ಸಿ.ಡಿ., ರೆಸಾರ್ಟ್, ಬ್ಲಾಕ್‍ಮೇಲ್ ರಾಜಕಾರಣಗಳ ಹಿಂದಿನ ಕಾರ್ಪೋರೇಟ್ ಕಬಂಧ ಬಾಹುಗಳು

ಸಿ ಡಿ ರಾಜಕಾರಣ, ರೆಸಾರ್ಟ್ ರಾಜಕಾರಣ ಮತ್ತು ಬ್ಲಾಕ್‍ಮೇಲ್ ರಾಜಕಾರಣ ಈ ಮೂರೂ ವಿದ್ಯಮಾನಗಳ ಹಿಂದೆ ಕಾರ್ಪೋರೇಟ್ ಬಂಡವಾಳ, ಕರಾಳ ದಂಧೆಯ ಕಪ್ಪುಹಣ ಮತ್ತು ಮಾರುಕಟ್ಟೆ ಮಾಫಿಯಾದ ಛಾಯೆ ಇರುವುದನ್ನು ಗಮನಿಸದೆ ಹೋದರೆ ಬಹುಶಃ ಮುಂದಿನ ದಿನಗಳಲ್ಲಿ ಚುನಾವಣೆಗಳೇ ಒಂದು ಹಾಸ್ಯ ಪ್ರಹಸನವಾಗಿಬಿಡುತ್ತದೆ. ಇಡೀ ಪ್ರಜಾತಂತ್ರ ವ್ಯವಸ್ಥೆಯನ್ನು ಮಾರುಕಟ್ಟೆ ಶಕ್ತಿಗಳು ಆಕ್ರಮಿಸುತ್ತವೆ. ಜನರು ಜನಪ್ರತಿನಿಧಿಗಳಿಗೆ ಮತ ನೀಡಿದರೆ, ಧನಿಕರು ಧನಪ್ರತಿನಿಧಿಗಳನ್ನು ಶಾಸನ ಸಭೆಗಳಿಗೆ ಕಳಿಸುತ್ತಾರೆ. ಏಕಂದರೆ ಹಣಕಾಸು ಬಂಡವಾಳಿಗರ ಹೂಡಿಕೆಗೆ ವಂದಿಮಾಗಧರ ಬೃಹತ್ ಪಡೆಯ ಅವಶ್ಯಕತೆ ಇರುತ್ತದೆ. ಕೇಂದ್ರ ಸರ್ಕಾರದ ಕೃಷಿ ಮಸೂದೆಗಳು ಇದಕ್ಕೊಂದು ಸ್ಪಷ್ಟ ಉದಾಹರಣೆ. 101 ರೈತರ ಸಾವಿಗೆ ಕನಿಷ್ಠ ಅನುಕಂಪ ತೋರುವುದಕ್ಕೂ ಮುಂದಾಗದ ನರೇಂದ್ರ ಮೋದಿ ಸರ್ಕಾರ ಮಾರುಕಟ್ಟೆ ಶಕ್ತಿಗಳ ಕಬಂಧ ಬಾಹುಗಳಲ್ಲಿ ಸಿಲುಕುವ ಒಂದು ಚುನಾಯಿತ ಸರ್ಕಾರ ಹೇಗಿರುತ್ತದೆ ಎನ್ನುವುದನ್ನು ನಿರೂಪಿಸಿದೆ.

