‘ಬಿಜೆಪಿ ಹಟಾವೋ, ಮಹಿಳಾ ಬಚಾವೋ’ ಗೆ ಮಹಿಳೆಯರ ರಾಷ್ಟ್ರೀಯ ಸಮಾವೇಶದ ಕರೆ

ದೇಶದ 26 ರಾಜ್ಯಗಳಲ್ಲಿ ನಡೆಯುತ್ತಿರುವ ಮಹಿಳಾ ಉದ್ಧಾರ ಮತ್ತು ಸಮಾನತೆಯ ಹೋರಾಟದ ಭಾಗವಾಗಿ ಅಖಿಲ ಭಾರತ ಜನವಾದಿ ಮಹಿಳಾ ಸಂಘ (ಎಐಡಿಡಬ್ಲ್ಯೂಎ) ಆಗಸ್ಟ್ 17ರಂದು ನವದೆಹಲಿಯಲ್ಲಿ “ಬಿಜೆಪಿ ಆರೆಸ್ಸೆಸ್ ಹಟಾವೊ, ಮಹಿಳಾ ಬಚಾವೊ, ದೇಶ ಬಚಾವೋ’ ರಾಷ್ಟ್ರೀಯ ಸಮಾವೇಶವನ್ನು ಸಂಘಟಿಸಿತ್ತು

ಇದರಲ್ಲಿ ವಿವಿಧ ರಾಜ್ಯಗಳಿಂದ ಬಂದ ಮಹಿಳೆಯರು 2014ರಿಂದ ಆರ್‌ಎಸ್‌ಎಸ್ ಬೆಂಬಲಿತ ಬಿಜೆಪಿ ಸರ್ಕಾರದ ವಿಭಿನ್ನ ನೀತಿಗಳ ಅಡಿಯಲ್ಲಿ ತಾವು ಪಟ್ಟಿರುವ , ಪಡುತ್ತಿರುವ ಪಾಡುಗಳನ್ನು, ದೌರ್ಜನ್ಯಗಳು, ಕೆಲಸದಲ್ಲಿ ಶೋಷಣೆ, ವೇತನಅಸಮಾನತೆ ಮತ್ತು ಹಣದುಬ್ಬರದ ಪರಿಣಾಮಗಳನ್ನು ನಿವೇದಿಸಿದರು. ಜಾತ್ಯತೀತತೆ, ಪ್ರಜಾಪ್ರಭುತ್ವ ಮತ್ತು ನ್ಯಾಯದ ತತ್ವಗಳನ್ನು ಎತ್ತಿಹಿಡಿಯಲು ಒಂದಾಗಬೇಕು ಎಂದು ಎಲ್ಲ ಪ್ರಜಾಪ್ರಭುತ್ವವಾದಿ ಶಕ್ತಿಗಳಿಗೆ ಸಮಾವೇಶಕರೆ ನೀಡಿತು.

ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಬೃಂದಾಕಾರಟ್, ‘ಹಿಂದುತ್ವ’ ಎಂಬ ಪದವನ್ನು ಸೃಷ್ಟಿಸಿದ ವಿನಾಯಕದಾಮೋದರ ಸಾವರ್ಕರ್‌ ಅವರ ಹಾದಿಯಲ್ಲಿ ಪ್ರಸ್ತುತ ಆಡಳಿತ ನಡೆಯುತ್ತಿದೆ, ಅದರ ಪರಿಣಾಮವು ದೇಶದ ಅರ್ಧದಷ್ಟು ಜನಸಂಖ್ಯೆಯ ಮೇಲೆ ಹೆಚ್ಚಿದ ಅಪರಾಧಗಳು, ಸಾಲದ ಹೊರೆ ಮತ್ತು ಆದಾಯದ ನಷ್ಟಗಳ ರೂಪದಲ್ಲಿ ಗೋಚರಿಸುತ್ತಿದೆ ಎಂದು ಹೇಳಿದರು.

