ಜಾತಿ, ದಬ್ಬಾಳಿಕೆ ಮತ್ತು ಪ್ರತಿರೋಧ: ಮನಮುಟ್ಟುವ ‘ಸಂಬಳಿಗೋಲು’

“ಸಂಬಳಿಗೋಲು” ಕಾದಂಬರಿ ಹಳ್ಳಿಯೊಂದರ ವಾಸ್ತವ ಚಿತ್ರಣವನ್ನ ಬಿಂಬಿಸುತ್ತಾ ಅಲ್ಲಿರುವ ಜಾತಿ ದೌರ್ಜನ್ಯ, ದಬ್ಬಾಳಿಕೆ, ಶೋಣೆಯ ಹಲವು ಮಗ್ಗುಲುಗಳನ್ನು ಅತ್ಯುತ್ತಮವಾಗಿ ಚಿತ್ರಿಸಿದೆ.

– ಹೆಚ್. ಆರ್. ನವೀನ್ ಕುಮಾರ್

“ತಪಗಲೂರು” ಎಂಬ ಒಂದು ಹಳ್ಳಿಯಲ್ಲಿನ ದಲಿತ ಮತ್ತು ಕುರುಬ ಸಮುದಾಯಕ್ಕೆ ಸೇರಿದ ಇಬ್ಬರು ಯುವಕರು ಮೇಲ್ಜಾತಿಗೆ ಸೇರಿದವರ ಹೊಲದಲ್ಲಿ ನಾಲ್ಕು ಸೇರು ಶೇಂಗ ಕದ್ದರು ಎಂಬುದನ್ನೇ ನೆಪವನ್ನಾಗಿಸಿಕೊಂಡು ತಮ್ಮ ಭೂಮಾಲಕ ಅಹಂಕಾರ ಮತ್ತು ಜಾತಿ ಮನಸ್ಥಿತಿಯನ್ನು ಸಾಬೀತುಪಡಿಸಲು ಅವರನ್ನು ಕಟ್ಟಿ ಮನಸೋ ಇಚ್ಚೆ ತಳಿಸಿ, ಬೈಕಿಗೆ ಕಟ್ಟಿ ಪೊಲೀಸ್ ಠಾಣೆಗೆ ಎಳೆದೊಯ್ಯುತ್ತಾರೆ. ಆರಂಭದಲ್ಲಿ ಈ ದೃಷ್ಯವನ್ನು ಕಣ್ಣಿಗೆ ಕಟ್ಟುವಂತರ ಲೇಖಕರು ಚಿತ್ರಿಸಿದ್ದಾರೆ.

ಪ್ರತಿಹಂತದಲ್ಲೂ ಮುಂದೇನಾಗಬಹುದು ಎಂಬ ಕುತೂಹಲವನ್ನು ಉಳಿಸುತ್ತಾ, ಉತ್ತರ ಕರ್ನಾಟಕದ ಭಾಷಾ ಶೈಲಿಯಾದರೂ ಸರಳವಾಗಿ ಓದಿಸಿಕೊಂಡು ಹೋಗುವ ಈ ಕಾರಂಬರಿಯ ಕೆಲವು ಘಟನೆಗಳ ಸಂದರ್ಭದಲ್ಲಿ ಅರಿವಿಗೆ ಬಾರದಂತೆ ಕಣ್ಣಂಚು ಒದ್ದೆಯಾಗುತ್ತದೆ, ಕೆಲವೆಡೆ ಆಕ್ರೋಶ ಹುಟ್ಟಿ ರಟ್ಟೆಯ ಮುಷ್ಟಿ ಬಿಗಿಗೊಳ್ಳುತ್ತದೆ.

