ಗುವಾಹಟಿ: ಗುಜರಾತ್ ಶಾಸಕ ಹಾಗೂ ಸಾಮಾಜಿಕ ಕಾರ್ಯಕರ್ತ ಜಿಗ್ನೇಶ್ ಮೇವಾನಿ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ ಅನಾವಶ್ಯಕವಾಗಿ ಸಿಲುಕಿಸಿರುವ ಪೊಲೀಸರನ್ನು ಅಸ್ಸಾಂನ ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದೆ. ಮಹಿಳಾ ಪೊಲೀಸ್ ಮೇಲೆ ಹಲ್ಲೆ ಮಾಡಿದ ಪ್ರಕರಣದಲ್ಲಿ ಜಿಗ್ನೇಶ್ ಮೆವಾನಿಗೆ ಜಾಮೀನು ನೀಡಿ ಆದೇಶ ಹೊರಡಿಸುವ ವೇಳೆ ಪೊಲೀಸರು ದುರುದ್ದೇಶಪೂರ್ವಕವಾಗಿ ಪ್ರಕರಣ ಸೃಷ್ಟಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಅಸ್ಸಾಮ್‌ನ ಬಾರಪೇಟ ನ್ಯಾಯಾಲಯದ ನ್ಯಾಯಾಧೀಶ ಅಪರೇಶ್ ಚಕ್ರವರ್ತಿ “ಬಹಳ ಕಷ್ಟಪಟ್ಟು ನಾವು ಗಳಿಸಿದ ಪ್ರಜಾತಂತ್ರ ವ್ಯವಸ್ಥೆಯನ್ನ ಪೊಲೀಸ್ ಸರಕಾರವಾಗಿ ಬದಲಿಸುತ್ತಿರುವುದನ್ನು ಊಹಿಸಲೂ ಸಾಧ್ಯವಾಗುತ್ತಿಲ್ಲ” ಎಂದು ಆದೇಶದಲ್ಲಿ ತಿಳಿಸಿದರು.
ಇದನ್ನು ಓದಿ: ಗುಜರಾತ್ ಶಾಸಕ, ದಲಿತ ನಾಯಕ ಜಿಗ್ನೇಶ್ ಮೇವಾನಿಗೆ ಜಾಮೀನು ಮಂಜೂರು
ಅನೇಕ ಸಾಮಾಜಿಕ ಮತ್ತು ದಲಿತ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದ ಶಾಸಕ ಜಿಗ್ನೇಶ್ ಮೆವಾನಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟ್ವೀಟ್ ಮಾಡಿದರೆಂಬ ಕಾರಣಕ್ಕೆ ಪ್ರಕರಣವೊಂದನ್ನು ದಾಖಲಿಸಿತ್ತು ಮತ್ತು ಅಸ್ಸಾಮ್ ಪೊಲೀಸರು ಇದೇ ಏಪ್ರಿಲ್ 20ರಂದು ಬಂಧಿಸಿದರು. ಮೇ 25ರಂದು ಈ ಪ್ರಕರಣದಲ್ಲಿ ಅವರಿಗೆ ಜಾಮೀನು ಸಿಕ್ಕ ಕೂಡಲೇ ಮಹಿಳಾ ಪೊಲೀಸ್ ಮೇಲೆ ಹಲ್ಲೆ ಮಾಡಲಾಗಿದೆ ಎಂಬ ಹೊಸ ಪ್ರಕರಣ ದಾಖಲಾಗಿ ಅದೇ ದಿನ ಅವರನ್ನು ಮತ್ತೆ ಬಂಧನದಲ್ಲಿ ಮುಂದುವರಿಸಲಾಯಿತು. ಇದೀಗ ಪೊಲೀಸರಿಂದ ಈ ಹೊಸ ಪ್ರಕರಣವನ್ನು ಬೇಕಂತಲೇ ಸೃಷ್ಟಿಸಲಾಗಿತ್ತು ಎಂಬುದು ಸಾಬೀತಾಗಿದೆ.
“ಮ್ಯಾಜಿಸ್ಟ್ರೇಟ್ ಮುಂದೆ ಮಹಿಳೆ ನೀಡಿದ ಹೇಳಿಕೆಯೇ ಬೇರೆ, ಎಫ್‌ಐಆರ್‌ನಲ್ಲಿ ಬರೆದಿರುವುದೇ ಬೇರೆ. ಇದನ್ನ ಗಮನಿಸದರೆ ಆರೋಪಿ ಜಿಗ್ನೇಶ್ ಮೆವಾನಿ ಅವರನ್ನು ದೀರ್ಘ ಅವಧಿಯವರೆಗೆ ಬಂಧನದಲ್ಲಿಟ್ಟುಕೊಳ್ಳಲು ದಿಢೀರ್ ಪ್ರಕರಣವನ್ನ ಸೃಷ್ಟಿಸಲಾಗಿರುವುದು ಕಂಡುಬಂದಿದೆ” ಎಂದು ನ್ಯಾಯಾಲಯ ಹೇಳಿದೆ.
ಪೊಲೀಸರ ಅಧಿಕಾರ ದುರುಪಯೋಗ ಘಟನೆಗಳು ಹೆಚ್ಚು ಇದ್ದು ಗುವಾಹಟಿ ಉಚ್ಚ ನ್ಯಾಯಾಲಯವು ಸ್ವಯಂ ಆಗಿ ಪ್ರಕರಣ ಪರಿಗಣಿಸಬೇಕೆಂದು ಬಾರಪೆಟಾ ಸೆಷನ್ಸ್ ಕೋರ್ಟ್ ಇದೇ ವೇಳೆ ಮನವಿ ಮಾಡಿದೆ.
ಬಿಜೆಪಿಯದ್ದು ಹೇಡಿತನ
“ನನ್ನನ್ನು ಬಂಧಿಸುವುದು ಸರಳ ವಿಷಯವಾಗಿರಲಿಲ್ಲ. ಪ್ರಧಾನಿ ಕಚೇರಿಯಲ್ಲಿರುವ ರಾಜಕೀಯ ನಾಯಕರ ಸೂಚನೆ ಮೇರೆಗೆ ಈ ಕೆಲಸ ಮಾಡಲಾಗಿದೆ. ಒಬ್ಬ ಮಹಿಳೆಯನ್ನ ನನ್ನ ವಿರುದ್ಧ ಛೂ ಬಿಡುವಷ್ಟು ಹೇಡಿಯಾಗಿದೆ ಸರಕಾರ… ಈ ವರ್ಷ ನಡೆಯಲಿರುವ ಗುಜರಾತ್ ಚುನಾವಣೆಯನ್ನ ದೃಷ್ಟಿಯಲ್ಲಿಟ್ಟುಕೊಂಡು ಬಿಜೆಪಿ ಈ ಕೆಲಸ ಮಾಡುತ್ತಿದೆ” ಎಂದು ಜಿಗ್ನೇಶ್ ಮೆವಾನಿ ಹೇಳಿಕೆ ನೀಡಿದ್ದಾರೆ.