ವೃತ್ತಿ ರಂಗಭೂಮಿ ಮರು ಉತ್ಖನನದ ಹಾದಿಯಲ್ಲಿ

ಕಳೆದೇ ಹೋಗುತ್ತಿದೆ ಎಂಬ ಆತಂಕದೊಡನೆ ಮರಳಿಕಟ್ಟುವ ಹೆಜ್ಜೆಗಳ ಒಂದು ಸೃಜನಶೀಲ ಪ್ರಯತ್ನ

-ನಾ ದಿವಾಕರ

ಆಧುನಿಕ ತಂತ್ರಜ್ಞಾನ ಮತ್ತು ಅದರಿಂದಾಗುತ್ತಿರುವ ಕೆಲವು ಅಪಾಯಗಳು ಏನೇ ಇದ್ದರೂ, ನಮ್ಮ ಸಮಾಜದ ಒಂದು ಹಿರಿಯ ತಲೆಮಾರಿನ ಚಿಂತನಶೀಲ ಮನಸ್ಸುಗಳಿಗೆ, ಈ ತಂತ್ರಜ್ಞಾನವು ಒದಗಿಸುತ್ತಿರುವ ಸಂವಹನ ಸಾಧನಗಳು ಬೌದ್ಧಿಕವಾಗಿ ಸಮಾನ ಮನಸ್ಕರನ್ನು, ಚಿಂತನಾವಾಹಿನಿಗಳನ್ನು ಮತ್ತು ಅವುಗಳ ವಾಹಕರನ್ನು, ಪರಸ್ಪರ ಮಿಲನವಾಗದೆಯೇ, ನಿಕಟವರ್ತಿಗಳನ್ನಾಗಿ ಮಾಡುತ್ತಿವೆ. ಮುಖತಃ ಪರಿಚಯವೇ ಇಲ್ಲದವರೂ ಬಹಳ ಆತ್ಮೀಯರಾಗುವುದೇ ಅಲ್ಲದೆ, ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳುವುದಕ್ಕೂ ಈ ಸಾಮಾಜಿಕ ಸಂವಹನ ಸಾಧನಗಳು ಎಡೆಮಾಡಿಕೊಟ್ಟಿವೆ. ಇಂತಹ ಒಂದು ನವ ಯುಗದಲ್ಲಿ ಪರಿಚಯಕ್ಕೆ ಬಂದು ನಿಕಟವರ್ತಿಗಳಂತೆಯೇ ಆಗಿರುವ ಹಲವಾರು ರಂಗಕರ್ಮಿಗಳು, ಸಾಹಿತಿಗಳು, ಕಲಾವಿದರು ನಮ್ಮ ಬೌದ್ಧಿಕ ಅರಿವು ಮತ್ತು ಗ್ರಹಿಕೆಯ ವಿಕಾಸಕ್ಕೆ  ನೆರವಾಗುತ್ತಿರುವುದು ಡಿಜಿಟಲ್‌ ಯುಗದ ಒಂದು ಸಕಾರಾತ್ಮಕ ಕೊಡುಗೆ. ವೃತ್ತಿ

ಈ ಬೌದ್ಧಿಕ ಒಡನಾಟದಲ್ಲಿ ಒಬ್ಬ ಬರಹಗಾರನಾಗಿ ನಾನು ರೂಢಿಸಿಕೊಂಡ ಒಂದು ʼಬರಹ ಮಾದರಿʼ ಎಂದರೆ ಸಾಹಿತ್ಯ-ರಂಗಭೂಮಿಯನ್ನು ಕುರಿತ ವ್ಯಾಖ್ಯಾನ ಮಾಡುವ ವಿಮರ್ಶೆ ಎನಿಸಿಕೊಳ್ಳದ, ಪರಿಚಯಾತ್ಮಕ ಬರಹಶೈಲಿ. ನಾಟಕಗಳನ್ನು ನೋಡುವ ಮೂರು ನಾಲ್ಕು ದಶಕಗಳ ಅನುಭವಕ್ಕೆ ಜೋಡಿಸಿದಂತೆ ವರ್ತಮಾನದ ನಾಟಕ ಪ್ರದರ್ಶನಗಳ ಬಗ್ಗೆ ಬರೆಯುವುದು ಒಂದು ರೀತಿಯ ಆಧ್ಯಾತ್ಮಿಕ ಅನುಭವ. ಇದರಿಂದ ನಾಟಕಕಾರರು, ರಂಗಕರ್ಮಿಗಳು, ಕಲಾವಿದರು ಹೆಚ್ಚು ಹೆಚ್ಚು ಆತ್ಮೀಯರಾಗತೊಡಗಿದ್ದು ಸೌಭಾಗ್ಯ ಅಲ್ಲವೇ ? ಈ ಪರಿಸರದಲ್ಲೇ ಅರಿವಿಗೆ ಬಾರದೆ ಇರುವ ಆಥವಾ ಅರಿವಿದ್ದೂ ಹೆಚ್ಚು ಆಲೋಚನೆ ಮಾಡದೆ ಹೋದ ರಂಗಭೂಮಿಯ ಚರಿತ್ರೆ ಮತ್ತು ವರ್ತಮಾನದ ಪರಿಚಯವಾಗಿದ್ದು ಸತ್ಯ. ಇದೇ ಹಾದಿಯಲ್ಲ ಪರಿಚಯವಾದದ್ದು  ವೃತ್ತಿ ರಂಗಭೂಮಿ ರಂಗಾಯಣದ ಹಾಲಿ ನಿರ್ದೇಶಕ, ಆತ್ಮೀಯ ಮಲ್ಲಿಕಾರ್ಜುನ ಕಡಕೋಳ. ಈಗ ಅವರ  ಅವರ “ ನಾಟಕ ಕರ್ನಾಟಕ ” ಎಂಬ ಪುಟ್ಟ ಪುಸ್ತಕ ನನ್ನ ಅಭಿಪ್ರಾಯಕ್ಕಾಗಿ ತವಕಿಸುತ್ತಿದೆ.

