ಮಧ್ಯಪ್ರದೇಶ: ಜಬಲ್ಪುರ ಜಿಲ್ಲೆಯ ರಾಮ್ಪುರ ಪ್ರದೇಶದಲ್ಲಿರುವ ಏಕಲವ್ಯ ಆದಿವಾಸಿ ವಸತಿ ಶಾಲೆ ಹಾಗೂ ಹಾಸ್ಟೆಲ್‌ನಲ್ಲಿ ಜಾತಿ ಅವಮಾನ, ಭೇದಭಾವ ಮತ್ತು ಆಡಳಿತಾತ್ಮಕ ನಿರ್ಲಕ್ಷ್ಯದ ಗಂಭೀರ ಆರೋಪಗಳು ಹೊರಬಿದ್ದಿವೆ. ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ 69 ಏಕಲವ್ಯ ಶಾಲೆಗಳಲ್ಲೊಂದಾದ ಈ ಸಂಸ್ಥೆ, ಆದಿವಾಸಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಮತ್ತು ವಸತಿ ಸೌಲಭ್ಯ ಒದಗಿಸುವ ಉದ್ದೇಶದಿಂದ ಸ್ಥಾಪಿಸಲ್ಪಟ್ಟಿದೆ.
ಆದರೆ ಕಳೆದ ಹಲವು ತಿಂಗಳಿಂದ ಶಾಲೆಯ ವಿದ್ಯಾರ್ಥಿಗಳು ಆಹಾರ ವಿತರಣೆಯಲ್ಲಿ ಭೇದಭಾವ, ಹಾಸ್ಟೆಲ್‌ಗಳ ದುಸ್ಥಿತಿ, ಮೂಲ ಸೌಲಭ್ಯಗಳ ಕೊರತೆ ಹಾಗೂ ಮುಖ್ಯೋಪಾಧ್ಯಾಯರು, ಶಿಕ್ಷಕರು ಮತ್ತು ಇತರ ಸಿಬ್ಬಂದಿಯಿಂದ ಜಾತಿ ಆಧಾರಿತ ನಿಂದನೆ ಮತ್ತು ಅವಾಚ್ಯ ಭಾಷೆ ಬಳಸಲಾಗುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ಈ ನಿರಂತರ ನಿರ್ಲಕ್ಷ್ಯವನ್ನು ವಿರೋಧಿಸಿ ಸುಮಾರು 500 ವಿದ್ಯಾರ್ಥಿಗಳು ಪ್ರತಿಭಟನಾ ಮೆರವಣಿಗೆ ನಡೆಸಿ, ಮುಖ್ಯೋಪಾಧ್ಯಾಯರು ಮತ್ತು ಸಂಬಂಧಪಟ್ಟ ಸಿಬ್ಬಂದಿಯನ್ನು ತಕ್ಷಣ ವಜಾಗೊಳಿಸುವಂತೆ ಆಗ್ರಹಿಸಿದರು. ಪ್ರತಿಭಟನೆಯ ಬಳಿಕ ಜಿಲ್ಲಾಡಳಿತ ತನಿಖೆ ನಡೆಸುವುದಾಗಿ ಭರವಸೆ ನೀಡಿತ್ತು.
ಆದರೆ ವಿದ್ಯಾರ್ಥಿಗಳ ಅಹವಾಲುಗಳನ್ನು ಪರಿಶೀಲಿಸುವ ಬದಲು, ಆಡಳಿತವು ಶಾಲೆಯ ಹಾಸ್ಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಆದಿವಾಸಿ ನರ್ಸ್ ಜಾಗೃತಿ ಇನ್ವಾಟಿ ಅವರ ಮೇಲೆ ಆರೋಪ ಹೊರಿಸಿದ್ದು, ಅವರು ವಿದ್ಯಾರ್ಥಿಗಳನ್ನು ಪ್ರತಿಭಟನೆಗೆ ಪ್ರಚೋದಿಸಿದ್ದಾರೆ ಎಂದು ಹೇಳಲಾಗಿದೆ. ಇದರ ಬಳಿಕ ಜಾಗೃತಿಗೆ ಅಧಿಕಾರಿಗಳಿಂದ ತೀವ್ರ ಕಿರುಕುಳ ಎದುರಿಸಬೇಕಾಯಿತು. ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ (ಅತ್ಯಾಚಾರ ತಡೆ) ಕಾಯಿದೆಯಡಿ ಅವರು ದೂರು ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳಲಾಗಲಿಲ್ಲ. ಬಳಿಕ ಅವರನ್ನು ಕೆಲಸದಿಂದ ವಜಾಗೊಳಿಸಿ, ಅವರ ವಸ್ತುಗಳನ್ನು ವಶಪಡಿಸಿಕೊಂಡು ಹಾಸ್ಟೆಲ್ ಆವರಣದಿಂದ ಹೊರಹಾಕಲಾಗಿದೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ಮಂಗಳೂರು | ಆರ್.ಆರ್.ಬಿ ಡಿ ಗ್ರುಪ್ ಹುದ್ದೆಗಳಿಗೆ ಅರ್ಜಿ ಆಹ್ವಾನ!
