‘ಶಸ್ತ್ರಮೇವ ಜಯತೆ’: ಧರ್ಮದ ಹೆಸರಿನಲ್ಲಿ ಹಿಂಸೆಗೆ ಕರೆ – ಸರ್ಕಾರಗಳ ಮೌನ!?

‘ಸತ್ಯಮೇವ ಜಯತೆ …’ ಇದು ಕೇವಲ ಒಂದು ವಾಕ್ಯವಲ್ಲ. ಭಾರತ ದೇಶದ ಹೃದಯ, ಸಂವಿಧಾನದ ಮೌಲ್ಯ, ನ್ಯಾಯ–ಸಮಾನತೆ–ಮಾನವೀಯತೆಯ ಪ್ರತೀಕ. ಆದರೆ ಇಂದು ಉತ್ತರ ಭಾರತದ ಹಲವು ಭಾಗಗಳಲ್ಲಿ ಅದಕ್ಕೆ ಪರ್ಯಾಯವಾಗಿ ಕೇಳಿಬರುತ್ತಿರುವ ಘೋಷಣೆ – ಶಸ್ತ್ರಮೇವ ಜಯತೆ. ಅಂದರೆ, ಸತ್ಯವಲ್ಲ; ಶಸ್ತ್ರಗಳೇ ಜಯ ತರುತ್ತವೆ ಎಂಬ ಅಪಾಯಕಾರಿ ಮಾತುಗಳು, ಪ್ರಚೋಧನಾಕಾರಿ ಹೇಳಿಕೆಗಳು ದೇಶದ ತುಂಬೆಲ್ಲ ಕೇಳಿ ಬರುತ್ತಿವೆ.

– ಗುರುರಾಜ ದೇಸಾಯಿ

ಹೌದು…. 25 ವರ್ಷಗಳ ಕಾಲ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕನಾಗಿದ್ದ, ವಿಶ್ವ ಹಿಂದೂ ಪರಿಷತ್‌ನ ನಾಯಕತ್ವದಲ್ಲಿದ್ದ ಮಧುರಾಮ ಶರಣ್ ಶಿವಾ ಪ್ರಚೋಧನಾಕಾರಿ ಮಾತುಗಳನ್ನು ಆಡುತ್ತಲೇ ಇದ್ದಾರೆ. ಇಂದು ‘ಮಹಾರಾಜ್ ಜಿ’ ಎಂಬ ಹೆಸರಿನಲ್ಲಿ ಶಸ್ತ್ರಧಾರಿ ಯಾತ್ರೆಗಳ ಮುಖಾಂತರ ಜನರಲ್ಲಿ ಧ್ವೇಷ ಬಿತ್ತುವ ಕೆಲಸ ಮಾಡುತ್ತಿದ್ದಾರೆ. 2024ರ ಅಕ್ಟೋಬರ್‌ನಲ್ಲಿ ಸನ್ಯಾಸ ಸ್ವೀಕರಿಸಿದ ಬಳಿಕ ಕಾನ್ಪುರದಲ್ಲಿ ‘ಶಿವಶಕ್ತಿ ಅಖಾಡ’ ಸ್ಥಾಪಿಸಿದ ಮಧುರಾಮ ಶರಣ್ ಶಿವಾ, ಉತ್ತರ
ಪ್ರದೇಶದ ಹಲವು ಜಿಲ್ಲೆಗಳಲ್ಲಿ 200ಕ್ಕೂ ಹೆಚ್ಚು ಶಸ್ತ್ರಧಾರಿ ಪಾದಯಾತ್ರೆಗಳನ್ನು ನಡೆಸಿದ್ದಾರೆ. ಈ ಯಾತ್ರೆಗಳ ಉದ್ದೇಶ ಸ್ಪಷ್ಟ: “ಹಿಂದೂಗಳು ಅಪಾಯದಲ್ಲಿದ್ದಾರೆ” ಎಂಬ ಭಯವನ್ನು ಹರಡಿ, ಯುವಕರನ್ನು ಶಸ್ತ್ರ ಹಿಡಿಯಲು ಸಿದ್ಧಪಡಿಸಲಾಗುತ್ತಿದೆ. ಶಸ್ತ್ರ

