16 ನೇ ಹಣಕಾಸು ಆಯೋಗಕ್ಕೆ 4 ಸದಸ್ಯರನ್ನು ನೇಮಿಸಿದ ಕೇಂದ್ರ ಸರ್ಕಾರ

ನವದೆಹಲಿ: ನೀತಿ ಆಯೋಗದ ಮಾಜಿ ಉಪಾಧ್ಯಕ್ಷ ಅರವಿಂದ್ ಪನಗಾರಿಯಾ ಅವರು ಅಧ್ಯಕ್ಷರಾಗಿ 2023ರ ಡಿಸೆಂಬರ್ 31 ರಂದು ರಚನೆಯಾದ 16 ನೇ ಹಣಕಾಸು ಆಯೋಗಕ್ಕೆ ಸರ್ಕಾರವು ಬುಧವಾರ ನಾಲ್ಕು ಸದಸ್ಯರನ್ನು ನೇಮಿಸಿದೆ. 2026ರ ಏಪ್ರಿಲ್ 1 ರಿಂದ ಪ್ರಾರಂಭವಾಗುವ ಐದು ವರ್ಷಗಳ ಅವಧಿಯನ್ನು ಒಳಗೊಂಡಿರುವ  ರಾಜ್ಯಗಳಿಗೆ ತೆರಿಗೆಗಳ ವಿತರಣೆಯ ಕುರಿತು ಅಕ್ಟೋಬರ್ 31, 2025 ರೊಳಗೆ ತನ್ನ ಶಿಫಾರಸುಗಳನ್ನು ಮಾಡಲು ಆಯೋಗವನ್ನು ವಿನಂತಿಸಲಾಗಿದೆ.

15 ನೇ ಹಣಕಾಸು ಆಯೋಗ ಮಾಜಿ ಸದಸ್ಯರಾಗಿದ್ದ ಅಜಯ್ ನಾರಾಯಣ ಝಾ, ನಿವೃತ್ತ ಅಧಿಕಾರಿ ಆನಿ ಜಾರ್ಜ್ ಮ್ಯಾಥ್ಯೂ ಮತ್ತು ಅರ್ಥ ಗ್ಲೋಬಲ್ ಕಾರ್ಯನಿರ್ವಾಹಕ ನಿರ್ದೇಶಕ ನಿರಂಜನ್ ರಾಜಾಧ್ಯಕ್ಷ ಅವರನ್ನು 16 ನೇ ಹಣಕಾಸು ಆಯೋಗದ ಪೂರ್ಣಾವಧಿ ಸದಸ್ಯರನ್ನಾಗಿ ನೇಮಿಸಲಾಗಿದೆ. ಅಲ್ಲದೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಮೂಹದ ಮುಖ್ಯ ಆರ್ಥಿಕ ಸಲಹೆಗಾರರಾದ ಸೌಮ್ಯ ಕಾಂತಿ ಘೋಷ್ ಅವರನ್ನು 16 ನೇ ಹಣಕಾಸು ಆಯೋಗದ ಅರೆಕಾಲಿಕ ಸದಸ್ಯರನ್ನಾಗಿ ನೇಮಿಸಲಾಗಿದ್ದು ರಾಷ್ಟ್ರಪತಿ ಅನುಮೋದಿಸಿದ್ದಾರೆ.

ಇದನ್ನೂ ಓದಿ: ಚಂಡೀಗಢ | ಬಹುಮತವಿದ್ದರೂ ಕೈ ತಪ್ಪಿದ ಮೇಯರ್‌ ಸ್ಥಾನ – ಕೋರ್ಟ್ ಕದ ತಟ್ಟಿದ ಕಾಂಗ್ರೆಸ್ & ಎಎಪಿ

ಆಯೋಗವು ಕೇಂದ್ರ-ರಾಜ್ಯ ಹಣಕಾಸು ಸಂಬಂಧಗಳ ಕುರಿತು ಸಲಹೆಗಳನ್ನು ನೀಡುವ ಸಾಂವಿಧಾನಿಕ ಸಂಸ್ಥೆಯಾಗಿದೆ. ನವೆಂಬರ್ 29 ರಂದು 16 ನೇ ಹಣಕಾಸು ಆಯೋಗದ ಉಲ್ಲೇಖದ ನಿಯಮಗಳಿಗೆ ಕ್ಯಾಬಿನೆಟ್ ಅನುಮೋದನೆ ನೀಡಿತ್ತು.

