ಇತ್ತೀಚಿನ ಭೀಕರ ರೈಲ್ವೆ ಅಫಘಾತಗಳಿಗೆ ಕೇಂದ್ರ ಸರಕಾರ ನೇರ ಜವಾಬ್ದಾರ: ಜನತಾ ಆಯೋಗ

ಜಿ.ಎಸ್‌. ಮಣಿ
ಸಾರ್ವಜನಿಕ ವಲಯ ಮತ್ತು ಸೇವೆಗಳ ಮೇಲಿನ ಜನತಾ ಆಯೋಗ (ಪೀಪಲ್ಸ್ ಕಮಿಶನ್ – ಪ್ರಮುಖ ವಿಷಯ ತಜ್ಞರು,ನ್ಯಾಯಾಧೀಶರು, ಮಾಜಿ ಆಢಳಿತಗಾರರು,  ಟ್ರೇಡ್ ಯೂನಿಯನ್ ಮತ್ತು ಸಾಮಾಜಿಕ ಕಾರ್ಯಕರ್ತರ ಸಂಸ್ಥೆ) ಇತ್ತೀಚಿನ ರೈಲು ಅಫಘಾತಗಳು ವ್ಯವಸ್ಥೆಯ ವೈಫಲ್ಯಗಳ ಮೇಲಿನ ಗಮನದ ಕೊರತೆಯಿಂದಾಗಿ ಆದವು ಎಂದು ಹೇಳಿ ಕೇಂದ್ರ ಸರ್ಕಾರವನ್ನು ಇದಕ್ಕೆ ನೇರ ಜವಾಬುದಾರ ಎಂದು ಹೇಳಿದೆ! ರೈಲ್ವೆ

ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ಅಂದರೆ ಜೂನ್ 17 ರಂದು ನಡೆದ ಒಂದು ಪ್ರಯಾಣಿಕ ರೈಲು ಮತ್ತು ಸರಕು ರೈಲುಗಳ ನಡುವಿನ ಅಫಘಾತ ರೈಲು ಸುರಕ್ಷತೆಯ ಬಗ್ಗೆ ಸರ್ಕಾರದ ಗಮನದ ಕೊರತೆಯ ಪರಿಣಾಮ ಎಂದು ಹೇಳಿದೆ. ಈ ಅಪಘಾತ ಮತ್ತು ಕಳೆದ ಒಂದು ವರ್ಷದ ರೈಲು ಅಫಘಾತಗಳನ್ನು ನೋಡಿದರೆ ಐದು ಮುಖ್ಯ ಅಂಶಗಳು ಎದ್ದು ಕಾಣುತ್ತವೆ ಮತ್ತು ಅವು ರೈಲು ಸುರಕ್ಷೆಯ ವ್ಯವಸ್ಥಾತ್ಮಕ ಅಂಶಗಳತ್ತ ಬೊಟ್ಟು ಮಾಡಿ ತೋರಿಸುತ್ತಿವೆ. ಅವುಗಳೆಂದರೆರೈಲ್ವೆ

i. ಹೆಚ್ಚು ಸಂಖ್ಯೆಯ ಸಿಗ್ನಲ್ ವೈಫಲ್ಯಗಳು ಮತ್ತು ಇಂತಹ ಪರಿಸ್ಥಿತಿಗಳಲ್ಲಿ ಎಂತಹ ಕ್ರಮಗಳನ್ನು  ಕೈಗೊಳ್ಳಬೇಕೆಂಬ ಬಗೆಗೆ ರೈಲು ಸಿಬ್ಬಂದಿಗೆ ಸ್ಪಷ್ಟತೆ ಇಲ್ಲದೆ ಇರುವುದು

ii. ಲೋಕೋ ಪೈಲಟ್ ಗಳ ಅಮಾನವೀಯ ಕಾರ್ಯ ಪರಿಸ್ಥಿತಿ ಗಳಲ್ಲಿ ಸುಧಾರಣೆ ತಂದು ಪರಿಹರಿಸುವ ಸಕ್ಷಮತೆ ಸರ್ಕಾರದಲ್ಲಿ ಇಲ್ಲದೆ ಇರುವುದು

