ಕೇಂದ್ರ ಸರಕಾರವು ಸಿನಿಮಾಟೊಗ್ರಫಿ ಕಾಯ್ದೆ 1952ಕ್ಕೆ ತಿದ್ದುಪಡಿ ತರಲು ಹೊರಟಿದೆ. ತಿದ್ದುಪಡಿಯಲ್ಲಿ ಹಲವು ಅಂಶಗಳನ್ನು ಉಲ್ಲೇಖಿಸಲಾಗಿದೆ. ಈ ಪ್ರಕಾರವಾಗಿ ಸೆನ್ಸಾರ್ ಮಂಡಳಿಯು ಪ್ರಮಾಣಿಕರಿಸಿ ಬಿಡುಗಡೆ ಹೊಂದಿದ ಚಿತ್ರಕ್ಕೆ ಸಂಬಂಧಿಸಿ ಆಕ್ಷೇಪಣೆಗಳು ಏನಾದರೂ ಬಂದರೆ ಮತ್ತೆ ಸೆನ್ಸಾರ್ ಮಾಡುವ, ಕತ್ತರಿ ಹಾಕುವ ಆಕ್ಷೇಪಣೆ ಅಂಶಗಳನ್ನು ತೆಗೆದು ಹಾಕುವ ಕೆಲಸ ಕೇಂದ್ರ ಸರಕಾರ ಮಾಡಲು ತಿದ್ದುಪಡಿ ಕಾಯ್ದೆಯಿಂದ ಅನುವು ಮಾಡಿಕೊಡಲಿದೆ.
ಸೆನ್ಸಾರ್ ನಿಯಮಗಳನ್ನು ಮತ್ತಷ್ಟು ಕಠಿಣಗೊಳಿಸಿರುವ ಕೇಂದ್ರ ಸರಕಾರವು ಸಿನಿಮಾಟೊಗ್ರಫಿ ಕಾಯ್ದೆ 1952 ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿ ಚಿತ್ರೋದ್ಯಮ ಹಾಗೂ ಸಾರ್ವಜನಿಕರಿಂದ ಪ್ರತಿಕ್ರಿಯೆ ಆಹ್ವಾನಿಸಿದೆ.
ಸಿನಿಮಾಟೊಗ್ರಫಿ ಕಾಯ್ದೆಗೆ ತಂದ ತಿದ್ದುಪಡಿ ಪ್ರಕಾರ
- ಸೆನ್ಸಾರ್ ಪ್ರಕ್ರಿಯೆಯಲ್ಲಿ ಕೇಂದ್ರ ಸರ್ಕಾರದ ಹಸ್ತಕ್ಷೇಪ
- ಪ್ರೇಕ್ಷಕರ ವಯಸ್ಸಿಗೆ ಅನುಗುಣವಾಗಿ ಸೆನ್ಸಾರ್ ಪ್ರಮಾಣಪತ್ರದಲ್ಲಿ ವರ್ಗೀಕರಣ (ಯು/ಎ 7+, ಯು/ಎ 13+ ಮತ್ತು ಯು/ಎ 16+)
- ಪೈರಸಿ ತಡಗೆ ಕಠಿಣ ಕ್ರಮ, ಜೈಲು ಶಿಕ್ಷೆ
- ಸೆನ್ಸಾರ್ ಪ್ರಮಾಣಪತ್ರ 10 ವರ್ಷಕ್ಕೆ ಮಾತ್ರ ಸೀಮಿತ
ಸದ್ಯದ ಕಾನೂನಿನ ಪ್ರಕಾರ (ಸಿನಿಮಾಟೋಗ್ರಫಿ ಕಾಯ್ದೆ 1952 ಸೆಕ್ಷನ್ 5ಬಿ(1)), ಒಮ್ಮೆ ಸೆನ್ಸಾರ್ ಮಂಡಳಿ ಸದಸ್ಯರು ಸಿನಿಮಾಗೆ ಸೆನ್ಸಾರ್ ಪ್ರಮಾಣಪತ್ರ ನೀಡಿದರೆ, ಮತ್ತೆ ಅದನ್ನು ಬದಲಿಸುವ ನಿಯಮ ಕೇಂದ್ರ ಸರ್ಕಾರಕ್ಕೆ ಇಲ್ಲ.
