ಕೃಷಿಕಾಯ್ದೆ ರದ್ದು ಪಡಿಸುವಂತೆ ರಸ್ತೆಗೆ 3 ಗಂಟೆಗಳ ಕಾಲ ಬೀಗ ಜಡಿದ ಅನ್ನದಾತರು, ರಸ್ತೆ ತಡೆ ಮಧ್ಯೆ ತೊಂದರೆಯಾಗದಂತೆ ಸಾರ್ವಜನಿಕರಿಗೆ ಊಟವನ್ನು ನೀಡಿದ ಅನ್ನದಾತರು.ಅನ್ನದಾತರು ನಡೆಸಿದ ಚಕ್ಕಾ ಜಾಮ್ ಗೆ ವ್ಯಾಪಕ ಜನಬೆಂಬಲ ವ್ಯಕ್ತವಾಗಿದೆ.
ಕೃಷಿ ಕಾಯ್ದೆಗಳನ್ನು ವಿರೋಧಿಸಿ ಇಂದು ದೇಶವ್ಯಾಪಿ ಕರೆ ನೀಡಿದ್ದ ಚಕ್ಕಾ ಜಾಮ್ ಗೆ ವ್ಯಾಪಕ ಜನಬೆಂಬ ವ್ಯಕ್ತವಾಗಿದೆ. ಮದ್ಯಪ್ರದೇಶ್, ಜಮ್ಮು, ಪಂಜಾಬ್, ಮಹಾರಾಷ್ಟ್ರ, ರಾಜಸ್ಥಾನ, ಗುಜರಾತ್, ಹಿಮಾಚಲ ಪ್ರದೇಶ್, ಹರ್ಯಾಣ, ಆಂದ್ರಪ್ರದೇಶ್, ಬಿಹಾರ, ಜಾರ್ಖಂಡ್, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಕೃಷಿಕಾಯ್ದೆಗಳನ್ನು ರದ್ದು ಮಾಡಬೇಕು ಎಂದು ಕೇಂದ್ರ ಸರಕಾರಕ್ಕೆ ಒತ್ತಾಯಿಸಿ, ಜೈ ಜವಾನ್ ಜೈಕಿಸಾನ್ ಘೋಷಣೆಗಳನ್ನು ಮೊಳಗಿಸುತ್ತಿದ್ದರು.
ಇದನ್ನು ಓದಿ : ರೈತರ ಹೋರಾಟದ ಬಗ್ಗೆ ಅಪಪ್ರಚಾರ ಅಡ್ಡದಾರಿಗೆಳೆಯುವ ಅಪಾಯಕಾರಿ ಪ್ರಯತ್ನ
ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಲೋಕಸಭಾ ಕ್ಷೇತ್ರವಾದ ಮೊರೇನಾದಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರದಲ್ಲಿ ರೈತರು ರಸ್ತೆ ತಡೆ ನಡೆಸಿದ್ದಾರೆ. ರಸ್ತೆ ತಡೆ ನಡೆಸಿದ ರೈತರನ್ನು ಬಂಧಿಸಲಾಗಿದೆ. ಹರ್ಯಾಣ, ಪಂಜಾಬ್, ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ರೈತರು ರಸ್ತೆ ತಡೆ ನಡೆಸಿದ್ದಾರೆ. ರಾಜಸ್ಥಾನ, ಬಿಹಾರ್, ಆಂದ್ರಪ್ರದೇಶದಲ್ಲೂ ರೈತರು ನಡೆಸಿದ ಚೆಕ್ಕ ಜಾಮ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಗುಜರಾತ್ ನಲ್ಲಿ ರಸ್ತೆ ತಡೆ ನಡೆಸಿದ ರೈತರು ಡೋಲು ಮತ್ತು ತಮಟೆ ಬಾರಿಸಿದ್ದು ವಿಶೇಷವಾಗಿತ್ತು.
