ಸಿಡಿ ಬ್ಲಾಕ್‌ ಮೇಲ್‌ ನಲ್ಲಿ ನರಳುತ್ತಿದೆ ʼನೈತಿಕತೆʼ

ರಾಷ್ಟ್ರದಲ್ಲಿ ಈಗ ಸೀಡಿ ವಿಚಾರದ್ದೆ ಚರ್ಚೆಯಾಗುತ್ತಿದೆ, ಸಿಡಿ ಬ್ಲ್ಯಾಕ್‌ ಮೇಲ್‌ ನಲ್ಲಿ ಸಿಕ್ಕು ನರಳುತ್ತಿದೆ ರಾಜಕಾರಣದ ನೈತಿಕತೆ.

ಆಕೆ ಆ ಪ್ರಭಾವಿ ಮಂತ್ರಿಯ ಮನೆ ಬಳಿಯೇ ವಾಸಿಸುತ್ತಿದ್ದಳು. ಅವರೋ ದೊಡ್ಡ ಸಾಹುಕಾರರು. ಇವಳೋ ಪುಟ್ಟ ಮನೆಯಲ್ಲಿ ವಾಸವಾಗಿದ್ದಳು.‌ ಇನ್ನೂ 23-24 ಹರೆಯದ ಆಕೆ ತನ್ನ ಕಾಲೇಜು ಜೀವನಕ್ಕೆ ತೀವ್ರ ಹಣಕಾಸು ಮುಗ್ಗಟ್ಟು ಆದಾಗಲೂ ಆ ಸಚಿವರ ಮನೆ ಬಾಗಿಲಿಗೆ ಹೋಗಿರಲಿಲ್ಲ. ಇಂತಹ ಘಟನೆಯಾದರೂ ಹೇಗೆ ನಡೆಯಿತು ಎಂಬ ಪ್ರಶ್ನೆ ಸಹಜವಾಗಿ ಮೂಡ್ತಾ ಇದೆ. ಇದಕ್ಕಿರುವ ಕಾರಣವನ್ನು ನಾನು ಮುಂದೆ ವಿವರಿಸ್ತೇನೆ.  ರಾಜಕಾರಣ ಎನ್ನುವದು, ಸಚಿವಸ್ಥಾನ ಎನ್ನುವಂತದ್ದು ಜನರಿಗೆ ರಕ್ಷಣೆ ಕೊಡಬೇಕೆ ಹೊರತು ಅದನ್ನು ದುರುಪಯೋಗ ಪಡಿಸಿಕೊಂಡು ನೈತಿಕ ಅಧ: ಪತನಕ್ಕೆ ಇಳಿಯಬಾರದು ಎಂದು ಹಿರಿಯ ಪತ್ರಕರ್ತರಾಗಿರುವ ಸನತ್‌ ಕುಮಾರ್‌ ಬೆಳಗಲಿಯವರು ಪ್ರತಿಕ್ರೀಯೆ ನೀಡಿದ್ದಾರೆ.

ಸನತ್‌ ಕುಮಾರ್‌ ಬೆಳಗಲಿಯವರು ಹೇಳುವಂತೆ ಅದು ಆಡಳಿತ ಪಕ್ಷದ ಶಾಸಕರೆ ಆಗಿರಲಿ, ವಿರೋಧ ಪಕ್ಷದ ಶಾಸಕರೇ ಆಗಿರಲಿ ನೈತಿಕತೆ, ಬದ್ಧತೆಯನ್ನು ಪ್ರದರ್ಶಿಸಬೇಕು. ಆದರೆ ಅದು ಈಗ ಹಾಗೆ ಆಗುತ್ತಿಲ್ಲ. ಬದಲಾಗಿ ಬ್ಲ್ಯಾಕ್‌ ಮೇಲ್‌ ಮಾಡುವುದು, ಡೀಲ್‌ ನಡೆಸುವುದು, ಉನ್ನತ ಹುದ್ದೆಗಳ ಬೇಡಿಕೆ ಇಡುವ ಕೆಲಸವನ್ನು ಮಾಡಲಾಗುತ್ತಿದೆ. ಮಾಜಿ ಸಚಿವ ರಮೇಶ ಜಾರಕಿಹೊಳಿ ಕುರಿತಾದ ಸಿಡಿ ಹೊರ ಬರುತ್ತಿದ್ದಂತೆ, ಆರು ಮಂದಿ ಸಚಿವರು  ತಮ್ಮ ಮೇಲಿನ “ಷಡ್ಯಂತ್ರಗಳಿಂದ” ಪಾರಾಗಲು ನ್ಯಾಯಾಲಯದ ಮೊರೆಹೋಗಿದ್ದಾರೆ. ಕೋರ್ಟ್‌ ಕೂಡಾ ಇವರ ಅರ್ಜಿಗೆ ತಾತ್ಕಾಲಿಕ ತಡೆಯನ್ನು ನೀಡಿದೆ. ಕೋರ್ಟ್‌ ನ ನಿಲುವ ಹಾಗೂ ಆ ಸಚಿವರು ನಡೆದುಕೊಂಡ ನಡೆ ಸರಿಯಾದ್ದೇ? ಈ ಕುರಿತಾಗಿ ವಕೀಲರಾಗಿರುವ ಶರಣಬಸವ ಮರದ್‌ ರವರು ಪ್ರತಿಕ್ರೀಯೆ ನೀಡಿದ್ದಾರೆ.

