ನವದೆಹಲಿ: ವಿಪಕ್ಷ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೆಲಸದ ಸ್ಥಳಗಳಲ್ಲಿ ಆಗುತ್ತಿರುವ ಜಾತಿ ತಾರತಮ್ಯದ ಕುರಿತು ರಾಜ್ಯಸಭೆಯಲ್ಲಿ ಫೆಬ್ರವರಿ 12ರಂದು ಕಳವಳ ವ್ಯಕ್ತಪಡಿಸಿದ್ದೂ, ಒಡಿಶಾದ ಅಂಗನವಾಡಿಯೊಂದರಲ್ಲಿ ದಲಿತ ಮಹಿಳೆ ತಯಾರಿಸಿದ ಆಹಾರವನ್ನು ತಮ್ಮ ಮಕ್ಕಳು ಸೇವಿಸದಂತೆ ಪ್ರಬಲ ಜಾತಿಯವರು ತಡೆದಿರುವ ಘಟನೆಯನ್ನು ಅವರು ಉಲ್ಲೇಖಿಸಿದರು.
ಮೇಲ್ಮನೆಯಲ್ಲಿ ಶೂನ್ಯವೇಳೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಖರ್ಗೆ, “ನಾವು 21ನೇ ಶತಮಾನದಲ್ಲಿ ಸಾಮಾಜಿಕ ಅಭಿವೃದ್ಧಿ, ಸಾಮಾಜಿಕ ಸುಧಾರಣೆ ಮತ್ತು ಹಿಂದೂಗಳ ಏಕತೆಯ ಬಗ್ಗೆ ಮಾತನಾಡುತ್ತಿದ್ದೇವೆ. ಆದರೆ, ಒಡಿಶಾದ ಅಂಗನವಾಡಿ ಕೇಂದ್ರವೊಂದರಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿರುವ ದಲಿತ ಮಹಿಳೆ ತಯಾರಿಸಿದ ಆಹಾರವನ್ನು ಸೇವಿಸಲು ಒಂದು ನಿರ್ದಿಷ್ಟ ಸಮುದಾಯದ ಜನರು ನಿರಾಕರಿಸುತ್ತಿದ್ದಾರೆ. ಈ ಕಾರಣದಿಂದಾಗಿ ಕಳೆದ ಮೂರು ತಿಂಗಳುಗಳಿಂದ ಆ ಅಂಗನವಾಡಿ ಕೇಂದ್ರವನ್ನು ಮುಚ್ಚಲಾಗಿದೆ” ಎಂದು ಹೇಳಿದರು.
ಮಕ್ಕಳ ದೈಹಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಅಂಗನವಾಡಿ ಕೇಂದ್ರಗಳೇ ಮೂಲಾಧಾರವಾಗಿದೆ. ಆದರೆ ಇಂತಹ ಜಾತಿ ತಾರತಮ್ಯದ ಘಟನೆಗಳು ಮಕ್ಕಳ ಬೆಳವಣಿಗೆಯ ಮೇಲೆ ಸಹಜವಾಗಿಯೇ ಕೆಟ್ಟ ಪರಿಣಾಮ ಬೀರುತ್ತವೆ. ಅಲ್ಲದೆ ಇಂತಹ ಘಟನೆಗಳು ಸಂವಿಧಾನದ 21ಎ ವಿಧಿಯಡಿಯಲ್ಲಿ ನೀಡಲಾದ ಶಿಕ್ಷಣದ ಹಕ್ಕಿನ ನೇರ ಉಲ್ಲಂಘನೆಯಾಗಿದೆ ಎಂದು ಖರ್ಗೆ ಕಳವಳ ವ್ಯಕ್ತಪಡಿಸಿದರು.
ಇದನ್ನೂ ಓದಿ: ರೈತ ಆತ್ಮಹತ್ಯೆ ಸಮಸ್ಯೆ ಬಗೆಹರಿಸಿ: ಸರ್ಕಾರದ ವಿರುದ್ಧ ರಾಮಣ್ಣ ಕೆಂಚಳ್ಳೇರ ಆಕ್ರೋಶ
ದೇಶದ ವಿವಿಧ ಭಾಗಗಳಿಂದ ಕೆಲಸದ ಸ್ಥಳದಲ್ಲಿ ಜಾತಿ ತಾರತಮ್ಯದ ಕುರಿತು ವರದಿಯಾಗುತ್ತಿದೆ. ತನಿಖೆಗಳು ಸಕಾಲಿಕವಾಗಿ ನಡೆದಿದ್ದರೆ, ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಪ್ಪಿಸಬಹುದಿತ್ತು ಎಂದು ಹೇಳಿದರು.
ಇತರ ರಾಜ್ಯಗಳ ನಿದರ್ಶನಗಳನ್ನು ಉಲ್ಲೇಖಿಸಿದ ಖರ್ಗೆ, ಕೆಲ ವರ್ಷಗಳ ಹಿಂದೆ ಮಧ್ಯಪ್ರದೇಶದಲ್ಲಿ ಆದಿವಾಸಿ ವ್ಯಕ್ತಿಯೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಘಟನೆಯನ್ನು ನೆನಪಿಸಿಕೊಂಡರು. ಕಳೆದ ವರ್ಷ ಗುಜರಾತ್‌ನಲ್ಲಿ ಜಾತಿ ತಾರತಮ್ಯದಿಂದಾಗಿ ದಲಿತ ಸರ್ಕಾರಿ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡರು ಎಂದು ತಿಳಿಸಿದರು.
ಇಂತಹ ಘಟನೆಗಳು ಜಾತಿ ತಾರತಮ್ಯವು ಕೇವಲ ಸಾಮಾಜಿಕ ಮತ್ತು ರಾಜಕೀಯ ಜೀವನಕ್ಕೆ ಮಾತ್ರ ಸೀಮಿತವಾಗಿಲ್ಲ, ಬದಲಿಗೆ ಕೆಲಸದ ಸ್ಥಳಗಳಲ್ಲಿಯೂ ವ್ಯಾಪಕವಾಗಿದೆ ಎಂಬುವುದನ್ನು ತೋರಿಸುತ್ತವೆ. ಇದು ಜನರ ಘನತೆ, ವೃತ್ತಿಜೀವನದ ಪ್ರಗತಿ ಮತ್ತು ವೈಯಕ್ತಿಕ ಸುರಕ್ಷತೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಖರ್ಗೆ ಹೇಳಿದರು.
ಯಾವುದೇ ಅಧಿಕಾರಿಯ ವಿರುದ್ಧ ಇಂತಹ ಜಾತಿ ತಾರತಮ್ಯವು ಸಂವಿಧಾನದ 14, 15 ಮತ್ತು 17 ನೇ ವಿಧಿಗಳ ಉಲ್ಲಂಘನೆಯಾಗಿದೆ ಎಂದ ಖರ್ಗೆ, ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಇಂತಹ ಘಟನೆಗಳನ್ನು ಸಕಾಲಿಕವಾಗಿ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ಇದನ್ನೂ ನೋಡಿ: ಸಿದ್ದಿ, ಕುಣಬಿ ಬುಡಕಟ್ಟು ಸಮುದಾಯಗಳ ಸಾಂಸ್ಕೃತಿಕ ವೈಶಿಷ್ಟ್ಯತೆಯ ನೃತ್ಯ Janashakthi Media
