ಬೈಸಿಕಲ್ ಏರಿ ಎಲ್ಲರ “ದಾಹ” ತೀರಿಸುತ್ತಿರುವ ಮಹದೇವ್

ರೇಖಾ ಡಿ ಕೆ ಹಾಸನ

ಬದುಕನ್ನು ಕಟ್ಟಿಕೊಳ್ಳಲು ಹೊರಟವರು ನಮ್ಮ ರಾಜ್ಯದಲ್ಲಿ ಮೊದಲು ಆಯ್ಕೆ ಮಡುವುದೆ ನಮ್ಮ ರಾಜಧಾನಿ ಬೆಂಗಳೂರನ್ನು. ಬದುಕನ್ನು ಬದಲಾಯಿಸುವ, ಬದುಕನ್ನು ಕೊನೆಗೊಳಿಸುವ, ಎರಡಕ್ಕೂ ಹೆಸರುವಾಸಿ ನಮ್ಮ ರಾಜಧಾನಿ. ಕಳೆದ ಇಪ್ಪತ್ತು ವರ್ಷಗಳಿಂದ ಬೆಂಗಳೂರಿಗೆ ವಲಸೆ ಬರುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಲೆ ಇದೆ. ರೈತರು, ಕಾರ್ಮಿಕರು, ಯುವಕ ಯುವತಿಯರು ಗ್ರಾಮೀಣ ಭಾಗದಿಂದ ವಲಸೆ ಬರುತ್ತಿರುವುದು ಬದುಕು ಕಟ್ಟಿಕೊಳ್ಳುತ್ತಿರುವುದು ನಾವು ನೋಡುತ್ತಲೆ ಬಂದಿದ್ದೇವೆ. ಹೀಗೆ ಬಂದವರಲ್ಲಿ ಬೀದಿಬದಿ ವ್ಯಾಪಾರಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ವಲಸಿಗರ ಸಾಲಿನಲ್ಲಿ ಬರುವ ಮಹದೇವ್ ಎಂಬ ಎಳನೀರು ಮಾರುವ ಶ್ರಮಜೀವಿಯ ಬಗ್ಗೆ ಮಾತನಾಡಲೇಬೇಕಾಗಿದೆ. ಇವರದ್ದು ಒಂದು ಬದುಕಿದೆ ಎಂದು ಎಲ್ಲರಿಗು ಮನವರಿಕೆ ಮಾಡಬೇಕಾಗಿದೆ.

ಮಹದೇವ್ ರವರು ಬಂದು ಇಪ್ಪತ್ತು ವರ್ಷಗಳೇ ಕಳೆದಿವೆ. ಮೂಲ ಕೃಷಿಕರಾಗಿದ್ದು ಮಳೆ ಬೆಳೆ ಕೈ ಹಿಡಿಯದ ಕಾರಣ ಕೂಲಿ ನಾಲಿಯನ್ನಾರಿಸಿ ಎಳನೀರು ವ್ಯಾಪಾರ ಪ್ರಾರಂಬಿಸುತ್ತಾರೆ. ಅತ್ಯಂತ ಬಡ ಕುಟುಂಬವಾದರು ಮೂರುಜನ ಮಕ್ಕಳನ್ನು ಪೋಷಿಸಲು ಗಂಡ ಹೆಂಡತಿ ಇಬ್ಬರು ಕೂಲಿ ಕೆಲಸದ ಜೊತೆಗೆ ಎಳನೀರು ವ್ಯಾಪಾರದಿಂದ ಇವರ ದಿನನಿತ್ಯದ ಜೀವನ, ಎಳನೀರು ವ್ಯಾಪಾರ ಮೊದಲಿಗೆ ಕೈ ಹಿಡಿಯದೇ ಇದ್ದರು ಬೈಸಿಕಲ್ ನಲ್ಲಿ ಏರಿಕೊಂಡು ೧೦೦ ಕ್ಕಿಂತ ಹೆಚ್ಚು ಎಳನೀರುಗಳನ್ನು ಹೊತ್ತು ಬೆಂಗಳೂರು ನಗರವನ್ನು ತಿರುಗಿ ಬದುಕು ಕಟ್ಟಿಕೊಂಡಿದ್ದು ಇತಿಹಾಸ.