iii. ರೈಲು ಸುರಕ್ಷತಾ ವಿಭಾಗದಲ್ಲಿ ದೊಡ್ಡ ಸಂಖ್ಯೆಯ ಖಾಲಿ ಹುದ್ದೆಗಳು

iv. ಯಾವುದೇ ರೈಲು ಅಫಘಾತವಾದರೂ ಅದನ್ನು ಸುರಕ್ಷತಾ ನೌಕರರಾದ ಲೋಕೋ ಪೈಲಟ್ ಗಳು, ಸ್ಟೇಷನ್ ಮಾಸ್ಟರ್ ಗಳು ಸಿಗ್ನಲ್ ಮತ್ತು ಟೆಲಿ ಸಂಪರ್ಕ ವ್ಯವಸ್ಥೆ, ಇತ್ಯಾದಿಗಳ  ಮೇಲೆ ಹೊರಿಸಿ ತಮ್ಮ ಜವಾಬುದಾರಿಯಿಂದ ನುಣುಚಿಕೊಳ್ಳುವ ಉನ್ನತ ರೈಲು ಅಧಿಕಾರಿಗಳ ಕುತಂತ್ರ ಮತ್ತು

v. ಡಿಕ್ಕಿ ವಿರೋಧಿ ತಾಂತ್ರಿಕ ವ್ಯವಸ್ಥೆಯಾದ ‘ಕವಚ’ ವನ್ನು ಸ್ಥಾಪಿಸುವಲ್ಲಿನ ಅಸಾಮಾನ್ಯ ವಿಳಂಬ

ಇದನ್ನೂ ಓದಿ: ಹತ್ರಾಸ್‌ನಲ್ಲಿ 120ಕ್ಕೂ ಹೆಚ್ಚು ಜನರನ್ನು ಬಲಿ ಪಡೆದ ಭೋಲೆ ಬಾಬಾ ದೊಡ್ಡ ಕ್ರಿಮಿನಲ್‌

ಸಿಗ್ನಲ್ ವೈಫಲ್ಯಗಳು:

ಇತ್ತೀಚಿನ ಡಿಕ್ಕಿಗಳು ಮತ್ತು ಅಪಘಾತಗಳು ಯಾಕೆಂದರೆ ಸಿಗ್ನಲ್ ವಿಫಲವಾದಾಗ ಅಥವಾ ದೋಷಪೂರ್ಣವಾಗಿದ್ದಾಗ Signal Passing at Danger (SPAD) ಎಂದು ಕರೆಯಲಾಗುವ ಸಿಗ್ನಲ್ ದಾಟುವಾಗಿನ ಅಪಾಯದಿಂದ ಆದವು. ಈ ಅಫಘಾತಗಳು ಬಹಳ ಮಟ್ಟಿಗೆ ಚಾಲಕ ಸಿಬ್ಬಂದಿ ಮತ್ತು ಇತರೆ ರೈಲು ಕೆಲಸಗಾರರಿಗೆ ಇಂತಹ ಸಂದರ್ಭದಲ್ಲಿ ಏನು ಮಾಡಬೇಕೆಂಬುದರ ಬಗೆಗೆ ಏನೂ ಗೊತ್ತಿರದೆ ತೀವ್ರ ಗೊಂದಲ ಇರುವುದರಿಂದ ಆದವುಗಳು. ರೈಲು ಚಾಲಕರು ಮತ್ತು ಸ್ಟೇಷನ್ ಮಾಸ್ತರುಗಳಿಗೆ ಸಿಗ್ನಲ್ ಗಳು ವಿಫಲವಾದಗ ಏನೂ ಮಾಡಬೇಕೆಂಬುದರ ಬಗೆಗೆ ಸ್ಪಷ್ಟ ವಿಧಾನಗಳ ನಿರ್ದೇಶನಗಳು ಇರಲೇ ಇಲ್ಲವಾದರಿಂದ ಈ ಅಪಘಾತಗಳು ಸಂಭವಿಸಿದವು. ಸಿಗ್ನಲ್ ಉಪಕರಣಗಳ ವೈಫಲ್ಯಗಳು ಇತ್ತೀಚಿನ ವರ್ಷಗಳಲ್ಲಿ ಕಡಿಮೆಯಾಗಿಲ್ಲ ಎಂಬುದು ಬಹಳ ಆತಂಕಕಾರಿ ವಿಷಯ. 2020-21 ರಲ್ಲಿ 54,444, 2021-22 ರಲ್ಲಿ 65,149 ಮತ್ತು 2022-23 ರಲ್ಲಿ 51,888 ಅಪಘಾತಗಳು ಈ ಕಾರಣಗಳಿಂದ ಆಗಿವೆ. ಭಾರತೀಯ ರೈಲ್ವೇ ಯ ಮಾಸಿಕ ಅಂಕೆ ಸಂಖ್ಯೆ ಪ್ರಕಟನೆಯಲ್ಲಿ ಈ  ಅಂಕೆ ಸಂಖ್ಯೆಗಳು ಈಗ ಲಭ್ಯವೆ ಇಲ್ಲವೆಂದು ಆಯೋಗ ಬಹಳ ಖೇದದಿಂದ ಗಮನಿಸಿದೆ. ಆಳುವವರಿಗೆ ಅನಾನುನುಕೂಲವಾದ ದತ್ತಾಂಶವನ್ನು ಸಾರ್ವಜನಿಕರಿಂದ ಮುಚ್ಚಿಡುವ ಇನ್ನೊಂದು ಪ್ರಕರಣವಿದು.

