ಚಂದ್ರಯಾನ-3 ( CHANDRAYAAN-3 ) ಯಶಸ್ವಿಯಾದರೆ ಚಂದ್ರನ ಮೇಲೆ ಇಳಿದ ನಾಲ್ಕನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಲಿದೆ
ಹೊಸದಿಲ್ಲಿ: ಇಡೀ ರಾಷ್ಟ್ರದ ನಿರೀಕ್ಷೆಯಂತೆ ಭಾರತದ ಚಂದ್ರಯಾನ-3 ( CHANDRAYAAN-3 ) ಇಂದು ಮಧ್ಯಾಹ್ನ 2.35ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಯಶಸ್ವಿಯಾಗಿ ಉಡಾವಣೆಗೊಂಡಿತು. ಮಿಷನ್ ಯಶಸ್ವಿಯಾದರೆ ಚಂದ್ರನ ಮೇಲೆ ಇಳಿದ ನಾಲ್ಕನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಲಿದೆ.
ಬಾಹುಬಲಿ ರಾಕೆಟ್ ಎಂದು ಕರೆಯಲ್ಪಡುವ ”GSLV ಮಾರ್ಕ್-3″ ಹೆವಿ ಲಿಫ್ಟ್ ಉಡಾವಣಾ ವಾಹನದ ಮೇಲೆ ಚಂದ್ರನ ಮೇಲೆ ಇಳಿಯುವ ಲ್ಯಾಂಡರ್ ”ವಿಕ್ರಮ್” ಇದೆ. 43.5 ಮೀಟರ್ ಎತ್ತರದ ದೆಹಲಿಯ ಕುತುಬ್ ಮಿನಾರ್‌ನ ಅರ್ಧದಷ್ಟು ಇರುವ ಈ ಉಡಾವಣಾ ವಾಹನ GSLV ರಾಕೆಟ್ ಅನ್ನು ಮಾರ್ಕ್-3 (LM-3) ಎಂದು ಮರುನಾಮಕರಣ ಮಾಡಲಾಗಿತ್ತು.
ಚಂದ್ರಯಾನ-3 ಪ್ರಯಾಣವು 40 ದಿನಗಳ ಕಾಲ ನಡೆಯಲಿದ್ದು, ಆಗಸ್ಟ್‌ನಲ್ಲಿ ಈ ಬಾಹ್ಯಾಕಾಶ ನೌಕೆಯು ಚಂದ್ರನ ಮೇಲೆ ಸ್ಪರ್ಶಿಸುವ ನಿರೀಕ್ಷೆಯಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) 2019ರ ಜುಲೈನಲ್ಲಿ ತನ್ನ ಕೊನೆಯ ಚಂದ್ರಯಾನ ಕಾರ್ಯಾಚರಣೆಯನ್ನು ಕೈಗೊಂಡಿತ್ತು.
ಇದನ್ನೂ ಓದಿ:ವಿಜ್ಞಾನ ಸಾಹಿತಿ, ಹೋರಾಟಗಾರ ಮತ್ತು ಪ್ರಖರ ವಿಜ್ಞಾನ ಸಂವಹನಕಾರ- ನಾಗೇಶ ಹೆಗಡೆ
ಚಂದ್ರಯಾನ-3 ಮೊದಲಿ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲಿದೆ. ಚಂದ್ರನ ಈ ಭಾಗದಲ್ಲಿ ನೀರಿನ ಅಣುಗಳು ಕಂಡುಬಂದಿತ್ತು. 2008ರ ಎಪ್ರಿಲ್‌ನಲ್ಲಿ ಭಾರತದ ಮೊದಲ ಚಂದ್ರಯಾನದ ಸಮಯದಲ್ಲಿ ಕಂಡುಬಂದ ಈ ಸಂಶೋಧನೆಯು ಜಗತ್ತನ್ನು ಬೆಚ್ಚಿ ಬೀಳಿಸಿತ್ತು.