– ನಾ ದಿವಾಕರ

ಮೂರು ನಾಲ್ಕು ದಶಕಗಳ ಹಿಂದೆ ಉತ್ತರ ಭಾರತದ ಹಲವು ರಾಜ್ಯಗಳು ‘ ಆಯಾರಾಂ ಗಯಾರಾಂ ’ ಪಕ್ಷಾಂತರ ರಾಜಕಾರಣದಿಂದ ಕಲುಷಿತಗೊಂಡು ಕಂಗೆಟ್ಟಿದ್ದ ಸಂದರ್ಭದಲ್ಲಿ ಕರ್ನಾಟಕ ಮೌಲ್ಯಾಧಾರಿತ ರಾಜಕಾರಣಕ್ಕೆ ಹೆಸರಾಗಿತ್ತು. ಅಧಿಕಾರಸ್ಥ ರಾಜಕಾರಣಿಗಳ ಉತ್ತರದಾಯಿತ್ವದ ಪ್ರಜ್ಞೆ ಮತ್ತು ಕೊಂಚ ಮಟ್ಟಿನ ಪ್ರಾಮಾಣಿಕತೆ ರಾಜ್ಯ ರಾಜಕಾರಣದಲ್ಲಿ ಹೊಸ ಅಲೆ ಸೃಷ್ಟಿಸಿತ್ತು. ಪಕ್ಷಾಂತರ, ಭಿನ್ನಮತೀಯ ರಾಜಕಾರಣ, ಪಕ್ಷಭೇದ ಮತ್ತು ಹೊಸ ಪಕ್ಷಗಳ ಸ್ಥಾಪನೆ ಇವೆಲ್ಲದರ ನಡುವೆಯೇ ರಾಜ್ಯದಲ್ಲಿ, ಅಧಿಕಾರ ಪೀಠದಲ್ಲಿರುವವರು ‘ ನೈತಿಕ ಹೊಣೆ ’ ಎನ್ನುವ ಪದಗಳ ಅರ್ಥವನ್ನು ಬಲ್ಲವರಾಗಿದ್ದರು. ಅಪವಾದಗಳಿಂದ ಮುಕ್ತವಾದ ರಾಜಕಾರಣ ಅಸಾಧ್ಯವೇ ಆದರೂ ತಮ್ಮ ಮೇಲಿನ ಅಪವಾದಗಳನ್ನು ಸ್ವೀಕರಿಸಿ, ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವ ಒಂದು ಪರಂಪರೆಗೆ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಗಡೆ ಸಾಕ್ಷಿಯಾಗಿದ್ದರು.

ಅಬ್ದುಲ್ ನಜೀರ್ ಸಾಬ್ ಅವರಂತಹ ನಿಸ್ಪೃಹ, ಪ್ರಾಮಾಣಿಕ, ಸರಳ ಸಜ್ಜನಿಕೆಯ ರಾಜಕಾರಣಿಯೊಬ್ಬರು ಈ ನೆಲದ ಮೇಲೆ ಓಡಾಡಿದ್ದರು ಎನ್ನುವುದು ಹೆಮ್ಮೆಯ ವಿಚಾರ. ಆದರೆ ಇಂತಹ ಒಂದು ವ್ಯಕ್ತಿತ್ವ ಕೇವಲ ಮೂರು ನಾಲ್ಕು ದಶಕಗಳ ಒಳಗೆ ಪ್ರಾಚೀನ ಶಿಲಾಶಾಸನದಂತೆ ಕಾಣುತ್ತಿರುವುದು ದುರಂತ. ನಜೀರ್ ಸಾಬ್ ಮೂರು ನಾಲ್ಕು ಪೀಳಿಗೆಯ ರಾಜಕಾರಣಿಗಳಿಗೆ ಪ್ರೇರಣೆಯಾಗಬೇಕಿತ್ತು, ಸ್ಪೂರ್ತಿಯಾಗಬೇಕಿತ್ತು. ಆದರೆ ಅವರ ಒಡನಾಟದಲ್ಲಿದ್ದವರೂ ಇಂದು ಭ್ರಷ್ಟ ಮಾರ್ಗಗಳಲ್ಲಿ ನಡೆಯುತ್ತಿರುವುದನ್ನು ನೋಡಿದರೆ, ನವ ಉದಾರವಾದದ ಕಾರ್ಪೋರೇಟ್ ರಾಜಕಾರಣ ನಮ್ಮ ದೇಶದ ರಾಜಕೀಯ ವಾತಾವರಣವನ್ನು ಎಷ್ಟು ಕಲುಷಿತಗೊಳಿಸಿದೆ ಎಂದು ಅರ್ಥವಾಗುತ್ತದೆ.

