ಚಂಪಾ ಎಂಬ ಎಚ್ಚರ

 

ಜಿ.ಎನ್‌.ನಾಗರಾಜ್‌

ಚಂಪಾ ಕರ್ನಾಟಕದ ಸಾಂಸ್ಕೃತಿಕ, ಸಾಹಿತ್ಯಿಕ ಲೋಕ ಪ್ರಧಾನವಾಗಿ ಪ್ರಜಾಪ್ರಭುತ್ವ ಹಾಗೂ ಮತಾತೀತ (ಸೆಕ್ಯುಲರ್)ವಾಗಿ ಆರೋಗ್ಯಕರ ಸ್ಥಿತಿಯನ್ನು ಕಾಪಾಡಿಕೊಳ್ಳುವುದಕ್ಕೆ  ಮಹತ್ವದ ಕೊಡುಗೆ ನೀಡಿದವರು. ಅಲ್ಲಿಲ್ಲಿ ಇಣುಕುವ ಕೋಮು ದ್ವೇಷದ ಚಾಲಕರು, ಪ್ರಚಾರಕರು ಬಾಲ ಬಿಚ್ಚಲು ಅಂಜುವ ಪರಿಸ್ಥಿತಿ ನಿರ್ಮಿಸಿದುದರಲ್ಲಂತೂ  ಮುಖ್ಯ ಪಾತ್ರ ವಹಿಸಿದವರು. ಅವರು ಬೀಸುವ ಚಾಟಿಯೇಟಿನಂತಹ ಮಾತುಗಳು, ನೇರವಾಗಿ ಕೋಮುವಾದದ ವಿರುದ್ಧ ಚಳುವಳಿಗಳಲ್ಲಿ ಭಾಗವಹಿಸುವಿಕೆ, ತಮ್ಮ ಸಾಹಿತ್ಯಿಕ ಪ್ರಭಾವ, ರಾಜ್ಯಾದ್ಯಂತ ಸುತ್ತಾಟದಲ್ಲಿ ಮೂಡಿಸಿದ ಎಚ್ಚರ, ಸಂಕ್ರಮಣ ಪತ್ರಿಕೆಯ ಮೂಲಕ ಬೆಳೆಸಿದ ಸಾಹಿತಿ ಮತ್ತು ಓದುಗ ವಲಯ ಸಾಂಸ್ಕೃತಿಕ ಆರೋಗ್ಯಕ್ಕೆ ಅವರು ಐದು ದಶಕಗಳ ದೀರ್ಘ ಕಾಲ ಕರ್ನಾಟಕದ ಸಾಂಸ್ಕೃತಿಕ ಆರೋಗ್ಯಕ್ಕೆ ನೀಡಿದ ಕೊಡುಗೆಯ ತೊಲೆ ಕಂಬಗಳು.

ಚಂಪಾರವರು ಒಬ್ಬ ಮುಖ್ಯ ನವ್ಯ ಕವಿ, ನಾಟಕಕಾರ, ಬಂಡಾಯ ಸಾಹಿತ್ಯ ಚಳುವಳಿಯ‌ ಮುಖ್ಯ ನೇತಾರ,  ಅಂಕಣಕಾರ, ಭಾಷಣಕಾರ, ಸಂಪಾದಕ, ನಿರಂತರ  ಹೋರಾಟಗಾರ, ಸಂಘಟಕ, ಎಂದೆಲ್ಲ ಬೇರೆ ಬೇರೆ ಪತ್ರಿಕೆ, ಮಾಧ್ಯಮಗಳು ವರ್ಣಿಸಿವೆ. ಈ ಬಹುಮುಖೀ ಆಯಾಮಗಳಲ್ಲಿ ಪ್ರತಿಯೊಂದರಲ್ಲೂ ಅವರು ತಮ್ಮದೇ ಅನನ್ಯತೆಯ ಛಾಪು ಮೂಡಿಸಿ ಪ್ರಸಿದ್ಧರಾಗಿದ್ದಾರೆ. ಚಂಪಾ ಎಂದರೆ ಈ ಎಲ್ಲ ಆಯಾಮಗಳೂ ಸೇರಿ ಸಮಗ್ರ ವ್ಯಕ್ತಿತ್ವವಾಗಿದ್ದರು, ಒಂದು  ಸಂಸ್ಥೆಯಾಗಿ ಮಾರ್ಪಟ್ಟಿದ್ದರು.