18ರಿಂದ 30 ವರ್ಷದ ಯುವಕರಿಗೆ ಉದ್ದೇಶಿಸಿ ಮಾತನಾಡುವ ಭಾಷಣಗಳಲ್ಲಿ “ನಾವು ಕತ್ತರಿಸುತ್ತೇವೆ”, “ಅಧರ್ಮಿಗಳನ್ನು ನಾಶ ಮಾಡಬೇಕು”, ಅವರ ಮೇಲೆಗುಂಡು ಹಾರಿಸಬೇಕು” ಎಂದು ಇತರ ಧರ್ಮಗಳ ಮೇಲೆ ಧ್ವೇಷ ಬಿತ್ತುವ ಭಾಷಣ ಮಾಡುತ್ತಲೇ ಇದ್ದಾರೆ. ಇತ್ತೀಚೆಗೆ ಜನವರಿ 10 ರಂದು ಇಂತಹದ್ದೆ ಧ್ವೇಷ ಭಾಷಣ ಮಾಡಿದ್ದಾರೆ. ಮುಸ್ಲಿಂ ಮತ್ತು ಕ್ರೈಸ್ತ ಸಮುದಾಯಗಳ ವಿರುದ್ಧ ಸಾಮಾಜಿಕ ಹಾಗೂ ಆರ್ಥಿಕ ಬಹಿಷ್ಕಾರಕ್ಕೆ ಇಲ್ಲಿ ಕರೆ ನೀಡಲಾಗುತ್ತಿದೆ. “ಹೋರಾಡಲು ಆಗದಿದ್ದರೆ, ಆರ್ಥಿಕ ಬಹಿಷ್ಕಾರ ಮಾಡಿ”, ಬಹಿಷ್ಕಾರ ಹಿಂಸೆಯ ಮೊದಲ ಹೆಜ್ಜೆ ಎಂಬುದು ಇತಿಹಾಸಕ್ಕೆ ತಿಳಿದ ಸತ್ಯ. ಯಾವುದೇ ಸಮುದಾಯವನ್ನು ‘ಶತ್ರು’ ಎಂದು ಗುರುತಿಸಿದ ಕ್ಷಣದಿಂದಲೇ, ಹಿಂಸೆ ಮಾಡಿ ಎಂದು ಕರೆ ನೀಡಲಾಗಿದೆ. ಶಸ್ತ್ರ

ಇದನ್ನೂ ಓದಿ: ಎಚ್. ವಿ. ಅನಂತಸುಬ್ಬರಾವ್ ನಿಧನ; ಸಿಐಟಿಯು ಸಂತಾಪ

ಕರ್ನಾಟಕದಲ್ಲಿಯೂ ಆರ್‌ಎಸ್‌ಎಸ್‌ ನಾಯಕರಾದ ಕಲ್ಲಡ್ಕ್‌ ಪ್ರಭಾಕರ್‌ ಭಟ್‌, ಜಗದೀಶ್‌ ಕಾರಂತ್‌, ಚಕ್ರವರ್ತಿ ಸೂಲಿಬೆಲೆ, ಸಂಸದ ತೇಜಸ್ವಿ ಸೂರ್ಯ, ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ, ಮಾಜಿ ಸಂಸದ ಪ್ರತಾಪ್‌ ಸಿಂಹ ಸೇರಿದಂತೆ ಬಹಳಷ್ಟು ಹಿಂದುತ್ವ ಸಂಘಟನೆಯ ನಾಯಕರು ದ್ವೇಷ ಭಾಷಣ ಮಾಡುವುದನ್ನು ನೋಡುತ್ತಿದ್ದೇವೆ. ಕೊಂದವನು ಮುಸ್ಲಿಂನಾಗಿದ್ದರೆ ಕೋಮುದ್ಷೇಷದ ಭಾಷಣ ಮಾಡುತ್ತಾರೆ, ಕೊಂದವನು ಹಿಂದುವಾಗಿದ್ದರೆ ಅವನಿಗೆ ಆರತಿ ಎತ್ತಿ ಮತ್ತೊಂದು ಕೊಲೆ ಮಾಡಲು ಪ್ರೇರಣೆ ನೀಡುವ ಘಟನೆಗಳು ನಡೆಯುತ್ತಲೇ ಇವೆ. ಶಸ್ತ್ರ

ಕಾನೂನು ಏನು ಹೇಳುತ್ತದೆ?