ಭಾರತದ ರಾಜಕಾರಣದಲ್ಲಿ ಪ್ರಾಮಾಣಿಕತೆ ಮತ್ತು ಸತ್ಯಸಂಧತೆಯೂ ಇತ್ತು ಎನ್ನುವುದು ಬಹುಶಃ ಮುಂದಿನ ಪೀಳಿಗೆಗೆ ಪುರಾಣ ಕಥನದಂತೆ ಕಾಣುತ್ತದೆ. ನಿಜ, ದೇಶ ಬದಲಾಗಿದೆ, ಜನರೂ ಬದಲಾಗಿದ್ದಾರೆ, ಹಾಗೆಯೇ ರಾಜಕಾರಣಿಗಳೂ ಬದಲಾಗಿದ್ದಾರೆ. ಆದರೆ ರಾಜಕೀಯ ರಂಗದಲ್ಲಿ ಉಂಟಾಗಿರುವ ಬದಲಾವಣೆ ದೇಶವನ್ನು ವಿನಾಶದತ್ತ ಕೊಂಡೊಯ್ಯುವಂತೆ ಕಾಣುತ್ತಿದೆ. ಪಂಚಾಯತ್ ವ್ಯವಸ್ಥೆಗೆ ಒಂದು ಸ್ಪಷ್ಟ ಕಾಯಕಲ್ಪ ನೀಡಿದ ಕರ್ನಾಟಕದಲ್ಲಿ ನಾವು ಗ್ರಾಮ ಪಂಚಾಯತ್ ಸ್ಥಾನಗಳು ಹರಾಜಾಗುತ್ತಿರುವುದನ್ನು ಇತ್ತೀಚೆಗಷ್ಟೇ ನೋಡಿದ್ದೇವೆ. ಜನಪ್ರತಿನಿಧಿ ಎನ್ನುವ ಪದ ಅಧಿಕಾರ ಕೇಂದ್ರಗಳಲ್ಲಿ ತಮ್ಮ ಅಸ್ತಿತ್ವವನ್ನು ಕಳೆದುಕೊಂಡು ಹರಾಜು ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತಿರುವ ಒಂದು ವಿಕೃತ ಪರಂಪರೆಗೆ ಕರ್ನಾಟಕವೇ ಪ್ರಧಾನ ಭೂಮಿಕೆಯಾಗಿರುವುದು ವಿಪರ್ಯಾಸ ಎನಿಸಿದರೂ ಸತ್ಯ.

ಇದನ್ನು ಓದಿ : ಕರಾಳ ಶಾಸನಗಳ ಹೊಳೆಯಲ್ಲಿ ಮಾನವ ಹಕ್ಕುಗಳ ನಾವೆ

ತತ್ವ, ಸಿದ್ಧಾಂತ ಮತ್ತು ಜನಸೇವೆ ಈ ಮೂರೂ ಉದಾತ್ತ ಚಿಂತನೆಗಳಿಗೆ ಎಂದೋ ತಿಲಾಂಜಲಿ ಕೊಟ್ಟಿರುವ ರಾಜ್ಯ ರಾಜಕಾರಣದಲ್ಲಿ ಇಂದು ಉಳಿದಿರುವುದು ಅಧಿಕಾರ ರಾಜಕಾರಣ ಮಾತ್ರ ಎನ್ನುವುದೂ ಅಷ್ಟೇ ಸತ್ಯ. ಏಕೆಂದರೆ ನವ ಉದಾರವಾದ ಮತ್ತು ಹಣಕಾಸು ಬಂಡವಾಳ ಊರ್ಜಿತವಾಗಲು ಬೇಕಿರುವುದು ಒಂದು ಪ್ರಬಲ ಸರ್ಕಾರ ಮತ್ತು ಶಿಥಿಲ ವಿರೋಧ. ರಾಷ್ಟ್ರ ಮಟ್ಟದಲ್ಲಿ ಮತ್ತು ರಾಜ್ಯ ಮಟ್ಟದಲ್ಲಿ ಇದನ್ನು ಸಾಧಿಸಲಾಗಿದೆ. ಹಾಗಾಗಿಯೇ ರಾಜ್ಯದ ರೈತರ ಪಾಲಿಗೆ ಮರಣಶಾಸನವಾಗಲಿರುವ ಕೃಷಿ ಮಸೂದೆ, ಎಪಿಎಂಸಿ ಕಾಯ್ದೆಯ ತಿದ್ದುಪಡಿ, ಭೂ ಸ್ವಾಧೀನ ಕಾಯ್ದೆಯ ತಿದ್ದುಪಡಿ ಮತ್ತು ಗೋಹತ್ಯೆ ನಿಷೇಧ ಕಾಯ್ದೆಗಳ ವಿರುದ್ಧ ಒಂದು ಪ್ರಬಲ ರಾಜಕೀಯ ಹೋರಾಟ ರೂಪುಗೊಳ್ಳುತ್ತಿಲ್ಲ.

