ಒಪೆಕ್ ದೇಶಗಳ ತೈಲ ಉತ್ಪಾದನೆ ಕಡಿತ ಮತ್ತು ಹಣದುಬ್ಬರದ ವಿರುದ್ಧ ಬಂಡವಾಳಶಾಹಿಯ ಕಾದಾಟ

                                                                                                               ಪ್ರೊ. ಪ್ರಭಾತ್ ಪಟ್ನಾಯಕ್
                                                                                                                 ಅನು: ಕೆ.ಎಂ.ನಾಗರಾಜ್

ಪೆಟ್ರೋಲಿಯಂ ರಫ್ತುಮಾಡುವ ದೇಶಗಳು ಮತ್ತು ಇತರ 11 ತೈಲ ಉತ್ಪಾದಕ ದೇಶಗಳು ಒಟ್ಟಾಗಿ ಈಗ ತೈಲ ಉತ್ಪಾದನೆಯನ್ನು ದಿನಂಪತ್ರಿ 30ಲಕ್ಷ ಬ್ಯಾರೆಲ್‌ನಷ್ಟು ಕಡಿತಗೊಳಿಸಿವೆ. ಅದಕ್ಕೆ ಅವರು ನೀಡಿರುವ ಕಾರಣವೆಂದರೆ, ಆರ್ಥಿಕ ಹಿಂಜರಿತವು ತೈಲದ ಮೇಲಿನ ಬೇಡಿಕೆಯನ್ನು ಇಳಿಕೆ ಮಾಡುತ್ತದೆ ಎಂಬುದು. ನಿಜ, ಆರ್ಥಿಕ ಹಿಂಜರಿತವನ್ನು ಹೇರುವುದು ಹಣದುಬ್ಬರಕ್ಕೆ ಎದುರಾಗಿ ಬಂಡವಾಳಶಾಹಿಯ ಕಾದಾಟದ ಪ್ರಮುಖ ಅಂಶ. ಆದರೆ ಅದು ಇಡೀ ಬಂಡವಾಳಶಾಹಿ ವ್ಯವಸ್ಥೆಯ ಸ್ಥಿರತೆಗೆ ಗಂಭೀರ ಬೆದರಿಕೆಯನ್ನೊಡ್ಡುವ ಒಂದು ಸರಪಳಿ ಪ್ರತ್ತಿಕ್ರಿಯೆಯ ಪ್ರಾರಂಭಕ್ಕೂ ಕಾರಣವಾಗುತ್ತದೆ. ಸೌದಿ ಅರೇಬಿಯಾವು ಇನ್ನು ಮುಂದೆ ಅಮೆರಿಕದ ಬಾಲ ಹಿಡಿಯುವುದಿಲ್ಲ ಎಂಬ ಸೂಚನೆ ಒಪೆಕ್ ಕ್ರಮದಲ್ಲಿ ವ್ಯಕ್ತವಾಗಿದೆ. ಅತ್ತ ಎಲ್ಲ ಪ್ರಮುಖ ಯುರೋಪಿಯನ್ ದೇಶಗಳಲ್ಲೂ ಈಗ ಕಾರ್ಮಿಕರು ತಮ್ಮ ನಿಜವೇತನದಲ್ಲಿ ಕಡಿತ ಮತ್ತು ನಿರುದ್ಯೋಗದ ವಿರುದ್ಧ ಮುಷ್ಕರ-ಹೋರಾಟಗಳನ್ನು ನಡೆಸುತ್ತಿದ್ದಾರೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಇದುವರೆಗೆ ನವ ಉದಾರವಾದಿ ಬಂಡವಾಳಶಾಹಿ ವ್ಯವಸ್ಥೆಯ ಸ್ಥಿರತೆಗೆ ತಳಹದಿಯಾಗಿರುವ ಅಂಶಗಳೇ ಛಿದ್ರಗೊಳ್ಳುತ್ತಿರುವ ಸನ್ನಿವೇಶವನ್ನು ನಾವು ಕಾಣುತ್ತಿದ್ದೇವೆ.

