ಬೆಂಗಳೂರು: ಭಾರತದ ಕಮ್ಯುನಿಸ್ಟ್ ಮಹಿಳಾ ಚಳವಳಿಯ ಧೀಮಂತರಲ್ಲಿ ಒಬ್ಬರಾಗಿದ್ದ ಮತ್ತು ಜನವಾದಿ ಮಹಿಳಾ ಸಂಘಟನೆಯ ಸಂಸ್ಥಾಪಕ ನಾಯಕಿ ಮಲ್ಲು ಸ್ವರಾಜ್ಯಂ ಅವರ ನಿಧನಕ್ಕೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ(ಎಐಡಿಡಬ್ಲ್ಯೂಎ), ಕರ್ನಾಟಕ ರಾಜ್ಯ ಸಮಿತಿಯು ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಪ್ರಕಟಣೆಯನ್ನು ನೀಡಿರುವ ಎಐಡಿಡಬ್ಲ್ಯೂಎ ಸಂಘದ ರಾಜ್ಯ ಅಧ್ಯಕ್ಷೆ ದೇವಿ ಅವರು ಶ್ರಮಜೀವಿಗಳು ಮತ್ತು ವಿಶೇಷವಾಗಿ ಕಾರ್ಮಿಕ ಮಹಿಳೆಯರ ವಿಮೋಚನೆಯ ಆದರ್ಶಕ್ಕಾಗಿ ಮಲ್ಲು ಸ್ವರಾಜ್ಯಂ ಅವರು ತಮ್ಮ ಜೀವವನ್ನೇ ಮುಡುಪಾಗಿಟ್ಟವರು. ಅವರ ಗೌರವಾರ್ಥ ನಾವು ನಮ್ಮ ಬಾವುಟವನ್ನು ಕೈಯಲ್ಲಿ ಹಿಡಿದು ತಲೆಬಾಗುತ್ತೇವೆ ಎಂದು ತಿಳಿಸಿದ್ದಾರೆ.
ಮಲ್ಲು ಸ್ವರಾಜ್ಯಂ ರವರು 1930-31ರಲ್ಲಿ ತೆಲಂಗಾಣ ಪ್ರದೇಶದ ಸೂರ್ಯಪೇಟ್ ನ ಸಣ್ಣ ಜಮೀನುದಾರರ ಕುಟುಂಬದಲ್ಲಿ ಜನಿಸಿದರು. ಆ ಸಮಯದಲ್ಲಿ ಅದು ನಿಜಾಮ ಆಳ್ವಿಕೆಯ ಹೈದರಾಬಾದ್ ರಾಜ್ಯದ ಭಾಗವಾಗಿತ್ತು. ಮಲ್ಲು ಸ್ವರಾಜ್ಯಂ ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡವರು. ಗಾಂಧೀಜಿಯವರ ಉಪ್ಪಿನ ಸತ್ಯಾಗ್ರಹದ ಕುರಿತು ಕೇಳಿದ್ದ ಅವರ ತಾಯಿ ಅವರಿಗೆ ‘ಸ್ವರಾಜ್ಯಂ’ ಎಂದು ಹೆಸರಿಟ್ಟರು. ತಾಯಿಯ ಆಶ್ರಯದಲ್ಲಿ ಬೆಳೆದರು. ಆಕೆಯ ಹಿರಿಯ ಸಹೋದರನ ಪ್ರಭಾವದಿಂದ ಆಕೆ ತನ್ನ ಹದಿಹರೆಯದ ವಯಸ್ಸಿನಲ್ಲಿಯೇ ಆಂಧ್ರ ಮಹಿಳಾ ಸಭಾದ ಮೂಲಕ ಸ್ವಾತಂತ್ರ್ಯ ಚಳವಳಿಯ ಚಟುವಟಿಕೆಗಳಿಗೆ ಸೆಳೆಯಲ್ಪಟ್ಟವರು. ಅಲ್ಲಿ ದೈಹಿಕ ತರಬೇತಿಯ ಹೊರತಾಗಿ ಅವರು ರಾಜಕೀಯದ ಮೊದಲ ಪಾಠಗಳನ್ನು ಪಡೆದರು.
