ಟ್ರಂಪ್ ವಾದಕ್ಕೆ ಕ್ಯಾಲಿಫೊರ್ನಿಯದಲ್ಲಿ ಭಾರೀ ಹಿನ್ನಡೆ, ಮುಖಭಂಗ

ಟ್ರಂಪ್ ಅಧ್ಯಕ್ಷೀಯ ಚುನಾವಣೆ ಸೋತರೂ ಟ್ರಂಪ್ ವಾದ ಸೋತಿಲ್ಲ. ಅಮೆರಿಕದ ಪಾರ್ಲಿಮೆಂಟಿನ ಮೇಲೆ ಭೌತಿಕ ದಾಳಿಯೊಂದಿಗೆ ಆರಂಭಿಸಿ, ಟ್ರಂಪ್ ವಾದದ ಮುಂದುವರಿಕೆಯಾಗಿ ಅಲ್ಲಿನ ಪ್ರಮುಖ ವಿರೋಧ ಪಕ್ಷವಾದ ರಿಪಬ್ಲಿಕನ್ ಪಕ್ಷ ಈಗಾಗಲೇ ದುರ್ಬಲವಾದ ಪ್ರಜಾಪ್ರಭುತ್ವದ ಮೇಲೆ ಹೊಸ ದಾಳಿಗಳನ್ನು ನಡೆಸುತ್ತಿದೆ. ಪಾರ್ಲಿಮೆಂಟಿನ ಮೇಲೆ ದಾಳಿ ಮಾಡಿದವರನ್ನು ಖುಲ್ಲಂ ಖುಲ್ಲಾ ಸಮರ್ಥಿಸುವುದು ಅಲ್ಲದೆ, ಅವರನ್ನು ‘ರಾಜಕೀಯ ಕೈದಿ’ಗಳಾಗಿ ಪರಿಗಣಿಸಬೇಕು ಎಂದು ವಾದಿಸಲಾಗುತ್ತದೆ. ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಗಳು ಚುನಾವಣೆ ಸೋತಾಗಲೆಲ್ಲ ಚುನಾವಣೆಯಲ್ಲಿ ಅಕ್ರಮಗಳ ಆಪಾದನೆ ಮಾಡಿ, ಫಲಿತಾಂಶವನ್ನು ನಿರಾಕರಿಸಲಾಗುತ್ತದೆ. ಚುನಾವಣೆಯಲ್ಲಿ ಕರಿಯರು, ಲ್ಯಾಟಿನೊ ಮುಂತಾದ ಅಲ್ಪಸಂಖ್ಯಾತರನ್ನು ಅನರ್ಹಗೊಳಿಸುವ ಹೊರಗಟ್ಟುವ ‘ಬದಲಾವಣೆ’ಗಳನ್ನು ರಿಪಬ್ಲಿಕನ್ ಆಳ್ವಿಕೆಯ ರಾಜ್ಯಗಳಲ್ಲಿ ತರಲಾಗುತ್ತಿದೆ. ತಮಗೆ ವಿರುದ್ಧವಾದ ಚುನಾವಣಾ ಫಲಿತಾಂಶಗಳನ್ನು ಎಲ್ಲ ಸಾಧ್ಯವಿರುವ ಕಾನೂನುಬದ್ಧ ಕಾನೂನು-ಬಾಹಿರ ಕ್ರಮಗಳಿಂದ ಬದಲಾಯಿಸಲು ಪ್ರಯತ್ನಿಸಲಾಗುತ್ತದೆ. ಕ್ಯಾಲಿಫೋರ್ನಿಯದಲ್ಲಿ ಇಂತಹ ರಿಪಬ್ಲಿಕನ್ ಪ್ರಯತ್ನಕ್ಕೆ ಭಾರೀ ಸೋಲಾಗಿದ್ದು ಅದಕ್ಕೆ ಮುಖಭಂಗವಾಗಿದೆ.

