ಚಾಮರಾಜಪೇಟೆ ಈದ್ಗಾ ಮೈದಾನ ಕೋಮುದ್ವೇಷದ ಅಗ್ನಿ ಕುಂಡವಾಗಬೇಕೆ?

ಎಸ್.ವೈ. ಗುರುಶಾಂತ್

ವಿವಾದದ ಅಗ್ನಿ ಕುಂಡವೊಂದು ಬೆಂಗಳೂರಿನ ಹೃದಯ ಭಾಗದಲ್ಲಿ ಹೊತ್ತಿ ಉರಿಯುತ್ತಿದೆ. ಅದಕ್ಕೆ ಇತಿಹಾಸ, ಸಾರ್ವಜನಿಕ ಹಿತ, ದೇವರು- ಧರ್ಮ, ದೇಶಭಕ್ತಿಯ ರೆಕ್ಕೆಪುಕ್ಕಗಳೂ ಅಂಟಿಕೊಂಡಿವೆ. ನಾಗರೀಕರ ಸಮಿತಿ, ವಿಶ್ವ ಸನಾತನ ಪರಿಷತ್ ಸಂಘಗಳು ಪ್ರತಿಭಟನೆ, ಮೆರವಣಿಗೆ, ಬಂದ್ ಮತ್ತು ಇತ್ಯರ್ಥವಾಗದಿದ್ದರೆ ಪ್ರಾರ್ಥನಾ ಗೋಡೆಯನ್ನೇ ಧ್ವಂಸಗೊಳಿಸುವ ಎಚ್ಚರಿಕೆಗಳ ಘರ್ಜನೆಗಳ ಗುಂಡುಗಳೂ ಸಿಡಿಯುತ್ತಿವೆ. ಈ ಎಲ್ಲಾ ವರಸೆಗಳನ್ನು ನೋಡುತ್ತಿದ್ದರೆ ಸ್ವಾತಂತ್ರ್ಯೋತ್ಸವದ ಹೊತ್ತಿಗೆ ಏನಾದರೂ ಒಂದು ಅನಾಹುತ ಸಂಭವಿಸಿಯೇ ತೀರಬಹುದು ಎನ್ನುವುದು ಅರ್ಥವಾಗದೇ ಇರದು! ಪೋಲೀಸರ ಬಂದೋಬಸ್ತಿನ ಪ್ರದರ್ಶನ ಬಿಟ್ಟರೆ ವಿವಾದದ ಹುಸಿತನಗಳನ್ನು ತುಂಡರಿಸುವ ಯಾವ ಕೆಲಸವನ್ನೂ ರಾಜ್ಯ ಸರಕಾರ ಮಾಡುತ್ತಿಲ್ಲ. ಬಿ.ಬಿ.ಎಂ.ಪಿ ಆಡಳಿತ ಅಧಿಕಾರಿಗಳು ಆರಂಭದಲ್ಲಿ ಸತ್ಯ ತೆರೆದಿಡುವ ಯತ್ನ ಮಾಡಿದರಾದರೂ ಅಧಿಕಾರದ ಬಲ ಮತ್ತು ಆರೋಪಗಳ ಸುರಿಮೊಳೆಗಳಿಂದ ಬಾಯಿಗೆ ಬೀಗ ಜಡಿದಂತಾಗಿದೆ! ಈಗ ‘ದ್ವೇಷ ಭಕ್ತ’ ರದ್ದೇ ಅಬ್ಬರ!