ಭಾರತದಲ್ಲಿ ದ್ವೇಷ ಭಾಷಣವನ್ನು ನಿಯಂತ್ರಿಸಲು ಕಾನೂನುಗಳ ಕೊರತೆಯಿಲ್ಲ; ಆದರೆ ಅವುಗಳ ಜಾರಿಗೆ ಇರುವ ರಾಜಕೀಯ ಇಚ್ಛಾಶಕ್ತಿ ಕೊರತೆ. ಸಂವಿಧಾನವು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮಾನ್ಯ ಮಾಡಿದ್ದರೂ, ಅದೇ ಸಮಯದಲ್ಲಿ ದ್ವೇಷ, ಹಿಂಸೆ ಮತ್ತು ವೈಷಮ್ಯ ಹರಡುವ ಭಾಷಣಕ್ಕೆ ಯಾವುದೇ ರಕ್ಷಣೆಯನ್ನು ನೀಡಿಲ್ಲ. ಆದರೂ ವಾಸ್ತವದಲ್ಲಿ, ದ್ವೇಷ ಭಾಷಣವು ಬಹುಸಾರಿ “ಮಾತಿನ ಸ್ವಾತಂತ್ರ್ಯ” ಎಂಬ ಮುಖವಾಡದೊಳಗೆ ಮರೆಮಾಡಲ್ಪಡುತ್ತದೆ. ಇದು ಸಂವಿಧಾನದ ಆತ್ಮಕ್ಕೆ ನೇರ ವಿರೋಧ.

ಭಾರತೀಯ ಸಂವಿಧಾನದ ಅನುಚ್ಛೇದ 19(1)(a) ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಒದಗಿಸಿದರೆ, 19(2) ಅದರ ಮಿತಿಗಳನ್ನು ಸ್ಪಷ್ಟವಾಗಿ ನಿರ್ದಿಷ್ಟಪಡಿಸುತ್ತದೆ. ಸಾರ್ವಜನಿಕ ಶಾಂತಿ, ಸುವ್ಯವಸ್ಥೆ, ನೈತಿಕತೆ ಮತ್ತು ಇತರರ ಹಕ್ಕುಗಳಿಗೆ ಧಕ್ಕೆ ಉಂಟುಮಾಡುವ ಭಾಷಣಕ್ಕೆ ಸಂವಿಧಾನಾತ್ಮಕ ಅನುಮತಿ ಇಲ್ಲ. ಅಂದರೆ, ದ್ವೇಷ ಭಾಷಣವನ್ನು “ಸ್ವಾತಂತ್ರ್ಯದ ಭಾಗ”ವೆಂದು ಸಮರ್ಥಿಸುವುದು ಕಾನೂನಾತ್ಮಕವಾಗಿಯೂ ತಪ್ಪು, ರಾಜಕೀಯವಾಗಿಯೂ ಅಪಾಯಕಾರಿ.

ದ್ವೇಷ ಭಾಷಣಕ್ಕೆ ಸಂಬಂಧಿಸಿದ ನಿರ್ದಿಷ್ಟ ಸೆಕ್ಷನ್‌ಗಳು ಈ ರೀತಿ ಹೇಳುತ್ತವೆ

1. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 196 ಪ್ರಕಾರ, ಧರ್ಮ, ಜಾತಿ, ಭಾಷೆ, ಪ್ರದೇಶ ಅಥವಾ ಸಮುದಾಯದ ಆಧಾರದಲ್ಲಿ ವಿಭಿನ್ನ ಗುಂಪುಗಳ ನಡುವೆ ದ್ವೇಷ, ಶತ್ರುತ್ವ ಅಥವಾ ವೈಷಮ್ಯವನ್ನು ಪ್ರಚೋದಿಸುವ ಮಾತು, ಬರಹ, ಸಂಕೇತ ಅಥವಾ ಪ್ರಕಟಣೆ ಮಾಡಿದರೆ ಅದನ್ನು ಅಪರಾಧವೆಂದು ಪರಿಗಣಿಸಲಾಗುತ್ತದೆ.