ಕ್ಯಾಲಿಫೋರ್ನಿಯ ರಾಜ್ಯದಲ್ಲಿ ಡೆಮೊಕ್ರಾಟಿಕ್ ಪಕ್ಷ ಬಲವಾಗಿದ್ದು ಅಲ್ಲಿ 2018ರ ಗವರ್ನರ್ ಚುನಾವಣೆಯಲ್ಲಿ ಡೆಮೊಕ್ರಾಟಿಕ್ ಪಕ್ಷದ ಗವಿನ್ ನ್ಯೂಸೊಮ್ ಭಾರೀ ಬಹುಮತದಿಂದ ಗೆದ್ದಿದ್ದರು. ಅವರ ಅವಧಿ ಮುಗಿಯಲು ಇನ್ನೂ 14 ತಿಂಗಳು ಇರುವಾಗಲೇ ಅವರನ್ನು ‘ಹಿಂದಕ್ಕೆ ಕರೆಯುವ’ ರಿಪಬ್ಲಿಕನ್ ಹತಾಶ ಪ್ರಯತ್ನಕ್ಕೆ ಭಾರೀ ಹಿನ್ನಡೆಯಾಗಿ ಅದಕ್ಕೆ ಮುಖಭಂಗವಾಗಿದೆ. ಕ್ಯಾಲಿಫೋರ್ನಿಯ ರಾಜ್ಯದಲ್ಲಿ (ಅಮೆರಿಕದಲ್ಲಿ ರಾಜ್ಯವಾರು ಹಲವು ಚುನಾವಣಾ ನಿಯಮಗಳು ಭಿನ್ನವಾಗಿರುತ್ತವೆ) ಇರುವ ಒಂದು ‘ಪ್ರಗತಿಪರ’ (ಆದರೆ ದುರ್ಬಲವಾದ) ಚುನಾವಣಾ ನಿಯಮದ ಪ್ರಕಾರ ಚುನಾಯಿತ ಪದವಿಗಳಿಗೆ ಆಯ್ಕೆಯಾದವರನ್ನು ‘ಹಿಂದಕ್ಕೆ ಕರೆಯುವ’ ಅವಕಾಶವಿದೆ. ಇದರ ದುರ್ಬಳಕೆ ಮಾಡಿ ರಿಪಬ್ಲಿಕ್ ಗವರ್ನರ್‌ನ್ನು ಸ್ಥಾಪಿಸುವ ಪ್ರಯತ್ನವನ್ನು ಮಾಡಲಾಯಿತು.

ಕ್ಯಾಲಿಫೋರ್ನಿಯ ಇತ್ತೀಚೆಗೆ ಕೋವಿಡ್‌ ಮತ್ತು ಪ್ರಾಕೃತಿಕ ವಿಕೋಪಗಳಿಂದಾಗಿ ಅಲ್ಲಿನ ಡೆಮೊಕ್ರಾಟಿಕ್ ಸರಕಾರ ಅದರ ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸಲು ಪ್ರಯತ್ನಿಸಿದರೂ, ಸಾಕಷ್ಟು ನ್ಯೂನತೆಗಳು ಉಳಿದು ಹೋಗಿ ಜನರಲ್ಲಿ ಅತೃಪ್ತಿ ಇತ್ತು. ಇದರ ದುರ್ಬಳಕೆ ಮಾಡಿ ‘ಹಿಂದಕ್ಕೆ ಕರೆಯುವ’ ಅವಕಾಶ ಬಳಸಿ ಗವರ್ನರ್ ಗವಿನ್ ನ್ಯೂಸೊಮ್ ಅವರನ್ನು ಇಳಿಸಿ, ರಿಪಬ್ಲಿಕನ್ ಗವರ್ನರ್ ಸ್ಥಾಪಿಸಲು ಹವಣಿಸಿತ್ತು. ಆದರೆ ನ್ಯೂಸೊಮ್ 2018ರಲ್ಲಿ ಬಂದ ಮತಗಳಿಗಿಂತ ಹೆಚ್ಚು (ಶೇ. 64) ಮತ ಗಳಿಸಿ ರಿಪಬ್ಲಿಕನ್ ಸಂಚು ಮಣ್ಣುಪಾಲಾಯಿತು. ಮತದಾನದ ಪ್ರಮಾಣ ಸಹ ಶೇ.60 ಇತ್ತು. ಸಾಮಾನ್ಯವಾಗಿ ಇಂತಹ ‘ಹಿಂದಕ್ಕೆ ಕರೆಯುವ’ ಚುನಾವಣೆಗಳಲ್ಲಿ ಮತದಾನ ಬಹಳ ಕಡಿಮೆಯಿರುತ್ತದೆ. ಆದರೆ ರಿಪಬ್ಲಿಕನ್ ಸಂಚನ್ನು ಸೋಲಿಸಲು ಜನ ಜಿದ್ದಿನಿಂದ ಬಂದು ಮತದಾನ ಮಾಡಿದ್ದಾರೆ ಎಂದು ಹೇಳಲಾಗಿದೆ.

