ನವದೆಹಲಿ: ಫ್ರಾನ್ಸ್‌ನ ನ್ಯಾಯಾಲಯವೊಂದು ಬ್ರಿಟನ್‌ನ ಕೇರ್ನ್ ಎನರ್ಜಿ ಪಿಎಲ್‌ಸಿಗೆ 1.7 ಬಿಲಿಯನ್ ಯುಎಸ್ ಡಾಲರ್ ನಷ್ಟವನ್ನು ವಸೂಲಿ ಮಾಡಲು ಭಾರತ ಸರಕಾರದ ಸುಮಾರು 20 ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಸಂಸ್ಥೆಗೆ ಅವಕಾಶ ನೀಡಿದೆ ಎಂಬ ಮಾಹಿತಿ ತಿಳಿದುಬಂದಿದೆ.
ಭಾರತೀಯ ಸರ್ಕಾರಿ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಲು ಜೂನ್ 11 ರಂದು ಆದೇಶಿಸಿದೆ. ಇವುಗಳಲ್ಲಿ ಹೆಚ್ಚಿನವು ಫ್ಲ್ಯಾಟ್‌ಗಳಾಗಿದ್ದು, ಕಾನೂನು ಪ್ರಕ್ರಿಯೆಗಳು ಬುಧವಾರದಂದು ಪೂರ್ಣಗೊಂಡಿದೆ. ಹಿಂದಿನ ತೆರಿಗೆ ಬೇಡಿಕೆಯನ್ನು ಬದಲಿಸಿದ ಬಳಿಕ ಕೇರ್ನ್ ಎನರ್ಜಿಗೆ 1.2 ಬಿಲಿಯನ್ ಡಾಲರ್ ಮೊತ್ತದ ಜತೆಗೆ ಅದರ ಬಡ್ಡಿ ಮತ್ತು ದಂಡವನ್ನು ಕೂಡ ಮರಳಿಸುವಂತೆ ಭಾರತ ಸರಕಾರಕ್ಕೆ ಪಂಚಾಯಿತಿ ನ್ಯಾಯಮಂಡಳಿಯು ಕಳೆದ ವರ್ಷದ ಡಿಸೆಂಬರ್‌ನಲ್ಲಿ ಆದೇಶಿಸಿತ್ತು.
ಭಾರತ ಸರಕಾರವು ಈ ಆದೇಶವನ್ನು ಪಾಲಿಸಿರಲಿಲ್ಲ. ಹೀಗಾಗಿ ಭಾರತ ಸರ್ಕಾರಕ್ಕೆ ಸೇರಿದ ವಿದೇಶಗಳಲ್ಲಿನ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶ ನೀಡಬೇಕೆಂದು ಕೇರ್ನ್ ಎನರ್ಜಿ ಸಂಸ್ಥೆಯು ಕೋರ್ಟ್ ಮೆಟ್ಟಿಲೇರಿತ್ತು. ಇದರಂತೆ ಫ್ರಾನ್ಸ್‌ನಲ್ಲಿರುವ ಭಾರತದ 20 ಆಸ್ತಿಗಳ ಮುಟ್ಟುಗೋಲಿಗೆ ನ್ಯಾಯಾಲಯ ಅನುಮತಿ ನೀಡಿದೆ.
ಕೈರ್ನ್ ಎನರ್ಜಿಯು ಪೂರ್ವಾವಲೋಕನದಿಂದ ಸರ್ಕಾರ ತೆರಿಗೆ ಸಂಗ್ರಹಿಸಲು ಕ್ರಮ ಕೈಗೊಂಡ ಏಕೈಕ ಕಂಪನಿಯಾಗಿದೆ. 2006-2007ರಲ್ಲಿ ಕೇರ್ನ್ ಯುಕೆ ಕಂಪೆನಿಯು ತನ್ನ ಕೇರ್ನ್ ಇಂಡಿಯಾ ಹೋಲ್ಡಿಂಗ್ ಸಂಸ್ಥೆಯ ಷೇರುಗಳನ್ನು ಭಾರತದಲ್ಲಿನ ಅದರ ಕಂಪೆನಿ ಕೇರ್ನ್ ಇಂಡಿಯಾಕ್ಕೆ ವರ್ಗಾವಣೆ ಮಾಡಿತ್ತು.
