ಬೆಂಗಳೂರು: ಕರ್ನಾಟಕ ಲೋಕಾಯುಕ್ತದಲ್ಲಿ ಚುನಾಯಿತ ಪ್ರತಿನಿಧಿಗಳು ಮತ್ತು ಸರ್ಕಾರಿ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ 1,228 ಪ್ರಕರಣಗಳು ಇತ್ಯರ್ಥವಾಗದೆ ಬಾಕಿ ಉಳಿದಿವೆ.
ಇದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಮಾಜಿ ಸಿಎಂಗಳಾದ ಬಿಎಸ್ ಯಡಿಯೂರಪ್ಪ ಮತ್ತು ಎಚ್‌ಡಿ ಕುಮಾರಸ್ವಾಮಿ ಮತ್ತು ಸಚಿವ ಜಮೀರ್ ಅಹಮದ್ ಖಾನ್ ವಿರುದ್ಧ ಭ್ರಷ್ಟಾಚಾರ ಪ್ರಕರಣಗಳು ಸೇರಿವೆ.
ಕೆಲವು ಪ್ರಕರಣಗಳು 10 ವರ್ಷಕ್ಕೂ ಹೆಚ್ಚು ಕಾಲದಿಂದ ಬಾಕಿ ಉಳಿದಿವೆ. 1,228 ಪ್ರಕರಣಗಳಲ್ಲಿ 337 ಪ್ರಕರಣಗಳನ್ನು ಪ್ರಾಸಿಕ್ಯೂಷನ್‌ಗೆ ಮಂಜೂರಾತಿಗಾಗಿ ಕಳುಹಿಸಲಾಗಿದೆ. ಆದರೆ ಅಧಿಕಾರಿಗಳು 142 ಪ್ರಕರಣಗಳಲ್ಲಿ ಪ್ರಾಸಿಕ್ಯೂಷನ್‌ಗೆ ಮಾತ್ರ ಮಂಜೂರಾತಿ ನೀಡಿದ್ದಾರೆ.
ಇದನ್ನೂ ಓದಿ: ಮನು ಭಾಕರ್ ಸೇರಿದಂತೆ ನಾಲ್ವರು ಅಥ್ಲಿಟ್ಸ್ ಗೆ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಘೋಷಣೆ
ಬೆಳಗಾವಿಯಲ್ಲಿ ಇತ್ತೀಚೆಗೆ ನಡೆದ ಚಳಿಗಾಲದ ಅಧಿವೇಶನದಲ್ಲಿ ಬಿಜೆಪಿಯ ಡಿಎಸ್ ಅರುಣ್‌ಗೆ ಪರಿಷತ್‌ನಲ್ಲಿ ನೀಡಿದ ಉತ್ತರದಲ್ಲಿ ಸಿದ್ದರಾಮಯ್ಯ ಅವರು, ಹಲವು ಪ್ರಕರಣಗಳಿಗೆ ಕಾನೂನು ಅಭಿಪ್ರಾಯ ಬೇಕು, ಕೆಲವು ಆರೋಪಿಗಳು ತಡೆಯಾಜ್ಞೆ ಪಡೆದಿದ್ದಾರೆ, ಕೆಲವು ಪ್ರಕರಣಗಳಲ್ಲಿ ವಿವಿಧ ಇಲಾಖೆಗಳ ಮುಖ್ಯಸ್ಥರ ಅಭಿಪ್ರಾಯ ಪಡೆಯಬೇಕು ಎಂದು ಹೇಳಿದ್ದಾರೆ.
ಬಿ.ವೈ.ವಿಜಯೇಂದ್ರ, ಎಸ್.ಟಿ.ಸೋಮಶೇಖರ್, ಗಾಲಿ ಜನಾರ್ದನರೆಡ್ಡಿ ಸೇರಿದಂತೆ ಹಲವು ಶಾಸಕರು, ಮಾಡಾಳ್ ವಿರೂಪಾಕ್ಷ, ಚೌಡರೆಡ್ಡಿ ಸೇರಿದಂತೆ ಹಲವು ಮಾಜಿ ಶಾಸಕರ ವಿರುದ್ಧವೂ ಭ್ರಷಾಚಾರ ಪ್ರಕರಣಗಳು ದಾಖಲಾಗಿವೆ.
ಲೋಕಾಯುಕ್ತವನ್ನು ಬಲಪಡಿಸುವ ಅಗತ್ಯವಿದೆ. ಸದ್ಯ ಲೋಕಾಯುಕ್ತ ಪೊಲೀಸರು ನೇರವಾಗಿ ಲೋಕಾಯುಕ್ತ ವ್ಯಾಪ್ತಿಗೆ ಬರುತ್ತಿಲ್ಲ. ಅವರು ರಾಜ್ಯ ಸರ್ಕಾರದ ಅಡಿಯಲ್ಲಿ ಬರುತ್ತಾರೆ. “ಲೋಕಾಯುಕ್ತಕ್ಕೆ ಅಧಿಕಾರವಿದೆ ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ ಲೋಕಾಯುಕ್ತರು ಕೇವಲ ತನಿಖೆ ನಡೆಸಿ ಕ್ರಮಕ್ಕಾಗಿ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡುತ್ತಾರೆ. ಮತ್ತೆ, ಶಿಫಾರಸುಗಳು ಕ್ಯಾಬಿನೆಟ್ ಅನುಮೋದನೆಗೆ ಹೋಗುತ್ತವೆ.
ಶಿಫಾರಸುಗಳನ್ನು ಸ್ವೀಕರಿಸುವ ಅಥವಾ ತಿರಸ್ಕರಿಸುವ ವಿವೇಚನಾ ಅಧಿಕಾರವನ್ನು ಸಂಪುಟ ಹೊಂದಿದೆ. ಭ್ರಷ್ಟಾಚಾರ ಪ್ರಕರಣಗಳಲ್ಲಿ ಭಾಗಿಯಾಗಿರುವ ಅಧಿಕಾರಿಗಳನ್ನು ವಜಾಗೊಳಿಸಲು ಅಥವಾ ಅಮಾನತುಗೊಳಿಸಲು ಲೋಕಾಯುಕ್ತಕ್ಕೆ ಅಧಿಕಾರ ನೀಡುವ ಅವಶ್ಯಕತೆಯಿದೆ ಎಂದು ಲೋಕಾಯುಕ್ತ ನಿವೃತ್ತ ಅಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.
ಕೆಲವು ಪ್ರಭಾವಿ ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ಹಿತಾಸಕ್ತಿ ಕಾಪಾಡಲು ಲೋಕಾಯುಕ್ತ ಸಂಸ್ಥೆಯನ್ನು ಬಲಪಡಿಸುತ್ತಿಲ್ಲ . ಇದು ಅಧಿಕಾರಕ್ಕೆ ಬರುವ ಎಲ್ಲಾ ರಾಜಕೀಯ ಪಕ್ಷಗಳಿಗೆ ಒಳ್ಳೆಯದು ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.
ಇದನ್ನೂ ನೋಡಿ: ಕುವೆಂಪು 120| ಕುವೆಂಪು ಓದು – ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ Janashakthi Media