ವೃತ್ತಿ ರಂಗಭೂಮಿಯ ವಿಹಂಗಮ ನೋಟ

ಉತ್ತರ ಕರ್ನಾಟಕದ ಸಾಂಸ್ಕೃತಿಕ ಜಗತ್ತಿನಲ್ಲಿ ಇಂದಿಗೂ ಪ್ರಚಲಿತವಾಗಿರುವುದಷ್ಟೇ ಅಲ್ಲದೆ, ತಳಸಮಾಜದ ಜನಸಾಮಾನ್ಯರೊಡನೆ ಬೆರೆತುಹೋಗಿರುವ ಒಂದು ಕಲಾ ಪ್ರಕಾರವಾಗಿ ವೃತ್ತಿ ರಂಗಭೂಮಿ ತನ್ನ ಚಾರಿತ್ರಿಕ ಪರಂಪರೆಯನ್ನು ಉಳಿಸಿಕೊಂಡೇ ಬಂದಿದೆ. ಯಾವುದೇ ಸಮಾಜದಲ್ಲಾದರೂ, ಆಧುನಿಕತೆಯ ವ್ಯಾಪ್ತಿ ಹರವು ಮತ್ತು ಆಳದ ಹೊರತಾಗಿಯೂ, ಕಾಣಬಹುದಾದ ಒಂದು ಸಮಾನ ಅಂಶ ಎಂದರೆ ಅಲ್ಲಿ ಪಾರಂಪರಿಕವಾಗಿ, ಚಾರಿತ್ರಿಕವಾಗಿ ಬೇರುಬಿಟ್ಟಿರುವ ಕಲಾ ಪ್ರಕಾರಗಳು ಜೀವಂತವಾಗಿಯೇ ಇರುತ್ತವೆ. ಹಿಂಬದಿಗೆ ಸರಿದಿರುವ ಅಥವಾ ಭೌತಿಕವಾಗಿ ಶಿಥಿಲವಾಗುತ್ತಿರುವ ಸಾಧ್ಯತೆಗಳ ಹೊರತಾಗಿಯೂ, ಇದನ್ನು ಕಾಲಗರ್ಭದಲ್ಲಿ ಹುದುಗಿಹೋಗದಂತೆ ಕಾಪಾಡುವ ಕಲಾವಿದರು ಇದ್ದೇ ಇರುತ್ತಾರೆ. ಕರ್ನಾಟಕದ ಚರಿತ್ರೆಯಲ್ಲಿ ಅತ್ಯಂತ ವೈಭವದ ಪರಂಪರೆಯನ್ನು ಹೊಂದಿರುವ ವೃತ್ತಿ ರಂಗಭೂಮಿಗೂ ಇದು ಸಲ್ಲುವಂತಹುದು.

ಇದನ್ನೂ ಓದಿ: ಯಮುನಾ ನದಿ ಟ್ರಾಶ್‌ ಸ್ಕಿಮ್ಮರ್‌ ಮಷಿನ್‌: ಪ್ರಚಾರಕ್ಕಾಗಿ ಬಿಜೆಪಿ ಮಾಡಿದ ಶೋಕಿ

ಮಲ್ಲಿಕಾರ್ಜುನ ಕಡಕೋಳ ಅವರ ʼ ನಾಟಕ ಕರ್ನಾಟಕ ʼ (ಅಭಿವ್ಯಕ್ತಿ ಪ್ರಕಾಶನ-2024) ಕೃತಿಯು ಈ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಲು ಅಗತ್ಯವಾದ ಸಾಹಿತ್ಯಕ ಪರಿಕರಗಳನ್ನು ಕಲಾರಸಿಕರ, ರಂಗಪ್ರೇಮಿಗಳ ಮುಂದಿಡುತ್ತದೆ. ಹಾಗೆಯೆ ಕರ್ನಾಟಕದ ವೃತ್ತಿ ರಂಗಭೂಮಿಯ ಭವ್ಯ ಇತಿಹಾಸವನ್ನೂ, ಅದನ್ನು ಕಟ್ಟಿ ಬೆಳೆಸಿದ ಮಹಾನ್‌ ಕಲಾವಿದರನ್ನೂ ಹಾಗೂ ಈ ಕಲಾ ಪ್ರಕಾರದ ಕ್ಷೀಣಿಸುತ್ತಿರುವ ಪ್ರಭಾವ ಮತ್ತು ಕವಲು ಹಾದಿಯಲ್ಲಿ ಹೋಗುತ್ತಿರುವ ಮಾದರಿಗಳನ್ನೂ ಲೇಖಕರು ಪರಿಚಯಿಸುತ್ತಾರೆ. ವಿಭಿನ್ನ ಸನ್ನಿವೇಶಗಳಲ್ಲಿ ಬರೆದ ಸಾಂದರ್ಭಿಕ ಅಂಕಣಗಳ ಸಂಗ್ರಹವಾಗಿರುವುದರಿಂದ, ಈ ಕೃತಿಯಲ್ಲಿ ವೃತ್ತಿ ರಂಗಭೂಮಿಯ ಸಮಗ್ರ ಸ್ವರೂಪವನ್ನು ಗುರುತಿಸಲಾಗುವುದಿಲ್ಲವಾದರೂ, ತಮ್ಮ ಆಳವಾದ ಅನುಭವ ಮತ್ತು ಅಧ್ಯಯನವನ್ನು ಬಳಸಿಕೊಂಡು ಕಡಕೊಳ ಅವರು ಈ ಕಲಾ ಪ್ರಕಾರದ ಒಳ ಹೊರಗುಗಳನ್ನು, ಏಳು ಬೀಳುಗಳನ್ನು ಹಾಗು ಭವಿಷ್ಯದ ಹಾದಿಗಳನ್ನೂ ತೆರೆದಿಡುತ್ತಾರೆ.

