-ಯಮುನಾ ಗಾಂವ್ಕರ್
ತನ್ನ ಇರುವಿಕೆಗೆ ಆ ಮೂಲಕ ಜಗದ ಅರಿವಿಗೆ ಕಾರಣರಾದ ತಂದೆ ಜಹೊನಾ, ತಾನೂ ಕೂಡ ಅವರ ಬದುಕು – ಬಾಳುವೆಯ ಒಂದು ಅಧ್ಯಾಯವಾಗಿ ಇರುವ ಕವಿ ಜ ನಾ ತೇಜಶ್ರೀ ಮತ್ತು ಅವರ ‘ಕ್ಯಾಪ್ಟನ್ ಕವಿತೆಗಳು’ ಕಳೆದುಕೊಂಡ ಅಪ್ಪನ ಕುರಿತು ಕಾವ್ಯಾತ್ಮಕವಾಗಿ ನಿವೇದಿಸಿಕೊಳ್ಳುವ ಆಳ ಅಭಿವ್ಯಕ್ತಿಯಾಗಿವೆ. ‘ಕ್ಯಾಪ್ಟನ್ ಕವಿತೆ’ ಇದನ್ನು ಓದುವ ಸಂದರ್ಭ ತಾನೇತಾನಾಗಿ ಒದಗಿಬಂತು. ಓದಿ ಮುಗಿದಾಗ ಕಣ್ಣೀರು ಕಾರಣ ಕಣ್ಣಂಚುಗಳು ಬಳಲಿದ್ದವು.
ಕವಿ ತನ್ನ ಜೀವ ಪ್ರೀತಿಯ ತಂದೆಯನ್ನು ಕಳೆದುಕೊಂಡಾಗಿನ ಭಾವಕೋಶದ ತುಮುಲದ ಗುಚ್ಛ ಈ ಸಂಕಲನ. ಈ ಸಾವು ಕೇವಲ ಒಂದು ಸಾವಾಗಿರಲಿಲ್ಲ. ಅದು ಜೀವಭಾವ ಬೆಸೆದ ಹೊಕ್ಕಳು ಬಳ್ಳಿಯ ಬುಡವಾಗಿತ್ತು. ಹಾಗಾಗಿ ಈ ಸಾವು ಅಚ್ಚರಿಯನ್ನೂ ಜೀವಮಾನವಿಡೀ ದುಗುಡವನ್ನೂ ಬಿಟ್ಟುಹೋಗಿದೆ. ಆ ದುಗುಡ ಸಮಸಮಾಜ ಬಯಸುವ ಎಲ್ಲರ ದುಗುಡವಾಗಿದೆ. ಹಾಗಾಗಿ ನಾನು ಅರ್ಥೈಸಿಕೊಂಡು ಅನುಭವಿಸಿದ ಸಾರಾಂಶವನ್ನು ಹಂಚಿಕೊಳ್ಳುತ್ತಿರುವೆ. ಕ್ಯಾಪ್ಟನ್
ಇದನ್ನೂ ಓದಿ: ನೇರಳೆ ಕೀಳಲು ಹೋದ ವಿಧ್ಯಾರ್ಥಿ ವಿದ್ಯುತ್ ಶಾಕ್ ತಗುಲಿ ಸಾವು
ಇದು ಸಂಕಲನದ ಪರಿಚಯವಾಗಲಿ, ವಿಮರ್ಶೆಯಾಗಲಿ ಅಲ್ಲ. ಏಕೆಂದರೆ ಒಂದು ಮಹತ್ವದ ಪರಮಾಪ್ತರ ಸಾವಿನ ನಂತರದಲ್ಲಿ ಬರೆದ ಅಭಿವ್ಯಕ್ತಿಗೆ ನನ್ನ ಗೌರವ ಇದು. ನನ್ನ ಓದಿನ ಮಿತಿಯಲ್ಲಿ ಆಪ್ತವಾಗಿ ಗ್ರಹಿಸಿದ ಸಾರವಿದು. ತೇಜಶ್ರೀಯವರದ್ದೇ ಸಾಲುಗಳ ಮಧ್ಯೆ ಹಾದು ನನ್ನದೆಂಬುದು ಏನನ್ನೂ ಸೇರಿಸದೇ ಬರೆದಿದ್ದೇನೆಂದುಕೊAಡಿದ್ದೇನೆ.