ಸಮಾಜವಾದಿ ಪಂಚಕ

ಚಂಪಾರವರ ವ್ಯಕ್ತಿತ್ವ ಮತ್ತು ಕೊಡುಗೆಯನ್ನು ವಿಶ್ಲೇಷಿಸುವಾಗ ಅವರು ಅನಂತಮೂರ್ತಿ, ನಂಜುಂಡಸ್ವಾಮಿ, ಲಂಕೇಶ್, ತೇಜಸ್ವಿಯವರು ಸೇರಿದ ಮೂವತ್ತರ ದಶಕದಲ್ಲಿ ಜನಿಸಿ ಸ್ವಾತಂತ್ರ್ಯ ಬರುವ ವೇಳೆಗೆ ಅದರ ಫಲವನ್ನುಂಡ ಯುವಕರಾಗಿ  ಸಮಾಜವಾದಿ ಪಂಚಕದ ಭಾಗವಾಗಿದ್ದರು ಎಂಬುದನ್ನು ಮರೆಯಬಾರದು. ಈ ಪಂಚಕರಲ್ಲಿ ಪ್ರತಿಯೊಬ್ವರೂ ಕೂಡಾ ಕರ್ನಾಟಕದ ಸಾಮಾಜಿಕ, ಸಾಂಸ್ಕೃತಿಕ ರಂಗಗಳಿಗೆ ಮರೆಯಲಾಗದ ಕೊಡುಗೆಗಳನ್ನು ನೀಡಿದವರು. (ಶಾಂತವೇರಿ ಗೋಪಾಲಗೌಡರು ಇವರ ಹಿರಿಯರಾಗಿದ್ದರಿಂದ ಈ ಸಮಕಾಲೀನರಲ್ಲಿ ಸೇರಿಸಿಲ್ಲ) 70 ರ ದಶಕದಲ್ಲಿ ಈ ಪಂಚಕರು ಕೂಡಿ ಕ್ರಿಯಾಶೀಲರಾದರು. ಮತ್ತಷ್ಟು ಜನರನ್ನು ಸೆಳೆದರು. ಪರಸ್ಪರ ಪ್ರಭಾವಿಸಿದರು, ಬೆಳೆದರು. ಪರಸ್ಪರ ಆರೋಗ್ಯಕರವಾಗಿ ಸ್ಫರ್ಧಿಸಿದರು. ಬೇರೆ ಬೇರೆಯಾದರು. ಅನಾರೋಗ್ಯಕರವಾಗಿ ಕಿತ್ತಾಡಿದರು. ಕರ್ನಾಟಕಕ್ಕೆ ದೊರಕಬಹುದಾಗಿದ್ದ ಮತ್ತಷ್ಟು ಮಹತ್ವದ ಬೆಳವಣಿಗೆಯಿಂದ ವಂಚಿಸಿದರು. ಅವರು ಕೂಡಿ ಕ್ರಿಯಾಶೀಲರಾಗಿದ್ದ ಲೋಹಿಯವಾದಿ ಚಿಂತನೆಯ ಸಮಾಜವಾದಿ ಯುವಜನ ಸಭಾ, ನವ‌ನಿರ್ಮಾಣ ವೇದಿಕೆ, ಜೆಪಿ ಚಳುವಳಿ ಅವರ ಚಿಂತನೆಯನ್ನು ಬೆಳೆಸಿ ಅವರೆಲ್ಲರೂ ನೀಡಿದ  ಕೊಡುಗೆಗೆ ಕಾರಣವಾಗಿದೆ. ಅದೇ ಸಮಯದಲ್ಲಿ ಅವರ ಕಿತ್ತಾಟ, ಕೊರತೆಗಳಿಗೂ ತನ್ನದೇ ಕೊಡುಗೆ ನೀಡಿದೆ.

ಈ ಪಂಚಕದ ಭಾಗವಾಗಿ ಬೆಳೆದ ಚಂಪಾ ಅವರ ನಡುವೆಯೂ ತಮ್ಮ ವೈಶಿಷ್ಟ್ಯ ಉಳಿಸಿಕೊಂಡಿದ್ದಾರೆ. ಈ ಐದು ಜನರಲ್ಲಿ ನಂಜುಂಡಸ್ವಾಮಿ ಸಾಹಿತ್ಯದಿಂದ ದೂರ ಉಳಿದು ಚಳುವಳಿಗಾರರಾಗಿಯೇ ಪ್ರಸಿದ್ಧರಾದರೆ ಉಳಿದ ನಾಲ್ಕು ಜನವೂ ಸಾಹಿತಿಗಳಾದ್ದರಿಂದ ಇವರ ನಡುವೆ ಪರಸ್ಪರ ಹೆಚ್ಚು ಕೊಡು ಕೊಳೆ, ಈರ್ಷೆ ಕಾಣಬಹುದು.