ರಸ್ತೆ ತಡೆ ಸಂದರ್ಭದಲ್ಲಿ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರಿಗೆ ತೊಂದರೆಯಾಗದಂತೆ, ಅನೇಕ ಕಡೆಗಳಲ್ಲಿ ರೈತರೆ ಊಟದ ವ್ಯವಸ್ಥೆಯನ್ನು ಮಾಡಿಸಿದ್ದರು. ಕುಂಡ್ಲಿ ಗಡಿ ಬಳಿ ರಸ್ತೆ ತಡೆ ನಡೆಸುತ್ತಿದ್ದಾಗ, ಆಂಬುಲೆನ್ಸ್ ಸರಾಗವಾಗಿ ಹೋಗುವಂತೆ ಅವಕಾಶ ನೀಡುವ ಮೂಲಕ ಅನ್ನದಾತ ಮಾನವೀಯತೆಯನ್ನು ಮೆರೆದಿದ್ದಾನೆ.
ಇನ್ನೂ ಕರ್ನಾಟಕದಲ್ಲಿ ನಡೆದ ಚಕ್ಕಾ ಜಾಮ್ ಗೆ ಉತ್ತಮ ಪ್ರತಿಕ್ರೀಯೆ ವ್ಯಕ್ತವಾಗಿದೆ. ಬಹುತೇಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಯಲಹಂಕದ ಬಳಿ ರಾಜ್ಯ ರೈತ ಸಂಘ, ಕಾರ್ಮಿಕ ಸಂಘಟನೆಗಳು, ದಲಿತ ಸಂಘಟನೆಗಳು ರಸ್ತೆ ತಡೆಯನ್ನು ನಡೆಸಿದವು, ಶಾಂತಿಯುತವಾಗಿ ರಸ್ತೆ ತಡೆ ನಡೆಸುತ್ತಿದ್ದ ರೈತರನ್ನು ಪೊಲೀಸರು ತಂಡೋಪ ತಂಡವಾಗಿ ಬಂಧಿಸಿ ನಂತರದಲ್ಲಿ ಬಿಡುಗಡೆ ಮಾಡಿದರು. ಬೆಂಗಳೂರಿನಲ್ಲಿ ಯಲಹಂಕದ ಬಳಿ ರಸ್ತೆ ತಡೆ ನಡೆಸುತ್ತಿದ್ದ ರೈತರನ್ನು ಬಂಧಿಸಿ ಬಿಡುಗಡೆ ಮಾಡಲಾಗಿದೆ. ದೇವನಹಳ್ಳಿ ಬಳಿ ಕರ್ನಾಟಕ ಪ್ರಾಂತ ರೈತ ಸಂಘ, ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಬೆಂಗಳೂರು – ಹೈದ್ರಾಬಾದ್ ರಸ್ತೆ ತಡೆ ನಡೆಸಿದ್ದಾರೆ.
ಇದನ್ನು ಓದಿ : ದುರಾಗ್ರಹ ಬಿಟ್ಟು ಕೃಷಿ ಕಾಯ್ದೆಗಳನ್ನು ರದ್ದು ಮಾಡಿ-ಮೋದಿ ಸರಕಾರಕ್ಕೆ ಎಡಪಕ್ಷಗಳ ಆಗ್ರಹ
ವಿಜಯಪುರದ ಸಿಂದಗಿ ಬೈಪಾಸ್ ಬಳಿ ಹುಬ್ಬಳ್ಳಿ-ಕಲಬುರ್ಗಿ ರಾಷ್ಟ್ರೀಯ ಹೆದ್ದಾರಿ 218 ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕರ್ನಾಟಕ ಪ್ರಾಂತರೈತ ಸಂಘ, ಕರ್ನಾಟಕ ರಾಜ್ಯ ರೈತ ಸಂಘ, ರೈತ ಕೃಷಿ ಕಾರ್ಮಿಕ ಸಂಘಟನೆ, ಸಿಐಟಿಯು, ಎಐಯುಟಿಯುಸಿ ಸೇರಿದಂತೆ ಮತ್ತಿತರ ಸಂಘಟನೆಗಳು ಸಂಯುಕ್ತ ಕರ್ನಾಟಕ ಹೆಸರಿನಲ್ಲಿ ಹೆದ್ದಾರಿ ತಡೆಯನ್ನು ನಡೆಸಿದರು. ಉತ್ತರ ಕನ್ನಡದ ಹೊನ್ನಾವರದಲ್ಲಿ ರೈತ ಮತ್ತು ಕಾರ್ಮಿಕ ಸಂಘಟನೆಗಳು ರಸ್ತೆ ತಡೆಯನ್ನು ನಡೆಸಿದವು ತುಮಕೂರು ಜಿಲ್ಲೆಯ ಗುಬ್ಬಿಗೇಟ್ ಬಳಿ ರೈತ ಸಂಘ ಮತ್ತು ಕಾರ್ಮಿಕ ಸಂಘಟನೆಗಳ ಮುಖಂಡರು ಪ್ರತಿಭಟಿಸಿದರು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಸ್ಥಳಕ್ಕೆ ಬಂದ ಪೊಲೀಸರು ಪ್ರತಿಭಟನೆ ನಡೆಸುತ್ತಿದ್ದ ರೈತ, ಕಾರ್ಮಿಕ ಮುಖಂಡರನ್ನು ಬಂಧಿಸಿದರು.