‘ಈಗ ನಿಜವಾಗಿ ಅನಿಸುತ್ತಿದೆ ಅಪ್ಪ ದೊಡ್ಡವ ಅಂತ’ ಎಂದು ತಂದೆಯ ಸಾವಿನ ಕೆಲವು ವರ್ಷ ಮುಂಚೆಯೇ ಬರೆದ ‘ಅಪ್ಪ’ ಕವನದೊಂದಿಗೆ ಆರಂಭವಾಗಿ ಅಪ್ಪನ ಪ್ರೀತಿ ಗಾಂಧಿಯ ವೈಶಾಲ್ಯದೆದುರಿಟ್ಟು ಒಪ್ಪಿ ಅರ್ಪಿಸಿದರು ‘ಗಾಂಧಿ ಫೋಟೋ ಅಲ್ಬಂ’ ಶೀರ್ಷಿಕೆಯ ಕವನದಲ್ಲಿ. ಅದೇ ಅಪ್ಪ ಚರಿತ್ರೆಯ ಮೆಕ್ಕಲು ಮಣ್ಣು ಹುಗಿದು ಮಣ್ಣಿಗೆ ಮಣ್ಣು ಕಸಿ ಮಾಡಿ ಬೆಳೆಸಿದ್ದು ಕೂಡ ಇವರನ್ನೇ. ಸದಾ ನೋಯುವ ಎದೆಯಲ್ಲಿ ಪ್ರೀತಿಯ ಸಸಿ ನೆಟ್ಟು ಫಲ ಬರುವಂತೆ ಮಾಡಿದ್ದು ಕೂಡ ಕ್ಯಾಪ್ಟನ್ ಎಂದು ನನಗೆ ಅನಿಸಿತು.
‘ಇವನ ಕನಸಿನ ಮೊಟ್ಟೆಯೊಳಗೆ’ ಜೀವ ಭರಿಸುತ್ತಿರುವವರು ಈ ಕವಿ ಮಾತ್ರವಲ್ಲ, ನಮ್ಮಂತವರೆಲ್ಲರೂ ಎಂದು ಅನಿಸದೇ ಇರಲಾರದು. ಅದಕ್ಕಾಗಿಯೇ ಅವರು ತಕ್ಷಣ ಸಾವಿಗೆ ಸವಾಲಿನ ರೂಪದ ಬೇಡಿಕೆ ಅಥವಾ ಆಗ್ರಹ ಮಾಡುತ್ತಾರೆ “ಆ ನನ್ನ ತಂದೆಗೆ ಒಂದೇ ಒಂದು ಅವಕಾಶ ನೀಡಬೇಕಿತ್ತು ನೀನು ಓ ಸಾವೇ’ ಎಂದು ಹೀಗೆ ಹೇಳುತ್ತಲೇ ನಿತ್ರಾಣರಾದವರಂತೆ ಕಂಡರೂ ತಂದೆ ತನ್ನ ಕೈಜಾರಿ ಹೋಗುತ್ತಿದ್ದುದನ್ನು ಗಮನಿಸುತ್ತಲೇ ಸಾವಿಗೆ ಶರಣಾಗತಿ ಸೂಚಿಸದೇ ‘ಕತ್ತೆತ್ತಿ ಎದೆ ಚಾಚಿ ನಡೆದ ಅವನು ಮುಳುಗುವ ಸೂರ್ಯನ ಕಡೆಗೆ’ ಹೇಳುವ ಮೂಲಕ ಅತ್ತ ಅಪ್ಪ ಸಾವಿನೆಡೆಗೆ ಧಾವಿಸುವಾಗಿನ ಧೈರ್ಯವನ್ನು ಅವರಿಗಿರುವ ಸ್ಪಷ್ಟತೆಯನ್ನು ಹೇಳುತ್ತಾರೆ.
ಸಾವಿನ ನೆಪದಲ್ಲಿ ಅಪ್ಪನ ಕುರಿತ ಬಣ್ಣನೆ, ನಿರಂತರ ಅನುಸಂಧಾನ ನಡೆಯುತ್ತದೆ ಈ ಎಲ್ಲಾ ಕವನಗಳಲ್ಲಿ. ಹಾಗಾಗಿ ಶೀರ್ಷಿಕೆಗಳಿಲ್ಲದಿರುವುದು ಒಳ್ಳೆಯದೇ ಆಯಿತು. ಮಾತ್ರವಲ್ಲ, ಯಾವುದೋ ಊಹಾತ್ಮಕ ಉಪಮೆಯ ಕೃತಕತೆಯನ್ನು ಮೀರಿ ತನ್ನ ಸುತ್ತಲಿನಿಂದಲೇ ಆಯ್ದು ಬಳಸಿದ ಉಪಮೆಗಳು ಆಪ್ತವಾದವು.