ಚಾಮರಾಜಪೇಟೆಯಲ್ಲಿರುವ ಈದ್ಗಾ ಮೈದಾನವೆಂದೇ ಎಲ್ಲರೂ ಕರೆಯುತ್ತಿರುವ ಮೈದಾನವೊಂದು ಇದೀಗ ಮತ್ತೇ ಹುಬ್ಬಳ್ಳಿ ಈದ್ಗಾ ವಿವಾದದಂತೆ ಕೆರಳಿದರೆ ಆಶ್ಚರ್ಯವಿಲ್ಲ. ಆರಂಭದಲ್ಲಿ ಸದ್ದು ಮಾಡಿದ ಸಂಘಪರಿವಾರದ ಪುಂಗಿಗೆನಿಧಾನವಾಗಿಯಾದರೂ ತಲೆದೂಗುವವರ ಸಂಖ್ಯೆ ಹೆಚ್ಚಿದಂತೆ ಈಗ ಅದರ ಅಬ್ಬರ ಹೆಚ್ಚಾಗಿದೆ. ಬಂದ್ ನಂತಹ ಆಟಾಟೋಪಕ್ಕೆ ಬಲ ದೊರೆತಂತೆಯೂ ಕಾಣುತ್ತಿರುವುದರಿಂದ ಜನರನ್ನು ನಿಧಾನವಾಗಿ ಮೈದಾನದ ವಿವಾದದಿಂದ ಮತೀಯ ವಿಭಜನೆಯತ್ತ ವಿವಾದವನ್ನು ಬೆಳೆಸುವುದೂ ಹೆಚ್ಚಿದೆ. ನಿಜಕ್ಕೂ ಸಾರ್ವಜನಿಕರು ಕೆರಳಿ ಕದನವಾಡುವಂತಹ ವಿವಾದವಿದೆಯೇ ಅಲ್ಲಿ?

ಹಿಂದುಗಳ ಹೆಸರಿನಲ್ಲಿ ಕೆಲವು ಆರೆಸ್ಸೆಸ್ ಪರಿವಾರ ಈದ್ ಪೂರ್ವದಲ್ಲಿ ಈ ಜಾಗ ಸಾರ್ವಜನಿಕರಿಗೆ ಸೇರಿದ್ದು ಎಂದು ಪ್ರತಿಪಾದನೆ ಆರಂಭಿಸಿತು. ಅಲ್ಲಿ ಗಣೇಶ ಉತ್ಸವ ಒಳಗೊಂಡು ಹಿಂದುಗಳ ಉತ್ಸವಗಳಿಗೆ ಜಾಗ ಕೊಡಬೇಕೆಂದೂ ಆಗ್ರಹಿಸಿತು. ದಾಖಲೆಗಳನ್ನು ಆಧರಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಯುಕ್ತರು ಇದು ವಕ್ಫ್ ಬೋರ್ಡಿನ ಆಸ್ತಿಯಾಗಿದೆ ಎಂದು ಸುಪ್ರಿಂ ಕೋರ್ಟ್ ಇತ್ಯರ್ಥ ಪಡಿಸಿದ ಮೊಕದ್ದಮೆಯ ತೀರ್ಪು ಅದರ ನಿರ್ದೇಶನವನ್ನು ತಿಳಿಸಿದರು. ಇದರಿಂದ ಕುಪಿತರಾದ ಬಿಜೆಪಿ ಮುಖಂಡರು ಆಯುಕ್ತರ ಚಾರಿತ್ರ್ಯ ಹರಣ ಮಾಡುವಂತೆ ಆರೋಪದ ಧಾಳಿ ನಡೆಸಿದರು. ನ್ಯಾಯಾಲಯದ ತೀರ್ಪು ಅನುಸರಿಸಿ ವಕ್ಫ್ ಬೋರ್ಡ್ ಪಾಲಿಕೆಯ ಮುಂದೆ ಖಾತೆ ಮಾಡುವಂತೆ ದಾಖಲೆಗಳನ್ನು ಸಲ್ಲಿಸದೇ ಇರುವುದರಿಂದ ಅದು ಪಾಲಿಕೆಯ ಸುಪರ್ದಿನಲ್ಲಿದೆ ಎಂದಿದ್ದರು. ಬಿಜೆಪಿ- ಸಂಘಪರಿವಾರದ ಒತ್ತಡ, ಅಬ್ಬರ ಹೆಚ್ಚಿದಂತೆ ಆಯುಕ್ತರ ಧ್ವನಿಯೂ ಕೇಳಿಸದಾಯಿತು.