ಇದನ್ನೂ ಓದಿ: “ಜನರ ವಿರುದ್ಧದ ಒಂದು ಯುದ್ಧವಾಗಿ ಪರಿಣಮಿಸುತ್ತಿರುವ ಎಸ್‍ಐಆರ್ ನ್ನು ಕೈಬಿಡಬೇಕು”

ಜಾತಿ ದೌರ್ಜನ್ಯ, ದಬ್ಬಾಳಿಕೆಗಳನ್ನು ಸಹಜವೆಂಬಂತೆ ಅನುಭವಿಸುತ್ತಿದ್ದ ತಳ ಸಮುದಾಯಕ್ಕೆ ಹೊಸ ಬೆಳಕಿನ ಆಶಾಕಿರಣದಂತೆ ಬರುವ ಪತ್ರಕರ್ತ ರಾಜಣ್ಣ ಅವನು ಇವರಿಗೆ ಕೊಡುವ ಧೈರ್ಯ, ತಿಳುವಳಿಕೆ ಮತ್ತು ಸಂಘಟನೆ, ಹೋರಾಟದ ದಾರಿ ತಾತ್ಕಾಲಿಕವಾಗಿ ಸಂಕಷ್ಟಕ್ಕೆ ಒಡ್ಡಿದರೂ ಶಾಶ್ವತ ನೆಮ್ಮದಿಯತ್ತ ಕೊಂಡೊಯ್ಯುವ ದಾರಿ ತೋರಿಸುತ್ತದೆ. ಇಲ್ಲಿ ರಾಜಣ್ಣ ತೋರುವ ಅಂಬೇಡ್ಕರ್ ಮತ್ತು ಕಾರ್ಲ್ ಮಾರ್ಕ್ಸ್ ಇಬ್ಬರ ಚಿಂತನೆಗಳು ಶೋಷಿತ ಸಮುದಾಯಕ್ಕೆ ಹೊಸ ಬೆಳಕನ್ನ ನೀಡುತ್ತವೆ. ಜೊತೆಗೆ ಕೆಂಪು ನೀಲಿಯ ವಿಚಾರಗಳು ಒಂದಾಗಿ ಶೋಷಣೆಯ ವಿರುದ್ಧ ಒಂದು ತಾತ್ವಿಕ ಸಂಘರ್ಷ ನಡೆಸುವ ಅನಿವಾರ್ಯತೆಯನ್ನು ಈ ಕಾದಂಬರಿ‌ ಸೂಚಿಸುತ್ತದೆ.

ಒಂದೇ ಮನೆಯಲ್ಲಿ‌ರುವ ಮೇಲ್ಜಾತಿಯ ಅಣ್ಣ ತಮ್ಮಂದಿರ ಇಬ್ಬರ ಆಲೋಚನೆಗಳು ಒಂದೇ ರೀತಿಯಲ್ಲಿರುವುದಿಲ್ಲ ಕೇವಲ ಜಾತಿಯ ಕಾರಣಕ್ಕಾಗಿ ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗಬಾರದು ಎಂಬುದನ್ನು ಸಣ್ಣಧಣಿ ಮತ್ತು ದೊಡ್ಡ ಧಣಿಗಳ ಆಲೋಚನೆ ಮತ್ತು ಅವರು ಕೈಗೊಳ್ಳುವ ತೀರ್ಮಾನಗಳ ಮೂಲಕ ಸೂಕ್ಷ್ಮವಾಗಿ ಹೆಣೆಯಲಾಗಿದೆ.

ಕೆಲವು ಕಡೆಗಳಲ್ಲಿ ಪಾತ್ರಗಳು ಆಡುವ ಮಾತುಗಳು ನಾಟಕೀಯ ಸಂಭಾಷಣೆಯಂತೆ ಅನಿಸಿದರೂ ಕಥೆ ಬೆಳೆಯುತ್ತಾ ಬೆಳೆಯುತ್ತ ಈ ಪಾತ್ರಗಳು ಇದನ್ನೇ‌ ಮಾತನಾಡಬೇಕಿತ್ತು ಎಂದೆನಿಸುತ್ತದೆ.

