ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರ ಮೇಲಿರುವ ಆರೋಪ ಮತ್ತು ಅದರ ಸುತ್ತ ಘಟಿಸುತ್ತಿರುವ ವಿದ್ಯಮಾನಗಳನ್ನು ಕುರಿತು ಮಹಿಳಾ ಮತ್ತು ಸಾಮಾಜಿಕ ಕಾಳಜಿಯನ್ನು ಹೊಂದಿರುವ ಸಂಘಟನೆ ಮತ್ತು ವ್ಯಕ್ತಿಗಳ ಜಂಟಿ ವೇದಿಕೆ “ನಾವೆದ್ದು ನಿಲ್ಲದಿದ್ದರೆ” ಎಂಬ ವೇದಿಕೆ ಮೂಲಕ ಇಂದು ಬೆಂಗಳೂರಿನಲ್ಲಿ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಕರ್ನಾಟಕ ಸರ್ಕಾರದ ಗೃಹ ಮಂತ್ರಿಗಳಿಗೆ ಬಹಿರಂಗ ಪತ್ರಬರೆದಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ನಡೆಯುತ್ತಿರುವ ಅಸಂಬದ್ಧ ಘಟನೆಗಳಿಂದ ನಾವು ಆಕ್ರೋಷಿತರಾಗಿದ್ದೇವೆ. ರಾಜ್ಯದ ವಿವಿಧ ಮಹಿಳಾ ಮತ್ತು ಸಾಮಾಜಿಕ ಸಂಘಟನೆಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ, ನಾವೆಲ್ಲರೂ ಸೇರಿ ಪ್ರಮುಖ ಅಂಶಗಳನ್ನು ತಮ್ಮ ಗಮನಕ್ಕೆ ತರಬಯಸುತ್ತೇವೆ ಮತ್ತು ದೇಶದ ಸಂವಿಧಾನ ಹಾಗೂ ಕಾನೂನಿನ ಅನುಸಾರ ಸರಕಾರ ನಡೆದುಕೊಂಡು ನ್ಯಾಯಯುತ ಮಾರ್ಗದಲ್ಲಿ ನಡೆದು ಸತ್ಯವನ್ನೇ ಹೊರಹಾಕಬೇಕಾಗಿ ಎಂದು “ನಾವೆದ್ದು ನಿಲ್ಲದಿದ್ದರೆ” ಎಂಬ ವೇದಿಕೆ ಮೂಲಕ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಕರ್ನಾಟಕ ರಾಜ್ಯ ಸರಕಾರದ ಸಚಿವರಾಗಿದ್ದ ರಮೇಶ್ ಜಾರಕಿಹೊಳಿಯವರು ಲೈಂಗಿಕ ಹಗರಣದ ಸಿ.