ಕೆಂದ್ರ ಸರಕಾರದ ‘ಸಂಕಲ್ಪ ಯಾತ್ರೆ’, ‘ರಥ ಪ್ರಭಾರಿ’ಗಳು, ‘ಸೆಲ್ಫಿ ಪಾಯಿಂಟು’ಗಳು, ‘ಸೆಲ್ಫಿ ಬೂತ್’ ಗಳು ಇತ್ಯಾದಿ

ಕೇಂದ್ರ ಸರಕಾರ ದೇಶಾದ್ಯಂತ ನವಂಬರ್ 20ರಿಂದ ಜನವರಿ 25, 2024ರ ವರೆಗೆ ‘ವಿಕಸಿತ್ ಭಾರತ್ ಸಂಕಲ್ಪ ಯಾತ್ರಾ’ ಎಂಬ ರೋಡ್ ಶೋ ಮಾಡಲು ನಿರ್ಧರಿಸಿದೆಯಂತೆ. ಇದನ್ನು ಕುರಿತಂತೆ ಅಕ್ಟೋಬರ್ 17ರಂದು ಒಂದು ಸುತ್ತೋಲೆ ಹೊರಡಿಸಿ ದೇಶದ ಎಲ್ಲ 765 ಜಿಲ್ಲೆಗಳಲ್ಲಿ ಜಂಟಿ ಕಾರ್ಯದರ್ಶಿ ನಿರ್ದೇಶಕರು/ಉಪ ಕಾರ್ಯದರ್ಶಿ ಹುದ್ದೆಯ ಅಧಿಕಾರಿಗಳನ್ನು “ಜಿಲ್ಲಾ ರಥ ಪ್ರಭಾರಿ”ಗಳನ್ನಾಗಿ ನೇಮಿಸಬೇಕು ಎಂದು ಆದೇಶ ಹೊರಡಿಸಲಾಯಿತು. ಈ ‘ಯಾತ್ರೆ’ ಮತ್ತು ‘ರಥ’ಗಳು, ಅಮೃತ ಮಹೋತ್ಸವಕ್ಕಾಗಿ ಅಲ್ಲ, ‘ಕಳೆದ ಒಂಭತ್ತು ವರ್ಷಗಳ ಸಾಧನೆಗಳ ಆಚರಣೆ ಮತ್ತು ಪ್ರದರ್ಶನಕ್ಕೆ ಮಾತ್ರ ಎಂದೂ ವರದಿಯಾಗಿದೆ. (ದಿ ವೈರ್, ಅಕ್ಟೋಬರ್ 22) ಕೆಂದ್ರ ಸರಕಾರದ

ಇದಕ್ಕೆ ಎರಡು-ಮೂರು ವಾರಗಳ ಮೊದಲು ರಕ್ಷಣಾ ಸಚಿವಾಲಯ ಇದೇ ಉದ್ದೇಶಕ್ಕಾಗಿ ದೇಶಾದ್ಯಂತ ತನ್ನ ವ್ಯಾಪ್ತಿಗೆ ಬರುವ ಸ್ಥಳಗಳಲ್ಲಿ 822 ‘ಸೆಲ್ಫಿ ಪಾಯಿಂಟ್’ಗಳನ್ನು ನಿರ್ಮಿಸಲು ಮತ್ತು ಮತ್ತು ರೈಲ್ವೇ ಸಚಿವಾಲಯ ರೈಲ್ವೆ ನಿಲ್ದಾಣಗಳಲ್ಲಿ 3-ಡಿ ‘ಸೆಲ್ಫಿ ಬೂತ್’ಗಳನ್ನು ನಿರ್ಮಿಸಲು ನಿರ್ಧಾರ ಕೈಗೊಂಡಿದ್ದವು ಎಂದೂ ವರದಿಯಾಗಿತ್ತು.