                ಜಿ.ಎನ್‌.ನಾಗರಾಜ್‌ – ಲೇಖಕರು

ಹೋರಾಟ, ಹೋರಾಟ, ಹೋರಾಟ

ಚಂಪಾರ ವೈಶಿಷ್ಟ್ಯವೆಂದರೆ ಈ ನಾಲ್ವರಲ್ಲಿ ಮಾತ್ರವಲ್ಲ, ಕನ್ನಡದ ಯಾವುದೇ ಸಾಹಿತಿಗಿಂತಲೂ ಅತ್ಯಂತ ಹೆಚ್ಚು ಚಳುವಳಿಗಳಲ್ಲಿ ತೊಡಗಿಸಿಕೊಂಡದ್ದು.  70ರ ದಶಕದಿಂದ ಆರಂಭವಾದ ಅವರ ಈ ತೊಡಗುವಿಕೆ ಒಂದು ದಶಕ ಕಾಲ ಸಾಹಿತ್ಯ ರಚನೆಯ ಜೊತೆ ಜೊತೆಗೆ ಸಾಗಿತು. 80ರ ನಂತರ ಅವರ ವ್ಯಕ್ತಿತ್ವದ ಪ್ರಧಾನ ಅಭಿವ್ಯಕ್ತಿ ಹೋರಾಟಗಳ ಮೂಲಕವೇ.  ಅವರು ಭಾಗವಹಿಸಿದ, ನೇತೃತ್ವ ನೀಡಿದ, ಹುಟ್ಟುಹಾಕಿದ ಚಳುವಳಿಗಳು ಒಂದೇ ಎರಡೇ. 70ರ ದಶಕದ ಆರಂಭದಲ್ಲಿಯೇ ಜಾತಿ ವಿನಾಶ ಚಳುವಳಿ, ಅದರಲ್ಲಿ ಕುವೆಂಪುರವರನ್ನು ತೊಡಗಿಸಿದ್ದು, ಬೂಸಾ ಚಳುವಳಿಗೆ ಬೆಂಬಲ, ಸಮಾಜವಾದಿ ಯುವಜನ ಸಭಾದ, ನವನಿರ್ಮಾಣ ಸಮಿತಿಯ ಹಾಗೂ ಜೆಪಿ ಚಳುವಳಿ. ತುರ್ತುಪರಿಸ್ಥಿತಿ ವಿರುದ್ಧ ಚಳುವಳಿ, ಜೈಲುವಾಸ, ಬಂಡಾಯ ಸಾಹಿತ್ಯ ಚಳುವಳಿ, ಗೋಕಾಕ್ ಚಳವಳಿ, ಕನ್ನಡ ಮಾಧ್ಯಮ, ಮಂಡಲ್ ಪರ ಚಳುವಳಿ, ಕೋಮುವಾದದ ವಿರುದ್ಧ ಹಲವಾರು ಪ್ರತಿಭಟನೆಗಳು ಇತ್ಯಾದಿ, ಇತ್ತ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ದೌರ್ಜನ್ಯ, ಅನ್ಯಾಯ ನಡೆದಾಗ ಅಲ್ಲಿಗೆ  ಪ್ರತಿಭಟನೆಗಳಿಗೆ ನೇತೃತ್ವ ನೀಡಿದ್ದು ಎಷ್ಟು ಬಾರಿಯೋ !

ಬಾವುಟ, ಬ್ಯಾನರ್ ಬಿದಿರು ಕೋಲುಗಳನ್ನು ಹಿಡಿದುಕೊಂಡು ಬರುತ್ತಿದ್ದ ಪ್ರೊಫೆಸರ್

ಧಾರವಾಡದಲ್ಲಿ ಯಾವುದೇ ಚಳುವಳಿಯನ್ನು ಅವರು ರೂಪಿಸಿದರೂ ಕೂಡಾ ಚಳುವಳಿಯ ಸಮಯಕ್ಕೆ ಬರುವಾಗ ಅವರ ಸ್ಕೂಟರ್‌ನಲ್ಲಿ ಅದಕ್ಕೆ ಸಂಬಂಧಿಸಿದ ಬ್ಯಾನರ್, ಬಿದಿರು, ಗಳುಗಳನ್ನು ಇಟ್ಟುಕೊಂಡೇ ಬರುತ್ತಿದ್ದ ಈ  ಪ್ರೊಫೆಸರರನ್ನು ನೋಡಿ ಅಲ್ಲಿಯ ವಿದ್ಯಾರ್ಥಿಗಳು, ಜನರೂ ದಂಗು ಬಡೆಯುತ್ತಿದ್ದರು. ಧಾರವಾಡ ಸೀಮೆಯಲ್ಲಿ ಕಾಲೇಜು ಲೆಕ್ಚರರ್ ಆದರೆ ಸಾಕು ಪ್ರೊಫೆಸರ್ ಎಂದು ಕರೆಯುವುದು ವಾಡಿಕೆ. ಅವರೂ ಕೂಡಾ ಹಾಗೆಯೇ ಕಾಲರ್ ಮೇಲೇರಿಸಿಕೊಂಡೇ ತಿರುಗುತ್ತಾರೆ.

ಆದರೆ ಈ ನಿಜ ಪ್ರೊಫೆಸರ್ ನಡೆ ಹೀಗೆ

ಅಷ್ಟೇ ಅಲ್ಲ, ಮಂಡಲ್ ವಿರೋಧಿ ಚಳುವಳಿ ಕರ್ನಾಟಕ ವಿವಿ ಮತ್ತು‌ ಧಾರವಾಡ ಹುಬ್ಬಳ್ಳಿ ನಗರಗಳಲ್ಲಿ ಜೋರಾಗಿ ಬೆಳೆದು ಪತ್ರಿಕೆಗಳು ವಾರಗಟ್ಟಲೇ ಅವುಗಳಿಗೆ ಪ್ರಚಾರ ಕೊಡುತ್ತಿರುವಾಗ, ವಿವಿಯ ಪ್ರಾಧ್ಯಾಪಕರು, ಉಪನ್ಯಾಸಕರುಗಳಲ್ಲಿ ಬಹಳಷ್ಟು ಜನ ಮಂಡಲ್ ವಿರೋಧಿ ಮಾತಾಡುತ್ತಿರುವಾಗ ಚಂಪಾ ಮೀಸಲಾತಿ, ಮಂಡಲ್ ಪರ ಮಾತಾನಾಡುವುದಕ್ಕೆ ಸೀಮಿತವಾಗಲಿಲ್ಲ. ರಾತ್ರಿ 9-10 ಗಂಟೆಯ ವೇಳೆಗೆ ವಿದ್ಯಾರ್ಥಿಗಳ ಹಾಸ್ಟೆಲ್‌ಗೆ ಹೋಗಿ ಸಭೆಗಳನ್ನು ಮಾಡಿ ಅವರಿಗೆ ಮಂಡಲ್ ಬಗ್ಗೆ ವಿವರಿಸಿದರು. ಇದು ಹಲವು ರಾತ್ರಿಗಳ ದಿನಚರಿಯಾಗಿತ್ತು.