ಯುದ್ಧಕಾಲವನ್ನು ಹೊರತುಪಡಿಸಿದರೆ, ಬಂಡವಾಳಶಾಹಿಯು ಆರ್ಥಿಕ ಹಿಂಜರಿತವನ್ನು ಉಂಟುಮಾಡುವ ಮೂಲಕ ಹಣದುಬ್ಬರವನ್ನು ನಿಯಂತ್ರಿಸಲು ಪ್ರಯತ್ನಿಸುತ್ತದೆ. ಬಂಡವಾಳಗಾರರ ಲಾಭಾಂಶವು ಅನಾಯಾಸವಾಗಿ ಮತ್ತು ವಿಪರೀತವಾಗಿ ಹೆಚ್ಚಿದ ಕಾರಣದಿಂದ ಹಣದುಬ್ಬರ ಉಂಟಾದಾಗಲೂ ಸಹ ಬಂಡವಾಳಶಾಹಿಯು ಅದೇ ಸೂತ್ರದ ಮೂಲಕ ಹಣದುಬ್ಬರವನ್ನು ನಿಯಂತ್ರಿಸಲು ಪ್ರಯತ್ನಿಸುತ್ತದೆ. ಆದರೆ, ಬಂಡವಾಳಗಾರರ ಲಾಭಾಂಶದ ಪಾಲು ತಗ್ಗುವ ಸಾಧ್ಯತೆಗಳು ಇಲ್ಲದುದರಿಂದ ಆರ್ಥಿಕ ಹಿಂಜರಿತದ ಮಾರ್ಗವಾಗಿ ಹಣದುಬ್ಬರವನ್ನು ನಿಯಂತ್ರಿಸುವ ಪ್ರಯತ್ನವು ಯಶಸ್ವಿಯಾಗದು. ಆರ್ಥಿಕ ಹಿಂಜರಿತ ಉಂಟುಮಾಡುವ ಕಾರ್ಯತಂತ್ರವನ್ನು ಅನುಸರಿಸಲಾಗುತ್ತದೆ, ಏಕೆಂದರೆ ಅದು ಪ್ರಾಥಮಿಕ ಸರಕುಗಳ ಮೇಲಿನ ಬೇಡಿಕೆಯನ್ನು ಇಳಿಕೆ ಮಾಡುತ್ತದೆ. ಆಗ ಬೆಲೆಗಳು ಇಳಿಯುತ್ತವೆ. ಹಾಗಾಗಿ ಇದು ಹಣದುಬ್ಬರವನ್ನು ತಗ್ಗಿಸಲು ಸಹಾಯ ಮಾಡುತ್ತದೆ. ಅಂತೆಯೇ ಆರ್ಥಿಕ ಹಿಂಜರಿತವು ನಿರುದ್ಯೋಗ ದರವನ್ನು ಹೆಚ್ಚಿಸುತ್ತದೆ ಮತ್ತು ಆ ಮೂಲಕ ದುಡಿಮೆಗಾರರ ಚೌಕಾಸಿ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಅಂದರೆ ಕಾರ್ಮಿಕರು ತಮ್ಮ ಜೀವನ ನಿರ್ವಹಣೆಯ ವೆಚ್ಚದಲ್ಲಾದ ಹೆಚ್ಚಳವನ್ನು ಸರಿದೂಗಿಸುವಷ್ಟು ಹೆಚ್ಚು ವೇತನವನ್ನು ಪಡೆಯುವುದಿಲ್ಲ. ಇದೂ ಸಹ ಹಣದುಬ್ಬರವನ್ನು ಇಳಿಕೆ ಮಾಡುವಲ್ಲಿ ಸಹಾಯ ಮಾಡುತ್ತದೆ.

ಒಂದು ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲಿ ಉತ್ಪಾದನೆಯಾಗುವ ಉತ್ಪತ್ತಿಗೆ ಮೂವರು ವಾರಸುದಾರರು – ಬಂಡವಾಳಶಾಹಿಗಳು, ಕಾರ್ಮಿಕರು ಮತ್ತು ಆಹಾರ ಮತ್ತು ಪ್ರಸ್ತುತ ಲಾಗುವಾಡುಗಳ ರೂಪದ ಪ್ರಾಥಮಿಕ ಸರಕುಗಳ ಪೂರೈಕೆದಾರರು – ಇದ್ದಾರೆ ಎಂದು ಭಾವಿಸಿಕೊಳ್ಳೋಣ. ಆಗ ಉತ್ಪಾದನೆಯ ಮೇಲೆ ಈ ಮೂರೂ ವಾರಸುದಾರರ ಒಟ್ಟು ದಾವೆಗಳು ಒಂದು ವೇಳೆ ಒಟ್ಟು ಉತ್ಪಾದನೆಗಿಂತಲೂ ಅಧಿಕವಾಗಿದ್ದ ಸಂದರ್ಭದಲ್ಲಿ ಹಣದುಬ್ಬರ ಉದ್ಭವಿಸುತ್ತದೆ ಎಂದು ಹೇಳಬಹುದು. ಆದ್ದರಿಂದ, ಬಂಡವಾಳಶಾಹಿ ವ್ಯವಸ್ಥೆಯ ಹಣದುಬ್ಬರ-ವಿರೋಧಿ ನೀತಿಯು ಆರ್ಥಿಕ ಹಿಂಜರಿತದ ಮೂಲಕ ಕಾರ್ಮಿಕರ ಮತ್ತು ಪ್ರಾಥಮಿಕ ಸರಕುಗಳ ಪೂರೈಕೆದಾರರ ಹಕ್ಕು ಕೇಳಿಕೆಗಳ ಭಾಗವನ್ನು ಅವರ ಚೌಕಾಸಿ ಸಾಮರ್ಥ್ಯವನ್ನು ಕಡಿಮೆ ಮಾಡುವ ಮೂಲಕ ತಗ್ಗಿಸುವ ಕ್ರಮಗಳನ್ನು ಒಳಗೊಂಡಿರುತ್ತದೆಯೇ ವಿನಃ, ಬಂಡವಾಳಗಾರರ ದಾವೆಯನ್ನು ಯಾವ ಕಾರಣಕ್ಕೂ ತಗ್ಗಿಸುವುದಿಲ್ಲ.