ಡಿ. ಯೊಂದು ಸುದ್ದಿಗೆ ಬಂದ ಕಾರಣದಿಂದ ಒತ್ತಡಕ್ಕೆ ಒಳಗಾಗಿ ರಾಜೀನಾಮೆ ಕೊಡಬೇಕಾಗಿ ಬಂತು. ಘಟನೆಯ ಸತ್ಯಾಸತ್ಯತೆಯನ್ನು ಬಯಲಿಗೆಳೆಯುವ, ಅಧಿಕಾರದ ದುರ್ಬಳಕೆ, ಬ್ಲಾಕ್‌ಮೇಲ್, ಹನಿಟ್ರಾಪ್ ಎಂಬ ಹಲವು ಆಯಾಮಗಳು ಚರ್ಚೆಗೆ ಬಂದವು. ಈ ಹಂತದಲ್ಲಿ ಮೊದಲು ದೂರು ಕೊಟ್ಟವರು ರಾಜಕಾರಣಿಗಳ ಮಾತಿನ ನೆವ ಮುಂದುಮಾಡಿ ದೂರು ವಾಪಸ್ ತೆಗೆದುಕೊಂಡ ಘಟನೆಯೂ ನಡೆಯಿತು. ಮಾಧ್ಯಮಗಳಿಗೆ ರಸಗವಳ ಸಿಕ್ಕಂತೆ ಬಿತ್ತರಿಸಿದ ಸುದ್ದಿಗೆ ಜಾರಕಿಹೊಳಿಯವರ ಜೊತೆ ‘ಅನರ್ಹ ಶಾಸಕರು’ಎಂಬ ಹಣೆಪಟ್ಟಿ ಹೊತ್ತ ಇನ್ನಾರು ಸಚಿವರು ತಮ್ಮ ಬಗ್ಗೆ ಸಿ.ಡಿ. ಗಳನ್ನು ಪ್ರದರ್ಶಿಸಬಾರದಂತೆ ಮಾಧ್ಯಮಗಳಿಗೆ ತಡೆ ನೀಡಬೇಕೆಂದು ನ್ಯಾಯಾಲಯದ ಮೊರೆ ಹೋದ ಮತ್ತು ನ್ಯಾಯಾಲಯವೊಂದು ಲೈಂಗಿಕ ದೌರ್ಜನ್ಯದ ಆರೋಪ,ಅಧಿಕಾರ ದುರ್ಬಳಕೆಯ ಆರೋಪದ ಸಿ.ಡಿ. ಪ್ರಕರಣದಲ್ಲಿ ಸುದ್ದಿ ಪ್ರಕಟಿಸದಂತೆ ಸಾರಾಸಗಟಾಗಿ ಅನೇಕ ಮಾಧ್ಯಮಗಳ ಮೇಲೆ ಮಧ್ಯಂತರ ಆದೇಶ ಕೊಟ್ಟ ಗಾಬರಿಯ ಸಂಗತಿಯೂ ನಡೆದು ಹೋಗಿದೆ.
ಸುದ್ದಿಗೋಷ್ಠಿಯನ್ನುದೇಶಿಸಿ ಮಾತನಾಡಿದ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಕೆ.ಎಸ್ ವಿಮಾಲ ಮಾತನಾಡಿ ದೇಶದ ಸಂವಿಧಾನ ದೇಶದ ಎಲ್ಲ ಜನರಿಗೆ ಸಮಾನ ಅವಕಾಶ ಸಮಾನ ಅಧಿಕಾರ ಮತ್ತು ಘನತೆಯ ಬದುಕುನ್ನು ಖಾತ್ರಿಪಡಿಸುತ್ತದೆ. ಇದನ್ನು ಯಥಾವತ್ತಾಗಿ ಜಾರಿಗೆ ತರುವ ಮತ್ತು ಮಹಿಳೆಯರ ಸುರಕ್ಷೆಯನ್ನು ಖಾತ್ರಿ ಪಡಿಸುವ ಜವಾಬ್ದಾರಿ ಯಾವುದೇ ಸರಕಾರದ್ದಾಗಿರುತ್ತದೆ. ಮತ್ತು