2. ಸೆಕ್ಷನ್ 197 ಪ್ರಕಾರ, ಯಾವುದೇ ಸಮುದಾಯವನ್ನು ರಾಷ್ಟ್ರವಿರೋಧಿ ಎಂದು ಚಿತ್ರಿಸುವುದು ಅಥವಾ ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆಗೆ ಧಕ್ಕೆ ಉಂಟುಮಾಡುವ ರೀತಿಯಲ್ಲಿ ಹೇಳಿಕೆ ನೀಡುವುದು ಶಿಕ್ಷಾರ್ಹ ಅಪರಾಧವಾಗುತ್ತದೆ.

3. ಸೆಕ್ಷನ್ 299 ಪ್ರಕಾರ, ಯಾವುದೇ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಉದ್ದೇಶಪೂರ್ವಕವಾಗಿ ಮತ್ತು ದುರುದ್ದೇಶದಿಂದ ಅವಮಾನಿಸುವ ಕ್ರಿಯೆಗಳು ಅಪರಾಧವಾಗಿದ್ದು, ಅವಕ್ಕೆ ಕ್ರಿಮಿನಲ್ ಶಿಕ್ಷೆ ವಿಧಿಸಲಾಗುತ್ತದೆ.

4. ಸೆಕ್ಷನ್ 300 ಪ್ರಕಾರ, ಯಾರಾದರೂ ಮತ್ತೊಬ್ಬರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ಉದ್ದೇಶದಿಂದ ಮಾತು, ಶಬ್ದ, ಸಂಕೇತ ಅಥವಾ ಧ್ವನಿ ಮಾಡಿದರೆ ಅದು ದಂಡನೀಯ ಅಪರಾಧವಾಗುತ್ತದೆ.

5. ಸೆಕ್ಷನ್ 356 ಪ್ರಕಾರ, ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವಂತಹ ವದಂತಿ, ಪ್ರಚೋದನಕಾರಿ ಹೇಳಿಕೆ ಅಥವಾ ವರದಿಯನ್ನು ಹರಡಿದರೆ, ಅಥವಾ ಸಮುದಾಯಗಳ ನಡುವೆ ದ್ವೇಷವನ್ನು ಹೆಚ್ಚಿಸುವ ಉದ್ದೇಶದಿಂದ ಹೇಳಿಕೆ ನೀಡಿದರೆ, ಕಠಿಣ ಕಾನೂನು ಕ್ರಮಕ್ಕೆ ಒಳಪಡಿಸಲಾಗುತ್ತದೆ.

ಆದರೆ ಈ ಕಾನೂನುಗಳು ಯಾಕೆ ರಾಜ್ಯಗಳಲ್ಲಿ ಜಾರಿಯಾಗುವುದಿಲ್ಲ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಲೇ ಇರುತ್ತದೆ. ರಾಜ್ಯವು ಯಾವತ್ತೂ ವರ್ಗಸ್ವಭಾವ ಹೊಂದಿದ್ದು, ಆಡಳಿತ ವರ್ಗಗಳ ಹಿತಾಸಕ್ತಿಯನ್ನು ರಕ್ಷಿಸುವಂತೆ ಕಾರ್ಯನಿರ್ವಹಿಸುತ್ತದೆ. ಅದಕ್ಕಾಗಿ, ಅಧಿಕಾರದಲ್ಲಿರುವ ಪಕ್ಷ ಅಥವಾ ಪ್ರಭಾವಶಾಲಿ ಗುಂಪುಗಳಿಂದ ಹೊರಬರುವ ದ್ವೇಷ ಭಾಷಣಗಳಿಗೆ ಕಾನೂನು ಮೌನವಾಗುತ್ತದೆ. ಆದರೆ ಅದೇ ಭಾಷಣವನ್ನು ಶೋಷಿತ ಸಮುದಾಯಗಳು ಅಥವಾ ವಿರೋಧಿ ಧ್ವನಿಗಳು ಮಾಡಿದರೆ, ತಕ್ಷಣವೇ ಕಾನೂನು ಚುರುಕಾಗುತ್ತದೆ. ಇದು ಕಾನೂನಿನಲ್ಲಿರುವ ವರ್ಗಪಾತಕತೆಯ ಸ್ಪಷ್ಟ ಉದಾಹರಣೆ.

