ಕಾವೇರಿ ಸಮಸ್ಯೆಯೂ ಆಡಳಿತ ಪ್ರಜ್ಞೆಯ ಕೊರತೆಯೂ

ನಾ ದಿವಾಕರ

ವೇರಿ ಕರ್ನಾಟಕದ ಒಡಲಲ್ಲಿ ಉಗಮಿಸುವ ಒಂದು ನಿಸರ್ಗ ಸಂಪತ್ತು ಎನ್ನುವುದು ಸರ್ವವೇದ್ಯ ಆದರೆ ಅದು ಕೇವಲ ಕನ್ನಡಿಗರ ಸೊತ್ತು ಎನ್ನಲಾಗುವುದಿಲ್ಲ. ಅಧಿಕ ಮಳೆ ಆದರೆ ಕಾವೇರಿಯನ್ನು ಹಿಡಿದಿಟ್ಟುಕೊಳ್ಳಲೂ ಸಾಧ್ಯವಾಗುವುದಿಲ್ಲ. ಇದು ಪ್ರಕೃತಿಯ ಅಲಿಖಿತ ನಿಯಮ. ಹಾಗಾಗಿ ಯಾವುದೇ ಭಾವನಾತ್ಮಕ ಸಂಬಂಧಗಳನ್ನು ರೂಢಿಸಿಕೊಳ್ಳುವಾಗ ಭಾರತದ ಒಕ್ಕೂಟ ವ್ಯವಸ್ಥೆ ಎತ್ತಿಹಿಡಿಯುವ ಹಂಚಿಕೊಂಡು ಕೂಡಿಬಾಳುವ ತಾತ್ವಿಕ ನೆಲೆಗಳು ಸಡಿಲವಾಗದಂತೆ ಎಚ್ಚರ ವಹಿಸಬೇಕಾಗುತ್ತದೆ. ಕನ್ನಡಪರ ಸಂಘಟನೆಗಳಲ್ಲಿ ಈ ಜಾಗ್ರತೆ ಇರಬೇಕಾದ್ದು ಅತ್ಯವಶ್ಯ. ಕಾವೇರಿ

ರಾಜಕಾರಣ- ಭಾಷೆ ಮತ್ತು ಪ್ರಾದೇಶಿಕ ಅಸ್ಮಿತೆಗಳನ್ನು ದಾಟಿ ಜೀವನೋಪಾಯದತ್ತ ಗಮನಹರಿಸಬೇಕಿದೆ

ಕಾವೇರಿ ಮತ್ತೊಮ್ಮೆ ಕರ್ನಾಟಕದ ಜನತೆಯಲ್ಲಿ ಕಾವೇರಿಸಿದೆ. ಮುಂಗಾರು ವಿಫಲವಾದ ಪ್ರತಿ ಸಂದರ್ಭದಲ್ಲೂ ಕಾವೇರಿ ಕೊಳ್ಳದಲ್ಲಿ ಉದ್ಭವಿಸುವ ಈ ಜಟಿಲ ಸಮಸ್ಯೆಗೆ ಶತಮಾನ ಇತಿಹಾಸವಿದೆ. ಬ್ರಿಟೀಷ್‌ ವಸಾಹತುಶಾಹಿ ಸೃಷ್ಟಿಸಿ ಬಿಟ್ಟುಹೋದ ಉಳಿದೆಲ್ಲಾ ಸಮಸ್ಯೆಗಳಂತೆಯೇ ಕಾವೇರಿ ಸಮಸ್ಯೆಯೂ ಸಹ ಬಗೆಹರಿಯಲಾರದ ಒಂದು ಜಟಿಲ ಸಮಸ್ಯೆಯಾಗಿ ಕರ್ನಾಟಕ ಮತ್ತು ತಮಿಳುನಾಡು ನಡುವೆ ಆಗಾಗ್ಗೆ ಕಾಡುತ್ತಲೇ ಇದೆ. ಮಾಧ್ಯಮಗಳ ಪರಿಭಾಷೆಯಲ್ಲಿ ಹೇಳುವುದಾದರೆ ಕರ್ನಾಟಕದ ಜನತೆ ಈ ವಾರ್ಷಿಕ ಅನ್ಯಾಯ ಮತ್ತು ಚಾರಿತ್ರಿಕ ತಾರತಮ್ಯದ ವಿರುದ್ಧ “ ಸಿಡಿದೆದ್ದಿದ್ದಾರೆ ”. ವಿದ್ಯುನ್ಮಾನ ಮಾಧ್ಯಮದ ಪರದೆಗಳ ಮೇಲೆ “ ಭುಗಿಲೆದ್ದ ಆಕ್ರೋಶದ ಜ್ವಾಲೆ ” ನಿರಂತರವಾಗಿ ಹರಿದಾಡುತ್ತಿದೆ. ವಾಸ್ತವದಲ್ಲಿ ಕಾವೇರಿ ಕೊಳ್ಳದಲ್ಲಿ ಹರಿಯುವ ನೀರನ್ನೇ ಅವಲಂಬಿಸಿ ಬದುಕುವ ಸಾವಿರಾರು ರೈತ ಕುಟುಂಬಗಳು ಆತಂಕಕ್ಕೀಡಾಗಿವೆ.