ಸರಕಾರದ ಸಚಿವರು, ಶಾಸಕರು ಈ ವಿಷಯಗಳಲ್ಲಿ ಮಾದರಿಗಳಾಗಿ ನಿಲ್ಲಬೇಕು. ಆದರೆ ಕರ್ನಾಟಕದಲ್ಲಿ ನಡೆಯುತ್ತಿರುವ ಘಟನೆಗಳು ಅದಕ್ಕೆ ವ್ಯತಿರಿಕ್ತವಾಗಿವೆ. ಹಲವಾರು ಸಮಾಜ ಸುಧಾರಕರು, ಬ್ರಿಟಿಷರ ವಿರುದ್ಧ ಜೀವದ ಹಂಗು ತೊರೆದು ಸೆಣಸಿದ ರಾಣಿಯರೂ ಸೇರಿದಂತೆ ಸ್ವಾತಂತ್ರ ಹೋರಾಟಗಾರರು ಸಾಮಾಜಿಕ ಸಾಂಸ್ಕೃತಿಕ, ರಾಜಕೀಯ ಕ್ಷೇತ್ರಕ್ಕೆ ಅಪಾರ ಕೊಡುಗೆ ಕೊಟ್ಟ, ಕೊಡುತ್ತಿರುವ ಹಲವಾರು ಮಹಿಳೆಯರ ಶ್ರೀಮಂತ ಇತಿಹಾಸವಿದೆ. ಆದರೆ ಅವೆಲ್ಲವನ್ನು ಗೌರವಿಸಬೇಕಾದ ಶಾಸಕರೇ ಮಹಿಳೆಯರು ಮತ್ತು ಯುವತಿಯರನ್ನು ಕೀಳಾಗಿ ಬಿಂಬಿಸುತ್ತಿರುವುದು, ಹಗುರವಾಗಿ ನಡೆದುಕೊಳ್ಳುತ್ತಿರುವುದು ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧವಾಗಿದ್ದು ಕಳಂಕ ತರುವಂತಿದೆ ಎಂದು ಕೆ. ಎಸ್ ವಿಮಲಾ ಆರೋಪಿಸಿದ್ದಾರೆ.
ಇನ್ನು ಸುದ್ದಿಗೋಷ್ಠಿ ಉದೇಶಿಸಿ ಮಾತನಾಡಿದ ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘಟನೆಯ ಗಾಂಧಿಮತಿ ಮಾತನಾಡಿ ಸರಕಾರವು ವಿಶೇಷ ತನಿಖಾ ತಂಡವೊಂದನ್ನು ನೇಮಿಸಿದೆ. ದುರಂತವೆಂದರೆ ಈ ತನಿಖಾ ತಂಡ ಒಂದು ನಿಷ್ಪಕ್ಷಪಾತ ತನಿಖೆ ನಡೆಸಿ ಸತ್ಯವನ್ನು ಬಯಲಿಗೆಳೆಯುವ ಸಂಭವ ಕಡಿಮೆ ಎನಿಸುತ್ತಿದೆ. ಈ ಪ್ರಕರಣವನ್ನು ಕಾನೂನಿನ ಚೌಕಟ್ಟಿನಲ್ಲಿ ತನಿಖೆ ಮಾಡಿ ಅಮೂಲಾಗ್ರ ಶೋಧನೆಯನ್ನು ಜನರ ಮುಂದಿಡುವ ಹೊಣೆಗಾರಿಕೆ ಎಸ್.ಐ.ಟಿ.