ಚುನಾವಣೆ ಸಮಯದಲ್ಲಿ ದ್ವೇಷ ಭಾಷಣವನ್ನು ನಿಯಂತ್ರಿಸುವ ಜವಾಬ್ದಾರಿ ಚುನಾವಣಾ ಆಯೋಗದ ಮೇಲಿದೆ. ಮಾದರಿ ನೀತಿ ಸಂಹಿತೆಯಡಿ ದ್ವೇಷ ಹರಡುವ ಭಾಷಣಕ್ಕೆ ಕ್ರಮ ಕೈಗೊಳ್ಳಬಹುದಾದ ಅಧಿಕಾರ ಇದ್ದರೂ, ರಾಜಕೀಯ ಒತ್ತಡಗಳು ಈ ಸಂಸ್ಥೆಯ ಸ್ವಾಯತ್ತತೆಯನ್ನು ದುರ್ಬಲಗೊಳಿಸುತ್ತವೆ. ಪರಿಣಾಮವಾಗಿ, ದ್ವೇಷ ಭಾಷಣವು “ರಾಜಕೀಯ ಭಾಷಣ” ಎಂಬ ಹೆಸರಿನಲ್ಲಿ ಸಹನೀಯವಾಗುತ್ತದೆ, ಆದರೆ ಪ್ರಜಾಸತ್ತಾತ್ಮಕ ಚರ್ಚೆಯ ಮಟ್ಟ ಮಾತ್ರ ಕುಸಿಯುತ್ತದೆ.

ಸಾಮಾಜಿಕ ಮಾಧ್ಯಮಗಳ ವಿಷಯದಲ್ಲಿ, ಐಟಿ ಕಾಯ್ದೆ ಮತ್ತು ಪ್ಲಾಟ್‌ಫಾರ್ಮ್ ಮಾರ್ಗಸೂಚಿಗಳು ಇದ್ದರೂ, ಅವುಗಳ ಜಾರಿಗೆ ದ್ವಂದ್ವ ಸ್ಪಷ್ಟವಾಗಿದೆ. ದ್ವೇಷ ಹರಡುವ ವಿಷಯಗಳು ಬಹುಸಾರಿ ಉಳಿದುಕೊಳ್ಳುತ್ತವೆ; ಅದನ್ನು ಪ್ರಶ್ನಿಸುವ, ರಾಜ್ಯದ ವಿರುದ್ಧ ಧ್ವನಿ ಎತ್ತುವ ವಿಷಯಗಳು ಮಾತ್ರ ತಕ್ಷಣವೇ ಅಳಿಸಲ್ಪಡುತ್ತವೆ. ಇದು ರಾಜ್ಯ–ಕಾರ್ಪೊರೇಟ್–ಟೆಕ್ ಕಂಪನಿಗಳ ಮೈತ್ರಿ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತೋರಿಸುತ್ತದೆ.

ದ್ಷೇಷ ಭಾಷಣ ಮಾಡಿದವರ ಮೇಲೆ ಪೊಲೀಸರು ಸ್ವಯಂ ಪ್ರೇರಿತವಾಗಿ ಎಫ್‌ಐಆರ್ ದಾಖಲಿಸಬೇಕು, ದೂರುಗಾಗಿ ಕಾಯಬೇಕಿಲ್ಲ ಎಂದೂ ಸುಪ್ರೀಂ ಕೋರ್ಟ್‌ 2023ರಲ್ಲಿ ಆದೇಶ ಹೊರಡಿಸಿದೆ. ಆದರೂ ಇನ್ನೂ ದ್ವೇಷ ಭಾಷಣಗಳು ನಿಂತಿಲ್ಲ. ಸೆಂಟರ್ ಫಾರ್ ದಿ ಸ್ಟಡಿ ಆಫ್ ಆರ್ಗನೈಸ್ಡ್ ಹೇಟ್' ಸರ್ವೆ ಪ್ರಕಾರ 2025ರಲ್ಲಿ, ದ್ವೇಷ ಭಾಷಣ ಘಟನೆಗಳ ಸಂಖ್ಯೆ 1,318 ಕ್ಕೆ ತಲುಪಿದೆ. 2024 ಹೋಲಿಕೆ ಮಾಡಿದರೆ ಆ ಸಂಖ್ಯೆ ಹೆಚ್ಚಳವಾಗಿದೆ. 1,165 ದ್ಷೇಷ ಭಾಷಣೆಗಳನ್ನು 2024 ರಲ್ಲಿ ಮಾಡಲಾಗಿತ್ತು.