ಗೋಮಾಂಸ ಸೇವನೆಯ ಹಕ್ಕು ಬಾಧ್ಯತೆಗಳನ್ನು ಕುರಿತು ನಡೆಯುತ್ತಿರುವಷ್ಟು ರಾಜಕೀಯ ಚರ್ಚೆಗಳು, ವಾಗ್ವಾದಗಳು, ಗೋ ಹತ್ಯೆ ನಿಷೇಧದಿಂದ ರೈತಾಪಿಯ ಮೇಲೆ ಉಂಟಾಗುವ ವ್ಯತಿರಿಕ್ತ ಪರಿಣಾಮಗಳ ಬಗ್ಗೆ ನಡೆಯುತ್ತಿಲ್ಲ ಎನ್ನುವುದನ್ನೂ ಗಮನಿಸಬೇಕಿದೆ. ಭೂ ಸ್ವಾಧೀನ ಕಾಯ್ದೆಯ ತಿದ್ದುಪಡಿಯಿಂದ ಕೃಷಿ ಭೂಮಿ ಉದ್ಯಮಿಗಳ ವಶವಾಗುವ ಅಪಾಯವನ್ನು ರೈತ ಸಂಘಟನೆಗಳು ಗ್ರಹಿಸಿವೆಯಾದರೂ, ರಾಜ್ಯದ ವಿರೋಧ ಪಕ್ಷಗಳು ಒಂದು ಸ್ಪಷ್ಟ ನಿಲುವು ತಳೆಯುವಲ್ಲಿ ವಿಫಲವಾಗಿವೆ. ಮಣ್ಣಿನ ಮಕ್ಕಳ ಪಕ್ಷ ಎಂಬ ಹೆಗ್ಗಳಿಕೆಯೊಂದಿಗೇ ತನ್ನ ಅಸ್ತಿತ್ವ ಉಳಿಸಿಕೊಂಡಿರುವ ಜಾತ್ಯತೀತ ಜನತಾ ದಳ ಭೂ ಸ್ವಾಧೀನ ಕಾಯ್ದೆಯ ತಿದ್ದುಪಡಿಗೆ ಬೆಂಬಲ ವ್ಯಕ್ತಪಡಿಸಿದೆ. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಮಸೂದೆಗಳ ಬಗ್ಗೆ ಮೌನ ವಹಿಸಿದೆ.

ಈ ನಡುವೆಯೇ ಕರ್ನಾಟಕದ ರಾಜಕಾರಣ ಅಕ್ಷರಶಃ ಹರಾಜು ಮಾರುಕಟ್ಟೆಯಂತಾಗಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ.. ಇತ್ತೀಚಿನ ಕೆಲವು ಬೆಳವಣಿಗೆಗಳು ಈ ಮಾರುಕಟ್ಟೆ ರಾಜಕಾರಣವನ್ನು ನಡುಬೀದಿಯಲ್ಲಿ ಬೆತ್ತಲಾಗಿ ನಿಲ್ಲಿಸಿಬಿಟ್ಟಿದೆ. 2008ರ ನಂತರದಲ್ಲಿ ನವ ಉದಾರವಾದಿ ಮಾರುಕಟ್ಟೆ ವ್ಯವಸ್ಥೆ ಜಾಗತಿಕ ಮಟ್ಟದಲ್ಲಿ ಎದುರಿಸಿದ ಬಿಕ್ಕಟ್ಟಿಗೂ, ಭಾರತದ ರಾಜಕಾರಣದಲ್ಲಿ ಕಾರ್ಪೋರೇಟ್ ಔದ್ಯಮಿಕ ಹಿತಾಸಕ್ತಿಗಳ ನೇರ ಪಾಲ್ಗೊಳ್ಳುವಿಕೆಗೂ ನೇರ ಸಂಬಂಧ ಇರುವುದನ್ನು ಈ ಮಾರುಕಟ್ಟೆ ರಾಜಕಾರಣದಲ್ಲಿ ಗುರುತಿಸಬಹುದು. ಪಕ್ಷಾಂತರ ನಿಷೇಧ ಕಾಯ್ದೆ ಮತ್ತು ಸಾಂವಿಧಾನಿಕ ನಿಯಮ, ಬದ್ಧತೆಗಳನ್ನು ಗಾಳಿಗೆ ತೂರಿ ರಾಜಕೀಯ ಪಕ್ಷಗಳು ಶಾಸಕರನ್ನು ಖರೀದಿಸಲು ಮುಂದಾಗಿದ್ದೂ ಸಹ ಈ ಬಿಕ್ಕಟ್ಟಿನ ನಂತರದಲ್ಲೇ ಎನ್ನುವುದನ್ನೂ ಗಮನಿಸಬೇಕು.

