ನವದೆಹಲಿ: ಬ್ರಿಟಿಷರ ಕಾಲದ ದೇಶದ್ರೋಹ ಕಾನೂನನ್ನು ಪರಿಶೀಲನೆಯವರೆಗೆ ತಡೆಹಿಡಿಯಬಹುದೇ ಮತ್ತು ಅದರ ಅಡಿಯಲ್ಲಿ ಬಂಧಿಸಲ್ಪಟ್ಟವರನ್ನು ರಕ್ಷಿಸಬಹುದೇ? ಎಂಬುವುದರ ಕುರಿತು ನಾಳೆಯೊಳಗೆ ಉತ್ತರಿಸುವಂತೆ ಸುಪ್ರೀಂಕೋರ್ಟ್ ಸರ್ಕಾರವನ್ನು ಸೂಚನೆ ನೀಡಿದೆ.
ಈ ಕಾನೂನಿನ ಕುರಿತು ಪರಿಶೀಲಿಸುತ್ತೇವೆ ಎಂದು ಕೇಂದ್ರ ಸರ್ಕಾರ ಹೇಳಿದ ಬಳಿಕ ಮತ್ತೊಂದು ದಿನದ ಕಾಲಾವಕಾಶ ನೀಡಿದ ಸುಪ್ರೀಂ ಕೋರ್ಟ್ ಬ್ರಿಟಿಷರ ವಸಾಹತುಶಾಹಿ ಕಾಲದ ಕಾನೂನನ್ನು ಪರಿಶೀಲಿಸುವ ಸಂಧರ್ಭದಲ್ಲಿ ಭಾರತೀಯ ದಂಡ ಸಂಹಿತೆಯ ಐಪಿಸಿ-124ಎ ಸೆಕ್ಷನ್ (‘ದೇಶದ್ರೋಹ ಕಾನೂನು’) ಅನ್ನು ‘ಅರ್ಹ ವೇದಿಕೆ’ಯಿಂದ ಮರುಪರಿಶೀಲನೆಗೆ ಒಳಪಡಿಸಲು ನಿರ್ಧರಿಸಲಾಗಿತ್ತು. ದೇಶದ್ರೋಹ ಆರೋಪ ಎದುರಿಸುತ್ತಿರುವವರ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿತು.
“ನಾವು ನಿಮಗೆ ಸರ್ಕಾರದಿಂದ ಸೂಚನೆಗಳನ್ನು ಪಡೆಯಲು ನಾಳೆ ಬೆಳಿಗ್ಗೆಯವರೆಗೆ ಸಮಯ ನೀಡುತ್ತೇವೆ. ನಮ್ಮ ಕಾಳಜಿ ಬಾಕಿ ಉಳಿದಿರುವ ಪ್ರಕರಣಗಳು ಮತ್ತು ಭವಿಷ್ಯದ ಪ್ರಕರಣಗಳಾಗಿದೆ. ಈ ಕಾನೂನನ್ನು ಮರುಪರಿಶೀಲಿಸುವವರೆಗೆ ಸರ್ಕಾರವು ಹೇಗೆ ಇವುಗಳ ಬಗ್ಗೆ ಕಾಳಜಿ ವಹಿಸುತ್ತದೆ ಎಂಬುವುದು ಆಗಿದೆ” ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿರಮಣ ಹೇಳಿದರು.
“ಈಗಾಗಲೇ ದೇಶದ್ರೋಹದ ಕಾನೂನಿನಡಿಯಲ್ಲಿ ದಾಖಲಾಗಿರುವ ಜನರ ಹಿತಾಸಕ್ತಿಗಳನ್ನು ರಕ್ಷಿಸಲು ಮತ್ತು ಭವಿಷ್ಯದ ಪ್ರಕರಣಗಳಲ್ಲಿ, ಕಾನೂನನ್ನು ಮರುಪರಿಶೀಲಿಸುವವರೆಗೆ ಅವರನ್ನು ಹಿಂತೆಗೆದುಕೊಳ್ಳಬಹುದೇ” ಎಂಬ ಬಗ್ಗೆ ಪ್ರತಿಕ್ರಿಯೆಯನ್ನು ಸಲ್ಲಿಸಲು ಕೇಂದ್ರಕ್ಕೆ ಮುಖ್ಯ ನ್ಯಾಯಮೂರ್ತಿ ನಿರ್ದೇಶಿಸಿದರು.
