ಜಾತಿ ನಿಂದನೆ ಮಾಡಿ ವೃದ್ದನ ಮೇಲೆ ಹಲ್ಲೆ; ಕೊಕ್ಕಡದಲ್ಲಿ ಪ್ರಕರಣ

ಬೆಳ್ತಂಗಡಿ: ದಲಿತ ವೃದ್ದನೊಬ್ಬ ಮಳೆ ಬಂದಿದ್ದರಿಂದ ಅಂಗಡಿಯ ಜಗಲಿಯಲ್ಲಿ ಕುಳಿತಿದ್ದಕ್ಕೆ ಅಂಗಡಿ ಮಾಲಿಕ ಜಾತಿ ನಿಂದನೆ ಮಾಡಿ ಮರದ ರೀಪಿನಿಂದ ಹಲ್ಲೆ ನಡೆಸಿದ ಘಟನೆ ಕೊಕ್ಕಡದಲ್ಲಿ ನಡೆದಿದೆ.

ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ‌ ದಾಖಲಿಸಲಾಗಿದೆ.ಕೊಕ್ಕಡ ಗ್ರಾಮದ ಮಂಚ ಮೊಗೇರ (67) ಎಂಬವರು ಹಲ್ಲೆಗೆ ಒಳಗಾದ ವ್ಯಕ್ತಿ. ಕೊಕ್ಕಡ ನಿವಾಸಿ ರಾಮಣ್ಣ ಗೌಡ ಹಲ್ಲೆ ನಡೆಸಿದ ಆರೋಪಿ.

ಕೊಕ್ಕಡ ಪೇಟೆಯಿಂದ ಹಿಂದಿರುಗುತ್ತಿದ್ದ ವೇಳೆ ಮಳೆ ಬಂದ ಕಾರಣ ಮಂಚ ಮೊಗೇರ ಅವರು, ದಣಿವಾರಿಸಲು ಕೊಕ್ಕಡ ಹಳ್ಳಿಂಗೇರಿಯ ಅಂಗಡಿಯೊಂದರ ಜಗಲಿಯಲ್ಲಿ ಕುಳಿತಿದ್ದರು. ಇದನ್ನು ಪ್ರಶ್ನಿಸಿದ ಅಂಗಡಿ ಮಾಲಿಕ ರಾಮಣ್ಣ ಗೌಡರೊಂದಿಗೆ “ಸುಸ್ತಾದ ಕಾರಣಕ್ಕೆ ಕುಳಿತಿದ್ದೇನೆ ಮಳೆ ನಿಂತ ಕೂಡಲೇ ಹೊರಡುತ್ತೇನೆ” ಎಂದು ಮಂಚ ಮೊಗೇರ ಅವರು ತಿಳಿಸಿದ್ದರು ಎನ್ನಲಾಗಿದೆ.

ಇದನ್ನು ಓದಿ : ರೇಣುಕಾ ಸ್ವಾಮಿ ಕೊಲೆ ಪ್ರಕರಣ; ಇನ್ನೆರಡು ದಿನಗಳಲ್ಲಿ ಚಾರ್ಜ್ ಶೀಟ್ ಸಲ್ಲಿಕೆ

ಆದರೆ ಅಂಗಡಿಯ ಒಳಗೆ ಹೋದ ರಾಮಣ್ಣ ಗೌಡ ಮರದ ರೀಪಿನೊಂದಿಗೆ ಬಂದು ಜಾತಿ ನಿಂದನೆ ಮಾಡಿದ್ದಲ್ಲದೇ, ತಲೆ ಹಾಗೂ ಬೆನ್ನಿಗೆ ಹಲ್ಲೆ ನಡೆಸಿದ್ದಾನೆ ಎಂದು ಧರ್ಮಸ್ಥಳ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಲಾಗಿದೆ.

ಹಲ್ಲೆಗೆ ಒಳಗಾದ ಮಂಚ ಮೊಗೇರ ಅವರನ್ನು ಮನೆಯವರು ಕೊಕ್ಕಡ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರ ತಲೆಗೆ ಹಾಗೂ ಬೆನ್ನಿಗೆ ಗಾಯಗಳಾಗಿವೆ.

ಧರ್ಮಸ್ಥಳ ಪೊಲೀಸರು ಹಲ್ಲೆಗೆ ಒಳಗಾದವರಿಂದ ಹೇಳಿಕೆಯನ್ನು ಪಡೆದು ಇದೀಗ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದನ್ನು ನೋಡಿ : ಕೋವಿಡ್ (Covid) ಸಮಯದಲ್ಲಿ ಬಿಜೆಪಿಯವರು ಮಾನವೀಯತೆಯಿಂದ ಕೆಲಸ ಮಾಡುವ ಬದಲು, ಲೂಟಿ ಮಾಡಿದ್ದಾರೆ

Donate Janashakthi Media

Leave a Reply

Your email address will not be published. Required fields are marked *