ಈ ಸಿಡಿ ಪ್ರಕರಣದಿಂದಾಗಿ 17 ಜನ ರಾಜಕಾರಣಿಗಳ ಮೇಲೆ ದೊಡ್ಡ ಅನುಮಾನವನ್ನು ಸೃಷ್ಟಿಸುತ್ತಿದೆ. ಆ ರಾಜಕಾರಣಿಗಳು ಯಾರು ಅಂತಾ ನಿಮಗೂ ಗೊತ್ತೆ ಇದೆ. ಸಚಿವ ಸ್ಥಾನದ ಆಸೆಗಾಗಿ ಸರಕಾರವನ್ನು ಬೀಳಿಸಿ ಮುಂಬೈಗೆ ಹಾರಿದ 17 ಜನ ಅನರ್ಹ ಶಾಸಕರ ಮೇಲೆ ಅನುಮಾನ ಮೂಡುತ್ತಿದೆ. ಮುಂಬೈ ಹೋದಾಗ ಇವರು ಕೂಡಾ ಇದೇ ಕೆಲಸದಲ್ಲಿ ಭಾಗಿಯಾಗಿದ್ದರಾ ಎಂಬ ಪ್ರಶ್ನೆ ಮೂಡುತ್ತಿದೆ? ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡಿಕೊಂಡ್ರು ಎಂಬ ಗಾದೆ ಮಾತು ಈ ಆರು ಜನ ಸಚಿವರಿಗೆ ಸರಿಯಾಗಿ ಅನ್ವಯವಾಗುತ್ತೆ. ಇವರು ತಪ್ಪು ಮಾಡಿಲ್ಲ ಎನ್ನುವುದಾದರೆ ಯಾಕೆ ಕೋರ್ಟ್‌ ಮೆಟ್ಟಿಲೇರಬೇಕಿತ್ತು? ಆ ಸಚವರಿಗೂ ಅಷ್ಟೊಂದು ಬದ್ಧತೆ ನೈತಿಕತೆ ಇಲ್ವಾ ಎಂದು ಸಾರ್ವಜನಿಕ ವಲಯದಲ್ಲಿ ಪ್ರಶ್ನೆಗಳು ಕೇಳಿ ಬರುತ್ತಿವೆ.

ಇನ್ನೂ ಆ ಹುಡುಗಿ ಸಚಿವರ ಸಂಪರ್ಕ್ಕೆ ಕ್ಕೆ ಬಂದದ್ದು ಹೇಗೆ ಎಂಬುದಕ್ಕೂ ಹಲವು ದಾಖಲೆಗಳು ಸಾಮ್ಯತೆಯನ್ನು ನೀಡುತ್ತವೆ. ಪತ್ರಕರ್ತ ನವೀನ್‌ ಸೂರಂಜೆಯವರು ತಮ್ಮ ಫೆಸ್ಬುಕ್‌ ನಲ್ಲಿ ಬರೆದುಕೊಂಡಿದ್ದಾರೆ. ಅವರು ಏನು ಬರೆದುಕೊಂಡಿದ್ದಾರೆ ಅಂತಾ ನೋಡುವುದಾದರೆ,  ಆ ಹುಡುಗಿ ಬೆಂಗಳೂರಿನ ಪಿಜಿಯಲ್ಲಿದ್ದ ಗೆಳೆಯರ ಜೊತೆ ಸೇರಿ ಒಂದು ಸಾಕ್ಷ್ಯಚಿತ್ರದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಅದರಿಂದ ಒಂದಷ್ಟು ದುಡ್ಡು ಬರುತ್ತದೆ. ಆ ಸಾಕ್ಷ್ಯಚಿತ್ರಕ್ಕೆ ಡ್ಯಾಂಗಳ ಮೇಲಿಂದ ಚಿತ್ರೀಕರಣ ಮಾಡಬೇಕಿರುತ್ತದೆ. ಈ ಮಂತ್ರಿಯ ಬಳಿ ಹೋದರೆ ನಿಷೇಧಿತ ವಲಯವಾಗಿರುವ ಡ್ಯಾಂಗಳ ಚಿತ್ರೀಕರಣ ಮಾಡಬಹುದು ಎಂದುಕೊಂಡು ನೆರೆಮನೆಯ ಮಂತ್ರಿಯ ಸಹಾಯ ಕೇಳುತ್ತಾಳೆ.