5ಬಿ(1) ಹೇಳುವುದು ಹೀಗೆ: ಚಲನಚಿತ್ರ ಅಥವಾ ಅದರ ಯಾವುದೇ ಭಾಗವು ಸಂವಿಧಾನದ ಪರಿಚ್ಛೇದ 19 ಪ್ರಕಾರ ದೇಶದ ಸಾರ್ವಭೌಮತ್ವ ಮತ್ತು ಸಮಗ್ರತೆಯ ಹಿತಾಸಕ್ತಿಗೆ ವಿರುದ್ಧವಾಗಿದ್ದರೆ ದೇಶದ ಭದ್ರತೆಗೆ ಸಂಬಂಧಿಸಿದ ಸೂಕ್ಷ್ಮ ವಿಚಾರಗಳಿದ್ದಲ್ಲಿ, ವಿದೇಶದೊಡನೆ ಸ್ನೇಹ– ಸಂಬಂಧ ಕದಡುವಂತಿದ್ದರೆ, ಕಾನೂನು ಸುವ್ಯವಸ್ಥೆ, ಸಭ್ಯತೆ, ನೈತಿಕತೆಗೆ ಭಂಗ ತರುವಂತದ್ದಾಗಿದ್ದರೆ ನ್ಯಾಯಾಲಯವನ್ನು ನಿಂದಿಸುವಂತಿದ್ದರೆ ಅಥವಾ ಯಾವುದೇ ಅಪರಾಧ ಕೃತ್ಯವನ್ನು ಪ್ರಚೋದಿಸುವಂತಿದ್ದರೆ ಅಂಥ ಚಿತ್ರವನ್ನು ಸಾರ್ವಜನಿಕವಾಗಿ ಪ್ರದರ್ಶಿಸಲು ಪ್ರಮಾಣೀಕರಿಸಲಾಗುವುದಿಲ್ಲ ಎನ್ನುತ್ತದೆ.
ಚಲನಚಿತ್ರಗಳಿಗೆ ಇಷ್ಟು ದಿನ ಯು, ಯು/ಎ ಮತ್ತು ಎ ಪ್ರಮಾಣಪತ್ರಗಳನ್ನು ನೀಡಲಾಗುತ್ತಿತ್ತು. ಯು ಎಂದರೆ ಸಾರ್ವತ್ರಿಕವಾಗಿ ಎಲ್ಲರೂ ವೀಕ್ಷಿಸಬಹುದು. ಯು/ಎ ಎಂದರೆ ಮಕ್ಕಳ ವೀಕ್ಷಣೆಗೆ ಪಾಲಕರ ಸಲಹೆ ಅಗತ್ಯ, ʻಎʼ ಎಂದರೆ ವಯಸ್ಕರು ಮಾತ್ರ ವೀಕ್ಷಿಸಬಹುದಾದ ಸಿನಿಮಾ ಎಂದು ಪ್ರಮಾಣೀಕರಣ ಇತ್ತು. ಸದ್ಯದ ತಿದ್ದುಪಡಿ ಪ್ರಕಾರ ವೀಕ್ಷಕರ ವಯಸ್ಸಿನ ಆಧಾರದ ಮೇಲೆ ವರ್ಗೀಕರಣ ಪತ್ರ ನೀಡಲು ಅವಕಾಶ ನೀಡುತ್ತಿದೆ. ಈ ವರ್ಗೀಕರಣಗಳನ್ನು ಓಟಿಟಿ ಸಿನಿಮಾ ಮತ್ತು ವೆಬ್ ಸಿರೀಸ್ಗಳಿಗೂ ಅನ್ವಯಿಸಲು ಚಿಂತಿಸಲಾಗಿದೆ.
ಸಿನಿಮಾಗಳ ಪೈರಸಿ ಮಾಡುವವರಿಗೆ ಮೂರು ವರ್ಷ ಜೈಲು ಶಿಕ್ಷೆ ಮತ್ತು ಮೂರು ಲಕ್ಷಕ್ಕೂ ಅಧಿಕ ದಂಡ ವಿಧಿಸುವ ಬಗ್ಗೆ ಕಾಯ್ದೆಯಲ್ಲಿ ತಿದ್ದುಪಡಿ ಮಾಡಲು ಉದ್ದೇಶಿಸಲಾಗಿದೆ.
ತಿದ್ದುಪಡಿಯಲ್ಲಿ ಮತ್ತೊಂದು ಅಂಶವೆಂದರೆ, ಯಾವುದೇ ಸಿನಿಮಾಗಳಿಗೆ ನೀಡಲಾಗುವ ಪ್ರಮಾಣಪತ್ರಗಳು ಹತ್ತು ವರ್ಷವಷ್ಟೆ ಮಾನ್ಯವಾಗಿರುತ್ತವೆ. ಆ ನಂತರ ಪ್ರಮಾಣಪತ್ರದ ಮಾನ್ಯತೆ ರದ್ದಾಗಲಿದೆ. ಮತ್ತೆ ಏನಾದರೂ ಸಿನಿಮಾವನ್ನು ಮರು ಪ್ರದರ್ಶನಕ್ಕೆ ಮುಂದಾಗುವ ಪ್ರಸಂಗ ಎದುರಾದರೆ ಮತ್ತೆ ಸೆನ್ಸಾರ್ ಮಂಡಳಿಗೆ ಪ್ರದರ್ಶಿಸಿ ಪ್ರಮಾಣಪತ್ರ ಪಡೆಯುವುದು ಕಡ್ಡಾಯವಾಗಲಿದೆ.