ಕೃತಿಯ ಒಳಗಿನ ರಂಗದರ್ಶನ

ಕೃತಿಯ ಮುನ್ನುಡಿಯಲ್ಲಿ ಕೆ. ವೈ. ನಾರಾಯಣಸ್ವಾಮಿ ಅವರು ಸರಿಯಾಗಿಯೇ ಗುರುತಿಸಿರುವಂತೆ ಕಡಕೋಳ ಅವರು “ ಆಡಳಿತಶಾಹಿಯ ಅಸೂಕ್ಷ್ಮತೆಗಳನ್ನು, ವ್ಯವಸ್ಥೆಯ ಲೋಪಗಳನ್ನು ಕಟುವಾಗಿ ವಿಮರ್ಶಿಸುವುದೇ ಅಲ್ಲದೆ ಪರ್ಯಾಯವನ್ನೂ ಒದಗಿಸುತ್ತಾರೆ ”.(ಪುಟ VIII). ಯಾವುದೇ ಕಲಾವಿದನಿಗೆ ತಾನು ಪ್ರತಿನಿಧಿಸುವ ಅಥವಾ ತನ್ನನ್ನು ಒಳಗೊಂಡಿರುವ ಒಂದು ಕಲಾಪ್ರಕಾರವು ಎರಡು ರೀತಿಯ ಪ್ರಜ್ಞೆಯನ್ನು ರೂಢಿಸುತ್ತದೆ, ರೂಢಿಸಬೇಕು  ಸಹ. ಮೊದಲನೆಯದು ತನ್ನ ಪ್ರಾತಿನಿಧಿಕ ಸ್ಥಾನವನ್ನು ದಾಟಿ, ವಿಶಾಲ ದೃಷ್ಟಿಕೋನದ ನೆಲೆಯಲ್ಲಿ ಆ ಕ್ಷೇತ್ರದ ಒಳಸೂಕ್ಷ್ಮಗಳನ್ನು ಗ್ರಹಿಸುವುದು. ಎರಡನೆಯದು ಹೀಗೆ ಗ್ರಹಿಸುತ್ತಲೇ ತನ್ನ ಸ್ವಂತಿಕೆಯಿಂದ ದಾಟಿಹೋಗಿ, ಅಲ್ಲಿನ ಲೋಪದೋಷಗಳನ್ನು ಎತ್ತಿತೋರಿಸುತ್ತಾ, ಹೊಸದಿಕ್ಕು, ದಾರಿಯನ್ನು ಸೂಚಿಸುತ್ತಾ ಹೋಗುವುದು. ಈ ಎರಡೂ ಲಕ್ಷಣಗಳನ್ನು ಮಲ್ಲಿಕಾರ್ಜುನ ಕಡಕೊಳ ಅವರಲ್ಲಿ, ಈ ಪುಸ್ತಕದ ಮೂಲಕ ಕಾಣಬಹುದು.

26 ಲೇಖನಗಳ ಈ ಗುಚ್ಛದ ಆರಂಭದಲ್ಲೇ ಲೇಖಕರು ಕನ್ನಡ ವೃತ್ತಿ ರಂಗಭೂಮಿಯ ಉಗಮ ಮತ್ತು ಆರಂಭಿಕ ತಲ್ಲಣಗಳನ್ನು ದಾಖಲಿಸುವುದು ಇಡೀ ಪುಸ್ತಕದ ಓದನ್ನು ಸುಗಮಗೊಳಿಸುತ್ತದೆ. ಡಾ. ಎಚ್.‌ ಕೆ. ರಂಗನಾಥ್‌ ಅವರ ʼ ಕರ್ನಾಟಕ ರಂಗಭೂಮಿ ʼ ಕೃತಿಯನ್ನು ಮತ್ತೆ ಓದುವ ಹಾಗೆ ಮಾಡುವ ಮೊದಲ ಅಧ್ಯಾಯ ʼ ವೃತ್ತಿ ರಂಗಭೂಮಿ,,,,ʼ  ಚಾರಿತ್ರಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಕರ್ನಾಟಕದ ವೃತ್ತಿ ರಂಗಭೂಮಿ ಬೆಳೆದುಬಂದ ಹಾದಿಯನ್ನು ಪರಿಚಯಿಸುತ್ತಾರೆ. ಕೈಯ್ಯಲ್ಲಿ ಹಣಕಾಸು ಇಲ್ಲದೆ, ತಮ್ಮ ಕಲೆಯಿಂದ ದುಡಿದದ್ದನ್ನು ಅದಕ್ಕೇ ಧಾರೆ ಎರೆಯುವ ಮೂಲಕ ರಂಗಭೂಮಿಯನ್ನು ಕಟ್ಟಿ, ಬೆಳೆಸಿ, ಕೊನೆಯಲ್ಲಿ ಎಲ್ಲವನ್ನೂ ಕಳೆದುಕೊಂಡ ಒಂದು ದುರಂತ ಚರಿತ್ರೆಯೂ ನಮ್ಮ ಮುಂದಿದೆ. ಆದರೂ ಈ ಆತಂಕಗಳ ನಡುವೆಯೇ ವೃತ್ತಿ ರಂಗಭೂಮಿ, ರಾಜಾಶ್ರಯ ಮತ್ತು ಅದರಿಂದಾಚೆಗೂ ಬೆಳೆದ ಪರಿಯನ್ನು ಕಡಕೋಳ ಈ ಅಧ್ಯಾಯದಲ್ಲಿ ಪರಿಚಯಿಸುವುದು, ಇಂದಿನ-ಮುಂದಿನ ತಲೆಮಾರಿಗೆ ಅರಿವಿನ ಸೇತುವೆಯಾಗಬೇಕು.

