ಚುನಾಯಿತ ಸರ್ವಾಧಿಕಾರ ವ್ಯವಸ್ಥೆ ತಡೆಯಬಹುದೇ?

ಪ್ರೊ. ರಾಜೇಂದ್ರ ಚೆನ್ನಿ

ಈ ವಾರದಲ್ಲಿ ನೋಡಿದ ಹಾಗೆ ಅತ್ಯಂತ ಮಾರಕವಾದ ಕಾನೂನುಗಳನ್ನು ಚರ್ಚೆ ಇಲ್ಲದೆ ಅಥವಾ ವಿಪಕ್ಷಗಳ ಗೈರು ಹಾಜರಿಯಲ್ಲಿ ಪಾಸು ಮಾಡಲಾಗುತ್ತದೆ. ಇದರ ಒಟ್ಟು ಅರ್ಥವೆಂದರೆ.. ..ಸಂಪೂರ್ಣವಾಗಿ ಭಾರತದ ರಾಜಕೀಯ ವ್ಯವಸ್ಥೆಯು ಚುನಾಯಿತ ಸರ್ವಾಧಿಕಾರದ ವ್ಯವಸ್ಥೆಯಾಗುತ್ತದೆ. ಹೀಗೆ ಮಾಡಲೂ ಇರುವ ಏಕಮಾತ್ರ ಅಡೆತಡೆಯಾಗಿರುವ ನ್ಯಾಯಾಂಗವನ್ನು ದುರ್ಬಲಗೊಳಿಸಲಾಗುತ್ತದೆ. ಅಷ್ಟರೊಳಗೆ ಜನಾಂದೋಲನಗಳು ಬಲವಾದ ಪ್ರತಿರೋಧವನ್ನು ಹೂಡಿ ಪ್ರಭುತ್ವದ ಹಿಂಸೆಯನ್ನು ಎದುರಿಸಲು ಸಾಧ್ಯವಾದರೆ ಈ ಭವಿಷ್ಯವು ಬದಲಾಗಬಹುದು. ಪ್ರಜಾಪ್ರಭುತ್ವವೆನ್ನುವುದು ಏನೇ ಆದರೂ ಮತ್ತೆ ಹೊಸ ಜನ್ಮ ಪಡೆಯುವ ಪ್ರಕೃತಿಯಲ್ಲ. ಅದು ಮಾನವ ನಿರ್ಮಿತ, ಚರಿತ್ರೆಗೆ ಬದ್ಧವಾದ ವ್ಯವಸ್ಥೆ ಮಾತ್ರ. ಅದು ಅಳಿಯುವುದು, ಸರ್ವಾಧಿಕಾರಕ್ಕೆ ವೇದಿಕೆಯಾಗುವುದು ಅಸಾಧ್ಯವಲ್ಲವೆನ್ನುವುದನ್ನು 20ನೇ ಶತಮಾನವು ನಮಗೆ ತೋರಿಸಿಕೊಟ್ಟಿದೆ. ನಾವು ಈಗಲೂ ಪಾಟ ಕಲಿಯಲಿಲ್ಲವೆಂದರೆ ಹೇಗೆ?