ಇದನ್ನು ಓದಿ :  ರಮೇಶ್ ಜಾರಕಿಹೊಳಿ ವಿರುದ್ಧದ ದೂರನ್ನು ವಾಪಸ್ ಪಡೆದ ದಿನೇಶ್ ಕಲ್ಲಳ್ಳಿ

“ನಾನು ರಾಷ್ರ್ಟಭಕ್ತೆ, ನಾನು ನಿಮ್ಮ ಮನೆ ಬಳಿಯೇ ಇದ್ದರೂ ಈ ವರೆಗೂ ಭೇಟಿಯಾಗಿಲ್ಲ. ಈಗ ನೀವು ದೇಶಭಕ್ತ ಮಂತ್ರಿಯಾಗಿದ್ದು ಬಹಳಷ್ಟು  ಖುಷಿಯಾಗಿದೆ” ಎಂದು ಆ ಮಿನಿಸ್ಟರ್ ಗೆ ಪರಿಚಯ ಮಾಡಿಕೊಳ್ಳುತ್ತಾಳೆ. ಅದು ಆತ್ಮೀಯತೆಗೆ ತಿರುಗುತ್ತದೆ. ಡ್ಯಾಂ ಚಿತ್ರೀಕರಣದ ಅನುಮತಿ ಕೊಡಿಸುವುದೊಂದು ಬಿಟ್ಟು ಉಳಿದೆಲ್ಲವನ್ನೂ ಮಂತ್ರಿ ಮಾತನಾಡುತ್ತಾನೆ. ಪ್ರತೀ ಕರೆ ಮಾಡಿದಾಗಲೂ ಯುವತಿಯ ಖಾಸಗಿ ಬದುಕಿನ ಬಗ್ಗೆ ಮಂತ್ರಿ ವಿಚಾರಿಸುತ್ತಾರೆ. “ಆ ಡ್ಯಾಂ ಶೂಟಿಂಗ್ ಪರ್ಮಿಶನ್ ಕೊಡಿಸಿದ್ರೆ ಚಲೋ ಇತ್ತು ಸರ್” ಎಂದು ಆಕೆ ಪ್ರತೀ ಭಾರಿಯೂ ಮಂತ್ರಿಯನ್ನು ಗೋಗರೆಯುತ್ತಾಳೆ.

ಕೈಯ್ಯಲ್ಲಿ ಒಂದು ಪೈಸೆ ಇಲ್ಲ. ಆಗಷ್ಟೇ ಕೆಲಸಕ್ಕೆ ಸೇರಿಕೊಂಡಿದ್ದ ರಿಯಲ್ ಎಸ್ಟೇಟ್ ಆಫೀಸ್ ಬಾಗಿಲು ಮುಚ್ಚುತ್ತೆ. ಲಾಕ್ ಡೌನ್ ತೆರವಾದಾಗ ಬದುಕು ಇನ್ನಷ್ಟೂ ದುಸ್ತರವಾಗುತ್ತದೆ. ಹಲವು ಕನಸುಗಳನ್ನು ಹೊತ್ತುಕೊಂಡು ಗೆಳೆಯರ ಜೊತೆ ಹೈಫೈ ಬದುಕಿನ ರುಚಿ ಕಂಡಿದ್ದ ಆ ಹುಡುಗಿಗೆ ನೆನಪಾಗುವುದು ಅದೇ ದೇಶಭಕ್ತರ ಪಕ್ಷದ ಮಿನಿಸ್ಟರ್. ಆಕೆ  ಮತ್ತೆ ಮಿನಿಷ್ಟರ್‌ ನ್ನು ಸಂಪರ್ಕ ಮಾಡುತ್ತಾಳೆ. ಈ ಬಾರಿ ಮಿನಿಸ್ಟರ್ ಲಾಕ್ ಡೌನ್ ನ ಎಲ್ಲಾ ಅವಕಾಶಗಳನ್ನು ಪಡೆದುಕೊಳ್ಳುತ್ತಾರೆ.