ದ್ವೇಷ ಭಾಷಣ ಸಂಯೋಜಿತ ರಾಜಕೀಯ ಉಪಕರಣ

ಭಾರತದಲ್ಲಿ ದ್ವೇಷ ಭಾಷಣವನ್ನು ಕೇವಲ “ಅತಿರೇಕದ ಮಾತು”, “ಭಾವನಾತ್ಮಕ ಉದ್ರೇಕ” ಎಂದು ನೋಡುವುದು ತೀವ್ರ ರಾಜಕೀಯ ಅಂಧತ್ವ. ದ್ವೇಷ ಭಾಷಣವು ಆಡಳಿತ ವರ್ಗಗಳು ತಮ್ಮ ಆರ್ಥಿಕ ವಿಫಲತೆಗಳನ್ನು ಮುಚ್ಚಿಹಾಕಲು ಬಳಸುವ ಸಂಯೋಜಿತ ರಾಜಕೀಯ ಉಪಕರಣ. ಇದು ಸಹಜವಾಗಿ ಹುಟ್ಟಿದ ಭಾಷೆಯಲ್ಲ; ಇದು ಯೋಜಿತವಾಗಿ ನಿರ್ಮಿಸಲ್ಪಟ್ಟ, ಪೋಷಿಸಲ್ಪಟ್ಟ ಮತ್ತು ರಕ್ಷಿಸಲ್ಪಟ್ಟ ರಾಜಕೀಯ ಆಯುಧ. ಮೂಲಭೂತವಾಗಿ, ದ್ವೇಷ ಭಾಷಣದ ಗುರಿ ವರ್ಗ ಪ್ರಶ್ನೆಯನ್ನು ಹಿಮ್ಮೆಟ್ಟಿಸುವುದು. ಉದ್ಯೋಗ, ಭೂಮಿ, ಕೂಲಿ, ಆಹಾರ ಭದ್ರತೆ, ಶಿಕ್ಷಣ, ಆರೋಗ್ಯದಂತಹ ಪ್ರಶ್ನೆಗಳು ಜನಸಾಮಾನ್ಯರ ಮುಂದೆ ಬರಬಾರದು ಎಂಬ ಕಾರಣಕ್ಕೆ, ಆಡಳಿತ ವ್ಯವಸ್ಥೆ ಜನರನ್ನು ಧರ್ಮ–ಜಾತಿ–ಗುರುತಿನ ಹೆಸರಿನಲ್ಲಿ ವಿಭಜಿಸುತ್ತದೆ. ಕಾರ್ಮಿಕನು ತನ್ನ ಶೋಷಕನನ್ನು ಪ್ರಶ್ನಿಸುವ ಬದಲು, ತನ್ನಂತೆಯೇ ದುಡಿಯುವ ಮತ್ತೊಬ್ಬ ಸಮುದಾಯದ ಕಾರ್ಮಿಕನನ್ನು ಶತ್ರುವೆಂದು ನೋಡುವಂತೆ ಮಾಡುವುದು ದ್ವೇಷ ಭಾಷಣದ ನಿಜವಾದ ಕಾರ್ಯ.

ದ್ವೇಷ ಭಾಷಣದ ಮೊದಲ ಮತ್ತು ಅತ್ಯಂತ ಅಪಾಯಕಾರಿ ಪರಿಣಾಮವೆಂದರೆ ಸಮುದಾಯಗಳ ನಡುವಿನ ಸಾಮಾಜಿಕ ನಂಬಿಕೆಯ ಧ್ವಂಸ. ಉದಾಹರಣೆಗೆ, “ಒಂದು ಸಮುದಾಯ ದೇಶಕ್ಕೆ ಅಪಾಯ”, “ಅವರು ಒಳಗಿನ ಶತ್ರು” ಎಂಬ ರೀತಿಯ ಭಾಷಣಗಳು ಸಾರ್ವಜನಿಕ ವೇದಿಕೆಗಳಲ್ಲಿ ನಿರಂತರವಾಗಿ ಕೇಳಿಬಂದಾಗ, ಸಾಮಾನ್ಯ ಜನರ ಮನಸ್ಸಿನಲ್ಲಿ ಭಯ ಮತ್ತು ಅನುಮಾನದ ಬೀಜ ಮೊಳಕೆಯೊಡೆಯುತ್ತದೆ. ಇದರ ಪರಿಣಾಮವಾಗಿ ನೆರೆಹೊರೆಯವರ ನಡುವಿನ ಸಂಬಂಧಗಳು ಕೂಡ ಸಂಶಯದ ಕಣ್ಣಿನಿಂದ ನೋಡಲ್ಪಡುತ್ತವೆ. ಮೊದಲು ಒಟ್ಟಿಗೆ ಬದುಕುತ್ತಿದ್ದ ಜನರು, ರಾಜಕೀಯ ಭಾಷಣಗಳಿಂದ ಪ್ರೇರಿತರಾಗಿ ಪರಸ್ಪರದಿಂದ ದೂರವಾಗುತ್ತಾರೆ.