ಯದಾಗಬೇಕು. ಆದರೆ ಮೊದಲ ದಿನದಿಂದಲೇ ಅದು ಹಿಡಿದ ಜಾಡು ಸತ್ಯ ಶೋಧನೆಯ ಬದಲು ಸಂಚು ಬಯಲು ಮಾಡುವ ದಾರಿಯಾಗಿ ಕಾಣುತ್ತಿದೆ. ಮಾಜಿ ಸಚಿವರ ಕೋರಿಕೆಯನ್ನಾಧರಿಸಿ, ಲಿಖಿತವಾಗಿ ದೂರು ಕೊಡುವ ಮೊದಲೇ ಗೃಹ ಸಚಿವರು ಕ್ರಮಕ್ಕೆ ಮುಂದಾದರು. ಪೋಲೀಸರು ಎಫ್.ಐ.ಆರ್. ದಾಖಲಿಸಿಕೊಂಡರು ಕೂಡಾ. ನಂತರ ಸತ್ಯದ ಹುಡುಕಾಟದ ಬದಲು ಸುಳ್ಳನ್ನು ಸಾಬೀತು ಮಾಡುವುದು ಹೇಗೆ ಎಂಬ ಎಂದಿನ ಮಹಿಳಾ ವಿರೋಧೀತನಕ್ಕೆ ಶರಣಾಗಿರುವುದು ಎದ್ದು ಕಾಣುತ್ತಿದೆ. ಮತ್ತು ಸಿ.ಡಿ. ಮಾಡಿದ್ದು ಯಾರು, ಅದು ಸಾಮಾಜಿಕ ಜಾಲತಾಣಕ್ಕೆ ಅಪ ಲೋಡ್ ಆಯಿತು ಹೇಗೆ ಎಂಬುದರ ಸುತ್ತವೇ ಗಿರಕಿ ಹೊಡೆಯುತ್ತಿದೆ. ಸಾಲದೆಂಬಂತೆ ಯುವತಿಯು ಎಸ್.ಐ.ಟಿ.ಯ ಮುಂದೆ ಬರುತ್ತಿಲ್ಲವೆನ್ನುವುದೇ ಆಕೆ ಸುಳ್ಳು ಹೇಳುತ್ತಿದ್ದಾಳೆ ಎಂಬುದಕ್ಕೆ ಪುರಾವೆ ಎಂಬಿತ್ಯಾದಿ ಮಾತುಗಳೂ ಕೇಳಿ ಬಂದಿವೆ. ಈಗ ಯುವತಿ ತನಗೆ ಮತ್ತು ತನ್ನ ಪೋಷಕರಿಗೆ ಜೀವ ಬೆದರಿಕೆ ಇದೆ ಎಂದು ತಿಳಿಸಿ ಸ್ವ ಹಸ್ತಾಕ್ಷರದ ದೂರನ್ನು ವಕೀಲರ ಮೂಲಕ ಕಳಿಸಿದ್ದಾರೆ ಮತ್ತು ಅದರ ಕಾರಣದಿಂದ ಎಫ್.ಐ.ಆರ್.ದಾಖಲಾಗಿದೆ. ಆದರೆ ಆರೋಪಿಯ ಸ್ಥಾನದಲ್ಲಿರುವ ಪ್ರಭಾವಿ ವ್ಯಕ್ತಿಯ ಠೇಂಕಾರವೇನೂ ಕಡಿಮೆಯಾಗಿಲ್ಲ. ಯುವತಿಯು ತನ್ನನ್ನು ನಂಬಿಸಿ ವಂಚಿಸಲಾಗಿದೆ ಎಂದು ಹೇಳುತ್ತಿದ್ದು ಅದನ್ನಾಧರಿಸಿ ತನಿಖೆಗಳು ನಡೆಯಬೇಕೇ ಹೊರತೂ ಆರೋಪಿಯನ್ನು ರಕ್ಷಿಸುವ ನಿಟ್ಟಿನಲ್ಲಿ ಅಲ್ಲ ಎಂದು ಸರ್ಕಾರವನ್ನು ದೂರಿದ್ದಾರೆ.