ಆಂಗ್ಲದಲ್ಲಿ Logistics ಎಂದು ಹೇಳಲಾಗುವ ಅಗತ್ಯ ಪರಿಕರ, ಸಲಕರಣೆ, ಉಪಕರಣಗಳನ್ನು ಹೊಂದಿಸುವುದೇ ಒಂದು ಬೃಹತ್‌ ಸಾಹಸವಾಗಿದ್ದ ಕಾಲಘಟ್ಟದಲ್ಲೂ ತಮ್ಮ ನಾಟಕಗಳನ್ನು ಊರಿಂದ ಊರಿಗೆ ಕೊಂಡೊಯ್ದು, ನಾಟಕದ ಸ್ಥಾಯಿ ಭಾವಕ್ಕೆ ಕಿಂಚಿತ್ತೂ ಧಕ್ಕೆ ಉಂಟಾಗದ ರೀತಿಯಲ್ಲಿ, ತಳಸಮಾಜದ ದುಡಿಯುವ ಜೀವಗಳನ್ನು ರಂಜಿಸಿದ ವೃತ್ತಿ ರಂಗಭೂಮಿಯ ಕಲಾಸೇವೆಯನ್ನು ಕಡಕೋಳ ಆಪ್ತತೆಯಿಂದ ಗುರುತಿಸುತ್ತಾರೆ. ಗಂಗಾಧರರಾಯರು, ವರದಾಚಾರ್‌, ಗರುಡ ಸದಾಶಿವರಾಯರು, ಕೆ. ಹಿರಣ್ಣಯ್ಯ, ಪೀರ್‌ ಅಹಮದ್‌, ನಾಗರತ್ನಮ್ಮ, ಮಳವಳ್ಳಿ ಸುಂದರಮ್ಮ, ಗುಬ್ಬಿ ವೀರಣ್ಣ ಇವರ ಬದುಕಿನ ಹಾದಿಯನ್ನು ಓದಿ ತಿಳಿಯಬೇಕಾದ ಅವಶ್ಯಕತೆಯನ್ನು ಕಡಕೊಳ ಅವರ ಬರಹಗಳು ಒತ್ತಿಹೇಳುತ್ತವೆ.  ಅವರೇ ಹೇಳುವಂತೆ “ ವಿಜ್ಞಾನದ ಅವಿಷ್ಕಾರಗಳಿಲ್ಲದ ಆ ಕಾಲದೊಳಗೆ ರಂಗಮಂಟಪದಲ್ಲಿ ಜೀವಂತ ಸ್ವರ್ಗ ಸೃಷ್ಟಿಸಿದ ರಂಗಸಂಸ್ಕೃತಿಯ ನಿರ್ಮಾಪಕರು ”(ಪುಟ 11) ಕರ್ನಾಟಕದ ಹೆಮ್ಮೆ ಎನ್ನಬಹುದು.

ಅನುಭಾವಾತ್ಮಕ ಆವರಣದಲ್ಲಿ ನಿಂತು

ಸಾಮಾನ್ಯವಾಗಿ ವೃತ್ತಿ ರಂಗಭೂಮಿ ಎಂದಾಕ್ಷಣ, ದಕ್ಷಿಣ ಭಾಗದಲ್ಲಿರುವ ನಮ್ಮಂತಹ ರಂಗಪ್ರೇಮಿಗಳ ಮನಸ್ಸು ಉತ್ತರ ಕರ್ನಾಟಕದೆಡೆಗೆ ವಿಹರಿಸುತ್ತದೆ. ವೈಯುಕ್ತಿಕವಾಗಿ ಹೇಳುವುದಾದರೆ ಸುಮಾರು ಆರು ವರ್ಷದವನಾಗಿದ್ದಾಗ ಬೆಳಗಾವಿಯ ರಾಮದುರ್ಗದಲ್ಲಿ ಅಪ್ಪ-ಅಮ್ಮನೊಡನೆ ನಾಟಕ, ಬಯಲಾಟಗಳನ್ನು ನೋಡಿದ ನೆನಪು ಮಸುಕುಮಸುಕಾಗಿದೆ. ತದನಂತರ 1975-76ರಲ್ಲಿ ಕುಣಿಗಲ್‌ ಬಳಿ ಇರುವ ಸಣಬ ಗ್ರಾಮದಲ್ಲಿ ಕೆಲಕಾಲ ಇದ್ದಾಗ ಅಲ್ಲಿ ನೋಡಿದ ಅಹೋರಾತ್ರಿ ಪೌರಾಣಿಕ ನಾಟಕಗಳ ನೆನಪು ಹಸಿರಾಗಿಯೇ ಇದೆ. ವೃತ್ತಿ ರಂಗಭೂಮಿ ಉತ್ತರ ಕರ್ನಾಟಕದ ರಂಗ ಸಂಸ್ಕೃತಿಯ ಒಂದು ದೊಡ್ಡ ಕೊಡುಗೆಯೇ. ಇದನ್ನು ಪರಿಚಯಿಸುವ ಕಡಕೊಳ ಅವರು “ ನಾಂದಿಗೆ ಮುನ್ನ ,,,,” ಅಧ್ಯಾಯದಲ್ಲಿ ಬಳ್ಳಾರಿ ಜಿಲ್ಲೆಯ ರಂಗಸಂಸ್ಕೃತಿಯನ್ನು ಪರಿಚಯಿಸುವುದು ಸಕಾಲಿಕವಾಗಿದ್ದು, ಮುದ ನೀಡುತ್ತದೆ.