ಗಮನಾರ್ಹ ಸಂಗತಿಯೆಂದರೆ ಕೊವಿಡ್-19 ಸರ್ಟಿಫಿಕೆಟ್‌ಗಳಲ್ಲಿ ಮತ್ತು ಜಿ-20 ಪ್ರಚಾರದಲ್ಲಿ ಇದ್ದಂತೆ ಈ ಬೂತ್‌ಗಳಲ್ಲಿ, ಪಾಯಿಂಟ್‌ಗಳಲ್ಲಿ ರಾರಾಜಿಸುವುದು ಪ್ರಧಾನಿ ಬಿಂಬಗಳೇ ಎಂದು ಒಬ್ಬ ವಿಶ್ಲೇಷಕರು ಟಿಪ್ಪಣಿ ಮಾಡಿದ್ದಾರೆ.

ರೈಲಂಗಣದಲ್ಲಿ ‘ಪ್ರಧಾನಿಯೊಂದಿಗೆ ಸೆಲ್ಫಿ’ಬೂತುಗಳು

ರೈಲ್ವೆ ಮಂಡಳಿಯ ಮಾಹಿತಿ ಮತ್ತು ಪ್ರಚಾರ ನಿರ್ದೇಶಕರು ಈ ಕುರಿತು ಸಪ್ಟಂಬರ್ 27ರಂದು ರೈಲ್ವೆಯ ಎಲ್ಲ 19 ವಲಯ ಜನರಲ್ ಮ್ಯಾನೇಜರುಗಳಿಗೆ ಹೊರಡಿಸಿದ ನಿರ್ದೇಶನದಲ್ಲಿ ಗರಿಷ್ಟ ಸಂಖ್ಯೆಯಲ್ಲಿ ರೈಲ್ವೆ ನಿಲ್ದಾಣಗಳಲ್ಲಿ ಈ ಕೆಲಸವನ್ನು ಅತ್ಯಂತ ತುರ್ತಿನಿಂದ ಕೈಗೊಳ್ಳಬೇಕು ಎಂದು ಹೇಳಿರುವುದಾಗಿ
ವರದಿಯಾಗಿದೆ.

ಈ ‘ಸೆಲ್ಫಿ ಬೂತ್’ಗಳು ಹೇಗಿರಬೇಕು ಎಂಬುದರ ಡಿಸೈನ್ ವಿವರಗಳನ್ನೂ ರೈಲ್ವೆ ಮಂಡಳಿಯೇ ಕೊಟ್ಟಿದ್ದು, ಅವು ನೀರಿನ ಸಂಪರ್ಕ, ಗ್ರಾಮೀಣ ವಿದ್ಯುದೀಕರಣ, ಅಡುಗೆ ಅನಿಲ ಸಂಪರ್ಕ, ‘ಮೇಕ್‌ಇನ್ ಇಂಡಿಯ’ ಕೊವಿಡ್-19 ಲಸಿಕೆಗಳು, ಜತೆಗೆ ಇಸ್ರೋದಿಂದ ವಿದೇಶಿ ಉಪಗ್ರಹಗಳ ಉಡಾವಣೆ ಮುಂತಾದ ಮೋದಿ
ಸರಕಾರದ ‘ಸಾಧನೆ’ಗಳನ್ನು ಬಿಂಬಿಸುವಂತಿರಬೇಕು ಎಂದು ವಿಧಿಸಲಾಗಿದೆ. ಈಗಾಗಲೇ ಈ ದಿಕ್ಕಿನಲ್ಲಿ ಎಲ್ಲ ರೈಲ್ವೆ ವಲಯಗಳಲ್ಲಿ ಕೆಲಸ ಆರಂಭವಾಗಿದೆ ಎಂದೂ ಹೇಳಲಾಗಿದೆ.

