ಚಂಪಾ ಜೈಪ್ರಕಾಶ್‌ ಅವರ ʻಸುಬ್ಬರಾಯನ ಕುಂಟೆʼ ಕೃತಿ ನನ್ನೊಳಗೆ ತಲ್ಲಣ ಹುಟ್ಟಿಸಿತು

ಕೆ.ಎಸ್ ವಿಮಲಾ

ಹಲವು ಆಯಾಮಗಳಲ್ಲಿ ನಮ್ಮನ್ನು ಆಲೋಚನೆಗೆ ತಳ್ಳುವ ಈ ಕೃತಿ ಕೊಟ್ಟ ಚಂಪಾರಿಗೆ ಅನಂತಾನಂತ ಅಭಿನಂದನೆಗಳು. ಯಾವುದು ಬದಲಾಗಬೇಕು, ಯಾವ ಬದಲಾವಣೆ ಬೇಕು. ಯಾವುದು ಅಭಿವೃದ್ಧಿ, ಅದರ ಫಲಾನುಭವದ ಜೊತೆ ದೊರೆಯುವ ಅಪಾಯಕಾರಿ ಬೆಳವಣಿಗೆಗಳೆಲ್ಲದರ ಅತ್ಯಂತ ಸೂಕ್ಷ್ಮ ನೆಲೆಯ ವಿವರಣೆಯ ಜೊತೆ ಊಹೆಯೂ ಮಾಡಲಾರದ ತಿರುವೊಂದು ಥಟ್ಟನೆ ಬರುವ ಮತ್ತು ‌ಅದು ಲಿಂಗತ್ವದ ನೆಲೆಯನ್ನು ಪಡೆಯುವ ಪರಿ,ಅದು ಹುಟ್ಟಿಸುವ ಪರಿಣಾಮ… ಓದಿಯೆ ತಿಳಿಯಬೇಕು.

ʻಸುಬ್ಬರಾಯನ ಕುಂಟೆʼಯ ಸಿಹಿ ನೀರಿಗೆ ಸೇರುವ ಕೊಳಕು‌ ನೀರಿನ ವಿವರಣೆ ತನ್ನೊಳಗೆ ಒಂದು ಅದ್ಭುತ ರೂಪಕವನ್ನು ಹೊತ್ತಿದೆ ಎಂಬುದು ಕೃತಿಯೊಂದು ಹೊಂದಬಲ್ಲ ಅಗಾಧ ಸಾಮರ್ಥ್ಯಕ್ಕೆ ಉದಾಹರಣೆ. ಇದಕ್ಕಾಗಿ ಚಂಪಾರಿಗೆ ಮತ್ತೊಂದು ಸಲಾಂ.

ತಂತ್ರಜ್ಞಾನವೊಂದು‌ ಸಮಾಜ ಕಟ್ಟುವ ಬದಲು ಹೊಸಕಿ‌ಹಾಕುವ ಕ್ರಿಯೆಗೆ ಅನುವು‌ಮಾಡಿಕೊಡುವ‌ ಪರಿಯನ್ನು ಚಿತ್ರಿಸುತ್ತಲೇ ಕೊಳಕು ರಾಜಕಾರಣಿಗಳು ‌ಹೇಗೆ ಸಮಾಜ ಕಂಟಕರು ಎಂಬುದನ್ನು ಸಹಜವಾಗಿ ಅದರೊಳಗೆ ಪೋಣಿಸಿದ್ದಾರೆ.

ಆ ಬಾಲ್ಯದಿಂದ ಕಿಶೋರಕ್ಕೆ ಬರುವ ಯೌವನದ ಹೊಸ್ತಿಲಿಗೆ ಇಣುಕುವ ಗೌರಿ, ಸಹಜ ಬೆಳವಣಿಗೆ ಇರದ ಕುಂಠಿತ ಬೆಳವಣಿಗೆಯ ಕಾರಣ ಮುಗ್ದೆ ಕೂಡಾ.  ಪುಟ್ಟ ಮಗುವಿನಂತಿದ್ದ ಆಕೆಯ ಮೆದುಳು  ದೊಡ್ಡ ಚಾಕೊಲೇಟ್ ಆಸೆ ತೋರಿಸಿದಾಗ ಸಹಜವಾಗಿ ಆಕರ್ಷಣೆಗೆ ಒಳಗಾಗುತ್ತಾಳೆ.

ಅವಳನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಳ್ಳುತ್ತಾರೆ ಇಬ್ಬರು ಯುವಕರು.