ಪ್ರಸ್ತುತ ಹಣದುಬ್ಬರದ ಬಲಿಪಶುಗಳು ಕಾರ್ಮಿಕರೇ ಎಂಬುದನ್ನು ಅಮೇರಿಕದ ಉದಾರವಾದಿ ಅರ್ಥಶಾಸ್ತ್ರಜ್ಞರೂ ಸಹ ಒಪ್ಪಿಕೊಳ್ಳುತ್ತಾರೆ. ಆದರೂ ಹಣದುಬ್ಬರವನ್ನು ನಿಯಂತ್ರಿಸುವ ಸಾಧನವಾಗಿ ಹಣ ವೇತನದ ಹೆಚ್ಚಳವನ್ನು ನಿಯಂತ್ರಿಸಬೇಕು (ಅಂದರೆ ಕಾರ್ಮಿಕರ ಮೇಲೆ ಬೆಲೆ ಏರಿಕೆಯ ಹೊರೆಯನ್ನು ಮತ್ತಷ್ಟು ಹೆಚ್ಚಿಸುವ ಕ್ರಮ) ಎಂಬ ಶಿಫಾರಸನ್ನು ಅವರು ಮಾಡುತ್ತಾರೆ ಎಂಬುದು ಗಮನಾರ್ಹವಾಗಿದೆ. ಇದು ಬಂಡವಾಳಶಾಹಿ ಸಮರ್ಥನೆಯ ತರ್ಕವೂ ಆಗಿರುವುದರಿಂದ ಮತ್ತು ಉದಾರವಾದಿ ಅರ್ಥಶಾಸ್ತ್ರಜ್ಞರ ದೃಷ್ಟಿಕೋನವು ಬಂಡವಾಳಶಾಹಿಗಷ್ಟೇ ಸೀಮಿತಗೊಂಡಿರುವುದರಿಂದ, ಹಣದುಬ್ಬರವನ್ನು ನಿಯಂತ್ರಿಸುವ ಬಂಡವಾಳಶಾಹಿಯ ಮಾರ್ಗವನ್ನೇ ಅವರು ಸಾಧ್ಯವಿರುವ ಏಕೈಕ ಮಾರ್ಗವೆಂದು ಹೇಳುತ್ತಾರೆ. ಹಣದುಬ್ಬರವನ್ನು ನಿಯಂತ್ರಿಸಬೇಕೆಂದು ಬಂಡವಾಳಶಾಹಿಗೆ ಪ್ರೇರಣೆ ಉಂಟಾಗುವುದು ಹಣದುಬ್ಬರದಿಂದ ಹಿಂಡಲ್ಪಡುತ್ತಿರುವ ಕಾರ್ಮಿಕರ ಮೇಲಿನ ಸಹಾನುಭೂತಿಯಿಂದಲ್ಲ (ಕಾರ್ಮಿಕರ ಮೇಲೆ ಕಿಂಚಿತ್ತಾದರೂ ಸಹಾನುಭೂತಿ ಇದ್ದಿದ್ದರೆ ಅವರಿಗೆ ನಷ್ಟವನ್ನುಂಟುಮಾಡಿ ಹಣದುಬ್ಬರವನ್ನು ನಿಯಂತ್ರಿಸುವ ಪ್ರಯತ್ನವನ್ನು ಬಂಡವಾಳಶಾಹಿಯು ಮಾಡುತ್ತಲೇ ಇರಲಿಲ್ಲ). ಹಣದುಬ್ಬರವು ಹಣಕಾಸು ಕುಳಗಳ ಆರ್ಥಿಕ ಹಿತಾಸಕ್ತಿಗಳನ್ನು ಹಾನಿಗೊಳಿಸುತ್ತದೆ ಮತ್ತು ಶ್ರೀಮಂತರು ಹೊಂದಿರುವ ಆಸ್ತಿ/ಸ್ವತ್ತುಗಳ ನಿಜ ಮೌಲ್ಯವನ್ನು ಇಳಿಕೆಮಾಡುತ್ತದೆ. ಆದ್ದರಿಂದ, ಈ ಅಂಶವೇ ಹಣದುಬ್ಬರವನ್ನು ನಿಯಂತ್ರಿಸುವ ಅವರ ಪ್ರಯತ್ನಗಳಿಗೆ ಪ್ರೇರಣೆಯಾಗುತ್ತದೆ.

ಬಂಡವಾಳಶಾಹಿಯ ಅಡಿಯಲ್ಲಿ ಯಾವ ಎರಡು ಗುಂಪುಗಳಿಗೆ ನಷ್ಟವನ್ನುಂಟುಮಾಡಿ ಹಣದುಬ್ಬರವನ್ನು ನಿಯಂತ್ರಿಸುವ ಪ್ರಯತ್ನಗಳನ್ನು ಮಾಡಲಾಗುತ್ತದೆ ಎಂಬುದನ್ನು ಈ ಮೇಲೆ ಉಲ್ಲೇಖಿಸಲಾಗಿದೆ. ಆದರೆ, ಈ ಎರಡು ಗುಂಪುಗಳಲ್ಲಿ ಯಾವುದೇ ಒಂದು ಗುಂಪು ತನ್ನ ಮೇಲೆ ಬೀಳುವ ಒತ್ತಡವನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾದರೆ, ಹಣದುಬ್ಬರವನ್ನು ನಿಯಂತ್ರಿಸಲು ವ್ಯವಸ್ಥೆಯು ಮತ್ತೊಂದು ಗುಂಪನ್ನು ಇನ್ನಷ್ಟು ತೀವ್ರವಾಗಿ ಹಿಂಡಬೇಕಾಗುತ್ತದೆ ಮತ್ತು ಹಾಗೆ ಮಾಡಲು ಇನ್ನೂ ತೀವ್ರ  ಸ್ವರೂಪದ ಆರ್ಥಿಕ ಹಿಂಜರಿತವನ್ನು ಹೇರಬೇಕಾಗುತ್ತದೆ. ಪ್ರಸ್ತುತದಲ್ಲಿ ಜರುಗುತ್ತಿರುವ ವಿದ್ಯಮಾನವು ಇದೇ ಎಂದು ತೋರುತ್ತದೆ.


