ನವದೆಹಲಿ : ಕೇಂದ್ರ ಸರಕಾರವು ಲೋಕಸಭೆಯಲ್ಲಿ ಮಂಡಿಸಿದ ದೇಶದ ರಾಜಧಾನಿ ದೆಹಲಿ ರಾಜ್ಯಕ್ಕೆ ಸಂಬಂಧಿಸಿ ತಂದಿರುವ ರಾಷ್ಟ್ರೀಯ ರಾಜಧಾನಿ ದೆಹಲಿ (ತಿದ್ದುಪಡಿ) ಮಸೂದೆ 2021 ಅನ್ನು ಹಿಂತೆದುಕೊಳ್ಳಬೇಕು ಮತ್ತು ದೆಹಲಿ ಸರಕಾರದ ಅಧಿಕಾರವನ್ನು ಪುನಃಸ್ಥಾಪಿಸಬೇಕೆಂದು ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಆಗ್ರಹಿಸಿದ್ದಾರೆ.
ಇಂದು ದೆಹಲಿಯಲ್ಲಿ ಎಎಪಿ ಅಧಿಕಾರದಲ್ಲಿ ಇರಬಹುದು, ನಾಳೆ ಮತ್ತೊಬ್ಬರು ಬರಬಹುದು. ಆದರೆ ಚುನಾಯಿತ ರಾಜ್ಯಗಳ ಮತ್ತು ಕೇಂದ್ರ ಪ್ರಾಂತ್ಯಗಳ ಪ್ರಜಾಪ್ರಭುತ್ವದ ಹಕ್ಕುಗಳನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಕೇಂದ್ರವು ಮಸೂದೆಯನ್ನು ಹಿಂತೆದುಕೊಳ್ಳಬೇಕೆಂದು ಎಎನ್‌ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡುವಾಗ ಆಗ್ರಹಿಸಿದ್ದಾರೆ.
ಈ ಬಗ್ಗೆ ಇಂದು ನಡೆಯಲಿರುವ ರಾಜ್ಯಸಭೆಯಲ್ಲಿ ಚರ್ಚಿಸುವುದಾಗಿ ತಿಳಿಸಿದರು.
ಪ್ರತಿಪಕ್ಷಗಳ ವಿರೋಧವನ್ನು ಲೆಕ್ಕಿಸದ ಕೇಂದ್ರ ಸರಕಾರವು ರಾಷ್ಟ್ರೀಯ ರಾಜಧಾನಿ ದೆಹಲಿ ಸರಕಾರ (ತಿದ್ದುಪಡಿ) ಮಸೂದೆ-2021ನ್ನು ಲೋಕಸಭೆಯ ಸದನದಲ್ಲಿ ಮಂಡಿಸಿ ಅಂಗೀಕಾರ ಪಡೆದುಕೊಂಡು ಅದನ್ನು ರಾಜ್ಯಸಭೆಗೆ ವರ್ಗಾಯಿಸಿತು.
ಈ ಮಸೂದೆಯು ರಾಜ್ಯದ ಶಾಸಕಾಂಗ ವಿಧಾನಸಭೆಯಿಂದ ಮಾಡಲ್ಪಟ್ಟ ಯಾವುದೇ ಕಾನೂನನ್ನು ಉಲ್ಲೇಖಿಸುವ ಸಂದರ್ಭದಲ್ಲಿ ʻʻಸರಕಾರʼʼ ಎಂಬದ ಪದದ ಜಾಗದಲ್ಲಿ ಲೆಫ್ಟಿನೆಂಟ್ ಗವರ್ನರ್ ಅನ್ನು ಸೂಚಿಸುವುದಿದೆ. ಈ ಮಸೂದೆಯು ದೆಹಲಿಯ ರಾಷ್ಟ್ರೀಯ ರಾಜಧಾನಿ ಕಾಯ್ದೆ-1991ನ್ನು ತಿದ್ದುಪಡಿ ಸದನದಲ್ಲಿ ಮಂಡಿಸಲಾಗಿದೆ.
ಇದು ಸ್ಪಷ್ಟವಾಗಿ ದೆಹಲಿಗೆ ಇರುವ ಸ್ಥಾನಮಾನವನ್ನು ಕಸಿದುಕೊಳ್ಳು ಪ್ರಯತ್ನವಾಗಿದೆ.
ಸಂಸದ ಸಂಜಯ್ ಸಿಂಗ್ ಸೇರಿದಂತೆ ಆಡಳಿತರೂಢ ಎಎಪಿ ನಾಯಕರು ಈ ಮಸೂದೆಯನ್ನು ಖಂಡಿಸಿದ್ದಾರೆ.
ಕಳೆದ ವಾರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ಪಕ್ಷದ ಇತರ ಸಂಸದರು, ಶಾಸಕರು ಮಸೂದೆಯನ್ನು ವಿರೋಧಿಸಿ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸಿದ್ದರು.