ಈ ನಡುವೆ ರಾಜ್ಯಾದ್ಯಂತ ಅಲ್ಲದಿದ್ದರೂ ಕಾವೇರಿಯನ್ನೇ ನಂಬಿ ಬದುಕುವ ಮೈಸೂರು-ಮಂಡ್ಯ ಪ್ರಾಂತ್ಯದ ರೈತ ಸಮುದಾಯದಲ್ಲಿ, ಕುಡಿಯುವ ನೀರಿಗೂ ಕಾವೇರಿಯನ್ನೇ ಅವಲಂಬಿಸುವ ಬೆಂಗಳೂರು-ಮೈಸೂರು ಸುತ್ತಲಿನ ನಗರಗಳ ಜನರಲ್ಲಿ ಆತಂಕದ ಛಾಯೆ ದಟ್ಟವಾಗಿರುವುದು ವಾಸ್ತವ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದಂತೆ ದಿನನಿತ್ಯ 5000 ಕ್ಯೂಸೆಕ್ಸ್‌ ನೀರನ್ನು ತಮಿಳುನಾಡಿಗೆ ಹರಿಸಬೇಕಾದ ಅನಿವಾರ್ಯತೆ ರಾಜ್ಯ ಸರ್ಕಾರದ ಮೇಲಿದೆ. ಸುಪ್ರೀಂಕೋರ್ಟ್‌ಗೆ ಸಲ್ಲಿಸಲಾಗಿರುವ ಮೇಲ್ಮನವಿಯೂ ತಿರಸ್ಕೃತವಾಗಿರುವುದರಿಂದ ಸರ್ಕಾರದ ಕೈ ಕಟ್ಟಿಹಾಕಿದಂತಿದೆ. ರಾಜ್ಯದ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷಗಳ ನಾಯಕರ ಸತತ ಪ್ರಯತ್ನದ ನಡುವೆಯೂ ಪ್ರಾಧಿಕಾರದ ತೀರ್ಮಾನವನ್ನು ಬದಲಾಯಿಸಲು ಸಾಧ್ಯವಾಗಿಲ್ಲ. ಕಾವೇರಿ ಜಲವಿವಾದ ನ್ಯಾಯಾಧಿಕರಣವೂ ಸಹ ಪ್ರಾಧಿಕಾರದ ತೀರ್ಪನ್ನು ಪುರಸ್ಕರಿಸಿರುವುದು ಕರ್ನಾಟಕದ ಮಟ್ಟಿಗೆ ಹಿನ್ನಡೆಯಾಗಿದೆ. ಪ್ರಾಧಿಕಾರದ ದೃಷ್ಟಿ ಕೇವಲ ನೀರು ನಿರ್ವಹಣೆ ಹಾಗೂ ಉಭಯ ರಾಜ್ಯಗಳ ಅವಶ್ಯಕತೆಗಳ ಚೌಕಟ್ಟಿನಲ್ಲಿ ನೆಟ್ಟಿರುವುದೇ ಹೊರತು ಅದರಿಂದ ಜನಜೀವನದ ಮೇಲೆ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಇರುವುದಿಲ್ಲ.

ಕಾವೇರಿಯ ಮೂಲ ಸೆಲೆಯಾಗಿರುವ ಕೊಡಗು, ಭಾಗಮಂಡಲ ವ್ಯಾಪ್ತಿಯಲ್ಲಿ ಮಳೆ ಕೊರತೆಯಾಗಿರುವುದರಿಂದ ಮಂಡ್ಯದ ಕೃಷ್ಣರಾಜಸಾಗರ ಅಣೆಕಟ್ಟಿನಲ್ಲಿ ನೀರು ಸಂಗ್ರಹ ಸತತವಾಗಿ ಕುಸಿಯುತ್ತಿದ್ದು ಪ್ರಾಧಿಕಾರದ ಆದೇಶದಂತೆ ದಿನಕ್ಕೆ 5000 ಕ್ಯೂಸೆಕ್ಸ್‌ ನೀರು ತಮಿಳುನಾಡಿಗೆ ಹರಿದರೆ ಕೆಲವೇ ದಿನಗಳಲ್ಲಿ, ಮಳೆ ಬಾರದೆ ಹೋದರೆ, ಅಣೆಕಟ್ಟಿನಲ್ಲಿ ನೀರು Dead Storage ಮಟ್ಟಕ್ಕೆ ಕುಸಿಯುತ್ತದೆ. ಇದು ಕಾವೇರಿ ಕೊಳ್ಳದ ಪ್ರದೇಶಗಳ ಕೃಷಿ ಚಟುವಟಿಕೆಗಳಿಗೆ ಅಡ್ಡಿ ಉಂಟುಮಾಡುವುದಷ್ಟೇ ಅಲ್ಲದೆ, ಕಾಲುವೆಗಳು ಬರಿದಾಗಿ, ಜಾನುವಾರುಗಳಿಗೂ ನೀರಿನ ಸಮಸ್ಯೆ ಹೆಚ್ಚಾಗುತ್ತದೆ. ಈಗಾಗಲೇ ಬೆಂಗಳೂರು ಮೈಸೂರು ಮತ್ತಿತರೆಡೆ ಕುಡಿಯುವ ನೀರಿನ ಕೊರತೆ ಎದುರಾಗಿದ್ದು, ರಾಜ್ಯದ ಬರಗಾಲ ಪರಿಸ್ಥಿತಿಯನ್ನು ಎದುರಿಸಲು ಸರ್ಕಾರ ಕ್ರಮ ಕೈಗೊಂಡಿದೆ. ನೀರಾವರಿ ಕೃಷಿಯನ್ನೇ ಅವಲಂಬಿಸಿರುವ ಲಕ್ಷಾಂತರ ರೈತರ ಜೀವನೋಪಾಯಕ್ಕೆ ಧಕ್ಕೆ ಉಂಟಾಗುತ್ತದೆ.