ಅಮೆರಿಕನ್ ಒತ್ತಡವನ್ನೂ ಧಿಕ್ಕರಿಸಿ ತೈಲ ಉತ್ಪಾದನೆ ಕಡಿತ :

ಏಪ್ರಿಲ್ 2 ರಂದು, ರಷ್ಯಾ ಸೇರಿದಂತೆ 13 ಒಪೆಕ್(ಪೆಟ್ರೋಲಿಯಂ ರಫ್ತುಮಾಡುವ ದೇಶಗಳ ಸಂಘಟನೆ) ಸದಸ್ಯ ದೇಶಗಳು ಮತ್ತು ಇತರ 11 ತೈಲ ಉತ್ಪಾದಕ ದೇಶಗಳನ್ನು ಒಳಗೊಂಡ ಒಪೆಕ್+ ದೇಶಗಳು ಮೇ ತಿಂಗಳಿನಿAದ ಹಿಡಿದು ಈ ಕ್ಯಾಲೆಂಡರ್ ವರ್ಷದ ಅಂತ್ಯದವರೆಗೆ ದಿನಂಪ್ರತಿ ಒಂದು ಮಿಲಿಯನ್ ಬ್ಯಾರೆಲ್‌ಗಳಷ್ಟು ತೈಲ ಉತ್ಪಾದನೆಯನ್ನು ಕಡಿತಗೊಳಿಸಲು ನಿರ್ಧರಿಸಿದವು. ಈ ಕಡಿತವು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಒಪೆಕ್+ ದೇಶಗಳು ಘೋಷಿಸಿದ ದಿನಂಪ್ರತಿ ಎರಡು ಮಿಲಿಯನ್ ಬ್ಯಾರೆಲ್‌ಗಳ ಕಡಿತದ ಜೊತೆಗೆ ಸೇರಿಕೊಳ್ಳುತ್ತದೆ. ತೈಲ ಉತ್ಪಾದನೆಯಲ್ಲಿ ಕಡಿತವಾಗದಂತೆ ನೋಡಿಕೊಳ್ಳಲು ಅಮೆರಿಕಾ ಭಾರಿ ಲಾಬಿಯನ್ನೇ ನಡೆಸಿತು. ಕಡಿತವನ್ನು ತಪ್ಪಿಸುವ ಉದ್ದೇಶದಿಂದ ಯುಎಸ್ ಅಧ್ಯಕ್ಷ ಜೋ ಬೈಡನ್ ತಮ್ಮ ಹಲವಾರು ಕ್ಯಾಬಿನೆಟ್ ಮಂತ್ರಿಗಳನ್ನು ಒಪೆಕ್ ದೇಶಗಳ ನಾಯಕ ಮತ್ತು ಯುಎಸ್‌ನ ಆಪ್ತ ಮಿತ್ರನೂ ಆದ ಸೌದಿ ಅರೇಬಿಯಾಕ್ಕೆ ಕಳುಹಿಸಿದ್ದರು. ಅದು ಪ್ರಯೋಜನವಾಗಲಿಲ್ಲ. ಆದ್ದರಿಂದ ಸೌದಿ ಅರೇಬಿಯಾದ ಮನವೊಲಿಸಲು ಜೋ ಬೈಡನ್ ಸ್ವತಃ ಅಲ್ಲಿಗೆ ಭೇಟಿ ನೀಡಿದ್ದರು. ಈ ಕಸರತ್ತಿನಿಂದಲೂ ಪ್ರಯೋಜನವಾಗಲಿಲ್ಲ. ಈಗ ಜಾರಿಯಲ್ಲಿರುವ ಕಡಿತದ ವಿರುದ್ಧವೂ ಅಮೆರಿಕ ತೀವ್ರ ಒತ್ತಡ ಹೇರಿತ್ತು. ಅದೂ ಪ್ರಯೋಜನವಾಗಲಿಲ್ಲ. ಸಂಕ್ಷಿಪ್ತವಾಗಿ ಹೇಳುವುದಾದರೆ, ತೈಲ ಉತ್ಪಾದನೆಯಲ್ಲಿ ಆಗುತ್ತಿರುವ ಈ ಕಡಿತವು ಇಂದಿನ ದಿನಮಾನಗಳಲ್ಲಿ ಸಂಭವಿಸುತ್ತಿರುವ ಯುಎಸ್ ಪ್ರಾಬಲ್ಯದ ಕುಸಿತಕ್ಕೆ ಸಾಕ್ಷಿಯಾಗಿದೆ.