*************

ವಿಶ್ವದ ಪ್ರಜಾಪ್ರಭುತ್ವಗಳ ಮೌಲ್ಯಮಾಪನ ಮಾಡಿ ವರದಿ ಪ್ರಕಟಿಸುವ V-Dem ಎನ್ನುವ ಸ್ವೀಡನ್ ದೇಶದ ಸಂಸ್ಥೆಯು ಭಾರತದ ರಾಜಕೀಯ ವ್ಯವಸ್ಥೆಯು ಅವನತಿಗೊಳ್ಳುತ್ತ ಬಂದಿದ್ದು ಈಗ ಅದು Electoral autocracy ಅಂದರೆ ಚುನಾಯಿತ ಸರ್ವಾಧಿಕಾರಿ ವ್ಯವಸ್ಥೆಯಾಗಿದೆಯೆಂದು ವರದಿ ಮಾಡಿತ್ತು. ಎಂದಿನಂತೆ ನಮ್ಮ ಮಾಧ್ಯಮಗಳು ಈ ವರದಿಯನ್ನು ಅಲಕ್ಷ್ಯ ಮಾಡಿದವು ಮತ್ತು ಸರಕಾರವು ಇದನ್ನು ವಿದೇಶೀ ಪಿತೂರಿ ಎಂದು ಹಳಿಯಿತು. ಕಳೆದ ವಾರದಿಂದ ಸಂಸತ್ತಿನಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಅನೇಕ ರಾಜ್ಯಗಳಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಅನೇಕ ರಾಜ್ಯಗಳಲ್ಲಿ ನಡೆಯುತ್ತಿರುವ ಕ್ಷೋಭೆಯನ್ನು ಗಮನಿಸಿದರೆ ಈ ವರದಿಯು ಅಕ್ಷರಶಃ ನಿಜವಾಗಿದೆ.

ಆದರೆ ದುರಂತವೆಂದರೆ ನಾವು ರಾಜಕೀಯವಾಗಿ ಅತ್ಯಂತ ಅಸೂಕ್ಷ್ಮರಾಗಿದ್ದೇವೆ. ಮುನ್ನೋಟವಿಲ್ಲದೆ ಗಂಡಾಂತರ ಬರುವ ವರೆಗೆ ಸಿದ್ಧರಾಗದೇ ಇರುವ ಸ್ಥಿತಿಯಲ್ಲದ್ದೇವೆ.  ಕೆಲವು ವರ್ಷಗಳ ಹಿಂದೆ ಬೆಂಗಳೂರಿನ ಪ್ರಗತಿಪರ ಸಂಘಟನೆಗಳ ಸಭೆಯೊಂದರಲ್ಲಿ ಫ್ಯಾಸಿಸಮ್ ನಮ್ಮ ಮನೆಗಳ ಹೊಸ್ತಿಲಲ್ಲಿ ಬಂದು ಕುಳಿತಿದೆ ಎಂದಾಗ ಬಹಳ ಜನ ಇದು ಅತಿಶಯೋಕ್ತಿ ಎಂದು ಭಾವಿಸಿದರು. ಹಾಗೆಯೆ 2017ರ ವರ್ಷದಲ್ಲಿ ಶಿವಮೊಗ್ಗೆಯಲ್ಲಿ ‘ದಕ್ಷಿಣಾಯನ’ ಚಳುವಳಿಯ ಸಭೆಯಲ್ಲಿ ‘ಫ್ಯಾಸಿಜಮ್ ಅಂದರೆ ಏನು?’ ಎನ್ನುವ ಚಿಕ್ಕ ಹೊತ್ತಿಗೆಯನ್ನು ನಾನೇ ಬರೆದು ಪ್ರಕಟಿಸಿ ಹಂಚಿದಾಗ ಒಬ್ಬ ಯುವ ಲೇಖಕರು ನಮ್ಮ ಹಿರಿಯ ಬರಹಗಾರರು ಇನ್ನೂ ಫ್ಯಾಸಿಜಮ್ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು. ಇಸ್ರೇಲ್‌ನಲ್ಲಿ ನ್ಯಾಯಾಂಗದ ಅಧಿಕಾರವನ್ನು ಮೊಟಕು ಮಾಡಿ ಶಾಸಕಾಂಗವನ್ನು ಬಲಪಡಿಸುವ ಮಸೂದೆಯನ್ನು ಅಲ್ಲಿಯ ಅಧ್ಯಕ್ಷರಾದ ನೇತನ್ಯಾಹು ಅಲ್ಲಿಯ ಸಂಸತ್ತಿನಲ್ಲಿ ಮಂಡಿಸಿದಾಗ ಇದು ಕೆಲವೇ ದಿನಗಳಲ್ಲಿ ಭಾರತದಲ್ಲಿಯೂ ಆಗುತ್ತದೆ ಎಂದು ಸಾಮಾಜಿಕ ತಾಣಗಳಲ್ಲಿ ಬರೆದಾಗ ಕೆಲವರು ಮಾತ್ರ ಪ್ರತಿಕ್ರಿಯಿಸಿದರು. ಕ್ಷಮಿಸಿ, ಇಲ್ಲಿ ಯಾರು ಮೊದಲು ಹೇಳಿದರು ಎನ್ನುವ ಪಂದ್ಯಾಟವಲ್ಲ. ರಾಜಕೀಯದ ದಿಕ್ಕುದೆಸೆಗಳನ್ನು ಮತ್ತು ಹೆಜ್ಜೆಗಳನ್ನು ಗಮನಿಸುವುದರಲ್ಲಿ ನಾವು ಯಾಕೆ ಇಷ್ಟು ಅಸೂಕ್ಷ್ಮವಾಗಿದ್ದೇವೆ ಎನ್ನುವ ವಿಷಾದದಿಂದ ಬರೆಯುತ್ತಿದ್ದೇನೆ.

