ಬೆಂಗಳೂರು: ರಾಜ್ಯದ ಆರೋಗ್ಯ ಇಲಾಖೆಯು ಕ್ಯಾನ್ಸರ್ ಕಾಯಿಲೆಯನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಮಾಡಿ, ಚಿಕಿತ್ಸೆ ಒದಗಿಸುವ ಉದ್ದೇಶದಿಂದ ಸಾಂಕ್ರಾಮಿಕವಲ್ಲದ ರೋಗಗಳ (ಎನ್‌ಸಿಡಿ) ಕಾರ್ಯಕ್ರಮದಡಿ ತಪಾಸಣೆ ನಡೆಸುತ್ತಿದ್ದು, ನಾಲ್ಕು ವರ್ಷಗಳಲ್ಲಿ ಮೂರು ಲಕ್ಷಕ್ಕೂ ಅಧಿಕ ಮಂದಿಯಲ್ಲಿ ಕ್ಯಾನ್ಸರ್ ಇರಬಹುದೆಂಬ ಶಂಕೆ ವ್ಯಕ್ತವಾಗಿದೆ. ಬೆಂಗಳೂರು
ಸ್ತನ, ಬಾಯಿ ಹಾಗೂ ಗರ್ಭಕಂಠ ಕ್ಯಾನ್ಸರ್ ಪತ್ತೆಗೆ ಈ ಕಾರ್ಯಕ್ರಮದಡಿ ಆದ್ಯತೆ ನೀಡಲಾಗಿದೆ. ಎನ್‌ಸಿಡಿ ಕ್ಲಿನಿಕ್‌ಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿ ವಿವಿಧ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಈ ವಿಧದ ಕ್ಯಾನ್ಸರ್ ಪತ್ತೆಗೆ ತಪಾಸಣೆ ನಡೆಸಲಾಗುತ್ತಿದೆ. ಪ‍್ರಾಯೋಗಿಕವಾಗಿ ಕೋಲಾರದಲ್ಲಿ ಕಳೆದ ವರ್ಷ ಜಾರಿಯಾದ ‘ಗೃಹ ಆರೋಗ್ಯ’ ಯೋಜನೆಯಡಿಯೂ ಮನೆ ಬಾಗಿಲಿನಲ್ಲಿಯ ಕ್ಯಾನ್ಸರ್ ತಪಾಸಣೆ ನಡೆಸಲಾಗುತ್ತಿದೆ. ಬೆಂಗಳೂರು
ಕಳೆದ ನಾಲ್ಕು ವರ್ಷಗಳಲ್ಲಿ ಕ್ಯಾನ್ಸರ್ ಪತ್ತೆ ಸಂಬಂಧ ಮೂರು ಕೋಟಿಗೂ ಹೆಚ್ಚು ಜನರನ್ನು ತಪಾಸಣೆ ಮಾಡಲಾಗಿದೆ. ಅವರಲ್ಲಿ 3.06 ಲಕ್ಷ ಮಂದಿಯಲ್ಲಿ ಸ್ತನ, ಬಾಯಿ ಹಾಗೂ ಗರ್ಭಕಂಠದ ಕ್ಯಾನ್ಸರ್ ಇರಬಹುದೆಂಬ ಶಂಕೆ ವ್ಯಕ್ತವಾಗಿತ್ತು. ಇವರಲ್ಲಿ ಕೆಲವರು ಸರ್ಕಾರಿ ಆಸ್ಪತ್ರೆಗಳಲ್ಲಿ ಎನ್‌ಸಿಡಿ ಕಾರ್ಯಕ್ರಮದಡಿ ಹೆಚ್ಚಿನ ಪರೀಕ್ಷೆಗೆ ಒಳಪಟ್ಟಿದ್ದರು. ಅವರಲ್ಲಿ 14,486 ಮಂದಿಯಲ್ಲಿ ಕಾಯಿಲೆ ದೃಢಪಟ್ಟಿದೆ. ಬೆಂಗಳೂರು
ಇದನ್ನೂ ಓದಿ: ಟೊರೊಂಟೊ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ಪಲ್ಟಿಯಾದ ವಿಮಾನ; 18 ಮಂದಿಗೆ ಗಾಯ
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯಡಿ ಕಾರ್ಯನಿರ್ವಹಿಸುತ್ತಿರುವ ಜನಸಂಖ್ಯೆ ಆಧಾರಿತ ಕ್ಯಾನ್ಸರ್ ನೋಂದಣಿಯ (ಪಿಬಿಸಿಆರ್) ವಿಶ್ಲೇಷಣೆ ಪ್ರಕಾರ, ರಾಜ್ಯದಲ್ಲಿ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ ಪ್ರತಿ ವರ್ಷ ಶೇ 1ರಷ್ಟು ಹೆಚ್ಚಳ ವಾಗುತ್ತಿದೆ. ವಾರ್ಷಿಕ 87 ಸಾವಿರ ಹೊಸ ಪ್ರಕರಣಗಳು ವರದಿಯಾಗುತ್ತಿವೆ.