ಮುಸ್ಲಿಮರಿಗೆ ಪ್ರಾರ್ಥನೆ ಮತ್ತು ಸ್ಮಶಾನ ಮುಂತಾದದ ಉದ್ದೇಶಗಳಿಗೆಂದು ತುಂಬಾ ಹಿಂದೆ ಮೈಸೂರಿನ ಅರಸರಾಗಿದ್ದ ಒಡೆಯರ್ ರವರು 10 ಎಕರೆಗೂ ಹೆಚ್ಚು ಭೂಮಿಯನ್ನು ನೀಡಿತ್ತು. ಅದರ ಸರ್ವೇ ನಂಬರ್ 40. 1965 ರಲ್ಲಿ ವಕ್ಫ್ ಬೋರ್ಡ್ ಇದನ್ನು ತಮ್ಮ ಸ್ವಾಧೀನದ ಆಸ್ತಿಯಾಗಿ ಗೆಜೆಟ್ಟನ್ನು ಹೊರಡಿಸಿತು. ಮುಸ್ಲಿಂ ಸೆಂಟ್ರಲ್ ಬೋರ್ಡ್ ಇದನ್ನು ನಿರ್ವಹಿಸುವುದಾಗಿಯೂ ಹೇಳಿತು.

ಈ ಜಮೀನಿನ ಒಡೆತನದ ವಿವಾದ 1950ರ ದಶಕದಿಂದಲೇ ಇದೆ. 1952 ರಲ್ಲಿ ರುಕ್ನ ಉಲ್ ಮುಲ್ಕ್ ಅಬ್ದುಲ್ ವಾಜಿದ್ ಎನ್ನುವವರು ಮುಸ್ಲಿಂರ ಪರವಾಗಿ ಸಿವಿಲ್ ಕೋರ್ಟಿನಲ್ಲಿ ಈ ಜಾಗ ಮುಸ್ಲಿಮರಿಗೆ ಸೇರಿದ್ದು ಎಂದು ದಾವೆ ಹೂಡುತ್ತಾರೆ. ಸರ್ವೇ ನಂಬರ್ 40 ಈ ಭೂಮಿ ನಿರಂತರ ಮುಸ್ಲಿಂ ಸಮುದಾಯದ ಉಪಯೋಗಕ್ಕೆ ಇದೆ ಎಂದು ವಾದಿಸಲಾಗಿತ್ತು. ಕೋರ್ಟ್ ಗೆ ಹೋಗಲು ಮುಖ್ಯ ಕಾರಣ ಅಂದಿನ ಬೆಂಗಳೂರು ಕಾರ್ಪೋರೇಷನ್ ಸರ್ವೆ ನಂ.40 ರಲ್ಲಿ ಹೊಸ ಕಟ್ಟಡ ಕಟ್ಟಲು ಬುನಾದಿಯನ್ನು ತೆಗೆಯಲು ಆರಂಭಿಸುತ್ತದೆ. ಇದನ್ನು ಆಕ್ಷೇಪಿಸಿ ಮುಸ್ಲಿಂ ಸಮುದಾಯದ ಪರವಾಗಿ ನ್ಯಾಯಾಲಯಕ್ಕೆ ಹೋಗಲಾಗುತ್ತದೆ. ಆದರೆ ಸೆಕೆಂಡ್ ಮುನ್ಸಿಫ್ ರವರು ಇವರ ಮನವಿಯನ್ನು ತಿರಸ್ಕರಿಸುತ್ತಾರೆ. ಆ ಬಳಿಕ ಮೇಲಿನ ನ್ಯಾಯಾಲಯಕ್ಕೆ ಹೋದ ನಂತರ ಸಿವಿಲ್ ಜಡ್ಜ್ ಇವರ ಮನವಿಯನ್ನು ಪುರಸ್ಕರಿಸುತ್ತಾರೆ. ಇದನ್ನು ಪ್ರಶ್ನಿಸಿ ನಗರ ಕಾರ್ಪೊರೇಷನ್ ಮಾರ್ಚ್ 20, 1957ರಂದು ಮೈಸೂರು ಹೈಕೋರ್ಟಿಗೆ ಮನವಿ ಸಲ್ಲಿಸುತ್ತದೆ. ಆದರೆ ಹೈಕೋರ್ಟ್ ನಲ್ಲಿ ಅದಕ್ಕೆ ಪರವಾಗಿ ತೀರ್ಪು ಸಿಗುವುದಿಲ್ಲ. ಮತ್ತೆ ಕಾರ್ಪೊರೇಷನ್ ಸುಪ್ರೀಂಕೋರ್ಟಿಗೆ ಮನವಿ ಸಲ್ಲಿಸುತ್ತದೆ. ಜನವರಿ 27, 1964 ರಂದು ಸುಪ್ರೀಂಕೋರ್ಟ್ ಅರ್ಜಿಯನ್ನು ವಜಾ ಗೊಳಿಸಿತು. ಈ ಪ್ರಕರಣದಲ್ಲಿ ಬೆಂಗಳೂರು ಕಾರ್ಪೊರೇಷನ್ ವಾದ ಏನಾಗಿತ್ತು ಎಂದರೆ ಈ ಮೈದಾನದಲ್ಲಿ ಪ್ರಾರ್ಥನಾ ಸ್ಥಳ ಪ್ಲಾಟ್ ಫಾರಂ-ಮಿಂಬರ್ ನಲ್ಲಿ ಮಾತ್ರ ಪ್ರಾರ್ಥನೆ ನಡೆಯುತ್ತಿದ್ದವು. ಅದರಾಚೆ ಮೈದಾನದಲ್ಲಿ ಅಲ್ಲ ಎಂಬುದು ಕಾರ್ಪೊರೇಷನ್ ವಾದವಾಗಿತ್ತು. ಅಲ್ಲದೆ ಫುಟ್ಬಾತ್, ಸಾರ್ವಜನಿಕ ನೀರಿನ ನಲ್ಲಿ, ಪುರಸಭೆ ಟ್ಯಾಂಕ್ ಮತ್ತು ಆಟದ ಮೈದಾನ ಇರುವುದರಿಂದ ಅದರ ಮಾಲೀಕತ್ವ ಕಾರ್ಪೊರೇಷನ್ ನದು ಎಂದೂ ವಾದಿಸಿತ್ತು. ಈ ವಾದವನ್ನು ಸರ್ವೋಚ್ಚ ನ್ಯಾಯಾಲಯದ ಇಬ್ಬರ ನ್ಯಾಯಾಧೀಶರ ಪೀಠ ತಿರಸ್ಕರಿಸಿತು. ಅದು ತನ್ನ ತೀರ್ಪಿನಲ್ಲಿ ಕಾರ್ಪೊರೇಷನ್ ಯಾವುದೇ ನಕಾಶೆಯಾಗಲೀ, ದಾಖಲೆಗಳು ಅಥವಾ ದಸ್ತಾವೇಜುಗಳನ್ನು ಸಲ್ಲಿಸಿಲ್ಲ. ಆದರೆ ಮುಸ್ಲಿಮರ ಪರವಾಗಿ ನೀಡಿದ ದಾಖಲೆಗಳು ಇದನ್ನು ಈದ್ಗಾ ಎನ್ನಲು 1938 ರ ದಸ್ತಾವೇಜುಗಳು, ಸ್ಮಶಾನ ಭೂಮಿ ಎನ್ನಲು 1871 ರ ದಾಖಲೆಗಳನ್ನು ನೀಡಿದೆ. ಹೀಗಾಗಿ ಕಾರ್ಪೊರೇಷನ್ ನ ಅರ್ಜಿಯನ್ನು ವಜಾ ಮಾಡಿತು. ಮತ್ತು ಅದಕ್ಕೆ ದಂಡವನ್ನು ಕಟ್ಟಬೇಕು ಎಂದು ತಿಳಿಸಿತ್ತು. ಇದೇ ಸಂದರ್ಭದಲ್ಲಿ ಈ ಮೈದಾನ ಸಾರ್ವಜನಿಕರು ವಾಸ ಮಾಡುವ ಪ್ರದೇಶವಾಗಿರುವುದರಿಂದ ಗೋರಿಪಾಳ್ಯದಲ್ಲಿ ಬಡ ಈದ್ಗಾ ಜಮೀನನ್ನು ಪರ್ಯಾಯವಾಗಿ ನೀಡಿತು.