ಎರಡು ಸಂಗತಿಗಳನ್ನು ನಾವು ಇಲ್ಲಿ ಗಮನಿಸಬೇಕಾಗಿದೆ. ಒಂದು, 2024ರ ಚುನಾವಣೆಯಲ್ಲಿ ಆಡಳಿತರೂಢ ಬಿಜೆಪಿ ಪಕ್ಷವು ಸುಲಭವಾಗಿ ಬಹುಮತವನ್ನು ಪಡೆಯುವುದು ಅಸಾಧ್ಯವಾಗಬಹುದು. ಕರ್ನಾಟಕವು ಸೇರಿದಂತೆ ಚುನಾವಣೆ ರಾಜಕೀಯದಲ್ಲಿ ಅನೇಕ ಸವಾಲುಗಳನ್ನು ಅದು ಎದುರಿಸಬಹುದು. ಮಣಿಪುರದಂಥ ರಾಜ್ಯಗಳಲ್ಲಿ ಮೋದಿಯವರ ಪ್ರಭಾವಳಿ ಕೆಲಸ ಮಾಡುತ್ತಿಲ್ಲ.  ಇದಕ್ಕಿಂತ ಗಂಭೀರವಾದ ವಿಚಾರವೆಂದರೆ ಸರ್ವೋಚ್ಛ ನ್ಯಾಯಾಲಯವು ಕೇಂದ್ರ ಸರಕಾರದ ಆಡಳಿತದ ಬಗ್ಗೆ ಕಾನೂನಾತ್ಮಕ ಕ್ರಿಯೆಗಳ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಲಿದೆ. ಮೋದಿ ಸರಕಾರವು ನ್ಯಾಯಾಂಗವನ್ನು ದುರ್ಬಲಗೊಳಿಸಲು ಸಾಧ್ಯವಿದ್ದರೆ ಭ್ರಷ್ಠಗೊಳಿಸುವ ಪ್ರಯತ್ನವನ್ನು ನಡೆಸುತ್ತಲೇ ಇದೆ. ರಾಜಕೀಯ ದುಷ್ಟತನವನ್ನು ಆಚೆಗಿಟ್ಟು ನೋಡಿದರೆ, ಈಗ ಮುನ್ನೆಲೆಗೆ ಬರುವುದು ಒಂದು ಗಂಭೀರವಾದ ಸಂವಿಧಾನಾತ್ಮಕವಾದ ಪ್ರಶ್ನೆ ಹಾಗೂ ಚರ್ಚೆ. ದೇಶದ ಕಾನೂನುಗಳನ್ನು ಮಾಡುವುದು ಶಾಸಕಾಂಗ (ಇಲ್ಲಿ ಸಂಸತ್ತು) ಎನ್ನುವುದು ನಿಜ. ಆದರೆ ಈ ಕಾನೂನುಗಳು ಸಂವಿಧಾನದ ಮೂಲ ರಚನೆ ಅಥವಾ ಚೌಕಟ್ಟನ್ನು ಮೀರಿದರೆ ಅದನ್ನು ಅಮಾನ್ಯ ಮಾಡುವ ಹಕ್ಕು ಸರ್ವೋಚ್ಛ ನ್ಯಾಯಾಲಯಕ್ಕೆ ಇದೆ. ಹೀಗೆ ನಮ್ಮ ಸಂವಿಧಾನವು ಇವೆರಡರ ಮಧ್ಯ ಸೂಕ್ಷ್ಮವಾದ ಒಂದು ಸಮತೋಲನವನ್ನು ಪಾಲಿಸಲು ಸೂಚಿಸುತ್ತದೆ. ಆದರೆ ಇವೆರಡು ಪ್ರಜಾಪ್ರಭುತ್ವದ ಅಂಗಗಳ ನಡುವಿನ ಲಕ್ಷ್ಮಣ ರೇಖೆ ಯಾವುದು ಎನ್ನುವುದು ಸೂಕ್ಷ್ಮ  ನಿಷ್ಕರ್ಷೆಯ ವಿಷಯವಾಗಿದೆ.