ಆಧುನಿಕ ತಲೆಮಾರು (ನಮಗೇನೂ ರಿಯಾಯಿತಿ ಕೊಟ್ಟುಕೊಳ್ಳುವ ಅವಶ್ಯಕತೆ ಇಲ್ಲ) ಕೇಳದೆ ಇರಬಹುದಾದ ರಂಗಕರ್ಮಿಗಳನ್ನು ಈ ಅಧ್ಯಾಯ ಪರಿಚಯಿಸುತ್ತದೆ. ಮನ್ಸೂರ್‌ ಭದ್ರಮ್ಮ, ಬಳ್ಳಾರಿ ರಾಘವ ಮತ್ತು ಬಹುಮುಖ್ಯವಾಗಿ ʼ ಕೋಗಳ್ಳಿ ಪಂಪಣ್ಣ ʼ ಈ ಮಹಾನುಭಾವರೆಲ್ಲರೂ ಪಟ್ಟ ಪರಿಶ್ರಮ ವರ್ತಮಾನದ ವೃತ್ತಿ ರಂಗಭೂಮಿಯ ಆಕರಗಳಷ್ಟೇ ಅಲ್ಲ, ಅಡಿಪಾಯವೂ ಹೌದು. ನಾಟಕ ಕಂಪನಿಗಳು ಮಾತ್ರವೇ ಈ ಪ್ರಕಾರವನ್ನು ಪ್ರತಿನಿಧಿಸುತ್ತವೆ ಎಂಬ ಅಪಕಲ್ಪನೆಯನ್ನು ಹೋಗಲಾಡಿಸುವ ಒಂದು ಪ್ರಯತ್ನವನ್ನು ಕಡಕೊಳ ಈ ಅಧ್ಯಾಯದಲ್ಲಿ ಮಾಡಿದ್ದಾರೆ. ಇದು ಅಗತ್ಯವಾಗಿ ಆಗಬೇಕಿತ್ತು. ಆಧುನಿಕ ಹವ್ಯಾಸಿ ರಂಗಭೂಮಿಯು ವೃತ್ತಿ ರಂಗಭೂಮಿಯನ್ನು ಸೀಮಿತಾರ್ಥಕ್ಕೆ ಒಳಪಡಿಸಿರುವುದನ್ನೂ, ವೃತ್ತಿ ರಂಗಭೂಮಿಯ ಉಪಾಸಕರು ಹವ್ಯಾಸಿ ಪ್ರಾಕಾರದ ಬಗ್ಗೆ ಶ್ರೇಷ್ಠತೆಯ ವ್ಯಸನ ಹೊಂದಿರುವುದನ್ನೂ ಕಡಕೊಳ ವಿಮರ್ಶಾತ್ಮಕ ನೆಲೆಯಲ್ಲಿ ಚರ್ಚಿಸುತ್ತಾರೆ.

ಸಮಕಾಲೀನ ರಂಗ ಪರಂಪರೆಯ ಹಾದಿಯಲ್ಲಿ ಹುಟ್ಟಿಕೊಂಡಿರುವ “ ನವ ವೃತ್ತಿ ರಂಗಭೂಮಿ ” ಎಂಬ ಪ್ರಾಕಾರದ ಒಳಸೂಕ್ಷ್ಮಗಳನ್ನು, ಸೀಮಿತ ಗ್ರಹಿಕೆಗಳನ್ನೂ ವಿಷದೀಕರಿಸುವ “ ನವ ವೃತ್ತಿ ರಂಗಭೂಮಿ,,,,,” ಅಧ್ಯಾಯ, ಎಲ್ಲ ರಂಗಕಲಾಸಕ್ತರಿಗೂ ಕಣ್ತೆರೆಸುವ ಒಂಧು ಬರಹವಾಗಿದೆ.  ಕಡಕೊಳ ಅವರು ಸರಿಯಾಗಿ ಗುರುತಿಸುವಂತೆ “ ವೃತ್ತಿ ರಂಗದ ಕಂಪನಿ ನಾಟಕಗಳ ಬೇರುಗಳು ಪ್ರಜಾಸತ್ತಾತ್ಮಕ ಬಲಾಢ್ಯತೆಯ ಮೇಲುಗೈ ಹೊಂದಿವೆ,,,,,,” ( ಪುಟ 21) ಇದು ಒಪ್ಪಲೇಬೇಕಾದ ಸತ್ಯ. ಏಕೆಂದರೆ ಡಿಜಿಟಲ್‌ ಯುಗದಲ್ಲೂ ನಾವು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗುರುತಿಸಬಹುದಾದರೆ ಅದು ತಳಸಮಾಜದಲ್ಲಿ ಮಾತ್ರವೇ ಸಾಧ್ಯ. ಅಲ್ಲಿ ಅಭಿವ್ಯಕ್ತಗೊಳ್ಳುವ ಅಥವಾ ಅಲ್ಲಿನ ಜನಜೀವನಗಳಿಗೆ ಸ್ಪಂದಿಸುವ ಪ್ರಯತ್ನಗಳೇ ನಿಜಾರ್ಥದಲ್ಲಿ ರಂಗಭೂಮಿಯ ಸಾರ್ಥಕತೆಯನ್ನೂ ಸೂಚಿಸುತ್ತದೆ.

“ಆಧುನಿಕವೆಂದು ಹೇಳಲಾದ ವೈಚಾರಿಕ ಪ್ರಯೋಗಶೀಲ ನಾಟಕಗಳು ಮಧ್ಯಮವರ್ಗದ ಬಹುಸಂಖ್ಯಾತರು, ಗ್ರಾಮೀಣರನ್ನು ತಲುಪಲೇ ಇಲ್ಲ ,,,,,” (ಪುಟ 20) ಎಂಬ ವಿಮರ್ಶಾತ್ಮಕ ನುಡಿಗಳು ರಂಗಪ್ರಜ್ಞೆಯನ್ನು ಬಡಿದೆಬ್ಬಿಸುತ್ತವೆ. ಇದರ ನಿರಾಕರಣೆ, ಅಲ್ಲಗಳೆಯುವಿಕೆಗಿಂತಲೂ, ಪರಾಮರ್ಶೆಗೊಡ್ಡುವುದು ವಿವೇಕಯುತ ಎನಿಸುತ್ತದೆ.

