಗೊಲೆ ಆಗಿದೆ. ಕರ್ನಾಟಕದಲ್ಲಿ ನಡೆದ ಚುನಾವಣೆಗಳಲ್ಲಿ ಅತಿ ಭ್ರಷ್ಟ ಚುನಾವಣೆ, ಅತ್ಯಂತ ದುಬಾರಿ ಚುನಾವಣೆ ಆಗಿದೆ. ಚನ್ನಪಟ್ಟಣ ಉಪ ಚುನಾವಣೆ ಹಣ ಕಣವಾಗಿ ಮಾರ್ಪಟ್ಟಿತ್ತು.
ಚುನಾವಣಾ ದಿನಾಂಕ ಘೋಷಣೆಯಾದ ತಕ್ಷಣದಿಂದ ಚುನಾವಣಾ ನೀತಿ ಸಂಹಿತೆ ಜಾರಿಯಾಗಿತ್ತು. ಚುನಾವಣೆ ಘೋಷಣೆಯಾದ ಮರು ದಿನವೇ ಕಾಂಗ್ರೆಸ್ ಅಭ್ಯರ್ಥಿ ಸಭೆ ನಡೆಸಿದರು. ಆ ಸಭೆಯಲ್ಲಿ ಸಾವಿರಾರು ಕೆಜಿಯ ಮಾಂಸ ಆಹಾರವನ್ನು ತಯಾರು ಮಾಡಲಾಗಿತ್ತು. ಚುನಾವಣಾ ಆಯೋಗ ಆ ಸ್ಥಳಕ್ಕೆ ತೆರಳಿ ಗುಂಡಿ ಮಾಡಿಸಿ ತಯಾರಾಗಿದ್ದ ಮಾಂಸ ಆಹಾರವನ್ನು ಗುಂಡಿಯಲ್ಲಿ ಮುಚ್ಚಲಾಗಿತ್ತು. ಚುನಾವಣೆ ಆಯೋಗದ ಈ ನಡೆ ಶ್ಲಾಘನೀಯವಾಗಿತ್ತು. ಹಾಗೆ ಹಲವು ಕಡೆ ಹಣವನ್ನು ಜಪ್ತಿಯನ್ನು ಮಾಡಿತ್ತು. ಆದರೆ ಕ್ರಮೇಣ ಚನ್ನಪಟ್ಟಣದಲ್ಲಿ ನಡೆಯುತ್ತಿದ ಉಪ ಚುನಾವಣೆಗೂ ಚುನಾವಣಾ ಆಯೋಗಕ್ಕೂ ಯಾವುದೇ ಸಂಬಂಧ ಇಲ್ಲದಂತೆ ಕಣ್ಣು ಮುಚ್ಚಿಕೊಂಡಿದ್ದು ವಿಪರ್ಯಾಸ. ಒಟ್ಟಾರೆಯಾಗಿ ಚುನಾವಣಾ ಆಯೋಗ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಲೆಕ್ಕಕ್ಕೆ ಉಂಟು ಆಟಕ್ಕೆ ಇಲ್ಲದಂತೆ ಇದಿದ್ದನ್ನು ನಾವು ಕಾಣಬಹುದು. ಉಪ ಚುನಾವಣೆಯಲ್ಲಿ ಅಕ್ರಮವನ್ನು ತಡೆಯಲು ಚುನಾವಣಾ ಆಯೋಗ ವಿಫಲವಾಗಿದೆ. ಚುನಾವಣಾ ಅಧಿಕಾರಿಗಳ ನಿರ್ಲಕ್ಷ ಎದ್ದು ಕಾಣಿತ್ತಿದೆ.
ಉಪ ಚುನಾವಣೆಯ ಕೊನೆಯ ದಿನ ಚನ್ನಪಟ್ಟಣದ ಚಿತ್ರಣವೇ ಬದಲಾಗಿ ಹೋಗಿತ್ತು. ಅತಿ ದುಬಾರಿ ವಿಧಾನಸಭಾ ಚುನಾವಣೆ ಎಂಬಂತೆ ಬಿಂಬಿತವಾಗಿತ್ತು. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಭ್ರಷ್ಟ ಚುನಾವಣೆ ಎಂದು ತಿಳಿಯುವ ಮೊದಲೇ ಚುನಾವಣೆಯಲ್ಲಿ ಅಕ್ರಮ ನಡೆದು ಚುನಾವಣೆ ಮುಗಿದು ಹೋಗಿತ್ತು.
ಉಪ ಚುನಾವಣೆಯ ಹಿಂದಿನ ದಿನ ಅಕ್ರಮ ನಡೆದಿದ್ದು ಹೇಗೆ, ಅಕ್ರಮದ ಪಾಲೇಷ್ಟು? ಕಾಂಗ್ರೆಸ್ ಅಭ್ಯರ್ಥಿಯ ಪಾಲೇಷ್ಟು?