ಜನಸಾಮಾನ್ಯರು ಸುಸ್ಥಿರ ಸರ್ಕಾರ ಬಯಸುತ್ತಾರೆ, ಸುಭದ್ರ ಆಡಳಿತ ಅಪೇಕ್ಷಿಸುತ್ತಾರೆ ಆದರೆ ಒಂದೇ ಪಕ್ಷದ ಸ್ಪಷ್ಟ ಬಹುಮತದ ರಾಜಕೀಯ ಅಧಿಕಾರ ಜನಾಭಿಪ್ರಾಯದ ಒತ್ತಾಸೆಯಲ್ಲ. ಇದು ಮಾರುಕಟ್ಟೆಯ ಅನಿವಾರ್ಯತೆ. ಈ ಅನಿವಾರ್ಯತೆಯನ್ನು ಜನಾಭಿಪ್ರಾಯವಾಗಿ ರೂಪಿಸುವ ಹೊಣೆಯನ್ನು ಕಾರ್ಪೋರೇಟ್ ನಿಯಂತ್ರಿತ ಸುದ್ದಿ ಮಾಧ್ಯಮಗಳು ವಹಿಸಿಕೊಂಡಿವೆ. ಇದರ ಪರಿಣಾಮ, ಕರ್ನಾಟಕದಲ್ಲಿ ‘ ಅನರ್ಹರ ರಾಜಕಾರಣ ’ ಎನ್ನುವ ಹೊಸ ಪರಿಕಲ್ಪನೆ ಹುಟ್ಟಿಕೊಂಡಿದೆ. ಒಂದು ಪಕ್ಷದಿಂದ ಆಯ್ಕೆಯಾಗಿ, ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಅನರ್ಹ ಪಟ್ಟ ಪಡೆದು, ಅನರ್ಹರಾಗಿಯೇ ಮತ್ತೊಂದು ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿ ಅಧಿಕಾರ ಪೀಠಕ್ಕೆ ಸನಿಹವಾಗುವ ಒಂದು ಅನಿಷ್ಟ ಪರಂಪರೆಗೆ ರಾಜ್ಯದ ಹಲವು ಅನುಭವಿ ರಾಜಕಾರಣಿಗಳೇ ಸ್ಪಷ್ಟ ಬುನಾದಿ ಹಾಕಿರುವುದು ದುರಂತವಾದರೂ ಸತ್ಯ. ಈ ಬೆಳವಣಿಗೆಯ ಹಿಂದೆ ಮಾರುಕಟ್ಟೆಯ ಶಕ್ತಿ ಇರುವುದನ್ನು ನಿರ್ಲಕ್ಷಿಸಲಾಗುವುದಿಲ್ಲ.

ಈ ನಡುವೆಯೇ ರಾಜ್ಯದ ಲಜ್ಜೆಗೆಟ್ಟ ರಾಜಕಾರಣ ಪರಾಕಾಷ್ಠೆ ತಲುಪಿದೆ. 17 ಮಂದಿ ಅನರ್ಹ ಶಾಸಕರ ಬಲದಿಂದ ಸರ್ಕಾರ ರಚಿಸಿದ ಬಿಜೆಪಿ ಮತ್ತು ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಅಸ್ಮಿತೆಗಳನ್ನೂ ಮಾರಿಕೊಂಡು ಬಿಕರಿಯಾಗಿರುವ ಶಾಸಕರು ರಾಜ್ಯ ಶಾಸನಸಭೆಯನ್ನು ತರಕಾರಿ ಮಾರುಕಟ್ಟೆಯಂತೆ ಬಳಸುತ್ತಿದ್ದಾರೆ. ಸಚಿವ ಪದವಿ, ನಿಗಮ ಮಂಡಲಿ ಅಧ್ಯಕ್ಷ ಪದವಿ ಇಲ್ಲದೆ ಹೋದರೆ ಈ ಜನ ನಾಯಕರ ಜನಸೇವೆಯೇ ಸ್ಥಗಿತವಾಗಿಬಿಡುತ್ತದೆ. ‘ಜನಸೇವೆಯೇ ಜನಾರ್ಧನ ಸೇವೆ’ ಎನ್ನುವ ಘೋಷವಾಕ್ಯ ಎಂದೋ ಮೂಲೆಗೆ ಸೇರಿದ್ದು ಇಂದು ಧನಾರ್ಜನೆಯೇ ಜನಸೇವೆಯ ಗುರಿಯಾಗಿರುವುದು ಸ್ಪಷ್ಟ. ಗ್ರಾಮಪಂಚಾಯತ್ ಮಟ್ಟದಲ್ಲಿ ಸ್ಥಾನಗಳೇ ಹರಾಜು ಹಾಕಲ್ಪಟ್ಟರೆ, ರಾಜ್ಯ ಸರ್ಕಾರದಲ್ಲಿ ಸಚಿವ ಪದವಿ ಹರಾಜು ಹಾಕಲಾಗುತ್ತಿದೆ. ಒಂದು ರಹಸ್ಯ ಸಿ ಡಿ ಇಡೀ ರಾಜ್ಯ ರಾಜಕಾರಣವನ್ನು ಬೆತ್ತಲಾಗಿಸುತ್ತಿದೆ. ಶಾಸಕರನ್ನು ಖುಲ್ಲಂಖುಲ್ಲಾ ಖರೀದಿಸುವ ಪ್ರಕ್ರಿಯೆಗೆ ಆಪರೇಷನ್ ಕಮಲ ಹೆಸರಿನಲ್ಲಿ ಚಾಲನೆ ನೀಡಿದ ಬಿಜೆಪಿಯ ನಾಯಕತ್ವ ಇಂದಿನ ಹದಗೆಟ್ಟ ಪರಿಸ್ಥಿಗೆ ಸಂಪೂರ್ಣ ಹೊಣೆ ಹೊರಬೇಕಿದೆ.