ಲಾಕ್ ಡೌನ್ ಸಮಯದ ಬದುಕಿನ ಕಷ್ಟಗಳನ್ನು ನಿವಾರಿಸುವ ನೆಪದಲ್ಲಿ ಮಗಳ ಪ್ರಾಯದ ಆ ಹುಡಿಯನ್ನು ಮುಕ್ಕಿ ತಿನ್ನುತ್ತಾನೆ. ಅದನ್ನು ಆ ಮಂತ್ರಿಯ ಇಚ್ಚೆಯಂತೆಯೇ ಆಕೆ ತನ್ನ ಮೊಬೈಲ್ ನಲ್ಲಿ ಚಿತ್ರೀಕರಿಸುತ್ತಾಳೆ. ಅದನ್ನು ಅವರಿಬ್ಬರೂ ನೋಡಿ ಆನಂದಿಸುತ್ತಾರೆ. ಗೆಳೆಯರ ಜೊತೆ ಇದ್ದಾಗ ಆಕೆಯ ಮೊಬೈಲ್ ಗೆಳೆಯರಿಗೆ ಸಿಕ್ಕಿ ಆ ವಿಡಿಯೊಗಳು ಲೀಕ್ ಆಗಿರಬಹುದಾದ ಸಾಧ್ಯತೆಗಳಿವೆ ಎಂದು ನವೀನ್‌ ಸೂರಂಜೆ ಫೆಸ್ಬುಕ್‌ ನಲ್ಲಿ ಬರೆದುಕೊಂಡಿದ್ದಾರೆ.

ಒಂದು ಲೈಂಗಿಕ ದೌರ್ಜನ್ಯದ ಸಿಡಿ ಹಿಂದೆ ಹುಸಿ ದೇಶಭಕ್ತಿಯ ಭರವಸೆ, ಲಾಕ್ ಡೌನ್ ಪರಿಣಾಮಗಳಿವೆ. ಸಿಡಿ ಬಹಿರಂಗಗೊಂಡ ಬಳಿಕ ಜೈಲಿಗೆ ಹೋಗಬೇಕಾದ ಆ ದೇಶಭಕ್ತ ಮಂತ್ರಿ ಮಾತ್ರ ರಾಜೀನಾಮೆ ಕೊಟ್ಟು ಸುಮ್ಮನಾಗಿದ್ದಾರೆ. ಭಕ್ತರ ವಿಮರ್ಶೆಯಲ್ಲಿ ನಿರಪರಾಧಿ ಆಗುತ್ತಿದ್ದಾರೆ. ದೇಶಭಕ್ತರು, ಸುಸಂಸ್ಕೃತರು “ಇಂತಹ ಮಹಿಳೆಯರಿಂದಲೇ ಸಮಾಜ ಹಾಳಾಗುತ್ತಿದೆ” ಎಂದು ಆ ಹುಡುಗಿಯ ಸಾಲು ಸಾಲು ಫೋಟೋಗಳನ್ನು ಹರಿ ಬಿಡುವ ಹೀನ ಕೆಲಸ ಮಾಡುತ್ತಿದ್ದಾರೆ.

ಇತ್ತ ದೂರ ಕೊಟ್ಟ ದಿನೇಶ್‌ ಕಲ್ಲಹಳ್ಳಿ ಅದ್ಯಾವೆ ಆಮೀಶಕ್ಕೆ ಬಲಿಯಾದನೋ ಗೊತ್ತಿಲ್ಲ ದೂರನ್ನು ವಾಪಸ್ಸ ಪಡೆದಿದ್ದಾನೆ. ಅವರು ದೂರು ವಾಪಸ್ಸ ಪಡೆಯುತ್ತಿದ್ದಂತೆ ರಮೇಶ್‌ ಜಾರಕಿ ಹೊಳಿ ಪತ್ರಿಕಾಗೋಷ್ಟಿ ನಡೆಸುತ್ತಾರೆ, ನಿರಪರಾಧಿ ಎಂದು ಮಾಧ್ಯಮಗಳ ಮುಂದೆ ಗೋಳಾಡುತ್ತಾರೆ. ಈ ಸಿಡಿ ನಕಲಿ ಸಿಡಿ ಇದರ ಹಿಂದೆ 2+3+4 ಸೂತ್ರವನ್ನು ಹೇಳಿದ್ದೇವೆ. ಅದು ಏನು ಅಂದ್ರೆ ಇಬ್ಬರೂ ಮಹಿಳೆಯರು,  ಮೂವರು ಪತ್ರಕರ್ತರು, ನಾಲ್ವರು ರಾಜಕಾರಣಿಗಳು ಇದ್ದಾರೆ ಎಂದು ಹೇಳುತ್ತಿದ್ದಾರೆ?