ಮತ್ತು ಆ ಯುವಕರು ‘ದೊಡ್ಡವರ ಮಕ್ಕಳು’ ಹಾಗಾಗಿಯೇ ಕುಕೃತ್ಯ ಎಸಗುವಾಗಲೇ ಸಿಕ್ಕಿ ಬಿದ್ದರೂ ಶಿಕ್ಷೆಯ ಕುಣಿಕೆಗೆ ಸಿಗಲಾರರು.

ಹಾಗಿದ್ದೂ ವಿಶೇಷ ಚೇತನ ಮಕ್ಕಳ ಮೇಲಿನ ಈ ದೌರ್ಜನ್ಯ ಕ್ಕೆ ಆಕ್ರೋಶಗೊಳ್ಳುವ, ಅವರಿಗಾಗಿಯೇ ‌ವಿಶೇಷ ಕಾಳಜಿಯಿಂದ ಶಾಲೆ ನಡೆಸುವ ವತ್ಸಲಾ ಮೇಡಂ ಗೌರಿಯ ತಾಯಿಯ ಮನ ಒಲಿಸಿ ದೂರು ದಾಖಲಿಸಲು ಪ್ರೇರೇಪಿಸುತ್ತಾಳೆ.

ದೂರು ದಾಖಲು ಮಾಡಿಕೊಳ್ಳುವ ಪೋಲೀಸ್ ಅಧಿಕಾರಿ ಒಬ್ಬ ಮಹಿಳೆಯೇ. ಚಂಪಾ ಅವರನ್ನು ಮಹಿಳಾ ಅಧಿಕಾರಿ ಯಾಗಿ ತಂದಿದ್ದು ಅಕಸ್ಮಿಕ ಎಂದೆನಿಸುವುದಿಲ್ಲ. ಅಲ್ಲಿ ಲಿಂಗ ಸೂಕ್ಷ್ಮ ದ ಮತ್ತೊಂದು ಅಂಶವನ್ನು ಅತ್ಯಂತ ಸಹಜವಾಗಿ ಪೋಣಿಸುತ್ತಾರೆ ಚಂಪಾರವರು.

ಪೊಲೀಸ್ ಇನ್ಸ್‌ಪೆಕ್ಟರ್‌ ಸೀತಾಲಕ್ಷ್ಮಿ ಕೂಡಾ ಬಾಲ್ಯದ ಕಹಿ ಅನುಭವಕ್ಕೆ ಹೊರತಾದವರಲ್ಲ‌. ಹಾಗೆ ಹೇಳುವ ಮೂಲಕ ಪ್ರತಿಯೊಬ್ಬ ಹೆಣ್ಣೂ ಚಿಕ್ಕದೋ ದೊಡ್ಡದೋ ,ಹತ್ತಿರದವರೋ ಅಪರಿಚಿತರೋ  ಒಂದಲ್ಲ ಒಂದು ರೀತಿಯ ಕಿರುಕುಳ ಅನುಭವಿಸಿಯೇ ಇರುತ್ತಾರೆ ಎಂಬುದನ್ನು ದೃಢಪಡಿಸುತ್ತಾರೆ. ಮತ್ತು ಆದ ಗಾಯಕ್ಕೆ ಸಾಂತ್ವನ ದ ಬದಲು ಅದನ್ನು ಮುಚ್ಚಿಟ್ಟು ಮಾನಸಿಕವಾಗಿ ನೊಂದು ಬೆಂದು ಜೀವಮಾನವಿಡೀ ಯಾತನೆ  ಅನುಭವಿಸುವ ಕಥನ ತನ್ನಷ್ಟಕ್ಕೇ ತೆರೆದುಕೊಳ್ಳುತ್ತದೆ.