ಈಗ ಘೋಷಣೆಯಾಗಿರುವ ತೈಲ ಉತ್ಪಾದನೆಯ ಕಡಿತಕ್ಕೆ ಒಪೆಕ್ ನೀಡಿರುವ ಕಾರಣವೆಂದರೆ, ಆರ್ಥಿಕ ಹಿಂಜರಿತವು ತೈಲದ ಮೇಲಿನ ಬೇಡಿಕೆಯನ್ನು ಇಳಿಕೆ ಮಾಡುತ್ತದೆ ಎಂಬುದು. ವಿಷಯವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ತೈಲದ ಮೇಲಿನ ಬೇಡಿಕೆಯು ಇಳಿಕೆಯಾದಾಗ, ತೈಲದ ಬೆಲೆಯನ್ನು ಇಳಿಕೆ ಮಾಡುವುದರ ಬದಲು ಉತ್ಪಾದನೆಯನ್ನು ಕಡಿತಗೊಳಿಸುವ ಕ್ರಮವೇ ಉತ್ಪಾದಕರಿಗೆ ಉತ್ತಮ ಎಂದು ಅವರು ವಾದಿಸುತ್ತಾರೆ. ಅದನ್ನೇ ಅವರು ಜಾರಿಗೆ ತರುತ್ತಿದ್ದಾರೆ ಕೂಡ. ಅವರ ವಾದವನ್ನು ಈ ರೀತಿಯಲ್ಲಿ ಅರ್ಥಮಾಡಿಕೊಳ್ಳಬಹುದು: ಈಗಿರುವ ಬೆಲೆಗಳ ಮಟ್ಟದಲ್ಲಿ ಬೇಡಿಕೆಯು ಶೇ. 10ರಷ್ಟು ಇಳಿಕೆಯಾಗುತ್ತದೆ ಎಂದು ಭಾವಿಸೋಣ. ಉತ್ಪಾದನೆಯನ್ನು ಒಂದು ವೇಳೆ ಶೇ. 10ರಷ್ಟು ಕಡಿತಗೊಳಿಸಿದರೆ, ಆಗ ತೈಲದ ಬೆಲೆಯು ಬದಲಾಗದೆ ಉಳಿಯುತ್ತದೆ ಮತ್ತು ಅವರ ಒಟ್ಟು ಆದಾಯ ಮಾತ್ರ ಶೇ. 10ರಷ್ಟು ಕುಸಿದಿರುತ್ತದೆ. ಆದರೆ, ಅವರು ಒಂದು ವೇಳೆ ಉತ್ಪಾದನೆಯನ್ನು ಕಡಿತಗೊಳಿಸದೇ ಬೇಡಿಕೆ ಮತ್ತು ಪೂರೈಕೆಗಳು ಸಮತೋಲವನ್ನು ಸಾಧಿಸುವವರೆಗೂ ಬೆಲೆಯನ್ನು ಕುಸಿಯಲು ಬಿಟ್ಟರೆ, ಆಗ ತೈಲದ ಬೆಲೆ ಕುಸಿತವು ಶೇ. 10ಕ್ಕಿಂತಲೂ ಹೆಚ್ಚಿಗೆ ಇರುತ್ತದೆ. ಹಾಗಾಗಿ, ಅವರ ಆದಾಯವು ಶೇ. 10ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಕುಸಿದಿರುತ್ತದೆ. ಹೀಗಾಗುತ್ತದೆ ಏಕೆಂದರೆ ತೈಲದ ಮೇಲಿನ ಬೇಡಿಕೆಯು ಬೆಲೆ-ಸ್ಥಿತಿಸ್ಥಾಪಕ(ಅಂದರೆ ಪರಿಸ್ಥಿತಿ ಬದಲಾದಾಗ ಬೆಲೆಗಳು ಹಿಂದಿನ ಅದೇ ಮಟ್ಟಕ್ಕೆ ಮರಳುವ) ಗುಣ ಹೊಂದಿಲ್ಲ (ವಾಸ್ತವವಾಗಿ ಇದು ಬೇಡಿಕೆಯ ಬೆಲೆ- ಸ್ಥಿತಿಸ್ಥಾಪಕತ್ವದ ಅರ್ಥವೂ ಹೌದು). ಪ್ರಾಸಂಗಿಕವಾಗಿ ಹೇಳುವುದಾದರೆ, ತೈಲ ಬೇಡಿಕೆಯ ಈ ಬೆಲೆ-ಸ್ಥಿತಿಸ್ಥಾಪಕವಲ್ಲದ ಗುಣದಿಂದಾಗಿಯೇ ತೈಲ ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಲಾಭಾಂಶವನ್ನು ಹೆಚ್ಚಿಸಿಕೊಳ್ಳುತ್ತವೆ. ಹಾಗಾಗಿ, ಅವರು ತೊಂದರೆಗಳಿಗೆ ಸಿಕ್ಕಿಕೊಳ್ಳದೆ ಪಾರಾಗಬಹುದು ಎಂದು ಭಾವಿಸಿದಾಗಲೆಲ್ಲಾ ತೈಲ ಬೆಲೆಗಳನ್ನು ಏರಿಸುತ್ತಾರೆ.

ಆದ್ದರಿಂದ, ಒಂದು ಆರ್ಥಿಕ ಹಿಂಜರಿತದಿಂದಾಗಿ ಬೇಡಿಕೆಯಲ್ಲಿ ಇಳಿಕೆಯ ಪರಿಸ್ಥಿತಿ ಎದುರಾದಾಗ, ಉತ್ಪಾದನೆಯನ್ನು ಕಡಿತಗೊಳಿಸದೆ ಬೇಡಿಕೆ ಮತ್ತು ಪೂರೈಕೆಗಳು ಸಮತೋಲವಾಗುವವರೆಗೂ ತೈಲ ಬೆಲೆಗಳು ಇಳಿಯಲು ಬಿಡುವುದರ ಬದಲು, ಉತ್ಪಾದನೆಯನ್ನು ಕಡಿತಗೊಳಿಸುವ ಕ್ರಮವು ಉತ್ಪಾದಕರ ಪರಿಸ್ಥಿತಿಯನ್ನು ಉತ್ತಮವಾಗಿಸುತ್ತದೆ. ಇದುವೇ ಉತ್ಪಾದನೆಯನ್ನು ಕಡಿತಗೊಳಿಸಲು ಒಪೆಕ್ ಮಂಡಿಸುವ ವಾದ. ಉತ್ಪಾದನೆಯ ಈ ಕಡಿತವು ಕಾರ್ಯಗತವಾಗುವ ಮೊದಲೇ, ಅದರ ನಿರೀಕ್ಷೆಯಲ್ಲೇ, ಕಚ್ಚಾ ತೈಲದ ಬೆಲೆಗಳು ಕಳೆದ ಒಂದು ವಾರದ ಅವಧಿಯೊಳಗೆ ಶೇ. 6ರಷ್ಟು ಏರಿಕೆಯಾಗಿವೆ. ಕೆಲವು ತೈಲ ಬಹುರಾಷ್ಟ್ರೀಯ ಕಂಪನಿಗಳ ಷೇರುಗಳ ಬೆಲೆಗಳೂ ಸಹ ಏರಲಾರಂಭಿಸಿವೆ.