ಅಪ್ಪನ ಕಣ್ಣಲ್ಲಿ ಮೂಡುತ್ತಿದ್ದ ‘ಅದೇ ಸೂರ್ಯರನು’ ನೋಡುತ್ತ ಬೆಳೆದುದರಿಂದಲೇ ಕವಿಗೆ ಅದೇ ಆಪ್ತತೆ, ಆತಿಥ್ಯಭಾವ, ಪುರೋಗಮನ ಮನೋಭಾವ ಮೇಳೈಸಿತು ಅನಿಸುತ್ತದೆ. ಇಲ್ಲಿ ‘ಅದೇ ಸೂರ್ಯರು’ ಎಂದರೆ, ತಂದೆಯವರ ಪ್ರಖರ ವೈಚಾರಿಕತೆಗೆ ಬೆಳಕುಕೊಟ್ಟ ಪೂರ್ವಸೂರಿಗಳು ಅಲ್ಲದೇ ಮತ್ತಾರು ಇರಲು ಸಾಧ್ಯ? ಹಾಗಾಗಿ ಜಹೊನಾ ಅವರ ‘ಪರಿಪೂರ್ಣ ಕಲಾಕೃತಿ’ಯೇ ತೇಜಶ್ರೀ ಎಂದುಕೊಳ್ಳುವೆ. ಅವರು ಕೊನೆಯ ಗಳಿಗೆಯಲ್ಲಿ “ಒಂದು ಬಟ್ಟಲು ಬಿಸಿಗಂಜಿ, ಮೂರು ಗುಟುಕು ನೀರು” ನೀಡಿದ್ದು, ತಂದೆಯ ಪ್ರೀತಿಯಲ್ಲಿ ಮಿಂದೆದ್ದುದು ತುಸು ಮನಸ್ಸಮಾಧಾನವಾದುದು ಕವನದ ಸಾಲುಗಳಲ್ಲಿ ಹೊಮ್ಮಿದೆ.
ಪ್ರೀತಿಯ ತಂದೆಯನ್ನು ಕಳಕೊಂಡ ನೋವಿನಲ್ಲೂ ಕವಿ ಸಾವಿಗೆ ಬೈಯುವವರಲ್ಲ! ಈ ಸಾಲು ನೋಡಿ “ದಿನೇದಿನೇ ಟೊಳ್ಳಾಗುವ ಮೂಳೆಯನು ಕೊಳಲು ಮಾಡಿಕೊಳ್ಳುತ್ತಿದೆ ಸಾವು” ಎನ್ನುತ್ತಾರೆ. ನನಗಿದು ವಿಸ್ಮಯವಾಗಿ ಕಂಡಿತು. ಆದರೆ ದೂರದಿಂದಲೇ ಕವಿಯನ್ನು ಗಮನಿಸಿದ ನನಗೆ ಕಂಡಿದ್ದೇನೆAದರೆ ಅವರದ್ದೇ ಸಾಲುಗಳಲ್ಲಿ ಬರೆಯಬೇಕೆಂದರೆ, ತಮ್ಮ ನೋವಿನಲ್ಲೂ ಕಹಿ ನೆನಪಿನ ದುಗುಡಗಳ ಮೈದಡವಿದರೆ ಖಂಡಿತ ಖುಷಿಯ ರೆಕ್ಕೆಗಳು ಮೂಡಿ ಹಕ್ಕಿಯಂತೆ ಹಾರುತ್ತವೆ.
ಕವನದಲ್ಲಿ ಅಲ್ಲಲ್ಲಿ ತುಸು ವೈರುದ್ಧ್ಯಗಳನ್ನೂ ಸಂದರ್ಭಾನುಸಾರ ಬಹು ಅರ್ಥಗಳನ್ನು ಗಮನಿಸಿದೆ. ಅದು ಸಹಜವೇ ಆಗಿ ಹೊಮ್ಮಿದೆ. ಒಂದನೆಯದು, ತೇಜಶ್ರೀ ಅವರ ಸ್ವಗತದಂತಿರುವ ‘ಈ ದೇಹ ದೇವರ ಮಹಾಕಾವ್ಯ’ ಇದ್ದಲ್ಲಿ ಈ ದೇಹ ಕ್ಯಾಪ್ಟನ್ ಅಪ್ಪ ಬರೆದ ಮಹಾಕಾವ್ಯ ಎಂದು ಸ್ವಲ್ಪ ತಿದ್ದಬೇಕೆನಿಸಿತು. ಏಕೆಂದರೆ “ಅಪ್ಪ ದೇವರ ನಂಬುತ್ತಿರಲಿಲ್ಲ.” (ಸರ್ವೇಸಾಮಾನ್ಯವಾಗಿ ಹೇಳಲಾಗುವ ದೇವರು ಎಂಬ ಪರಿಕಲ್ಪಮೆಯನ್ನು ಜಹೊನಾ ಒಪ್ಪುತ್ತಿರಲಿಲ್ಲ) ಎರಡನೆಯದು, ‘ಹೊಸ ಕಣ್ಣು ನೀಡಿದ ಆ ನಗು’.. .. ಇನ್ನೊಂದೆಡೆ ‘ಆ ಕಡೆಯ ನಗು ಸಾವಿಗೆ ಸ್ವಾಗತಿಸಿದಂತೆ’ ಭಾಸವಾಯಿತು.
