ನವದೆಹಲಿ: ಕೇಂದ್ರದ ಬಿಜೆಪಿ ಸರಕಾರದ ಸಚಿವ ಸಂಪುಟ ಪುನರ್ ರಚನೆಯ ಬಗ್ಗೆ ಈಗಾಗಲೇ ಹಲವು ದಿನಗಳಿಂದ ಕುತೂಹಲಕ್ಕೆ ತೆರೆ ಬಿದ್ದಿದ್ದೂ ಗುರುವಾರ(ಜುಲೈ 8) ಬೆಳಗ್ಗೆ 10:30ಕ್ಕೆ ಸಂಪುಟ ವಿಸ್ತರಣೆ ಪ್ರಕ್ರಿಯೆಗಳು ನಡೆಯಲಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.
ಇಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರುಗಳ ನಡುವೆ ನಡೆದ ಸರಣಿ ಸಭೆಯ ಬಳಿಕ ಯಾರನ್ನೆಲ್ಲ ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂದು ಅಂತಿಮಗೊಂಡಿದೆ ಎಂದು ತಿಳಿದು ಬಂದಿದೆ. ಜೆ ಪಿ ನಡ್ಡಾ ಸುಮಾರು ಒಂದು ತಿಂಗಳಿನಿಂದಲೂ ಪ್ರಧಾನಿಯವರನ್ನು ನಿರಂತರವಾಗಿ ಭೇಟಿ ನೀಡುತ್ತಿದ್ದರು ಎಂದು ತಿಳಿದು ಬಂದಿದೆ.
ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ 2ನೇ ಬಾರಿಗೆ 2019ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಕೇಂದ್ರ ಸಚಿವ ಸಂಪುಟವನ್ನು ವಿಸ್ತರಣೆ ಮಾಡಿಲ್ಲ. ಪ್ರಸ್ತುತ ಕೇಂದ್ರ ಸಚಿವ ಸಂಪುಟವು ಪ್ರಧಾನಿ ಮೋದಿ ಅವರನ್ನು ಹೊರತುಪಡಿಸಿ 53 ಸಚಿವರನ್ನು ಒಳಗೊಂಡಿದೆ. ಗರಿಷ್ಠ 81 ಸಚಿವರುಗಳಾಗಿ ಕಾರ್ಯನಿರ್ವಹಿಸುವ ಅವಕಾಶವಿದೆ.
ಸಂಪುಟಕ್ಕೆ ಬಿಹಾರದಿಂದ ನಾಲ್ವರನ್ನು ಸೇರಿಸಿಕೊಳ್ಳುವ ಸಾಧ್ಯತೆಯಿದೆ. ಈ ಪೈಕಿ ಎರಡು ಜೆಡಿಯು ಪಕ್ಷಕ್ಕೆ, ಒಂದು ಎಲ್‌ಜೆಪಿ (ಬಂಡಾಯವೆದ್ದ ಪಶುಪತಿ ಪರಾಸ್ ಗುಂಪು) ಮತ್ತೊಂದು ಬಿಜೆಪಿಗೆ ಸಿಗುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ ಎಂದು ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಪಶ್ಚಿಮ ಬಂಗಾಳ, ಉತ್ತರ ಪ್ರದೇಶದ ಬಿಜೆಪಿಯ ಪ್ರಮುಖದ ಹಾಗೂ ಮೈತ್ರಿ ಪಕ್ಷಗಳಾದ ಜೆಡಿ(ಯು) ಮತ್ತು ಅಪ್ನಾ ದಳದ ಪ್ರಮುಖರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಗಳು ಇವೆ. ಎನ್‌ಡಿಎ ಮೈತ್ರಿ ಭಾಗವಾಗಿರುವ ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಶೀಘ್ರದಲ್ಲೇ ಬದಲಾವಣೆಗಳು ಆಗಲಿವೆ ಎಂದು ತಿಳಿದು ಬಂದಿದೆ.