ಈಗ ಪ್ರತಿಭಟಿಸುತ್ತಿರುವವರು ಪ್ರಶ್ನಿಸುತ್ತಿರುವುದು ಇದನ್ನೇ ಈಗಾಗಲೇ ಬೇರೊಂದು ಪರ್ಯಾಯ ಜಾಗವನ್ನು ಕೊಟ್ಟಿರುವುದರಿಂದ ಇಲ್ಲಿ ಪ್ರಾರ್ಥನೆ ಮಾಡುವ ಹಕ್ಕು ಇಲ್ಲ ಅವಕಾಶವೂ ಇಲ್ಲ ಎಂದು ಹೇಳಲಾಗುತ್ತಿದೆ. 2019 ರ ಫೆಬ್ರವರಿಯಲ್ಲಿ ಬಿ.ಬಿ.ಎಂ.ಪಿ.ಯು ಚಾಮರಾಜಪೇಟೆ ಡಿವಿಷನ್ ಈ ಮೈದಾನದಲ್ಲಿರುವ ಮಿನಾರ್ ಗೆ ಅಂದರೆ 941 ಚದರ ಅಡಿಗೆ ಮುಸ್ಲಿಂ ದರ್ಗಾ (ಎಚ್) ಎಂದು ಖಾತಾ ಸರ್ಟಿಫಿಕೇಟ್ ನ್ನು ನೀಡಿದೆ.

ಈ ಎಲ್ಲಾ ಅಂಶಗಳನ್ನು ಗಮನದಲ್ಲಿರಿಸಿದಾಗ ಈ ಪ್ರಶ್ನೆ ಅಥವಾ ವಿವಾದ ಬಿಬಿಎಂಪಿ ಮತ್ತು ಬೋರ್ಡಿನ ನಡುವೆ ಇರುವಂತದ್ದಾಗಿದೆ. ಮತ್ತು ಸ್ಪಷ್ಟವಾಗಿ ಇದು ಬಿಬಿಎಂಪಿ ಸ್ವತ್ತು ಎನ್ನಲು ಸಮರ್ಥವಾದ ದಾಖಲೆಗಳು, ನ್ಯಾಯಾಲಯದ ತೀರ್ಪುಗಳೂ ಇದ್ದಂತಿಲ್ಲ. ಹಾಗೆಯೇ ವಕ್ಫ್ ಬೋರ್ಡ್ ಇದನ್ನು ತನ್ನದು ಎಂದು ತನ್ನ ಸ್ವಾಧಿನದಲ್ಲಿ ಇರಿಸಿಕೊಂಡಿರುವುದು ಇಲ್ಲ. ಈ ಜಾಗಕ್ಕೆ ಫೆನ್ಸಿಂಗ್ ಹಾಕಬೇಕೆಂದು ಮಂಡಳಿ ಮುಂದಾದಾಗ ಸಾರ್ವಜನಿಕರ ವಿರೋಧವಿದೆ, ಸೂಕ್ಷ್ಮ ವಿಚಾರ ಎಂದು ಬಿ.ಬಿ.ಎಂ.ಪಿ. ತಡೆದಿರುವ ನಿದರ್ಶನಗಳಿವೆ ಎನ್ನಲಾಗುತ್ತಿದೆ. ಆದರೆ ಒಡೆತನದ ಪ್ರಶ್ನೆ ಒಂದು ಮಟ್ಟಿನಲ್ಲಿ ವಕ್ಫ್ ಕಡೆ ಇರುವಂತೆ ಕಾಣುತ್ತದೆ. ಇಂತಹ ಒಂದು ಪ್ರದೇಶದಲ್ಲಿ ಮತಿಯವಾದಿ ಸಂಘಟನೆಗಳು ಅದನ್ನು ಒಂದು ವಿವಾದವಾಗಿ ಬೆಳೆಸುತ್ತಿರುವ ಮತ್ತು ಬಳಸುತ್ತಿರುವ ಹಿತಾಸಕ್ತಿ ಬಹಳ ಪ್ರಮುಖವಾಗಿದೆ ಎನಿಸುತ್ತದೆ.