ವಿದ್ಯಾರ್ಥಿಗಳ ನೆರವಿನಿಂದ ಮೆರವಣಿಗೆ, ಪ್ರತಿಭಟನೆಗಳನ್ನು ಸಂಘಟಿಸಿದರು. ಇಂತಹ ಪ್ರತಿಭಟನೆಯೊಂದರಲ್ಲಿ ಮಂಡಲ್ ವಿರೋಧಿ ಪ್ರಚಾರ ಮಾಡುವ ಪತ್ರಿಕೆಗಳನ್ನು ಸುಟ್ಟರು.

ಬರಹ ಮತ್ತು ಹೋರಾಟದ ಐಕ್ಯತೆ

ಈ ಅವಧಿಯಲ್ಲಿ ಅಂಕಣ ಬರಹ, ಸಂಕ್ರಮಣ ಸಂಪಾದಕತ್ವ ಮಾತ್ರ ಅವರ ಈ ಚಳುವಳಿಗಳ ಅಗತ್ಯ ಅಂಗವಾಗಿ, ಅವರ ಸಾಹಿತ್ಯ ರಚನೆಯ ಕುರುಹಾಗಿ ಉಳಿದುಕೊಂಡಿತು. ಹಾಗೆಂದ ಕೂಡಲೇ ಅವರ ಸಾಹಿತ್ಯ ಮುಖ್ಯವಲ್ಲ ಎಂದಲ್ಲ. ಅವರ ಸಾಹಿತ್ಯಕ ಕ್ರಿಯಾಶೀಲತೆಯ ಮುಂದುವರಿಕೆಯೇ ಹೋರಾಟಗಳಾಗಿ ಮೂಡಿವೆ ಎಂಬುದು ಗಮನಾರ್ಹ. ಬಹಳ ಸಾಹಿತಿಗಳಂತೆ ಕೇವಲ ಟೀಕಿಸಿ ಬರೆದು ನನ್ನ ಕೆಲಸ ಮುಗಿಯಿತು ಎಂದು ಭಾವಿಸಿ ಸುಮ್ಮನಾಗುವುದು ಅವರ ಜಾಯಮಾನವಾಗಲಿಲ್ಲ. ಅವರೇ ಹೇಳಿದಂತೆ, “ಇಂಥ ಕವನಗಳು ನಮ್ಮ ಅಕ್ಷರ ಪ್ರಪಂಚದಲ್ಲಿ ಐತಿಹಾಸಿಕ ದಾಖಲೆಗಳಾಗಿ ಮಾತ್ರ ಉಳಿಯುವುದರಲ್ಲಿ ಆಸಕ್ತಿ ಇರಲಿಲ್ಲʼʼ ʻಬದಲಾಗಿ ಕ್ರಿಯಾರೂಪದ ವಾಸ್ತವ ಪ್ರಪಂಚದ ಇತಿಹಾಸ’ವನ್ನು ಕಿಂಚಿತ್ತಾದರೂ ಬದಲಾಯಿಸುವದರಲ್ಲಿ ಅವರ ಆಸಕ್ತಿ. “ಸಾಹಿತ್ಯ ಬದುಕಿಗೆ ಹತ್ತಿರವಾಗುವುದು, ಬದುಕಿನ ಅವಿಭಾಜ್ಯ ಅಂಗವಾಗುವುದು ಈ ಅರ್ಥದಲ್ಲಿಯೇ” ಎನ್ನುತ್ತಾರೆ. ತುರ್ತು ಪರಿಸ್ಥಿತಿಯ ಕಾಲದ ಜೈಲುವಾಸದಿಂದ ಹೊರಬಂದ ತರುಣದಲ್ಲಿ  ಗಾಂಧಿ ಸ್ಮರಣೆ ಕವನ ಸಂಕಲನದ ಮುನ್ನುಡಿಯಲ್ಲಿ.

ಮುಂದೆ ಅವರು ಜಾಗತೀಕರಣ ಸಂದರ್ಭದಲ್ಲಿ ಸಾಹಿತಿಯ ಹೊಣೆಗಾರಿಕೆಯ ಬಗ್ಗೆ ಬರೆಯುತ್ತಾ ಅದರ ವಿವಿಧ ಪರಿಣಾಮಗಳನ್ನು ವಿವರಿಸಿ ಹೇಳುತ್ತಾರೆ.  “ನಮ್ಮ ನಮ್ಮ ವೈಯಕ್ತಿಕ ಅನುಭವದ ನೆಲೆಗಳಲ್ಲಿ ಅವುಗಳಿಗೆ ಕಲಾತ್ಮಕ ವಿನ್ಯಾಸ ನೀಡುತ್ತಲೇ ಬದಲಾವಣೆಗಾಗಿ ಹೋರಾಡುತ್ತಿರುವ ಜನ ಸಮುದಾಯದ ಮಹಾ ಆಂದೋಲನದಲ್ಲಿ ಪಾಲುಗೊಳ್ಳಬೇಕಾಗಿದೆ.
ಅರಿವು, ಬರಹ, ಕ್ರಿಯೆಯ ಈ ಮಿಳನದ ಬಗ್ಗೆ ಅವರ ಬದ್ಧತೆ ಆಧುನಿಕ ಸಾಹಿತಿಗಳಲ್ಲಿ ಇಲ್ಲವೇ ಇಲ್ಲವೆನ್ನುವಷ್ಟು ಅಪರೂಪ. ಈ ಅರಿವು ಕೇವಲ ಮಾತುಗಳಾಗಿ ಉಳಿಯದೆ ಮೀಸಲಾತಿ, ಲಿಂಗಾಯತ ಧರ್ಮ, ಕೋಮುವಾದ, ಕಂದಾಚಾರ, ಕನ್ನಡ ಮಾಧ್ಯಮ ಮೊದಲಾದ ಮುಖ್ಯ ಪ್ರಶ್ನೆಗಳಲ್ಲಿ ಎದ್ದು ಕಾಣುತ್ತದೆ.

ಅವರ ಮತ್ತೊಂದು ಮುಖ್ಯ ಗುಣವೆಂದರೆ ತಮ್ಮದೇ ಜಾತಿಯ ಪುರೋಹಿತಶಾಹಿಯನ್ನು, ಅದರ ವಿರೂಪಗಳನ್ನು ಸೆಣಸುವುದು, ಆ ಮೂಲಕ ಜಾತಿವಾದ, ಪುರೋಹಿತಶಾಹಿಯ ವಿರುದ್ಧ ಮಾಡಿದ ಎಲ್ಲಾ ಹೋರಾಟಗಳಿಗೆ ನೈತಿಕತೆಯನ್ನು ಸ್ಥಾಪಿಸುವುದು. ಇದನ್ನು ಜಾತಿ ವಿರೋಧದ ಮಾತಾಡುವವರೆಲ್ಲರಿಂದಲೂ ನಿರೀಕ್ಷಿಸಿದರು.

ಬಸವ ಚಳುವಳಿ

ಬಸವಣ್ಣನವರ ವಿಚಾರ, ತತ್ವಗಳನ್ನು ಮೆಚ್ಚಿ ಬರೆದಷ್ಟೇ ವೀರಶೈವ- ಲಿಂಗಾಯತ ಪುರೋಹಿತಶಾಹಿ ಬಸವಣ್ಣನವರ ವಿಚಾರಗಳಿಗೆ ಎಸಗಿದ ಅಪಚಾರವನ್ನು ತಮ್ಮ ಕವನಗಳಲ್ಲಿ ಖಂಡತುಂಡವಾಗಿ ಖಂಡಿಸಿದ್ದಾರೆ :

ಸುರಲೋಕ ಭೂಲೋಕ ಬೇರಿಲ್ಲ ಕಾಣಿರೋ/
ಅಂದ ನಿನ ಬೇರಿಗೇ ಕೈ ಹಾಕಿ ಬಸವಾ //
ಶಿವನ ಒಡ್ಡೋಲಗಕೆ ಪಾರ್ಸಲ್ಲು ಮಾಡಿದೆವು /
ಶಿವನಿಂದಲೇ ಶಾಪ ಕೊಡಿಸಿದೆವು ಬಸವಾ //
ನಮ್ಮ ಹಾಗೇ ಎರಡು ಕಾಲು,ಕೈ ಇದ್ದ ನೀ /
ನಾಲ್ಕು ಕಾಲಿನ ಪ್ರಾಣಿಯಾದಿ ಬಸವಾ //

ಹಲವು ಭಾಷಣಗಳಲ್ಲಿ ಮಠಗಳ ಸ್ವಾಮೀಜಿಗಳ ಎದುರಿಗೇ ಟೀಕಿಸಿದ್ದಾರೆ. ದೊಡ್ಡ ಮಠವಾದ ಮೂರು ಸಾವಿರ ಶ್ರೀಗಳಿಗೆ ಥ್ರೀ ಥೌಸಂಡೇಶ್ವರ ಎಂದು ಹಂಗಿಸಿದ್ದಾರೆ. ಬಸವ ಚಳುವಳಿ ಎಂದು ಬರೆದ ಲೇಖನ ಮಠಾಧಿಪತಿಗಳು ಲಿಂಗಾಯತವನ್ನು ವಿರೂಪಗೊಳಿಸುವುದರ ಬಗ್ಗೆ ಮಾತ್ರವೇ ಅಲ್ಲದೆ ಬಸವಣ್ಣನವರ ಮೂಲ ವಿಚಾರಗಳಲ್ಲಿಯೇ ಕೊರತೆ ಇದ್ದುದರಿಂದಲೇ ಆ ವಿಚಾರಗಳು ದೊಡ್ಡ ಪ್ರಮಾಣದ ಸಾಮಾಜಿಕ ಬದಲಾವಣೆ ತರಲಿಲ್ಲ ಮತ್ತು ನಂತರದ ಕಾಲದಲ್ಲಿ ಪುರೋಹಿತಶಾಹಿಗಳಿಂದ ವಿರೂಪಕ್ಕೆ ಒಳಗಾದವು ಎಂದು ವಿಶ್ಲೇಷಿಸುತ್ತಾರೆ. ವಚನ ಚಳುವಳಿಯನ್ನು ಅಧ್ಯಯನ ಮಾಡಿದ ಸಾವಿರಾರು ಸಾಹಿತಿ, ವಿದ್ವಾಂಸರುಗಳಲ್ಲಿ ಈ ವಿಶ್ಲೇಷಣೆ ಕಾಣಲಾಗುವುದಿಲ್ಲ. ಹೀಗೇ ಮೂಲಕ್ಕೇ ಕೈ ಹಾಕುವುದಕ್ಕೆ ಬಹಳ ಗಟ್ಟಿ ಗುಂಡಿಗೆ ಬೇಕು. ಅದನ್ನು ಚಂಪಾನಂತಹವರು ಮಾತ್ರ ಮಾಡಿ ಜೈಸಿಕೊಳ್ಳಬಲ್ಲರು.