ಸಾಮಾಜಿಕ ಮಾಧ್ಯಮಗಳು ಈ ದ್ವೇಷ ಭಾಷಣಕ್ಕೆ ವೇಗವರ್ಧಕಗಳಾಗಿ ಕಾರ್ಯನಿರ್ವಹಿಸುತ್ತಿವೆ. ಅಲ್ಗಾರಿದಮ್‌ಗಳು ಕೋಪ, ಭಯ, ದ್ವೇಷವನ್ನೇ ಹೆಚ್ಚು ಹರಡುವಂತೆ ವಿನ್ಯಾಸಗೊಳ್ಳುತ್ತವೆ. ಇದರ ಫಲವಾಗಿ, ಯುವ ಪೀಳಿಗೆಯಲ್ಲಿ ವಿಮರ್ಶಾತ್ಮಕ ಚಿಂತನೆಗೆ ಬದಲು ಘೋಷಣಾಧಾರಿತ ರಾಜಕೀಯ ಬೆಳೆದು ಬರುತ್ತಿದೆ. ಇದು ಪ್ರಜಾಸತ್ತಾತ್ಮಕ ಸಮಾಜಕ್ಕೆ ಅತ್ಯಂತ ಅಪಾಯಕಾರಿ ಬೆಳವಣಿಗೆ.

ಒಟ್ಟಿನಲ್ಲಿ, ಭಾರತದಲ್ಲಿ ದ್ವೇಷ ಭಾಷಣದ ವಿರುದ್ಧ ಇರುವ ಕಾನೂನುಗಳು ಕಾಗದದ ಮೇಲಷ್ಟೇ ಪರಿಣಾಮಕಾರಿಯಾಗಿವೆ. ಸಮಸ್ಯೆ ಕಾನೂನುಗಳ ಕೊರತೆಯಲ್ಲ, ಅವುಗಳನ್ನು ಜಾರಿಗೊಳಿಸುವ ರಾಜಕೀಯ ಇಚ್ಛಾಶಕ್ತಿಯ ಕೊರತೆಯಲ್ಲಿದೆ. ದ್ವೇಷ ಭಾಷಣವನ್ನು ತಡೆಹಿಡಿಯುವುದು ಎಂದರೆ ಕೇವಲ ಒಂದು ಅಪರಾಧವನ್ನು ನಿಯಂತ್ರಿಸುವುದಲ್ಲ; ಅದು ಜನರನ್ನು ವಿಭಜಿಸಿ, ವರ್ಗ ಹೋರಾಟವನ್ನು ಮರೆಮಾಚುವ ಸಂಪೂರ್ಣ ರಾಜಕೀಯ ವ್ಯವಸ್ಥೆಯನ್ನು ಪ್ರಶ್ನಿಸುವುದಾಗಿದೆ. ಆದ್ದರಿಂದ, ದ್ವೇಷ ಭಾಷಣದ ವಿರುದ್ಧದ ಹೋರಾಟವು ಕಾನೂನು ಹೋರಾಟದ ಜೊತೆಗೆ ರಾಜಕೀಯ ಹಾಗೂ ಸಾಮಾಜಿಕ ಹೋರಾಟವೂ ಆಗಬೇಕು.

ಇದನ್ನೂ ನೋಡಿ: ‘ಶಸ್ತ್ರಮೇವ ಜಯತೆ’: ಧರ್ಮದ ಹೆಸರಿನಲ್ಲಿ ಹಿಂಸೆಗೆ ಕರೆ – ಸರ್ಕಾರಗಳ ಮೌನ!?Janashakthi Media

Donate Janashakthi Media

Leave a Reply

Your email address will not be published. Required fields are marked *