 ರೈಲು ಚಾಲಕರ ದೀರ್ಘ ದುಡಿಮೆಯ ಸಮಯ ಮತ್ತು ಅಲ್ಪ ವಿರಾಮ ಸುರಕ್ಷತೆಗೆ ಕುತ್ತು

ರೈಲ್ವೇಯ ವಿಶೇಷ ಕಾರ್ಯಪಡೆಯ 2017 ರ ವರದಿಯ ಪ್ರಕಾರ ರೈಲು ಚಾಲಕರು ಮನೆ ವಿರಾಮದಿಂದ ಕರ್ತವ್ಯಕ್ಕೆ ಹಾಜರಾದ ನಂತರ ಈ ಅಪಾಯಗಳು ಆಗುತ್ತವೆ. ಈ ಪಡೆಯ ಪ್ರಕಾರ ಈ ರೈಲು ಚಾಲಕರಿಗೆ ವಿರಾಮದಿಂದ ಕರ್ತವ್ಯಕ್ಕೆ ಹಾಜಾರಾಗುವ ವೇಳೆಗೆ ಅಗತ್ಯವಿರುವಷ್ಟು ವಿರಾಮ ದೊರೆತಿರುವುದಿಲ್ಲ. ರೈಲು ಚಾಲಕರ ಅಪಾರ ಸಂಖ್ಯೆಯ ಹುದ್ದೆಗಳು ಖಾಲಿ ಇರುವುದರಿಂದ ಅವರಿಗೆ ಅವಶ್ಯವಿರುವಷ್ಟು ವಿರಾಮ ನೀಡುವುದು ಸಾಧ್ಯವಾಗುವುದಿಲ್ಲ. ಸುಸಂಘಟಿತ ಉದ್ದಿಮೆಗಳಲ್ಲಿ ಈ ದಿನಗಳಲ್ಲಿ ಕೆಲಸಗಾರರಿಗೆ ದೊರೆವ ಪ್ರಮಾಣದ ವಿರಾಮ ರೈಲು ಚಾಲಕರಿಗೆ ದೊರೆಯುವುದಿಲ್ಲ ಎಂಬುದು ಆಶ್ಚರ್ಯಕರ! ಅವರಿಗೆ 10 ದಿನಗಳಲ್ಲಿ 30 ತಾಸುಗಳ ರೈಲ್ವೆ ವಲಯದಲ್ಲಿ ಹೇಳುವಂತಹ “ಅವಧಿ ವಿರಾಮ”ವಷ್ಟೇ ದೊರೆಯುತ್ತದೆ.

ಜನತಾ ಆಯೋಗ ಇವರಿಗೆ ತಿಂಗಳಲ್ಲಿ ನಾಲ್ಕು ಬಾರಿ  16 ತಾಸುಗಳ ಕೆಲಸದ ನಂತರ 30 ತಾಸುಗಳ ಸತತ ವಿರಾಮ ಬೇಕೆಂಬುದನ್ನು ಪುಷ್ಟಿ ಕೊಟ್ಟು ಬೆಂಬಲಿಸುತ್ತದೆ.  ಜೂನ್ 17 ರ ಅಪಘಾತದ ವರದಿ ಪ್ರಕಾರ ಸರಕು ರೈಲಿನ ಚಾಲಕನಿಗೆ ಸತತ ನಾಲ್ಕು ರಾತ್ರಿಗಳ ಕರ್ತವ್ಯದ ನಂತರ 30 ತಾಸುಗಳ ವಿರಾಮ ದೊರೆತಿತ್ತು. ಅಂದರೆ ಅಪಘಾತದ ಮೊದಲು ಈ ಚಾಲಕನಿಗೆ ಸಿಗಬೇಕಾದ ವಿಶ್ರಾಂತಿ ದೊರೆತಿರಲಿಲ್ಲ. ರೈಲು ಸುರಕ್ಷತೆಯ ಆಯುಕ್ತರು ಅಕ್ಟೋಬರ್ 2023 ರ ವಿಜಯನಗರಮ್ ಅಪಘಾತದ ನಂತರ ಮಾಡಿದ ಶಿಫಾರಸ್ಸಿನ ಪ್ರಕಾರ ರೈಲು ಚಾಲಕರಿಂದ ಎರಡು ಸತತ ರಾತ್ರಿಗಿಂತ ಹೆಚ್ಚಿಗೆ ಕರ್ತವ್ಯವನ್ನು  ವಿಶ್ರಾಂತಿಯಿಲ್ಲದೆ ಮಾಡಿಸಬಾರದು.