ಇದು ಈಗ ತಾತ್ವಿಕ ಚರ್ಚೆಯಾಗಿ ಉಳಿದಿಲ್ಲ. ಕಾಶ್ಮೀರದ ಸ್ಥಾನಮಾನದ ಕುರಿತಾಗಿ ಇರುವ Article 370, ಅರಣ್ಯ ಸಂರಕ್ಷಣ ಕಾಯಿದೆ, ಕಾರ್ಮಿಕ ಕಾನೂನುಗಳು ಇವೆಲ್ಲವುಗಳಲ್ಲಿ ಸರಕಾರಗಳು ಜನವಿರೋಧಿ ಬದಲಾವಣೆಗಳನ್ನು ತಂದಿವೆ. ಈಗ ಚುನಾವಣಾ ಕಮಿಶನರ್ ಅವರ ಆಯ್ಕೆಯನ್ನು ಮಾಡುವ ಸಮಿತಿಯ ಸದಸ್ಯತ್ವದಿಂದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳನ್ನು ಹೊರಗಿಡುವ ಮಸೂದೆ ಮಂಡಿತವಾಗಲಿದೆ. ಅಲ್ಲದೆ ಶತಮಾನದಿಂದ ಇದ್ದ CrPC ಇತ್ಯಾದಿ ಕಾನೂನುಗಳನ್ನು ಬದಲಾಯಿಸಲಾಗುತ್ತಿದೆ. ಇದೆಲ್ಲವು ಸಂಸತ್ತಿನ ಪರಮಾಧಿಕಾರವೆಂದು ವಾದಿಸಬಹುದು. ಆದರೆ ಬಾಬಾಸಾಹೇಬರು ಮತ್ತು ಇತರರು ಸಂವಿಧಾನದ ರಚನೆ ಮಾಡುವಾಗ ನಂಬಿದ್ದೆಂದರೆ ಚುನಾಯಿತ ಸಂಸದರು ಶಿಕ್ಷಿತರಾಗಿರುತ್ತಾರೆ. ಸಂವಿಧಾನವನ್ನು ಅರಿತುಕೊಳ್ಳಬಲ್ಲವರಾಗಿರುತ್ತಾರೆ. ರಾಷ್ಟ್ರದ ಹಿತದ ರಕ್ಷಣೆ ಮಾಡುತ್ತಾರೆ ಎಂದು. ಆದರೆ ಈ ನಿರೀಕ್ಷೆಯು ಅನೇಕ ದಶಕಗಳಿಂದ ಸುಳ್ಳಾಗಿ ಸಂಸತ್ತಿನ ಸಂಸದರು ಬಹುಪಾಲು ಅಪರಾಧಿ ಹಿನ್ನೆಲೆಯವರು, ಲೈಂಗಿಕ ಅಪರಾಧಿಗಳು, ಅಕ್ರಮವಾಗಿ ಹಣಗಳಿಸಿದವರು ಆಗಿರುತ್ತಾರೆ. ರಾಜ್ಯ ಹಾಗೂ ರಾಷ್ಟ್ರಮಟ್ಟದ ರಾಜಕೀಯ ಪ್ರತಿನಿಧಿಗಳು ದೊಡ್ಡ ಸಂಖ್ಯೆಯಲ್ಲಿ ಕ್ರಿಮಿನಲ್‌ಗಳೇ ಆಗಿದ್ದಾರೆ. ಅಲ್ಲದೆ ವಿವೇಕವಿಲ್ಲದ, ಅಶಿಕ್ಷಿತ ದುರ್ಜನರಾಗಿದ್ದಾರೆ. ಈ ವಾಕ್ಯಗಳನ್ನು ಅನುಮಾನಿಸುವವರು Association for Democratic Reforms (ADR) ಸಂಸ್ಥೆಯ ವರದಿಗಳನ್ನು ಪರಿಶೀಲಿಸಬಹುದಾಗಿದೆ. ಯಾರಾದರೂ ಸಂಸದರು ಈ ಮಾತುಗಳನ್ನು ವಿರೋಧಿಸುವುದಾದರೆ ತಮ್ಮ ಹೆಸರಿನಲ್ಲಿ ಪ್ರಸ್ತುತ ಲೇಖಕರಿಗೆ ಪತ್ರ ಬರೆಯಬಹುದು. ಅವರ ಚರಿತ್ರೆಯ ವಿವರಗಳನ್ನು ಸಾರ್ವಜನಿಕವಾಗಿ ತಿಳಿಸಲಾಗುವುದು.