ಸುದ್ದಿಗೋಷ್ಠಿ ಉದೇಶಿಸಿ ಮಾತನಾಡಿದ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಕೆ.ಎಸ್. ಲಕ್ಷ್ಮೀ ಮಾತನಾಡಿ ಯುವತಿಯ ಎರಡು ವಿಡಿಯೋಗಳು ಹರಿದಾಡುತ್ತಿವೆ. ಈಗ ಹರಿದಾಡುತ್ತಿರುವ ವಿಡಿಯೋದಲ್ಲಿ ತನಗೆ ಮತ್ತು ತನ್ನ ಪೋಷಕರಿಗೆ ರಕ್ಷಣೆ ದೊರೆಯುವುದಾದರೆ ತಾನು ಎಸ್.ಐ.ಟಿ ಎದುರು ಬರಲು ಸಿದ್ಧವೆಂದು ವಿಡಿಯೋದಲ್ಲಿರುವ ಯುವತಿ ಹೇಳುತ್ತಿದ್ದಾರೆ. ಎಸ್.ಐ.ಟಿ.ಯು ಕಾನೂನಿನನ ಅನ್ವಯ ನಡೆದುಕೊಳ್ಳಬೇಕೇ ಹೊರತೂ ಅಧಿಕಾರದಲ್ಲಿರುವವರ ಆಣತಿಯಂತೆ ಅಲ್ಲ. ಇಂಥಹ ಪ್ರಕರಣಗಳಲ್ಲಿ ಬಲಾಢ್ಯರ,ಅಧಿಕಾರಸ್ಥರನ್ನು ಎದುರು ಹಾಕಿಕೊಂಡವರಿಗೆ ಜೀವ ಬೆದರಿಕೆಗಳೂ ಇರುತ್ತವೆ ಎಂಬುದು ತಿಳಿಯದ ಸಂಗತಿಯಲ್ಲ. ಅವರಿಗೆ ರಕ್ಷಣೆ ನೀಡುವ ನಿಟ್ಟಿನಲ್ಲಿ ಎಸ್.ಐ.ಟಿ ಯು ಕಾರ್ಯೋನ್ಮುಖವಾಗಬೇಕು. ಬಹುಷಃ ಇಂಥಹ ಯಾವುದೇ ಪ್ರಕರಣವನ್ನು ತನಿಖೆಗೆ ಕೈಗೆತ್ತಿಕೊಳ್ಳುವ ಅಧಿಕಾರಿಗಳು ಜಸ್ಟೀಸ್ ವರ್ಮಾ ಸಮಿತಿ ನೀಡಿದ ವರದಿಯನ್ನೊಮ್ಮೆ ಓದಿ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ನಾವು ಭಾವಿಸುತ್ತೇವೆ. ಈ ಸಮಾಜದಲ್ಲಿ ಆಳವಾಗಿ ಬೇರೂರಿರುವ ಮಹಿಳಾ ವಿರೋಧೀ, ಪಿತೃಪ್ರಧಾನ, ಪುರುಷಾಧಿಕಾರದ ಮೌಲ್ಯಗಳನ್ನು ಮತ್ತೆ ಮತ್ತೆ ಎತ್ತಿ ತೋರಿಸುವ ಈ ರೀತಿಯ ನಡೆ, ನಿಲುವುಗಳು ಖಂಡನೀಯ ಎಂದಿದ್ದಾರೆ.
ಈ ಹಿನ್ನೆಲೆಯಲ್ಲಿ ಈ ವೇದಿಕೆ ಮೂಲಕ ಸರಕಾರಕ್ಕೆ ಈ ಕೆಳಗಿನಂತೆ ಒತ್ತಾಯಿಸಿದ್ದಾರೆ.
- ಪ್ರಕರಣದ ಆರೋಪಿ ಮತ್ತು ಅವರ ಬೆಂಬಲಿಗರು ಆಳುವ ಪಕ್ಷದ ಭಾಗ ಮತ್ತು ಪ್ರಭಾವೀ ವ್ಯಕ್ತಿಯಾಗಿರುವುದರಿಂದ ಸರಕಾರದ ಅಧೀನದಲ್ಲಿ ಕೆಲಸ ಮಾಡಬೇಕಾಗಿರುವ ವಿಶೇಷ ತನಿಖಾ ತಂಡ ನಿಷ್ಪಕ್ಷಪಾತ ತನಿಖೆ ನಡೆಸಲಾರದು ಎಂಬ ಬಲವಾದ ಅನುಮಾನಗಳಿವೆ. ಈ ಕಾರಣದಿಂದ ಈ ಪ್ರಕರಣದ ತನಿಖೆಯನ್ನು ಉಚ್ಛ ನ್ಯಾಯಾಲಯದ ಸುಪರ್ದಿಯಲ್ಲಿ ನಡೆಸಬೇಕು.