ಲೇಖಕರಾದ ಗುರುರಾಜ ದೇಸಾಯಿಯವರಿಗೆ ಬಾಲ್ಯದಲ್ಲಿ‌ ತಮ್ಮ ಕುಟುಂಬದಲ್ಲೇ ನಡೆದ ಘಟನೆಯನ್ನು ಯಾವ ಉತ್ಪ್ರೇಕ್ಷೆ ಇಲ್ಲದೆ, ಸಹಜವಾಗಿ ಚಿತ್ರಿಸಿದ್ದಾರೆ. ಜೊತೆಗೆ ಅವರು ವಿದ್ಯಾರ್ಥಿ ಜೀವನದಲ್ಲಿ ಪಡೆದ ಸಂಘಟನೆಯ ಹೋರಾಟ ಮತ್ತು ವಿಚಾರಗಳು ಜಾತಿ ದೌರ್ಜನ್ಯ ಮತ್ತು ಶೋಷಣೆಗೆ ಪರಿಹಾರವಾಗಿ ಕಾಣುತ್ತವೆ.

ಒಂದೆಡೆ ಮೇಲ್ಜಾತಿ ದೊಡ್ಡ ಧಣಿಗಳ ಮಗನಾದ ಶ್ರೀಧರ ಮತ್ತು‌ ಕೆಳಜಾತಿಯ ಮಾದರ ನಾಗ್ಯಾ ಇಬ್ಬರಲ್ಲೂ ಬಾಲ್ಯದಿಂದಲೇ ಎಲ್ಲ ಜಾತಿ ತಾರತಮ್ಯಗಳನ್ನು ಮೀರಿ ಸಹಜ ಸ್ನೇಹವನ್ನು ಬೆಳೆಸಿಕೊಂಡಿರುತ್ತಾರೆ. ಊರಿನ ಘಟನೆಗಳಿಂದಾಗಿ ಇವರಿಬ್ಬರ ಸ್ನೇಹವನ್ನು ಮುರಿಯುವ ಪ್ರಯತ್ನಗಳು ನಡೆದಾಗಲೂ ಇವರಿಬ್ಬರೂ ಅವೆಲ್ಲವನ್ನು ಮೀರಲು ಪ್ರಯತ್ನಿಸುತ್ತಾರೆ. ಅಂತಿಮವಾಗಿ ಕೆಂಪು ನೀಲಿ ಬಾವುಟಗಳನ್ನು ಕಟ್ಟಿದ್ದ ಒಂದೇ ಸೈಕಲ್ ಮೇಲೆ ಹೊರಡುವ ಇವರಿಬ್ಬರು ಜಾತಿ ಮೀರಿದ ಮನಷ್ಯ ಸಂಬಂಧಗಳ ಸೂಚಕವಾಗಿ ಕಾಣುತ್ತಾರೆ. ಇದು ಇಂದಿನ ಅಗತ್ಯ ಮತ್ತು ಅನಿವಾರ್ಯತೆ. ಇದು ಮಾತ್ರವೇ ಎಲ್ಲರನ್ನು ನೆಮ್ಮದಿಯಿಂದ ಇರಲು ಅನುವು ಮಾಡಿಕೊಡುತ್ತದೆ ಮತ್ತು ಮನುಷ್ಯನ ನಿಜವಾದ ಬೆಳವಣಿಗೆಗೆ ದಾರಿ ಮಾಡಿಕೊಡುತ್ತದೆ. ಇಲ್ಲದಿದ್ದರೆ ಜಾತಿ ವ್ಯವಸ್ಥೆ ಮನುಷ್ಯ ಜನಾಂಗದ ಅಭಿವೃದ್ಧಿಯ ಶತೃವಾಗಿ ನಿಲ್ಲುತ್ತದೆ ಎಂಬುದನ್ನು ಓದುಗರಿಗೆ ತಲುಪಿಸಲು ಯಶಸ್ವಿಯಾಗಿದೆ.