17 ಶಾಸಕರನ್ನು ಬಿಜೆಪಿಗೆ ತರಲು ನೂತನ ಸಚಿವ ಯೋಗೇಶ್ವರ್ 9 ಕೋಟಿ ರೂ ಸಾಲ ಮಾಡಿದ್ದಾರೆ ಎಂದು ಮತ್ತೋರ್ವ ಮಾಜಿ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಅಂದರೆ ಈ ಶಾಸಕರ ನಿಷ್ಠೆಯನ್ನು ಖರೀದಿಸಲು ಹಣಕಾಸು ವ್ಯವಹಾರ ನಡೆದಿದೆ ಎನ್ನುವುದು ಸ್ಪಷ್ಟವಾಗುತ್ತದೆ. 9 ಕೋಟಿ ರೂ ಸಾಲ ಮಾಡುವ ವ್ಯಕ್ತಿ 90 ಕೋಟಿ ರೂ ಖರ್ಚು ಮಾಡುವ ಸಾಮಥ್ರ್ಯ ಹೊಂದಿರುತ್ತಾನೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನರು ನಿಷ್ಠೆಯಿಂದ ಪವಿತ್ರ ಮತ ಚಲಾಯಿಸುವ ಮೂಲಕ ಆಯ್ಕೆ ಮಾಡಿ ಶಾಸನಸಭೆಗೆ ಕಳುಹಿಸುವ ಶಾಸಕರು ಈ ರೀತಿ ಬಿಕರಿಯಾಗುವುದೇ ಪ್ರಜಾತಂತ್ರ ಮೌಲ್ಯಗಳಿಗೆ ಅಪಚಾರ ಎಸಗಿದಂತಲ್ಲವೇ ? ಈ ಕನಿಷ್ಠ ಪ್ರಜ್ಞೆ ರಾಜಕಾರಣಿಗಳಲ್ಲಿ ಇರುವುದಿಲ್ಲ ಏಕೆಂದರೆ ಅವರ ದೃಷ್ಟಿ ಅಧಿಕಾರ ಪೀಠದ ಮೇಲಿರುತ್ತದೆ. ಆದರೆ ಪ್ರಜ್ಞಾವಂತ ನಾಗರಿಕರಲ್ಲಿ ಈ ಪ್ರಜ್ಞೆ ಇರಬೇಕಲ್ಲವೇ ?

ಮುಖ್ಯಮಂತ್ರಿ ಯಡಿಯೂರಪ್ಪ ಬ್ಲಾಕ್‍ಮೇಲ್ ರಾಜಕಾರಣಕ್ಕೆ ಬಲಿಯಾಗಿದ್ದಾರೆ ಎಂದು ನಿರೂಪಿಸಲು ತಮ್ಮ ಬಳಿ ಇರುವ ರಹಸ್ಯ ಸಿ ಡಿ ಒಂದನ್ನು ಗುರಾಣಿಯಂತೆ ಬಳಸುತ್ತಿರುವ ಬಸನಗೌಡ ಪಾಟಿಲ್ ಯತ್ನಾಳ್ ಅವರಿಗೆ ಸಂವಿಧಾನ ಮತ್ತು ಸಾಂವಿಧಾನಿಕ ಮೌಲ್ಯಗಳ ಬಗ್ಗೆ ಕಿಂಚಿತ್ತಾದರೂ ಗೌರವ ಇದ್ದಿದ್ದಲ್ಲಿ ಈ ಸಿ ಡಿಯನ್ನು ಎಂದೋ ಸಾರ್ವಜನಿಕರ ಮುಂದೆ ಬಹಿರಂಗಪಡಿಸುತ್ತಿದ್ದರು. ತಮ್ಮ ಸ್ವಾರ್ಥ ಸಾಧನೆಗೆ ‘ಯಾರೂ ನೋಡಲಾಗದಂತಹ’ ಸಿ ಡಿ ಒಂದನ್ನು ಅಸ್ತ್ರವನ್ನಾಗಿ ಬಳಸುವುದು ಹೊಲಸು ರಾಜಕಾರಣವಲ್ಲವೇ ? ಒಂದು ವೇಳೆ ಯತ್ನಾಳ್ ಅವರ ಬೇಡಿಕೆಗಳು ಈಡೇರಿದರೆ ಈ ಸಿ ಡಿಯಲ್ಲಿ ಇರಬಹುದಾದ ಅವ್ಯವಹಾರಗಳ ದಾಖಲೆಗಳು ಶಾಶ್ವತವಾಗಿ ಭೂಗತವಾಗಿಬಿಡುತ್ತವೆ ಅಲ್ಲವೇ ?