ಜನವರಿ 30ರಂದು ನಿರಂತರ ಅವಮಾನ ಮತ್ತು ಕಿರುಕುಳದಿಂದ ಮನನೊಂದ ಜಾಗೃತಿ ಇನ್ವಾಟಿ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದರು. ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮುಖ್ಯೋಪಾಧ್ಯಾಯರು ಮತ್ತು ಇತರ ಸಿಬ್ಬಂದಿ ವಿರುದ್ಧ ನೀಡಿದ ದೂರು ಕುರಿತು ಇನ್ನೂ ಎಫ್‌ಐಆರ್ ದಾಖಲಾಗಿಲ್ಲ. ಆತ್ಮಹತ್ಯೆ ಯತ್ನದ ನಂತರ ಮಾತ್ರ ಪೊಲೀಸರು ಕಿರುಕುಳದ ದೂರು ವಿಚಾರವನ್ನು ಗಮನಕ್ಕೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಫೆಬ್ರವರಿ 1ರಂದು ಅಖಿಲ ಭಾರತ ಜನತಾಂತ್ರಿಕ ಮಹಿಳಾ ಸಂಘಟನೆ (ಎಐಡಿಡಬ್ಲ್ಯೂಎ) ಕಾರ್ಯಕರ್ತರು, ಮಹಿಳಾ ವಕೀಲರೊಂದಿಗೆ, ವಿಭಾಗೀಯ ಆದಿವಾಸಿ ಉಪ ಆಯುಕ್ತರ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು. ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ವಾಸ್ತವವಾಗಿ ಆದಿವಾಸಿಗಳು ಮತ್ತು ಇತರ ಸಾಮಾಜಿಕವಾಗಿ ಹಿಂದುಳಿದ ಸಮುದಾಯಗಳ ಹಕ್ಕುಗಳನ್ನು ರಕ್ಷಿಸಲು ಬದ್ಧವಾಗಿದ್ದರೆ, ಕಿರುಕುಳಕ್ಕೆ ಹೊಣೆಗಾರರಾದ ಮುಖ್ಯೋಪಾಧ್ಯಾಯರು ಮತ್ತು ಸಿಬ್ಬಂದಿಯನ್ನು ತಕ್ಷಣ ಅಮಾನತುಗೊಳಿಸಬೇಕಿತ್ತು ಎಂದು ಎಐಡಿಡಬ್ಲ್ಯೂಎ ಆರೋಪಿಸಿದೆ.
ದಲಿತರು ಮತ್ತು ಆದಿವಾಸಿಗಳಿಗೆ ಸಮಾನ ನ್ಯಾಯ ಒದಗಿಸಲಾಗುತ್ತಿದೆ ಎಂಬ ಸರ್ಕಾರದ ಹೇಳಿಕೆಗಳು ಮತ್ತು ಏಕಲವ್ಯ ವಸತಿ ಶಾಲೆಗಳ ಒಳಗಿನ ವಾಸ್ತವ ಸ್ಥಿತಿಗಳ ನಡುವೆ ಭಾರೀ ವ್ಯತ್ಯಾಸವಿದೆ ಎಂದು ಸಂಘಟನೆ ರಾಜ್ಯ ನಾಯಕತ್ವ ಹೇಳಿದೆ. “ಜಬಲ್ಪುರದ ಏಕಲವ್ಯ ಶಾಲೆ ಒಂದು ಅಪರೂಪದ ಪ್ರಕರಣವಲ್ಲ, ಇದು ವ್ಯವಸ್ಥಾತ್ಮಕ ಸಮಸ್ಯೆಯ ಲಕ್ಷಣವಾಗಿದೆ,” ಎಂದು ಎಐಡಿಡಬ್ಲ್ಯೂಎ ತಿಳಿಸಿದೆ.