ಇವರ ಬೈಸಿಕಲ್ ಎಳನೀರು ಎಲ್ಲರ ದಾಹ ತೀರಿಸುತ್ತಿರುವುದರ ಜೊತೆಗೆ ಎಲ್ಲರ ಆರೋಗ್ಯ ಕಾಪಾಡುತ್ತಿದ್ದಾರೆ. ಒಮ್ಮೆಗೆ ನೂರು ಎಳನೀರು ಹೊತ್ತು ನಡೆದರೆ ೨೦-೩೦ ಕಿಲೋಮೀಟರ್ ದೂರ ಕ್ರಮಿಸಿ ವ್ಯಾಪಾರ ಮಾಡುತ್ತಾರೆ. ವ್ಯಾಪಾರವಾದರು ಆಗದೇ ಇದ್ದರು ಹೊತ್ತು ನಡೆಯಲೇಬೇಕು. ಹೊತ್ತು ನಡೆಯದಿದ್ದರೆ ಬದುಕು ನಡೆಯುವುದಿಲ್ಲ, ಇದು ವಾಸ್ತವದ ಸ್ಥಿತಿ ಆದರೂ ೨೦ ವರ್ಷಗಳಿಂದಲೂ ಎಳನೀರು ಮಾರಿ ಬದುಕು ಕಟ್ಟಿಕೊಳ್ಳುವಲ್ಲಿ ಮಹದೇವ್ ಯಶಸ್ಸು ಕಂಡಿದ್ದರು. ಆದರೂ ಇವರ ಬದುಕೇನೂ ಬದಲಾಗಲಿಲ್ಲ. ಎಳನೀರು ವ್ಯಾಪಾರಕ್ಕೋದರೆ ಮಾತ್ರ ಇವರ ದೈನಂದಿನ ಬದುಕು, ಇಲ್ಲವಾದರೆ ಏನೂ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಬೀದಿಬದಿ ವ್ಯಾಪಾರಿಗಳು ಬದುಕುತ್ತಿದ್ದಾರೆ. ಮಹದೇವ್ ರವರಿಗೆ ಇಂದಿಗೂ ತಮ್ಮ ಮಕ್ಕಳನ್ನು ವಿದ್ಯಾಭ್ಯಾಸ ಮಾಡಿಸಲಾಗಲಿಲ್ಲ ಎಂಬ ಕೊರಗು ಇಂದಿಗೂ ಕಾಡುತ್ತಲೇ ಇದೆ. ಅಂದು ದುಡಿದು ಅಂದೇ ತಿಂದು ಬದುಕುವ ಇಂತಹ ಬಡ ಜನರಿಗೆ ಮನೆ,ಮಕ್ಕಳ ವಿದ್ಯಾಭ್ಯಾಸ ಒಂದೊಳ್ಳೆಯ ಜೀವನ ನಡೆಸಲು ಹೇಗೆ ಸಾಧ್ಯ?

ಸರ್ಕಾರದ ಸೌಲಭ್ಯಗಳು, ಆಶ್ವಾಸನೆಗಳು, ಇವೆಲ್ಲವೂ ಕೇವಲ ಮಾತುಗಳಿಗಷ್ಟೆ  ಸೀಮಿತ ಎಂದು ಬೇಸರ ವ್ಯಕ್ತಪಡಿಸುತ್ತಾರೆ. ಏಕೆಂದರೆ ಇಷ್ಟು ವರ್ಷಗಳ ಅನುಭವ, ಕೋವಿಡ್ ಕಾಲಗಳಲ್ಲಿನ ಸಂಕಷ್ಟಗಳು ಬದುಕನ್ನು ಬರ್ಬರವಾಗಿಸಿವೆ. ಸರ್ಕಾರಗಳ ಸುಳ್ಳು ಯೋಜನೆಗಳು ಮತ್ತು ಭರವಸೆಗಳ ನಂಬಿಕೆ ಎಲ್ಲವನ್ನು ಕಳೆದುಕೊಂಡಿದ್ದೇವೆ. ಕೋವಿಡ್ ಕಾಲದಲ್ಲಿ ವ್ಯಾಪಾರವಿಲ್ಲದೆ, ಅನ್ನವು ಸಿಗದೆ ಪರದಾಡಿದ್ದುಂಟು. ಇಂತಹ ಸಂದರ್ಭದಲ್ಲಿ  ಯರ‍್ಯಾರೊ ಅನ್ನವನ್ನು ನೀಡಿ ಬದುಕಿಸಿದ್ದಾರೆ.  ಕೋವಿಡ್ ನಂತರದಲ್ಲಾದರು ಬದುಕು ಬದಲಾಗಬಹುದೆಂಬ ಭರವಸೆ ಇತ್ತು ಆದರೆ ಈಗ ಅದು ಕೂಡ ಸುಳ್ಳಾಗಿದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಎಳನೀರು ವ್ಯಾಪಾರಿ ಮಹದೇವ್.