ಸಿ ಡಿ ರಾಜಕಾರಣ, ರೆಸಾರ್ಟ್ ರಾಜಕಾರಣ ಮತ್ತು ಬ್ಲಾಕ್‍ಮೇಲ್ ರಾಜಕಾರಣ ಈ ಮೂರೂ ವಿದ್ಯಮಾನಗಳ ಹಿಂದೆ ಕಾರ್ಪೋರೇಟ್ ಬಂಡವಾಳ, ಕರಾಳ ದಂಧೆಯ ಕಪ್ಪುಹಣ ಮತ್ತು ಮಾರುಕಟ್ಟೆ ಮಾಫಿಯಾದ ಛಾಯೆ ಇರುವುದನ್ನು ಗಮನಿಸದೆ ಹೋದರೆ ಬಹುಶಃ ಮುಂದಿನ ದಿನಗಳಲ್ಲಿ ಚುನಾವಣೆಗಳೇ ಒಂದು ಹಾಸ್ಯ ಪ್ರಹಸನವಾಗಿಬಿಡುತ್ತದೆ. ಇಡೀ ಪ್ರಜಾತಂತ್ರ ವ್ಯವಸ್ಥೆಯನ್ನು ಮಾರುಕಟ್ಟೆ ಶಕ್ತಿಗಳು ಆಕ್ರಮಿಸುತ್ತವೆ. ಜನರು ಜನಪ್ರತಿನಿಧಿಗಳಿಗೆ ಮತ ನೀಡಿದರೆ, ಧನಿಕರು ಧನಪ್ರತಿನಿಧಿಗಳನ್ನು ಶಾಸನ ಸಭೆಗಳಿಗೆ ಕಳಿಸುತ್ತಾರೆ. ಏಕಂದರೆ ಹಣಕಾಸು ಬಂಡವಾಳಿಗರ ಹೂಡಿಕೆಗೆ ವಂದಿಮಾಗಧರ ಬೃಹತ್ ಪಡೆಯ ಅವಶ್ಯಕತೆ ಇರುತ್ತದೆ. ಕೇಂದ್ರ ಸರ್ಕಾರದ ಕೃಷಿ ಮಸೂದೆಗಳು ಇದಕ್ಕೊಂದು ಸ್ಪಷ್ಟ ಉದಾಹರಣೆ. 101 ರೈತರ ಸಾವಿಗೆ ಕನಿಷ್ಠ ಅನುಕಂಪ ತೋರುವುದಕ್ಕೂ ಮುಂದಾಗದ ನರೇಂದ್ರ ಮೋದಿ ಸರ್ಕಾರ ಮಾರುಕಟ್ಟೆ ಶಕ್ತಿಗಳ ಕಬಂಧ ಬಾಹುಗಳಲ್ಲಿ ಸಿಲುಕುವ ಒಂದು ಚುನಾಯಿತ ಸರ್ಕಾರ ಹೇಗಿರುತ್ತದೆ ಎನ್ನುವುದನ್ನು ನಿರೂಪಿಸಿದೆ.