ರಿಪಬ್ಲಿಕನ್ ಪಕ್ಷ ಆಳುವ ರಾಜ್ಯಗಳಲ್ಲಿ ಒಂದು ಕಡೆ ರಾಜ್ಯ ಸರಕಾರ ಅತ್ಯಂತ ಕೆಟ್ಟ ಕೋವಿಡ್‌ ನಿರ್ವಹಣೆ ಮಾಡಿದ್ದು, ಇನ್ನೊಂದು ಕಡೆ ಸಾಮಾಜಿಕವಾಗಿ ಇಡೀ ದೇಶದಲ್ಲಿ ವ್ಯಾಕ್ಸೀನ್ ಮತ್ತು ಇತರ ಕೋವಿಡ್‌-ನಿಯಂತ್ರಕ ಕ್ರಮಗಳ ವಿರುದ್ಧ ಧಾರ್ಮಿಕ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಸೋಗಿನಲ್ಲಿ ಅಪಪ್ರಚಾರ ಪ್ರತಿರೋಧ ಒಡ್ಡಿ ಪರಿಸ್ಥಿತಿಯನ್ನು ಹದಗೆಡಿಸಿತ್ತು. ಅದರಲ್ಲೂ ಡೆಮೊಕ್ರಾಟಿಕ್ ಆಳ್ವಿಕೆಯ ರಾಜ್ಯಗಳಲ್ಲಿ ಇಂತಹ ಅಪಪ್ರಚಾರ, ಪ್ರತಿರೋಧವನ್ನು ತಾರಕಕ್ಕೇರಿಸಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನ ಮಾಡಿತ್ತು. ಇವೆಲ್ಲವನ್ನೂ ದೇಶದ 8 ರಲ್ಲಿ ಒಬ್ಬ ಮತದಾರ ಇರುವ ರಾಜ್ಯವಾದ ಕ್ಯಾಲಿಫೋರ್ನಿಯ ನಿರ್ಣಾಯಕವಾಗಿ ಸೋಲಿಸಿ ರಾಜಕೀಯ ಪ್ರಬುದ್ಧತೆ ಪ್ರದರ್ಶಿಸಿದೆ.

ಕ್ಯಾಲಿಫೋರ್ನಿಯದಲ್ಲಿ ದುರ್ಬಲವಾಗಿರುವ ರಿಪಬ್ಲಿಕನ್ ಪಕ್ಷ ರಾಜ್ಯ ಮಟ್ಟದ, ವಿವಿಧ ನಗರ, ಕೌಂಟಿಗಳ 60 ವಿವಿಧ ಚುನಾಯಿತ ಪ್ರತಿನಿಧಿಗಳನ್ನು ಇಳಿಸಲು ಇಂತಹ ‘ಹಿಂದಕ್ಕೆ ಕರೆಯುವ’ ಪ್ರಕ್ರಿಯೆ ಆರಂಭಿಸಿದೆ. ಈ ಗವರ್ನರನ್ನು ‘ಹಿಂದಕ್ಕೆ ಕರೆಯುವ’ ಚುನಾವಣೆಗೆ 27 ಕೋಟಿ ಡಾಲರು ಖರ್ಚಾಗಿದೆ. ಇದು ಸಾರ್ವಜನಿಕ ಹಣದ ಪೋಲು. ಇಂತಹ 80ಕ್ಕೂ ಹೆಚ್ಚು ಪ್ರಯತ್ನಗಳು ನಡೆದಿದ್ದು ಒಂದು ಬಾರಿ ಮಾತ್ರ ಗವರ್ನರನ್ನು ಹಿಂದಕ್ಕೆ ಕರೆಯಲಾಗಿದೆ. ಹಾಗಾಗಿ ‘ಹಿಂದಕ್ಕೆ ಕರೆಯುವ’ ಅವಕಾಶದ ಪ್ರಗತಿಪರ ಚುನಾವಣಾ ನಿಯಮವನ್ನು ರಿಪಬ್ಲಿಕನ್ ಪಕ್ಷ ‘ಪ್ರಜಾಪ್ರಭುತ್ವ-ವಿರೋಧಿ’ ಹುನ್ನಾರಗಳಿಗೆ ಬಳಸುವುದನ್ನು ತಡೆಯಲು ಈ ನಿಯಮದಲ್ಲಿ ಸುಧಾರಣೆಗಳನ್ನು ತರಬೇಕೆಂಬ ಒತ್ತಾಯ ಬಂದಿದೆ. ಈಗ ಹಿಂದಿನ ಒಟ್ಟು ಮತದಾನದ ಶೇ.12ರಷ್ಟು ಮತದಾರರು ಸಹಿ ಮಾಡಿದಾಗ ಈ ಪ್ರಕ್ರಿಯೆ ಆರಂಭವಾಗುತ್ತದೆ. ಯಾವುದೇ ವೈಫಲ್ಯ ಅಥವಾ ಕಾರಣ ಬೇಕಾಗಿಲ್ಲ. ಇದಕ್ಕೆ 6 ತಿಂಗಳ ಸಮಯಾವಕಾಶವಿದೆ. ಇಂತಹ ಕ್ಷುಲ್ಲಕ ಪ್ರಕರಣಗಳನ್ನು ತಡೆಯಲು, ಕಾನೂನು-ಬಾಹಿರ, ಅನೈತಿಕ ಕ್ರಮಗಳ ಅಥವಾ ಪ್ರಮುಖ ವೈಫಲ್ಯಗಳ ನಿರ್ದಿಷ್ಟ ಕಾರಣ ಕೊಡಬೇಕು ಹಾಗೂ ಶೇ. 25ರಷ್ಟು ಮತದಾರರು 1 ತಿಂಗಳೊಳಗೆ ಸಹಿ ಹಾಕಬೇಕು ಎಂದು ಬದಲಾಯಿಸಬೇಕು. ಈಗ ‘ಹಿಂದಕ್ಕೆ ಕರೆಯುವ’ ಮತದಾನದೊಂದಿಗೆ ಅದರಲ್ಲಿ ಶೇ. 50ಕ್ಕಿಂತ ಹೆಚ್ಚು ಜನ ಹಿಂದಕ್ಕೆ ಕರೆಯಲು ಸಮ್ಮತಿಸಿದರೆ, ಮುಂದಿನ ಪ್ರತಿನಿಧಿ ಯಾರಾಗಬೇಕೆಂಬುದಕ್ಕೂ ಮತದಾನ ನಡೆಯುತ್ತದೆ. ಇದರಲ್ಲಿ ಹಿಂದಿನ ಪ್ರತಿನಿಧಿ ಅಭ್ಯರ್ಥಿಯಾಗುವಂತಿಲ್ಲ ಮತ್ತು ಅಲ್ಲಿರುವ ಅಭ್ಯರ್ಥಿಗಳಲ್ಲಿ ಹೆಚ್ಚಿನ ಮತ ಪಡೆಯುವ ವ್ಯಕ್ತಿ ಚುನಾಯಿತನಾಗುತ್ತಾನೆ. ಅಂದರೆ ಅಲ್ಪಸಂಖ್ಯಾತ ಮತ ಪಡೆಯುವ ಅಭ್ಯರ್ಥಿ ಸಹ ಚುನಾಯಿತನಾಗಬಹುದು. ಈಗಿನ ಪ್ರತಿನಿಧಿ ಅಭ್ಯರ್ಥಿ ಪಟ್ಟಿಯಲ್ಲಿರಬೇಕು ಎಂಬ ಬದಲಾವಣೆ ತರಬೇಕು ಎಂದು ಸೂಚಿಸಲಾಗಿದೆ.

Donate Janashakthi Media

Leave a Reply

Your email address will not be published. Required fields are marked *