ಈಗಲೂ 1964 ರ ಸುಪ್ರೀಂಕೋರ್ಟ್ ತೀರ್ಪನ್ನು ಪ್ರಶ್ನೆ ಮಾಡಲಾಗುವುದೇ ಎಂದರೆ ಒಂದೆಡೆ ವಕ್ಫ್  ಮಂಡಳಿಯಿಂದ ನಕಾರಾತ್ಮಕ ಉತ್ತರ ಬಂದಿರುವುದಾಗಿ ಮಾಧ್ಯಮಗಳು ತಿಳಿಸುತ್ತವೆ. ಹಾಗೆಯೇ ಈ ವಾಸ್ತವಗಳ ಎದುರಿನಲ್ಲಿ ಬಿಬಿಎಂಪಿಯು ನಿಖರ ಉತ್ತರ ನೀಡಲು ಸಿದ್ಧವಿಲ್ಲ. ಹಾಗೆ ನೋಡಿದರೆ, ಸೆಂಟ್ರಲ್ ಮುಸ್ಲಿಂ ಬೋರ್ಡ್ ಸಹ ಇಡೀ ಮೈದಾನದ ಮೇಲಿನ ಸ್ವಾಧೀನತೆ ಪ್ರಾಯೋಗಿಕವಾಗಿ ಹೊಂದಿಲ್ಲ. ಬೇಲಿಯೂ ಹಾಕಿಲ್ಲ. ಬಿಬಿಎಂಪಿ ಯವರು ಅದನ್ನು ಗುಡಿಸುತ್ತಾರೆ, ಮಕ್ಕಳು ಆಟವಾಡುತ್ತಾರೆ. ಉಳಿದವರು ಕುರಿ ಮಾರಾಟ ಇತ್ಯಾದಿಗಳಿಗೆ ಬಳಸುತ್ತಾರೆ. ವಾಸ್ತವದಲ್ಲಿ 10.5 ಎಕರೆಗಿಂತಲೂ ಹೆಚ್ಚಾಗಿದ್ದ ಈ ಜಮೀನು ಇದೀಗ ಕೇವಲ 2.10 ಎಕರೆಗೆ ಸೀಮಿತಗೊಂಡಿದೆ. ಉಳಿದಂತೆ ಬಹುತೇಕ ಇತರರು ಅದನ್ನು ಆತಿಕ್ರಮಿಸಿ ಕೊಂಡಿದ್ದಾರೆ. ಕರ್ನಾಟಕ ವಕ್ಫ್ ಮಂಡಳಿಯ ಲಕ್ಷಾಂತರ ಕೋಟಿ ರೂಪಾಯಿಗಳ ಆಸ್ತಿಯು ಹೇಗೆಲ್ಲಾ ನಿರುಪಯೋಗಿ, ದುರುಪಯೋಗಿ ಅಥವಾ ಇತರರ ಸುಪರ್ದಿನಲ್ಲಿದೆ ಎನ್ನುವುದನ್ನು ನೆನಪಿಸಿಕೊಳ್ಳಬಹುದು.