ಇಂತಹ ಕವನ, ಲೇಖನಗಳ ಮುಂದುವರಿಕೆಯಾಗಿ ವೀರಶೈವ ಎಂಬುದನ್ನು, ಹಿಂದೂ ಧರ್ಮದ ಒಂದು ಭಾಗವಾಗಿ ಬಿಂವಿಸುವುದನ್ನು ವಿರೋಧಿಸಿದರು. ಲಿಂಗಾಯತ ಧರ್ಮದ ಹೋರಾಟಗಳಲ್ಲಿ ಭಾಗವಹಿಸಿದರು. ಅಕಸ್ಮಾತ್ ಏನಾದರೂ ಲಿಂಗಾಯತ ಧರ್ಮ ಹಿಂದೂ ಧರ್ಮದ ಭಾಗವೆಂದಾಗಿಬಿಟ್ಟರೆ ನಾನು ಲಿಂಗಾಯತ ಧರ್ಮವನ್ನು ತ್ಯಜಿಸುತ್ತೇನೆಂದು ದಿಟ್ಟತನದಿಂದ ಘೋಷಿಸಿದರು.

ಅಡಿಗರು ಮತ್ತು ನವ್ಯರ ಕಟು ಟೀಕೆ

ನವ್ಯದ ಸೆಳೆತಕ್ಕೆ ಚಂಪಾ ಒಳಗಾಗಿ ಮುಖ್ಯ ಕವನ, ಅಸಂಗತವೆನ್ನುವ ನಾಟಕಗಳನ್ನು ಬರೆದರು. ಪ್ರಮುಖ ನವ್ಯ ಸಾಹಿತಿಗಳಲ್ಲೊಬ್ಬರೆಂದು ಪರಿಗಣಿತವಾದರು. ಆದರೆ ತಮ್ಮ ಹೋರಾಟಗಳ ಬೆಳಕಿನಲ್ಲಿ ಮೂಡಿದ ಅರಿವಿನಿಂದಾಗಿ ಬಹಳ ಬೇಗ ಹೊರಬಂದರು. ಅಡಿಗರನ್ನು ಶ್ಲಾಘಿಸಿ ಅವರು ಬರೆದ ಐವತ್ತರ ಅಡಿಗರು ಎಂಬ ಕವನ, ನಂತರ ೬೦ರ ಅಡಿಗರ ಅಡಿಗೆ ಎಂದು ಅಡಿಗರು ಮತ್ತವರ ಬಳಗವನ್ನೆಲ್ಲ ವಿಡಂಬಿಸುತ್ತಾರೆ.

“ಈ ಅರಳು ಮರಳಿನ ಕತೆ  ಹೇಳಲೆರ ಸ್ವಾಮಿ ?
ಕೇಳುವಂತವರಾಗಿರಿ :
ಪರಾಕುಗಳ ಪ್ರತಿಬಿಂಬ
ತುಂಬಿದ ಬೋಳು ತಲೆ
ಬರುಬರುತ್ತ
ಪೂರ್ಣ ಕುಂಭ
ಗಳ ಭೋ
ಜನಸಂಘದ ಪಾಕಶಾಲೆಯಾದದ್ದು ”

ಒಂದು ಜನಾಂಗದ ಕಣ್ಣು ತೆರೆಸಿ
ಮಣ್ಣಿನ ವಾಸನೆ ತುಂಬಿದಾಸ್ವಾಮಿ
ಮತ್ತೊಂದು ಜನಾಂಗದ ಬಾಯಿ ತೆರೆಸಿ
ಶ್ರೀರಾಮ‌ ನವಮಿಯ ದಿವಸ
ಸುರಿಯುತ್ತಿದ್ದಾನೆ ಮಂತ್ರದ ವಾಸನೆಯ
ಸಾವಯವ ಸಂಬಂಧದ ಪಾಕದಡಿಗೆ.”

