ನವದೆಹಲಿ: ಹತ್ತು ಕೇಂದ್ರ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ, ಮತ್ತು ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ಹಲವು ಕೃಷಿ ಕೂಲಿಕಾರ ಸಂಘಟನೆಗಳು ಬೆಂಬಲಿಸಿದ್ದ ಜುಲೈ 9ರ ಸಾರ್ವತ್ರಿಕ ಮುಷ್ಕರ ಭವ್ಯ ಯಶಸ್ಸನ್ನು ಗಳಿಸಿದೆ ಎಂದು ಕೇಂದ್ರ ಕಾರ್ಮಿಕ ಸಂಘಗಳು ಮತ್ತು ಸ್ವತಂತ್ರ ವಲಯವಾರು ಒಕ್ಕೂಟಗಳ ವೇದಿಕೆಯ ಜಂಟಿ ಪತ್ರಿಕಾ ಹೇಳಿಕೆ ತಿಳಿಸಿದೆ. ಇದಕ್ಕೆ ದೇಶದ ಕಾರ್ಮಿಕರು, ರೈತರು, ಕೃಷಿ ಕೂಲಿಕಾರರು ಮತ್ತು ಜನತೆಯನ್ನು ಅದು ಅಭಿನಂದಿಸಿದೆ. ಕೋಟಿ
ದೇಶಾದ್ಯಂತ ಮುಷ್ಕರ ಕಾರ್ಯಾಚರಣೆಗಳಲ್ಲಿ, ರಾಸ್ತಾರೋಕೋ, ರೈಲ್ ರೋಕೋ ಕಾರ್ಯಾಚರಣೆಗಳಲ್ಲಿ 25 ಕೋಟಿಗಿಂತಲೂ ಹೆಚ್ಚು ಮಂದಿ ಭಾಗವಹಿಸಿದರು ಎಂದು ಪ್ರಾಥಮಿಕ ವರದಿಗಳಿಂದ ತಿಳಿದು ಬಂದಿದೆ ಎಂದು ಕೇಂದ್ರ ಕಾರ್ಮಿಕ ಸಂಘಟನೆಗಳು ಹೇಳಿವೆ. ಔಪಚಾರಿಕ ಮತ್ತು ಅನೌಪಚಾರಿಕ ವಲಯಗಳೆರಡರಲ್ಲೂ ಕಾರ್ಮಿಕರು ಮುಷ್ಕರ ನಡೆಸಿದ್ದಾರೆ.
ಸರಕಾರೀ ಇಲಾಖೆಗಳು, ಸಾರ್ವಜನಿಕ ವಲಯದ ಉದ್ದಿಮೆಗಳು ಮತ್ತು ಕೈಗಾರಿಕಾ ಪ್ರದೇಶಗಳಲ್ಲಿ ಕಾರ್ಮಿಕರು ಮತ್ತು ನೌಕರರು ಭಾಗವಹಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ, ಬ್ಲಾಕ್ ಮಟ್ಟಗಳಲ್ಲಿ ಅನೌಪಚಾರಿಕ ವಲಯದ ಕಾರ್ಮಿಕರು, ಕೃಷಿ ಕೂಲಿಕಾರರು ,ರೈತರು ಮತ್ತು ಇತರ ವಿಭಾಗಗಳ ಜನರನ್ನು ದೊಡ್ಡ ಸಂಖ್ಯೆಯಲ್ಲಿ ಅಣಿನೆರೆಸಲು ಸಾಧ್ಯವಾಗಿದೆ. ಹಲವು ರಾಜ್ಯಗಳಲ್ಲಿ ವಿದ್ಯಾರ್ಥಿಗಳು ಮತ್ತು ಯುವಜನರು ಭಾಗವಹಿಸಿರುವುದು ಕಂಡು ಬಂದಿದೆ. ಇದರಲ್ಲಿ ಸಂಯುಕ್ತ ಕಿಸಾನ್ ಮೋರ್ಚಾದ ಮತ್ತು ಕೃಷಿ ಕೂಲಿಕಾರ ಸಂಘಟನೆಗಳ ಘಟಕಗಳು ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಜಂಟಿ ಪತ್ರಿಕಾಹೇಳಿಕೆ ತಿಳಿಸಿದೆ. ಕೋಟಿ
ಇದನ್ನೂ ಓದಿ: ಸೇತುವೆ ಕುಸಿತ; ಹಲವು ವಾಹನಗಳು ನದಿಗೆ ಬಿದ್ದು 9 ಜನ ಸಾವು
ಕಲ್ಲಿದ್ದಲು, ಕಬ್ಬಿಣ, ತಾಮ್ರ, ಅಲ್ಯುಮಿನಿಯಂ, ಬಾಕ್ಸೈಟ್, ಚಿನ್ನ ಮತ್ತು ಇತರ ಗಣಿಗಳು , ಉಕ್ಕು, ಬ್ಯಾಂಕ್, ಎಲ್‍ಐಸಿ, ಜಿಐಸಿ, ಕೇಂದ್ರ ಮತ್ತು ರಾಜ್ಯ ಸರಕಾರೀ ಇಲಾಖೆಗಳು, ಪೆಟ್ರೋಲಿಯಂ, ವಿದ್ಯುತ್, ಅಂಚೆ, ಗ್ರಾಮೀಣ ಡಾಕ್ ಸೇವಾ, ಟೆಲಿಕಾಂ, ಅಣುಶಕ್ತಿ, ಸಿಮೆಂಟ್, ಬಂದರು ಮತ್ತು ಹಡಗುಕಟ್ಟೆಗಳು, ಚಹಾ ತೋಟಗಳು, ಸಣಬು ಗಿರಣಿಗಳು, ಸಾರ್ವಜನಿಕ ಸಾರಿಗೆ ಮತ್ತು ಇತರ ಸಾರಿಗೆಗಳಲ್ಲಿ ನೌಕರರು ಮತ್ತು ಕಾರ್ಮಿಕರು ಗಮನಾರ್ಹ ಸಂಖ್ಯೆಯಲ್ಲಿ ಮುಷ್ಕರ ನಡೆಸಿ ರ್ಯಾಲಿಗಳಲ್ಲಿ ಭಾಗವಹಿಸಿದರು. ವಿವಿಧ ಕೈಗಾರಿಕಾ ಪ್ರದೇಶಗಳಲ್ಲಿ, ಕೆಲವು ಬಹುರಾಷ್ಟ್ರೀಯ ಕಂಪನಿಗಳ ನೌಕರರೂ ಭಾಗವಹಿಸಿದರು. ಕೋಟಿ
ರಕ್ಷಣಾ ವಲಯದಲ್ಲೂ, ಈ ಮೊದಲೇ ನಿರ್ಧರಿಸಿದಂತೆ ನೌಕರರು , ಕಾರ್ಮಿಕರು ಒಂದು ಗಂಟೆ ಮುಷ್ಕರ ಪ್ರತಿಭಟನೆಗಳಲ್ಲಿ ಭಾಗವಹಿಸಿ ತಮ್ಮ ಬೆಂಬಲವನ್ನು ದಾಖಲಿಸಿದರು. ರೈಲ್ವೆ ಸಂಘಗಳು ಸೌಹಾರ್ದ ಕಾರ್ಯಾಚರಣೆಗಳನ್ನು ಸಂಘಟಿಸಿದವು.

ಹಲವೆಡೆಗಳಲ್ಲಿ ಕಟ್ಟಡ, ಬೀಡಿ, ಅಂಗನವಾಡಿ, ಆಶಾ, ಮಧ್ಯಾಹ್ನದ ಊಟ ಮತ್ತು ಇತರ ಸ್ಕೀಮ್ ನೌಕರರು ಮುಷ್ಕರ ನಡೆಸಿದ್ದಲ್ಲದೆ, ರಾಸ್ತಾ ರೋಕೋ, ರೈಲ್ ರೋಕೋ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದರು. ವಿದ್ಯಾರ್ಥಿಗಳು, ಯುವಜನರು, ಮಹಿಳೆಯರು, ಸಾಮಾಜಿಕ ಕಾರ್ಯಕರ್ತರು ಮೆರವಣಿಗೆಗಳು, ಧರಣಿಗಳಲ್ಲಿ ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದರು. ಹಲವೆಡೆಗಳಲ್ಲಿ ಮಾರುಕಟ್ಟೆಗಳು ಮುಚ್ಚಿದ್ದವು.