ರೈಲ್ವೆ ನಿಲ್ದಾಣಗಳ ಒಳಾಂಗಣಗಳಲ್ಲಿ, ಪ್ಲಾಟ್‌ಫಾರ್ಮುಗಳಲ್ಲಿ ಇವನ್ನು ನಿರ್ಮಿಸಲಾಗುತ್ತಿದ್ದು, ‘ನಯಾ ಭಾರತ್’/ ‘ನ್ಯೂ ಇಂಡಿಯ’ ಎಂಬ ಫಲಕಗಳು ಮತ್ತು ಪ್ರಧಾನಿಗಳ ಕಟೌಟ್‌ಗಳೊಂದಿಗೆ ಜನಗಳು ಅವುಗಳೊಂದಿಗೆ ‘ಸೆಲ್ಫಿ’ ತೆಗೆದುಕೊಳ್ಳಲು ಅನುವಾಗುವಂತೆ ಇರಬೇಕು ಎಂದು ಇದರ ಡಿಸೈನ್ ವಿಧಿಸಿದೆ. ಈ
ಸೆಲ್ಫಿ ಬೂತ್‌ಗಳನ್ನು ಬಾಳಿಕೆ ಬರುವ 3 ಆಯಾಮಗಳ ಬಹು ಬಾಳಿಕೆಯ ಫೈಬರ್ ಕಲಾಕೃತಿಗಳಿಂದ ಫೈಬರ್, ಮಣ್ಣು, ಎನ್‌ಐಎಸ್ ಪೈಪ್, ಕಬ್ಬಿಣದ ತಂತಿಗಳಿಂದ ಗಟ್ಟಿಗೊಳಿಸಿದ ಪ್ಲಾಸ್ಟರ್ ಆಫ್ ಪ್ಯಾರಿಸ್ ಮುಂತಾದವುಗಳಿಂದ ಮಾಡಬೇಕು ಎಂದು ರೈಲ್ವೆ ಮಂತ್ರಾಲಯದ ಆದೇಶದಲ್ಲಿ ತಿಳಿಸಲಾಗಿದೆಯಂತೆ.

ರಕ್ಷಣಾ ಇಲಾಖೆಯಲ್ಲೂ ಸೆಲ್ಫಿ ಪಾಯಿಂಟುಗಳು

ಇದಕ್ಕೂ ಸ್ವಲ್ಪ ಮೊದಲು,ಅಂದರೆ ಸೆಪ್ಟಂಬರ್ 14ರಂದು ರಕ್ಷಣಾ ಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಆ ಇಲಾಖೆಯ ಪರಾಮರ್ಶೆ ಸಭೆ ರಕ್ಷಣಾ ಮಂತ್ರಾಲಯದ ವಿವಿಧ ಕಚೇರಿಗಳು, ಸ್ಮಾರಕಗಳು, ಸಾರ್ವಜನಿಕ ತಾಣಗಳಲ್ಲಿ ತಮ್ಮ ಇಲಾಖೆಯ ವಿವಿಧ ವಿಭಾಗಗಳಲ್ಲಿ, ಸಂಘಟನೆಗಳಲ್ಲಿ, ಸೇವೆಗಳು, ರಕ್ಷಣಾ ಉದ್ದಿಮೆಯ
ಘಟಕಗಳು, ಗಡಿ ರಸ್ತೆ ಸಂಘಟನೆ(ಬಿಆರ್‌ಒ)ಗಳು, ಕರಾವಳಿ ರಕ್ಷಣಾ ಪಡೆಗಳು, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಘಟನೆ(ಡಿಆರ್‌ಡಿಒ), ಸೈನಿಕ ಶಾಲೆಗಳು, ಎನ್‌ಸಿಸಿ ಮುಂತಾದೆಡೆ ಒಟ್ಟು 822 ಸ್ಥಳಗಳಲ್ಲಿ ರಕ್ಷಣಾ ಮಂತ್ರಾಲಯ ಕಳೆದ 9 ವರ್ಷಗಳಲ್ಲಿ ಮಾಡಿದ ಕೆಲಸಗಳನ್ನು ಬಿಂಬಿಸಲು ‘ಸೆಲ್ಫಿ ಪಾಯಿಂಟ್’ಗಳನ್ನು ನಿರ್ಮಿಸಲು ನಿರ್ಧರಿಸಿತು. ಇಲ್ಲಿಯೂ ಪ್ರಧಾನಿಗಳ ಒಂದು ಚಿತ್ರವಿದ್ದೇ ಇರುತ್ತದೆ, ಈ ಪಾಯಿಂಟುಗಳನ್ನು ಜನಗಳು ತಾವೂ ಈ ಸಾಧನೆಗಳ ಭಾಗ ಎನ್ನುವ ಭಾವನೆ ಬರುವಂತೆ ನಿರ್ಮಿಸಬೇಕು ಎಂದೂ ನಿರ್ಧರಿಸಲಾಗಿದೆಯಂತೆ. ಯುದ್ಧ ಸ್ಮಾರಕಗಳು, ರಕ್ಷಣಾ ಮ್ಯೂಸಿಯಂಗಳು, ರೈಲ್ವೆ ಮತ್ತು ಮೆಟ್ರೊ ನಿಲ್ದಾಣಗಳು, ಬಸ್ ನಿಲ್ದಾಣಗಳು, ವಿಮಾನ ನಿಲ್ದಾಣಗಳು, ಮಾಲ್‌ಗಳು, ಮಾರುಕಟ್ಟೆ ಸ್ಥಳಗಳು, ಶಾಲೆಗಳು, ಕಾಲೇಜುಗಳು, ಉತ್ಸವದ ಸ್ಥಳಗಳು, ಪ್ರವಾಸೀ ತಾಣಗಳು ಮುಂತಾದೆಡೆಗಳಲ್ಲಿ ಇವನ್ನು ಸ್ಥಾಪಿಸಲಾಗುವುದಂತೆ.