ಇದನ್ನು ಓದಿ: ವೀರ ತೆಲಂಗಾಣ ಹೋರಾಟದ ಕ್ರಾಂತಿ ಕಿರಣ ಮಲ್ಲು ಸ್ವರಾಜ್ಯಂ ಇನ್ನಿಲ್ಲ
ಆ ಸಮಯದಲ್ಲಿ ಬಲವಂತದಿಂದ ಕೆಲಸ ಮಾಡಿಸುತ್ತಿದ್ದ ಪದ್ಧತಿಯ ವಿರುದ್ಧ ರೈತ ಚಳುವಳಿ ಪ್ರಾರಂಭವಾಗಿತ್ತು. ನಿಜಾಮನ ನಿರಂಕುಶ, ಜನವಿರೋಧಿ ಆಡಳಿತದ ವಿರುದ್ಧವಾಗಿ ರೂಪುಗೊಂಡ ಆಂಧ್ರ ಮಹಾಸಭಾ ಹೆಸರಿನ ವೇದಿಕೆಯನ್ನು ಕಮ್ಯುನಿಸ್ಟರು ಪ್ರಾರಂಭಿಸಿದರು. ನಿಜಾಮರ ಆಳ್ವಿಕೆಯಲ್ಲಿ ಪ್ರಚಲಿತದಲ್ಲಿದ್ದ ದಬ್ಬಾಳಿಕೆಯ ಊಳಿಗಮಾನ್ಯ ಪದ್ಧತಿಗಳ ವಿರುದ್ಧ ರೈತ ಹೋರಾಟದ ಕೇಂದ್ರವಾಗಿ ಅದು ಮುಂದೆ ಮಾರ್ಪಟ್ಟಿತು. ಆಂಧ್ರ ಮಹಿಳಾ ಸಭಾ ಇದರ ಅಂಗವಾಗಿತ್ತು.
1944ರ ಹೊತ್ತಿಗೆ ಭೂಮಾಲೀಕರು ಮತ್ತು ರೈತರ ನಡುವಿನ ಘರ್ಷಣೆಗಳು ತೀವ್ರಗೊಂಡು ಹೋರಾಟವನ್ನು ಉತ್ತುಂಗಕ್ಕೆ ಕೊಂಡೊಯ್ದವು. 1946ರಲ್ಲಿ ಕಮ್ಯುನಿಸ್ಟ್ ಪಕ್ಷದ ಸದಸ್ಯತ್ವವನ್ನು ಪಡೆದ ಮಲ್ಲು ಸ್ವರಾಜ್ಯಂ ಅವರು 16 ವರ್ಷ ವಯಸ್ಸಿನವರಾಗಿದ್ದಾಗ ತೆಲಂಗಾಣ ರೈತರ ಚಳವಳಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡರು.
ಜನ ಆಂದೋಲನವು ಭೂಮಾಲೀಕರನ್ನು ಓಡಿಸಿ ಭೂರಹಿತರಿಗೆ ಭೂಮಿಯನ್ನು ವಿತರಿಸುವಲ್ಲಿ ಯಶಸ್ವಿಯಾಯಿತು. 12 ರಿಂದ 18 ತಿಂಗಳ ಕಾಲ ಈ ಪ್ರದೇಶಗಳಲ್ಲಿ ಗ್ರಾಮರಾಜ್ ನ್ನೂ ಸ್ಥಾಪಿಸುವಲ್ಲಿ ಯಶಸ್ವಿಯಾಯಿತು. 1946 ರಲ್ಲಿ ಸೂರ್ಯಪೇಟ್ ತಾಲೂಕಿನಲ್ಲಿ ಮಲ್ಲು ಸ್ವರಾಜ್ಯಂ ಈ ಹೋರಾಟಗಾರ ಚಳುವಳಿಯ ಸಂಘಟಕರಾಗಿ ನಿಯುಕ್ತಿಗೊಂಡರು. ಅಲ್ಲಿ ಅವರು ಗೆರಿಲ್ಲಾ ತಂತ್ರಗಾರ ಮತ್ತು ಕಮಾಂಡರ್ ಆಗಿ ಸಮರ್ಥ ನಾಯಕತ್ವವನ್ನು ನೀಡಿದರು.
