ಜನಗಳ ಹಸಿವೆ, ನಿರುದ್ಯೋಗದ ಬಗ್ಗೆ ಪರಿವೆಯಿಲ್ಲದ ಸರಕಾರದಿಂದ ಸೆಂಟ್ರಲ್‍ ವಿಸ್ತಾ ಪ್ರಾಜೆಕ್ಟಿಗೆ 20 ಸಾವಿರ ಕೋಟಿ – ಬೃಂದಾ ಕಾರಟ್

 

ಜನಗಳು ಹಸಿದಿದ್ದರೂ, ನಿರುದ್ಯೋಗಿಗಳಾಗಿದ್ದರೂ ತಲೆಕೆಡಿಸಿಕೊಳ್ಳದ ಸರಕಾರ ರಾಜಧಾನಿಯ  ಸೆಂಟ್ರಲ್‍ ವಿಸ್ತಾ ಪರಿಯೋಜನೆಗೆ 20,000 ಕೋಟಿ ರೂ. ಖರ್ಚು ಮಾಡಲು ಈಗ ದಾರಿ ಸುಗಮವಾಗಿದೆ. ದೇಶದ ಅಧಿಕಾರ ಕೇಂದ್ರ ಸ್ಥಳದ ‘ಮರುಅಭಿವೃದ್ಧಿ’ಗೆಂದು ಯೋಜಿಸಿರುವ ‘ಸೆಂಟ್ರಲ್‍ ವಿಸ್ತಾ’ಕ್ಕೆ ಸುಪ್ರಿಂ ಕೋರ್ಟ್‍ ಈಗ ಅನುಮತಿ ನೀಡಿದೆ. ಜನವರಿ 5ರಂದು ಮೂವರು ನ್ಯಾಯಾಧೀಶರ ಪೀಠ ಇದರ ವಿರುದ್ಧ ಹಾಕಿದ್ದ ಅರ್ಜಿಗಳ ಮೇಲೆ ನೀಡಿದ 2-1 ಬಹುಮತದ ತೀರ್ಪಿನಲ್ಲಿ ಈ ಅನುಮತಿ ನೀಡಲಾಗಿದೆ.

ಬಹುಮತದ ತೀರ್ಪು ಒಂದು ಚುನಾಯಿತ ಸರಕಾರದ ಆದ್ಯತೆಗಳ ವಿಚಾರಣೆಯನ್ನು ನಡೆಸುವುದು ನ್ಯಾಯಾಲಯದ ಕಾಳಜಿಯಲ್ಲ, ನ್ಯಾಯಾಂಗ ಪರಾಮರ್ಶೆ ಎಂಬುದು ಸರಕಾರದ ಮನಸ್ಸಿನಲ್ಲೇನಿದೆ ಎಂದು ತಿಳಿಯುವ ಸಾಹಸಕ್ಕೆ ಇಳಿಯಬೇಕಾಗಿಲ್ಲ ಎನ್ನುತ್ತ ತಪ್ಪು ಮಾಡಲು ಅಥವ ಯಶಸ್ಸು ಗಳಿಸುವುದು ಸರಕಾರಕ್ಕೆ ಬಿಟ್ಟದ್ದು ಎಂದು ಹೇಳಿರುವುದು ಗಮನಾರ್ಹ.

ಭಿನ್ನಮತದ ತೀರ್ಪು ನೀಡಿದ ನ್ಯಾಯಾಧೀಶರು ಇದರಲ್ಲಿ ಸರಿಯಾದ ರೀತಿಯಲ್ಲಿ ಸಾರ್ವಜನಿಕ ಭಾಗವಹಿಸುವಿಕೆ ಇರಬೇಕಾಗಿತ್ತು, ಪಾರಂಪರಿಕ ಕಟ್ಟಡಗಳ ಸಂರಕ್ಷಣಾ ಸಮಿತಿ(ಹೆಚ್‍.ಇ.ಸಿ.)ಯ ಪೂರ್ವಾನುಮತಿಯನ್ನು ಪಡೆದುಕೊಳ್ಳಬೇಕಾಗಿತ್ತು ಮತ್ತು ಪರಿಣಿತರ ಸಮಿತಿ ‘ಸರಿಯಾಗಿ ಯೋಚಿಸಬೇಕಾಗಿತ್ತು’ ಎಂದು ಹೇಳಿರುವದಾಗಿ ವರದಿಯಾಗಿದೆ. ಸರಕಾರ ಈ ಪರಿಯೋಜನೆಗೆ ಬಂದಿರುವ ಆಕ್ಷೇಪಗಳು ಮತ್ತು ಸಲಹೆಗಳನ್ನು ಪರಿಗಣಿಸಿತು ಎಂದು ತೋರಿಸಲು ಒಂದಾದರೂ ದಸ್ತಾವೇಜನ್ನು ಸಲ್ಲಿಸಿಲ್ಲ ಎಂದಿರುವ ಈ ಭಿನ್ನಮತದ ತೀರ್ಪು, ಸಾಕಷ್ಟು ಪ್ರಮಾಣದಲ್ಲಿ ಸಾರ್ವಜನಿಕ ಭಾಗವಹಿಸುವಿಕೆ ಮತ್ತು ಅನ್ಯಾಯವಾಗುತ್ತಿದೆ ಎಂಬ ಭಾವನೆಯನ್ನು ತಪ್ಪಿಸಲು ಆಕ್ಷೇಪಗಳಿಗೆ ಕಿವಿಗೊಡುವುದು “ನಮ್ಮ ಸಮಾಜದ ಎದೆಯಲ್ಲಿರುವ ಪ್ರಜಾಪ್ರಭುತ್ವ ನೀತಿಯನ್ನು ಬಿಂಬಿಸುತ್ತದೆ” ಎಂದು ಮಾರ್ಮಿಕವಾಗಿ ಹೇಳಿದೆ.