 ಜೀವನ-ಜೀವನೋಪಾಯ-ರಾಜಕಾರಣ

ಮಳೆ ಕೊರತೆ ಉಂಟಾದಾಗಲೆಲ್ಲಾ ಉದ್ಭವಿಸುವ ಕಾವೇರಿ ಸಮಸ್ಯೆಯನ್ನು ಭಾಷೆ-ಭಾಷಿಕರು-ಪ್ರಾದೇಶಿಕ ಅಸ್ಮಿತೆಯ ಚೌಕಟ್ಟಿನಲ್ಲಿ ನೋಡದೆ, ಇದು ಮೂಲತಃ ಲಕ್ಷಾಂತರ ರೈತರ ಜೀವನ ಮತ್ತು ಜೀವನೋಪಾಯದ ಪ್ರಶ್ನೆಯಾಗಿ ನಮ್ಮನ್ನು ಕಾಡಬೇಕಿದೆ. ಸಂಕಷ್ಟ ಸಮಯದಲ್ಲಿ ನೀರು ಹಂಚಿಕೆಯ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ತಾತ್ಕಾಲಿಕ ಪ್ರಯತ್ನಗಳು ಸಾಕಷ್ಟು ನಡೆದಿವೆ. ಆದರೆ ಯಾವ ಪ್ರಯತ್ನಗಳೂ ತಾರ್ಕಿಕ ಅಂತ್ಯ ಕಂಡಿಲ್ಲ. ಹಾಗೆಯೇ ಜಲಸಂಪನ್ಮೂಲಗಳನ್ನು ಸಂರಕ್ಷಿಸುವ ಮೂಲಕ, ಜಲಸಂಗ್ರಹಣೆಯ ವಿಧಾನಗಳನ್ನು ಅನುಸರಿಸುವ ಮೂಲಕ ವೈಜ್ಞಾನಿಕವಾಗಿ ಕೈಗೊಳ್ಳಬೇಕಾದ ಉಪಕ್ರಮಗಳಿಗೆ ಸರ್ಕಾರಗಳಾಗಲೀ, ಸಂಘಟನೆಗಳಾಗಲೀ ಕೈಜೋಡಿಸುತ್ತಿಲ್ಲ. ಮತ್ತೊಂದೆಡೆ ಸಾರ್ವಜನಿಕರ ನಡುವೆಯೂ ಸಮರ್ಪಕ ನೀರು ನಿರ್ವಹಣೆಯ ವಿಧಾನಗಳನ್ನು ಪ್ರಚಾರ ಮಾಡುವಲ್ಲಿ ಆಡಳಿತ ವ್ಯವಸ್ಥೆ ಸೋತಿದೆ. ಮೈಸೂರು, ಬೆಂಗಳೂರು ಮತ್ತಿತರ ಸಣ್ಣ ಪುಟ್ಟ ನಗರಗಳಲ್ಲೂ ಸಂಗ್ರಹಿತ ನೀರನ್ನು ಸಮರ್ಪಕವಾಗಿ, ಔಚಿತ್ಯಪೂರ್ಣವಾಗಿ ಬಳಸುವ ಬಗ್ಗೆ ಜನಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ನಮ್ಮ ಸಮಾಜ ಸೋತಿದೆ.

ಈಗ ರಾಜ್ಯಾದ್ಯಂತ ಭುಗಿಲೆದ್ದಿರುವ ಆಕ್ರೋಶ ಪ್ರತಿಭಟನೆಗಳಲ್ಲಿ, ಬಂದ್‌ ಆಚರಣೆಯಲ್ಲಿ, ಸಾಂಕೇತಿಕ ಧರಣಿಗಳಲ್ಲಿ ಹಾಗೂ ರಸ್ತೆ ತಡೆಯಂತಹ ಹೋರಾಟಗಳಲ್ಲಿ ವ್ಯಕ್ತವಾಗುತ್ತಿದೆ. ರಾಜ್ಯದ ಜನಸಾಮಾನ್ಯರ ಹಿತದೃಷ್ಟಿಯನ್ನು ಕಾಪಾಡುವ ಜವಾಬ್ದಾರಿ ಹೊತ್ತಿರುವ ಎಲ್ಲ ಸಂಘಟನೆಗಳೂ ಹೋರಾಟದಲ್ಲಿ ತೊಡಗಿವೆ. ಆದರೆ ಈ ಪ್ರತಿಭಟನೆಗಳು ಸಾರ್ಥಕವಾಗಬೇಕಾದರೆ ಕರ್ನಾಟಕದ ರಾಜಕೀಯ ಪಕ್ಷಗಳು ಮತ್ತು ನಾಯಕರು ಜವಾಬ್ದಾರಿಯುತವಾಗಿ ವರ್ತಿಸುವುದೂ ಅವಶ್ಯ. ರಾಜ್ಯ ಸರ್ಕಾರ ತನ್ನ ಕೈಲಾದ ಎಲ್ಲ ಪ್ರಯತ್ನಗಳನ್ನೂ ಮಾಡಿದೆ. ಕಾವೇರಿ ನ್ಯಾಯಾಧಿಕಾರಣ ಮತ್ತು  ಸುಪ್ರೀಂಕೋರ್ಟ್‌ ಆದೇಶವನ್ನು ಉಲ್ಲಂಘಿಸುವುದು ಸುಲಭಸಾಧ್ಯವಲ್ಲ. ತನ್ನ ಅಸಹಾಯಕತೆಯ ನಡುವೆಯೇ ತಮಿಳುನಾಡಿಗೆ ನೀರು ಹರಿಸುತ್ತಿರುವ ಸರ್ಕಾರ ಕೇಂದ್ರ ಸರ್ಕಾರದ ಮಧ್ಯಸ್ತಿಕೆಯನ್ನು ಆಗ್ರಹಿಸುತ್ತಲೇ ಮೇಲ್ಮನವಿಯನ್ನೂ ಸಲ್ಲಿಸದೆ. ಮಾಜಿ ಪ್ರಧಾನಿ ದೇವೇಗೌಡ ಪ್ರಧಾನಮಂತ್ರಿಗೆ ಮಧ್ಯಸ್ತಿಕೆ ವಹಿಸಲು ಕೋರಿ ಪತ್ರ ಬರೆದಿರುವುದು ಸ್ವಾಗತಾರ್ಹ ಕ್ರಮವಾಗಿದೆ.