ಇದನ್ನು ಓದಿ : ಸುದ್ದಿ ಪ್ರಸಾರ ಮಾಡದಂತೆ ಕೋರ್ಟ್ ಮೆಟ್ಟಿಲೇರಿದ ಸಚಿವರು

ನಕಲಿ ಸಿಡಿ ಎನ್ನುವುದಾದರೆ ಈ ಸೂತ್ರವನ್ನು ಯಾಕೆ ರಮೇಶ್‌ ತೇಲಿ ಬಿಟ್ಟರು ಎಂಬ ಪ್ರಶ್ನೆ ಮೂಡ್ತಾ ಇದೆ. ಸಿಡಿ ಮಾಡುವುದಕ್ಕಾಗಿ  5 ಕೋಟಿ ಖರ್ಚು ಮಾಡಲಾಗಿದೆ ಎಂದು ಹೇಳುತ್ತಿದ್ದಾರೆ. ಗೊತ್ತಿಲ್ಲ ಸಿಡಿಯನ್ನು ಎಡಿಟ್‌ ಮಾಡೋದಕ್ಕೆ ಅಷ್ಟೊಂದು ದುಡ್ಡು ಹೇಗೆ ಖರ್ಚಾಗುತ್ತೆ, ಅದನ್ನು ಯಾವ ಲೆಕ್ಕಾಚಾರದಲ್ಲಿ ರಮೇಶ್‌ ರವರು ಹಾಕಿದ್ದಾರೆ, ಅದು ಅವರಿಗೆ ಮಾತ್ರ ಗೊತ್ತು.  ವಿದೇಶದಲ್ಲಿ ಎಡಿಟ್‌ ಮಾಡಿದ್ದು ಎಂದು ರಮೇಶ್‌ ಹೇಳ್ತಾ ಇದ್ದಾರೆ? ಇಷ್ಟೆಲ್ಲ ಮಾಹಿತಿ ಇದ್ದ ಮೇಲೆ  ಯಾಕೆ ಅವರ ಮೇಲೆ ದೂರನ್ನು ದಾಖಲಿಸುತ್ತಿಲ್ಲ. ಹೆಸರನ್ನು ಬಹಿರಂಗ ಪಡೆಸುತ್ತಿಲ್ಲ.  ರಮೇಶ್‌ ಜಾರಕಿಹೊಳಿ ಪ್ರಕರಣದ ದಿಕ್ಕನ್ನು ತಪ್ಪಿಸುತ್ತಿದ್ದಾರೆ ಎಂಬುದು ಈ ಅಂಶಗಳಿಂದಲೆ ಗೊತ್ತಾಗುತ್ತವೆ.

ಈ 2+3+4 ಸೂತ್ರಕ್ಕೆ ಬಾಂಬೆ ನಂಟಿದೆ ಎಂದು ಕುಮಾರಸ್ವಾಮಿಯವರು ಕೂಡಾ ಆರೋಪಿಸಿದ್ದಾರೆ. ಮೇಲ್ನೋಟಕ್ಕೆ ಬಾಂಬೆಯಲ್ಲಿ ಏನೇನೋ ನಡೆದಿದೆ ಎಂಬುದು ಗೊತ್ತಾಗುತ್ತಿದೆ. ತನಿಖೆಯಿಂದಲೆ ಅದರ ಸತ್ಯಾಸತ್ಯತೆ ಗೊತ್ತಾಗಲಿವೆ.