ಚುನಾವಣೆಗೆ ಕಾಂಗ್ರೆಸ್ ಸರ್ಕಾರ ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿರುವುದು ಸ್ಪಷ್ಟವಾಗಿ ಕಾಣುತ್ತದೆ. ಗೃಹ ಲಕ್ಷ್ಮಿ ಯೋಜನೆಯಲ್ಲಿ ಮಹಿಳೆಯರಿಗೆ ನೀಡುವ 2000 ಹಣವನ್ನು ಚುನಾವಣೆಯ ಒಂದು ವಾರದ ಹಿಂದೆಯೇ ಪಲಾನುಭವಿಗಳ ಖಾತೆಗೆ ಹಾಕಲಾಗಿತ್ತು. ಆದರೆ ಚನ್ನಪಟ್ಟಣದ ಪಲಾನುಭವಿಗಳ ಖಾತೆಗೆ ಚುನಾವಣಾ ಹಿಂದಿನ ದಿನ ಮತ್ತೆ 2000 ಸಾವಿರ ಹಾಕಲಾಗಿದೆ. ಇದರಿಂದ ಸ್ಪಷ್ಟವಾಗಿ ತಿಳಿಯುತ್ತಿದೆ ಗೃಹ ಲಕ್ಷ್ಮಿ ಯೋಜನೆಯ ಹೆಸರಿನಲ್ಲಿ ಮಹಿಳೆಯರಿಗೆ ಹಣ ಹಂಚಲಾಗಿದೆ. ಮತ್ತು ಚುನಾವಣೆ ದಿನದ ಒಂದು ವಾರದ ಹಿಂದೆ ಒಂದು ಮನೆಗೆ 1000ರೂ ಮನೆಯ ಖರ್ಚಿಗೆ ಎಂದು ಹಂಚಿದ್ದಾರೆ. ಚುನಾವಣಾ ಹಿಂದಿನ ದಿನ ಒಂದು ಮತಕ್ಕೆ ಕಾಂಗ್ರೆಸ್ ಅಭ್ಯರ್ಥಿ ಹಂಚಿದ ಹಣ 3500 ದಿಂದ 5000 ತನಕ ಹಂಚಿದ್ದಾರೆ.
ಚುನಾವಣಾ ಅಕ್ರಮದಲ್ಲಿ NDA ಮೈತ್ರಿ ಅಭ್ಯರ್ಥಿಯ ಪಾಲೆಷ್ಟು?
ಈ ಚುನಾವಣೆಯಲ್ಲಿ NDA ಮೈತ್ರಿ ಅಭ್ಯರ್ಥಿ ಕಾಂಗ್ರೆಸ್ ಗಿಂತ ಒಂದು ಕೈ ಮೇಲು ಎಂದು ಹೇಳಬಹುದು. ಯಾಕೆಂದರೆ ಕಾಂಗ್ರೆಸ್ ಅಭ್ಯರ್ಥಿ ಹಂಚಿದ ಹಣಕ್ಕಿಂತ 500 ರೂ ಸೇರಿಸಿ ಹೆಚ್ಚಿಗೆ ಹಂಚಿದ್ದಾರೆ. ಅಂದರೆ 4000 ರೂ ಇಂದ 6000 ರೂ ತನಕ NDA ಮೈತ್ರಿ ಅಭ್ಯರ್ಥಿ ಹಣ ಹಂಚಿದ್ದಾರೆ. ಜೊತೆಗೆ ಇವರು ಸಹ ಒಂದು ವಾರದ ಹಿಂದೆ ಒಂದು ಮನೆಗೆ 1000ರೂ ಮನೆಯ ಖರ್ಚಿಗೆ ಎಂದು ಹಂಚಿದ್ದಾರೆ. ಜೊತೆಗೆ ಬೆಳ್ಳಿಯ ನಾಣ್ಯ, ಬೆಳ್ಳಿಯ ಬಟ್ಟಲು, ಬೆಳ್ಳಿಯ ಲೋಟ ಮತ್ತು ಬೆಳ್ಳಿಯ ದೀಪವನ್ನು ಸಹ ಹಂಚಿದ್ದಾರೆ.
ಎಷ್ಟು ಕೋಟಿ ಖರ್ಚು ಮಾಡಿರಬಹುದು?