ಇನ್ನೂ ಹಲ ಹಲವು‌ ಕವನಗಳಲ್ಲಿ ಅನಂತಮೂರ್ತಿ, ರಾಮಚಂದ್ರ ಶರ್ಮ, ಮಾ.ಕುಲಕರ್ಣಿ, ದೇಶ ಕುಲಕರ್ಣಿ ಕಂಬಾರರು ಮತ್ತಿತರರನ್ನೂ ವ್ಯಂಗ್ಯ ಮಾಡುತ್ತಾರೆ. ಜನರ ಬದುಕಿನ ಸಮಸ್ಯೆಗಳ ಹೋರಾಟಗಳಲ್ಲಿ ಎಲ್ಲಿದ್ದೀರಿ ಸ್ವಾಮಿ‌ ಎಲ್ಲಿದ್ದೀರಿ ಎಂದು ಚಾವಟಿಯಿಂದ ಬಾರಿಸುತ್ತಾರೆ.

ಇನ್ನು ಬಂಡಾಯ ಸಾಹಿತ್ಯ ಚಳುವಳಿ ಹುಟ್ಟಲು ಕಾರಣವಾದ ಅಡಿಗ ಅಧ್ಯಕ್ಷತೆಯ ಸಾಹಿತ್ಯ ಸಮ್ಮೇಳನದ ಪ್ರಸಂಗವಂತೂ ‘ನಳ ಕವಿಯ ಮಹಾ‌ಮಸ್ತಕಾಭಿಷೇಕ ‘ಎಂಬ ಬೀದಿ ನಾಟಕವಾಗಿ ಅಂದಿನ‌ ದಿನಗಳಲ್ಲಿ ಬಹಳ ಫೇಮಸ್ಸು.

ಗಾಂಧೀಜಿಯವರ ದುರುಪಯೋಗದ ಬಗ್ಗೆ ಹಲ ಹಲವು ಕವನ ಬರೆದು ತಮ್ಮ ಒಳತೋಟಿಯನ್ನು ತೋಡಿಕೊಂಡಿದ್ದಾರೆ. ತುರ್ತು ಪರಿಸ್ಥಿತಿಯ ಬಗ್ಗೆ ಅವರು ಬರೆದ ಕವನಗಳು ಹಲವಾರು. ಜಗದಂಬೆಯ ಬೀದಿ ನಾಟಕ ಎಂಬುದಂತೂ ತುರ್ತು ಪರಿಸ್ಥಿತಿಯ ಮೊದಲೇ ಬರೆದು ನಟಿಸಲ್ಪಟ್ಟು ಜನರನ್ನು ಎಚ್ಚರಿಸಿದ ನಾಟಕ. ಚಂಪಾರಿಗೆ ಜೈಲು ತೋರಿಸಿದ ನಾಟಕ. ಹಾಗೇಯೇ ಒಂದು ಅಧ್ಯಯನ‌ಕ್ಕೊಳಪಡಿಸಬೇಕಾದ ವಿಷಯ ಕನ್ನಡದಲ್ಲಿ ಈ ನಾಟಕವೇ ಮೊದಲ ಬೀದಿ ನಾಟಕವೇ? ಇದೇ ರೀತಿ ಬುರುಡೀ ಬಾಬಾನ ಲಕ್ಷಾಪಹರಣ ಪವಾಡ ಕೂಡಾ ಎಚ್ಚೆನ್‌ರವರ ಹೋರಾಟದ ಜೊತೆ ನಿಂತು ಜನರನ್ನು ಎಚ್ಚರಿಸಿತು.

ಅವರ ಅನೇಕ ಕವನಗಳಲ್ಲಿ ಹಾಗೂ ಬೀದಿ ನಾಟಕಗಳಲ್ಲಿ ಯಾವ ಮುಖ ಮುಲಾಜಿಲ್ಲದೆ ರಾಷ್ಟ್ರಪತಿ ಜತ್ತಿ, ಪ್ರಧಾನಿ ಮೊರಾರ್ಜಿ ದೇಸಾಯಿ, ಜಗಜೀವನರಾಂ, ಚರಣ ಸಿಂಗ್ ಮೊದಲಾದವರನ್ನು ಹಂಗಿಸುತ್ತಾರೆ. ಅವರು ಬಹಳ ಗೌರವ ಕೊಡುತ್ತಿದ್ದ ಗೋಕಾಕರಂತಹ ಗುರುಗಳು, ಬೇಂದ್ರೆ, ರಾಜರತ್ನಂ, ಕಸ್ತೂರಿ ಮೊದಲಾದವರು ತುರ್ತು ಪರಿಸ್ಥಿತಿಯ ಬಗ್ಗೆ ಸೊಲ್ಲೆತ್ತದಿದ್ದಾಗ, ಸಾಯಿಬಾಬಾನ ಭಕ್ತರಾಗಿ ಹೋದಾಗ ಇವರ ಚಾಟಿಯೇಟಿಗೆ ಸಿಕ್ಕಿದ್ದಾರೆ.