ಇತಿಹಾಸ –ವರ್ತಮಾನದ ಸಾಹಿತ್ಯಕ ಪರಿಚಯ

ವೃತ್ತಿ ರಂಗಭೂಮಿಯ ಪ್ರಶಸ್ತ ಭೂಮಿ ಎಂದೇ ಗುರುತಿಸಲ್ಪಟ್ಟಿರುವ ದಾವಣಗೆರೆಯ ರಂಗ ಚರಿತ್ರೆಯನ್ನು ದಾಖಲಿಸುವ “ ದಾವಣಗೆರೆಯೆಂಬ ರಂಗಸಂಸ್ಕೃತಿಯ ನಡುಸೀಮೆ ” ವೈಯುಕ್ತಿಕವಾಗಿ ನನ್ನನ್ನು ಅಲ್ಲಿಗೇ ಕೊಂಡೊಯ್ಯುತ್ತದೆ. (1984-88ರಲ್ಲಿ ಅಲ್ಲಿದ್ದ ಸಮಯದಲ್ಲಿ ಚಿಂದೋಡಿ ಲೀಲಾ ಅವರ ಕೆಲವು ನಾಟಕಗಳನ್ನು ನೋಡಿದ್ದೆ.) ವೃತ್ತಿ ರಂಗಭೂಮಿಯ ಪ್ರಾದೇಶಿಕ ಇತಿಹಾಸವನ್ನು ದಾಖಲಿಸುತ್ತಲೇ ಕಡಕೊಳ ಅವರು ಕರ್ನಾಟಕ ಕಂಡ ಮಹೋನ್ನತ ನಾಟಕಕಾರ ಕಂದಗಲ್ಲ ಹಣಮಂತರಾಯ ಅವರನ್ನು ಪರಿಚಯಿಸುವುದು ಇಡೀ ಪುಸ್ತಕಕ್ಕೆ ಚಿನ್ನದ ಗರಿಯನ್ನು ಹೊದ್ದಿಸಿದಂತಿದೆ. ಕನ್ನಡ ರಂಗಭೂಮಿಯ ಷೇಕ್ಷ್‌ಪಿಯರ್‌ ಎಂದೇ ಹೆಸರಾದ ಹಣಮಂತರಾಯ ಅವರ ಕೃತಿಗಳ ಸಮಗ್ರ ಅಧ್ಯಯನ, ಸಂಶೋಧನೆ ಇತ್ಯಾದಿಗಳು ಈವರೆಗೂ ಆಗದೆ ಇರುವುದು, ಕಡಕೊಳ ಅವರು ಹೇಳುವಂತೆ, ನಮ್ಮ ಸಾಂಸ್ಕೃತಿಕ ಹರವಿನ ಮಿತಿಯನ್ನು ಎತ್ತಿ ತೋರಿಸುತ್ತದೆ.

ಕಡಕೋಳ ಅವರ ಕೃತಿ ಗಮನಸೆಳೆಯಲು ಮತ್ತೊಂದು ಕಾರಣ ಬನಶಂಕರಿ ನಾಟಕಗಳ ಜಾತ್ರೆಯ ಒಂದು ವಿಹಂಗಮ ಚಿತ್ರಣ ( ಪುಟ  41-49). ಇಂದಿಗೂ ಆ ಪ್ರದೇಶದ ಗ್ರಾಮೀಣರನ್ನು ಆಯಸ್ಕಾಂತದಂತೆ ಆಕರ್ಷಿಸುವ ನಾಟಕಗಳ ವೈಭವಯುತ ಯುಗವನ್ನು ಬಣ್ಣಿಸುತ್ತಲೇ ಕಡಕೊಳ ಅವರು ವರ್ತಮಾನದಲ್ಲಿ ನಿಂತಾಗ ಕಟು ವಿಮರ್ಶಕರಾಗಿ ಕಾಣುತ್ತಾರೆ. ಆಧುನಿಕತೆಯ ಧನದಾಹಿ ಪ್ರವೃತ್ತಿ, ಮಾರುಕಟ್ಟೆ ಆರ್ಥಿಕತೆಯ ಲಾಭದಾಹಿ ಧೋರಣೆ ಮತ್ತು ನಾಟಕಗಳನ್ನೂ ʼಮತ್ತೊಂದು ಮನರಂಜನೆʼಯನ್ನಾಗಿ ರೂಪಾಂತರಗೊಳಿಸುವ ಒಂದು ವ್ಯವಸ್ಥಿತ ಸಾಂಸ್ಥಿಕ ಪ್ರಯತ್ನಗಳತ್ತ ಕಡಕೊಳ ಗಮನ ಸೆಳೆಯುತ್ತಾರೆ. ಆಧುನಿಕತೆ ಪ್ರವೇಶಿಸಿದೆಡೆಯೆಲ್ಲಾ ಈ ಅಪಾಯಗಳು ಇದ್ದೇ ಇರುತ್ತವೆ. ವರ್ತಮಾನದ ಮಾರುಕಟ್ಟೆ-ಗ್ರಾಹಕ ಸಂಸ್ಕೃತಿ ಇದನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಒಬ್ಬ ರಂಗಕರ್ಮಿಯಾಗಿ ಕಡಕೊಳ ಇಲ್ಲಿ ವಸ್ತುನಿಷ್ಠ ಅಭಿಪ್ರಾಯಗಳನ್ನು ದಾಖಲಿಸಿರುವುದು ಸ್ವಾಗತಾರ್ಹ.