ಇದನ್ನೂ ಓದಿ:Rajasthan Election| ರಾಜಸ್ಥಾನ ವಿಧಾನಸಭಾ ಚುನಾವಣೆಯ ಭವಿಷ್ಯ ನಿರ್ಧರಿಸಲಿದೆ ಈ 5 ಅಂಶಗಳು

ಈ 822 ಸೆಲ್ಫಿ ಪಾಯಿಂಟುಗಳ ನಿರ್ಮಾಣದ ಕೋಟಾಗಳನ್ನೂ ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ. ರಕ್ಷಣಾ ಪಡೆಗಳ ಮುಖ್ಯಸ್ಥರ ನೇತೃತ್ವದ ಮಿಲಿಟರಿ ವ್ಯವಹಾರಗಳ ಇಲಾಖೆ 300, ಇವುಗಳಲ್ಲಿ ಭೂಸೇನೆ 100, ನೌಕಾಸೇನೆ ಮತ್ತು ವೈಮಾನಿಕ ಸೇನೆ ತಲಾ 75, ಮಿಲಿಟರಿ ಇಂಜಿನಿಯರಿಂಗ್ ಸರ್ವಿಸಸ್ ನವರು 50, ರಕ್ಷಣಾ ಕಾರ್ಯದರ್ಶಿಗಳ ನೇತೃತ್ವದ ರಕ್ಷಣಾ ಇಲಾಖೆಯ ಅಡಿಯಲ್ಲಿರುವ ವಿವಿಧ ಸಂಸ್ಥೆ-ಸಂಘಟನೆಗಳು 352, ರಕ್ಷಣಾ ಉತ್ಪಾದನಾ ವಿಭಾಗದ ಜಂಟಿ ಕಾರ್ಯರ್ಶಿಗಳ ನೇತೃತ್ವದಲ್ಲಿ ತಲಾ 20ರಂತೆ ಒಟ್ಟು 100, ಡಿಆರ್‌ಡಿಒ 50 ಮತ್ತು ಮಾಜಿ ಸೈನಿಕರ ಕಲ್ಯಾಣ ವಿಭಾಗ 20 ಸೆಲ್ಫಿ ಪಾಯಿಂಟುಗಳನ್ನು ನಿರ್ಮಿಸಬೇಕೆಂದು  ತಿಳಿಸಲಾಗಿದೆ.