ಸಿನಿಮಾಗಳಿಗೆ ಕಠಿಣ ಸೆನ್ಸಾರ್ ಬೇಕೆ, ಬೇಡವೇ ಎಂಬ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ಸಿನಿಮಾಟೊಗ್ರಫಿ ಕಾಯ್ದೆ(1952)ಕ್ಕೆ ತಿದ್ದುಪಡಿ ತರಲು ಹೊರಟಿರುವ ಸರಕಾರದ ನಿರ್ಧಾರಕ್ಕೆ ಹಲವು ವಲಯಗಳಲ್ಲಿ ಪರ-ವಿರೋಧಗಳು ವ್ಯಕ್ತವಾಗಿದೆ.
ಪೈರೆಸಿ ವಿಚಾರವಾಗಿ ಕೈಗೊಳ್ಳುವ ಕಠಿಣ ಕಾನೂನಿನ ಬಗ್ಗೆ ಸ್ವಾಗತಿಸಿರುವ ಹಲವು ಮಂದಿ, ಕೇಂದ್ರ ಸರಕಾರದ ಕೇಂದ್ರೀಕರಣದ ಕೆಲವು ನಿಲುವುಗಳ ಬಗ್ಗೆಯೂ ಆಕ್ಷೇಪಣೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
ಬಹಳ ಮುಖ್ಯವಾಗಿ ಕೇಂದ್ರ ಸರಕಾರವು ತಮಗೆ ಬೇಕಾದಂತೆ ಚಿತ್ರದ ವಸ್ತು ಅಥವಾ ಸನ್ನಿವೇಶವನ್ನು ಕತ್ತರಿಸುವ ಅಧಿಕಾರವನ್ನು ಹೊಂದಿರಲಿದೆ. ಇದು ಮುಂದೆ ಈ ಕ್ಷೇತ್ರದ ವೃತ್ತಿಪರರಿಗಿಂತ ರಾಜಕೀಯ ವ್ಯವಸ್ಥೆಯ ಪ್ರವೇಶಕ್ಕೆ ಬಾಗಿಲು ತೆರೆದಂತಾಗಲಿದೆ ಎಂಬುದು ಸಿನಿಮಾರಂಗದವರು ಹೇಳುತ್ತಿದ್ದಾರೆ. ನಿರ್ದೇಶಕನ ಪರಿಕಲ್ಪನೆಯನ್ನು ಅಭಿವ್ಯಕ್ತಿಯನ್ನು ನಿಯಂತ್ರಿಸುವ ಕೆಲಸಕ್ಕೆ ಹೊಸ ಕಾಯ್ದೆಯು ತಂದೊಡ್ಡಲಿದೆ ಎಂಬ ಅಭಿಪ್ರಾಯವೂ ಕೇಳಿ ಬರುತ್ತಿದೆ.
ಸರಕಾರದ ಆದೇಶಗಳ ವಿರುದ್ಧವಾದ ಅಂಶಗಳಿದ್ದರೂ ಸಹ ಅಂಥಹಾ ಸಿನಿಮಾಗಳಿಗೆ ನೀಡಲಾಗುವ ಪ್ರಮಾಣಪತ್ರವನ್ನು ಮರುಪರಿಶೀಲಿಸುವಂತೆ ಕೇಂದ್ರವು ಸೂಚಿಸಬಹುದಾಗಿದೆ. ಅಲ್ಲಿಗೆ ಸರಕಾರದ ಆದೇಶಗಳನ್ನು, ನಿರ್ಣಯಗಳನ್ನು ಸಿನಿಮಾಗಳ ಮೂಲಕ ಪ್ರಶ್ನಿಸುವುದು, ಟೀಕಿಸುವುದು ‘ಅಪರಾಧ’ ಎಂದು ಬಿಂಬಿಸುವ ಸಾಧ್ಯತೆಗಳಿವೆ.
ಡಿಜಿಟಲ್ ಹಾಗೂ ಗ್ಯಾಜೆಟ್, ಓಟಿಟಿ ಆಧುನಿಕ ಕ್ಷೇತ್ರದಲ್ಲಿ ವೀಕ್ಷಕರಲ್ಲಿ ವರ್ಗೀಕರಣವನ್ನು ಹೇಗೆ ನಿಯಂತ್ರಿಸುತ್ತೀರಿ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.