ಈ ಚಾಲಕರ ಇನ್ನೊಂದು ಬಹುದಿನದ ಬೇಡಿಕೆ ಅವರ ಕೆಲಸದ ದಿನವನ್ನು ಕಡಿಮೆ ಮಾಡುವುದು. ಸರ್ಕಾರ 1973 ರಷ್ಟು ಹಿಂದೆಯೇ ಅವರ ಕೆಲಸದ ದಿನ 10 ತಾಸುಗಳಿಗೆ ಸೀಮಿತ ವಾಗಿರಬೇಕೆಂಬ ಬೇಡಿಕೆಯನ್ನು ಒಪ್ಪಿತ್ತು. ಆದರೆ ನಂತರದ ಅರ್ಧ ಶತಮಾನಕ್ಕೂ ಹೆಚ್ಚಿನ ಅವಧಿಯಲ್ಲಿ ಸರ್ಕಾರಗಳು ಈ ವಿಷಯದಲ್ಲಿ ಮೀನ ಮೇಷ ಎಣಿಸಿವೆ. ಸರಕು ಸಾಗಣೆ ರೈಲುಗಳ ಚಾಲಕರಿಗೆ ಇದು ಗಂಭೀರ ಸಮಸ್ಯೆ ಯಾಕೆಂದರೆ ಈ ರೈಲುಗಳಿಗೆ ನಿರ್ದಿಷ್ಟ ವೇಳಾಪಟ್ಟಿಗಳಿಲ್ಲ. ಆದ್ದರಿಂದ ಉದ್ದುದ್ದ ಮತ್ತು ಅನಿಶ್ಚಿತ ಕರ್ತವ್ಯ ಅವಧಿಗಳು ಉಂಟಾಗುತ್ತವೆ!

ಮೂರು ಸಾವಿರ (3000) ಸಂಖ್ಯೆಯಲ್ಲಿರುವ ಮಹಿಳಾ ಚಾಲಕರು ಇನ್ನೂ ಹೆಚ್ಚಿನ ಸಮಸ್ಯೆ ಎದುರಿಸುತ್ತಾರೆ ಯಾಕೆಂದರೆ ಅವರಿಗೆ ಮುಟ್ಟಿನ ರಜೆಗಳಿಲ್ಲ; ಹೆರಿಗೆಯ ನಂತರ ಆರು ತಿಂಗಳಿಗೆ ಅವರು ಕರ್ತವ್ಯಕ್ಕೆ ಹಾಜರಾಗಲೇಬೇಕು. ಮಕ್ಕಳನ್ನು ಸಾಕಲು ಅವರಿಗೆ ಅವಕಾಶ ಕಡಿಮೆಯಾಗುತ್ತದೆ. ವಿಚಿತ್ರವೆಂದರೆ ಸ್ವಚ್ಛ ಭಾರತದ ಘೋಷಣೆ ಮಾಡುವ ಸರ್ಕಾರ ಈ ರೈಲುಗಳಲ್ಲಿ ಶೌಚಾಲಯದ ವ್ಯವಸ್ಥೆ ಮಾಡಿಲ್ಲ!

ಭಾರತೀಯ ರೈಲ್ವೆ ರೈಲು ಚಾಲಕರನ್ನು “ನಿರಂತರ ಕೆಲಸಗಾರರು”ಎಂದು ಪರಿಗಣಿಸಿ ವಾರದಲ್ಲಿ ಅವರು 104 ಗಂಟೆಗಳ ಕಾಲ ಕೆಲಸ ಮಾಡಬೇಕೆಂದು ಬಯಸುತ್ತದೆ. ನಿಜದಲ್ಲಿ ಆಂತರಿಕ ಸುತ್ತೋಲೆಗಳನ್ನು ಹೊರಡಿಸಿ ಇವರನ್ನು ವಾರದಲ್ಲಿ  125 ತಾಸುಗಳ ಕಾಲ ದುಡಿಸಲಾಗುತ್ತದೆ. ಇಂತಹ ಅತಿಯಾದ ಕೆಲಸ ರೈಲು ಸುರಕ್ಷೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.