ಕೇಂದ್ರ ಮತ್ತು ರಾಜ್ಯಗಳ ನಡುವೆ ತೆರಿಗೆ ಹಂಚಿಕೆ ಮತ್ತು ಆದಾಯ ವರ್ಧನೆಯ ಕ್ರಮಗಳನ್ನು ಸೂಚಿಸುವುದರ ಜೊತೆಗೆ ಇನ್ನಿತರ ವಿಚಾರಗಳ ಬಗ್ಗೆ ಕೈಗೊಳ್ಳುವ ಕ್ರಮಗಳನ್ನು ಶಿಫಾರಸು ಮಾಡಲಿವೆ. ವಿಪತ್ತು ನಿರ್ವಹಣಾ ಉಪಕ್ರಮಗಳಿಗೆ ಹಣಕಾಸು ಒದಗಿಸುವ ಕುರಿತು ಆಯೋಗವು ಪ್ರಸ್ತುತ ಇರುವ ವ್ಯವಸ್ಥೆಗಳನ್ನು ಪರಿಶೀಲಿಸುತ್ತದೆ. ಅಲ್ಲದೆ ವಿಪತ್ತು ನಿರ್ವಹಣಾ ಕಾಯ್ದೆಯಡಿಯಲ್ಲಿ ರಚಿಸಲಾದ ನಿಧಿಗಳ ಬಗ್ಗೆ ಮತ್ತು ಸಮಸ್ಯೆಯ ಬಗ್ಗೆ ಸೂಕ್ತ ಶಿಫಾರಸುಗಳನ್ನು ಮಾಡುತ್ತದೆ.

ನೀತಿ ಆಯೋಗದ ಮಾಜಿ ಉಪಾಧ್ಯಕ್ಷ ಅರವಿಂದ್ ಪನಗಾರಿಯಾ ಅವರ ಅಧ್ಯಕ್ಷತೆಯಲ್ಲಿ ಆಯೋಗವು 4 ಸದಸ್ಯರನ್ನು ಹೊಂದಿರುತ್ತದೆ, ಅವರಿಗೆ ಕಾರ್ಯದರ್ಶಿ ರಿತ್ವಿಕ್ ರಂಜನಂ ಪಾಂಡೆ, ಇಬ್ಬರು ಜಂಟಿ ಕಾರ್ಯದರ್ಶಿಗಳು ಮತ್ತು ಒಬ್ಬ ಆರ್ಥಿಕ ಸಲಹೆಗಾರರು ಸಹಾಯ ಮಾಡುತ್ತಾರೆ.

ಎನ್‌ಕೆ ಸಿಂಗ್ ನೇತೃತ್ವದ ಹಿಂದಿನ 15 ನೇ ಆಯೋಗವು 2021-22 ರಿಂದ 2025-26 ರ ಐದು ವರ್ಷಗಳ ಅವಧಿಯಲ್ಲಿ ಕೇಂದ್ರದ ತೆರಿಗೆ ಸಂಗ್ರಹದಲ್ಲಿನ 41%ವನ್ನು ರಾಜ್ಯಗಳಿಗೆ ನೀಡಬೇಕೆಂದು ಶಿಫಾರಸು ಮಾಡಿತ್ತು. ಇದೇ ಮಟ್ಟದ ಶಿಫಾರಸ್ಸನ್ನು ವೈವಿ ರೆಡ್ಡಿ ಅವರ ನೇತೃತ್ವದ 14 ನೇ ಆಯೋಗವು ಶಿಫಾರಸು ಮಾಡಿತ್ತು.

ವಿಡಿಯೊ ನೋಡಿ: ಸೌಹಾರ್ದತೆಗಾಗಿ ಮಾನವ ಸರಪಳಿ : ರಾಜ್ಯವ್ಯಾಪಿ ಕೈ ಕೈ ಬೆಸೆದ ಶಾಂತಿಪ್ರಿಯ ಮನಸ್ಸುಗಳು Janashakthi Media

Donate Janashakthi Media

Leave a Reply

Your email address will not be published. Required fields are marked *