ಪುರುಷರಲ್ಲಿ ಹೆಚ್ಚಾಗಿ ಪ್ರಾಸ್ಟೇಟ್ (ಮೂತ್ರನಾಳ) ಕ್ಯಾನ್ಸರ್, ಬಾಯಿ ಕ್ಯಾನ್ಸರ್, ಜಠರ ಮತ್ತು ಅನ್ನನಾಳದ ಕ್ಯಾನ್ಸರ್ ಕಾಣಿಸಿ ಕೊಳ್ಳುತ್ತಿದೆ. ಮಹಿಳೆಯರಲ್ಲಿನ ದೃಢ ಪ್ರಕರಣಗಳಲ್ಲಿ ಹೆಚ್ಚಿನವರು ಸ್ತನ ಕ್ಯಾನ್ಸರ್ ಎದುರಿಸುತ್ತಿದ್ದಾರೆ. ಅದೇ ರೀತಿ, ಗರ್ಭಕಂಠ ಮತ್ತು ಗರ್ಭಕೋಶದ ಕ್ಯಾನ್ಸರ್ ಸಹ ಅಧಿಕ ಸಂಖ್ಯೆಯಲ್ಲಿ ದೃಢಪಡುತ್ತಿದೆ. ಕ್ಯಾನ್ಸರ್ ತಪಾಸಣೆಗಾಗಿಯೇ ಕ್ಲಿನಿಕ್‌ಗಳು ಹಾಗೂ ಆಸ್ಪತ್ರೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರದ ಕಾರಣ, ವಿವಿಧ ಅನಾರೋಗ್ಯ ಸಮಸ್ಯೆ ಸಂಬಂಧ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡುತ್ತಿರುವವರಿಗೂ ಉಚಿತವಾಗಿ ಈ ತಪಾಸಣೆ ನಡೆಸಲಾಗುತ್ತಿದೆ. ಬೆಂಗಳೂರು
ಬಾಯಿ ಕ್ಯಾನ್ಸರ್ ಅಧಿಕ: ತಂಬಾಕು ಉತ್ಪನ್ನಗಳ ಸೇವನೆ ಸೇರಿ ವಿವಿಧ ಕಾರಣಗಳಿಂದ ಬಾಯಿ ಕ್ಯಾನ್ಸರ್ ಹೆಚ್ಚಿನವರಲ್ಲಿ ಕಾಣಿಸಿಕೊಳ್ಳುತ್ತಿದೆ. ಎನ್‌ಸಿಡಿ ಕಾರ್ಯಕ್ರಮದಡಿ ನಾಲ್ಕು ವರ್ಷಗಳಲ್ಲಿ ಕ್ಯಾನ್ಸರ್ ತಪಾಸಣೆಗೆ ಒಳಪಟ್ಟವರಲ್ಲಿ 1 ಲಕ್ಷಕ್ಕೂ ಅಧಿಕ ಮಂದಿಯಲ್ಲಿ ಬಾಯಿಯ ಕ್ಯಾನ್ಸರ್ ಶಂಕೆ ವ್ಯಕ್ತವಾಗಿತ್ತು. ಹೆಚ್ಚಿನ ಪರೀಕ್ಷೆಗೆ ಒಳಪಟ್ಟವರಲ್ಲಿ 6,595 ಮಂದಿಯಲ್ಲಿ ಈ ಮಾದರಿಯ ಕ್ಯಾನ್ಸರ್ ಖಚಿತಪಟ್ಟಿದೆ. 1.25 ಲಕ್ಷಕ್ಕೂ ಅಧಿಕ ಮಂದಿಯಲ್ಲಿ ಗರ್ಭಕಂಠ ಕ್ಯಾನ್ಸರ್ ಶಂಕೆ ವ್ಯಕ್ತವಾಗಿತ್ತು. ಹೆಚ್ಚಿನ ಪರೀಕ್ಷೆಗೆ ಒಳಪಟ್ಟವರ ಪೈಕಿ 5,763 ಮಂದಿಯಲ್ಲಿ ಈ ಕ್ಯಾನ್ಸರ್ ದೃಢಪಟ್ಟಿದೆ.