ಹಾಲಿ ವೃತ್ತಿ ರಂಗಾಯಣದ ನಿರ್ದೇಶಕರಾಗಿ, ಮಲ್ಲಿಕಾರ್ಜುನ ಕಡಕೊಳ ಅವರು ವೃತ್ತಿ ರಂಗಭೂಮಿಯ ವರ್ತಮಾನದ ಬಿಕ್ಕಟ್ಟುಗಳನ್ನೂ ಎರಡು ಅಧ್ಯಾಯಗಳಲ್ಲಿ ಚರ್ಚಿಸುತ್ತಾರೆ (ಪುಟ 85-98).ಆಡಳಿತಾತ್ಮಕವಾಗಿ ಈ ಅಧ್ಯಾಯದಲ್ಲಿ ನೀಡಲಾಗಿರುವ ಸಲಹೆ ಸೂಚನೆಗಳನ್ನು ಅನುಷ್ಠಾನಗೊಳಿಸುವುದು ರಾಜ್ಯ ಸರ್ಕಾರದ-ಸಂಸ್ಕೃತಿ ಇಲಾಖೆಯ ಗುರುತರ ಜವಾಬ್ದಾರಿ ಎಂಬುದನ್ನು ಮನಗಾಣಬೇಕಿದೆ. ಹಾಗೆಯೇ “ ಸಮಗ್ರ ರಂಗಭೂಮಿ ವರ್ತಮಾನದ ಸವಾಲುಗಳು ”ಅಧ್ಯಾಯದಲ್ಲಿ  ತಾವೇ ಎದುರಿಸಿದ ಕೆಲವು ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಕಡಕೊಳ ಅವರು ಸಕಾರಾತ್ಮಕ ಪರಿಹಾರೋಪಾಯಗಳನ್ನ ಸೂಚಿಸುತ್ತಾರೆ. ಇವೆಲ್ಲವೂ ಸಹ ಗಂಭೀರವಾಗಿ ಆಲೋಚನೆಗೆ ಹಚ್ಚುವ ಅಭಿವ್ಯಕ್ತಿಗಳಾಗಿದ್ದು, ಕನ್ನಡ ಸಾಂಸ್ಕೃತಿಕ ಲೋಕ ಇದನ್ನು ಗಮನಿಸಬೇಕಿದೆ.

ಬಿಕ್ಕಟ್ಟು ಪರಿಹಾರಗಳ ನಡುವೆ

ಉಳಿದಂತೆ ಕರ್ನಾಟಕದ ಸಾಂಸ್ಕೃತಿಕ ಲೋಕ ಎದುರಿಸುತ್ತಿರುವ ವರ್ತಮಾನದ ರಾಜಕೀಯ ನಿರ್ಲಿಪ್ತತೆ, ಆರ್ಥಿಕ ಮುಗ್ಗಟ್ಟುಗಳು ಮತ್ತು ಆಡಳಿತಾತ್ಮಕ ಸಮಸ್ಯೆಗಳನ್ನು ಕೆಲವು ಅಧ್ಯಾಯಗಳಲ್ಲಿ ಕಡಕೋಳ ಚರ್ಚಿಸುತ್ತಾರೆ. ಹೊಸ ಸರ್ಕಾರದ ಸಾಂಸ್ಕೃತಿಕ ನೀತಿ, ಕಲಬುರ್ಗಿ ರಂಗಾಯಣ ಒಂದು ಹಂತದಲ್ಲಿ ಎದುರಿಸಿದ್ದ ಅವನತಿ, ರಂಗಪ್ರಪಂಚದಲ್ಲೂ ಕುಸಿಯುತ್ತಿರುವ ಮೌಲ್ಯಗಳು, ಮೈಸೂರು ರಂಗಾಯಣ ಕಂಡಂತಹ ́ʼಅಡ್ಡಂಡʼ ರಂಪಾಯಣಗಳು, ಇವುಗಳನ್ನೂ ಕಡಕೊಳ ವಿಮರ್ಶಾತ್ಮಕವಾಗಿಯೇ ವಿಶ್ಲೇಷಿಸುತ್ತಾರೆ. ಈ ಬರಹಗಳಲ್ಲಿ ಅವರ ರಂಗಪ್ರೀತಿ ಮತ್ತು ಕಲಾಬದ್ಧತೆ ಸ್ಪಷ್ಟವಾಗಿ ಗೋಚರಿಸುತ್ತದೆ. ಕರ್ನಾಟಕದ ರಾಜಕಾರಣವು ಬೆಳೆಸಿಕೊಂಡಿರುವ ಬಿರುದು-ಸಮ್ಮಾನ-ಪ್ರಶಸ್ತಿಗಳ ಒಂದು ಸಂಸ್ಕೃತಿ ಕ್ರಮೇಣ ಅಧಿಕಾರ ಕೇಂದ್ರಗಳ ಸುತ್ತಲಿನ ಪರದೆಗಳಂತೆ ರೂಪುಗೊಳ್ಳುತ್ತಿರುವ ಹೊತ್ತಿನಲ್ಲಿ, ಈ ಬೆಳವಣಿಗೆಗಳ ವಿರುದ್ಧ ತಮ್ಮ ಪ್ರತಿರೋಧ ದಾಖಲಿವುದನ್ನೂ ಕಡಕೊಳ ಮರೆತಿಲ್ಲ.

