ಮೈಸೂರು: ಚಾಮುಂಡಿ ಬೆಟ್ಟಕ್ಕೆ ರೋಪ್‌ವೇ ನಿರ್ಮಿಸುವ ಪ್ರಸ್ತಾವಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ರೋಪ್‌ವೇ ನಿರ್ಮಾಣವನ್ನು ಕೈಬಿಟ್ಟಿದೆ. ಮೈಸೂರಿನಲ್ಲಿ ಸಭೆಯ ಬಳಿಕ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಮೈಸೂರಿನ ಚಾಮುಂಡಿ ಬೆಟ್ಟ ಧಾರ್ಮಿಕ ಸ್ಥಳ ಆಗಬೇಕು. ಪ್ರವಾಸಿ ಸ್ಥಳ ಆಗುವುದಕ್ಕಿಂತ ಅದು ಬಹಳ ಮುಖ್ಯವಾಗಿದೆ ಎಂದರು.
ಈ ಹೇಳಿಕೆಯಿಂದಾಗಿ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಪರಿಸರವಾದಿಗಳಿಗೆ ಜಯ ಸಿಕ್ಕಂತಾಗಿದೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯ ಬಳಿಕ ಮಾತನಾಡಿದ ಸಚಿವರು, ಚಾಮುಂಡಿ ಬೆಟ್ಟಕ್ಕೆ ರೋಪ್‌ವೇ ಬೇಡ ಎಂಬ ಅಭಿಪ್ರಾಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಂದ ವ್ಯಕ್ತವಾಗಿದೆ ಎಂದು ಹೇಳಿದರು.
ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೈಸೂರಿನಲ್ಲಿ ಪ್ರವಾಸೋದ್ಯಕ್ಕೆ ಉತ್ತೇಜನ ನೀಡುವ ದೃಷ್ಟಿಯಿಂದ 2022-23ನೇ ಸಾಲಿನ ಬಜೆಟ್‌ನಲ್ಲಿ ಹಲವು ಯೋಜನೆಗಳನ್ನು ಪ್ರಕಟಿಸಿದ್ದರು. ಬಜೆಟ್‌ನಲ್ಲಿ ಚಾಮುಂಡಿ ಬೆಟ್ಟಕ್ಕೆ ರೋಪ್‌ವೇ ಬಗ್ಗೆ ಪ್ರಸ್ತಾಪಿಸಿದ್ದರು. ಈ ಸಂಬಂಧ ಇಂದು ನಡೆದ ಸಭೆಯಲ್ಲಿ ರೋಪ್‌ವೇ ಬೇಡ ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಈ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದರು.
ಚಾಮುಂಡೇಶ್ವರಿಯ ದರ್ಶನ ಪಡೆಯಲು ಭಕ್ತಾದಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವವರು ಹೀಗಾಗಿ ಬೆಟ್ಟಕ್ಕೆ ತೆರಳಲು ಅವರಿಗೆ ಸಾಕಷ್ಟು ಅನುಕೂಲ ಕಲ್ಪಿಸಿರುವುದರಿಂದ ರೋಪ್‌ವೇ ಅಗತ್ಯವಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಯಿತು ಎಂದು ಸಚಿವರು ಹೇಳಿದರು.
ಮೈಸೂರಿನಲ್ಲಿ ಅನೇಕ ಪ್ರವಾಸಿ ಸ್ಥಳಗಳಿವೆ. ಬೆಟ್ಟ ಪ್ರವಾಸೋದ್ಯಮ ಸ್ಥಳವಲ್ಲ. ಬೆಟ್ಟದಲ್ಲಿ ಸ್ವಚ್ಛತೆ, ಮನೆಗಳ ನಿರ್ಮಾಣಕ್ಕೆ ಕಡಿವಾಣ ಹಾಕುವ ಬಗ್ಗೆಯೂ ಪ್ರಸ್ತಾಪವಾಗಿದೆ. ಮಲೈಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಮಾದರಿಯಲ್ಲಿ ಚಾಮುಂಡಿ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಬೇಕೆಂದು ಕೇಳಿದ್ದಾರೆ. ಈ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದರು.
ಸೋಮನಾಥಪುರ ದೇವಾಲಯ ಯುನೆಸ್ಕೋ ಪಟ್ಟಿ ಸೇರ್ಪಡೆಗೆ ಶಿಫಾರಸು ಮಾಡಲಾಗಿದೆ. 3.74 ಕೋಟಿ ರೂ. ವೆಚ್ಚದಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಕಾರ್ಯಕೈಗೊಳ್ಳುವ ಬಗ್ಗೆ ಚರ್ಚೆಯಾಗಿದೆ. ನಗರೋತ್ಥಾನದಡಿ 2.15 ಕೋಟಿ ರೂ. ವೆಚ್ಚದಲ್ಲಿ ಪಿರಿಯಾಪಟ್ಟಣ ನಗರ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಬಗ್ಗೆ ಕೂಡ ಸಭೆಯಲ್ಲಿ ಚರ್ಚೆಯಾಯಿತು ಎಂದರು.
ಸಭೆಯಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕರುಗಳಾದ ಜಿ.ಟಿ.ದೇವೇಗೌಡ, ಅಶ್ವಿನ್ ಕುಮಾರ್, ಮೇಯರ್ ಸುನಂದಾ ಪಾಲನೇತ್ರಾ, ಮೂಡಾ ಅಧ್ಯಕ್ಷ ರಾಜೀವ್, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಪೊಲೀಸ್ ಆಯುಕ್ತರಾದ ಡಾ. ಚಂದ್ರಗುಪ್ತ, ಜಿಪಂ ಸಿಇಒ ಪೂರ್ಣಿಮಾ ಸೇರಿದಂತೆ ಇಲಾಖೆಗೆ ಸಂಬಂಧಿಸಿದ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ರೋಪ್‌ವೇ ಏಕೆ ವಿರೋಧ?
ಚಾಮುಂಡಿ ಬೆಟ್ಟಕ್ಕೆ ರೋಪ್‌ವೇ ಕಾಮಗಾರಿ ಕೈಗೊಂಡರೆ ಭೂಮಿ ಸಡಿಲಗೊಂಡು ಬೆಟ್ಟದ ಪರಿಸರಕ್ಕೆ ಹಾನಿಯಾಗಬಹುದು. ಭೂ ಕುಸಿತದಿಂದ ಅಪಾಯ ಎದುರಾಗಬಹುದು. ಅರ್ಧಗಂಟೆಯಲ್ಲಿ ಬೆಟ್ಟ ತಲುಪುವ ಸೌಲಭ್ಯ ಇರುವಾಗ ರೋಪ್‌ವೇ ಏಕೆ ಬೇಕು? ಇದರಿಂದ ಪರಿಸರದ ಸಹಜ ಸೌಂದರ್ಯಕ್ಕೂ ಧಕ್ಕೆಯೊದಗುವುದಲ್ಲದೇ ಅರಣ್ಯ ನಾಶದ ಅಪಾಯವೂ ಇದೆ ಎಂದು ಪರಿಸರವಾದಿಗಳು ವಾದಿಸಿದ್ದರು.