ಖಾಲಿ ಹುದ್ದೆಗಳು ಮತ್ತು ಹೆಚ್ಚುತ್ತಿರುವ ಕೆಲಸದ ಹೊರೆ

ಧೀರ್ಘ ಕರ್ತವ್ಯ-ಸಮಯ ಮತ್ತು ಕಡಿಮೆ ವಿಶ್ರಾಂತಿ, ರೈಲ್ವೆ ಖಾಲಿ ಹುದ್ದೆಗಳನ್ನು ತುಂಬದಿರುವುದರಿಂದ ಉಂಟಾದದ್ದು. ಈಗ ಖಾಲಿ ಹುದ್ದೆಗಳ ಸಂಖ್ಯೆ 3.12 ಲಕ್ಷದಷ್ಟು ದೊಡ್ಡದು. ರೈಲು ಚಾಲಕರ ಖಾಲಿ ಹುದ್ದೆಗಳ ಸಂಖ್ಯೆ 18 ಸಾವಿರದಷ್ಟು. ರೈಲ್ವೆ ಮಂಡಳಿ ಬರೀ 5696 ಚಾಲಕ  ಹುದ್ದೆಗಳನ್ನು ತುಂಬಲು ಘೋಷಣೆ ಮಾಡಿತ್ತು. ದಕ್ಷಿಣ ರೈಲ್ವೆಯ ಚಾಲಕರ ಮುಷ್ಕರ ಮತ್ತು ಇತ್ತೀಚಿನ ದಿನಗಳ ಅಪಘಾತಗಳ ಸಂಖ್ಯೆ ನೋಡಿ 18,799 ಹುದ್ದೆಗಳನ್ನು ತುಂಬುವ ಯೋಜನೆಯನ್ನು ಅದು ಹಾಕಿಕೊಂಡಿದೆ. ಹಿಂದಿನ ಅನುಭವದಿಂದ ಹೇಳುವುದಾದರೆ, ಈ ಹುದ್ದೆಗಳನ್ನು ತುಂಬುವ ಹೊತ್ತಿಗೆ ಇನ್ನಷ್ಟು ಹುದ್ದೆಗಳು ಖಾಲಿ ಬೀಳುತ್ತವೆ!

ಆರ್.ಟಿ.ಐ ಅರ್ಜಿಗೆ ಸಿಕ್ಕ ಮಾಹಿತಿಯ ಪ್ರಕಾರ ಸುರಕ್ಷಾ ವರ್ಗದ ಮಂಜೂರಾತಿ ಹೊಂದಿದ 10 ಲಕ್ಷ ಹುದ್ದೆಗಳ ಸಂಖ್ಯೆಯಲ್ಲಿ ಸುಮಾರು 1.5 ಲಕ್ಷ ಹುದ್ದೆಗಳು ಖಾಲಿ ಇವೆ. ಕೆಲಸಗಾರರ ಸಂಖ್ಯೆಯನ್ನು ನಿರಂತರ ಕಡಿತಗೊಳಿಸುವ ಈ ಹುನ್ನಾರದಲ್ಲಿ ಮೇಲೆ ಹೇಳಿರುವ ಸಂಖ್ಯೆಗಳೂ ರೈಲ್ವೆ ಯನ್ನು ಸುರಕ್ಷಿತವಾಗಿ ನಡೆಸಲು ಸಾಕಾಗುತ್ತದೋ ಇಲ್ಲವೋ ಹೇಳುವುದು ಕಷ್ಟ. ಎಲ್ಲ ತರಹದ ಕೆಲಸಗಾರರ ಸಂಖ್ಯೆಯಲ್ಲೂ ಕೊರತೆಯಿದೆ- ರೈಲು ಚಾಲಕರು, ಇನಸ್ಪೆಕ್ಟರ್ ಗಳು , ಸಿಬ್ಬಂದಿ ಕಂಟ್ರೋಲ್ಲರ್ ಗಳು ಸಿಗ್ನಲ್ ಸುಪರ್ವೈಸರುಗಳು, ಹಾಲಿ ನಿರ್ವಹಣೆಗಾರರು, ಇತ್ಯಾದಿ. ಈ ಕೆಲಸಗಾರರು ಸುರಕ್ಷತೆಯಲ್ಲಿ ಬಹಳ ಮುಖ್ಯವಾದವರು. ಈ ಕೊರತೆ ಹಾಲಿ ನೌಕರರ ಮೇಲೆ ಹೆಚ್ಚಿನ ಒತ್ತಡ ತರುತ್ತದೆ. ಯಾವುದೇ ಸಮಯದಲ್ಲಿ ನೌಕರಿಯಿಂದ ತೆಗೆಯುವ ಬೆದರಿಕೆ ಇನ್ನೂ ಹೆಚ್ಚಿನ ಒತ್ತಡ ತರಬಹುದು ಎಂಬುದು ಈ ಕೊರತೆಯ ಇನ್ನೊಂದು ಆಯಾಮ. ರೈಲ್ವೆ

ಜನತಾ ಆಯೋಗ ರೈಲ್ವೆ ಮಂಡಳಿ ಮತ್ತು ಮಂತ್ರಾಲಯವನ್ನು ಈ ಪರಿಸ್ಥಿತಿಯನ್ನು ತುರ್ತಾಗಿ ಸುಧಾರಿಸಬೇಕಂದು ಒತ್ತಾಯಿಸುತ್ತದೆ. ಯಾಕೆಂದರೆ ಇದು ಪ್ರಯಾಣಿಕರ ಮತ್ತು ಕೆಲಸಗಾರರ ಸುರಕ್ಷೆಯನ್ನು ಒಳಗೊಂಡಿದೆ ಎಂಬುದನ್ನು ಗಮನಿಸಬೇಕು.

