ನವೀನ್ ಸೂರಿಂಜೆ
ಆಗಸ್ಟ್ ತಿಂಗಳ ಅಂತ್ಯ ಮತ್ತು ಸೆಪ್ಟೆಂಬರ್ ಮೊದಲ ವಾರದಲ್ಲಿ ಹಿಂದುತ್ವವಾದಿಗಳು ಬೇರೆ ಬೇರೆ ಹೆಸರಿನಲ್ಲಿ ಸೌಜನ್ಯ ಪರ ಹೋರಾಟವನ್ನು ಹಮ್ಮಿಕೊಂಡಿದ್ದಾರೆ. ಯಾಕೆಂದರೆ ಹಿಂದುತ್ವವಾದಿಗಳು ಮತ್ತು ಮುಂಡಾಸುಧಾರಿಗಳಿಗೆ ಏಕಕಾಲದಲ್ಲಿ ಆಗಸ್ಟ್ 28 ರ “ಬೆಳ್ತಂಗಡಿ ಚಲೋ” ಭಯ ಕಾಡುತ್ತಿದೆ.
ಆಗಸ್ಟ್ 28 ರ ಬೆಳ್ತಂಗಡಿ ಚಲೋದಲ್ಲಿ “ಅಂದು ಪದ್ಮಲತಾ, ಇಂದು ಸೌಜನ್ಯ” ಎಂಬ ಘೋಷವಾಕ್ಯವೇ ಹಿಂದುತ್ವವಾದಿಗಳ ನಿದ್ದೆಗೆಡಿಸಿದೆ. ಅದಕ್ಕಾಗಿಯೇ ತರಾತುರಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸೌಜನ್ಯ ಪರ ಹೋರಾಟಗಳನ್ನು ಹಿಂದುತ್ವವಾದಿಗಳು ಹಮ್ಮಿಕೊಂಡಿದ್ದಾರೆ.
ಸೌಜನ್ಯ ಅತ್ಯಾಚಾರ ಮತ್ತು ಕೊಲೆಯ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲೆಡೆಯಲ್ಲಿ ಹಿಂದುತ್ವವಾದಿಗಳು ಬ್ಯಾನರ್ ಹಾಕಿದ್ದಾರೆ. ಆ ಬ್ಯಾನರ್ ಗಳಲ್ಲಾಗಲೀ, ಚಳವಳಿಗಳಲ್ಲಾಗಲೀ ಪದ್ಮಲತಾ ಸಾವಿನ ಉಲ್ಲೇಖವೇ ಇಲ್ಲ. ಎಡಪಂಥೀಯ ಚಳವಳಿಗಾರರನ್ನು ಹೊರತುಪಡಿಸಿ ಇನ್ಯಾರೂ ಕೂಡಾ ಪದ್ಮಲತಾ ಪ್ರಕರಣದ ಬಗ್ಗೆ ಮಾತಾಡುತ್ತಿಲ್ಲ. ಈ ರೀತಿಯ ವಿಸ್ಮೃತಿಯ ಹಿಂದೆ ಹಿಂದುತ್ವ ರಾಜಕಾರಣವಿದೆ.
ಮುಂಡಾಸುಧಾರಿ ಭೂಮಾಲಕ ಧರ್ಮಾಧಿಕಾರಿಯ ವಿರುದ್ದ ಚಳವಳಿ ತೀವ್ರಗೊಂಡಿದ್ದೇ ಪದ್ಮಲತಾ ಸಾವು ಪ್ರಕರಣದಿಂದ. 1986 ರಿಂದ 2023 ರವರೆಗೂ ಮುಂಡಾಸುಧಾರಿ ನೈತಿಕತೆಯನ್ನು ಕಾಡಿದ್ದು ಎಡಪಂಥೀಯರೇ ಹೊರತು ಹಿಂದುತ್ವವಾದಿಗಳು ಅಲ್ಲ. ಹಾಗೆ ನೋಡಿದರೆ ಮುಂಡಾಸುದಾರಿಗಳಷ್ಟೇ ಹಿಂದುತ್ವವಾದಿಗಳು ಕೂಡಾ ಬೆಳ್ತಂಗಡಿ, ಧರ್ಮಸ್ಥಳದಲ್ಲಿ ನೆತ್ತರು ಹರಿಸಿದ್ದಾರೆ.