ಇನ್ನು ಮೊಬೈಲ್ ಎಂಬ ಪುಟ್ಟ ಪೆಟ್ಟಿಗೆ, ಯಶಸ್ಸಿನ ದಾರಿಗೆ ಅನುವು ಮಾಡಿಕೊಟ್ಟಂತೆಯೇ ಪ್ರಪಾತಕ್ಕೆ ಜಾರಿ ಬೀಳಲೂ ರಹದಾರಿಯಾಗಬಲ್ಲುದು. ಅದು ಈ ಕ್ಷಣ ಸುದ್ದಿಯಲ್ಲಿರುವ ಅಳಂದದ ಕ್ರೂರ ಘಟನೆ ಅಪ್ರಾಪ್ತ ಳ ಮೇಲೆ ಪ್ರಾಪ್ತ ವಯಸ್ಸಿಗೆ ಬಂದಿರದ ಬಾಲಕ ಮಾಡಿದ ಅತ್ಯಾಚಾರ ಮತ್ತು ‌ಕೊಲೆ.ಮೊಬೈಲ್ ನಲ್ಲಿ ‘ನೀಲಿ ಚಿತ್ರ’ ವೀಕ್ಷಿಸಿ ಪ್ರಚೋದಿತರಾದರೆಂದು ಹೇಳಿದ ಹಾಗೆ ಈ ಕಥೆಯ ಖಳ‌ನಾಯಕರಲ್ಲಿ ಇಬ್ಬರಾದ ಯುವಕರೂ ಹಾಗೆ ಹಾದಿ ತಪ್ಪಿದವರೆ.

ಜೊತೆಗೆ ಊರಿನ ‘ಪ್ರತಿಷ್ಟಿತರ’ ಮಕ್ಕಳಾದ್ದರಿಂದ ಎಲ್ಲದರಿಂದಲೂ ಬಚಾವ್ ಆಗುವ  ಅವಕಾಶ ಇದ್ದವರು.

ಸೇವಾನಿಷ್ಠರಿಗೆ ಎಲ್ಲಿಯೂ ಕೆಲಸ ಸುಲಭವಲ್ಲ. ಪ್ರಕರಣಕ್ಕೆ ಕೈ ಹಾಕಿದ ಮರು ದಿನವೇ ಇನ್ಸ್ಪೆಕ್ಟರ್ ಸೀತಾಲಕ್ಷ್ಮಿಗೆ ವರ್ಗಾವಣೆ. ಮುಂದೆಲ್ಲ ಯಾರೂ ಊಹಿಸಬಹುದಾದ ಘಟನೆಗಳೇ ಕಥೆಯಲ್ಲೂ.

ಹೆಣ್ಣು ಜೀವಗಳು ತಮ್ಮ ಜೀವ ತೇಯುವ ಪರಿ ಅಲ್ಲಿಯೂ ಉಳಿಸಿಕೊಳ್ಳುವ ‌ಜೀವನ ಪ್ರೀತಿ, ವಾಸ್ತವದ ಅರಿವೇ ಇಲ್ಲದೆಯೆ ತಪ್ಪು ತಪ್ಪು ಕಲ್ಪನೆಗಳನ್ನು ತಮ್ಮೊಳಗೇ ಹುಟ್ಟಿಸಿಕೊಂಡು ನರಳುವ ಬಗೆ, ಆಧುನಿಕ ಕಬಳಿಕೆಯ ಸಂಸ್ಕೃತಿಯ ಸೂಕ್ಷ್ಮ ಅನಾವರಣ ಹೀಗೆ ಹತ್ತಾರು ಸಂಗತಿಗಳು ತಮ್ಮಷ್ಟಕ್ಕೆ ನೇಯ್ದು ಕೊಂಡಂತೆ ಬರಹದ ಶೈಲಿ ಸುಬ್ಬರಾಯನ ಕುಂಟೆ.

ಹೆಸರು ‌ನೋಡಿದಾಗ ಬರುವ ಕಲ್ಪನೆಗೂ, ಒಳ ಪುಟ ಕೊಡುವ ಹತ್ತಾರು ಒಳನೋಟಗಳಿಗೂ ಬಹಳ ವ್ಯತ್ಯಾಸವಿದೆ. ಕುಂಟೆಯೊಂದು ನೀರು ಕೊಡುವ ತಂಪುದಾಣವೂ ಆಗಬಹುದು. ತಪ್ಪು ನಿರ್ಧಾರಗಳ ಕಾರಣದಿಂದ ಕೊಚ್ಚೆಗುಂಡಿಯೂ ಆಗಬಹುದು. ಈ ಸಂಗತಿ ಇಲ್ಲಿನ ಪ್ರತಿ ಘಟನೆಯ ಜೊತೆಗೂ ತಳುಕು ಹಾಕಿಕೊಳ್ಳುತ್ತದೆ.

ಥ್ಯಾಂಕ್ಯು ‌ಚಂಪಾ ಮತ್ತು ಚಿಂತನ‌ ಪ್ರಕಾಶನ.

Donate Janashakthi Media

Leave a Reply

Your email address will not be published. Required fields are marked *