ಜವಾಬುದಾರಿಯಿಂದ ನುಣುಚಿಕೊಳ್ಳುವ ಮತ್ತು ಕೆಲಸಗಾರರನ್ನು ದೂಷಿಸುವ ಉನ್ನತ ಅಧಿಕಾರಿಗಳ ಪ್ರವೃತ್ತಿ  

ಈ ಅಪಘಾತಗಳ ಒಂದು ಚಿಂತಾದಾಯಕ ವಿಷಯವೆಂದರೆ ರೈಲು ಮಂತ್ರಿ ಮತ್ತು ಉನ್ನತ ಅಧಿಕಾರಿಗಳ, ರೈಲು ಮಂಡಳಿಯ ಅತ್ಯಂತ ಕೆಳಸ್ತರದ ಕೆಲಸಗಾರರನ್ನು ಅದರಲ್ಲೂ ಚಾಲಕರು, ಸ್ಟೇಷನ್ ಮಾಸ್ಟರುಗಳು, ಸಿಗ್ನಲ್ ಸಿಬ್ಬಂದಿ ಮತ್ತು ಇತರ ಸಿಬ್ಬಂದಿಗಳನ್ನು ದೂಷಿಸುವ ನಡವಳಿಕೆ ಮತ್ತು ಪ್ರವೃತ್ತಿ. ಇತ್ತೀಚಿನ ಅಪಘಾತದ ನಂತರವೂ ಇದನ್ನೇ ಮಾಡಲಾಯಿತು.

ಆಘಾತಕಾರಿ ವಿಷಯವೆಂದರೆ, 14 ಸಾವುಗಳು ಉಂಟಾದ ವಿಜಯನಗರಮ್ ಅಪಘಾತದ ನಂತರ ರೈಲು ಮಂತ್ರಿಗಳು ಚಾಲಕ ಮತ್ತು ಸಹಾಯಕ ಚಾಲಕ ಇಬ್ಬರೂ ಮೊಬೈಲ್ ನಲ್ಲಿ ಕ್ರಿಕೆಟ್ ಮ್ಯಾಚ್ ನೋಡುತ್ತಿದ್ದರು ಎಂಬ ಸುಳ್ಳು ಆರೋಪ ಮಾಡಿದ್ದು. ಇದನ್ನು ರೈಲು ಸುರಕ್ಷತಾ ಆಯುಕ್ತರು ಸಂಪೂರ್ಣ ಸುಳ್ಳು ಎಂದು ಸಿದ್ಧ ಮಾಡಿದರು. ಆದರೂ ರೈಲು ಮಂತ್ರಿ ತಮ್ಮ ಬೇಜವಾಬ್ದಾರಿ ಹೇಳಿಕೆಗೆ ಕ್ಷಮೆ ಕೇಳಲಿಲ್ಲ. ಕೆಲಸಗಾರರ ನೈತಿಕತೆಯ ಮೇಲೆ ಇದು ಹಾನಿಕಾರಕ ಪರಿಣಾಮ ಬೀರುತ್ತದೆ. ರೈಲ್ವೇಯ ಹಿರಿಯ ಅಧಿಕಾರಿಗಳು ರೈಲು ಓಡಾಟದ ವ್ಯತ್ಯಯವನ್ನು ಅವರ ಮನಸ್ಸಿಗೆ ಬಂದಂತೆ ರೈಲು ಸುರಕ್ಷೆಯನ್ನು ನಿರ್ಲಕ್ಷಿಸಿ ಮಾಡಲು ಒತ್ತಡ ಹೇರುತ್ತಾರೆ. ಅವರ ಇಂತಹ ಬೇಜವಾಬ್ದಾರಿ ಆಜ್ಞೆಗಳನ್ನು ನಿರಾಕರಿಸುವ ಕೆಲಸಗಾರರನ್ನು ಸೇವೆಯಿಂದ ತೆಗೆದು ಹಾಕಲಾಗುತ್ತದೆ. ಇಂತಹ ಅಪಾಯಕಾರಿ ತೀರ್ಮಾನಗಳು ರೈಲು ಮಂಡಳಿಯ ಶಾಮಿಲಿನೊಂದಿಗೆ ನಡೆಯುತ್ತದೆ!