ಈ ಹಿನ್ನೆಲೆಯಲ್ಲೇ ಕರ್ನಾಟಕದ ಇತ್ತೀಚಿನ ರಾಜಕೀಯ ಬೆಳವಣಿಗೆಗಳನ್ನು ಗಮನಿಸಬೇಕಿದೆ. ಮೊದಲು ಶಾಸಕರಲ್ಲಿ ಎರಡೇ ಪ್ರಭೇದಗಳಿದ್ದವು. ಹಾಲಿ ಮತ್ತು ಮಾಜಿ. ಈಗ ಅರ್ಹ-ಅನರ್ಹ, ಸಂತೃಪ್ತ-ಅತೃಪ್ತ, ಮೂಲ-ವಲಸಿಗ ಹೀಗೆ ಹಲವು ಪ್ರಭೇದಗಳು ಹುಟ್ಟಿಕೊಂಡಿವೆ. ಈ ಗೊಂದಲದ ನಡುವೆ ‘ ಪ್ರಾಮಾಣಿಕ ಶಾಸಕ ’ ರ ಸಂತತಿಯೇ ನಶಿಸುತ್ತಿದೆ. ‘ ಜನಪರ ಕಾಳಜಿ ’ ಮತ್ತು ‘ ಜನ ಸೇವೆ ’ ಎಂಬ ಪರಿಕಲ್ಪನೆಗಳು ಹರಾಜು ಮಾರುಕಟ್ಟೆಯಲ್ಲಿ ಬಿಕರಿಯಾಗುವ ಕಚ್ಚಾ ವಸ್ತುಗಳಾಗಿದ್ದು, ಇವೆರಡರ ಪರಿವೆಯೇ ಇಲ್ಲದ ನಾಯಕರಿಗೆ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬೆಲೆ ನಿಗದಿಯಾಗುತ್ತದೆ. 17 ಶಾಸಕರನ್ನು ಒಂದುಗೂಡಿಸಲು 9 ಕೋಟಿ ರೂ ಖರ್ಚು ಮಾಡುವ ಒಂದು ವ್ಯವಸ್ಥೆಗೆ ಇದೂ ಒಂದು ಕಾರಣ.

ಕೆಂಗಲ್ ಹನುಮಂತಯ್ಯನವರಿಂದ ಜೆ ಹೆಚ್ ಪಟೇಲ್ ವರೆಗಿನ ಒಂದು ರಾಜಕೀಯ ಪರಂಪರೆ ಪ್ರಾಚೀನ ವ್ಯವಸ್ಥೆಯ ಪಳೆಯುಳಿಕೆಯಂತೆ ಕಂಡುಬಂದರೆ, ಈ ಅಧಃಪತನದ ಹಿಂದೆ ಮಾರುಕಟ್ಟೆ ಬಂಡವಾಳ ಮತ್ತು ಅಧಿಕಾರ ರಾಜಕಾರಣದ ಹಂಬಲ ಪ್ರಬಲ ಶಕ್ತಿಗಳಾಗಿ ಕಂಡುಬರುತ್ತವೆ. ಈ ನಡುವೆ ರಾಜ್ಯ ರಾಜಕಾರಣದಲ್ಲಿ ಸದಾ ಕೇಳಿಬರುತ್ತಿದ್ದ ಮೌಲ್ಯ, ತತ್ವ , ಸಿದ್ಧಾಂತ ಮತ್ತು ಸಾಂವಿಧಾನಿಕ ಬದ್ಧತೆ ಮುಂತಾದ ಪದಗಳು ಇತಿಹಾಸದ ಕಸದಬುಟ್ಟಿ ಸೇರಿಬಿಟ್ಟಿವೆ. ಈ ಹೊಲಸು ರಾಜಕಾರಣಕ್ಕೆ ಕರ್ನಾಟಕವೇ ತವರು ಎನ್ನುವುದು ಚರಿತ್ರೆಯ ದೊಡ್ಡ ದುರಂತ. ಆದರೆ ಇದು ವಾಸ್ತವ.

ಈ ಪರಿಸ್ಥಿತಿಗೆ ಯಾರು ಕಾರಣ ? ಪ್ರಜ್ಞೆ ಕಳೆದುಕೊಂಡಿರುವ ನಾಗರಿಕರೋ ಸ್ವಂತಿಕೆ ಕಳೆದುಕೊಂಡಿರುವ ರಾಜಕಾರಣಿಗಳೋ ? ನಜೀರ್ ಸಾಬ್ ಕೇಳ್ತಿದಾರೆ, ಉತ್ತರ ಕೊಡಿ !!!!!

ಸರಕಾರದಲ್ಲಿರುವುದು ಬ್ಲ್ಯಾಕ್ ಮೇಲರ್ ಗಳೆ?!

 

 

 

 

 

Donate Janashakthi Media

Leave a Reply

Your email address will not be published. Required fields are marked *