1987 ರಲ್ಲಿ ಪದ್ಮಲತಾ ಹತ್ಯೆಯಾದಾಗ ಎಡಪಂಥೀಯರ ಚಳವಳಿಯ ವಿರುದ್ದ ನಿಂತು ಧರ್ಮಸ್ಥಳದ ಮುಂಡಾಸುಧಾರಿಯನ್ನು ರಕ್ಷಿಸಿದ್ದು ಇಂದಿನ ಹಿಂದುತ್ವವಾದಿ ಮುಖಂಡರೇ ಆಗಿದ್ದರು. 22.12.1986 ರಲ್ಲಿ ಕಮ್ಯೂನಿಷ್ಟ್ ಮುಖಂಡ ದೇವಾನಂದರು ಪೊಲೀಸ್ ಠಾಣೆಗೆ ದೂರು ನೀಡಿದಾಗ ಧರ್ಮರಕ್ಷಕರು ದೇವಾನಂದರನ್ನು ಇನ್ನಿಲ್ಲದಂತೆ ಕಾಡಿದ್ದರು. ಆ ಕಾರಣಕ್ಕಾಗಿಯೇ ಈಗಲೂ ಧರ್ಮರಕ್ಷಕ ಸೌಜನ್ಯ ಪರ ಹೋರಾಟಗಾರರು ಪದ್ಮಲತಾರ ಹೆಸರೆತ್ತುವುದಿಲ್ಲ.
ಪದ್ಮಲತಾ ಸಾವಿಗೂ ಸೌಜನ್ಯ ಪ್ರಕರಣಕ್ಕೂ ಒಂದಕ್ಕೊಂದು ಸಾಮ್ಯತೆ ಇದೆ. ಹಾಗಾಗಿ ಪದ್ಮಲತಾ ಪ್ರಕರಣದಿಂದಲೇ ಸೌಜನ್ಯ ಹೋರಾಟವನ್ನು ಆರಂಭಿಸಬೇಕು. ಸೌಜನ್ಯ ಪ್ರಕರಣದಲ್ಲಿ ಪ್ರತ್ಯಕ್ಷದರ್ಶಿಗಳನ್ನು ಪೊಲೀಸರು ಮತ್ತು ಸಿಬಿಐ ವಿಚಾರಣೆ ನಡೆಸಿಲ್ಲ ಎಂದು ಸಿಬಿಐ ಕೋರ್ಟ್ ಹೇಳಿದೆ. ಪದ್ಮಲತಾ ಕೇಸ್ ನಲ್ಲೂ ಪೊಲೀಸರು ಇದನ್ನೇ ಅನುಸರಿಸಿದ್ದರು. ಪದ್ಮಲತಾ ಅವರ ತಂದೆ ಬೆಳ್ತಂಗಡಿ ಪೊಲೀಸರಿಗೆ ನೀಡಿದ್ದ ದೂರಿನಲ್ಲಿ “ನನ್ನ ಮಗಳಾದ ಪದ್ಮಲತಾ ಕಾಣೆಯಾಗಿರುವ ಬಗ್ಗೆ ಸೋಮನ್, ಸರೋಜಿನಿ, ಅಮ್ಮಣ್ಣಿ, ಎಎಸ್ ನಾರಾಯಣನ್, ಲಕ್ಷ್ಮಿ್ಗೆ ಕಾಣೆಯಾದ ದಿನವೇ ಗೊತ್ತಿದೆ. ಹಾಗಾಗಿ ಇವರನ್ನೂ ಕೂಡಾ ವಿಚಾರಣೆ ನಡೆಸಬೇಕು” ಎಂದು 09.02.1987 ಪೊಲೀಸ್ ಠಾಣೆಗೆ ದೂರು ನೀಡುತ್ತಾರೆ. ಆದರೆ ಪೊಲೀಸರು ದೇವಾನಂದರು ಹೆಸರಿಸಿದ ವ್ಯಕ್ತಿಗಳ ವಿಚಾರಣೆಯನ್ನೇ ನಡೆಸುವುದಿಲ್ಲ.
ಸೌಜನ್ಯ ಪರವಾಗಿನ ಹೋರಾಟವನ್ನು ಕೈ ಬಿಡುವಂತೆ ಪ್ರಭಾವಿ ಸ್ವಾಮೀಜಿಯೊಬ್ಬರು ಮುಂಡಾಸುದಾರಿಯ ಪರವಾಗಿ ಒತ್ತಡ ಹಾಕಿದ್ದರು ಎಂದು ಸೌಜನ್ಯ ಕುಟುಂಬದವರು ಆರೋಪಿಸಿದ್ದಾರೆ. ಪದ್ಮಲತಾ ಪ್ರಕರಣದಲ್ಲೂ ಅಂದಿನ ಹೋರಾಟಗಾರರಾಗಿದ್ದ ಟಿ ಕೆ ದಿವಾಕರ್ ಅವರಿಗೆ ಸೋಮನ್ ಎಂಬಾತ ಮುಂಡಾಸುಧಾರಿಯ ಪರವಾಗಿ ಒತ್ತಡ ಹಾಕಿದ್ದ. “ದೇವಾನಂದರ ಮಗಳು ಪದ್ಮಲತಾ ಚಾರ್ಮಾಡಿಯಲ್ಲಿ ಇದ್ದಾಳೆ. ನೀವು ಈ ವಿಷಯದಲ್ಲಿ ಕೈ ಹಾಕಬೇಡಿ” ಎಂದು ಸೋಮನ್ ಎಂಬಾತ ದಿವಾಕರ್ ಗೆ ಬೆದರಿಸಿದ್ದ. ಈ ಬಗ್ಗೆ ಟಿ ಕೆ ದಿವಾಕರ್ ಅವರು 09.01.1987 ರಂದು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ ಪೊಲೀಸರು ಕ್ರಮ ಕೈಗೊಂಡಿರಲಿಲ್ಲ.