ನಿಮ್ಮೆಲ್ಲ ಸಮಸ್ಯೆಗಳಿಗೆ ಏಕೈಕ ಪರಿಹಾರ ಕೃಪೆ: ಸತೀಶ ಆಚಾರ್ಯ, ಮೊಲಿಟಿಕ್ಸ್‍.ಇನ್

ಈ ಸೆಲ್ಫಿ ಪಾಯಿಂಟುಗಳನ್ನು ಹೇಗೆ ನಿರ್ಮಿಸಬೇಕು, ಯಾವ-ಯಾವ ವಿಷಯದ ಮೇಲೆ ನಿರ್ಮಿಸಬೇಕು ಇತ್ಯಾದಿಗಳ ಬಗ್ಗೆ ವಿವರವಾದ ನಿರ್ದೇಶನಗಳನ್ನು ಕೊಡಲಾಗಿದ್ದು ಈ ಕೆಲಸವನ್ನು ತಕ್ಷಣ ಆರಂಭಿಸಿ ‘ಕೈಗೊಂಡ ಕ್ರಮ’ಗಳ ವರದಿಗಳನ್ನು ಕಳಿಸಬೇಕು, ಇವೆಲ್ಲದಕ್ಕೆ ಒಂದು ಪ್ರತ್ಯೇಕ ಆಪ್, ಎಕ್ಸ್, ಫೇಸ್‌ಬುಕ್, ಇನ್‍ಸ್ಟಾಗ್ರಾಂ, ಇ-ಮೇಲ್, ವಾಟ್ಸ್-ಆಪ್ ಇತ್ಯಾದಿ ಸಾಮಾಜಿಕ ಮಾಧ್ಯಮ ವ್ಯವಸ್ಥೆಯನ್ನು ರೂಪಿಸಬೇಕು ಎಂದೂ ಪರಾಮರ್ಶೆ ಸಭೆಯಲ್ಲಿ ಸೂಚಿಸಲಾಗಿತ್ತು.

ವ್ಯಾಪಕ ಟೀಕೆಗಳು

ಇವೆಲ್ಲವೂ ಮುಂದಿನ ಎಪ್ರಿಲ್-ಮೇ 2024ರ ಸಾರ್ವತ್ರಿಕ ಚುನಾವಣೆಗಳಿಗೆ ಸರಕಾರೀ ವೆಚ್ಚದಲ್ಲಿ ಆಳುವ ಪಕ್ಷದ ಸಿದ್ಧತೆ ಎಂದು ಈ ಬಗ್ಗೆ ವ್ಯಾಪಕ ಟೀಕೆಗಳು ಬಂದಿವೆ. ಹಲವು ಹಿರಿಯ ನಿವೃತ್ತ ಸೇನಾಧಿಕಾರಿಗಳು ಇವು ಸರಕಾರೀ ಡಿಕ್ರಿಗಳ ಮೂಲಕ ಸಶಸ್ತ್ರ ಪಡೆಗಳನ್ನು ರಾಜಕೀಯಕರಣಗೊಳಿಸುವ ಪ್ರಯತ್ನಗಳು ಎಂದು ಬಲವಾಗಿ ಖಂಡಿಸಿದ್ದಾರೆ. ಇನ್ನೂ ಕಳವಳದ ಸಂಗತಿಯೆಂದರೆ, ಇಂತಹ ಕಸರತ್ತುಗಳಿಗೆ ಸೇನಾಪಡೆಗಳ ಉನ್ನತ ಅಧಿಕಾರಿಗಳ ಸಮ್ಮತಿಯೂ ಇರುವುದು. ಅವರು ತಮ್ಮ ರಾಜಕೀಯ ಬಾಸ್‌ಗಳನ್ನು ಸುಪ್ರೀತಗೊಳಿಸಲು ಇವನ್ನೆಲ್ಲ ಮಾಡುತ್ತಿರುವಂತೆ ಕಾಣುತ್ತದೆ ಎಂದು ಒಬ್ಬ ಉನ್ನತ ಹುದ್ದೆಯಲ್ಲಿ ನಿವೃತ್ತ ರಾದ ಸೇನಾಧಿಕಾರಿ ಖೇದ ಪಟ್ಟಿದ್ದಾರೆ.