ಅದರೆ ಇದನ್ನೂ ಮೀರಿದಂತೆ ರಾಜ್ಯದ 28 ಸಂಸದರು, ಕೇಂದ್ರ ಸಂಪುಟದಲ್ಲಿ ಸಚಿವ ಸ್ಥಾನದಲ್ಲಿರುವವರು ತಮ್ಮ ರಾಜಕೀಯ ನಿಲುವುಗಳನ್ನು ಬದಿಗಿಟ್ಟು, ರಾಜ್ಯ ಸರ್ಕಾರದೊಡನೆ ನಿಂತು ದೆಹಲಿಯಲ್ಲಿ ಹೆಚ್ಚಿನ ಒತ್ತಡ ಹೇರಬಹುದಿತ್ತು. ಈ ಸಂಕಷ್ಟವನ್ನು ಮುಂಬರುವ ಚುನಾವಣೆಯಲ್ಲಿ ಲಾಭಗಳಿಸಲು ಬಳಸಿಕೊಳ್ಳುವ ಬದಲು, ಎಲ್ಲ ಸಂಸದರೂ ಪ್ರಧಾನಮಂತ್ರಿಗಳ ಬಳಿ ಚರ್ಚೆ ನಡೆಸಿ, ನೀರು ನಿಲ್ಲಿಸದೆ ಹೋದರೆ ಸಾಮೂಹಿಕ ರಾಜೀನಾಮೆ ನೀಡುವ ಒತ್ತಡ ಹೇರಬಹುದಿತ್ತು. ಅಥವಾ ಹೊಸ ಸಂಸತ್‌ ಭವನದ ಮುಂದೆ ಧರಣಿ ಹೂಡುವ ಮೂಲಕ ತಮ್ಮ ಪ್ರತಿರೋಧವನ್ನು ವ್ಯಕ್ತಪಡಿಸಬಹುದಿತ್ತು. ರಾಜ್ಯದ ಜನತೆಯ ಜೀವನ ಮತ್ತು ಜೀವನೋಪಾಯವನ್ನು ಬಾಧಿಸುವ ಸಂಕಷ್ಟಗಳಿಗಿಂತಲೂ ತಮ್ಮ ಅಧಿಕಾರ ರಾಜಕಾರಣವೇ ಪ್ರಧಾನವಾಗಿ ಕಾಣುವುದರಿಂದ ರಾಜ್ಯ ಬಿಜೆಪಿ ನಾಯಕರು ಈ ಹೆಜ್ಜೆ ಇಡಲು ಹಿಂಜರಿಯುತ್ತಾರೆ. ದಿನಗಟ್ಟಲೆ ರಾಜ್ಯ ಬಂದ್‌ ಮಾಡಿದರೂ, ಜೈಲು ಭರೋ ಚಳುವಳಿ ನಡೆಸಿದರೂ ಅದು ಕೇವಲ ಪಕ್ಷದ ಚುನಾವಣಾ ವರ್ಚಸ್ಸನ್ನು ಹೆಚ್ಚಿಸುವ ಒಂದು ಉಪಕ್ರವಾಗಬಹುದೇ ಹೊರತು, ಕಾವೇರಿ ಸಮಸ್ಯೆಯನ್ನು ಬಗೆಹರಿಸುವುದಿಲ್ಲ ಅಥವಾ ಪ್ರಸ್ತುತ ಬಿಕ್ಕಟ್ಟನ್ನು ಪರಿಹರಿಸಿ ರೈತರಿಗೆ ಸಾಂತ್ವನ ನೀಡುವುದಿಲ್ಲ. ಪ್ರತಿಬಾರಿ ಕಾವೇರಿ ಸಮಸ್ಯೆ ಉಂಟಾದಾಗಲೂ ರಾಜ್ಯ ಸಂಸದರಲ್ಲಿ ಈ ಸೂಕ್ಷ್ಮತೆಯ ಕೊರತೆ ಇರುವುದನ್ನು ಪಕ್ಷಾತೀತವಾಗಿ ಗಮನಿಸುತ್ತಲೇ ಬಂದಿದ್ದೇವೆ.

