ಪಾಟ್ನಾ: ನಿತೀಶ್ ಕುಮಾರ್ ನೇತೃತ್ವದ ಮಹಾ ಘಟಬಂಧನ ಸರ್ಕಾರವು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಬೇಕಾದ ದಿನವಾದ ಇಂದು ಕೇಂದ್ರೀಯ ತನಿಖಾ ದಳ(ಸಿಬಿಐ) ರಾಷ್ಟ್ರೀಯ ಜನತಾ ದಳದ(ಆರ್‌ಜೆಡಿ)ದ ಆರ್‌ಜೆಡಿ ಸಂಸದರಾದ ಅಶ್ಫಾಕ್ ಕರೀಮ್ ಮತ್ತು ಫೈಯಾಜ್ ಅಹ್ಮದ್ ಮತ್ತು ಪಕ್ಷದ ಎಂಎಲ್‌ಸಿ ಮತ್ತು ಬಿಸ್ಕೊಮೌನ್ ಅಧ್ಯಕ್ಷ ಸುನಿಲ್ ಸಿಂಗ್ ಅವರ ಮನೆಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದೆ.
ಭಾರತೀಯ ಜನತಾ ಪಕ್ಷ(ಬಿಜೆಪಿ) ಜೊತೆಗಿನ ಮೈತ್ರಿ ಸರ್ಕಾರಕ್ಕೆ ನಿತೀಶ್ ಕುಮಾರ್ ಅಂತ್ಯ ಹಾಡಿ ತನ್ನ ನೇತೃತ್ವದ ಸಂಯುಕ್ತ ಜನತಾದಳ(ಜೆಡಿಯು) ಪಕ್ಷವು ಮಹಾಘಟಬಂಧನ ಸರ್ಕಾರವನ್ನು ರಚನೆ ಮಾಡಿ ಎರಡು ವಾರಗಳಷ್ಟೇ ಕಳೆದಿದೆ. ನಿತೀಶ್ ಕುಮಾರ್ ಆರ್‌ಜೆಡಿ-ಜೆಡಿಯು-ಕಾಂಗ್ರೆಸ್ ಸೇರಿದಂತೆ 7 ಪಕ್ಷಗಳ ಜೊತೆ ಕೈಜೋಡಿಸಿ ಇತ್ತೀಚೆಗೆ ಬಿಹಾರದಲ್ಲಿ ಸರ್ಕಾರ ರಚಿಸಿದ್ದರು.
ಇಂದಿನಿಂದ ಬಿಹಾರ ವಿಧಾನಸಭೆಯ ಎರಡು ದಿನಗಳ ವಿಶೇಷ ಅಧಿವೇಶನ ಆರಂಭವಾಗಲಿದೆ. ಬಿಜೆಪಿ ಮೈತ್ರಿಕೂಟದಿಂದ ಹೊರಬಂದ ನಂತರ ಇಂದು ವಿಧಾನಸಭೆಯಲ್ಲಿ ವಿಶ್ವಸಮತ ಯಾಚನೆ ನಡೆಯುತ್ತಿದೆ. ಇದರ ಬೆನ್ನಲ್ಲೇ ಸಿಬಿಐ ದಾಳಿ ನಡೆದಿದೆ.
2004 ರಿಂದ 2009 ರವರೆಗೆ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರು ರೈಲ್ವೆ ಸಚಿವರಾಗಿದ್ದಾಗ ಇಲಾಖೆಯಲ್ಲಿ ನಡೆದ ಭೂಮಿಗಾಗಿ ಉದ್ಯೋಗ ಹಗರಣಕ್ಕೆ ಸಂಬಂಧಿಸಿದಂತೆ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ಮೇ ತಿಂಗಳಲ್ಲಿ ಸಿಬಿಐ ಲಾಲೂ ಪ್ರಸಾದ್ ಯಾದವ್ ಮತ್ತು ಅವರ ಪತ್ನಿ ರಾಬ್ಡಿ ದೇವಿ ವಿರುದ್ಧ ಪ್ರಕರಣ ದಾಖಲಿಸಿತ್ತು. ಈ ಪ್ರಕರಣದಲ್ಲಿ ಲಾಲು ಅವರ ಇಬ್ಬರು ಹೆಣ್ಣುಮಕ್ಕಳು ಮತ್ತು 12 ಇತರರನ್ನು ಹಗರಣದಲ್ಲಿ ಆರೋಪಿಗಳನ್ನಾಗಿ ಸಿಬಿಐ ಹೆಸರಿಸಿದೆ. ಉದ್ಯೋಗ ಪಡೆಯಲು ಭೂಮಿಯನ್ನು ಕೊಡಬೇಕು ಅಥವಾ ಆರ್‌ಜೆಡಿ ನಾಯಕರ ಹೆಸರಿನಲ್ಲಿರುವ ಭೂಮಿಯನ್ನು ದುಬಾರಿ ಬೆಲೆಗೆ ಖರೀದಿಸಬೇಕು ಎಂಬ ಷರತ್ತು ವಿಧಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2021ರಲ್ಲಿ ಸಿಬಿಐ ಪ್ರಾಥಮಿಕ ತನಿಖೆ ಆರಂಭಿಸಿತ್ತು.