2012 ರಲ್ಲಿ ಕೊಲೆಯಾದ ಸೌಜನ್ಯ ಮತ್ತು 1986 ರಲ್ಲಿ ಕೊಲೆಯಾದ ಪದ್ಮಲತ ಒಂದೇ ಕಾಲೇಜಿನವರು. ಆ ಕಾಲೇಜು ಮುಂಡಾಸುಧಾರಿಯ ಮಾಲೀಕತ್ವಕ್ಕೆ ಒಳಪಟ್ಟಿದೆ. ಇಬ್ಬರೂ ಕೂಡಾ 17 ರ ವಯಸ್ಸಿನಲ್ಲೇ ಮುಂಡಾಸುಧಾರಿಯ ಕಣ್ಣಿಗೆ ಬಿದ್ದು ಬದುಕನ್ನು ಕೊನೆಗೊಳಿಸಿದರು. ಎಲ್ಲಾ ರೀತಿಯಲ್ಲೂ ಸಾಮ್ಯತೆ ಇರುವ ಎರಡೂ ಕೊಲೆಗಳನ್ನು ಒಬ್ಬನ ಸಲಹೆಯಂತೆಯೇ ಮಾಡಲಾಗಿದೆಯೇ ? ಇದು ತನಿಖಾ ಭಾಷೆಯಲ್ಲಿ ಎಂಒ (ಮೋಡಸ್ ಒಪರೆಂಡಿ) ಅನ್ನುತ್ತಾರೆ. ಎರಡೂ ಕೇಸ್ ಗಳ ಮೋಡಸ್ ಒಪರೆಂಡಿ ಒಂದೇ ರೀತಿ ಇದೆ. ಎರಡೂ ಪ್ರಕರಣಗಳನ್ನು ಒಂದೇ ರೀತಿ ವಿಚಾರಣೆ ನಡೆಸಿ ಮುಚ್ಚಿ ಹಾಕಲಾಗುತ್ತದೆ. ಅಂದಿನಿಂದ ಇಂದಿನವರೆಗೂ ಎಡಪಂಥೀಯರು ಹೋರಾಟವನ್ನು ನಡೆಸಿಕೊಂಡೇ ಬರುತ್ತಿದ್ದಾರೆ.
ಹಾಗಾಗಿ ಪದ್ಮಲತಾ ಪ್ರಕರಣದಿಂದಲೇ ಮುಂಡಾಸುಧಾರಿಯ ಧಾರ್ಮಿಕ ವ್ಯಾಪಾರಿಯ ಸಾಮ್ರಾಜ್ಯದ ವಿರುದ್ದದ ಚಳವಳಿಯನ್ನು ನೋಡಬೇಕು. ಈ ಕಾರಣಕ್ಕಾಗಿಯೇ ಆಗಸ್ಟ್ 28 ರಂದು ನಡೆಯುವ ಬೆಳ್ತಂಗಡಿ ಚಲೋ ಕಾರ್ಯಕ್ರಮಕ್ಕೆ “ಅಂದು ಪದ್ಮಲತಾ, ಇಂದು ಸೌಜನ್ಯ” ಎಂಬ ಘೋಷ ವಾಕ್ಯವನ್ನು ನೀಡಲಾಗಿದೆ. ಈ ಘೋಷ ವಾಕ್ಯವೇ ಹಿಂದುತ್ವವಾದಿ ಕಿಡಿಗೇಡಿಗಳಿಗೆ ಅಪಥ್ಯವಾಗಿರುವುದರಿಂದಲೇ ಆಗಸ್ಟ್ 28 ರಂದೇ ಅಥವಾ ಅದರ ಆಸುಪಾಸಿನಲ್ಲೇ ಸೌಜನ್ಯ ಪರ ಹೋರಾಟವನ್ನು ಹಮ್ಮಿಕೊಂಡು ಸೌಜನ್ಯ ಪರವಾಗಿನ ಜನರನ್ನು ಒಡೆಯಲು ಯತ್ನಿಸುತ್ತಿದ್ದಾರೆ. ಈ ರೀತಿಯ ಕುತಂತ್ರಗಳ ಬಗ್ಗೆ ಸೌಜನ್ಯ ಪರ ಜನರು ಎಚ್ಚರಿಕೆ ವಹಿಸಬೇಕಿದೆ.