ಇದನ್ನೂ ಓದಿ: ಕಾವೇರಿ ನೀರಿಗಾಗಿ ಬೆಂಗಳೂರು ಬಂದ್ – ಪ್ರತಿಭಟನೆಕಾರರ ಬಂಧನ, ಸೆಕ್ಷನ್ 144 ಜಾರಿ

 ಸಂಗ್ರಹ ಮತ್ತು ಬಳಕೆಯ ಸಮಸ್ಯೆ

ಲಭ್ಯವಾಗುವ ನೀರಿನ ಸಂಪನ್ಮೂಲಗಳ ವೈಜ್ಞಾನಿಕ ಸಂಗ್ರಹ ಹಾಗೂ ಸಮರ್ಪಕ ಬಳಕೆಯ ವಿಧಾನಗಳನ್ನು ರೂಢಿಸಿಕೊಳ್ಳುವ ಮೂಲಕ ಮಳೆಯ ಕೊರತೆ ಉಂಟಾದ ಸಂದರ್ಭಗಳಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳುವುದು ಸಾಧ್ಯವಾಗುತ್ತದೆ. ತಮಿಳುನಾಡಿನಲ್ಲೂ ಸಹ ನೀರಿನ ಕೊರತೆ ನೀಗಲು ಸಮುದ್ರದ ನೀರನ್ನು ಶುದ್ಧೀಕರಿಸುವ ಮೂಲಕ ಲವಣಾಂಶವನ್ನು ತೆಗೆದು (De salination) ಬಳಸಬಹುದಾದ ಸಾಧ್ಯತೆಗಳ ಬಗ್ಗೆ ದಶಕಗಳ ಹಿಂದೆಯೇ ಸಲಹೆ ನೀಡಲಾಗಿದೆ. ಇದು ದುಬಾರಿ ಎನಿಸಿದರೂ ಸೌರಶಕ್ತಿಯನ್ನು ಬಳಸುವ ಮೂಲಕ ಸಾಧ್ಯವಾಗಿಸಬಹುದು. ಈ ಕ್ರಮಗಳನ್ನು ಕೈಗೊಳ್ಳಬೇಕಾದರೆ ಸರ್ಕಾರಗಳನ್ನು ನಿರ್ವಹಿಸುವವರಲ್ಲಿ ದೂರದೃಷ್ಟಿ ಮತ್ತು ದೂರಗಾಮಿ ಆಲೋಚನೆಗಳು ಇರಬೇಕಾಗುತ್ತದೆ. ಭಾರತದ ದುರಂತವೆಂದರೆ ನಾವು ದೂರದೃಷ್ಟಿಯುಳ್ಳ ನಾಯಕತ್ವವನ್ನು ಕಳೆದಕೊಂಡು ದಶಕಗಳೇ ಕಳೆದಿವೆ. ಹಾಗಾಗಿಯೇ ಎಲ್ಲ ಅಂತರ ರಾಜ್ಯ ನದಿ ನೀರಿನ ವಿವಾದಗಳೂ ಶಾಶ್ವತವಾಗಿಬಿಟ್ಟಿವೆ. ಜನಸಾಮಾನ್ಯರು ಎದುರಿಸುವ ಸಂಕಷ್ಟ ಮತ್ತು ಬಿಕ್ಕಟ್ಟುಗಳನ್ನು ಚುನಾವಣ ಲಾಭಕ್ಕಾಗಿ ಬಳಸಿಕೊಳ್ಳುವ ಒಂದು ರಾಜಕೀಯ ಪರಂಪರೆಯನ್ನು ನಾವೇ ರೂಢಿಸಿಕೊಂಡಿದ್ದೇವೆ.

ತಮಿಳುನಾಡಿಗೆ ನೀರು ಹರಿಸುವುದರ ವಿರುದ್ಧ ರಾಜ್ಯಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳು ಈ ವಿಕೃತಿಯ ಮತ್ತೊಂದು ಆಯಾಮವನ್ನು ಎತ್ತಿತೋರಿಸುತ್ತದೆ. ಇಡೀ ರಾಜ್ಯದ ಜನತೆಯನ್ನು ಒಂದುಗೂಡಿಸಬೇಕಾದ ಒಂದು ಜಟಿಲ ಸಮಸ್ಯೆ ಪ್ರತಿರೋಧದ ನೆಲೆಗಳಲ್ಲಿ ಹಂಚಿಹೋದಾಗ ಸಂಘಟನಾತ್ಮಕ-ಸಾಂಸ್ಥಿಕ ಅಸ್ಮಿತೆಗಳು ಧುತ್ತೆಂದು ಎದ್ದುನಿಲ್ಲುತ್ತವೆ. ಇದೇ 25ರಂದು ಮಂಡ್ಯ, ಮೈಸೂರು ಮತ್ತಿತರ ಜಿಲ್ಲೆಗಳಲ್ಲಿ ಪ್ರತಿಭಟನೆಗಳು ವಿಭಿನ್ನ ಸಂಘಟನೆಗಳ ಆಶ್ರಯದಲ್ಲಿ ಭಿನ್ನವಾಗಿಯೇ ನಡೆದಿವೆ. 26ರಂದು ಬೆಂಗಳೂರು ಬಂದ್‌ ಘೋಷಿಸಲಾಗಿದೆ. ಇದರ ಹೊರತಾಗಿ ಸೆಪ್ಟಂಬರ್‌ 29ರಂದು ಕರ್ನಾಟಕ ಬಂದ್‌ಗೆ ಕೆಲವು ಕನ್ನಡ ಸಂಘಟನೆಗಳು ಕರೆ ನೀಡಿವೆ. ಇದು ಏನನ್ನು ಸೂಚಿಸುತ್ತದೆ ? ಕಾವೇರಿ ಕೊಳ್ಳ ಬರಿದಾಗಿದ್ದರೂ ನಾವು ರೂಪಿಸಿಕೊಂಡಿರುವ ಅಸ್ಮಿತೆಗಳು ನಮ್ಮನ್ನು ಬಾಧಿಸಿವೆಯೇ ? ನಾವಿನ್ನೂ ಅಸ್ಮಿತೆ-ಬಾವುಟ-ಬ್ಯಾನರ್‌ಗಳಲ್ಲೇ ಮುಳುಗಿಹೋಗಿದ್ದೇವೆಯೇ ? ಇದು ಯೋಚಿಸಬೇಕಾದ ವಿಚಾರ.