‘ಈ ದಾಳಿಯನ್ನು ಉದ್ದೇಶಪೂರ್ವಕವಾಗಿ ನಡೆಸಲಾಗಿದೆ. ಯಾವುದೇ ಆಧಾರವಿಲ್ಲದ ಆರೋಪವನ್ನು ಆಧರಿಸಿ ಸಿಬಿಐ ದಾಳಿ ನಡೆಸಿದೆ. ಒತ್ತಡದಿಂದ ಸಿಬಿಐ ಹೀಗೆ ವರ್ತಿಸುತ್ತಿದೆ’ ಎಂದು ಆರ್‌ಜೆಡಿ ನಾಯಕರು ಹೇಳಿದರು.
ಆರ್‌ಜೆಡಿ ರಾಷ್ಟ್ರೀಯ ವಕ್ತಾರ ಮತ್ತು ಸಂಸದ ಮನೋಜ್ ಝಾ, ಸಿಬಿಐ ದಾಳಿಯಲ್ಲಿ ಯಾವುದೇ ಅಚ್ಚರಿಯಿಲ್ಲ, ನಿರೀಕ್ಷೆಯಿತ್ತು. ಕೇಂದ್ರೀಯ ಸಂಸ್ಥೆಗಳ ವಿಶ್ವಾಸಾರ್ಹತೆ ಪ್ರಶ್ನಿಸುವಂತಾಗಿದೆ. ಕೇಂದ್ರ ತನಿಖಾ ಸಂಸ್ಥೆಗಳು ಬಿಜೆಪಿ ಕೈಗೊಂಬೆಯಾಗಿವೆ ಎಂದು ಟೀಕಿಸಿದ್ದಾರೆ.
ನೆನ್ನೆಯಷ್ಟೇ, ಉಪಮುಖ್ಯಮಂತ್ರಿ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ರಾಜ್ಯ ರಾಜಧಾನಿಯಲ್ಲಿ ನಡೆದ ಸಭೆಯಲ್ಲಿ ಪಕ್ಷದ ಮುಖಂಡರ ಮನೆಗಳ ಮೇಲೆ ಸಿಬಿಐ ದಾಳಿ ನಡೆಸುವ ಸಾಧ್ಯತೆಯ ಬಗ್ಗೆ ತಮ್ಮ ಪಕ್ಷದ ಸಚಿವರು ಮತ್ತು ಶಾಸಕರಿಗೆ ಎಚ್ಚರಿಕೆ ನೀಡಿದ್ದರು. ಸಿಬಿಐ ಈ ಹಿಂದೆ ಜುಲೈನಲ್ಲಿ ತನ್ನ ಕಾರ್ಯಾಚರಣೆಯಲ್ಲಿ ಭೂ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಂಡಿತ್ತು.
ಅಧಿಕಾರದ ಹಪಾಹಪಿಯಲ್ಲಿರುವ ಬಿಜೆಪಿ ಪಕ್ಷವು ಕೇಂದ್ರೀಯ ಸಂಸ್ಥೆಗಳನ್ನು ಬಳಸುವ ಮೂಲಕ ಮಹಾರಾಷ್ಟ್ರ, ದೆಹಲಿ ಮತ್ತು ಈಗ ಬಿಹಾರದಲ್ಲಿ ದಾಳಿ ನಡೆಸುತ್ತಿರುವುದು ಒಂದು ಪ್ರವೃತ್ತಿಯನ್ನು ಕಾಣಬಹುದು. ಬಿಹಾರದಲ್ಲಿ ಬಿಜೆಪಿಯು ಪ್ರಬಲ ಏಳು ಪಕ್ಷಗಳ ಆಡಳಿತದ ‘ಮಹಾಘಟಬಂಧನ’ ವಿರುದ್ಧ ತನ್ನ ಹಿಡಿತ ಸಾಧಿಸಲು ಪ್ರಯತ್ನಿಸಿ ಸಫಲತೆ ಕಾಣಲಿಲ್ಲ. ಇದರಿಂದಾಗಿ ಸಿಬಿಐ ದಾಳಿ ನಡೆದಿದ್ದು ರಾಜಕೀಯವಾಗಿ ಬಹಳ ಚರ್ಚಿತವಾಗಿದೆ.