ಚಂಪಾ ಎಂಬ ಮಹಾನ್ ಸಾಹಿತ್ಯಿಕ ಹೋರಾಟಗಾರ

ಜಿ.ಎನ್. ನಾಗರಾಜ್

ಚಂಪಾ ಎಂಬ ಮಹಾನ್ ಸಾಹಿತ್ಯಿಕ ಹೋರಾಟಗಾರರ ನಿಧನ. ಅವರು ಸ್ವತಃ ಒಂದು ಸಾಂಸ್ಕೃತಿಕ ಸಂಸ್ಥೆ. ಜೆ ಪಿ ಚಳುವಳಿಯಲ್ಲಿ ಕ್ರಿಯಾಶೀಲವಾಗಿ ಭಾಗವಹಿಸಿದರು. ತುರ್ತು ಪರಿಸ್ಥಿತಿಯನ್ನು ಖಂಡತುಂಡವಾಗಿ ಖಂಡಿಸಿ ಜೈಲುವಾಸ ಅನುಭವಿಸಿದ ಏಕಮಾತ್ರ ಕನ್ನಡ ಸಾಹಿತಿ ಅವರು.

ಕೋಮುವಾದ ಜಾತಿವಾದ ಹಾಗೂ ಬೇರೆಲ್ಲ ಪ್ರತಿಗಾಮಿಗಳ ವಿರುದ್ಧ ಚಾಟಿ ಬೀಸುತ್ತಿದ್ದ ಪರಿಣಾಮಕಾರಿ ಧ್ವನಿ. ನಾಲ್ಕು ದಶಕಗಳ ಕಾಲ ಕನ್ನಡ ಸಾಹಿತ್ಯಾಗಸವನ್ನು ಆವರಿಸಿದವರು. ಲಂಕೇಶ್, ತೇಜಸ್ವಿ, ಚಂಪಾ ಮೂವರು ಸೇರಿ ಅನೇಕ ಬಿರುಗಾಳಿ ಎಬ್ಬಿಸಿದವರು.

ಬಂಡಾಯ ಸಾಹಿತ್ಯದಲ್ಲಿ ಬರಗೂರು, ಚಂಪಾ ಎರಡು ಮುಖ್ಯ ಸ್ತಂಭಗಳಾಗಿ ಬೆಳೆಸಿದವರು.

ನವ್ಯದ ಮುಖ್ಯ ಸಾಹಿತಿಯಾಗಿ ಬೆಳೆದು ಬಂಡಾಯ ಸಾಹಿತ್ಯದ  ಬಾವುಟ ಎತ್ತಿದವರು. ಅವರ ಕಾವ್ಯ, ನಾಟಕಗಳೂ ಸಾಹಿತ್ಯದಲ್ಲಿ ಗಣನೀಯ ಪರಿಣಾಮ ಬೀರಿದವು. ಅವರ ಟಿಂಗರ ಬುಡ್ಡಣ್ಣ, ಅಪ್ಪ, ಕೊಡೆಗಳು, ಕುಂಟಾ ಕುಂಟಾ ಕುರವತ್ತಿ ನಾಟಕಗಳು ನೋಡುಗರ ಮನದಲ್ಲಿ ವಿಚಾರಶೀಲತೆಯನ್ನು ಬಡಿದೆಬ್ಬಿಸಿದವು. ನಂತರ ನಾಟಕವನ್ನು ತಮ್ಮ‌ ಹರಿತ ವ್ಯಂಗ್ಯದ ಮೂಲಕ ಪ್ರತಿಗಾಮಿ ಪ್ರವೃತ್ತಿಗಳನ್ನು ಲೇವಡಿ ಮಾಡಲು ಪರಿಣಾಮಕಾರಿ ಸಾಧನವಾಗಿಸಿದರು. ಇಂದಿರಾ ಮತ್ತು ತುರ್ತುಪರಿಸ್ಥಿತಿ ವಿರುದ್ಧದ ಜಗದಂಬೆಯ ಬೀದಿ ನಾಟಕ(ಚಂಪಾರಿಗೆ ಜೈಲುವಾಸ ನೀಡಿದ್ದು) ಸಾಯಿಬಾಬಾ ವಿರುದ್ದದ ಬುರುಡೀಬಾಬಾನ ಪವಾಡ, ಅಡಿಗರ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ಲೇವಡಿ ಮಾಡಿದ ನಳಕವಿಯ ಮಹಾ ಮಸ್ತಕಾಭಿಷೇಕ ಅಂದು ಬಹಳ ಜನಪ್ರಿಯವಾಗಿದ್ದ ನಾಟಕಗಳು.