ಸರಕಾರ ಮುಂಬರುವ ಚುನಾವಣೆಗಳಲ್ಲಿ ತನ್ನ ರಾಜಕೀಯ ಉದ್ದೇಶ ಸಾಧನೆಗಾಗಿ ಸೇನಾಪಡೆಗಳನ್ನು ದುರುಪಯೋಗಪಡಿಸಿಕೊಳ್ಳಲು ಹೊರಟಿದೆ ಎಂದು ಇನ್ನೊಬ್ಬ ಸೇನಾಧಿಕಾರಿ ಬೇಸರ ವ್ಯಕ್ತಪಡಿಸಿದ್ದಾರೆ.

ಅಕ್ಟೋಬರ್ 17ರಂದು ಕೇಂದ್ರ ಸರಕಾರ ಹೊರಡಿಸಿದ ಸುತ್ತೋಲೆ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಎಂದು ಕೇಂದ್ರ ಸರಕಾರದ ಕಾರ್ಯದರ್ಶಿಯ ಉನ್ನತ ಹುದ್ದೆಯಿಂದ ನಿವೃತ್ತರಾಗಿರುವ ಹಿರಿಯ ಐಎಎಸ್ ಅಧಿಕಾರಿ ಇಎಎಸ್ ಶರ್ಮ ಮುಖ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಏಕೆಂದರೆ ಈ ವೇಳಗೆ 5 ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳಿಗಾಗಿ ನೀತಿ ಸಂಹಿತೆ ಜಾರಿಗೆ ಬಂದಿತ್ತು. ರಕ್ಷಣಾ ಇಲಾಖೆ ಕೂಡ ತನ್ನ ಅಧಿಕಾರಿಗಳನ್ನು ‘ರಥ ಪ್ರಭಾರಿ’ಗಳಾಗಿ ನೇಮಕ ಮಾಡಬೇಕಾಗಿದ್ದು “ಎನ್‌ಡಿಎ ಸರಕಾರದ ಸಾಧನೆಗಳ ಪ್ರದರ್ಶನಕ್ಕೆ ರಕ್ಷಣಾ ಪಡೆಗಳ ಅಧಿಕಾರಿಗಳ ತಪ್ಪು ನಿಯೋಜನೆ ಗಂಭೀರ ಕಳವಳದ ಸಂಗತಿ. ದೀರ್ಘಕಾಲದಲ್ಲಿ ಇದು ಸೂಕ್ತವೆನಿಸದು” ಎಂದು ಅವರು ಹೇಳಿದ್ದಾರೆ.

ಇನ್ನೊಬ್ಬ ನಿವೃತ್ತ ಐಎಎಸ್ ಅಧಿಕಾರಿ ಎಂ ಜಿ ದೇವಸಹಾಯಂ ಕೂಡ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.

“ಇದು ಅಭೂತಪೂರ್ವ ಕ್ರಮ. ನನ್ನ ಇಡೀ ನಾಗರಿಕ ಸೇವೆಯ ಅವಧಿಯಲ್ಲಿ ಇಂತಹದೊಂದನ್ನು ಕಂಡಿಲ್ಲ. ಇದು ನಾಗರಿಕ ಮತ್ತು ರಕ್ಷಣಾ ಸೇವೆಗಳ ರಾಜಕೀಯಕರಣ ಎಂದು ಬಗೆಯಲ್ಪಡುತ್ತದೆ. ಸರಕಾರದ ಕೆಲಸವನ್ನು ಪ್ರಚಾರ ಮಾಡಲು ಪ್ರöತ್ಯೇಕ ಪ್ರಚಾರ ವಿಭಾಗಗಳೇ ಇವೆ. ಮುಂಬರುವ ರಾಜ್ಯ ಚುನಾವಣೆಗಳು ಮತ್ತು ನಂತರ 2024ರ ಲೋಕಸಭಾ ಚುನಾವಣೆಗಳ ಸಂದರ್ಭದಲ್ಲಿ ನಾಗರಿಕ ಸೇವೆ ಮತ್ತು ರಕ್ಷಣಾ ಸಿಬ್ಬಂದಿಯನ್ನು ವಿಶೇಷ ಪ್ರಚಾರಗಳಿಗೆ ಬಳಸುವುದು ಸರಿಯಲ್ಲ” ಎಂದು ಮಾಜಿ ಸಂಪುಟ ಕಾರ್ಯದರ್ಶಿ ಬಿ.ಕೆ. ಚತುರ್ವೇದಿ ಹೇಳಿದ್ದಾರೆ.