ಸಮಾಧಾನಕರ ಅಂಶವೆಂದರೆ ಇದರ ಸಾಂಸ್ಕೃತಿಕ ಪ್ರಾಕಾರಗಳಲ್ಲಿದ್ದಂತೆ, ರಂಗಭೂಮಿ ಎನ್ನುವುದು ʼ ಪ್ರಶಸ್ತಿ-ಬಿರುದು-ಸಮ್ಮಾನಗಳ ʼ ಬೆನ್ನಟ್ಟಿ ಹೋಗುವ ಪರಂಪರೆಯಿಂದ ಬಹುಪಾಲು ದೂರ ಇದೆ. ಕರ್ನಾಟಕದ ಹವ್ಯಾಸಿ ರಂಗಭೂಮಿಯಲ್ಲಿ ಇದಕ್ಕೆ ಅಪವಾದಗಳನ್ನು ಗುರುತಿಸಬಹುದಾದರೂ, ವಿಶಾಲ ನೆಲೆಯಲ್ಲಿ ನೋಡಿದಾಗ, ರಂಗತಂಡಗಳು ತಮ್ಮ ವೃತ್ತಿ ಧರ್ಮ, ರಂಗನಿಷ್ಠೆ ಮತ್ತು ಕಲಾ ಶ್ರದ್ಧೆಯನ್ನು ಉಳಿಸಿಕೊಂಡು ಬಂದಿರುವುದು ಹೆಮ್ಮೆಯ ವಿಚಾರವೂ ಹೌದು. ಆದರೂ ಕೊಂಚ ಎಚ್ಚರ ತಪ್ಪಿದರೂ ವಿಕಸಿತ ಭಾರತದ ಕಾರ್ಪೋರೇಟ್‌ ಮಾರುಕಟ್ಟೆ ಮತ್ತು ಅದು ಪೋಷಿಸುತ್ತಿರುವ ಬಹುಸಂಖ್ಯಾವಾದದ ಪರಿಕಲ್ಪನೆಗಳು, ಈ ಚರಿತ್ರೆಯನ್ನು ಆಪೋಷನ ತೆಗೆದುಕೊಳ್ಳುವ ಸಾಧ್ಯತೆಗಳಿವೆ. ಇದರ ಒಂದೆರಡು ರಿಹರ್ಸಲ್‌ಗಳನ್ನು ನಾವಾಗಲೇ ಕಂಡಿದ್ದೇವೆ.

ಈ ದೃಷ್ಟಿಯಿಂದ ನೋಡಿದಾಗ ಗೆಳೆಯ ಮಲ್ಲಿಕಾರ್ಜುನ ಕಡಕೋಳ ಅವರ “ ನಾಟಕ ಕರ್ನಾಟಕ ” ಚಿಕ್ಕ ಕೃತಿ ಆದರೂ , ಇತಿಹಾಸ, ವರ್ತಮಾನ ಮತ್ತು ಭವಿಷ್ಯದ ಒಳನೋಟಗಳನ್ನು, ರಂಗಬಯಲಿಯ ಒಳಸೂಕ್ಷ್ಮಗಳನ್ನು ಓದುಗರ ಮುಂದಿಡುತ್ತದೆ. ಪುಸ್ತಕದ ಸಾರ್ಥಕತೆಯೂ ಇದರಲ್ಲೇ ಅಡಗಿದೆ. ಆಯಾ ಕಾಲಕ್ಕೆ ಬರೆದ ಅಂಕಣ ಬರಹಗಳಾಗಿರುವುದರಿಂದ ಸಹಜವಾಗಿ ಪುನರಾವರ್ತನೆ ಕಾಣುತ್ತದೆಯಾದರೂ ಅದೇನೂ ಪುಸ್ತಕದ ಸಮಗ್ರ ಓದಿಗೆ ಅಡ್ಡಿಯಾಗುವುದಿಲ್ಲ. ತಮ್ಮ ಈ ಕೃತಿಯ ಮೂಲಕವೇ ತಮ್ಮೊಳಗಿನ ರಂಗಪ್ರೇಮಿಯನ್ನು ಓದುಗರ ಮುಂದಿರಿಸಿರುವ ಮಲ್ಲಿಕಾರ್ಜುನ ಕಡಕೋಳ, ಈಗ ನಿರ್ದೇಶಿಸುತ್ತಿರುವ ʼ ವೃತ್ತಿ ರಂಗಭೂಮಿ ರಂಗಾಯಣ ʼಕ್ಕೆ ಹೊಸ ಸ್ಪರ್ಶ ನೀಡುವ ಮೂಲಕ, ವೃತ್ತಿ ರಂಗಭೂಮಿಯ ಭವ್ಯ ಪರಂಪರೆಯನ್ನು ಮರುಸ್ಥಾಪಿಸುತ್ತಾರೆ ಎಂಬ ಭರವಸೆಯನ್ನಂತೂ ಈ ಕೃತಿ ಮೂಡಿಸುತ್ತದೆ.

ಈ ದೃಷ್ಟಿಯಿಂದ “ನಾಟಕ ಕರ್ನಾಟಕ” ಚಾರಿತ್ರಿಕವಾಗಿ ದಾಖಲಾಗುವ ಒಂದು ಕೃತಿಯಾಗಿ ಕಾಣುತ್ತದೆ. ಇದರೊಳಗಿನ ಸೂಕ್ಷ್ಮಾತಿ ಸೂಕ್ಷ್ಮ ಅಭಿವ್ಯಕ್ತಿಗಳನ್ನು ಸಾಕಾರಗೊಳಿಸುವ ಜವಾಬ್ದಾರಿ ಎಲ್ಲ ರಂಗಪ್ರೇಮಿಗಳ, ರಂಗಾಸಕ್ತರ, ರಂಗಕರ್ಮಿಗಳ ಮೇಲೂ ಇದೆ. ಈ ದೃಷ್ಟಿಯಿಂದಾದರೂ ಕನ್ನಡ ರಂಗಾಸಕ್ತರು, ಯುವಸಮುದಾಯವು ಇದನ್ನು ಓದಲೇಬೇಕಿದೆ.  ಇದಕ್ಕೆ ಅಡಿಪಾಯ ಹಾಕಿರುವ ಮಲ್ಲಿಕಾರ್ಜುನ ಕಡಕೋಳ ಅಭಿನಂದನಾರ್ಹರು.

ಇದನ್ನೂ ನೋಡಿ: ತನುವಿನೊಳಗೆ ಅನುದಿನವಿದ್ದುJanashakthi Media

Donate Janashakthi Media

Leave a Reply

Your email address will not be published. Required fields are marked *