ಪೊಲೀಸ್ ಠಾಣೆಯಲ್ಲಿ‌ ಬರ್ಮವ್ವ ಮತ್ತು ಮಲ್ಲಪ್ಪ ಆಡುವ ಮಾತುಗಳನ್ನು ಗಮನಿಸಿ

“ಎಂಥಾ ಚಂದ ಕಥಿ ಹೆಣ್ದಾರ ನೋಡು ಮಲ್ಲಪ್ಪ, ನಮ್ಮ ಬಡತನ ತೋರ್ಸಿ ನಮ್ಮನ್ನ ಹೆದ್ರಸಕತ್ತಾರ” ಎಂದಳು ಬರ್ಮವ್ವ.

“ಹುನ್ಬೇ, ನಾವು ಅಶಕ್ತರಿದಿವಿ ಅಂತನ ಹಿಂಗ ಆಟ ಆಡಕತ್ತಾರ? ನಮಗ ತಿವಳಿಕೆ ಅನ್ನೋ ಶಕ್ತಿ, ಧೈರ್ಯ ಬರೋವರೆಗೂ ಇಂತವರು ಮುಕ್ತನಾ ಇರ್ತಾರ, ನಮ್ಮನ್ನ ಮುಗಿಸ್ತಾನ ಇರ್ತಾರ” ಎಂದ ಮಲ್ಲಪ್ಪ.

ಈ ಸಂಭಾಷಣೆಯಲ್ಲಿ ವಿಚಾರ, ತಿಳುವಳಿಕೆ, ಜ್ಞಾನ ಎಂಬುದು ಪ್ರತಿಯೊಬ್ಬರಿಗೂ ಎಂತಹ ಶಕ್ತಿಯನ್ನ ಕೊಡುತ್ತದೆ, ಅದರಲ್ಲೂ ಅಸಹಾಯಕರಿಗೆ ಎಂಬುದನ್ನ ಸೂಚಿಸುತ್ತದೆ.

ಇದನ್ನೇ ಚಿಂತಕ ತತ್ವಜ್ಞಾನಿ ಕಾರ್ಲ್ ಮಾರ್ಕ್ಸ್ ಹೀಗೆ ಹೇಳಿದ್ದು ಒಂದು ಚಿಂತನೆ ಅಥವಾ ತತ್ವ ಜನರ ಮನಸ್ಸಿನಲ್ಲಿ ಸಾಮೂಹಿಕವಾಗಿ ಸ್ಥಾನಪಡೆದರೆ ಅದಕ್ಕಿಂತ ದೊಡ್ಡ ಅಸ್ತ್ರ ಮತ್ತೊಂದಿಲ್ಲ.

ಊರಿನಲ್ಲಿ ಸಂಘ ಕಟ್ಟಿಕೊಳ್ಳುವ ವಿಚಾರವನ್ನ ಪ್ರಸ್ಥಾಪಿಸಿದಾಗ “ಸಂಘ! ಅದೆಂತಾ ಸಂಘ! ಹೆಂಗಿರ‍್ತೈತಿ ಅದು! ಅದು ನಮಗ ಕೆಲ್ಸ ಕೊಡ್ತೈತಿ? ಹೊಲ, ಬಟ್ಟಿ ಉಪಚಾರ ಎಲ್ಲಾ ಮಾಡ್ತೈತಿ?” ಎಂದು ಕೇಳುತ್ತಿದ್ದವರು ಮತ್ತೆ ಪ್ರಶ್ನೆ ಕೇಳಲು ಶುರು ಮಾಡಿದರು. “ಕೆಲಸ ಊಟ ಉಪಚಾರ ಕೊಡ್ತೈತೋ ಇಲ್ಲೊ ಗೊತ್ತಿಲ್ಲ. ಸಂಘ ಕಟ್ಟಿದ್ರ ಗತ್ತಿನಿಂದ ಬದುಕ್ಬೋದು ಅಂತ ರಾಜಪ್ಪಣ್ಣ ಹೇಳ್ತಿದ್ದಾ” ಎಂದ ದೇವ್ಯಾ.