ಹೋರಾಟಗಾರ್ತಿಯಾಗಿ ಅವರು ಹಲವು ರೀತಿಯ ದಬ್ಬಾಳಿಕೆಯ ಕ್ರೌರ್ಯ ಗಳ ಮುಖಾಮುಖಿಯಾಗಬೇಕಾಯಿತು. ರೈತ ಮಹಿಳೆಯರು ಮನೆಯಲ್ಲಿ ಮತ್ತು ವರ್ಗ ಶತ್ರುಗಳಿಂದ ಶೋಷಣೆಗೆ ಒಳಗಾಗಿದ್ದರು. ಸ್ವರಾಜ್ಯಂ ಮತ್ತು ಅವರ ಒಡನಾಡಿಗಳು ಮಹಿಳಾ ಹೋರಾಟದ ಘಟಕಗಳನ್ನು ರಚಿಸಿದ್ದು ಮಾತ್ರವಲ್ಲ. ಅದರ ಜೊತೆ ಕೌಟುಂಬಿಕ ದೌರ್ಜನ್ಯಗಳ ಹಲವು ಕ್ರೂರ ಮಾದರಿಗಳಾದ ಹೆಂಡತಿಯನ್ನು ಹೊಡೆಯುವುದು, ಬಲವಂತದ ಮದುವೆಗಳು ಮತ್ತು ಮದ್ಯಪಾನದ ವಿರುದ್ಧ ಹೋರಾಟ ಕಟ್ಟಿದರು.
1948 ರಿಂದ ಅಕ್ಟೋಬರ್ 1951 ರಲ್ಲಿ ಕಮ್ಯುನಿಸ್ಟ್ ಪಕ್ಷವು ತೆಲಂಗಾಣ ಹೋರಾಟವನ್ನು ಅಧಿಕೃತವಾಗಿ ಹಿಂತೆಗೆದುಕೊಳ್ಳುವವರೆಗೆ, ಸ್ವರಾಜ್ಯಂ ಗೋದಾವರಿ ಅರಣ್ಯ ಪ್ರದೇಶಗಳಲ್ಲಿ ಕೋಯಾ ಬುಡಕಟ್ಟು ಜನಾಂಗದವರೊಂದಿಗೆ ಉಳಿದುಕೊಂಡು, ಗೆರಿಲ್ಲಾ ಪಡೆಗಳನ್ನು ದಳಮ್ ಹೆಸರಿನ ಹೋರಾಟದ ಘಟಕದ ಕಮಾಂಡರ್ ಆಗಿ ಮುನ್ನಡೆಸಿದರು.
ಅವರು ಎದುರಿಸಿದ ಕಷ್ಟಗಳು ಮತ್ತು ಅಪಾಯಗಳ ನಡುವೆಯೂ ಎದೆಗುಂದದೆ ಅವರು ‘ನಾವು ಕಾಡಿನಲ್ಲಿ ಬಹಳ ಸಂತೋಷದಿಂದ ಬದುಕಿದ್ದೇವೆ!’ ಎಂದು ಘೋಷಿಸಿದ್ದರು. ನಿಜಾಮನ ಸರ್ಕಾರವು ಅವರ ಸುಳಿವು ಕೊಟ್ಟವರಿಗೆ 10,000, ಇನಾಮು ಘೋಷಿಸಿತ್ತು. ಅವರು ವಾಸಿಸುತ್ತಿದ್ದ ಪ್ರದೇಶದ ಜನರ ಬೆಂಬಲದಿಂದಾಗಿ ಬಂಧನವನ್ನು ತಪ್ಪಿಸಿಕೊಳ್ಳುವಲ್ಲಿ ಅವರು ಯಶಸ್ವಿಯಾದರು.
1964ರಲ್ಲಿ ಕಮ್ಯುನಿಸ್ಟ್ ಪಕ್ಷವು ವಿಭಜನೆಯಾದಾಗ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಗೆ ಸೇರಿದರು ಮತ್ತು ಪಕ್ಷದ ಇಚ್ಛೆಯ ಮೇರೆಗೆ 1978 ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕರಾದರು. ‘ನಾನು ತೆಲಂಗಾಣ ಗೆರಿಲ್ಲಾ ಹೋರಾಟಗಾರ ಸ್ಪೂರ್ತಿಯೊಂದಿಗೆ ಶಾಸಕಳಾಗಿ ಕೆಲಸ ಮಾಡಿದ್ದೇನೆ, ಈ ಬಾರಿ ಮಾತ್ರ ನಾನು ಬಳಸಿದ ಚಾನೆಲ್‌ಗಳು ಕಾನೂನುಬದ್ಧವಾಗಿವೆ’ ಎಂದಿದ್ದರು.