ಮಾಜಿ ಸಚಿವರ ಲೈಂಗಿಕ ವಿವಾದ ಸಂಬಂಧ ತನಿಖೆಗೆ ಗೃಹ ಇಲಾಖೆ ನೇಮಿಸಿರುವ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ ನೇತೃತ್ವದ ವಿಶೇಷ ತನಿಖಾ ತಂಡ (ಎಸ್​ಐಟಿ) ಕೇವಲ ವಿಚಾರಣೆ ನಡೆಸಿ ಸರ್ಕಾರಕ್ಕೆ ವರದಿ ಒಪ್ಪಿಸಲಿದೆ. ಆನಂತರ ಎಫ್​ಐಆರ್ ದಾಖಲಿಸಬೇಕೆ ಬೇಡವೇ ಎಂಬುದರ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. 2 ದಿನಗಳಲ್ಲಿ ಎಸ್​ಐಟಿ ತಂಡ ರಚನೆ ಆಗಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಮಾಜಿ ಸಚಿವರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪದಡಿ ನೀಡಿದ್ದ ದೂರನ್ನು ಹಿಂಪಡೆಯಲಾಗಿದೆ. ಇದೀಗ ಅಶ್ಲೀಲ ವಿಡಿಯೋ ಬಿಡುಗಡೆ ಹಿಂದಿನ ಷಡ್ಯಂತ್ರ ರೂಪಿಸಿದವರು ಯಾರೆಂದು ವಿವರವಾಗಿ ವಿಚಾರಣೆ ನಡೆಸಿ ಮಾಹಿತಿ ಕಲೆಹಾಕಲಿದೆ. ಆದರೆ, ಬಂಧಿಸುವ ಅಧಿಕಾರ ಇರುವುದಿಲ್ಲ. ಇದು ಘಟನೆ ಕುರಿತು ಮಾಜಿ ಸಚಿವರು ಸೇರಿ ಪ್ರಕರಣಕ್ಕೆ ಸಂಬಂಧಿಸಿದವರ ಹೇಳಿಕೆ ಮತ್ತು ಸಾಕ್ಷ್ಯ ಸಂಗ್ರಹಕ್ಕೆ ಮಾತ್ರ ಸೀಮಿತವಾಗಿರುತ್ತದೆ. ವಿಚಾರಣೆ ಪೂರ್ಣಗೊಳಿಸಿದ ಬಳಿಕ ತನಿಖೆ ನಡೆಸುವಂತೆ ಸರ್ಕಾರಕ್ಕೆ ಎಸ್​ಐಟಿ ಶಿಫಾರಸು ಮಾಡಲಿದೆ. ಆನಂತರ ಎಫ್​ಐಆರ್ ದಾಖಲಿಸಿ ತನಿಖೆ ನಡೆಯಲಿದೆ.

ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ

ವಿಡಿಯೋದಲ್ಲಿ ಪ್ರಸ್ತಾಪವಾಗಿರುವ ಯುವತಿ ದೂರು ನೀಡದೆ ಹೋಗಿದ್ದರೂ ಇತ್ತೀಚಿನ ಘಟನಾವಳಿ ಆಧರಿಸಿ ಅನಾಮಧೇಯ ವ್ಯಕ್ತಿಗಳ ವಿರುದ್ಧ ಸ್ವಯಂ ಪ್ರೇರಿತ ಎಫ್​ಐಆರ್ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಬೇಕಿತ್ತು. ಬಳಿಕ ಕೋರ್ಟ್​ಗೆ ಆರೋಪ ಪಟ್ಟಿ ಅಥವಾ ಪ್ರಕರಣದಲ್ಲಿ ಹುರುಳಿಲ್ಲದೆ ಹೋದರೆ ಬಿ ರಿಪೋರ್ಟ್ ಸಲ್ಲಿಸಬಹುದು. ಎಫ್​ಐಆರ್ ದಾಖಲಾದರೆ ತನಿಖೆಗೆ ಗಂಭೀರತೆ ಇರುತ್ತದೆ. ತಪ್ಪಿತಸ್ಥರನ್ನು ಬಂಧಿಸುವ ಅಧಿಕಾರ ಎಸ್​ಐಟಿಗೆ ಹೊಂದಿರುತ್ತದೆ.

ಹಾಗಾಗಿ ಎಸ್.‌ ಐ.ಟಿ ಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಬೇಕು.  ತಪ್ಪು ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು, ಸಚಿವರಾದವರು, ಶಾಸಕರಾದರೆ ಜನ ಆರಿಸಿ ಯಾಕೆ ಕಳುಹಿಸಿದ್ದಾರೆ ಎಂಬುದನ್ನು ಪರಾಮರ್ಶಿಸಿಕೊಳ್ಳಬೇಕು. ರಾಜಕಾರಣದ ನೈತಿಕತೆಯನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕಿದೆ.

Donate Janashakthi Media

Leave a Reply

Your email address will not be published. Required fields are marked *