ನವದೆಹಲಿ: ಹೆಣ್ಣು ಮಕ್ಕಳ ಮದುವೆಗೆ ನಿಗದಿಯಾಗಿದ್ದ ವಯಸ್ಸು ಈಗ 18 ರಿಂದ 21 ವರ್ಷಕ್ಕೆ ಏರಿಸಲು ಕೇಂದ್ರ ಸಚಿವ ಸಂಪುಟ ಸಭೆಯು ಅನುಮೋದನೆ ನೀಡಿದೆ. ಸಂಪುಟದ ಅನುಮೋದನೆ ನಂತರ ಬಾಲ್ಯ ವಿವಾಹ ನಿಷೇಧ ಕಾಯ್ದೆ 2006ಕ್ಕೆ ತಿದ್ದುಪಡಿಯಾಗಲಿದೆ. ಇದರ ಪರಿಣಾಮವಾಗಿ ವಿಶೇಷ ವಿವಾಹ ಕಾಯ್ದೆ ಮತ್ತು ಹಿಂದೂ ವಿವಾಹ ಕಾಯ್ದೆ 1955ರಂತಹ ವೈಯಕ್ತಿಕ ಕಾನೂನುಗಳಿಗೂ ತಿದ್ದುಪಡಿ ತರಲಾಗುತ್ತದೆ ಎಂದು ತಿಳಿದುಬಂದಿದೆ.
ಜಯಜೇಟ್ಲಿ ನೇತೃತ್ವದ ಕೇಂದ್ರದ ಕಾರ್ಯಪಡೆ ಸಮಿತಿಯು 2020ರ ಡಿಸೆಂಬರ್‌ನಲ್ಲಿ ನೀತಿ ಆಯೋಗಕ್ಕೆ ಸಲ್ಲಿಸಿದ್ದ ಶಿಫಾರಸ್ಸುನಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ. ತಾಯಿತನದ ವಯಸ್ಸಿಗೆ ಸಂಬಂಧಿಸಿದ ವಿಷಯಗಳು(ತಾಯಿಯ ಮರಣ ಪ್ರಮಾಣ) ಪೌಷ್ಟಿಕಾಂಶದ ಸುಧಾರಣೆಯನ್ನು ಕಡಿಮೆ ಮಾಡುವ ಅಗತ್ಯತೆಗಳನ್ನು ಪರಿಶೀಲಿಸಲು ಕಾರ್ಯಪಡೆ ರಚಿಸಲಾಗಿದೆ.
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ(ಎನ್‍ಎಫ್‍ಎಚ್‍ಎಸ್5 ) ಬಿಡುಗಡೆ ಮಾಡಿದ ಇತ್ತೀಚಿನ ಮಾಹಿತಿ ಪ್ರಕಾರ ಈಗಾಗಲೇ ಒಟ್ಟು ಫಲವತ್ತತೆ ದರ ಕಡಿಮೆಯಾಗುತ್ತಿದೆ ಮತ್ತು ಜನಸಂಖ್ಯೆ ನಿಯಂತ್ರಣದಲ್ಲಿದೆ ಎಂದು ತೋರಿಸಿದೆ. ಇದರ ಹಿಂದಿನ ಕಲ್ಪನೆ (ಶಿಫಾರಸ್ಸು) ಮಹಿಳೆಯರ ಸಬಲೀಕರಣವಾಗಿದೆ ಎಂದು ಹೇಳಿದ್ದಾರೆ.
ಎನ್‍ಎಫ್‍ಎಚ್‍ಎಸ್5 ಮಾಹಿತಿ ಪ್ರಕಾರ ಭಾರತವು ಮೊದಲ ಬಾರಿಗೆ 2.0ರಷ್ಟು ಒಟ್ಟು ಫಲವತ್ತತೆ ದರ ಗಳಿಸಿದೆ. ಟಿಎಫ್‍ಆರ್‍ನ ಬದಲಿ ಮಟ್ಟ 2.1ಕ್ಕಿಂತ ಕಡಿಮೆಯಾಗಿದೆ. ಇದು ಮುಂಬರುವ ವರ್ಷಗಳಲ್ಲಿ ಜನಸಂಖ್ಯಾ ಸೋಟ ಅಸಂಭವ ಎಂಬುದನ್ನು ಸೂಚಿಸುತ್ತದೆ. ಬಾಲ್ಯ ವಿವಾಹವು 2015-16ರಲ್ಲಿ ಶೇ.27ರಿಂದ 2019-21ರಲ್ಲಿ ಶೇ.23ಕ್ಕೆ ಕಡಿಮೆಯಾಗಿದೆ ಎಂದು ದತ್ತಾಂಶ ಬಹಿರಂಗಪಡಿಸಿದೆ.
ವ್ಯಾಪಕ ಸಮಾಲೋಚನೆ ನಂತರ ಕಾರ್ಯಪಡೆ ಸಮಿತಿ ಶಿಫಾರಸ್ಸುಗಳನ್ನು ನೀಡಿದ್ದು, ಮುಖ್ಯವಾಗಿ ಯುವ ವಯಸ್ಕರು ವಿಶೇಷವಾಗಿ ಯುವತಿಯರ ನಿರ್ಧಾರವು ನೇರವಾಗಿ ಪರಿಣಾಮ ಬೀರಲಿದೆ. 16 ವಿಶ್ವವಿದ್ಯಾನಿಲಯಗಳಿಂದ ಪ್ರತಿಕ್ರಿಯೆ ಪಡೆದುಕೊಂಡಿದ್ದ ಕಾರ್ಯಪಡೆಯು, ವಿಶೇಷವಾಗಿ ಗ್ರಾಮೀಣ ಮತ್ತು ಅಂಚಿನಲ್ಲಿರುವ ಸಮುದಾಯಗಳನ್ನು ತೊಡಗಿಸಿಕೊಂಡು ಪ್ರತಿಕ್ರಿಯೆ ಪಡೆದು ಶಿಫಾರಸ್ಸುಗಳನ್ನು ಮಾಡಿದೆ.
1978ರಲ್ಲಿ 1929ರ ಹಿಂದಿನ ಶಾರದಾ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ಮಹಿಳೆಯರ ವಿವಾಹ ವಯಸ್ಸನ್ನು 15 ವರ್ಷದಿಂದ 18 ವರ್ಷಕ್ಕೆ ಹೆಚ್ಚಿಸಲಾಗಿತ್ತು. ಭಾರತವು ಮುಂದುವರೆದಂತೆ ಮಹಿಳೆಯರಿಗೆ ಉನ್ನತ ಶಿಕ್ಷಣ ಮತ್ತು ವೃತ್ತಿಯನ್ನು ಮುಂದುವರೆಸಲು ಅವಕಾಶಗಳು ತೆರೆದುಕೊಂಡಿವೆ. ಎಂಎಂಆರ್ ಕಡಿಮೆ ಮಾಡುವುದರ ಜೊತೆಗೆ ಪೌಷ್ಠಿಕಾಂಶದ ಮಟ್ಟವನ್ನು ಸುಧಾರಿಸುವ ಅಗತ್ಯತೆಗಳನ್ನು ಮನಗಂಡು ಈ ನಿರ್ಧಾರಕ್ಕೆ ಬರಲಾಗಿದೆ.