ಕೇರ್ನ್ ಯುಕೆ ಬಂಡವಾಳ ಲಾಭ ಪಡೆದುಕೊಂಡಿರುವುದರಿಂದ ಅದು ಬಂಡವಾಳ ಲಾಭದ ತೆರಿಗೆಯನ್ನು ಪಾವತಿಸಬೇಕು ಎಂದು ಭಾರತದ ತೆರಿಗೆ ಅಧಿಕಾರಿಗಳು ಸೂಚಿಸಿದ್ದರು. ಆದರೆ ಇದಕ್ಕೆ ಕಂಪೆನಿ ಒಪ್ಪಿರಲಿಲ್ಲ. ಇದು ಕಾನೂನು ಸಮರಕ್ಕೆ ಎಡೆಮಾಡಿಕೊಟ್ಟಿತ್ತು.
ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ (ಐಟಿಎಟಿ) ಮತ್ತು ದಿಲ್ಲಿ ಹೈಕೋರ್ಟ್‌ಗಳಲ್ಲಿ ಹಲವು ಸುತ್ತಿನ ಕಾನೂನು ಪ್ರಕ್ರಿಯೆಗಳು ನಡೆದಿದ್ದವು. ಕೇರ್ನ್ ಸಂಸ್ಥೆಯು ಐಟಿಎಟಿಯಲ್ಲಿ ಸೋಲು ಕಂಡಿತ್ತು. ಆದರೆ ಬಂಡವಾಳ ಲಾಭದ ಮೌಲ್ಯನಿರ್ಣಯದ ಪ್ರಕರಣವು ಈಗಲೂ ಹೈಕೋರ್ಟ್‌ನಲ್ಲಿ ಬಾಕಿ ಉಳಿದಿದೆ.
2011ರಲ್ಲಿ ಕೇರ್ನ್ ಎನರ್ಜಿಯು ತನ್ನ ಬಹುಪಾಲು ಭಾಗವನ್ನು ಭಾರತದಲ್ಲಿನ ತನ್ನ ಉದ್ಯಮ ಕೇರ್ನ್ ಇಂಡಿಯಾದಿಂದ ಗಣಿ ದಿಗ್ಗಜ ವೇದಾಂತಕ್ಕೆ ಮಾರಾಟ ಮಾಡಿತು. ಆದರೆ ತೆರಿಗೆ ಸಮಸ್ಯೆಗಳನ್ನು ಮುಂದಿರಿಸಿ ತೆರಿಗೆ ಇಲಾಖೆಯು ಅದರ ಶೇ 10ರಷ್ಟು ಮಾರಾಟ ಮಾಡುವುದನ್ನು ನಿರ್ಬಂಧಿಸಿತ್ತು.
ಕೇರ್ನ್ ಇಂಡಿಯಾದಿಂದ ಬ್ರಿಟನ್‌ನ ಕೇರ್ನ್ ಎನರ್ಜಿಗೆ ಪಾವತಿಸಲಾದ ಡಿವಿಡೆಂಟ್ ಅನ್ನು ಕೂಡ ಹಿಡಿದುಕೊಳ್ಳಲಾಗಿತ್ತು. 2012ರಲ್ಲಿ ಭಾರತದ ಈ ಹಿಂದೆ ಪಾವತಿಸಬೇಕಿದ್ದ ತೆರಿಗೆ ವ್ಯವಸ್ಥೆಯನ್ನು ಪರಿಚಯಿಸಲಾಯಿತು. ಅದರ ಅನ್ವಯ 1962ರಿಂದ ಭಾರತದಲ್ಲಿ ಆಸ್ತಿ ಹೊಂದಿರುವ ಯಾವುದೇ ವಿದೇಶ ಕಂಪೆನಿಯು ತನ್ನ ಷೇರುಗಳ ವರ್ಗಾವಣೆಯಿಂದ ಪಡೆಯುವ ಬಂಡವಾಳ ಲಾಭದ ಮೇಲೆ ತೆರಿಗೆ ಪಾವತಿಸಬೇಕಿತ್ತು.
ಈ ಬಗ್ಗೆ 2014ರಲ್ಲಿ ಕೇರ್ನ್ ಸಂಸ್ಥೆಗೆ ತೆರಿಗೆ ಇಲಾಖೆ ಸೂಚನೆ ನೀಡಿತ್ತು. ಆದರೆ ತೆರಿಗೆ ಪಾವತಿಸಲು ನಿರಾಕರಿಸಿದ್ದ ಕೇರ್ನ್ ಎನರ್ಜಿ, ಅದರ ವಿರುದ್ಧ ಅಂತಾರಾಷ್ಟ್ರೀಯ ನ್ಯಾಯ ಪಂಚಾಯ್ತಿ ಮಂಡಳಿಯ ಮೊರೆ ಹೋಗಿತ್ತು. ಇದೀಗ ಅಲ್ಲಿ ಭಾರತದ ವಿರುದ್ಧ ತೀರ್ಪು ಬಂದಿದೆ.