ಸಾಧಾರಣವಾಗಿ ಈ ಮೈದಾನವನ್ನು ರಂಜಾನ್, ಈದ್ ನಂತಹ ಮುಸ್ಲಿಮರ ಧಾರ್ಮಿಕ ಹಬ್ಬಗಳ ಸಂದರ್ಭದಲ್ಲಿ ಪ್ರಾರ್ಥನೆಗೆ ಬಳಸುವುದರ ಹೊರತಾಗಿ ಉಳಿದಂತೆ ಕುರಿ ವ್ಯಾಪಾರ, ಮಕ್ಕಳ ಆಟೋಟ ಮುಂತಾದವಕ್ಕೆ ಬಳಸುವುದು ರೂಢಿ. ಹೀಗಿರುವಾಗ ವಕ್ಫ್ ಬೋರ್ಡ್ ಮೈದಾನಕ್ಕೆ ಕಂಪೌಂಡ್ ಕಟ್ಟಿಲಿದ್ದಾರೆಂದೂ, ಅದು ತಮ್ಮ ವಹಿವಾಟುಗಳಿಗೆ ಅಡ್ಡಿಯಾಗುವುದೆಂದೂ ಸುದ್ದಿ ಇದ್ದು ಅದು ಸ್ಥಳೀಯರಲ್ಲಿ ಮತ್ತು ಗ್ರಾಮಗಳಿಂದ ಬರುವ ಕುರಿ ಸಾಕಾಣಿಕೆಯ ರೈತರಲ್ಲಿಯೂ ಆತಂಕವನ್ನು ಉಂಟು ಮಾಡಿದೆ ಎಂದು ಹೇಳಲಾಗುತ್ತಿದೆ. ಇವಕ್ಕೆಲ್ಲಾ ಪರ್ಯಾಯ ಜಾಗ ಕಲ್ಪಿಸಲು ಅಸಾಧ್ಯವಾದುದೇನಲ್ಲ.ಒಂದು ವೇಳೆ ಆಕ್ಷೇಪಣೆ ಏನಾದರೂ ಬರಬೇಕಿದ್ದರೆ ಅದು ಬಿಬಿಎಂಪಿಯಿಂದ ಬರಬೇಕಿತ್ತು ಅಷ್ಟೆ.

ಈಗಾಗಲೇ ಆ ಪ್ರದೇಶದಲ್ಲಿ ಅತ್ಯಂತ ವ್ಯವಸ್ಥಿತವಾಗಿ ಈಗ ಮೈದಾನದ ಒಡೆತನದ ಪ್ರಶ್ನೆಯನ್ನು ವಿವಾದವಾಗಿಸಿ ಮುಸ್ಲಿಮರ ವಿರುದ್ಧ, ಹಿಂದು ಮುಸ್ಲಿಮರ ಪ್ರಶ್ನೆ ಎಂಬಂತೆ ಬಿಂಬಿಸಿ ಕೋಮು ದ್ವೇಷದ ಕಡೆಗೆ ವಾಲಿಸಿ ವ್ಯವಸ್ಥಿತವಾಗಿ ಪ್ರಚಾರ ನಡೆಸುತ್ತಿದ್ದಸಂಘ ಪರಿವಾರ ಮುಂದೆ ಅದನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಬಂದ್ ನ್ನು ಕೂಡ ನಡೆಸಿತು. ಈ ಚಟುವಟಿಕೆಗಳ ಪ್ರತಿ ಹಂತದಲ್ಲೂ ಆ ಪ್ರದೇಶದಲ್ಲಿ ಚಾಮರಾಜಪೇಟೆ ಕ್ಷೇತ್ರದಲ್ಲಿ ಶಾಸಕರಾಗಿರುವ ಜಮೀರ್ ಅಹ್ಮದ್ ಅವರ ವಿರುದ್ಧವೂ ಗುರಿಯಿಟ್ಟು ವಾಗ್ದಾಳಿಗಳನ್ನು ನಡೆಸಿ ಮುಂಬರುವ ಚುನಾವಣೆಯ ತಂತ್ರಕ್ಕೆ ಇದನ್ನು ಬೆಸೆದದ್ದೂ ಆಗಿದೆ.