ಈ ಬಾರಿ ಲ್ಯಾಂಡರ್ ‘ವಿಕ್ರಮ್’ ಸುರಕ್ಷಿತವಾಗಿ ಇಳಿಯಲಿದೆ ಎಂದು ನಿರೀಕ್ಷಿಸಲಾಗಿದೆ. ಲ್ಯಾಂಡರ್ ಇಳಿದ ನಂತರ ರೋವರ್ ‘ಪ್ರಗ್ಯಾನ್’ ಅನ್ನು ಬಿಡುಗಡೆ ಮಾಡುತ್ತದೆ. ಇದು ಚಂದ್ರನ ಮೇಲ್ಮೈಯಲ್ಲಿ 14 ದಿನಗಳ ಕಾಲ ಸಂಚರಿಸಲಿದ್ದು, ಅಲ್ಲಿ ವೈಜ್ಞಾನಿಕ ಪ್ರಯೋಗಗಳನ್ನು ನಡೆಸಲಿದೆ. ‘ಪ್ರಗ್ಯಾನ್’ ರೋವರ್ ಮೂಲಕ ವಿಜ್ಞಾನಿಗಳು ಚಂದ್ರನ ಮಣ್ಣನ್ನು ವಿಶ್ಲೇಷಿಸಲು, ಚಂದ್ರನ ಮೇಲ್ಮೈಯ ಸುತ್ತಲೂ ತಿರುಗಲು ಮತ್ತು ಚಂದ್ರನ ಭೂಕಂಪಗಳನ್ನು ದಾಖಲಿಸಲು ಬಯಸಿದ್ದಾರೆ.
”ಕಳೆದ ಬಾರಿಯ ಚಂದ್ರಯಾನ ಮಿಷನ್ ವಿಜ್ಞಾನಿಗಳಿಗೆ ಪಾಠವಾಗಿದ್ದು, ಈ ಬಾರಿ ಲ್ಯಾಂಡರ್‌ನಲ್ಲಿನ ಎಂಜಿನ್‌ಗಳ ಸಂಖ್ಯೆಯನ್ನು ಐದರಿಂದ ನಾಲ್ಕಕ್ಕೆ ಇಳಿಸಲಾಗಿದೆ. ಸಾಫ್ಟ್‌ವೇರ್ ಅನ್ನು ನವೀಕರಿಸಲಾಗಿದ್ದು, ಎಲ್ಲವನ್ನೂ ಕಠಿಣ ಪರೀಕ್ಷೆಗೆ ಒಳಪಡಿಸಲಾಗಿದೆ” ಎಂದು ಇಸ್ರೋ ಹೇಳಿದೆ.
“ಕೆಲವು ಅಂಶಗಳು ವಿಫಲವಾದರೂ ಸಹ ಯಶಸ್ವಿಯಾಗಿ ಇಳಿಯಲು ಹೊಸ ಮಿಷನ್ ಅನ್ನು ವಿನ್ಯಾಸಗೊಳಿಸಲಾಗಿದೆ. ಸಂವೇದಕ ವೈಫಲ್ಯ, ಎಂಜಿನ್ ವೈಫಲ್ಯ, ಅಲ್ಗಾರಿದಮ್ ವೈಫಲ್ಯ ಮತ್ತು ಲೆಕ್ಕಾಚಾರದ ವೈಫಲ್ಯ ಸೇರಿದಂತೆ ಹಲವಾರು ಸನ್ನಿವೇಶಗಳನ್ನು ಪರಿಶೀಲಿಸಲಾಗಿದೆ ಹಾಗೂ ಅವುಗಳನ್ನು ಎದುರಿಸಲು ಕ್ರಮಗಳನ್ನು ಅಭಿವೃದ್ಧಿಪಡಿಸಲಾಗಿದೆ” ಎಂದು ಇಸ್ರೋ ಮುಖ್ಯಸ್ಥ ಸೋಮನಾಥ್ ಹೇಳಿದ್ದಾರೆ.
ಚಂದ್ರಯಾನ-1, ಚಂದ್ರ ಕಡೆಗೆ ಭಾರತದ ಮೊದಲ ಮಿಷನ್ ಆಗಿದ್ದು, 2008ರ ಅಕ್ಟೋಬರ್ ನಲ್ಲಿ ಪ್ರಾರಂಭವಾಯಿತು ಮತ್ತು 2009ರ ಆಗಸ್ಟ್ ರವರೆಗೆ ಕಾರ್ಯನಿರ್ವಹಿಸುತ್ತಿತ್ತು. 2019 ರಲ್ಲಿ ಚಂದ್ರಯಾನ -2 ರ ಲ್ಯಾಂಡರ್ ಯೋಜಿಸಲಾಗಿದ್ದ ದಾರಿಯಿಂದ ತಪ್ಪಿಹೋಗಿ ಇಳಿಯುವಿಕೆ ಕಷ್ಟಕರವಾಯಿತು. ಇದರ ಆರ್ಬಿಟರ್ ಇನ್ನೂ ಚಂದ್ರನನ್ನು ಸುತ್ತುತ್ತಿದ್ದು ಮಾಹಿತಿಯನ್ನು ಕಳುಹಿಸುತ್ತಿದೆ.