ಇದನ್ನೂ ಓದಿ:ಬಿಜೆಪಿ ಆಳ್ವಿಕೆಯಲ್ಲಿ ಮಾನವ ಹಕ್ಕುಗಳ ಬುಡಮೇಲು ಹಿಂದುತ್ವ ಸರ್ವಾಧಿಕಾರಶಾಹಿಗೆ ಹಕ್ಕುಗಳ ಆಯೋಗವೂ ಬಲಿ

ಇದಾವುದು ಇಲ್ಲದ ವಿವೇಕ, ಚಾರಿತ್ರ್ಯ, ದೇಶದ ಬಗೆಗಿನ ಕಾಳಜಿ ಇರುವ ಸಂಸದರ ಸಂಖ್ಯೆ ಅತ್ಯಂತ ಕಡಿಮೆ. ಅವರು ಅಲ್ಪಸಂಖ್ಯಾತರು. ಹೀಗಾಗಿ ಈ ವಾರದಲ್ಲಿ ನೋಡಿದ ಹಾಗೆ ಅತ್ಯಂತ ಮಾರಕವಾದ ಕಾನೂನುಗಳನ್ನು ಚರ್ಚೆ ಇಲ್ಲದೆ ಅಥವಾ ವಿಪಕ್ಷಗಳ ಗೈರು ಹಾಜರಿಯಲ್ಲಿ ಪಾಸು ಮಾಡಲಾಗುತ್ತದೆ. ಭಾರತದ ಅರಣ್ಯ ಪರಿಸರವನ್ನು ಖಾಸಗಿ ವ್ಯಕ್ತಿಗಳಿಗೆ ಮಾರಲು ಅವಕಾಶ ಮಾಡಿಕೊಡುವ ಮಸೂದೆಯನ್ನು ಪಾಸು ಮಾಡಲಾಗಿದೆ. ಇದರ ಒಟ್ಟು ಅರ್ಥವೆಂದರೆ ಮುಂದೆ ಸರಳ ಬಹುಮತದಿಂದ ಚುನಾಯಿತವಾದ ಪಕ್ಷದ ಸರಕಾರವು ಈ ಕಾನೂನುಗಳ ಬೆಂಬಲದಿಂದ ಕ್ರೂರವಾದ ಅನ್ಯಾಯಗಳನ್ನು ಮಾಡಬಹುದಾಗಿದೆ. ಇನ್ನೂ ಸರಳವಾಗಿ ಹೇಳುವುದಾದರೆ ಸಂಪೂರ್ಣವಾಗಿ ಭಾರತದ ರಾಜಕೀಯ ವ್ಯವಸ್ಥೆಯು ಚುನಾಯಿತ ಸರ್ವಾಧಿಕಾರದ ವ್ಯವಸ್ಥೆಯಾಗುತ್ತದೆ. ಇದಕ್ಕೆ ಬೆಂಬಲವಾಗಿ ಈಗಾಗಲೇ ಕೆಲವು ಬಲಪಂಥೀಯ ಸಂಘಟನೆಗಳಿಗೆ ಶಸ್ತ್ರಾಸ್ತ್ರ ತರಬೇತಿ ಹಾಗೂ ಅಸ್ತçಗಳನ್ನು ಕೊಡಲಾಗಿದೆ. ನನ್ನ ಅಂದಾಜಿಕ ಪ್ರಕಾರ ಬಹಳ ತಡವಾಗಿ ಅಂದರೆ 2025ರಲ್ಲಿ ದೇಶದ ಪ್ರಜಾಪ್ರಭುತ್ವ ಕೋಮುಸೌಹಾರ್ಧ ವಿರೋಧಿ ಸಂಸ್ಥೆಯು ಶತಮಾನವನ್ನು ಪೂರೈಸುವ ಸಂದರ್ಭದಲ್ಲಿ ರಾಷ್ಟ್ರವನ್ನು ಹಿಂದೂ ರಾಷ್ಟ್ರವೆಂದು ಘೋಷಣೆ ಮಾಡಲಾಗುತ್ತದೆ.

ಹೀಗೆ ಮಾಡಲೂ ಇರುವ ಏಕಮಾತ್ರ ಅಡೆತಡೆಯಾಗಿರುವ ನ್ಯಾಯಾಂಗವನ್ನು ದುರ್ಬಲಗೊಳಿಸಲಾಗುತ್ತದೆ. ಅಲ್ಲದೆ ದೇಶದ ಮುಸ್ಲಿಮರ ಹಾಗೂ ದಲಿತರ ಮಾರಣಹೋಮವನ್ನು ಮಾಡಲಾಗುತ್ತದೆ. ಈ ಪ್ರಯತ್ನಗಳು ನಡೆಯುವುದು ಖಂಡಿತ. ಅಷ್ಟರೊಳಗೆ ಜನಾಂದೋಲನಗಳು ಬಲವಾದ ಪ್ರತಿರೋಧವನ್ನು ಹೂಡಿ ಪ್ರಭುತ್ವದ ಹಿಂಸೆಯನ್ನು ಎದುರಿಸಲು ಸಾಧ್ಯವಾದರೆ ಈ ಭವಿಷ್ಯವು ಬದಲಾಗಬಹುದು. ಅಗ್ನಿವೀರರ ಮೂಲಕ ವಿಶ್ವದ ಅತ್ಯುತ್ತಮ ಸೈನ್ಯವಾದ ಭಾರತೀಯ ಸೇನೆಯನ್ನು ರಾಜಕೀಯದ ಅಸ್ತçವನ್ನಾಗಿಸುವ ಪ್ರಯತ್ನ ನಡೆಯುತ್ತಿದೆ. ಪ್ರಸಿದ್ಧ ಸಂವಿಧಾನ ತಜ್ಞರು ಮತ್ತು ನ್ಯಾಯವಾದಿಗಳಾದ ಪ್ರಶಾಂತ ಭೂಷಣರು ಎರಡನೇ ಪುಲ್ವಾಮಾ (Pulwama II) ಖಂಡಿತ ನಡೆಯುತ್ತದೆ ಎಂದು ಹೇಳಿದ್ದಾರೆ. ಇವುಗಳ ಬಗ್ಗೆ ಎಚ್ಚರವಾಗಿ ನಾವು ಸಂಘಟಿತರಾಗಿ ಪ್ರಯತ್ನ ಮಾಡಬೇಕಿದೆ. ಭಾರತದ ಅತ್ಯುತ್ತಮ ಕಾನೂನು ತಜ್ಞರು ನ್ಯಾಯಾಂಗದ ಅಧಿಕಾರದ ಬಗ್ಗೆ ಚಿಂತಿಸಿ ಕಾರ್ಯಪ್ರವೃತ್ತರಾಗಬೇಕಿದೆ.