ಈಗ ನಡೆಯುತ್ತಿರುವ ಪ್ರತಿಭಟನೆಗಳ ಔಚಿತ್ಯದ ಪ್ರಶ್ನೆಯನ್ನು ಬದಿಗಿಟ್ಟು ನೋಡಿದಾಗ ನಮಗೆ ಮೂರು ವಿಚಾರಗಳು ಎದುರಾಗುತ್ತವೆ. ಕಾವೇರಿ ನದಿ ನೀರನ್ನೇ ಆಶ್ರಯಿಸಿ ಬದುಕುವ ಲಕ್ಷಾಂತರ ರೈತ ಕುಟುಂಬಗಳಿಗೆ ಇದು ಜೀವನ ಮತ್ತು ಜೀವನೋಪಾಯದ ಪ್ರಶ್ನೆ. ಬೆಂಗಳೂರು-ಮೈಸೂರು ಮತ್ತಿತರ ನಗರವಾಸಿಗಳಿಗೆ ಇದು ಜೀವನಾವಶ್ಯ ವಸ್ತುವಿನ ಅಂದರೆ ಕುಡಿಯುವ-ಬಳಕೆಯ ನೀರಿನ ಪ್ರಶ್ನೆ. ಉಳಿದಂತೆ ಕರ್ನಾಟಕದ ಇತರ ಭಾಗದ ಜನತೆಗೆ ಇದು ಭಾಷಾಭಿಮಾನದ ಅಥವಾ ಪ್ರಾದೇಶಿಕತೆಯ ಭಾವನಾತ್ಮಕ ಪ್ರಶ್ನೆ.  29ರ ಕರ್ನಾಟಕ ಬಂದ್‌ ಈ ಜನಸಮೂಹಗಳನ್ನು ತಟ್ಟುತ್ತದೆ. ಆದರೆ ಕಾವೇರಿ ಸಮಸ್ಯೆ ಭಾವನಾತ್ಮಕವೂ ಅಲ್ಲ, ಭಾಷಿಕವೂ ಅಲ್ಲ, ಭೌಗೋಳಿಕವಾದರೂ ಪ್ರಾದೇಶಿಕವೂ ಅಲ್ಲ. ಇದು ರೈತಾಪಿ ಸಮುದಾಯದ ಜೀವನ ಮತ್ತು ಜೀವನೋಪಾಯದ ಪ್ರಶ್ನೆ. ಬೆಂಗಳೂರು ಮತ್ತು ಮೈಸೂರಿನ ಹಿತವಲಯದ ಐಷಾರಾಮಿ ಜನರ ನೀರು ಬಳಕೆಯ ವಿಧಾನವನ್ನು ಸೂಕ್ಷ್ಮವಾಗಿ ಗಮನಿಸಿದರೆ ಈಗ ಎದುರಾಗುವ ಕುಡಿಯುವ ನೀರಿನ ತತ್ವಾರ ನಮ್ಮ ಬೇಜವಾಬ್ದಾರಿ ಜೀವನಶೈಲಿಗೆ ಒದಗಿದ ಶಿಕ್ಷೆ ಎಂದೇ ಭಾವಿಸಬೇಕಾಗುತ್ತದೆ. ಈ ಲಕ್ಷಾಂತರ ಜನರ ಸಮಸ್ಯೆಗಳನ್ನೂ ದಾಟಿ ರಾಜ್ಯದ ಜನತೆ ರೈತ ಸಮೂಹದ ಜೊತೆಗೆ ಹೆಗಲು ಕೊಟ್ಟು ನಿಲ್ಲಬೇಕಿದೆ. ರೈತರ ನಡುವೆಯೂ ಸಮೃದ್ಧಿಯ ಕಾಲದಲ್ಲಿ ಕಾಲುವೆಗಳಲ್ಲಿ ಯಥೇಚ್ಚವಾಗಿ ಹರಿಯುವ ನೀರಿನ ಸದ್ಬಳಕೆಯ ಬಗ್ಗೆ ಅರಿವು ಮೂಡಿಸುವ ಜವಾಬ್ದಾರಿ ರೈತ ಸಂಘಟನೆಗಳ ಮೇಲಿದೆ.