‘ಕವಚ್’

ರೈಲುಗಳು ಡಿಕ್ಕಿ ಆಗದಂತೆ ತಡೆಯಲು ರೈಲ್ವೆ ಆಢಳಿತ ‘ಕವಚ್’ ಎಂಬ ಡಿಕ್ಕಿ ವಿರೋಧಿ ತಂತ್ರಜ್ಞಾನವನ್ನು ಅದು ಜಾದೂದಂಡವೋ  ಎಂಬಂತೆ ಝಳಪಿಸುತ್ತಿದೆ. ಇದು ಕೆಲಸ ಮಾಡಲು ನಿಲ್ದಾಣಗಳಲ್ಲಿ, ಹಳಿಗಳ ಮೇಲೆ, ಸಿಗ್ನಲ್ ಗಳಲ್ಲಿ ಮತ್ತು ರೈಲುಗಳಲ್ಲಿ ಎಲ್ಲ ಕಡೆಗಳಲ್ಲೂ ಅತಿ ಉತ್ತಮ ಸಂವಹನ ವ್ಯವಸ್ಥೆಯನ್ನು ಬಯಸುತ್ತದೆ. ಇದರ ಅನುಷ್ಟಾನದಲ್ಲಿ ಅತಿಯಾದ ಆಲಸ್ಯ ಕಂಡು ಬರುತ್ತದೆ. ಕಳೆದ ಮೂರು ವರ್ಷಗಳಲ್ಲಿ ಬರೀ 1500 ಕಿ ಮೀ ದೂರ 65 ರೈಲು ಗಾಡಿಗಳಲ್ಲಿ ಇದನ್ನು ಅಳವಡಿಸಲಾಗಿದೆ. ಭಾರತೀಯ ರೈಲ್ವೆ 68 ಸಾವಿರ ಕಿ ಮೀ ಗಳ ಉದ್ದ ಹೊಂದಿದೆ ಮತ್ತು 14500 ರೈಲು ಗಾಡಿಗಳನ್ನು ಹೊಂದಿದೆ. ಮಾಧ್ಯಮ ವರದಿಗಳ ಪ್ರಕಾರ ಮೂರೇ ಮೂರು ಪೂರೈಕೆದಾರರು ಈ ಕೆಲಸ ಮಾಡುತ್ತಿದ್ದಾರೆ ಮತ್ತು ಅವರ ಸಾಮರ್ಥ್ಯ ಬಹಳ ಸೀಮಿತವಾದದ್ದು ಎಂಬುದು ಸ್ಪಷ್ಟ. ಕಳೆದೆರಡು ಬಜೆಟ ಗಳಲ್ಲಿ ಬರೀ 1200 ಕೋಟಿ ರೂಪಾಯಿಗಳನ್ನು ತೆಗೆದಿರಿಸಲಾಗಿದೆ. ಸರ್ಕಾರ ಇದರ ಅನುಷ್ಟಾನದಲ್ಲಿ ಗಂಭೀರವಾಗಿದೆಯೇ ಎಂಬ ಪ್ರಶ್ನೆ ಸಹಜವಾಗಿಯೇ ಹುಟ್ಟುತ್ತದೆ.

ಇತ್ತೀಚಿನ ಅಪಘಾತ ತೋರಿಸುವಂತೆ, ಆಧುನೀಕರಣ ಒಂದು ಆಯಾಮ ಮಾತ್ರ. ಇದರಲ್ಲಿ ಎಂತಹ ಉತ್ಸಾಹಶೂನ್ಯತೆ ಇದೆ ಎಂಬುದು ಮಾನವ ಸಂಪನ್ಮೂಲಗಳನ್ನು ಈ ಯೋಜನೆಯ ಅನುಷ್ಟಾನದಲ್ಲಿ  ಬಳಸುತ್ತಿರುವ ಮತ್ತು ಅಭಿವೃದ್ದಿ ಪಡಿಸುತ್ತಿರುವ ರೀತಿಯಿಂದ ಗೊತ್ತಾಗುತ್ತದೆ.  ಜನತೆಯ ಆಯೋಗ ಕವಚ್ ನ ವಿಷಯದಲ್ಲಿ ಎಚ್ಚರಿಕೆ ನೀಡಬಯಸುತ್ತದೆ. ಹಳಿ ತಪ್ಪಿದರೆ, ರೈಲು ಡಿಕ್ಕಿಯಾದರೆ ಕವಚ್ ವ್ಯವಸ್ಥೆ ಸಹ ನಾಶವಾಗುತ್ತವೆ. ಆಗ ಇಡೀ ತಂತ್ರಜ್ಞಾನವೇ ನಿರುಪಯುಕ್ತವಾಗುತ್ತದೆ. ರೈಲು ಕೆಲಸಗಾರರಿಗೆ ಇಂತಹ ಸಂದರ್ಭಗಳಲ್ಲಿ ಏನು ಮಾಡಬೇಕು ಎಂಬುದರ ಬಗೆಗೆ ತರಬೇತಿ ನೀಡಬೇಕು. ಹಿರಿಯ ಅಧಿಕಾರಿಗಳೂ ಇಂತಹ ಸಂದರ್ಭಗಳಲ್ಲಿ ಕೆಲಸ ಮಾಡುವಂತಿರಬೇಕು. ಈ ದಿನಗಳ ಅಪಘಾತಗಳು ಈ ಪಾಠವನ್ನು ಕಲಿಸಿವೆ.