ಒಂದೆಡೆಯಲ್ಲಿ ಎನ್‌ಎಸ್‌ಎಸ್‌ಒ, ಎನ್‌ಎಫ್‌ಎಚ್‌ಎಸ್ ನಂತಹ ಸಂಘಟನೆಗಳನ್ನು ದುರ್ಬಲಗೊಳಿಸುವ ಪ್ರಯತ್ನಗಳಿಂದಾಗಿ ಅವುಗಳ ಮುಖ್ಯಸ್ಥರುಗಳು ರಾಜೀನಾಮೆ ಕೊಡುವಂತೆ ಮಾಡುತ್ತಿದ್ದರೆ, ಇನ್ನೊಂದೆಡೆಯಲ್ಲಿ ಸರಕಾರದ ಕೆಲಸಗಳ ಪ್ರಚಾರಕ್ಕೆ ಇಂತಹ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗುತ್ತಿದೆ
ಎಂದು ಮಾಜಿ ಯೋಜನಾ ಆಯೋಗದ ಸದಸ್ಯ ಎನ್‌ಸಿ. ಸಕ್ಸೆನಾ ಟಿಪ್ಪಣಿ ಮಾಡಿದ್ದಾರೆ.

ಒಟ್ಟಿನಲ್ಲಿ, ಕರ್ನಾಟಕದ ಮತದಾರರ ‘ಕೃಪೆ’ಯಿಂದ ‘ಮನದ ಮಾತಿ’ನ ಬದಲು ‘ಮನದ ಭೀತಿ’ ವ್ಯಕ್ತಗೊಳ್ಳುತ್ತಿದೆಯೇ?

ಎನ್‌ಸಿಇಆರ್‌ಟಿ ಯ ‘ಚಂದ್ರಯಾನ’ ಕುರಿತ ಪ್ರಕಟಣೆಯಲ್ಲೂ …..

‘ವಿಕಸಿತ್ ಭಾರತ್ ಸಂಕಲ್ಪ ಯಾತ್ರಾ’ ಕುರಿತ ಸುತ್ತೋಲೆಯನ್ನು ಪ್ರಕಟಿಸಿದ ದಿನವೇ, ಕೇಂದ್ರ ಶಿಕ್ಷಣ ಮಂತ್ರಿ ನವದೆಹಲಿಯಲ್ಲಿ ಚಂದ್ರಯಾನ-3 ಕುರಿತಂತೆ ಎನ್‌ಸಿಇಆರ್‌ಟಿ ಶಾಲಾ ಮಕ್ಕಳಿಗೆಂದು ಸಿದ್ಧಪಡಿಸಿದ 17 ಪುಟಗಳ ಒಂದಿ ಕಿರು ಪ್ರಕಟಣೆಯನ್ನು ಬಿಡುಗಡೆ ಮಾಡಿದರು. ಇಸ್ರೋದ ಅಧ್ಯಕ್ಷರೂ ಈ ಸಮಾರಂಭದಲ್ಲಿ ಹಾಜರಿದ್ದರು. ಆದರೂ ಈ ಪ್ರಕಟಣೆಯಲ್ಲೂ ಇಸ್ರೋಗಿಂತ ಹೆಚ್ಚಾಗಿ ಪ್ರಧಾನಿಗಳ ಗುಣಗಾನವೇ ಇದೆ ಎಂದು ವರದಿಯಾಗಿದೆ ( ದಿ ಹಿಂದು, ಅ.25). ಚಂದ್ರಯಾನದ ಯಶಸ್ಸಿನ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲೆಂದು ಪ್ರಕಟಿಸಿರುವ ಈ ಕಿರುಹೊತ್ತಿಗೆಯಲ್ಲಿ ವೇದಗಳ, ಪ್ರಾಚೀನ ವೈಮಾನಿಕ ಶಾಸ್ತ್ರ ಇತ್ಯಾದಿಗಳ ಕುರಿತ ಪ್ರಧಾನಿಗಳ ಉದ್ಧರಣೆಗಳೂ ಸೇರಿದಂತೆ ವಿಜ್ಞಾನ ಮತ್ತು ಪುರಾಣದ ಕಲಸುಮೇಲೋಗರವೇ ಹೆಚ್ಚು ಎಂದು ಹೇಳಲಾಗಿದೆ.