ಮಹದೇವ್ ಮಾತನಾಡುತ್ತಲೆ ಎಳನೀರು ಕುಡಿಯುವವರ ಸಂಖ್ಯೆ ಇಳಿಮುಖವಾಗುತ್ತಿದೆ ಏಕೆಂದರೆ ಇಂದು ಮಕ್ಕಳಿಂದ ವಯಸ್ಕರ ವರೆಗು ತಂಪು ಪಾನೀಯಗಳು, ಕೋಲ ಸೋಡಗಳ ಮೊರೆಹೋಗುತ್ತಿರುವುದರಿಂದ ಎಳನೀರು ವ್ಯಾಪರಕ್ಕೆ ದೊಡ್ಡ ಪೆಟ್ಟು ಬೀಳುತ್ತಿದೆ. ಇದರಿಂದ ಬೀದಿಬದಿ ವ್ಯಾಪಾರಿಗಳಿಗೆ ಮತ್ತು ಸಣ್ಣಪುಟ್ಟ ವ್ಯಾಪಾರಿಗಳಿಗೆ ತೊಂದರೆಯಗುತ್ತಿದೆ. ಆದರೆ ಅವರ ವ್ಯಾಪಾರ ನಿಲ್ಲಿಸಲು ಸಾಧ್ಯವಿಲ್ಲ, ಸರ್ಕಾರಗಳು ಕೂಡ ನಮ್ಮ ವ್ಯಾಪಾರಗಳ ಬಗ್ಗೆ ಗಮನ ಹರಿಸಬೇಕಾಗಿದೆ. ನಮ್ಮ ಶಕ್ತಿ ಇರುವವರೆಗೂ ಕೂಡ ಹೀಗೆ ಗಾಡಿಗಳನ್ನು ತಳ್ಳಿಕೊಂಡು ವ್ಯಾಪಾರಮಾಡಿ ಜೀವನ ಮಾಡುತ್ತೇವೆ. ನಮಗೂ ವಯಸ್ಸಾದ ಕಾಲಕ್ಕೂ ನಮಗೆ ಭದ್ರತೆ ಬೇಕಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು ಮಹದೇವ್. ನಾವು ನಿಜವಾಗಿ ಇಂತಹ ಬಡ ವ್ಯಾಪಾರಿಗಳ ಬಗ್ಗೆ ಯೋಚಿಸಬೇಕಾಗಿದೆ. ಸರ್ಕಾರದ ಗಮನಕ್ಕೆ ತರಬೇಕಿದೆ. ಲಕ್ಷಾಂತರ ಬೀದಿಬದಿ ವ್ಯಾಪಾರಿಗಳ ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಮೇಲೆತ್ತುವ ಕೆಲಸ ಸರ್ಕಾರ ಮಾಡಬೇಕಾಗಿದೆ,  ಸರ್ಕಾರ ಇವರ ಬಗ್ಗೆ ಗಮನ ಹರಿಸಲಿ ಎಂಬುದೆ ನಮ್ಮ ಆಶಯವಾಗಿದೆ.

Donate Janashakthi Media

Leave a Reply

Your email address will not be published. Required fields are marked *