ಈ ಮೊದಲು, ಈ ಪರಿಯೋಜನೆಯ ವಿರುದ್ಧ ಸಲ್ಲಿಸಿದ್ದ ಅರ್ಜಿಗಳ ಬಗೆ ಸುಪ್ರಿಂ ಕೋರ್ಟ್‍ ತೀರ್ಪು ನೀಡುವ ಮೊದಲೇ ಡಿಸೆಂಬರ್‍ 10ರಂದು ಪ್ರಧಾನ ಮಂತ್ರಿಗಳು ಅದರ ಶಂಕುಸ್ಥಾಪನೆಗೆ ಮುಂದಾದ ಬಗ್ಗೆ ದೇಶದ ಸರ್ವೋಚ್ಛ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತ್ತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

“ ಅವರಿಗೆ, ಜನಗಳು ಹಸಿದಿರುವಾಗ, ನಿರುದ್ಯೋಗಿಗಳಾಗಿರುವಾಗ, ಈ ಪರಿಯೋಜನೆಗೆ 20 ಸಾವಿರ ಕೋಟಿ ರೂ.ಗಳನ್ನು ಖರ್ಚುಮಾಡುವುದಕ್ಕೆ ಎಳ್ಳಷ್ಟೂ ಚಿಂತೆಯಿಲ್ಲ. ಅವರು ಇದನ್ನು ಮುಂದೊತ್ತುತ್ತಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ” ಎಂದು ಮೋದಿ ಸರಕಾರದ ನಿಲುವನ್ನು ಹಿರಿಯ ಸಿಪಿಐ(ಎಂ) ಮುಖಂಡರಾದ ಬೃಂದಾ ಕಾರಟ್‍ ಕಟುವಾಗಿ ಟೀಕಿಸಿದ್ದಾರೆ.

ಬೃಂದಾ ಕಾರಟ್

ದೇಶದ ಕೆಲವು ಅತ್ಯುತ್ತಮ ಕಟ್ಟಡ ತಜ್ಞರು, ನಗರ ಯೋಜನಾ ತಜ್ಞರು ಮತ್ತು ನಗರಾಭಿವೃದ್ಧಿಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು ಈ ಪರಿಯೋಜನೆ ಸಂಪೂರ್ಣ ತಪ್ಪು ಎಂದಿದ್ದಾರೆ. ಅವರು ಇದಕ್ಕೆ ಬಲವಾದ ಕಾರಣಗಳನ್ನು ಕೊಟ್ಟಿದ್ದಾರೆ. ಆದರೂ ಸರಕಾರ ಇದನ್ನು ಮಾಡಿಯೇ ತೀರುವುದಾಗಿ ಹೇಳಿದೆ. ದುರದೃಷ್ಟವಶಾತ್ ಇದಕ್ಕೆ ಸಂಬಂಧಪಟ್ಟ ಎಲ್ಲ ಸಮಿತಿಗಳನ್ನು ಮೋದಿ ಸರಕಾರ ಹೇಗೆ ಬುಡಮೇಲು ಮಾಡಿದೆ ಎಂಬುದನ್ನು ನಾವು ನೋಡಿದ್ದೇವೆ ಎಂದು ಮುಂದುವರೆದು ಬೃಂದಾ ಕಾರಟ್‍ ಹೇಳಿದ್ದಾರೆ.