ತಮ್ಮ ಸ್ವಾಭಿಮಾನವನ್ನ ಒತ್ತೆಯಿಟ್ಟು, ಅವಮಾನದಿಂದ ಗುಲಾಮರಾಗಿ ಬದುಕು ಸಾಗಿಸುತ್ತಿದ್ದವರಿಗೆ ಸಂಘ ಕಟ್ಟಿದರೆ ಎದೆಎತ್ತಿ ಗತ್ತಿನಿಂದ ಬದುಕಬಹುದು ಎಂಬುದೇ ಅತ್ಯಂತ ದೊಡ್ಡದು. ಅದರ ಮುಂದೆ ಬೇರೇನೂ ಬೇಕಾಗಿಲ್ಲ ಅನಿಸುವುದು ಸಹಜ. ಇದು ಸಂಘದ ಮಹತ್ವವನ್ನು ಮತ್ತೆ ಮತ್ತೆ ಸಾಬೀತುಪಡಿಸುತ್ತದೆ. ಅದರಲ್ಲೂ ಶೋಷಿತರಿಗೆ ಸಂಘ ಕಟ್ಟಿಕೊಳ್ಳುವುದು ಅನಿವಾರ್ಯ ಎಂಬುದನ್ನು ತಿಳಿಸುತ್ತದೆ.

ಒಟ್ಟಾರೆಯಾಗಿ ಹಳ್ಳಿಯ ಶೋಷಕರ ಕ್ರೌರ್ಯ ಮತ್ತು ಶೋಷಿತರ ಅಸಹಾಯಕತೆ ಮತ್ತು ಸಂಕಷ್ಟಗಳನ್ನು ಮನಮುಟ್ಟುವಂತೆ ಎಣೆಯುತ್ತಾ ಅವರ ಸಮಸ್ಯೆಗೆ ವಿಚಾರ ಮತ್ತು ಸಂಘಟನೆಯ ಬೆಳಕಿನ ದಾರಿಯ ಪರಿಹಾರವನ್ನು ಸೂಚಿಸಿ, ಕಾನೂನು ತಪ್ಪಿತಸ್ಥರಿಗೆ ಶಿಕ್ಷಿಸುವ ಮೂಲಕ ಅವರನ್ನು ಮನಪರಿವರ್ತನೆ ಮಾಡಿ ಒಂದು ಸೌಹಾರ್ದ ಬದುಕಿಗೆ ದಾರಿ ಮಾಡಿಕೊಡುವ “ಸಂಬಳಿಗೋಲು” ಕಾದಂಬರಿ ಮನಮುಟ್ಟುವಂತಿದೆ.

ಈ ಕಾದಂಬರಿಯ ಕರ್ತೃ ಗುರುರಾಜ ದೇಸಾಯಿಯವರ ಬರವಣಿಗೆಯ ಕೃಷಿ ಹೀಗೆ ಮುಂದುವರೆಯಲಿ, ಶೋಷಿತರ ಸಂಕಷ್ಟಗಳು ಅಕ್ಷರ ರೂಪ ಪಡೆದು ಅವು ಬದಲಾವಣೆಯ ಕಿಡಿಗಳಾಗಲಿ ಎಂದು ಆಶಿಸುತ್ತೇನೆ.

ಕಾದಂಬರಿಯನ್ನು ಕ್ರಿಯಾ ಮಾಧ್ಯಮ ಪ್ರಕಟಿಸಿದೆ. ಬೆಲೆ 140 ರೂ

ಇದನ್ನೂ ನೋಡಿ: ಮರ್ಯಾದೆಗೇಡು ಹತ್ಯೆ ತಡೆ ಕಾಯ್ದೆ ಏನು ಹೇಳುತ್ತದೆ? Janashakthi Media

Donate Janashakthi Media

Leave a Reply

Your email address will not be published. Required fields are marked *