“ವೇದಗಳ ನಂತರ ಮನು ಸ್ಮೃತಿ ಹಿಂದೂಗಳಿಗೆ ಮಾರ್ಗದರ್ಶಿ ಪಠ್ಯವಾಗಿ ಉಳಿದಿದೆ ಎಂದು ಸಾವರ್ಕರ್ ಸ್ಪಷ್ಟವಾಗಿ ಹೇಳಿದ್ದಾರೆ ಮತ್ತು ಈ ಪ್ರಾಚೀನ ಪಠ್ಯವು ಮಹಿಳೆಯರ ಸಾಮಾಜಿಕ ಜೀವನದ ಬಗ್ಗೆ ಏನು ಸೂಚಿಸಿದೆ ಎಂದು ನಮಗೆ ತಿಳಿದಿದೆ” ಎಂದುಅವರು ಹೇಳಿದರು.

2002ರ ಕೋಮು ಹಿಂಸಾಚಾರದ ಸಂದರ್ಭದಲ್ಲಿ ಬಿಲ್ಕಿಸ್ ಬಾನೊ ಮೇಲಿನ ಅತ್ಯಾಚಾರದ ಅಪರಾಧಿಗಳನ್ನು ಬಿಡುಗಡೆ ಮಾಡಿದ್ದಕ್ಕಾಗಿ ಗುಜರಾತ್ ಸರ್ಕಾರವನ್ನು, ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್‌ರನ್ನು ರಕ್ಷಿಸಿದ್ದಕ್ಕಾಗಿ ಕೇಂದ್ರ ಸರ್ಕಾರವನ್ನು ಮತ್ತು ಬಿಜೆಪಿ ನಾಯಕನಾಗಿ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿದ್ದ , ಮತ್ತು ಈಗ ಅಲ್ಲಿಂದ ಹೊರಹಾಲ್ಪಟ್ಟಿರುವ ಕುಲದೀಪ್ ಸಿಂಗ್ ಸೆಂಗಾರ್‌ರನ್ನುಇದುವರೆಗೆ ರಕ್ಷಿಸುತ್ತ ಬಂದ ಉತ್ತರಪ್ರದೇಶ ಸರಕಾರವನ್ನು ಕಟುವಾಗಿ ಟೀಕಿಸಿದ ಬೃಂದಾಕಾರಟ್, “ಬಿಜೆಪಿ ಹಟಾವೋ, ಮಹಿಳಾ ಬಚಾವೋ” ಘೋಷಣೆಗೆ ಈ ಸಮಯದಲ್ಲಿ ವಿಶೇಷ ಮಹತ್ವವಿದೆ ಎಂದು ಹೇಳಿದರು.

“ಈ ಸರ್ಕಾರದ ನಾಯಕರು ತಮ್ಮರಾಜ್ಯ ಸರ್ಕಾರಗಳು ‘ಡಬಲ್ ಇಂಜಿನ್’ ನಿಂದ ನಡೆಸಲ್ಪಡುತ್ತವೆ ಎಂದು ಆಗಾಗ್ಗೆ ಹೇಳುತ್ತಿರುತ್ತಾರೆ, ಆದರೆ ಈ ‘ಡಬಲ್ ಇಂಜಿನ್’ ನ ಆರೆಸ್ಸೆಸ್‌ ಎಂದು ನಾನಿಲ್ಲಿ ಸೇರಿಸಬೇಕು.ಅದು ಜನರ ಮನಸ್ಸಿನಲ್ಲಿ ಯಾವ ವಿಷವನ್ನು ತುಂಬಿದ್ದಾರೆ ಎಂಬುದನ್ನು ನಾವು ಮಣಿಪುರದಲ್ಲಿ ನೋಡುತ್ತಿದ್ದೇವೆ. ಅಲ್ಲಿ ಕುಕಿ ಮತ್ತು ಮೈತೆೆಯಿ ಸಮುದಾಯಗಳ ನಡುವೆ ಒಂದು ಅಗೋಚರವಾದ ವಿಭಜನೆಉಂಟಾಗಿದೆ. ಇದರಿಂದ ಎಲ್ಲರಿಗಿಂತ ಹೆಚ್ಚಾಗಿ ಬಳಲುತ್ತಿರುವವರು ಮಹಿಳೆಯರು ಮತ್ತು ಮಕ್ಕಳು. ಸಹೋದರ ಸಹೋದರಿಯರನ್ನು ಅತ್ಯಾಚಾರ ಮಾಡಿ ಹತ್ಯೆ ಮಾಡಲಾಗಿದೆ. ಆದರೂ ಒಕ್ಕೂಟ ಸರ್ಕಾರ ಕ್ರಮಕೈಗೊಂಡಿಲ್ಲ’ ಎಂದು ಕಾರಟ್ ಹೇಳಿದರು.