ಚನ್ನಪಟ್ಟಣ ವಿಧಾನಸಭಾ ಕೇತ್ರದಲ್ಲಿ ಸುಮಾರು 2,32,000 ಸಾವಿರ ಮತದಾರರು ಇದ್ದಾರೆ. ಸಾಮಾನ್ಯವಾಗಿ ಚುನಾವಣೆಗಳಲ್ಲಿ ಶೇ 80 ರಿಂದ 85 ಶೇಕಡಾ ಮತಗಳಿಗೆ ಹಣ ಹಂಚಿಕೆ ಮಾಡುತ್ತಾರೆ. ಅಂದರೆ ಸುಮಾರು 2 ಲಕ್ಷ ಮತಗಳಿಗೆ 4000 ಸಾವಿರ ಎಂದರೆ ಒಬ್ಬ ಅಭ್ಯರ್ಥಿ 80 ಕೋಟಿ ಹಣವನ್ನು ಹಂಚಿದ್ದಾರೆ ಒಟ್ಟು ಎರಡು ಅಭ್ಯರ್ಥಿಯಿಂದ 160 ಕೋಟಿ ಹಣ ಹಂಚಿದ್ದಾರೆ. ಚನ್ನಪಟ್ಟಣದಲ್ಲಿ 46 ಸಾವಿರ ಕುಟುಂಬಗಳಿವೆ ಒಟ್ಟು ಎರಡು ಪಕ್ಷಗಳಿಂದ 10 ಕೋಟಿ ಹಂಚಿದ್ದಾರೆ. ಹಣವೇ ಸುಮಾರು 170 ಕೋಟಿ ಇಂದ 200 ಕೋಟಿ ತನಕ ಹಂಚಿದ್ದಾರೆ. ಇನ್ನು ಬೆಳ್ಳಿ ನಾಣ್ಯ ಇತರೆ ಎಂದು ಎಷ್ಟು ಖರ್ಚು ಮಾಡಿರಬಹುದು. ಸಭೆಗಳು / ಬಹಿರಂಗ ಸಭೆಯ ಹೆಸರಿನಲ್ಲಿ ಎಷ್ಟು ಖರ್ಚು ಮಾಡಿರಬಹುದು ನೀವೇ ಲೆಕ್ಕ ಹಾಕಿ. ಒಟ್ಟಾರೆಯಾಗಿ 250 ಕೋಟಿಯಿಂದ 300 ಕೋಟಿಯಷ್ಟು ಹಣವನ್ನು ಉಪ ಚುನಾವಣೆಗೆ ಖರ್ಚು ಮಾಡಿದ್ದಾರೆ.
ಇವರು ಖರ್ಚು ಮಾಡಿದ ಹಣ ಯಾರದ್ದು ?
ಈ ಅಭ್ಯರ್ಥಿಗಳು ಚುನಾವಣೆಗೆ ಸುಮಾರು 250 ರಿಂದ 300 ಖರ್ಚು ಮಾಡಿದ್ದಾರೆ. ಇವರು ಚುನಾವಣಾ ಆಯೋಗಕ್ಕೆ ಚುನಾವಣೆಗೆ ಖರ್ಚು ಮಾಡಿರುವ ಹಣದ ಮಾಹಿತಿಯನ್ನು ನೀಡುವಾಗ ಇವರು ಖರ್ಚು ಮಾಡಿರುವ ಹಣದ ಮಾಹಿತಿ ನೀಡುವ ತಾಕತ್ತು, ಧೈರ್ಯ ಇದೆಯೇ,
ಇಷ್ಟು ಕೋಟಿ ಹಣ ಎಲ್ಲಿಂದ ಬಂತು ಇದು ಬಡವರ, ದುಡಿಯುವ ರೈತ, ಕಾರ್ಮಿಕರ ಬೆವರಿನ ಹನಿಯ ಪಾಲನ್ನು ಕೊಳ್ಳೆ ಹೊಡೆದು / ಭ್ರಷ್ಟಾಚಾರ ಮಾಡಿರುವ ಹಣವಲ್ಲವೇ? ಎಂಬ ಪ್ರಶ್ನೆಗಳು ಮತದಾರರನ್ನು ಕಾಡಬೇಕಿತ್ತು.
ಈ ಚುನಾವಣೆಯಲ್ಲಿ ಯಾವುದೇ ಪಕ್ಷದ ಅಭ್ಯರ್ಥಿ ಗೆದ್ದರು ಸೋಲುವುದು ಪ್ರಜಾಪ್ರಭುತ್ವ.
ಅಕ್ರಮ ಚುನಾವಣೆ ನಡೆದಿರುವುದು ಸ್ಪಷ್ಟವಾಗಿದೆ. ಈ ಚುನಾವಣೆಯ ಬಗ್ಗೆ ಸೂಕ್ತ ತನಿಖೆಯಾಗಬೇಕು. ಫಲಿತಾಂಶ ತಡೆಹಿಡಿಯಬೇಕು ಮತ್ತು ಚುನಾವಣಾ ಆಯೋಗದ ಅಧಿಕಾರಿಗಳ ನಿರ್ಲಕ್ಷದಿಂದ ಅಕ್ರಮ ನಡೆದಿದೆ ಅವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು.