ಬೆಂಗಳೂರು :ರಾಜ್ಯದಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, 17 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಗೊರ್ಲತ್ತು ಗ್ರಾಮದ ಬಳಿ ನಡೆದಿದೆ.
ಗೊರ್ಲತ್ತು ಗ್ರಾಮದ ಬಳಿ ಸೀಬರ್ಡ್ ಸ್ಲೀಪರ್ ಕೋಚ್ ಬಸ್ ಹಾಗೂ ಲಾರಿ ನಡುವೆ ಡಿಕ್ಕಿಯಾಗಿ ಹೊತ್ತಿ ಉರಿದ ಪರಿಣಾಮ 17 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
ಬೆಂಗಳೂರಿನಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಹಾಗೂ ಲಾರಿ ಡಿಕ್ಕಿ ಸಂಭವಿಸಿದ್ದು, ಈ ವೇಳೆ ಬಸ್ ನಲ್ಲಿದ್ದ 17 ಕ್ಕೂ ಹೆಚ್ಚು ಜನರು ಸಜೀವ ದಹನವಾಗಿದ್ದಾರೆ. ಹಲವರು ಗಾಯಗೊಂಡಿದ್ದು, ಗಾಯಗೊಂಡವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಈ ಘೋರ ದುರಂತ ನಡೆದಿದ್ದು ಕೇವಲ 10 ಸೆಕೆಂಡುಗಳಲ್ಲಿ! ವಿರುದ್ಧ ದಿಕ್ಕಿನಿಂದ ಬಂದ ಕಂಟೈನರ್ ಲಾರಿ ಡಿವೈಡರ್‌ಗೆ ಡಿಕ್ಕಿ ಹೊಡೆದು, ರಸ್ತೆ ದಾಟಿ ಬಂದು ಬಸ್‌ಗೆ ಅಪ್ಪಳಿಸಿದೆ. ಕಣ್ಣು ಮುಚ್ಚಿ ತೆಗೆಯೋದ್ರೊಳಗೆ ಲಾರಿಯಿಂದ ಹಬ್ಬಿದ ಬೆಂಕಿ ಬಸ್ ಅನ್ನೂ ಆವರಿಸಿಕೊಂಡಿದೆ. ಪ್ರಯಾಣಿಕರು ಎಚ್ಚರಗೊಂಡು ಏನಾಗ್ತಿದೆ ಅಂತ ನೋಡೋ ಅಷ್ಟರಲ್ಲೇ ಬಸ್ ಅಗ್ನಿಗೋಳವಾಗಿತ್ತು. ಆ 10 ಸೆಕೆಂಡ್ ಯಮಪಾಶವಾಗಿ ಪರಿಣಮಿಸಿತ್ತು.