ಇದನ್ನೂ ಓದಿ:ʻಪ್ರಾಚೀನ ಭಾರತದ ತಾಯಿʼ ಉಪನ್ಯಾಸಗಳ ಬಗ್ಗೆ ಯುಜಿಸಿ ಸುತ್ತೋಲೆ: ಎಐಡಿಡಬ್ಲ್ಯೂಎ ಖಂಡನೆ

ಮಹಿಳೆಯರು ಆಹಾರ ಮತ್ತು ಘನತೆಗಾಗಿ ಒಂದು ಕಠಿಣ ಸಮರವನ್ನು ಎದುರಿಸುತ್ತಿದ್ದಾರೆ ಎಂದು ಸಮಾವೇಶದಲ್ಲಿ ಭಾಗವಹಿಸಿದವರು ಹೇಳಿದರು.

ರಾಜಸ್ಥಾನದ ಬಿಕಾನೇರ್‌ನಿಂದ ಬಂದಿದ್ದ ಶಬ್ನಮ್ ಬಾನೋ ಎಂಬಾಕೆ ಪಡಿತರಚೀಟಿ ಹೊಂದಿದ್ದರೂ ೧೦ ವರ್ಷಗಳಿಂದ ಯಾವುದೇ ಪಡಿತರವನ್ನು ಪಡೆದಿಲ್ಲಎಂದರು. “ನನ್ನ ಬಡತನವನ್ನು ಸಾಬೀತುಪಡಿಸಲು ನಾನು ಕೆಲವು ಪ್ರಮಾಣಪತ್ರಗಳನ್ನು ಸಲ್ಲಿಸಬೇಕು ಎಂದು ನನಗೆ ತಿಳಿಸಲಾಯಿತು. ನಾನು ಹತಾಶಳಾಗಿದ್ದೆ. ಕೋವಿಡ್ ಸಮಯದಲ್ಲಿಅಕ್ಷರಶಃಆಹಾರಕ್ಕಾಗಿ ಭಿಕ್ಷೆ ಬೇಡಬೇಕಾದಕಷ್ಟದ ಸಮಯವನ್ನು ನಾವು ಎದುರಿಸಿದ್ದೇವೆ. ಈ ಅವಧಿಯಲ್ಲಿ ಎಐಡಿಡಬ್ಲ್ಯುಎ ವತಿಯಿಂದ ನಡೆಯುತ್ತಿರುವ ಪಡಿತರ ಸಮೀಕ್ಷೆಯಲ್ಲಿ ಭಾಗವಹಿಸಿದ್ದೆ. ಸಮೀಕ್ಷೆಯ ಮೂಲಕ ಸಮಸ್ಯೆಗಳನ್ನು ಎದುರಿಸುತ್ತಿರುವವಳು ನಾನೊಬ್ಬಳೇ ಅಲ್ಲ ಎಂದು ಅರಿತುಕೊಂಡೆ; ಪಡಿತರಚೀಟಿ ಹೊಂದಿರುವ ಅನೇಕ ಮಹಿಳೆಯರಿಗೆ ಪಡಿತರ ಸಿಗುತ್ತಿಲ್ಲ. ಸಂಘಟನೆಯ ನೆರವಿನಿಂದ ಬೃಹತ್ ಪ್ರತಿಭಟನೆ ನಡೆಸಿ, ಮಹಿಳೆಯರು ಕಲೆಕ್ಟರೇಟ್‌ಗೆ ಘೇರಾವ್ ಹಾಕಿದರು.