ದುಡಿಯುವ ವರ್ಗದ ಪ್ರತಿರೋಧ :
ಕಚ್ಚಾ ತೈಲದ ಉತ್ಪಾದನೆಯನ್ನು ಕಡಿತ ಮಾಡುವ ಮೂಲಕ ತೈಲ ಬೆಲೆಗಳು ಉನ್ನತ ಮಟ್ಟದಲ್ಲೇ ಉಳಿಯುವಂತೆ ನೋಡಿಕೊಂಡರೆ, ಹಣದುಬ್ಬರವನ್ನು ಇಳಿಕೆ ಮಾಡುವ ಸಲುವಾಗಿ ವ್ಯವಸ್ಥೆಗೊಳಿಸಿದ ಆರ್ಥಿಕ ಹಿಂಜರಿತವು ಉಂಟುಮಾಡಬಹುದಾದ ಪರಿಣಾಮವು ಕಡಿಮೆಯಾಗುತ್ತದೆ. ತೈಲ ಬೆಲೆಗಳು ಎಷ್ಟು ಉನ್ನತವಾಗಿ ಏರುತ್ತವೆಯೋ ಅದಕ್ಕನುಗುಣವಾಗಿ ಈ ಹಿಂಜರಿತವು ಕಡಿಮೆ ಪರಿಣಾಮಕಾರಿಯಾಗುತ್ತದೆ. ಇದರ ಅರ್ಥವೆಂದರೆ, ಕಾರ್ಮಿಕರ ನಿಜ ವೇತನದ ಮೇಲೆ ಮತ್ತು ಇತರ ಕಚ್ಚಾ ವಸ್ತುಗಳು ಮತ್ತು ಆಹಾರ ಉತ್ಪಾದಕರ ಆದಾಯದ ಮೇಲೆ ಇನ್ನೂ ಹೆಚ್ಚಿನ ನಿರ್ಬಂಧವನ್ನು ಹೇರಬೇಕಾಗುತ್ತದೆ. ಅಂದರೆ, ಆರ್ಥಿಕ ಹಿಂಜರಿತವು ಮತ್ತಷ್ಟು ವ್ಯಾಪಕವಾಗುತ್ತದೆ. ಆದರೆ ಒಟ್ಟು ಉತ್ಪತ್ತಿಯಲ್ಲಿ ತೈಲೇತರ ಕಚ್ಚಾ ವಸ್ತುಗಳು ಮತ್ತು ಆಹಾರ ಉತ್ಪಾದಕರ ಪಾಲು ಈಗಾಗಲೇ ಕಡಿಮೆಯಿರುವುದರಿಂದ ಆರ್ಥಿಕ ಹಿಂಜರಿತದ ಹೊರೆಯನ್ನು ವೇತನ ಪಡೆಯುವವರೇ ಹೊರಬೇಕಾಗುತ್ತದೆ. ಇಲ್ಲಿ ಏಳುವ ಪ್ರಶ್ನೆಯೆಂದರೆ, ಬಂಡವಾಳಶಾಹಿ ಜಗತ್ತಿನ, ಅದರಲ್ಲೂ ವಿಶೇಷವಾಗಿ ಮುಂದುವರಿದ ಬಂಡವಾಳಶಾಹಿ ದೇಶಗಳ, ದುಡಿಯುವ ವರ್ಗವು ಈ ಹಿಂಜರಿತವನ್ನು ಉಲ್ಬಣಗೊಳ್ಳಲು ಬಿಡುತ್ತದೆಯೇ? ಎಂಬುದು. ದುಡಿಯುವವರು ಆರ್ಥಿಕ ಹಿಂಜರಿತದ ಹೊರೆಯನ್ನು ಹೊರಲು ಎಷ್ಟು ಬಲವಾಗಿ ನಿರಾಕರಿಸುತ್ತಾರೋ ಅಷ್ಟರ ಮಟ್ಟಿಗೆ, ಹಣದುಬ್ಬರಕ್ಕೆ ಬಂಡವಾಳಶಾಹಿಗಳ ರಾಮಬಾಣವೆನಿಸಿದ ಆರ್ಥಿಕ ಹಿಂಜರಿತವು ಇನ್ನಷ್ಟು ದೊಡ್ಡದಾಗಿರಬೇಕಾಗುತ್ತದೆ.