ಇತ್ತೀಚಿನ ವರ್ಷಗಳಲ್ಲಿ ಮಧ್ಯಪ್ರದೇಶದ ಹಲವು ಏಕಲವ್ಯ ಶಾಲೆಗಳು ಮತ್ತು ಆದಿವಾಸಿ ಹಾಸ್ಟೆಲ್‌ಗಳಲ್ಲಿ ಆಹಾರದ ಕೊರತೆ, ವಸತಿ ಕೇಂದ್ರಗಳಲ್ಲಿ ಹಿಂಸೆ, ಶಿಕ್ಷಕರ ದುರ್ವ್ಯವಹಾರ ಮತ್ತು ಜಾತಿ ಅವಮಾನಗಳ ವಿರುದ್ಧ ವಿದ್ಯಾರ್ಥಿ ಪ್ರತಿಭಟನೆಗಳು ನಡೆದಿವೆ. ಶಹ್ಡೋಲ್, ಮಂಡ್ಲಾ ಮತ್ತು ಅಲಿರಾಜ್‌ಪುರ ಜಿಲ್ಲೆಗಳಲ್ಲಿ ನಿರ್ಲಕ್ಷ್ಯ, ಅನುಮಾನಾಸ್ಪದ ವಿದ್ಯಾರ್ಥಿ ಸಾವುಗಳು ಮತ್ತು ದೂರುದಾರರನ್ನು ಮೌನಗೊಳಿಸುವ ಕ್ರಮಗಳು ಈಗಾಗಲೇ ಚರ್ಚೆಗೆ ಬಂದಿವೆ.
ಎಐಡಿಡಬ್ಲ್ಯೂಎ ರಾಜ್ಯಾಧ್ಯಕ್ಷೆ ಅಂಜನ್ ಕುರಾರಿಯಾ ಸೇರಿದಂತೆ ಮಹಿಳಾ ನಾಯಕಿಯರು ಆಸ್ಪತ್ರೆಗೆ ಭೇಟಿ ನೀಡಿ ಜಾಗೃತಿ ಇನ್ವಾಟಿಯನ್ನು ಭೇಟಿ ಮಾಡಿ, ಕಾನೂನು ನೆರವು ನೀಡುವ ಭರವಸೆ ನೀಡಿದ್ದಾರೆ. ಈ ಪ್ರಕರಣದ ಕುರಿತು ಸ್ವತಂತ್ರ ತನಿಖೆ, ಎಸ್‌ಸಿ/ಎಸ್‌ಟಿ (ಅತ್ಯಾಚಾರ ತಡೆ) ಕಾಯಿದೆಯಡಿ ತಕ್ಷಣ ಎಫ್‌ಐಆರ್ ದಾಖಲು, ನರ್ಸ್‌ನ್ನು ಪುನರ್ ನೇಮಕ ಹಾಗೂ ಹೊಣೆಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆ ಆಗ್ರಹಿಸಿದೆ.
ಆದಿವಾಸಿ ವಿದ್ಯಾರ್ಥಿಗಳು ಧ್ವನಿ ಎತ್ತುತ್ತಿರುವ ಈ ಸಂದರ್ಭದಲ್ಲಿ, ಆಡಳಿತದ ಮೌನವು ಈ ವಸತಿ ಶಾಲೆಗಳು ನಿಜಕ್ಕೂ ಯಾರ ಹಿತಕ್ಕಾಗಿ ಕಾರ್ಯನಿರ್ವಹಿಸುತ್ತಿವೆ ಎಂಬ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.
ಇದನ್ನೂ ನೋಡಿ: ಒಂದು ಪಟ್ಟಿ, ನೂರಾರು ಪ್ರಶ್ನೆಗಳು – ಸುಪ್ರೀಂ ಕೋರ್ಟ್‌ನಲ್ಲಿ SIR ವಿಚಾರಣೆ Janashakthi Media