ಅವರ ಕಾವ್ಯ, ನಾಟಕಗಳು ಬಹುಕಾಲ ಕನ್ನಡಿಗರ ಮನದಲ್ಲಿ ಜೀವಂತ.

ಅವರೂ ಸೇರಿದಂತೆ ಮೂವರ ಸಂಪಾದಕತ್ವದಲ್ಲಿ ನವ್ಯದ ಒಂದು ಮುಖವಾಣಿಯಾಗಿ ಆರಂಭವಾದ “ಸಂಕ್ರಮಣ” ನಂತರ ಬಂಡಾಯದ ಆಧಾರ ಸ್ತಂಭವಾಗಿ ಬಹು ದೀರ್ಘ ಕಾಲ ಕನ್ನಡ ಓದುಗರನ್ನು ಹಲವು ವಿಚಾರಗಳ ಮೂಸೆಗೆ ಒಡ್ಡಿ ಬೆಳೆಸಿತು. ಹೊಸ ಸಾಹಿತಿಗಳನ್ನು ಪೋಷಿಸಿತು.

ಅವರೊಡನೆ ನಾನು ಭಾಗವಹಿಸಿದ ಹೋರಾಟಗಳು, ಹಂಚಿಕೊಂಡ ವೇದಿಕೆಗಳೆಷ್ಟು ಲೆಕ್ಕವೇ ಇಲ್ಲ.

1979ರಲ್ಲಿ ನಾನು ಮೊದಲ ಬಾರಿಗೆ ಧಾರವಾಡ ಜಿಲ್ಲೆಗೆ ಅಧಿಕಾರಿಯಾಗಿ ಹೋದ ಕೂಡಲೇ ಮೊದಲು ಭೇಟಿಯಾದ ವ್ಯಕ್ತಿ ಅವರು. ಅವರ ಮನೆಯಲ್ಲಿ ಅವರನ್ನು ಭೇಟಿಯಾದ, ಹಲ ಹಲವು ವಿಷಯಗಳನ್ನು ಚರ್ಚಿಸಿದ ಸವಿ ನೆನಪು.

ನಾನು ಹಿಂದೆಯೇ ಬರೆದಂತೆ ಲೋಹಿಯಾ ಮಾರ್ಕ್ಸ್ ಮತ್ತು ಗಾಂಧಿ ಬಗ್ಗೆ ಬರೆದ ಒಂದು ಪುಸ್ತಕ ನೀಡಿ ಅದರ ಮೂಲಕ ಮಾರ್ಕ್ಸ್‌ರವರ ವಿಚಾರಗಳ ಪರಿಚಯ ಮಾಡಿಸಿದವರು, ನಾನು ಮಾರ್ಕ್ಸ್‌ವಾದಿಯಾಗಲು ಒಂದು ಮುಖ್ಯ ಹಂತ ಅದು. ಸಮಾಜವಾದಿಯಾಗಿದ್ದ ಅವರೊಡನೆ ಹಲವು ಸೈದ್ಧಾಂತಿಕ ಜಗಳ ಮಾಡಿದರೂ ಕೂಡಾ ಮುನಿಸಿಕೊಳ್ಳದೆ ಒಳ್ಳೆಯ ಸಂಬಂಧ ಬೆಳೆಸಿಕೊಂಡವರು. ಕಮ್ಯುನಿಸ್ಟ್ ವಿಚಾರಧಾರೆಯ ಹಲವು ಸಂಘಟನೆಗಳೊಡನೆ ಆಪ್ತ ಸಂಬಂಧ ಇಟ್ಟುಕೊಂಡವರು.