ಈ ಪರಿಸ್ಥಿತಿಯಲ್ಲಿ ದುಡಿಯುವ ವರ್ಗದ ಪ್ರತಿರೋಧವು ಕೇವಲ ನಿಜ ವೇತನ ಕಡಿತದ ಸಮಸ್ಯೆಗಷ್ಟೇ ಸೀಮಿತಗೊಳ್ಳುವುದಿಲ್ಲ. ಹೆಚ್ಚುತ್ತಾ ಹೋಗುವ ನಿರುದ್ಯೋಗದ ಸಮಸ್ಯೆಯನ್ನೂ ಅದು ಕೈಗೆತ್ತಿಕೊಳ್ಳುತ್ತದೆ. ಆಳಗೊಳ್ಳುತ್ತಾ ಹೋಗುವ ಆರ್ಥಿಕ ಹಿಂಜರಿತವು ಕಾರ್ಮಿಕ ವರ್ಗವನ್ನು ಗಮನಾರ್ಹ ಪ್ರತಿರೋಧಗಳಲ್ಲಿ ತೊಡಗುವಂತೆ ಪ್ರಚೋದಿಸುತ್ತದೆ. ಮುಷ್ಕರಗಳ ಅಲೆಯಿಂದ ಯುರೋಪ್ ಈಗಾಗಲೇ ತತ್ತರಿಸಿದೆ. ವಾಸ್ತವವಾಗಿ ಯಾವ ಪ್ರಮುಖ ಯುರೋಪಿಯನ್ ದೇಶವೂ ಪ್ರಸ್ತುತದಲ್ಲಿ ಮುಷ್ಕರ- ಹೋರಾಟಗಳಿಂದ ಮುಕ್ತವಾಗಿಲ್ಲ. ಆರ್ಥಿಕ ಹಿಂಜರಿತವು ತೀವ್ರಗೊಂಡರೆ, ಹಣದುಬ್ಬರದ ಮತ್ತು ನಿರುದ್ಯೋಗದ ಇಕ್ಕಳದ ಹಿಡಿತಕ್ಕೆ ಸಿಲುಕಿದ ಕಾರ್ಮಿಕ ವರ್ಗದ ಪ್ರತಿರೋಧವು ಇನ್ನಷ್ಟು ಉಗ್ರವಾಗುತ್ತದೆ. ಸಮಸ್ಯೆ ಅಷ್ಟೇ ಅಲ್ಲ. ಆರ್ಥಿಕ ಹಿಂಜರಿತವು ತೀವ್ರಗೊಂಡರೆ ಬ್ಯಾಂಕುಗಳು ಮತ್ತಷ್ಟು ಒತ್ತಡಕ್ಕೆ ಒಳಗಾಗುತ್ತವೆ. ಮುಂದುವರಿದ ಬಂಡವಾಳಶಾಹಿ ದೇಶಗಳಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯು ಈಗಾಗಲೇ ಸಾಕಷ್ಟು ಒತ್ತಡವನ್ನು ಅನುಭವಿಸಿದೆ. ಅಮೆರಿಕದ ಎರಡು ಬ್ಯಾಂಕುಗಳು ಮುಳುಗಿವೆ. ತೀವ್ರಗೊಳ್ಳುವ ಆರ್ಥಿಕ ಹಿಂಜರಿತ ಮತ್ತು ಬ್ಯಾಂಕ್-ಸಾಲಗಳು ಸುಸ್ತಿಯಾಗುವುದರೊಂದಿಗೆ, ಪರಿಸ್ಥಿತಿಗಳು ಮತ್ತಷ್ಟು ಗಂಭೀರವಾಗುತ್ತವೆ.

ಈ ಎಲ್ಲ ಅಂಶಗಳೂ ಸೂಚಿಸುವ ಒಂದೇ ಒಂದು ಮುಖ್ಯವಾದ ಸಂಗತಿ ಎಂದರೆ, ಬಂಡವಾಳಶಾಹಿಯ ಸುಗಮ ಕಾರ್ಯನಿರ್ವಹಣೆಯು ಕೆಲವು ಗೊತ್ತುಪಾಡುಗಳನ್ನು ಆಧರಿಸಿದೆ ಎಂಬುದು. ಅವುಗಳಲ್ಲಿ ಯಾವುದೇ ಒಂದು ಗೊತ್ತುಪಾಡಿನ ಷರತ್ತಿನ ನೆರವೇರಿಕೆಯು ದುರ್ಬಲಗೊಂಡರೆ, ಅದು ಇಡೀ ಬಂಡವಾಳಶಾಹಿ ವ್ಯವಸ್ಥೆಯ ಸ್ಥಿರತೆಗೆ ಗಂಭೀರ ಬೆದರಿಕೆಯನ್ನೊಡ್ಡುವ ಒಂದು ಸರಪಳಿ ಪ್ರತ್ತಿಕ್ರಿಯೆ(chain reaction )ಯನ್ನು ಪ್ರಾರಂಭಿಸುತ್ತದೆ. ವಿಶ್ವ ಅರ್ಥವ್ಯವಸ್ಥೆಯ ಮೇಲೆ ಯುಎಸ್ ನೇತೃತ್ವದ ಮೆಟ್ರೋಪಾಲಿಟನ್ ಸಾಮ್ರಾಜ್ಯಶಾಹಿಯ ಪ್ರಾಬಲ್ಯವು ಇಂತಹ ಷರತ್ತುಗಳಲ್ಲಿ ಒಂದು. ಆದರೆ, ಸಾಮ್ರಾಜ್ಯಶಾಹಿ ಆಧಿಪತ್ಯ ವ್ಯಾಪಕವಾಗಿರುವುದರಿಂದ ಮತ್ತು ಅದರ ವ್ಯಾಪ್ತಿಯನ್ನು ಲಘುವಾಗಿ ಪರಿಗಣಿಸಲಾಗಿರುವುದರಿಂದ, ಹೆಚ್ಚಿನ ವಿಶ್ಲೇಷಕರು ಅದರ ಪ್ರಸ್ತುತತೆಯನ್ನು ಗಮನಿಸುವಲ್ಲಿಯೂ ಸಹ ವಿಫಲರಾಗುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ತನ್ನ ನಿಲುವನ್ನು ಒತ್ತಿ ಹೇಳುವ ಸೌದಿ ಅರೇಬಿಯಾದ ಕ್ರಮವು ಈ ಸಾಮ್ರಾಜ್ಯಶಾಹಿ ಆಧಿಪತ್ಯದಲ್ಲಿ ಒಂದು ಬಿರುಕು ಉಂಟಾಗಿದೆ ಎಂಬುದನ್ನು ಸೂಚಿಸುತ್ತದೆ. ಸೌದಿ ಅರೇಬಿಯಾವು ಇನ್ನು ಮುಂದೆ ಅಮೆರಿಕದ ಬಾಲ ಹಿಡಿಯುವುದಿಲ್ಲ ಎಂಬ ಅಂಶವು ಬಂಡವಾಳಶಾಹಿ ವ್ಯವಸ್ಥೆಯ ಸ್ಥಿರತೆಗೆ ಒಂದು ಗಂಭೀರ ಸ್ವರೂಪದ ಬೆದರಿಕೆಯನ್ನೊಡ್ಡಿದೆ.