ಪರಿಹಾರದ ಹಾದಿಗಳು

ಎಲ್ಲಕ್ಕಿಂತಲೂ ಮಿಗಿಲಾಗಿ ಕಾವೇರಿ ಸಮಸ್ಯೆಯ ಪರಿಹಾರ ಇರುವುದು ದೆಹಲಿಯಲ್ಲಿ. ಎರಡೂ ರಾಜ್ಯಗಳಲ್ಲಿ ವಿಭಿನ್ನ ಪಕ್ಷಗಳು, ಕೇಂದ್ರದ ದೃಷ್ಟಿಯಲ್ಲಿ “ರಾಜಕೀಯ ವಿರೋಧ ಪಕ್ಷಗಳು” ಆಡಳಿತದಲ್ಲಿವೆ. ಈ ಎರಡೂ ರಾಜ್ಯ ಸರ್ಕಾರಗಳ ಪ್ರತಿನಿಧಿಗಳನ್ನು, ಶಾಸಕ-ಸಂಸದರ ಪ್ರತಿನಿಧಿಗಳನ್ನು, ನೀರಾವರಿ ತಜ್ಞರನ್ನು ಹಾಗೂ ರೈತ ಪ್ರತಿನಿಧಿಗಳನ್ನು ಒಂದೆಡೆ ಕೂರಿಸಿಕೊಂಡು ಒಂದು ಸೌಹಾರ್ದಯುತ ಒಪ್ಪಂದಕ್ಕೆ ಪ್ರಯತ್ನಿಸುವ ಜವಾಬ್ದಾರಿ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿದೆ. ಈ ವೇಳೆಗಾಗಲೇ ಇದನ್ನು ಮಾಡಿದ್ದಲ್ಲಿ, ಕರ್ನಾಟಕದಲ್ಲಿ ಉದ್ಭವಿಸಿರುವ ಸಂಘರ್ಷಮಯ ವಾತಾವರಣವನ್ನು ತಿಳಿಗೊಳಿಸಬಹುದಿತ್ತು. ಇಲ್ಲಿನ ಸಂಸದರಲ್ಲಿ ಈ ಸೂಕ್ಷ್ಮ ಪ್ರಜ್ಞೆ ಇರಬೇಕಿತ್ತು. ಆದರೆ ದುರಾದೃಷ್ಟವಶಾತ್‌ ಇಂತಹ ಒಂದು ಮುತ್ಸದ್ದಿತನವನ್ನು ಅಪೇಕ್ಷಿಸುವುದೂ ಅಸಾಧ್ಯ ಎನ್ನುವಷ್ಟು ಮಟ್ಟಿಗೆ ಅಧಿಕಾರ ರಾಜಕಾರಣ ತನ್ನ ಬೇರುಗಳನ್ನು ಹರಡಿಕೊಂಡಿದೆ.

ಇಂತಹ ವಿಷಮ ಪರಿಸ್ಥಿತಿಯಲ್ಲಿ ಭಾಷಾಭಿಮಾನ ಅಥವಾ ಪ್ರಾದೇಶಿಕ ಭಾವುಕತೆಗಳೇ ಪ್ರಧಾನವಾದಾಗ ಇಡೀ ಸಮಾಜವೇ ಅದರ ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಕರ್ನಾಟಕ ಈಗಾಗಲೇ ಈ ಅನುಭವಗಳನ್ನು ದಾಟಿ ಬಂದಿದೆ. “ ತಮಿಳರನ್ನು ವಾಪಸ್‌ ಕರೆಸಿಕೊಳ್ಳಿ ” ಎಂಬ ಕನ್ನಡ ಹೋರಾಟಗಾರರ ಕರೆ ಇಂತಹ ಸಂಘರ್ಷಗಳಿಗೆ ಪೂರಕವಾಗಿ ಪರಿಣಮಿಸುತ್ತದೆ. ಕಾವೇರಿ ಕರ್ನಾಟಕದ ಒಡಲಲ್ಲಿ ಉಗಮಿಸುವ ಒಂದು ನಿಸರ್ಗ ಸಂಪತ್ತು ಎನ್ನುವುದು ಸರ್ವವೇದ್ಯ ಆದರೆ ಅದು ಕೇವಲ ಕನ್ನಡಿಗರ ಸೊತ್ತು ಎನ್ನಲಾಗುವುದಿಲ್ಲ. ಅಧಿಕ ಮಳೆ ಆದರೆ ಕಾವೇರಿಯನ್ನು ಹಿಡಿದಿಟ್ಟುಕೊಳ್ಳಲೂ ಸಾಧ್ಯವಾಗುವುದಿಲ್ಲ. ಇದು ಪ್ರಕೃತಿಯ ಅಲಿಖಿತ ನಿಯಮ. ಹಾಗಾಗಿ ಯಾವುದೇ ಭಾವನಾತ್ಮಕ ಸಂಬಂಧಗಳನ್ನು ರೂಢಿಸಿಕೊಳ್ಳುವಾಗ ಭಾರತದ ಒಕ್ಕೂಟ ವ್ಯವಸ್ಥೆ ಎತ್ತಿಹಿಡಿಯುವ ಹಂಚಿಕೊಂಡು ಕೂಡಿಬಾಳುವ ತಾತ್ವಿಕ ನೆಲೆಗಳು ಸಡಿಲವಾಗದಂತೆ ಎಚ್ಚರ ವಹಿಸಬೇಕಾಗುತ್ತದೆ. ಕನ್ನಡಪರ ಸಂಘಟನೆಗಳಲ್ಲಿ ಈ ಜಾಗ್ರತೆ ಇರಬೇಕಾದ್ದು ಅತ್ಯವಶ್ಯ.