ಇದು ಹಿಂದೆ ಮೈಸೂರಿನ ಅರಸರಾದ ಒಡೆಯರ್ ಅವರು ಮುಸ್ಲಿಮರಿಗೆ ಪ್ರಾರ್ಥನೆ ಮಾಡಲು ಕೊಟ್ಟ ಈ ಜಾಗದ ಪ್ರಶ್ನೆ ವಿವಾದವಾಗಿ ಸಮಾಜದಲ್ಲಿ ಜನರನ್ನು ಎತ್ತಿ ಕಟ್ಟುವ ಹಿಂಸಾ ಕೃತ್ಯಗಳಿಗೆ ಎಳೆಸುವುದು ಅಗತ್ಯವಿದೆಯೇ? ಆಗಸ್ಟ್ 15 ರ ಒಳಗೆ ಇತ್ಯರ್ಥ ಗೊಳಿಸದಿದ್ದರೆ ಅಲ್ಲಿರುವ ಪ್ರಾರ್ಥನಾ ಕಟ್ಟಡವನ್ನೇ ಧ್ವಂಸಗೊಳಿಸುವುದಾಗಿ ಹಿಂದುತ್ವವಾದಿಗಳು ಹೇಳುತ್ತಿರುವುದರ ಅರ್ಥವೇನು? ಯಾವುದೇ ಆಸ್ತಿ ಒಡೆತನದ ವಿವಾದಗಳಿಗೆ ನಾಗರಿಕ ಸಮಾಜದಲ್ಲಿ ಕಾನೂನಾತ್ಮಕ ವಿಧಿ ವಿಧಾನಗಳಿವೆ. ಸಮಾಜದ ಒಟ್ಟು ಸ್ವಾಸ್ತ್ಯವನ್ನು ಗಮನದಲ್ಲಿರಿಸಿ ಸಹಮತದಿಂದ ನಡೆದುಕೊಂಡು ಹೋಗಬೇಕಾದ ವಿವೇಕ ಕೂಡ ಸಹಜ ನ್ಯಾಯವಾಗಿ ಇದೆ.ಈಗಲೂ ಬೆಂಗಳೂರು ಒಳಗೊಂಡಂತೆ ರಾಜ್ಯದ ಅನೇಕ ಕಡೆಗಳಲ್ಲಿ ಸಾರ್ವಜನಿಕ-ಸರಕಾರಿ ಸ್ಥಳಗಳಲ್ಲಿ ಇದ್ದಕ್ಕಿದ್ದಂತೆ ಮಂದಿರಗಳು ಉದ್ಭವವಾಗಿ ರಾಷ್ಟ್ರೀಯ ಹೆದ್ದಾರಿಯನ್ನು, ನಗರಗಳ ಹೃದಯ ಭಾಗದಲ್ಲಿರುವ ಮೈದಾನಗಳನ್ನೂ ಆತಿಕ್ರಮಿಸಿ ಕೊಂಡಿರುವ ಅನೇಕ ನಿದರ್ಶನಗಳು ಕಣ್ಣೆದುರುಗಡೆ ಇವೆ. ಇವಾವುದನ್ನೂ ತಪ್ಪು ಎಂದು ಭಾವಿಸದ ಸಂಘ ಪರಿವಾರ ಇಷ್ಟು ದೊಡ್ಡ ಪ್ರಮಾಣದಲ್ಲಿ ವಿದ್ವೇಷದ ಕೃತ್ಯಗಳಿಗೆ ತೊಡಗುವುದಕ್ಕೆ ಏನಾದರೂ ವಿವೇಕಯುತ ಅರ್ಥವಿದೆಯೇ? ಇವರಿಗೆ ಧರ್ಮವನ್ನು ಕಾಯುವ ನಿಜವಾದ ಇಚ್ಛೆ ಇದೆಯೇ? ಇಂತಹ ವಿಭಜನಕಾರೀ ಹುಚ್ಚಾಟಗಳ ಬಗ್ಗೆ ಸಾರ್ವಜನಿಕರು ಸಮ ಚಿತ್ತದಿಂದ ಯೋಚಿಸಬೇಕು.

Donate Janashakthi Media

Leave a Reply

Your email address will not be published. Required fields are marked *