- ನಿರ್ಭಯಾ ಕಾನೂನು/ಕ್ರಿಮಿನಲ್ ಲಾ ತಿದ್ದುಪಡಿಯ ಪ್ರಕಾರ ಅತ್ಯಾಚಾರದ ಪ್ರಕರಣಗಳಿಗೆ ಸಂಬಂಧಿಸಿದಂತೆ ಇರುವ ನಿಯಮಗಳನ್ನು ಕಡ್ಡಾಯವಾಗಿ ಅನ್ವಯಿಸಬೇಕು
- ಕಾನೂನು ದೇಶದ ಎಲ್ಲ ಜನರಿಗೆ ಒಂದೇ ಆಗಿರುವುದರಿಂದ ಈ ಪ್ರಕರಣದ ಆರೋಪಿಯನ್ನೂ ಕೂಡಾ ಕಟ್ಟುನಿಟ್ಟಾದ ಕಾನೂನು ಪ್ರಕ್ರಿಯೆಗೆ ಒಳಪಡಿಸಬೇಕು.
- ದೂರುದಾರರಿಗೆ ಸೂಕ್ತ ರಕ್ಷಣೆ ಒದಗಿಸಬೇಕು.
- ಪ್ರಕರಣವು ದಿನಕ್ಕೊಂದು ತಿರುವು ತೆಗೆದುಕೊಳ್ಳುತ್ತಿದ್ದು ರಾಜಕೀಯ ಮೇಲಾಟದಲ್ಲಿ ಮಹಿಳೆಯರನ್ನು ಕೀಳಾಗಿ ಬಳಸಿಕೊಳ್ಳುವುದಕ್ಕೆ ಲಗಾಮು ಹಾಕಬೇಕು.
- ಪಾರದರ್ಶಕತೆಯನ್ನು ಕಾಯ್ದುಕೊಳ್ಳಬೇಕು.
- ಸಚಿವರೊಬ್ಬರ ಮೇಲೆ ಬಂದ ಆರೋಪವನ್ನು ತಳ್ಳಿ ಹಾಕುವ ಮತ್ತದನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಮಹಿಳೆಯರ ಹಾಗೂ ಆ ಮೂಲಕ ಶಾಸನ ಸಭೆಯ ಘನತೆಗೆ ಕುಂದುಂಟು ಮಾಡುವಂತೆ ಮಾತನಾಡಿದ ಸಚಿವ ಡಾ.ಸುಧಾಕರ್ ರವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು. ಸಾರ್ವಜನಿಕ ಕ್ಷೇತ್ರದಲ್ಲಿರುವವರು ಸಾರ್ವಜನಿಕರಿಗೆ ಉತ್ತರದಾಯಿತ್ವವನ್ನು ಹೊಂದಿರುತ್ತಾರೆ. ಅವರು ಶಾಸನಸಭೆಯ ಕಲಾಪಗಳನ್ನು ಜನರ ಪ್ರಶ್ನೆಗಳ ಆಧಾರದಲ್ಲಿ ಚರ್ಚೆಗೆ ಮೀಸಲಿಡದೇ ಮನ ಬಂದಂತೆಲ್ಲ ವರ್ತಿಸುವುದು ಸರಿಯಲ್ಲ. ಇದು ಅವರ ಖಾಸಗೀ ಸಂಗತಿಗಳಲ್ಲ.
- ಸುದ್ದಿ ಮಾಧ್ಯಮಗಳು ಮಹಿಳಾವಿರೋಧೀ, ಸೆಕ್ಸೀಸ್ಟ್ ನೆಲೆಯಲ್ಲಿ ಸುದ್ದಿಗಳನ್ನು ಪ್ರಸಾರ ಮಾಡುತ್ತಿರುವುದನ್ನು ಪ್ರೆಸ್ ಕೌನ್ಸಿಲ್ ಗಂಭೀರವಾಗಿ ಪರಿಗಣಿಸಬೇಕು.