ಅವರು ತಮ್ಮ ಜ್ಞಾಪಕ ಪತ್ರದೊಂದಿಗೆ ಕಲೆಕ್ಟರ್‌ಗೆ ಹೋದಾಗ ಕೇಂದ್ರ ಸರ್ಕಾರವು ಈಗ ಇ ಮಿತ್ರ ಪೋರ್ಟಲ್‌ನ್ನು ಮುಚ್ಚಿದೆ, ಏಕೆಂದರೆ ಒಂದೊಂದು ಗ್ರಾಮದಿಂದ ನಿರ್ದಿಷ್ಟ ಸೀಮಿತ ಸಂಖ್ಯೆಯ ಜನರು ಮಾತ್ರ ಪಡಿತರಕ್ಕೆ ಅರ್ಹರು ಎಂದು ಪರಿಗಣಿಸಲಾಗುವುದು ಎಂದು ತಿಳಿಸಿದರು. ನಿಗದಿಪಡಿಸಿದ ಸಂಖ್ಯೆಯನ್ನು ತಲುಪಿದಾಗ ಪೋರ್ಟಲ್ ಸ್ವಯಂಚಾಲಿತವಾಗಿ ಮುಚ್ಚಲ್ಪಡುತ್ತದೆ. ಅಂದರೆ ಬಹಳಷ್ಟು ಅರ್ಹ ಕುಟುಂಬಗಳು ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಧಾನ್ಯಗಳನ್ನು ಪಡೆಯಲು ಅರ್ಹರೆಂದು ಪರಿಗಣಿಸಲಾಗಿಲ್ಲ. ಇದುಸಾರ್ವಜನಿಕ ವಿತರಣಾ ವ್ಯವಸ್ಥೆಯಿಂದ ಅಡಿಯಲ್ಲಿ ಅನೇಕ ಮಹಿಳೆಯರು ಮತ್ತು ಬಡ ಕುಟುಂಬಗಳನ್ನು ಹೊರಗಿಡುವುದನ್ನು ಸೂಚಿಸುತ್ತದೆ ಎಂದು ಬಾನೋ ಹೇಳಿದರು.