ಇದನ್ನೂ ಓದಿ : ಯುರೋಪಿನ ದೇಶಗಳಲ್ಲಿ ಕಾರ್ಮಿಕರ ಅದೃಷ್ಟ ಖುಲಾಯಿಸಿದ್ದರೆ, ಅದು ಬಂಡವಾಳಶಾಹಿ ವ್ಯವಸ್ಥೆಯಿಂದಲ್ಲ

ಅಮೆರಿಕಾದಲ್ಲಿ 2008ರಲ್ಲಿ ವಸತಿ ಗುಳ್ಳೆಯ ಕುಸಿತದ ನಂತರ ವಿಶ್ವ ಬಂಡವಾಳಶಾಹಿಯು ಒಂದು ದೀರ್ಘಾವಧಿಯ ಬಿಕ್ಕಟ್ಟಿಗೆ ಸಿಲುಕಿತು. ಈ ಬಿಕ್ಕಟ್ಟನ್ನು ಒಂದು ರೂಪದಲ್ಲಿ ಪರಿಹರಿಸಲು ಮಾಡಿದ ಪ್ರಯತ್ನಗಳು ಮತ್ತೊಂದು ರೂಪದ ಬಿಕ್ಕಟ್ಟಿಗೆ ಕಾರಣವಾದವು. ಇದೇ ಈ ಬಿಕ್ಕಟ್ಟಿನ ಹೆಗ್ಗುರುತು. ಬಿಕ್ಕಟ್ಟಿನ ಮೂಲತಃ ವ್ಯಕ್ತಗೊಂಡದ್ದು ಸ್ಥಗಿತತೆಯ ರೂಪದಲ್ಲಿ. ಅಮೆರಿಕದ ಮಾಜಿ ಖಜಾನೆ ಕಾರ್ಯದರ್ಶಿ ಲಾರೆನ್ಸ್ ಸಮ್ಮರ್ಸ್ ಅವರಂತಹ ಆಡಳಿತ-ಪರ ಅರ್ಥಶಾಸ್ತ್ರಜ್ಞರೂ ಸಹ ಈಗದೀರ್ಘಾವಧಿಯ ಸ್ಥಗಿತತೆಯ ಬಗ್ಗೆ ಮಾತನಾಡಲು ಪ್ರಾರಂಭಿಸಿದ್ದಾರೆ. ಆದರೆ ಅನೇಕಾನೇಕ ವರ್ಷಗಳ ಕಾಲದವರೆಗೆ ಅಸಾಧಾರಣ ಅಗ್ಗದ ಸಾಲವನ್ನು ವ್ಯವಸ್ಥೆಗೆ ಪಂಪ್ ಮಾಡುವ ಮೂಲಕ ಮತ್ತು ಆನಂತರ ಎರಗಿದ ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಕೈಗೊಂಡ ಅಗಾಧ ಪ್ರಮಾಣದ ವಿತ್ತೀಯ ಕೊರತೆಗಳ ಮೂಲಕ ಈ ಸ್ಥಗಿತತೆಯನ್ನು ಕೊನೆಗೊಳಿಸಲು ಮಾಡಿದ ಪ್ರಯತ್ನಗಳು ಪ್ರಸ್ತುತ ಹಣದುಬ್ಬರವನ್ನು ಹುಟ್ಟುಹಾಕಿದವು. ಇಡೀ ವಿಶ್ವದ ಮೇಲೆ ಪಾಶ್ಚ್ಯಾತ್ಯ ಪ್ರಾಬಲ್ಯವನ್ನು ಉಳಿಸಿಕೊಳ್ಳುವ ಪ್ರಯತ್ನದ ಫಲಶೃತಿಯಾಗಿ ಸಂಭವಿಸಿದ ಉಕ್ರೇನ್ ಯುದ್ಧವು ಈ ಹಣದುಬ್ಬರವನ್ನು ವೃದ್ಧಿಸಿತು. ಈಗ ಈ ಹಣದುಬ್ಬರವನ್ನು ನಿಗ್ರಹಿಸುವ ಪ್ರಯತ್ನವು ವಿಶ್ವದ ಮೇಲಿನ ಪಾಶ್ಚ್ಯಾತ್ಯ ಪ್ರಾಬಲ್ಯಕ್ಕೆ ಬೆದರಿಕೆಯನ್ನೊಡ್ಡುತ್ತಿದೆ. ಜೊತೆಗೆ ಮೆಟ್ರೋಪಾಲಿಟನ್ ಬಂಡವಾಳವು ತನ್ನ ದೇಶೀಯ ಕಾರ್ಮಿಕ ವರ್ಗದ ಮೇಲೆ ಹೊಂದಿದ ನಿಯಂತ್ರಣಕ್ಕೂ ಬೆದರಿಕೆ ಒಡ್ಡುತ್ತಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ನವ ಉದಾರವಾದಿ ಬಂಡವಾಳಶಾಹಿ ವ್ಯವಸ್ಥೆಯ ಸ್ಥಿರತೆಗೆ ತಳಹದಿಯಾಗಿರುವ ಅಂಶಗಳೇ ಛಿದ್ರಗೊಳ್ಳುತ್ತಿರುವ ಸನ್ನಿವೇಶವನ್ನು ನಾವು ಕಾಣುತ್ತಿದ್ದೇವೆ.

Donate Janashakthi Media

Leave a Reply

Your email address will not be published. Required fields are marked *