ಪುದುಚೇರಿ, ಅಸ್ಸಾಂ, ಬಿಹಾರ್, ಝಾರ್ಖಂಡ್, ತಮಿಳುನಾಡು, ಪಂಜಾಬ್, ಕೇರಳ, ಪಶ್ಚಿಮ ಬಂಗಾಲ, ಒಡಿಶ, ಕರ್ನಾಟಕ, ಗೋವ, ಮೇಘಾಲಯ, ಮಣಿಪುರ ಮುಂತಾದ ರಾಜ್ಯಗಳಲ್ಲಿ ಬಂದ್ ರೀತಿಯ ಸನ್ನಿವೇಶ ಉಂಟಾಯಿತು. ರಾಜಸ್ತಾನ, ಹರಿಯಾಣ, ತೆಲಂಗಾಣ, ಆಂಧ್ರಪ್ರದೇಶ ಮುಂತಾದೆಡೆಗಳಲ್ಲಿ ಭಾಗಶಃ ಬಂದ್ ಕಾರ್ಯಾಚರಣೆಗಳು ಕಂಡು ಬಂದವು. ಇತರ ರಾಜ್ಯಗಳಿಂದಲೂ ಇಂತಹ ವರದಿಗಳು ಬರುತ್ತಿವೆ ಎಂದು ಪತ್ರಿಕಾ ಹೇಳಿಕೆ ತಿಳಿಸಿದೆ.
ಹಲವೆಡೆಗಳಲ್ಲಿ ಕೇಂದ್ರ ಸರಕಾರ, ಕೆಲವು ರಾಜ್ಯ ಸರಕಾರಗಳು ಮತ್ತು ಕೆಲವು ಮಾಲಕರು ಒಡ್ಡಿ ದ ಅಡ್ಡಿ-ಆತಂಕಗಳನ್ನು, ಬೆದರಿಕೆಗಳನ್ನು ಲೆಕ್ಕಿಸದೆ ಕಾರ್ಯಾಚರಣೆ ಯಶಸ್ವಿಯಾಗಿ ನಡೆಯಿತು.
ಇದು ಮುಂಬರುವ ದಿನಗಳಲ್ಲಿ ಬಹಳಷ್ಟು ವಲಯಗಳ ಮಟ್ಟದಲ್ಲಿ ನಡೆಯಲಿರುವ ದೀರ್ಘ ಸಮರಗಳ ಆರಂಭವಷ್ಟೇ. ಇವು ದೃಢ ನಿರ್ಧಾರದ ಐಕ್ಯ ಪ್ರತಿರೋಧಗಳ ಮೇಲೆ ಗಮನ ಕೇಂದ್ರೀಕರಿಸಲಿದ್ದು, ಇನ್ನೂ ದೊಡ್ಡದಾದ ರಾಷ್ಟ್ರೀಯ ಮಟ್ಟದ ಐಕ್ಯ ಕಾರ್ಯಾಚರಣೆಗೆ ನಾಂದಿಯಾಗಲಿವೆ ಎಂದು ಈ ಜಂಟಿ ಹೇಳಿಕೆ ತಿಳಿಸಿದೆ.
ದಿಲ್ಲಿಯಲ್ಲಿ ಕಾರ್ಮಿಕ ಸಂಘಗಳು ಮುಷ್ಕರ ನಡೆದ ಕೈಗಾರಿಕಾ ಪ್ರದೇಶಗಳಲ್ಲಿ ಮೆರವಣಿಗೆಗಳ ನಂತರ ನವದೆಹಲಿಯ ಜಂತರ್ ಮಂತರ್ ನಲ್ಲಿ ಒಂದು ಸಾರ್ವಜನಿಕ ರ್ಯಾಲಿ ನಡೆಯಿತು. ಇದನ್ನು ಉದ್ದೇಶಿಸಿ ಹತ್ತು ಕೇಂದ್ರೀಯ ಕಾರ್ಮಿಕ ಸಂಘಟನೆಗಳ ರಾಷ್ಟ್ರೀಯ ಮುಖಂಡರು ಮಾತನಾಡಿದರು. ಅಖಿಲ ಭಾರತ ಕಿಸಾನ್ ಸಭಾ ಮತ್ತು ಕೃಷಿ ಕೂಲಿಕಾರರ ಸಂಘದ ಮುಖಂಡರೂ ಮಾತನಾಡಿದರು.
ಇದನ್ನೂ ನೋಡಿ: ಪಾಲಾರ್ ಸಿನಿಮಾ | ಚನ್ನರಾಯಪಟ್ಟಣ ಭೂಸ್ವಾಧೀನ ಹೋರಾಟ Janashakthi Media