ಒಡಿಶಾದ ಖುರ್ದಾ ಜಿಲ್ಲೆಯ ಬಿಮಾಲಿ ನಾಯಕ್, ಕಿರು ಸಾಲ ಸಂಸ್ಥೆಗಳಿಗೆ (ಎಂಎಫ್‌ಐ) ಸಾಲವನ್ನು ಕುಟುಂಬವು ಮರುಪಾವತಿಸಲು ಸಾಧ್ಯವಾಗದ ಕಾರಣ ತನ್ನ ಪತಿ ಆತ್ಮಹತ್ಯೆಯಿಂದ ಸಾವನ್ನಪ್ಪಿದರು ಎಂದು ಹೇಳಿದರು.“ಬ್ಯಾಂಕ್‌ನಿಂದ ಸಾಲವನ್ನು ಪಡೆಯಲು ಸಾಧ್ಯವಾಗದೆ, ಬಡ ಮತ್ತು ಅವಿದ್ಯಾವಂತ ಮಹಿಳೆಯರು ಎಂಎಫ್‌ಐ ಗಳಿಂದ ಸಾಲವನ್ನು ಪಡೆಯ ಬೇಕಾಗಿ ಬರುತ್ತದೆ.ಅದು ಕೇವಲ ಎರಡು ದಾಖಲೆಗಳನ್ನು – ಫೋಟೋ ಮತ್ತು ಆಧಾರ್‌ಕಾರ್ಡ್‌ ಮೇಲೆ ಸಾಲ ಕೊಡುತ್ತದಾದರೂ, ಬಡ್ಡಿದರವು ತುಂಬಾ ಹೆಚ್ಚು, ಇದು ಮಹಿಳೆಯರ ಶೋಷಣೆಗೆ ಕಾರಣವಾಗುತ್ತದೆ, ಏಕೆಂದರೆ ಅವರಲ್ಲಿ ಹೆಚ್ಚಿನವರು 22%ದಿಂದ ಆರಂಭವಾಗುವ ಈ ದರಗಳನ್ನು ಪಾವತಿಸುವ ಸ್ಥಿತಿಯಲ್ಲಿಲ್ಲ. ಎಂಎಫ್‌ಐ ಏಜೆಂಟ್‌ಗಳು ಆಗಾಗ್ಗೆ ಯಾರಾದರೂ ಸುಸ್ತಿದಾರರಾದಾಗ ಅಥವಾ ಕಂತು ಪಾವತಿ ಮಾಡುವಲ್ಲಿ ಅನಿಯಮಿತವಾಗಿದ್ದಾಗ ಮಹಿಳೆಯರನ್ನು “ದುರುಪಯೋಗ, ಅವಮಾನ ಮತ್ತು ಕಿರುಕುಳ”ಗಳಿಗೆ ಒಳಪಡಿಸುತ್ತಾರೆ.ಕ್ರಮೇಣ ಅನೇಕ ಮಹಿಳೆಯರು ಸಾಲದ ಬಲೆಗೆ ಸಿಲುಕಿದರು ಮತ್ತು ಈ ಬಲೆಯಿಂದ ಹೊರಬರಲು, ಅವರು ತಮ್ಮ ಪಾತ್ರೆಗಳು, ಇತರ ಗೃಹೋಪಯೋಗಿ ವಸ್ತುಗಳು ಮತ್ತು ಪಡಿತರ ಚೀಟಿಗಳನ್ನು ಸಹ ಅಡಮಾನ ಇಡಬೇಕಾಗಿ ಬಂತು ಎಂದು ಅವರು ಹೇಳಿದರು. ಸರಕಾರದ ಬ್ಯಾಂಕುಗಳು ಕಡಿಮೆ ಬಡ್ಡಿದರಗಳಲ್ಲಿ ಸಾಲ ಕೊಡುವಂತಿದ್ದರೆ, ಹಲವಾರು ಮಹಿಳೆಯರು ಘನತೆಯಿಂದ ಬದುಕಲು ಸಾಧ್ಯವಾಗುತ್ತಿತ್ತು ಎಂದು ಬಿಮಾಲಿ ನಾಯಕ್ ಹೋರಾಟಗಳಿಂದ ಮಾತ್ರ ಜೀವನೋಪಾಯದ ಸಮರಗಳನ್ನು ಗೆಲ್ಲಲು ಸಾಧ್ಯಎಂದರು.

ಇಂತಹ ಹಲವು ಮಹಿಳೆಯರ ಅನುಭವಗಳನ್ನು ಕೇಳಿದ ನಂತರ ಸಮಾವೇಶ ಅಂಗೀಕರಿಸಿದ ನಿರ್ಣಯಕೇಂದ್ರ ಸರ್ಕಾರದ ಕಾರ್ಪೊರೇಟ್ ಪರವಾದ ನೀತಿಗಳನ್ನು ಹಿಮ್ಮೆಟ್ಟಿಸಬೇಕು, ಮತ್ತು ಮಹಿಳಾ ಕಲ್ಯಾಣಕ್ಕಾಗಿ ಹಂಚಿಕೆಗಳನ್ನು ಹೆಚ್ಚಿಸಬೇಕು, ಆಹಾರ ಮತ್ತು ಇತರ ಅಗತ್ಯ ವಸ್ತುಗಳ ಮೇಲಿನ ಜಿಎಸ್‌ಟಿ ಹೇರಿಕೆಯನ್ನು ಹಿಂಪಡೆಯಬೇಕು ಮತ್ತು ಸಂಪನ್ಮೂಲ ಸಂಗ್ರಹಕ್ಕೆ ಅತಿ ಶ್ರೀಂತರ ಮೇಲೆ ಸಂಪತ್ತು ಮತ್ತು ವಾರಸುದಾರಿಕೆ ತೆರಿಗೆಯನ್ನು ಹಾಕಬೇಕು ಎಂದು ಆಗ್ರಹಿಸಿತು.