“ಈ ವೈಜ್ಞಾನಿಕ ಸಾಧನೆ ಈಗಷ್ಟೇ ನಡೆದಿದೆಯೇ?” ಎಂಬ ಪ್ರಧಾನಿಗಳ ಪ್ರಶ್ನೆಗೆ ಉತ್ತರವಾಗಿ ಇಸ್ರೋದ ಸುಮಾರು ಆರು ದಶಕಗಳ ಕೆಲಸ-ಕಾರ್ಯಗಳ ಒಂದು ನೋಟವನ್ನು ಕೊಡುವ ಬದಲು ನಮ್ಮ ಪ್ರಾಚೀನರಿಗೆ ಎಲ್ಲವೂ ಗೊತ್ತಿತ್ತು ಎಂಬ ಮನೋಭಾವವೇ ತುಂಬಿರುವ ಈ ಪ್ರಕಟಣೆಯ ಉದ್ದೇಶ ಶಾಲಾಮಕ್ಕಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ಬದಲು ‘ಕೇಸರಿ ಪಡೆಯ ಸಿದ್ಧಾಂತ’ವನ್ನು ತುರುಕುವುದೇ ಮುಖ್ಯವಾಗಿರುವಂತೆ ಕಾಣುತ್ತದೆ ಎಂದು ಶಿಕ್ಷಣ ತಜ್ಞರು, ವಿದ್ಯಾರ್ಥಿ ಸಂಘಟನೆಗಳು ಟೀಕಿಸಿದ್ದಾರೆ.

ಅಲ್ಲದೆ ಈ ಪ್ರಕಟಣೆಯಲ್ಲಿ ‘ಇಂಡಿಯಾ’ ಎಂದು ಬಳಸಬೇಕಾದ ಪ್ರತಿಯೊಂದು ಕಡೆಯೂ ‘ಭಾರತ್’ ಎಂದು ಬಳಸಲಾಗಿದೆ ಎಂದು ಕಂಡು ಬಂದಿದೆ. ಇದಾದ ನಂತರ ಇನ್ನು ಮುಂದೆ ಪಠ್ಯಪುಸ್ತಕಗಳಲ್ಲಿ ‘ಇಂಡಿಯಾ’ ಬದಲು ‘ಭಾರತ್’ ಎಂದೇʼ ಬಳಸಬೇಕು ಎಂದು ಎನ್‌ಸಿಇಆರ್‌ಟಿ ಶಿಫಾರಸು ಮಾಡಿದೆ ಎಂಬ ಸುದ್ದಿಯೂ ಪ್ರಕಟವಾಗಿದೆ.

ವಿಡಿಯೋ ನೋಡಿ: ಪ್ಯಾಲಿಸ್ತೇನ್‌ ಪರ ಪ್ರತಿಭಟನೆ ಮಾಡುವುದು ಅಪರಾಧವೆ? Janashakthi Media

Donate Janashakthi Media

Leave a Reply

Your email address will not be published. Required fields are marked *