ಈಗಾಗಲೇ ಮರಗಳನ್ನು ಕಡಿಯಲಾಗುತ್ತಿದೆ, ಈ ಪರಿಯೋಜನೆ ಸಾರ್ವಜನಿಕರಿಗೆಂದು ಇರುವ ಮುಕ್ತ ಸ್ಥಳಗಳ ಅತಿಕ್ರಮಣ, ಪ್ರತಿಯೊಂದು ರೀತಿಯಲ್ಲೂ ಇದು ಭೂಕಬಳಿಕೆ ಎಂದು ಪರಿಸರತಜ್ಞರಾದ ಭವ್ರೀನ್‍ ಕಂಧಾರಿ ಹೇಳಿದರೆ, ಇಂತಹ ಪರಿಯೋಜನೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಾರ್ವಜನಿಕ ಸಮಾಲೋಚನೆಗಳು ಅಗತ್ಯ ಎಂದು ಕಟ್ಟಡತಜ್ಞ ನಿವೃತ್ತ ಸೇನಾಧಿಕಾರಿ ಅನುಜ್‍ ಶ್ರೀವಾಸ್ತವ ಹೇಳಿದ್ದಾರೆ.

ಮಹಾಸೋಂಕು ಮತ್ತು ಲಾಕ್‍ಡೌನ್‍ ಗಳಿಂದಾಗಿ ಹಸಿವು ಮತ್ತು ಅಪೌಷ್ಟಿಕತೆಯ ಹಲವಾರು ಉದಾಹರಣೆಗಳಿದ್ದರೂ ಉಚಿತ ಆಹಾರಧಾನ್ಯಗಳನ್ನು ಪೂರೈಸಲು ನಿರಾಕರಿಸಿರುವ ಸರಕಾರವಿದು. “ಜನಗಳ ಅಗತ್ಯಗಳಿಗೆ ಈ ಮೋದಿ ಸರಕಾರ ಎಷ್ಟು ಸಂವೇದನಾಶೂನ್ಯವಾಗಿದೆ ಎಂಬುದನ್ನು ಇದು ತೋರಿಸುತ್ತದೆ. ಸಾರ್ವಜನಿಕರಿಗೆ ಆಹಾರಧಾನ್ಯಗಳು ಬೇಕು, ಕೆಲಸ ಬೇಕು, ಸರಕಾರೀ ಮಂತ್ರಿಗಳಿಗೆ ಬೃಹತ್‍ ಗಾತ್ರದ ಅರಮನೆಯಂತಹ ಭವನಗಳು ಬೇಕಿಲ್ಲ. ಇದು ಆಘಾತಕಾರಿ” ಎಂದು ಬೃಂದಾ ಕಾರಟ್‍ ಮುಂದುವರೆದು ಹೇಳಿದ್ದಾರೆ.

“ಪ್ರಧಾನ ಮಂತ್ರಿ ಮೋದಿ ರಾಮಮಂದಿರ ಮತ್ತು ದಿಲ್ಲಿಯ ಸೆಂಟ್ರಲ್‍ ವಿಸ್ತಾ ಪರಿಯೋಜನೆಯನ್ನು ಒಂದು ಹೊಸ ಪ್ರಭುತ್ವ ವ್ಯವಸ್ಥೆಯ  ಲಾಂಛನವನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ.  ಭಾರತೀಯ ಸಂವಿಧಾನದಲ್ಲಿ ಕಂಡರಿಸಿದ ಪ್ರಭುತ್ವದ ಜಾತ್ಯಾತೀತ ಕಲ್ಯಾಣಕಾರಿ ಲಕ್ಷಣಗಳಿಗೂ ಇದಕ್ಕೂ ಅಜಗಜಾಂತರವಿದೆ” ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿಯವರು ಕೂಡ ಕೊಲ್ಕತಾದಲ್ಲಿ ಸಮಾರಂಭವೊಂದರಲ್ಲಿ ಟಿಪ್ಪಣಿ ಮಾಡಿದ್ದಾರೆ.

ವ್ಯಂಗ್ಯಚಿತ್ರ: ಸಜಿತ್‍ ಕುಮಾರ್, ಡೆಕ್ಕನ್‍ ಹೆರಾಲ್ಡ್

ಪ್ರಜಾಪ್ರಭುತ್ವ ಬಹಳ ಜಾಸ್ತಿಯಾಯ್ತು!
ಕೇವಲ ನನಗೆ ಮತ್ತು ನನ್ನ ಪಕ್ಷಕ್ಕಾಗಿ ಒಂದು ದ್ವೀಪವಾಗಿ
ಇದರ ಮರು ಯೋಜನೆ ತಯಾರಿಸಿ

 

 

 

Donate Janashakthi Media

Leave a Reply

Your email address will not be published. Required fields are marked *