ಇವರು ಬಂಡಾಯ ಸಾಹಿತ್ಯ ಚಳುವಳಿಯ ಮನೋಧರ್ಮವನ್ನು ಬಿತ್ತಿ ಬೆಳೆಸಲು ನಾಡಿನಾದ್ಯಂತ ತಿರುಗಾಡಿದ್ದು, ಸಂಕ್ರಮಣದ ಮೂಲಕ ಬಂಡಾಯದ ಬಗ್ಗೆ ಮಾತ್ರವಲ್ಲ ಮಂಡೇಲಾ, ಪ್ಯಾಲೆಸ್ಟೈನ್, ಅಂಬೇಡ್ಕರ್‌ರವರ ವಿಚಾರಗಳು, ಮೀಸಲಾತಿ, ಡಂಕೆಲ್ ಡ್ರಾಫ್ಟ್ ಮೊದಲಾದವುಗಳ ಬಗ್ಗೆ ತಿಳಿವು ಮೂಡಿಸಲು ಪ್ರಯತ್ನಿಸಿದ್ದು  ಒಂದು ಪ್ರತ್ಯೇಕ ಲೇಖನ ಬೇಡುವಂತಹ ವಿಷಯ. ಸಂಕ್ರಮಣ ಹಳ್ಳಿಗಾಡಿನ‌ ಸಾಹಿತಿಗಳ ಮೊದಲ ಬರಹಗಳಿಗೆ ಆದ್ಯತೆ ನೀಡಿ ನೂರಾರು ದಲಿತ, ಹಿಂದುಳಿದ, ಮಹಿಳಾ ಲೇಖಕರನ್ನು ಬೆಳಸಿದ್ದು ಅದರ ಮತ್ತೊಂದು ಮುಖ್ಯ ಕೊಡುಗೆ. ಲಂಕೇಶರ ಪಾಳೆಗಾರಿಕೆಯ ಬೆಳವಣಿಗೆ, ಅದರ ಅಪಾಯ, ನಂಜುಂಡಸ್ವಾಮಿಯವರ ಮಾಸ್ಟರ್‌ಗಾರಿಕೆ ಚಳುವಳಿಗೆ ಒಡ್ಡುವ ಸಮಸ್ಯೆ ಇವುಗಳನ್ನು ಆರಂಭದ ಕಾಲದಲ್ಲಿಯೇ ಗುರುತಿಸುತ್ತಾರೆ, ಬರೆಯುತ್ತಾರೆ.

ಐಡೆಂಟಿಟಿ ಪಾಲಿಟಿಕ್ಸ್‌ನ ಅಪಾಯ, ದಲಿತ ಪ್ರತ್ಯೇಕತೆ ಕೊನೆಗೆ ಎಡಗೈ ಬಲಗೈ ಮಾತ್ರವಲ್ಲದೆ ಆ ಕೈಗಳ ಬೆರಳುಗಳ ನಡುವೆಯೂ ಜಗಳ ತರುವಂತ ಸ್ಥಿತಿ ಮುಟ್ಟಬಲ್ಲುದು ಎಂಬ ಕಾಣ್ಕೆ ಕೂಡಾ ಎರಡೂವರೆ ದಶಕಗಳ ಹಿಂದೆಯೇ ಎಚ್ಚರಿಸಿದ್ದಾರೆ ಎಂಬುದು ಅವರ ಚಳುವಳಿಗಳ ಬಗೆಗಿನ ಕಾಳಜಿಯ ಗಮನ ಮತ್ತು ಸಮಸ್ಯೆಯನ್ನು ಗುರುತು ಹಿಡಿಯುವ ಚುರುಕುತನವನ್ನೂ ಎತ್ತಿ ತೋರಿಸುತ್ತದೆ.

ಹೀಗೆಲ್ಲ ಗುಣಗಾನ ಮಾಡಿದ ಮಾತ್ರಕ್ಕೆ ಅವರಲ್ಲೇನೂ ದೋಷ, ಕೊರತೆ ಇರಲಿಲ್ಲವೆಂದಲ್ಲ. ಬಹು ಮುಖ್ಯ ಕೊರತೆಗಳೂ ಇದ್ದವು. ಆ ಕೊರತೆಗಳ ಕಾರಣ ಅವರು ತಮ್ಮೆಲ್ಲ ಸಾಮರ್ಥ್ಯವನ್ನು ಕರ್ನಾಟಕದ ಸಾಮಾಜಿಕ ಬದಲಾವಣೆಯಲ್ಲಿ ತೊಡಗಿಸಲು  ತೊಡಕಾದವು.

ಆದರೆ ಅವರ ನಿಧನದ ಈ ಸಂದರ್ಭದಲ್ಲಿ ಅವರನ್ನು ಕಳಕೊಂಡ ನಿರ್ವಾತ ಪರಿಸ್ಥಿತಿ ಕೊರತೆಗಳ ವಿವರ ವಿಶ್ಲೇಷಣೆಯ ಸಮಯವಲ್ಲ. ಆದರೆ ಮೇಲೆ ಹೇಳಿದ ಐವರೂ ಸಮಾಜವಾದಿ ಪಂಚಕರು ಅವರ ಒಟ್ಟಾರೆ ಮತ್ತು ಪ್ರತ್ಯೇಕ ವ್ಯಕ್ತಿಗತ ಸಾಧನೆಗಳು ಮತ್ತು ಸಮಸ್ಯೆಗಳನ್ನು ಅಧ್ಯಯನ ಮಾಡಿ ಅವುಗಳಿಂದ ಕರ್ನಾಟಕ ಪಾಠ ಕಲಿಯಬೇಕಾದ ತುರ್ತಂತೂ ಇದೆ.

Donate Janashakthi Media

Leave a Reply

Your email address will not be published. Required fields are marked *