ಲಸಿಕೆ ನೀತಿ ಕೇಂದ್ರ ಸರ್ಕಾರ ಕಾಳಸಂತೆಗೆ ನೆರವು ನೀಡುವಂತಿದೆ: ಕೇರಳ ಸರ್ಕಾರ

ತಿರುವಂತಪುರಂ: ಕೋವಿಡ್‌ ಲಸಿಕೆ ನೀತಿಯಲ್ಲಿ ಕೇಂದ್ರ ಸರಕಾರ ಧೋರಣೆಯು ಕಾಳಸಂತೆಗೆ ನೆರವು ನೀಡುವಂತದ್ದಾಗಿದೆ. ಖಾಸಗಿ ಸಂಸ್ಥೆಗಳು ಮತ್ತು ಲಸಿಕೆ ತಯಾರಕರು ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಜನರೊಂದಿಗೆ ಆರೋಗ್ಯದ ವಿಚಾರದಲ್ಲಿ ಚೆಲ್ಲಾಟ ವಾಡುತ್ತಿದ್ದಾರೆ ಎಂದು ಕೇರಳ ಸರ್ಕಾರವು ಕೇಂದ್ರ ಸರ್ಕಾರದ ವಿರುದ್ಧ ಕೇರಳ ಉಚ್ಚ ನ್ಯಾಯಾಲಯದಲ ವಿಚಾರಣೆ ಸಂದರ್ಭದಲ್ಲಿ ತಿಳಿಸಿದೆ.

ಕೇರಳ ರಾಜ್ಯದಲ್ಲಿ ಕೋವಿಡ್‌ ಲಸಿಕೆ ಕೊರತೆ ಎದುರಾಗಿರುವ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಅರ್ಜಿ ವಿಚಾರಣೆ ಕೈಗೊಂಡ ನ್ಯಾಯಮೂರ್ತಿಗಳಾದ ಎ ಮೊಹಮ್ಮದ್‌ ಮುಷ್ತಾಕ್‌ ಮತ್ತು ಕೌಸರ್‌ ಎಡಪ್ಪಾಗಡ್‌ ಅವರಿದ್ದ ವಿಭಾಗೀಯ ಪೀಠದ ಮುಂದೆ ರಾಜ್ಯ ಸರಕಾರ ವಿವರಣೆ ನೀಡಿತು.

ಇದನ್ನು ಓದಿ: ಲಸಿಕೆಗೆ ಮೀಸಲಿಟ್ಟ 35 ಸಾವಿರ ಕೋಟಿ ರೂ ಏನಾಯ್ತು? – ಕೇಂದ್ರಕ್ಕೆ ಸುಪ್ರೀಂ ಛಾಟಿ

ರಾಜ್ಯ ಸರ್ಕಾರದ ಪರ ವಕೀಲ ಕೆ ವಿ ಸೋಹನ್‌ ಅವರು “ಕೇಂದ್ರ ಸರ್ಕಾರವು ಕಾಳಸಂತೆಗೆ ಬೆಂಬಲ ನೀಡುತ್ತಿದೆ. ಲಸಿಕೆಗೆ ವಿಭಿನ್ನ ದರಗಳನ್ನು ಏಕೆ ವಿಧಿಸಲಾಗುತ್ತಿದೆ? ಉತ್ಪಾದನೆಯ ದರವನ್ನು ಆಧರಿಸಿ ಲಸಿಕೆಗೆ ದರ ನಿಗದಿ ಮಾಡಬೇಕು. ಸಾಂಕ್ರಾಮಿಕತೆಯ ಸಂದರ್ಭದಲ್ಲಿ ಕಂಪೆನಿಗಳ ಕೈಚಳಕಕ್ಕೆ ಅವಕಾಶ ಮಾಡಿಕೊಡಬಾರದು. ಖಾಸಗಿ ಕಂಪೆನಿಗಳು ಕಾಳಸಂತೆ ವ್ಯವಹಾರ ನಡೆಸಲು ಹೇಗೆ ತಾನೆ ಅವಕಾಶ ಮಾಡಿಕೊಡಲು ಸಾಧ್ಯ? ದುಬಾರಿ ದರಗಳನ್ನು ವಿಧಿಸಲಾಗುತ್ತಿದೆ” ಎಂದು ಪೀಠಕ್ಕೆ ವಿವರಿಸಿದರು.

ಇದನ್ನು ಓದಿ: ದೇಶದೆಲ್ಲೆಡೆ ಉಚಿತ ಲಸಿಕೆಗಾಗಿ ಕೇಂದ್ರಕ್ಕೆ ಒತ್ತಾಯ: ಕೇರಳ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ

ಕೇರಳ ವೈದ್ಯಕೀಯ ಸೇವಾ ಮಂಡಳಿ (ಕೆಎಂಎಸ್‌ಸಿಎಲ್‌) ಪರವಾಗಿ ವಕೀಲ ಎಂ ಅಜಯ್‌ ಅವರು ವಾದ ಮಂಡಿಸಿ ರಾಜ್ಯವು ಎಲ್ಲ ಜನತೆಗೂ ಉಚಿತವಾಗಿ ಕೋವಿಡ್ ಲಸಿಕೆ ನೀಡಲು‌ ನಿರ್ಧರಿಸಿದೆ. ಇದಕ್ಕೆ ಅಗತ್ಯ ಹಣ ಖರ್ಚು ಮಾಡಲೂ ಸಿದ್ಧವಿದೆ. ಈಗಾಗಲೇ ರೂ. 1 ಕೋಟಿ ಲಸಿಕೆ ಪೂರೈಕೆಗೆ ಮನವಿ ಮಾಡಿದ್ದು 70 ಲಕ್ಷ ಕೋವಿಶೀಲ್ಡ್ 30 ಲಕ್ಷ ಕೋವ್ಯಾಕ್ಸಿನ್‌ಗಳಿಗೆ ಕೋರಲಾಗಿದೆ. ಆದರೆ, ಈವರೆಗೆ ಕೇವಲ 8.84 ಲಕ್ಷ ಲಸಿಕೆ ಮಾತ್ರವೇ ಪೂರೈಕೆಯಾಗಿದೆ ಎಂದು ವಾದ ಮಂಡಿಸಿದರು.

ಅರ್ಜಿದಾರರ ಪರವಾಗಿ ವಾದಿಸಿದ ಪ್ರಶಾಂತ್‌ ಸುಗತನ್‌ ಅವರು ಭಾರತ ಸರ್ಕಾರದ ಬೌದ್ಧಿಕ ಹಕ್ಕು ಸ್ವಾಮ್ಯದಡಿ ಇರುವ ಲಸಿಕೆಯ ತಂತ್ರಜ್ಞಾನವನ್ನು ಉತ್ಪಾದಕರಿಗೆ ವರ್ಗಾಯಿಸುವ ಮೂಲಕ ಲಸಿಕೆಯ ಉತ್ಪಾದನೆಯ ವೇಗವನ್ನು ಹೆಚ್ಚಿಸುವಂತೆ ಕೋರಿದರು.

ಮುಂದಿನ ಜೂನ್‌ 8ಕ್ಕೆ ನಿಗದಿಪಡಿಸಿದ ನ್ಯಾಯಾಲಯ ವಿಚಾರಣೆ ಮುಂದೂಡಿತು.

Donate Janashakthi Media

Leave a Reply

Your email address will not be published. Required fields are marked *