ಇಳಿವಯಸ್ಸಿನಲ್ಲೂ ಪೊಲೀಸರ ನಿರ್ಬಂಧವನ್ನು ಧಿಕ್ಕರಿಸಿ ಅವರು ಭಾಗವಹಿಸಿದ, ಕಲುಬುರ್ಗಿಯವರ ನಿಧನದ ಒಂದು ವರ್ಷದ ನೆನಪಿನಲ್ಲಿ ಮೂರು ದಿನಗಳ ಕಾಲ ಬೆಂಗಳೂರಿನಿಂದ ಧಾರವಾಡದವರೆಗೆ ನಡೆಸಿದ ವಾಹನ ಜಾಥಾ ಆ ಸಂದರ್ಭದಲ್ಲಿ ಅವರ ಮಾತುಗಳು ಅವರ ಬದ್ಧತೆ ಮತ್ತು ಹಿಂಜರಿಯದೆ ಮುನ್ನುಗ್ಗುವ ದೃಡತೆಗೆ ಪುರಾವೆಯಾಗಿದ್ದವು. ಹಾಗೆಯೇ ಗಣಿ ದರೋಡೆಕೋರರ ವಿರುದ್ಧ ನಡೆಸಿದ ಮೂರು ದಿನಗಳ ವಾಹನ ಜಾಥಾ ಅಚ್ಚಳಿಯದ ನೆನಪು.

ಅವರದು ಯಾವಾಗಲೂ ಹೊಸ ವಿಚಾರಗಳ ಬಗ್ಗೆ ತೆರೆದ ಮನಸ್ಸು. ಯಾವುದೇ ವಿಚಾರ ಸಂಕಿರಣಗಳಲ್ಲಿ ಒಬ್ಬ ವಿದ್ಯಾರ್ಥಿಯಂತೆ ಟಿಪ್ಪಣಿ ಮಾಡಿಕೊಳ್ಳುತ್ತಿದ್ದರು.

ಇತ್ತೀಚೆಗೆ ಕಲಬುರ್ಗಿ ಕೊಲೆಯ ನಂತರ ಅವರ ಮೇಲೂ ಹಿಂದೂ ಭಯೋತ್ಪಾದಕರ ಕಣ್ಣಿದೆ ಎಂದರೂ ಹೆದರದೆ, ಪೊಲೀಸರ ಹಾಕುತ್ತಿದ್ದ ನಿರ್ಬಂಧಗಳ ಬಗ್ಗೆ ಕೇರ್ ಮಾಡದೆ ಎಲ್ಲ ಹೋರಾಟಗಳಲ್ಲಿ ಭಾಗವಹಿಸುತ್ತಿದ್ದರು. ವೃದ್ಧಾಪ್ಯದ ದೈಹಿಕ ಸಮಸ್ಯೆ ಮಾತ್ರ ಅವರ ಭಾಗವಹಿಸುವಿಕೆಯನ್ನು ಸೀಮಿತಗೊಳಿಸಿತ್ತು.

ಅವರ ನಿಧನ ಕರ್ನಾಟಕದ ಜನತೆಗೆ, ಸಾಹಿತ್ಯಕ್ಕೆ ಬಹು ದೊಡ್ಡ ನಷ್ಟ.

ನನಗಂತೂ ಒಬ್ಬ ವೈಯುಕ್ತಿಕ ಗೆಳೆಯರನ್ನು ಕಳೆದುಕೊಂಡ ಶೂನ್ಯಭಾವ.

Donate Janashakthi Media

Leave a Reply

Your email address will not be published. Required fields are marked *