‘ಕ್ಯಾನ್ಸರ್ ಕಾಯಿಲೆ ಹಾಗೂ ಚಿಕಿತ್ಸೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಆರೋಗ್ಯ ಕೇಂದ್ರಗಳಲ್ಲಿ ನಡೆಸಲಾಗುವ ಪರೀಕ್ಷೆಗಳ ಜತೆಗೆ ಗೃಹ ಆರೋಗ್ಯ ಯೋಜನೆಯಡಿ ಮನೆಗಳ ಹಂತದಲ್ಲಿಯೇ ತಪಾಸಣೆಗೆ ಕ್ರಮ ಕೈಗೊಳ್ಳಲಾಗಿದೆ. ಕ್ಯಾನ್ಸರ್ ದೃಢಪಟ್ಟಲ್ಲಿ ಜಿಲ್ಲಾ ಆಸ್ಪತ್ರೆಗಳ ಜತೆಗೆ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಚಿಕಿತ್ಸೆ ಒದಗಿಸಲಾಗುತ್ತದೆ. ರೋಗದ ಬಗ್ಗೆ ಅನಗತ್ಯವಾಗಿ ಭಯಕ್ಕೆ ಒಳಪಡದೆ, ಶಂಕೆ ಇದ್ದಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು’ ಎಂದು ಇಲಾಖೆಯ, ಸಾಂಕ್ರಾಮಿಕವಲ್ಲದ ರೋಗಗಳ ವಿಭಾಗದ ಉಪ ನಿರ್ದೇಶಕ ಡಾ.ಜಿ. ಶ್ರೀನಿವಾಸ್ ತಿಳಿಸಿದರು.
ಕ್ಯಾನ್ಸರ್ ಪೀಡಿತರಿಗೆ ಚಿಕಿತ್ಸೆ
ಎನ್‌ಸಿಡಿ ಕಾರ್ಯಕ್ರಮದಡಿ ನಡೆಸಲಾದ ತಪಾಸಣೆಯಲ್ಲಿ ರೋಗ ದೃಢಪಟ್ಟವರಿಗೆ ಇಲಾಖೆಯು ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನೂ ಉಚಿತವಾಗಿ ಒದಗಿಸುತ್ತಿದೆ. ನಾಲ್ಕು ವರ್ಷಗಳಲ್ಲಿ ಈ ಕಾರ್ಯಕ್ರಮದಡಿ ದೃಢ ಪ್ರಕರಣಗಳಲ್ಲಿ 5 ಸಾವಿರಕ್ಕೂ ಅಧಿಕ ಮಂದಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕ್ಯಾನ್ಸರ್ ತೀವ್ರತೆಯನ್ನು ಆಧರಿಸಿ ಚಿಕಿತ್ಸೆ ಹಾಗೂ ಆಸ್ಪತ್ರೆಗಳನ್ನು ಗೊತ್ತುಪಡಿಸಲಾಗುತ್ತಿದ್ದು, ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದವರಿಗೆ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಗೆ ಶಿಫಾರಸು ಮಾಡಲಾಗುತ್ತಿದೆ.
ಗೃಹ ಆರೋಗ್ಯ ಯೋಜನೆಯಡಿಯೂ ಬಾಯಿ, ಗರ್ಭಕಂಠ ಹಾಗೂ ಸ್ತನ ಕ್ಯಾನ್ಸರ್‌ಗೆ ಸಂಬಂಧಿಸಿದಂತೆ ತಪಾಸಣೆ ನಡೆಸಿ, ದೃಢ ಪ್ರಕರಣಗಳನ್ನು ಜಿಲ್ಲಾ ಮಟ್ಟದ ಆಸ್ಪತ್ರೆಗಳಿಗೆ ಶಿಫಾರಸು ಮಾಡಲಾಗುತ್ತದೆ. ಅಗತ್ಯವಿದ್ದಲ್ಲಿ ‘ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ’ಯಡಿ (ಎಬಿ-ಪಿಎಂಜೆಎವೈ) ತೃತೀಯ ಹಂತದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಒದಗಿಸಲಾಗುತ್ತದೆ.
ದಿನೇಶ್ ಗುಂಡೂರಾವ್ ಆರೋಗ್ಯ ಸಚಿವಆರಂಭಿಕ ಹಂತದಲ್ಲಿಯೇ ಕ್ಯಾನ್ಸರ್ ಪತ್ತೆ ಮಾಡಿದಲ್ಲಿ ಚಿಕಿತ್ಸೆ ಸುಲಭವಾಗಲಿದೆ. ಆದ್ದರಿಂದ ಕ್ಯಾನ್ಸರ್ ತಪಾಸಣೆ ಮತ್ತು ಚಿಕಿತ್ಸೆಗೆ ಆದ್ಯತೆ ನೀಡಲಾಗಿದೆ.
ಇದನ್ನೂ ನೋಡಿ: ಡಾ. ಬಂಜಗೆರೆ ಜಯಪ್ರಕಾಶ್ ಜೊತೆ ಸಂವಾದ Janashakthi Media