ಈ ಹೋರಾಟದ ಮನೋಭಾವ ಮತ್ತು ಬದ್ಧತೆಯ ಭಾವವನ್ನು ಅವರು ತಮ್ಮ ಜೀವನದ ಕೊನೆಯ ದಿನಗಳವರೆಗೂ ಉಳಿಸಿಕೊಂಡರು. ಅವರು ಪ್ರದೇಶದ ಇತರ ಹಿರಿಯ ಮಹಿಳಾ ನಾಯಕಿಯರೊಂದಿಗೆ ಆಂದ್ರದ ಮಹಿಳಾ ಸಂಘಟನೆಯಾದ ಆಂಧ್ರ ಮಹಿಳಾ ಸಂಘಂ ನ್ನು ಕಟ್ಟಿ ಬೆಳೆಸಿದರು. 1981 ರಲ್ಲಿ ಜನವಾದಿಯಾಗಿ ಸಂಘಟನೆ ಅಖಿಲ ಭಾರತ ಮಟ್ಟದಲ್ಲಿ ನಾಮಾಂಕಿತಗೊಂಡಾಗ ಆಂಧ್ರ ಪ್ರದೇಶ ಘಟಕದ ಅಧ್ಯಕ್ಷರಾದರು (1981-2001).
ಅವರು ಆಂಧ್ರಪ್ರದೇಶದಲ್ಲಿ ಸಿಪಿಐ(ಎಂ) ರಾಜ್ಯ ಸಮಿತಿ ಸದಸ್ಯರಾಗಿದ್ದರು ಮತ್ತು 2002 ರಲ್ಲಿ ಅದರ ಕೇಂದ್ರ ಸಮಿತಿಗೆ ಆಯ್ಕೆಯಾದರು. ಅವರು ತಮ್ಮನ್ನು ‘ಚಳುವಳಿಗಳ ಕ್ಷೇತ್ರ ಕಾರ್ಯಕರ್ತೆ’ ಎಂದು ಹೇಳಿಕೊಂಡರು ಮತ್ತು ಅವರ ಜೀವನದ ಕೊನೆಯ ದಿನಗಳವರೆಗೆ ಈ ಹೋರಾಟದ ಮನೋಭಾವವು ಮಸುಕಾದದ್ದೇ ಇಲ್ಲ.
ಎಐಡಿಡಬ್ಲ್ಯೂಎ ರಾಜ್ಯ ಪ್ರಧಾನ ಕಾರ್ಯದರ್ಶಿ ಗೌರಮ್ಮ ಅವರು ʻವಯೋ ಸಹಜವಾಗಿ ಬರುವ ಎಲ್ಲಾ ದೈಹಿಕ ದೌರ್ಬಲ್ಯಗಳ ಮಧ್ಯೆಯೂ ಅವರ ಹೋರಾಟದ ಛಲ ಕುಂದಿರಲಿಲ್ಲ. ಬೆಂಗಳೂರಿನಲ್ಲಿ ಜನವಾದಿ ಮಹಿಳಾ ಸಂಘಟನೆಯ ಸ್ವಂತ ಕಚೇರಿಯ ಉದ್ಘಾಟನೆಗೆ ಅವರು ಇತ್ತೀಚೆಗೂ ಬಂದಿದ್ದನ್ನು ನಾವು ನೆನಪಿಸಿಕೊಳ್ಳುತ್ತೇವೆ. ಅವರ ಬತ್ತದ ಸ್ಪೂರ್ತಿ ಯ ಆದರ್ಶ ನಮ್ಮ ಮುಂದಿದೆ. ಕೊನೆಯ ಘಳಿಗೆಯಲ್ಲೂ ಹೋರಾಟದ,ಮಹಿಳಾ ವಿಮೋಚನೆಯ ಕುರಿತೇ ಕಾಳಜಿ ತೋರುತ್ತಿದ್ದ ಮಹಾನ್ ಚೇತನವದು ಎಂದು ತಿಳಿಸಿದ್ದಾರೆ.
ಎಐಡಿಡಬ್ಲ್ಯೂಎ ಸಂಘಟನೆಗೆ ಅವರು ಬಿಟ್ಟುಹೋದ ಈ ಪರಂಪರೆಯನ್ನು ಮುಂದುವರೆಸುತ್ತೇವೆ. ಅವರಂತವರ ಜೊತೆ ನಾವಿದ್ದೆವು ಎಂಬುದಕ್ಕೆ ನಾವು ಹೆಮ್ಮೆಪಡುತ್ತೇವೆ. ಅವರ ದಾರಿಯಲ್ಲಿ ನಡೆದುಕೊಳ್ಳುತ್ತೇವೆ ಎಂದು ತಮ್ಮ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.