ಕೊನೆಗೂ ಕವಿಗೆ ಪ್ರಶ್ನೆಗಳು ಉಳಿಯುತ್ತದೆ; ಕಾಡುತ್ತವೆ. ಅಷ್ಟು ಗಟ್ಟಿ ದೇಹ, ದೊಡ್ಡ ಮನಸ್ಸು ಸಾವಿನತ್ತ ಹೇಗೆ ಸಾಗಿತು? ಸಾವು ಹೇಗೆ ಘಟಿಸಿತು ಮತ್ತು ತುಸು ಕಾಯಬಾರದಾ ಓ ಸಾವೇ’ ನನಗೂ ಅನಿಸಿದ್ದು ಹೀಗೇನೇ. ‘ಇದೊಂದು ಬಿಡಿಸಲಾಗದ ಸತ್ಯ’ ಆದರು ಆಸೆ, ‘ಎಲ್ಲಾದರೂ ಅವಿತಿದ್ದು ಹೊರಗೆ ಬರಬಾರದಾ, ಕಾಣಿಸಬಾರದಾ’ ಅಂತ. ಅಸಾಧ್ಯವಾದರು ಸಹಜ ಹಂಬಲ. ಪ್ರಬುದ್ಧತೆಗೆ ಬಂದರೂ ತಂದೆಯ ಮುದ್ದು ಮಗಳು ಆಗಿರುವ ಈ ಕವಿಯ ಸವಾಲಿಗೆ ಸಾವು ಖಂಡಿತ ಚಡಪಡಿಸಿರಲೇಬೇಕು!
ಹೀಗೆ ‘ನೀನು ನನ್ನೆದೆಯ ಕವಿತೆಯಾಗಲು’ ಎಲ್ಲವೂ ಕಾರಣ. ಅಪ್ಪ, ಅಪ್ಪನ ವ್ಯಕ್ತಿತ್ವ, ಕವಿಯ ಹುಟ್ಟು, ಹಲವು ಸೂರ್ಯರನ್ನು ನೋಡುತ್ತಲೇ ಬೆಳೆದ ಪರಿ ಎಲ್ಲವೂ.. .. ಜೊತೆಗೆ ನೋವಿನ ಮೇಲೆ ಎಳೆದಿಟ್ಟುಕೊಂಡ ಕಾಣದ ಪರದೆ, ಅದರೊಳಗಡೆ ಕ್ಷಣವೂ ನಡೆಯುವ ಸೂಕ್ಷ್ಮ ಸಂಘರ್ಷ.
ಹೀಗೆ ಕ್ಯಾಪ್ಟನ್ ಬರೆದ ಮಹಾಕಾವ್ಯ ತೇಜಶ್ರೀ ಆದರೆ ಕಾಪ್ಟನ್ ಕವಿತೆಗಳು ಮಹಾಕಾವ್ಯದ ಒಂದು ಪ್ರಮುಖ ಅಧ್ಯಾಯವಾಗಿ ನನಗೆ ಕಾಣುತ್ತದೆ. ಅಪ್ಪನ ಕುರಿತ ಆಪ್ತ ಸ್ವಗತದಂತ ಸೂಕ್ಷ್ಮ ಕವನಗಳನ್ನು ಪ್ರಕಟಿಸಿ ನಮಗೂ ಚಿಂತನೆಗೆ ಹಚ್ಚಿದ ಜ ನಾ ತೇಜಶ್ರಿ ಯವರಿಗೆ, ಪ್ರಕಾಶಕರಿಗೆ ವಂದನೆಗಳು.
(ಮಾಹಿತಿಗೆ: ಪಲ್ಲವ ಪ್ರಕಾಶನ ಚನ್ನಪಟ್ಟಣ ಪ್ರಕಾಶಿಸಿರುವ ಚನ್ನಪಟ್ಟಣ ಸಿದ್ದಲಿಂಗಪ್ಪ ನೆನಪಿನ ಮಾಲೆಯ ಮೊದಲ ಪುಸ್ತಕ ಇದಾಗಿದೆ. ನಾಲ್ಕು ಭಾಗಗಳಿರುವ ಈ ಸಂಕಲನದಲ್ಲಿ ನಲವತ್ತಮೂರು ಕವನಗಳು ಇವೆ. ಬೆಲೆ ರೂ. 60)
ಇದನ್ನೂ ನೋಡಿ: ಆಡಳಿತ ನಡೆಸುವವರಿಗೆ ಸಂವಿಧಾನ ಶಿಕ್ಷಣದ ಅಗತ್ಯವಿದೆ’ – ಜಸ್ಟೀಸ್ ಎಚ್.ಎನ್. ನಾಗಮೋಹನ ದಾಸ್Janashakthi Media