ಸಚಿವರಾಗಿ ಅಸ್ಸಾಂನ ಮಾಜಿ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್, ಜ್ಯೋತಿರಾಧಿತ್ಯ ಸಿಂಧಿಯಾ, ಉತ್ತರಾಖಂಡ ಮಾಜಿ ಮುಖ್ಯಮಂತ್ರಿ ತ್ರಿವೇಂದರ್ ಸಿಂಗ್ ರಾವತ್ ಅವರು ಸಚಿವರಾಗುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ. ಮಧ್ಯಪ್ರದೇಶ ಮತ್ತು ಆಂಧ್ರ ಪ್ರದೇಶದಂತಹ ಅನೇಕ ಪ್ರಮುಖ ರಾಜ್ಯಗಳ ಮುಖಂಡರಿಗೆ ಸಂಪುಟದಲ್ಲಿ ಸ್ಥಾನ ದೊರೆಯುವ ಸಾಧ್ಯತೆಗಳು ಇವೆ.
ಶಿವಸೇನಾ ಮತ್ತು ಶಿರೋಮಣಿ ಅಕಾಲಿ ದಳ ಪಕ್ಷಗಳು ಎನ್‌ಡಿಎ ಮೈತ್ರಿಕೂಟದಿಂದ ನಿರ್ಗಮನ ಮತ್ತು ರಾಮ್ ವಿಲಾಸ್ ಪಾಸ್ವನ್ ಅವರ ನಿಧನದಿಂದ ಅನೇಕ ಸ್ಥಾನಗಳು ಸಂಪುಟದಲ್ಲಿ ಖಾಲಿಯಾಗಿವೆ.
ಮುಂದಿನ ವರ್ಷದ ಆರಂಭದಲ್ಲಿ ವಿಧಾನಸಭೆ ಚುನಾವಣೆ ಎದುರಿಸಲಿರುವ ಐದು ರಾಜ್ಯಗಳಾಗ ಉತ್ತರ ಪ್ರದೇಶ, ಉತ್ತರಾಖಂಡ್, ಗೋವಾ, ಮಣಿಪುರ, ಪಂಜಾಬ್ ರಾಜ್ಯಗಳು ಇವೆ. ಈ ರಾಜ್ಯಗಳ ಸಂಸದರಿಗೂ ಅವಕಾಶ ಸಿಗುವ ಸಾಧ್ಯತೆ ಇದೆ. ವಿಧಾನಸಭಾ ಚುನಾವಣೆಗಳನ್ನು ಗಮನಕ್ಕೆ ತೆಗೆದುಕೊಂಡು ಮಾತುಕತೆ ನಡೆದಿದೆ ಎಂದು ತಿಳಿದು ಬಂದಿದೆ.
ಕೇಂದ್ರದ ಸಾಮಾಜಿಕ ನ್ಯಾಯ ಖಾತೆ ಸಚಿವರಾಗಿದ್ದ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಕರ್ನಾಟಕದ ರಾಜ್ಯಪಾಲರನ್ನಾಗಿ ನೇಮಕ ಮಾಡಿದ್ದರಿಂದ ಮತ್ತೊಂದು ಸಚಿವ ಸ್ಥಾನ ಖಾಲಿಯಾಗಿದೆ. ಥಾವರ್ ಚಂದ್ ಗೆಹ್ಲೋಟ್ ರಾಜ್ಯಸಭಾ ಸದಸ್ಯತ್ವದ ಅವಧಿಯೂ 2024ರ ಏಪ್ರಿಲ್ ವರೆಗೂ ಇತ್ತು. ಈಗ ಈ ರಾಜ್ಯಸಭಾ ಸ್ಥಾನಕ್ಕೆ ಕೇಂದ್ರದಲ್ಲಿ ಸಚಿವರಾಗುವ ಸಾಧ್ಯತೆಗಳಿವೆ.
ಈಗ ಸಚಿವರಾಗಿರುವ ಪ್ರಕಾಶ್ ಜಾವಡೇಕರ್, ನರೇಂದ್ರ ಸಿಂಗ್ ತೋಮರ್, ರವಿಶಂಕರ್ ಪ್ರಸಾದ್, ಪಿಯೂಶ್ ಗೋಯಲ್, ಹರದೀಪ್ ಸಿಂಗ್ ಪುರಿ ಬಳಿ ತಲಾ ಮೂರರಿಂದ ನಾಲ್ಕು ಖಾತೆಗಳಿವೆ. ಈ ಖಾತೆಗಳನ್ನ ವಾಪಸ್ ಪಡೆದು ಹೊಸದಾಗಿ ಸಚಿವರಾಗುವವರಿಗೆ ನೀಡಲಿದ್ದಾರೆ.