2020ರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದುಗೊಳಿಸಲು ಹೋರಾಡಲು ನಿರ್ಧರಿಸಿದ ಸಮಾವೇಶನಿಲ್ಲಿಸಿದ ವಿದ್ಯಾರ್ಥಿವೇತನಗಳನ್ನು ಮತ್ತೆ ಕೊಡಬೇಕು ಎಂದು ಆಗ್ರಹಿಸಿದೆ.
ಪಡಿತರ ವ್ಯವಸ್ಥೆಯನ್ನು ಸೀಮಿತಗೊಳಿಸುವ, ಆಧಾರ್‌ನೊಂದಿಗೆ ಜೋಡಿಸುವ ಮತ್ತು ಬಯೋಮೆಟ್ರಿಕ್ ಯಂತ್ರಗಳನ್ನು ಬಳಸುವುದನ್ನು ವಿರೋಧಿಸಿದ ಸಮಾವೇಶ ಎಲ್ಲಾಅಗತ್ಯ ವಸ್ತುಗಳ ಬೆಲೆಗಳನ್ನು ನಿಯಂತ್ರಿಸಲು ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿತು. ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಸಾರ್ವತ್ರಿಕಗೊಳಿಸಿ; ಅಂಗನವಾಡಿ, ಮಧ್ಯಾಹ್ನದ ಊಟ ಮತ್ತು ಆಶಾ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರೆಂದು ಮಾನ್ಯ ಮಾಡಿ; ಮನರೇಗವನ್ನು ಸರಿಯಾಗಿ ಅನುಷ್ಠಾನಗೊಳಿಸಿ ಮತ್ತು ಒಂದು ಕೇಂದ್ರೀಯ ನಗರ ಉದ್ಯೋಗ ಖಾತ್ರಿ ಕಾಯ್ದೆಯನ್ನು ಜಾರಿಗೊಳಿಸಿ ಎಂದು ಸಮಾವೇಶ ಒತ್ತಾರಿಸಿದೆ.

“ನಾವು ಕನಿಷ್ಠ 200 ದಿನಗಳ ಉದ್ಯೋಗಖಾತರಿ, ತಕ್ಷಣದ ವೇತನ ಪಾವತಿ ಮತ್ತು ಆಧಾರ್ ಕಾರ್ಡ್‌ಗಳು ಮತ್ತು ಆನ್‌ಲೈನ್ ಹಾಜರಾತಿಯಿಂದ ಯೋಜನೆಯನ್ನು ಡಿಲಿಂಕ್ ಮಾಡಬೇಕೆಂದು ಒತ್ತಾಯಿಸುತ್ತೇವೆ; ಎಂಎಫ್‌ಐಗಳ ಮೇಲೆ ಕಟ್ಟುನಿಟ್ಟಾದ ನಿಯಂತ್ರಣ ಮತ್ತು ಬಡ್ಡಿದರಗಳ ಮೇಲೆ 12 ಶೇ. ಮಿತಿ,ಎಲ್ಲಾ ಮಹಿಳೆಯರಿಗೆ ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಂದ 4ಶೇ. ಬಡ್ಡಿದರದಲ್ಲಿ ಸಾಲ, ಋಣಭಾರದಲ್ಲಿರುವ ಎಸ್‌ಹೆಚ್‌ಜಿ ಮಹಿಳೆಯರಿಗೆ ಒಂದು ಬಾರಿಯ ಸಾಲಮನ್ನಾ ನೀಡಬೇಕು” ಎಂದು ಸಮಾವೇಶವು ಅಂಗೀಕರಿಸಿದ ನಿರ್ಣಯವನ್ನು ಹೇಳಿದೆ.

Donate Janashakthi Media

Leave a Reply

Your email address will not be published. Required fields are marked *