ಚಿಕ್ಕಮಗಳೂರಿನಲ್ಲಿ ರೈತ ಸಂಘ – ಹಸಿರು ಸೇನೆ, ಕಿಸಾನ್ ಮೋರ್ಚಾ ಜಿಲ್ಲಾ ಘಟಕದವರು ನಗರದ ಹೊರವಲಯದ ಹಿರೇಮಗಳೂರು ಬಳಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಹಾಸನದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘಟನೆ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ಸಿಐಟಿಯು, ದಲಿತ ಸಂಘಟನೆಗಳು ರಸ್ತೆ ತಡೆ ನಡೆಸಿದರು, ಬೆಂಗಳೂರು ಮಂಗಳೂರು ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿದರು. ರಸ್ತೆಯಲ್ಲಿಯೇ ರೈತರು ಊಟಮಾಡುವ ಮೂಲಕ ಪ್ರತಿಭಟನೆ ನಡೆಸಿದರು.
ರಾಮನಗರದ ಎಪಿಎಂಸಿ ವೃತ್ತದಲ್ಲಿ ರೈತ ಸಂಘಟನೆಗಳು ಬೆಂಗಳೂರು-ಮೈಸೂರು ಹೆದ್ದಾರಿ ತಡೆ ನಡೆಸಿದವು. ವಿವಾದಿತ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿದರು. ಮಳವಳ್ಳಿಯಲ್ಲಿ, ಮಂಡ್ಯದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಹಾಗೂ ಜನವಾದಿ ಮಹಿಳಾ ಸಂಘಟನೆ ಮತ್ತು ಸಿಐಟಿಯು ನೇತೃತ್ವದಲ್ಲಿ ಮಂಡ್ಯದ ಹೊರವಲಯ ವಿ.ಸಿ.ಫಾರಂ ಗೇಟ್ ಬಳಿ ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿ ತಡೆ ಮಾಡಲಾಗಿದೆ. ಮೈಸೂರಿನಲ್ಲಿ ಕೊಲಂಬಿಯಾ ಏಷಿಯಾ ಆಸ್ಪತ್ರೆ ಸಮೀಪ ಮೈಸೂರು ಬೆಂಗಳೂರು ಹೆದ್ದಾರಿ ಹಾಗೂ ರಿಂಗ್ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ. ಶಾಂತಿಯುತವಾಗಿ ರಸ್ತೆ ತಡೆ ಮಾಡುತ್ತಿದ್ದ ರೈತರನ್ನು ಪೊಲೀಸರು ಬಂಧಿಸಿ ನಂತರದಲ್ಲಿ ಬಿಡುಗಡೆ ಮಾಡಿದ್ದಾರೆ.
ಇದನ್ನು ಓದಿ : ಗ್ರೇಟಾ ಹಂಚಿಕೊಂಡಿದ್ದ ಟೂಲ್ ಕಿಟ್ ನಲ್ಲಿ ಏನಿದೆ?