ಇದು ಕಷ್ಟಸಾಧ್ಯ. ಈ ಲೇಖನದಲ್ಲಿರುವ ಅಭಿಪ್ರಾಯಗಳಿಗೆ ಬಹಳ ಜನ ಅತಿಶಯೋಕ್ತಿ, alarmist ಎಂದು ಪ್ರತಿಕ್ರಿಯಿಸಬಹುದು ಅಥವಾ ಭಾರತದಂಥ ದೇಶದಲ್ಲಿ ಇದೆಲ್ಲ ಸುಲಭವಲ್ಲ. ನಮ್ಮ ಜನ ಸರ್ವಾಧಿಕಾರವನ್ನು ಒಪ್ಪುವುದಿಲ್ಲವೆಂದು ಹೇಳಬಹುದು. ಈಗಾಗಲೇ ಸರ್ವಾಧಿಕಾರ ಬಂದಿದೆಯಲ್ಲ? ಇನ್ನು ಒಪ್ಪುವ ಮಾತೇನು? ಅತ್ಯಂತ ಅಪಾಯಕಾರಿ ಲಕ್ಷಣವೆಂದರೆ ಪ್ರಭುತ್ವದ, ಅಧಿಕಾರದಲ್ಲಿರುವ ಪಕ್ಷದ ಮಾನವ ವಿರೋಧಿ ದುಷ್ಟ ವಿಚಾರಗಳು ಈಗ naturalise ಆಗಿ ಸಾಮಾನ್ಯ ಜನರ common sense ಆಗಿಬಿಟ್ಟಿವೆ. ಸಾಮಾಜಿಕ ತಾಣಗಳಲ್ಲಿ ಬರುವ ಪ್ರತಿಕ್ರಿಯೆಗಳನ್ನು ನೋಡಿದರೆ ನಮ್ಮ ಜನ ಅನಾಗರೀಕ ಪಶುಗಳಾಗಿದ್ದಾರೆಂದು ಅನ್ನಿಸುತ್ತದೆ. ಪ್ರಜಾಪ್ರಭುತ್ವವೆನ್ನುವುದು ಏನೇ ಆದರೂ ಮತ್ತೆ ಹೊಸ ಜನ್ಮ ಪಡೆಯುವ ಪ್ರಕೃತಿಯಲ್ಲ. ಅದು ಮಾನವ ನಿರ್ಮಿತ, ಚರಿತ್ರೆಗೆ ಬದ್ಧವಾದ ವ್ಯವಸ್ಥೆ ಮಾತ್ರ. ಅದು ಅಳಿಯುವುದು ಸರ್ವಾಧಿಕಾರಕ್ಕೆ ವೇದಿಕೆಯಾಗುವುದು ಅಸಾಧ್ಯವಲ್ಲವೆನ್ನುವುದನ್ನು 20ನೇ ಶತಮಾನವು ನಮಗೆ ತೋರಿಸಿಕೊಟ್ಟಿದೆ. ನಾವು ಈಗಲೂ ಪಾಟ ಕಲಿಯಲಿಲ್ಲವೆಂದರೆ ಹೇಗೆ?

**********

Donate Janashakthi Media

Leave a Reply

Your email address will not be published. Required fields are marked *