ಇದನ್ನೂ ಓದಿ : ದೇಶದ್ರೋಹ ಕಾನೂನು ಸಮರ್ಥಿಸಿಕೊಂಡ ಕೇಂದ್ರ ಸರ್ಕಾರ: ಅರ್ಜಿಗಳನ್ನು ವಜಾಗೊಳಿಸಲು ಮನವಿ
ಸುಪ್ರೀಂಕೋರ್ಟಿ ತೀರ್ಪು ಮರುಪರಿಶೀಲಿಸಬೇಕೆಂಬ ಕೋರಿಕೆಯನ್ನು ವಿಸ್ತೃತ ಪೀಠಕ್ಕೆ ಹಸ್ತಾಂತರಿಸಬೇಕೆ ಎಂಬ ಕುರಿತು ಮೇ 10ರಿಂದ ವಿಚಾರಣೆ ಆರಂಭಿಸುವುದಾಗಿ ಮೇ 5ರಂದು ನಡೆದ ವಿಚಾರಣೆ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಹಾಗೂ ಹಿಮಾ ಕೊಹ್ಲಿ ಅವರನ್ನೊಳಗೊಂಡ ನ್ಯಾಯಪೀಠ ಹೇಳಿತ್ತು.
ಇದಕ್ಕೂ ಮೊದಲು, ಕಾನೂನನ್ನು ಪರಿಶೀಲಿಸಲು ಮತ್ತು ಕಾನೂನನ್ನು ದುರುಪಯೋಗಪಡಿಸಿಕೊಳ್ಳುವ ಘಟನೆಗಳ ಬಗ್ಗೆ ಹೆಚ್ಚಿನ ಕಾಲಾವಕಾಶದ ಕೋರಿಕೆಯ ಮೇರೆಗೆ ನ್ಯಾಯಾಲಯವು ಸರ್ಕಾರಕ್ಕೆ ಕಠಿಣ ಪ್ರಶ್ನೆಗಳನ್ನು ಕೇಳಿತು.
1962ರ ತೀರ್ಪು ಆಯಾ ಕಾಲಕ್ಕೆ ಅನುಗುಣವಾಗಿ ಪರೀಕ್ಷೆಗೆ ಒಳಪಟ್ಟಿದೆ. ಅದನ್ನು ಮರು ವಿಮರ್ಶಿಸಬೇಕಾದ ಅಗತ್ಯವಿಲ್ಲ. ದೇಶದ್ರೋಹ ಕಾಯ್ದೆ ದುರ್ಬಳಕೆಯಾಗುತ್ತಿದೆ ಎಂದು ಅರ್ಜಿದಾರರು ಹೇಳುತ್ತಿದ್ದಾರೆ. ಕಾಯ್ದೆ ರದ್ದುಗೊಳಿಸಲು ಅದು ಆಧಾರವಾಗುವುದಿಲ್ಲ. ಬದಲಾಗಿ, ದುರ್ಬಳಕೆ ತಡೆಯಲು ಪರಿಹಾರ ಹುಡುಕಬೇಕು ಎಂದು ಕೇಂದ್ರ ಸರ್ಕಾರದ ಪರವಾಗಿ ಹಾಜರಿದ್ದ ಹಿರಿಯ ವಕೀಲ ತುಷಾರ್ ಮೆಹ್ತಾ ವಿಚಾರಣೆ ವೇಳೆ ಹೇಳಿದ್ದರು.
“ಯಾರಾದರೂ ತಿಂಗಳುಗಟ್ಟಲೆ ಜೈಲಿನಲ್ಲಿ ಇರಬಹುದೇ? ನಿಮ್ಮ ಅಫಿಡವಿಟ್ ನಾಗರಿಕ ಸ್ವಾತಂತ್ರ್ಯಗಳ ಬಗ್ಗೆ ಹೇಳುತ್ತದೆ. ನೀವು ಆ ಸ್ವಾತಂತ್ರ್ಯಗಳನ್ನು ಹೇಗೆ ರಕ್ಷಿಸುತ್ತೀರಿ,” ಎಂದು ಮುಖ್ಯ ನ್ಯಾಯಮೂರ್ತಿ ಪ್ರಶ್ನಿಸಿದರು.
ಹಲವು ಸರ್ಕಾರಗಳು ರಾಜಕೀಯ ವೈರತ್ವ ಸಾಧನೆಗಾಗಿ ‘ದೇಶದ್ರೋಹ’ ಕಾನೂನನ್ನು ದುರ್ಬಳಕೆ ಮಾಡಿಕೊಂಡಿವೆ ಎಂಬ ವಿಚಾರವು ಹಲವು ವರ್ಷಗಳಿಂದ ಸಾರ್ವಜನಿಕ ವಾಗಿ ಚರ್ಚೆಯಾಗುತ್ತಿದೆ. ಹಾಗಾಗಿಯೇ, ಈ ಕಾನೂನನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಹಲವು ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ.
ಸ್ವಾತಂತ್ರ್ಯ ಹೋರಾಟಗಾರರನ್ನು ಶಿಕ್ಷಿಸುವುದಕ್ಕಾಗಿ ಬ್ರಿಟಿಷರು ಈ ಕಾನೂನು ಜಾರಿಗೊಳಿಸಿದ್ದರು. ಸ್ವಾತಂತ್ರ್ಯ ಬಂದು 75 ವರ್ಷದ ನಂತರವೂ ಈ ಕಾನೂನಿನ ಅಗತ್ಯ ಇದೆಯೇ ಎಂಬ ಪ್ರಶ್ನೆ ಇದೆ.