ಅಪಘಾತಗಳ ಸರಣಿ ಎಲ್ಲೋ ವ್ಯವಸ್ಥೆಯ ವೈಫಲ್ಯದತ್ತ ಬೊಟ್ಟು ಮಾಡಿ ತೋರಿಸುತ್ತದೆ. ಮೋದಿ ಸರ್ಕಾರದ ಅಲಂಕಾರಿಕ ಕ್ರಮಗಳಾದ ವಂದೇ ಭಾರತ್ ರೈಲು, ಹಳಿಗಳ ಮೇಲಿನ ಒತ್ತಡವನ್ನು ಗಮನಿಸುವ/ ಪರಿಹರಿಸುವ ಬದಲು ಸಾರ್ವಜನಿಕ ಅಭಿಪ್ರಾಯಗಳನ್ನು ತಪ್ಪಾಗಿ ರೂಪಿಸುವ ಪ್ರಯತ್ನಗಳಾಗಿವೆ. ಇಂತಹ ಧೋರಣೆಯ ಪರಿಣಾಮವಾಗಿ ರೈಲು ಸುರಕ್ಷೆ ಅಪಾಯದಲ್ಲಿದೆ ಎಂಬುದು ಸ್ಪಷ್ಟವಾಗುತ್ತದೆ.

ಅಂತಿಮವಾಗಿ ಹೇಳುವುದಾದರೆ ಈ ಜನತೆಯ ಆಯೋಗ ಕೇಂದ್ರ ಸರ್ಕಾರಕ್ಕೆ ಈ ಕೆಳಗಿನ ಕರೆ ನೀಡುತ್ತದೆ:

  • ಸಿಗ್ನಲ್ ವ್ಯವಸ್ಥೆಯನ್ನು ಆಧುನಿಕೀಕರಣಗೊಳಿಸಿ -ಅದಕ್ಕೆ ಅವಶ್ಯವಿರುವ ಹಣಕಾಸನ್ನು ಒದಗಿಸಿ.
  • ಹೊಸ ಉಪಕರಣ ಬಳಕೆಯಲ್ಲಿ ನೌಕರರು ತರಬೇತಿ ಪಡೆಯುವುದು ಅನಿವಾರ್ಯ ಮಾಡಿ
  • ರೈಲು ಚಾಲಕರಿಗೆ ವಾರದ ವಿಶ್ರಾಂತಿ ದೊರೆಯುವಂತೆ ನೋಡಿಕೊಳ್ಳಿ
  • ಚಾಲಕರು ವಾರಕ್ಕೆ 48 ಗಂಟೆಗಳ ಕರ್ತವ್ಯ ಮಾಡುವಂತೆ ನೋಡಿಕೊಳ್ಳಿ -ದಿನಕ್ಕೆ 8 ಗಂಟೆಗಳ  ಕರ್ತವ್ಯ
  • ಚಾಲಕರಿಗೆ ವಾರದ ವಿಶ್ರಾಂತಿ ದೊರೆಯುವಂತೆ ನೋಡಿಕೊಳ್ಳಿ
  • ಚಾಲಕರು ಎರಡು ಸತತ ರಾತ್ರಿಗಳಿಗಿಂತ ಹೆಚ್ಚಿಗೆ ಕೆಲಸ ಮಾಡದಂತೆ ನೋಡಿಕೊಳ್ಳಿ
  • ಕವಚ್ ಯೋಜನೆ ಅನುಷ್ಟಾನಗೊಳಿಸಲು ಮುಂದಿನ ಮೂರು ವರ್ಷಗಳಲ್ಲಿ ಅವಶ್ಯ ಹಣಕಾಸು ಸಿಗುವಂತೆ ನೋಡಿಕೊಳ್ಳಿ

ಇದನ್ನೂ ನೋಡಿ: NTA ಮಾಡಿದ ಎಡವಟ್ಟುಗಳು ಒಂದಲ್ಲ..! ಎರಡಲ್ಲ..!!Janashakthi Media

Donate Janashakthi Media

Leave a Reply

Your email address will not be published. Required fields are marked *