ಬೆಳಗಾವಿ ಜಿಲ್ಲೆ ಹಿರೇಬಾಗೇವಾಡಿ ಟೋಲ್ ಬಳಿ ಹೆದ್ದಾರಿ ತಡೆದು ರೈತರು ಪ್ರತಿಭಟನೆ ಆರಂಭಿಸಿದ್ದಾರೆ. ನಿಚ್ಚಣಕಿ ರೈತರು ರಸ್ತಾರೋಕೋ ನಡೆಸಿದ್ದಾರೆ. ಕಿತ್ತೂರು, ತಡಕೋಡ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಪ್ರಯಾಣಿಕರು ಮತ್ತು ರೈತ ಸಂಘಟನೆ ಕಾರ್ಯಕರ್ತರ ಮಧ್ಯ ಮಾತಿನ ಚಕಮಕಿ ನಡೆದಿದ್ದು, ನಮ್ಮ ಮೇಲೆ ವಾಹನ ಚಲಿಸಿಕೊಂಡು ಹೋಗಿ ಎಂದು ರೈತರು ಹಠ ಹಿಡಿದು ಕೇಂದ್ರ ಸರ್ಕಾರದ ವಿರದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ
ಕರಾಳ ಕೃಷಿ ಕಾನೂನುಗಳ ವಾಪಸ್ಸಾತಿಗಾಗಿ ಒತ್ತಾಯಿಸಿ ಮಹದಾಯಿ ಕಳಾಸಾ ಬಂಡೂರಿ ಹೋರಾಟ ಸಮನ್ವಯ ಸಮಿತಿ ನೇತೃತ್ವದಲ್ಲಿ ರೈತಪರ ಸಂಘಟನೆಗಳು ಮಲಪ್ರಭಾ ಬಲದಂಡೆ ಕಾಲುವೆ ಬ್ರಿಡ್ಜ್ ಹತ್ತಿರ ಹುಬ್ವಳ್ಳಿ ಸೋಲ್ಲಾಪೂರ ಹೆದ್ದಾರಿ ತಡೆ ನಡೆಸಿದರು.
ಶಿವಮೊಗ್ಗದಲ್ಲಿ ರೈತರು, ಕಾರ್ಮಿಕರು ರಸ್ತೆ ತಡೆ ನಡೆಸಿದ್ದರಿಂದ ಶಿವಮೊಗ್ಗ ಸಾಗರ ರಸ್ತೆ ಸಂಪೂರ್ಣವಾಗಿ ಬಂದಾಗಿತ್ತು. ಕೋಲಾರ ಚಿಕ್ಕಬಳ್ಳಾಪುರದಲ್ಲೂ ರೈತರ ರಸ್ತೆ ತಡೆಗೆ ಉತ್ತಮ ಬೆಂಬಲ ವ್ಯಕ್ತವಾಗಿತ್ತು. ಕೊಪ್ಪಳ, ರಾಯಚೂರು, ಗದಗ್, ಹಾವೇರಿ, ದಾವಣಗೆರೆ, ಯಾದಗಿರಿ, ಸೇರಿದಂತೆ ಇತರ ಕಡೆಗಳಲ್ಲಿ ಚೆಕ್ಕಾ ಜಾಮ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
ಕೃಷಿ ಕಾಯ್ದೆ ರದ್ದು ಮಾಡುವಂತೆ ದೇಶವ್ಯಾಪಿ ನಡೆದ ಚೆಕ್ಕಾ ಜಾಮ್ ಗೆ ವ್ಯಾಪಕ ಜನಬೆಂಬಲ ದೊರೆತಿದೆ. 72 ದಿನಗಳಿಂದ ರೈತರು ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಜಾಗತಿಕ ಮಟ್ಟದಲ್ಲೂ ರೈತರ ಹೊರಾಟಕ್ಕೆ ಬೆಂಬಲ ವ್ಯಕ್ತವಾಗಿದ್ದರಿಂದ ರೈತರ ಹೋರಾಟಕ್ಕೆ ಈಗ ದೊಡ್ಡ ಬಲ ಬಂದಂತಾಗಿದೆ. ಕೇಂದ್ರ ಸರಕಾರ ಕೂಡಲೆ ಕಾಯ್ದೆಯನ್ನು ರದ್ದು ಮಾಡದೆ ಹೋದರೆ ಮತ್ತಷ್ಟು ಇಕ್ಕಟ್ಟಿಗೆ ಸಿಲುಕುವ ಸಾಧ್ಯತೆ ಹೆಚ್ಚಿದೆ. ಕೂಡಲೆ ಕೇಂದ್ರ ಸರಕಾರ ಕಾಯ್ದೆಗಳನ್ನು ರದ್ದು ಮಾಡಲು ಮುಂದಾಗಬೇಕಿದೆ.