ಅಧಿಕಾರಾರೂಢ-ವಿರೋಧ ಪಕ್ಷದ ರಾಜಕೀಯ ನಾಯಕರು ತಂತಮ್ಮ ಆಡಳಿತಾವಧಿಯತ್ತ ಹಿಂದಿರುಗಿ ನೋಡುತ್ತಾ, ಕಾವೇರಿ ನೀರು ನಿರ್ವಹಣೆಯ ಮಾರ್ಗದಲ್ಲಿ ಲೋಪಗಳನ್ನು ಹುಡುಕುತ್ತಾ ಕುಳಿತರೆ ಅದೇ ಸಮಯದಲ್ಲಿ ಸಾಕಷ್ಟು ನೀರು ತಮಿಳುನಾಡಿಗೆ ಹರಿದುಹೋಗಿರುತ್ತದೆ. ಪರಸ್ಪರ ದೋಷಾರೋಪಣೆ ಅಥವಾ ಮೇಲರಿಮೆಗಳನ್ನು ಬದಿಗೊತ್ತಿ ರಾಜಕೀಯ ನಾಯಕರು ರಾಜ್ಯದ ರೈತರ ಹಿತಾಸಕ್ತಿಯ ದೃಷ್ಟಿಯಿಂದ ಶೀಘ್ರ ಪರಿಹಾರ ಕ್ರಮಗಳತ್ತ ಗಮನಹರಿಸಬೇಕಿದೆ. ಮಳೆ ಕೊರತೆ ಉಂಟಾದ ವರ್ಷಗಳಲ್ಲಿ ನೀರು ಸರಬರಾಜು ಮಿತಿಯನ್ನು ನಿಗದಿಪಡಿಸುವಂತೆ ನೀರಾವರಿ ತಜ್ಞರು ನೀಡಿರುವ ಅಮೂಲ್ಯ ಸಲಹೆಗಳನ್ನು ಸರ್ಕಾರ ಪರಿಗಣಿಸಬೇಕಿದೆ. ಹಾಗೆಯೇ ಹಲವು ವರ್ಷಗಳ ಹಿಂದೆ ಎರಡೂ ರಾಜ್ಯಗಳ ರೈತ ಸಂಘಟನೆಗಳು ರೂಪಿಸಿದ್ದ ರೈತ ಕುಟುಂಬವನ್ನು ಮತ್ತೊಮ್ಮೆ ಪುನರುಜ್ಜೀವನಗೊಳಿಸುವ ಮೂಲಕ, ರೈತಾಪಿ ಸಮುದಾಯ ತನ್ನ ಜೀವನ ಮತ್ತು ಜೀವನೋಪಾಯದ ಸವಾಲುಗಳನ್ನು ಪರಿಹರಿಸಿಕೊಳ್ಳುವತ್ತ ನಡೆಯಬೇಕಿದೆ.

ಕಾವೇರಿ ನಿರಂತರ ಸಮಸ್ಯೆ ಅಲ್ಲ ಆದರೆ ಶಾಶ್ವತವಾಗಿ ಕಾಡುತ್ತಿರುವ ಗಂಭೀರ ಸವಾಲು. ಪ್ರಕೃತಿಯು ಮನುಷ್ಯ ಸಮಾಜದ ಅಸ್ಮಿತೆಗಳನ್ನು ಲೆಕ್ಕಿಸುವುದಿಲ್ಲ, ಅಧಿಕಾರ ರಾಜಕಾರಣದ ಅಹಮಿಕೆಗಳನ್ನೂ ಪರಿಗಣಿಸುವುದಿಲ್ಲ. ಪ್ರಕೃತಿ ನಮಗೆ ನೀಡುವ ಸಂಪನ್ಮೂಲಗಳ ಸದ್ಬಳಕೆ ಮಾಡಿಕೊಳ್ಳುವ ನೈತಿಕ ಜವಾಬ್ದಾರಿ ನಮ್ಮದು. ಈ ಜವಾಬ್ದಾರಿಯನ್ನು ಮರೆತಿರುವುದು ಮನುಷ್ಯನ ನಾಗರಿಕ ಪ್ರಜ್ಞೆಯ ಕೊರತೆಯಿಂದ. ಕರ್ನಾಟಕದ ಮಟ್ಟಿಗೆ ಕಾವೇರಿ ಆಗಿಂದ್ದಾಗ್ಗೆ ಇದನ್ನು ನೆನಪಿಸುತ್ತಲೇ ಇರುತ್ತದೆ. ಸಮಸ್ಯೆ ಉಲ್ಬಣಿಸಿದಾಗೆಲ್ಲಾ ನಮ್ಮ ಭಾವನೆಗಳು “ ಸಿಡಿದೇಳುತ್ತವೆ ”, ಆಕ್ರೋಶದ ಕಿಡಿಗಳು “ ಭುಗಿಲೇಳುತ್ತವೆ ” ಆದರೆ ಎಂದೂ ಸಹ ನಮ್ಮ “ ಸಾಮಾಜಿಕ-ನೈಸರ್ಗಿಕ ಪ್ರಜ್ಞೆ ” ಬಡಿದೇಳುವುದನ್ನು ಕಾಣಲಾಗಿಲ್ಲ. ಇದು ನಮ್ಮ ನಡುವಿನ ದುರಂತಗಳಲ್ಲೊಂದು.

 

ವಿಡಿಯೋ ನೋಡಿ:ಬಹುಮನಿ ಸುಲ್ತಾನರ ಕಾಲದ ಸುರಂಗ ಬಾವಿ (ವಾಟರ್ ಕರೇಜ್‌) ಬೀದರ್ನಲ್ಲಿದೆ ಅಚ್ಚರಿಯ ಇತಿಹಾಸ Janashakthi Media

Donate Janashakthi Media

Leave a Reply

Your email address will not be published. Required fields are marked *