ಕರ್ನಾಟಕದ ಚಿತ್ರದುರ್ಗದ ಲೋಕಸಭಾ ಸದಸ್ಯ ಅನೇಕಲ್ ನಾರಾಯಣಸ್ವಾಮಿ ಅವರಿಗೂ ದೆಹಲಿಗೆ ಬರುವಂತೆ ಸೂಚನೆ ಬಂದಿದೆ. ಹೀಗಾಗಿ ನಾರಾಯಣಸ್ವಾಮಿ ಕೂಡ ದೆಹಲಿಗೆ ಕುಟುಂಬ ಸಮೇತ ತೆರಳಿದ್ದಾರೆ. ಅನೇಕಲ್ ನಾರಾಯಣಸ್ವಾಮಿ, ದಲಿತ ಎಡಗೈ ಸಮುದಾಯಕ್ಕೆ ಸೇರಿದವರು. ಈ ಹಿಂದೆ ಇದೇ ಸಮುದಾಯದ ರಮೇಶ್ ಜಿಗಜಿಣಗಿ ಕೇಂದ್ರದಲ್ಲಿ ಮಂತ್ರಿಯಾಗಿದ್ದರು. ಹೀಗಾಗಿ ಈಗ ಅನೇಕಲ್ ನಾರಾಯಣಸ್ವಾಮಿಗೆ ಕೇಂದ್ರದಲ್ಲಿ ಮಂತ್ರಿ ಸ್ಥಾನ ಸಿಗುವ ಸಾಧ್ಯತೆಗಳಿವೆ.
ಅದೇ ರೀತಿಯಲ್ಲಿ ಶೋಭಾ ಕರಂದ್ಲಾಜೆ, ಬಿ.ವೈ.ರಾಘವೇಂದ್ರಗೂ ಕೇಂದ್ರದಲ್ಲಿ ಸಚಿವ ಸ್ಥಾನ ಸಿಗುವ ಸಾಧ್ಯತೆಗಳು ಇವೆ. ಬಿ.ವೈ.ರಾಘವೇಂದ್ರ ಕೇಂದ್ರ ಮಂತ್ರಿಯಾದರೇ, ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಚರ್ಚೆ ಮತ್ತೆ ಮುನ್ನಲೆಗೆ ಬರಬಹುದಾದ ಸಾಧ್ಯತೆಗಳಿವೆ.
ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿರುವ ಭೂಪೇಂದ್ರ ಯಾದವ್, ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯಿಂದ ವಲಸೆ ಬಂದಿರುವ ದಿನೇಶ್ ತ್ರಿವೇದಿ, ಬಿಜೆಪಿಯಿಂದ ಲೋಕಸಭೆಗೆ ಆಯ್ಕೆಯಾಗಿರುವ ಲಾಕೆಟ್ ಚಟರ್ಜಿ, ರಾಜಸ್ಥಾನದ ರಾಹುಲ್ ಕಾಸ್ವಾನ್ ಹೆಸರುಗಳು ಕೇಳಿ ಬರುತ್ತಿವೆ.
ನರೇಂದ್ರ ಮೋದಿ ನೇತೃತ್ವದ 2ನೇ ಅವಧಿಯ ಅಧಿಕಾರದ ಅವಧಿಯಲ್ಲಿ ಸರಕಾರ ಒಳಗೊಂಡು ಬಹುತೇಕ ಸಚಿವರುಗಳು ತಮ್ಮ ಕಾರ್ಯ ಕ್ಷೇತ್ರಗಳಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸದೆ ಇರುವುದಕ್ಕೆ ಸಾಕಷ್ಟು ಟೀಕೆಗಳು ಬಂದಿದ್ದವು. ಅದರಲ್ಲೂ ವಿಶೇಷವಾಗಿ ಕೋವಿಡ್ ನಿರ್ವಹಣೆಯಲ್ಲಿ ಸರಕಾರದ ವಿಫಲತೆಯಿಂದಾಗಿ ಬಿಜೆಪಿ ಪಕ್ಷವನ್ನು ಟೀಕಿಸುವವರ ಸಂಖ್ಯೆ ದೊಡ್ಡದಾಗಿತ್ತು. ಇವುಗಳೆಲ್ಲವುಗಳ ನಡುವೆ 2019ರಲ್ಲಿ ಅಧಿಕಾರವಹಿಸಿಕೊಂಡ ನಂತರದಲ್ಲಿ ಕೇಂದ್ರದಲ್ಲಿ ಸಂಪುಟ ವಿಸ್ತರಣೆಯಾಗಿರಲಿಲ್ಲ.